Monday, July 31, 2006
ಬೆಳಗಾವಿ ನಗರದ ಮೇಲೆ ಮರಾಠಿಗರಿಗೆ ಯಾವುದೇ ಬಗೆಯ ಹಕ್ಕು ಇಲ್ಲ
ಪಾಟೀಲ ಪುಟ್ಟಪ್ಪ
ಬೆಳಗಾವಿ ನಗರದ ಮೇಲೆ ಮರಾಠಿಗರಿಗೆ ಯಾವುದೇ ಬಗೆಯ ಹಕ್ಕು ಇಲ್ಲ. ಹೊರಗಿನಿಂದ ಬಂದವರು ಮನೆಯೇ ತಮ್ಮದೆಂದು ಹೇಳುವಂತೆ ಅವರ ವಾದವಿದೆ. ಬೆಳಗಾವಿಯು ಮರಾಠಿಯಾಗಿದ್ದರೆ ಯುರೋಪಿನಿಂದ ಬಂದ ಬಾಸೆಲ್ ಮಿಶನ್ನಿನವರು ಅಲ್ಲಿ ಮರಾಠಿ ಶಾಲೆಯನ್ನೇ ಆರಂಭ ಮಾಡುತ್ತಿದ್ದರು. ಆದರೆ ಅವರು ೧೮೩೮ರಲ್ಲಿ ಬೆಳಗಾವಿಯಲ್ಲಿ ಕನ್ನಡದ ಶಾಲೆಯನ್ನು ಆರಂಭಿಸಿದರೆನ್ನುವುದು ಮಹತ್ವದ ಸಂಗತಿಯಾಗಿದೆ. ಆಗ ಅವರನ್ನು ಅಲ್ಲಿ ಕನ್ನಡ ಶಾಲೆಯನ್ನೇಕೆ ಆರಂಭಿಸಿದಿರಿ ಎಂದು ಯಾರೊಬ್ಬರೂ ಕೇಳಲಿಲ್ಲ.
ಬೆಳಗಾವಿ ನಗರದ ಸುತ್ತಮುತ್ತಲಿನ ಹೊಲಗಳೆಲ್ಲ ಕನ್ನಡಿಗರ ಒಡೆತನಕ್ಕೆ ಒಳಪಟ್ಟಿದ್ದವು. ಬೆಳಗಾವಿ ನಗರದ ಗ್ರಾಮ ದೇವತೆಗಳೆಲ್ಲ ಕನ್ನಡಿಗರ ದೇವತೆಗಳೇ ಆಗಿದ್ದವು. ಒಂದು ನಗರ ಯಾರದೆನ್ನುವ ಭಾವನೆಗೆ ಅಲ್ಲಿಯ ಪರಿಶಿಷ್ಟ ವರ್ಗದವರ ಭಾಷೆಯೇ ಮೂಲ ಕಾರಣವೆನಿಸಿದೆ. ಒಂದು ನಗರದ ಮೂಲಭಾಷೆಯನ್ನು ತಿಳಿಯಬೇಕೆನ್ನುವವರು ಅಲ್ಲಿಯ ಪರಿಶಿಷ್ಟ ವರ್ಗದವರು ವಾಸ ಮಾಡುವ ಸ್ಥಳಕ್ಕೆ ಹೋಗಿ ನೋಡಿದರೆ ಆ ಸ್ಥಳದ ಭಾಷೆ ಯಾವುದೆನ್ನುವುದು ತಿಳಿಯುತ್ತದೆ. ಉಳಿದ ಜನರು ಸ್ಥಳಾಂತರಗೊಳ್ಳುವಂತೆ ಪರಿಶಿಷ್ಟ ವರ್ಗದ ಜನರು ಎಂದೂ ಸ್ಥಳಾಂತರಗೊಳ್ಳುವುದಿಲ್ಲ. ಅವರು ಇದ್ದಲ್ಲಿಯೇ ಇರುತ್ತಾರೆ. ಆದರಿಂದ ಬೆಳಗಾವಿ ನಗರದ ಭಾಷೆ ಕನ್ನಡ ಎನ್ನುವುದನ್ನು ಅಲ್ಲಿ ವಾಸವಾಗಿರುವ ಪರಿಶಿಷ್ಟ ವರ್ಗದ ಜನರು ನಮಗೆ ತೋರಿಸಿಕೊಟ್ಟಿದ್ದಾರೆ.
