Thursday, August 03, 2006

ಬುದ್ಧಿಜೀವಿಗಳೇ ನಿಮಗೇನಾಗಿದೆ?

ರವಿ ಬೆಳಗೆರೆ
ರವಿ ಬೆಳಗೆರೆ


ಕರ್ನಾಟಕದ ಬುದ್ಧಿ ಜೀವಿಗಳಿಗೆ ಏನಾಗಿದೆ?

ಏನಿಲ್ಲ, ಸ್ವಲ್ಪ ಮಾತು ಜಾಸ್ತಿಯಾಗಿದೆ. ಬರವಣಿಗೆ, ಯೋಚನೆ ಎರಡೂ ಕಡಿಮೆ ಆಗಿದೆ.ರಾಜಕೀಯ ಮಾಡೋ ಚಪಲ ಶುರುವಾಗಿದೆ. ತಪ್ಪು ಯಾವುದು, ಸರಿ ಯಾವುದು ಅನ್ನೋ ವಿವೇಚನೆ ಕಳೆದುಕೊಂಡಾಗಿದೆ. ಹಾಗಂತ ಸಂಘ ಪರಿವಾರದವರಲ್ಲ, ಜನ ಸಾಮಾನ್ಯರೂ ಮಾತನಾಡತೊಡಗಿದ್ದಾರೆ. ಅದಕ್ಕೆ ಕಾರಣವೂ ಇದೆ.

ಕರ್ನಾಟಕಕ್ಕೆ ಸಂಬಂಧವೇ ಇಲ್ಲದ, ಹತ್ತು ಹನ್ನೊಂದು ವರ್ಷಗಳ ಹಿಂದಿನ ಒಂದು issue ನಿಮಗೆ ನೆನಪು ಮಾಡಿ ಕೊಡುತ್ತಿದ್ದೇನೆ. ಕಲಾವಿದ ಎಂ.ಎಫ್.ಹುಸೇನ್ ಬೆತ್ತಲೆ ಸರಸ್ವತಿಯ ಒಂದು ಚಿತ್ರ ಬರೆದಿದ್ದರು. ಅವರು ಚಪಲ ಹತ್ತಿಕೊಂಡಂವರಂತೆ ಮಾಧುರಿ ದೀಕ್ಷಿತಳ ಚಿತ್ರ ಬರೆದಾಗ ಯಾರೂ ತಕರಾರು ಮಾಡಿರಲಿಲ್ಲ. ಆದರೆ ದಿನನಿತ್ಯ ಮನೆಗಳಲ್ಲಿ ಮಕ್ಕಳೂ ಪೂಜೆ ಮಾಡುವ ಸರಸ್ವತಿಯನ್ನು ಬೆತ್ತಲೆ ಹೆಣ್ಣಾಗಿ ಚಿತ್ರಿಸಿ ತೋರಿಸಿದಾಗ ಕೆಲವರು ಸಿಟ್ಟಿ ಗೆದ್ದಿದ್ದರು. ಹುಸೇನ್‌ರ ಚಿತ್ರಗಳನ್ನು ಸುಡಲಾಯಿತು. ಅದನ್ನು ಯಥಾಪ್ರಕಾರ ಬುದ್ಧಿಜೀವಿ ವರ್ಗ ನಾಡಿನಾದ್ಯಂತ ಖಂಡಿಸಿದ್ದೂ ಆಯಿತು. ಕರ್ನಾಟಕದಲ್ಲಿ ಅದನ್ನು ತುಂಬ ತೀವ್ರವಾಗಿ ಖಂಡಿಸಿದ್ದು -ಪೀಠಿ ಗಿರೀಶ್ ಕಾರ್ನಾಡ್.