ಬೆಳಗಾವಿ ನಗರ ಕನ್ನಡದ್ದು ಎನ್ನುವ ಬಗ್ಗೆ ಯಾವುದೇ ತಂಟೆ ತಕರಾರುಗಳು ಇರಲಿಲ್ಲ. ೧೯೨೦ ರಷ್ಟು ಹಿಂದೆ ದೇಶದ ರಾಜಕೀಯ ಪಕ್ಷವಾದ ಕಾಂಗ್ರೆಸ್ ಪಕ್ಷದ ಸಂವಿಧಾನವನ್ನು ರಚನೆ ಮಾಡುವ ಕೆಲಸವನ್ನು ಕಾಂಗ್ರೆಸ್, ಕೇಸರಿ ಪತ್ರಿಕೆಯ ಸಂಪಾದಕರಾದ ನರಸಿಂಹ ಚಿಂತಾಮಣಿ ಕೇಳಕರರಿಗೆ ವಹಿಸಿಕೊಟ್ಟಿತು. ಅವರು ಕರ್ನಾಟಕ ಪ್ರಾಂತವನ್ನು ಕಾಂಗ್ರೆಸ್ ಸಂವಿಧಾನದಲ್ಲಿ ಸೇರ್ಪಡೆ ಮಾಡುವಾಗ ಬೆಳಗಾವಿ ನಗರ ಹಾಗೂ ಜಿಲ್ಲೆಗಳನ್ನು ಮಹಾರಾಷ್ಟ್ರ ಪ್ರಾಂತದಲ್ಲಿ ಇಡದೇ ಅವರು ಅವುಗಳನ್ನು ಕರ್ನಾಟಕ ಪ್ರಾಂತದಲ್ಲಿ ಇರಿಸಿದರು. ಈ ಕೇಳಕರರು ಕನ್ನಡಿಗರಾಗಿ ಇರದೇ ಅಚ್ಚ ಮರಾಠಿಗರೇ ಆಗಿದ್ದರು. ೧೯೨೪ ರಲ್ಲಿ ಮಹಾತ್ಮಾ ಗಾಂಧಿ ಅವರು ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಅಧಿವೇಶನವು ಬೆಳಗಾವಿಯಲ್ಲಿ ಸೇರಿದ್ದಿತು. ಅದನ್ನು ಎಲ್ಲರೂ -ಅವರಲ್ಲಿ ಮರಾಠಿಗರೇ ಸೇರಿದ್ದಾರೆ- ಕರ್ನಾಟಕ ಅಧಿವೇಶನ ವೆಂದೇ ಕರೆದರು.
೧೯೨೯ ರಲ್ಲಿ ಬೆಳಗಾವಿ ನಗರದಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನ ಸೇರಬೇಕಾದಾಗ, ಅದು ಸೇರುವುದಕ್ಕೆ ಕನ್ನಡ ಜನರು ವಿರೋಧ ಮಾಡಿದರು. ಬೆಳಗಾವಿಯ್ಲಲಿ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಸೇರಿಸಿ, ಅದು ಮರಾಠಿ ಎಂದು ಸಾಧಿಸುವ ಗತ್ತುಗಾರಿಕೆ ಆ ಅಧಿವೇಶನವನ್ನು ಸೇರಿಸಲಾಗುತ್ತಿದೆ ಎಂದು ಕನ್ನಡ ಜನರು ವಿರೋಧಿಸಿದರು.
ಆಗ ಕೇಸರಿ ಪತ್ರಿಕೆಯ ಸಂಪಾದಕರಾದ ನರಸಿಂಹ ಚಿಂತಾಮಣಿ ಕೇಳಕರರು ಕನ್ನಡಿಗರ ಭಯ, ಸಂದೇಹಗಳನ್ನು ನಿವಾರಣೆ ಮಾಡಿದರು. 'ಬೆಳಗಾವಿ ಕನ್ನಡ ಎನ್ನುವುದು ನಿವಿರ್ವಾದ. ಅದರ ಮೇಲೆ ಮಹಾರಾಷ್ಟ್ರದ ಯಾವ ಹಕ್ಕುದಾರಿಕೆ ಇಲ್ಲ. ನಾವು ಅದನ್ನು ನಮ್ಮದೆಂದು ಸಾಧಿಸುವುದಿಲ್ಲ. ನಮಗೆ ಸಮ್ಮೇಳನ ಮಾಡುವುದಕ್ಕೆ ಅವಕಾಶ ಕೊಡಿ' ಎಂದು ಹೇಳಿದರು. ಕನ್ನಡಿಗರು ಮರಾಠಿ ಸಾಹಿತ್ಯ ಸಮ್ಮೇಳನ ಅಲ್ಲಿ ನಡೆಯುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟರು. ಇದಾದ ಮೇಲೆ ೧೯೪೪ ರಲ್ಲಿ ರಾಜಗೋಪಾಲಾಚಾರಿ ಅವರು ಮುಸ್ಲಿಂರಿಗೆ ಸ್ವಯಂ ನಿರ್ಣಯ ಅಧಿಕಾರವನ್ನು ಕೊಡಬೇಕೆನ್ನುವ ತಮ್ಮ ತತ್ವ ಪ್ರಚಾರ ಮಾಡುತ್ತಾ ಬೆಳಗಾವಿ ನಗರಕ್ಕೆ ಬಂದು ಅಲ್ಲಿಯ ದರ್ಗಾದ ಬಯಲಿನಲ್ಲಿ ಸಾರ್ವಜನಿಕ ಭಾಷಣ ಮಾಡಿದರು.
ರಾಜಾಜಿ ಅನಿಸಿಕೆ: ಆ ಸಭೆಯಲ್ಲಿ ರಾಜಾಜಿ ಅವರ ಭಾಷಣವು ಮರಾಠಿಯಲ್ಲಿ ಭಾಷಾಂತರವಾಗುತ್ತಿತ್ತು. ಆಗ ಅಲ್ಲಿ ಸೇರಿದ್ದ ಕನ್ನಡ ಜನ ವರ್ಗ, `ಕನ್ನಡ ಕನ್ನಡ' ಎಂದು ಕೂಗತೊಡಗಿದರು. ಬಹು ಕುಶಾಗ್ರಮತಿಗಳಾಗಿದ್ದ ರಾಜಾಜಿ, ಗದ್ದಲ ಮಾಡುತ್ತಿದ್ದ ಜನರ ಕಡೆಗೆ ತಿರುಗಿ, `ನಿಮಗೆ ಏನು ಆಗಬೇಕೆಂದು' ಕೇಳಿದರು.
ಅಲ್ಲಿ ಗಲಾಟೆ ಎಬ್ಬಿಸಿದ ಜನರು, `ನಿಮ್ಮ ಭಾಷಣ ಕನ್ನಡದಲ್ಲಿ ಭಾಷಾಂತರಗೊಳ್ಳಬೇಕು' ಎಂದರು. ಆಗ ರಾಜಾಜಿ ಆ ಸಭೆಯಲ್ಲಿ ಸೇರಿದ್ದ ಜನರ ಮನೋಭಾವನೆ ಏನಿದೆ ಎನ್ನುವುದನ್ನು ತಿಳಿಯಬೇಕೆಂದು ಅಪೇಕ್ಷಿಸಿದರು. ಅಲ್ಲಿ ಸೇರಿದ್ದ ಎಷ್ಟು ಜನರಿಗೆ ಕನ್ನಡ ಬರುತ್ತದೆ, ಮರಾಠಿ ತಿಳಿಯುತ್ತದೆ ಎನ್ನುವುದನ್ನು ಪರಿಶೀಲನೆ ಮಾಡಿದರು. ಕನ್ನಡ ಹಾಗೂ ಮರಾಠಿ ಜನರು ಸಮಸಮನಾಗಿ ಕೈ ಎತ್ತಿ ತಮ್ಮ ಮನೋಗತವನ್ನು ತಿಳಿಸಿದರು.