ಅಲ್ಲಿಂದಲೇ... : ಆನಂತರ ಕಾರ್ನಾಡರು ಮತ್ತೆ ದನಿಯೆತ್ತಿದ್ದು, ಬಾಬಾ ಬುಡನ್‌ಗಿರಿ ವಿವಾದದ ಸಂದರ್ಭದಲ್ಲಿ. ಅಲ್ಲಿ ಅವರು ಮುಸಲ್ಮಾನರ ಪರವಾಗಿ ನಿಂತರು. ದತ್ತಪೀಠ ವಾದಿಗಳನ್ನು ಪ್ರತಿಭಟಿಸಿ ಸಭೆ ನಡೆಸುತ್ತೇವೆಂದು ಹೊರಟರು. ಹಾಸನ ದಾಟುವುದೂ ಅವರಿಂದ ಆಗಲಿಲ್ಲ. ಅಲ್ಲಿನ ಹೊಟೇಲ್ ಅಶೋಕದಲ್ಲಿ ಚಾ ಕುಡಿದು, ಮೂತ್ರ ಮುಗಿಸಿ, ಮುಖ ತೊಳೆದುಕೊಂಡು ಅಲ್ಲಿಂದಲ್ಲೇ ಅಂತರ್ಧಾನರಾದರು. ಅರೆಸ್ಟಾಗಿ ಜೈಲಿಗೆ ಹೋದದ್ದು ಗೌರಿ ಲಂಕೇಶ್. ಮತ್ತೆ ಕಾರ್ನಾಡರು ಹೋರಾಟ ಗೀರಾಟದ ಮಾತು ಆಡಲೇ ಇಲ್ಲ.

ಪುಕ್ಕಟೆ ಸಿಕ್ಕಿತ್ತು : ಆಯ್ತು , ಕೆಲವು ಜಾತಿಯವರಿಗೆ ಅಥವಾ ಧರ್ಮದವರಿಗೆ ಅನ್ಯಾಯವಾದಾಗಲೆಲ್ಲ ಪೀಠಿ ಕಾರ್ನಾಡರು ನೊಂದವರ ಪರವಾಗಿ ನಿಲ್ಲುತ್ತಾರೆ. ಅದು ನಿಜವಾದ ಬುದ್ಧಿಜೀವಿಯ ಲಕ್ಷಣ ಎಂದೇ ಕೆಲವು ಜನ ಕಾರ್ನಾಡ್ ಅಭಿಮಾನಿಗಳು ಭಾವಿಸಿದ್ದರಲ್ಲ ? ಕಾರ್ನಾಡರು ಹಾಸನದಲ್ಲೇ ಹೋರಾಟವನ್ನು ಮತ್ತೊಂದನ್ನೂ ವಿಸರ್ಜಿಸಿ ಹೊರಟು ಹೋದ ನಂತರವೂ ಅವರಿಗೆ ಮೂರ್ತಿ ಭಂಜಕ ಬುದ್ಧಿಜೀವಿಯ ಇಮೇಜೊಂದು ಪುಕ್ಕಟೆಯಾಗಿ ಸಿಕ್ಕಿತ್ತು. ಆದರೆ ಮುಂದೆ ಕಾರ್ನಾಡರು ಏನು ಮಾಡಿದರು?

ಬೆನ್ನಿ ಬಂದಾಗ? : ಬೆಂಗಳೂರಿಗೆ ಬೆನ್ನಿಹಿನ್ ಬಂದ. ಅದನ್ನು ಪ್ರಜ್ಞಾವಂತರೆಲ್ಲ ವಿರೋಸಿದರು. ಅದರಲ್ಲಿ ಧರಂ ಸಿಂಗ್ ಸಂಪುಟ ಭಾಗವಹಿಸಿದ್ದನ್ನು ತೀವ್ರವಾಗಿ ಖಂಡಿಸಿದರು. ಜನ ಸಾಮಾನ್ಯರಿಗೂ ಕೂಡ ಬೆನ್ನಿಹಿನ್‌ನ ಸಭೆಗಳು ಅಸಹ್ಯ, ತಿರಸ್ಕಾರ ತರಿಸಿದ್ದವು. ಆದರೆ ಪೀಠಿ ಕಾರ್ನಾಡರು ನೆಪಮಾತ್ರಕ್ಕೂ ಪಿಟ್ಟೆನ್ನಲಿಲ್ಲ. ಹಾಸನದ ಮೂತ್ರಿಯಿಂದ ಹೊರಬರಲಿಲ್ಲ. ಒಂದು ರಾಜ್ಯ, ಅದರ ಅಕ್ಷರಸ್ಥ ಜನ ತಮ್ಮ ನಾಡಿನ ಒಬ್ಬ ಜ್ಞಾನಪೀಠ ಪ್ರಶಸ್ತಿ ವಿಜೇತ ಇಂಥ ವಿಷಯಗಳಲ್ಲಿ ಏನು ಪ್ರತಿಕ್ರಿಯಿಸುತ್ತಾನೋ ಎಂದು ನಿರೀಕ್ಷಿಸುವುದು ಸಹಜ. ಮುಸ್ಲಿಮರಾದ ಎಂ.ಎಫ್.ಹುಸೇನರ ಮೇಲೆ ದಾಳಿ ನಡೆದಾಗ ಲಾದರೆ; ಸರಸ್ವತಿಯನ್ನು ಬೆತ್ತಲೆಯಾಗಿ ತೋರಿಸಿದ್ದೇ ಸರಿ ಎಂಬಂತೆ ಮಾತನಾಡಿದ ನೀವು, ಬೆನ್ನಿಹಿನ್‌ನಂಥ ವಂಚಕನನ್ನು ಖಂಡಿಸುವುದೂ ಇಲ್ಲ ಅಂದರೆ -ನೀವು ಮುಸ್ಲಿಂ ಮತ್ತು ಕ್ರೈಸ್ತ ಪಕ್ಷಪಾತಿ ಅಂತ ತೀರ್ಮಾನ ಮಾಡಬೇಕಾಗುತ್ತದಲ್ಲವೆ? ಒಂದು ಸಮಾಜಿಕ ಪಿಡುಗನ್ನ ಖಂಡಿಸುವುದಕ್ಕೇಕೆ ಹಿಂಜರಿಕೆ? ನಿಮ್ಮದು double standard ಅಲ್ಲವೇ?

ಈ ಪ್ರಶ್ನೆಗಳನ್ನು ಭಜರಂಗ ದಳದವರೇ ಕೇಳಬೇಕೆಂದಿಲ್ಲ. ಬಲಪಂಥೀಯನಲ್ಲದ ನಾನಾದರೂ ಕೇಳುವುದು ಸಹಜ. ಆದರೆ ಪೀಠಿ ಮೌನವಾಗಿರುತ್ತದೆ. ಇದೇ ತರಹದ ದ್ವಂದ್ವ ನಿಲುವುಗಳನ್ನು ನಮ್ಮ ಬುದ್ಧಿಜೀವಿ ವರ್ಗ ಮೊದಲಿಂದಲೂ ಮಾಡಿಕೊಂಡು ಬಂದಿದೆ. ಕಡೇಪಕ್ಷ ಕಾರಂತರಿಗೆ, ಅಡಿಗರಿಗೆ, even ಲಂಕೇಶರಿಗೂ ತಾವು ನಂಬಿಕೊಂಡದ್ದನ್ನ ಪ್ರತಿಪಾದಿಸುವ, ಆ ನಿಲುವಿಗೆ ಬದ್ಧರಾಗಿರುವ ನೇರವಂತಿಕೆ ಇತ್ತು. ಪೀಠಿದ್ವಯರಿಗೆ ಅದೂ ಇಲ್ಲ. ಬೆನ್ನಿಹಿನ್ ಕಾರ್ಯಕ್ರಮವನ್ನು ಕಡೇ ಘಳಿಗೆಯಲ್ಲಿ ಪ್ರತಿಭಟಿಸಿದ ಬುದ್ಧಿಜೀವಿ ವರ್ಗ ಕೂಡ ಸಾಹಿಬಾಬಾ ಹಿಂಗೇ ಮಾಡ್ತಿರಲಿಲ್ವಾ? ಇದೂ ಹಂಗೇನೇ! ಅಂದರೇ ಹೊರತು ಅವತ್ತಿನ issueದ ಕೇಂದ್ರ ಬಿಂದುವಾಗಿದ್ದ ಬೆನ್ನಿಯನ್ನು ಖಡಾಖಂಡಿತವಾಗಿ ಕಪಾಳಕ್ಕೆ ಹೊಡೆಯುವ ಧೈರ್ಯ ಮಾಡಲಿಲ್ಲ.