ಆಗ ರಾಜಾಜಿಯವರು ಆ ಸಭೆಯಲ್ಲಿದ್ದ ಜನರನ್ನು ಉದ್ದೇಶಿಸಿ ಹೇಳಿದರು- ''ನೀವು ಕೈ ಎತ್ತಿರುವುದನ್ನು ನೋಡಿದರೆ, ನಿಮಗೆ ಯಾರಿಗೆ ಕನ್ನಡ ಬರುತ್ತದೆಯೋ, ಅವರಿಗೆ ಮರಾಠಿ ತಿಳಿಯುತ್ತಿದೆ. ಯಾರಿಗೆ ಮರಾಠಿ ತಿಳಿಯುತ್ತದೆಯೋ ಅವರಿಗೆ ಕನ್ನಡ ಬರುತ್ತದೆ. ಬೆಳಗಾವಿ ನಗರವು ಕನ್ನಡವಾದುದರಿಂದ ನನ್ನ ಭಾಷಣ ಕನ್ನಡದಲ್ಲಿ ಭಾಷಾಂತರಗೊಳ್ಳಬೇಕು''.
ಆಗ ಅನಂತರಾವ್ ಚಿಕ್ಕೋಡಿ ಅವರು ರಾಜಾಜಿಯವರ ಭಾಷಣವನ್ನು ಕನ್ನಡದಲ್ಲಿ ಭಾಷಾಂತರ ಮಾಡಿದರು. ಅವರ ಭಾಷಾಂತರ ಅದ್ಭುತವಾಗಿದ್ದಿತು. ಕನ್ನಡ ಬರುತ್ತಿದ್ದ ರಾಜಾಜಿಯವರು ತಮ್ಮ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಿದ ಚಿಕ್ಕೋಡಿ ಅವರನ್ನು ಬಹುವಾಗಿ ಮೆಚ್ಚಿಕೊಂಡರು.
ಅಲ್ಲಿ ಜನರನ್ನುದ್ದೇಶಿಸಿ ರಾಜಾಜಿಯವರು ಹೇಳಿದರು: ''ಗಡಿ ಪ್ರದೇಶಗಳಲ್ಲಿ ಇಂತಹ ಪ್ರಶ್ನೆಗಳು ಸಹಜವಾಗಿ ಉದ್ಭವಿಸುತ್ತವೆ. ಮರಾಠಿ ಜನರು ಇಲ್ಲಿಯವರಾಗಿ ಕನ್ನಡವನ್ನು ಕಲಿತಿರದಿದ್ದರೆ ಅದು ಅವರ ತಪ್ಪು. ಅವರು ಕನ್ನಡ ಭಾಷೆಯನ್ನು ಕಲಿತು ಕನ್ನಡ ಜನರೊಂದಿಗೆ ಬೆರೆತು ಹೋಗಬೇಕು''.
ಆನಂತರ ಧರ್ ಸಮಿತಿ, ವಾಂಛೂ ಸಮಿತಿ ಹಾಗೂ ಕಾಂಗ್ರೆಸ್ಸಿನ ಜೆ.ವಿ.ಪಿ. (ಜವಾಹರಲಾಲ, ವಲ್ಲಭಬಾಯಿ ಹಾಗೂ ಪಟ್ಟಾಭಿ) ಸಮಿತಿ ಎಲ್ಲವೂ ಬೆಳಗಾವಿಯು ನಿರ್ವಿವಾದವಾಗಿಯೂ ಕನ್ನಡವೆಂದು ಹೇಳಿದವು.
ಮುಂದೆ ೧೯೫೫ ರಲ್ಲಿ ಸರ್ವೋನ್ನತ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾಯಮೂರ್ತಿ ಫಜಲ್ ಅಲಿ ಅವರ ಅಧ್ಯಕ್ಷತೆಯಲ್ಲಿ ಪಂಡಿತ ಹೃದಯನಾಥ ಕುಂಜರೂ, ಸರ್ದಾರ ಕೆ.ಎಂ.ಫಣಿಕ್ಕರ, ತ್ರಿಸದಸ್ಯರ ಆಯೋಗವನ್ನು ಕೇಂದ್ರ ಸರಕಾರ ರಚನೆ ಮಾಡಿತು. ಈ ರಾಜ್ಯ ಪುನರ್ ಸಂಘಟನಾ ಆಯೋಗವು ದೇಶದಲ್ಲಿ ಸಂಚಾರ ಮಾಡಿ ಸಾವಿರಾರು ಸಾಕ್ಷಿ ಪುರಾವೆಯನ್ನು ಕೇಳಿ ತಿಳಿದುಕೊಂಡಿತು.
ಮಹಾರಾಷ್ಟ್ರ ವಾದ ತಿರಸ್ಕೃತ:
ಈಗ ಮಹಾರಾಷ್ಟ್ರದವರು ಮುಂದೆ ಮಾಡುತ್ತಿರುವ ಎಲ್ಲ ವಾದಗಳು ರಾಜ್ಯ ಪುನರ್‌ಸಂಘಟನಾ ಆಯೋಗದ ಮುಂದೆ ಬಂದವು. ಅವುಗಳನ್ನು ಮುಂದೆ ಪಾರ್ಲಿಮೆಂಟಿನಲ್ಲಿ ಈ ಆಯೋಗದ ವರದಿಯ ಚರ್ಚೆ ನಡೆದಾಗ, ಮಹಾರಾಷ್ಟ್ರದವರು ತಾವು ಹೇಳುವುದನ್ನೆಲ್ಲ ತಿದ್ದುಪಡಿಗಳ ಮೂಲಕ ಪಾರ್ಲಿಮೆಂಟಿನಲ್ಲಿ ಮಂಡಿಸಿದರು. ಅವೆಲ್ಲವುಗಳನ್ನು ಪಾರ್ಲಿಮೆಂಟು ತಿರಸ್ಕರಿಸಿತು.
ಲೋಕಸಭೆಯ ೫೪೫ ಜನ ಸದಸ್ಯರಲ್ಲಿ ಕರ್ನಾಟಕದವರು ಕೇವಲ ೨೭ ಜನ ಇದ್ದರು. ಮಹಾರಾಷ್ಟ್ರದವರು ಅಧಿಕ ಸಂಖ್ಯೆಯಲ್ಲಿದ್ದರು. ಆಗ ಲೋಕಸಭೆಯು ಮಹಾರಾಷ್ಟ್ರದವರು ಮುಂದೆ ಮಾಡಿದ ಎಲ್ಲ ವಾದಗಳನ್ನು ತಿರಸ್ಕರಿಸಿ ರಾ.ಪು. ಆಯೋಗದ ವರದಿಯನ್ನು ಒಪ್ಪಿಸಿಕೊಂಡಿತು.
ಮಹಾರಾಷ್ಟ್ರದವರು, ಕೊಂಕಣಿಯು ಮರಾಠಿ ಭಾಷೆಯ ಉಪಭಾಷೆ ಎಂದು ಸಾಧಿಸುತ್ತಿದ್ದುದನ್ನು ಆ ಆಯೋಗವನ್ನು ತಿರಸ್ಕರಿಸಿ ಕೊಂಕಣಿಯು ಮರಾಠಿಯ ಉಪಭಾಷೆಯಾಗಿರದೇ ಸ್ವತಂತ್ರ ಭಾಷೆ ಎಂದು ಹೇಳಿತು. ೧೯೫೬ ರಲ್ಲಿ ಕರ್ನಾಟಕ ರಾಜ್ಯ ರಚನೆ ನಡೆದ ಮೇಲೆ ಮರಾಠಿಗರು ಇಲ್ಲದ ವಾದಗಳನ್ನು ಎಬ್ಬಿಸಿ ಕಿತಾಪತಿ ಕೆಲಸಕ್ಕೆ ತೊಡಗಿದರು. ತಮಗೆ ಅನ್ಯಾಯವಾಗಿದೆ ಎಂದು ಬೊಬ್ಬೆ ಹಾಕುತ್ತ ದೇಶದ ಸಹಾನುಭೂತಿಯನ್ನು ತಮ್ಮೆಡೆಗೆ ಸೆಳೆದುಕೊಳ್ಳಬೇಕೆಂದರು. ಮಹಾರಾಷ್ಟ್ರದ ಒತ್ತಡಕ್ಕೆ ಮಣಿದು ಕೇಂದ್ರ ಸರಕಾರವು ಕಾಂಗ್ರೆಸ್ ಕಾರ್ಯ ಸಮಿತಿಯ ಸಲಹೆ ಮೇರೆಗೆ ಒಂದು ಏಕಸದಸ್ಯ ಆಯೋಗವನ್ನು ರಚನೆ ಮಾಡಿತು. ಆಗ ಕಾಂಗ್ರೆಸ್ ಕಾರ್ಯ ಸಮಿತಿಯಲ್ಲಿ ಸರ್ವ ಸಮ್ಮತವಾದ ಒಂದು ತೀರ್ಮಾನಕ್ಕೆ ಬರಲಾಯಿತು. ಏಕಸದಸ್ಯ ಆಯೋಗವು ಏನು ತೀರ್ಮಾನ ಕೈಗೊಳ್ಳುವುದೋ ಅದು ಅಖೈರಾದದ್ದು ಎಂದು ಒಪ್ಪಿ ಅದನ್ನು ಸ್ವೀಕರಿಸಬೇಕು ಎಂದು ಹೇಳಲಾಯಿತು.
ಏಕಸದಸ್ಯ ಆಯೋಗದ ರಚನೆಯು ತಮ್ಮ ವಿಜಯವೆಂದು ಮರಾಠಿಗರು ಬೀಗಿದರು. ಆಯೋಗದ ವರದಿ ಬರುವವರೆಗೆ ಮಹಾರಾಷ್ಟ್ರಿಯರು ಅದರ ಪರವಾಗಿಯೇ ಇದ್ದರು. ಯಾವಾಗ ಆಯೋಗವು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಕೊಡಲಿಲ್ಲವೋ ಆವಾಗ ಮಹಾರಾಷ್ಟ್ರವು ಆ ವರದಿಯನ್ನು ವಿಕ್ಷಿಪ್ತವೆಂದು ಹೇಳಿ ತಿರಸ್ಕರಿಸಿತು.
ಮಹಾರಾಷ್ಟ್ರದವರು, ಮಹಾಜನ ಆಯೋಗದ ಎದುರು ೮೬೨ ಗ್ರಾಮ ಪಟ್ಟಗಳು ಕರ್ನಾಟಕದಿಂದ ತಮಗೆ ಬರಬೇಕೆಂದು ಕೇಳಿದ್ದರು. ಮಹಾಜನರು ಕರ್ನಾಟಕ ಮಹಾರಾಷ್ಟ್ರಗಳ ವಾದವನ್ನು ಕೂಲಂಕಷವಾಗಿ ಪರಿಶೀಲಿಸಿ ೨೬೨ ಗ್ರಾಮ ಪಟ್ಟಗಳು ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೋಗಬೇಕೆಂದು, ಅದೇ ರೀತಿ ೨೩೮ ಗ್ರಾಮ ಪಟ್ಟಗಳು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರಬೇಕೆಂದು ವಾದ ಮಾಡಿದರು.
ಮಹಾಜನ ಆಯೋಗವು ಬೆಳಗಾವಿ ನಗರವನ್ನು ಕರ್ನಾಟಕದಲ್ಲಿ ಇರಿಸಿದಂತೆ ಕೇರಳದ ಭಾಗವಾಗಿದ್ದ ಕಾಸರಗೋಡನ್ನು ಕರ್ನಾಟಕಕ್ಕೆ ಬರಬೇಕೆಂದು ಹೇಳಿತ್ತು.
ಈ ಸಭ್ಯ ಗೃಹಸ್ಥರ ಒಡಂಬಡಿಕೆಯನ್ನು ಕಾರ್ಯರೂಪಕ್ಕೆ ತರುವುದು ತನ್ನ ಕರ್ತವ್ಯವೆಂದು ಕೇಂದ್ರ ಸರಕಾರ ತಿಳಿಯಬೇಕಾಗಿದ್ದಿತು. ಈ ಏಕ ಸದಸ್ಯ ಆಯೋಗಕ್ಕೆ ನ್ಯಾಯಮೂರ್ತಿ ಮೆಹರ ಚಂದ್ ಮಹಾಜನರನ್ನು ನೇಮಕ ಮಾಡುವಾಗ, ಮಹಾಜನರು ಆಗಿನ ಗೃಹಮಂತ್ರಿ ಗುಲ್ಜಾರಿಲಾಲ ನಂದಾ ಅವರಿಗೆ, ''ನನ್ನ ವರದಿಯನ್ನು ನೀವು ಶೀತಲ ಪೆಟ್ಟಿಗೆಯಲ್ಲಿ ಹಾಕಿ ಇಡುತ್ತೀರಿ. ಹಾಗಿದ್ದ ಮೇಲೆ ನಾನೇಕೆ ಕೃತಜ್ಞತೆ ಇಲ್ಲದ ಈ ಕೆಲಸ ಕೈಗೊಳ್ಳಬೇಕು'' ಎಂದು ಕೇಳಿದರು. ಆಗ ಗುಲ್ಜಾರಿಲಾಲ ನಂದಾ ಅವರು ನ್ಯಾಯಮೂರ್ತಿ ಮಹಾಜನರಿಗೆ ''ನೀವೇನು ವರದಿ ಮಾಡುತ್ತಿರೋ ಅದನ್ನು ಚಾಚೂ ತಪ್ಪದೇ ಅನುಷ್ಠಾನಕ್ಕೆ ತರುತ್ತೇನೆ'' ಎಂದು ಹೇಳಿದಾಗ ನ್ಯಾಯಮೂರ್ತಿ ಮಹಾಜನರು ಆಯೋಗದ ಕೆಲಸವನ್ನು ಸ್ವೀಕರಿಸಿದರು.
ಅವರ ವರದಿಯನ್ನು ಸ್ವೀಕರಿಸಿ ಅದನ್ನು ಕಾರ್ಯರೂಪಕ್ಕೆ ತರುವುದು ಕೇಂದ್ರ ಸರಕಾರವು ಒಪ್ಪಿದ ಜವಾಬ್ದಾರಿಯಾಗಿದ್ದಿತು. ಆದರೆ ಈಗ ಅದು ಊರು ಸುಟ್ಟರೂ ಹನುಮಪ್ಪ ಹೊರಗೆ ಎಂಬಂತೆ ಸುಮ್ಮನೆ ಕುಳಿತು ಬಿಟ್ಟಿದೆ. ಆ ವರದಿಯನ್ನು ಕಾರ್ಯರೂಪಕ್ಕೆ ತರದೇ ಕೇಂದ್ರ ಸರಕಾರಕ್ಕೆ ಬೇರೆ ಗತ್ಯಂತರವೇ ಇಲ್ಲ.
Subscribe to:
Post Comments (Atom)
1 comment:
ಬಹಳ ಚೆನ್ನಾಗಿ ಬರೆದಿದ್ದೀರಿ, ಒಳ್ಳೆಯ ವಿವರಣೆ. ಇದು ನೀವೆ ಮಾಹಿತಿ ಕಲೆ ಹಾಕಿ ಬರೆದಿದ್ದೋ ಇಲ್ಲಾ ಪಾ.ಪು ಅವರು ಹೇಳಿದ್ದೋ, ಏಕೆಂದರೆ ನೀವು ಪಾಪು ಪಟ ಹಾಕಿದ್ದೀರಲ್ಲಾ, ಅದಕ್ಕೇ ಕೇಳಿದೆ.
Post a Comment