ನಗರಿ ಬಾಬಯ್ಯ : ಇನ್ನೊಬ್ಬರಿದ್ದಾರೆ, ನಗರಿ ಬಾಬಯ್ಯ. ಹಿರಿಯ ಇಂಗ್ಲಿಷ್ ಮೇಷ್ಟ್ರು. ಸಜ್ಜನರು. ನಕ್ಸಲ್ ಕ್ರಾಂತಿಕಾರಿ ಹೋರಾಟವನ್ನು ಬೆಂಬಲಿಸಿದರು. ಪೊಲೀಸ್ ಟಾರ್ಚರ್ ಮತ್ತು ಜೈಲು ಎರಡರನ್ನೂ ಅನುಭವಿಸಿದವರು. ಅವರನ್ನು ಎಡಪಂಥೀಯವರೆಲ್ಲರೂ ಗೌರವಿಸುತ್ತಾರೆ. ಎಲ್ಲೇ ದೌರ್ಜನ್ಯ, ಪೊಲೀಸರಿಂದ ಅನ್ಯಾಯ, ದಲಿತರ ಹತ್ಯಾಕಾಂಡ ಇತ್ಯಾದಿಗಳಾದಾಗ ಬಾಬಯ್ಯನವರು ಖುದ್ದಾಗಿ ಘಟನೆ ನಡೆದಲ್ಲಿಗೆ ಹೋಗಿ fact finding report ಒಂದು ನಿಷ್ಪಕ್ಷಪಾತದ ವರದಿ ಸಲ್ಲಿಸುತ್ತಾರೆ. ಅಂಥ ಬಾಬಯ್ಯ ಒಂದು ಸಲ ಪ್ರೆಸ್‌ಕ್ಲಬ್‌ನಲ್ಲಿ ರಾ.ಸೋಮನಾಥನ ಪಕ್ಕದಲ್ಲಿ ಕುಳಿತು ಹಾಯ್ ಬೆಂಗಳೂರು! ಕಚೇರಿಯಲ್ಲಿ ನಡೆದಿರುವ ಲೈಂಗಿಕ ಹಗರಣಗಳ ವಿರುದ್ಧ ಕ್ರಮಕೈಗೊಳ್ಳಬೇಕು ಅಂತ ಸರಕಾರವನ್ನು ಒತ್ತಾಯಿಸುತ್ತೇನೆ ಎಂದು ಹೇಳಿಕೆ ಕೊಟ್ಟರು. ನಾನು ಅವರಿಗೆ ತಕ್ಷಣ ಫೋನು ಮಾಡಿ, `ಇದೇನು ಬಾಬಯ್ಯನವರೇ ಹೀಗೆ ಮಾತಾಡ್ತಿದೀರಿ? ನೀವೇ ಖದ್ದಾಗಿ ನಮ್ಮ ಕಚೇರಿಗೆ ಬಂದು fact finding report ಕೊಡಿ. ನನ್ನ ಕಡೆಯಿಂದ ಅನ್ಯಾಯವಾಗಿದ್ದರೆ ನನ್ನ ವಿರುದ್ಧ ಚಳವಳಿ ಮಾಡಿ. ಅದು ಬಿಟ್ಟು,ತೀರ ಸೋಮನಾಥನಂಥವನ ಪಕ್ಕದಲ್ಲಿ ಕೂತು ಏನಂದರೆ ಅದನ್ನೇ ಮಾತಾಡಿದ್ದೀರಲ್ಲ?'ಅಂತ ಕೇಳಿದೆ.

ನಂಗೊತ್ತಾಗಲಿಲ್ಲ ಬೆಳಗೆರೇ, ಆ ಹುಡುಗ ಕರೆದ ಅಂತ ಹೋಗಿಬಿಟ್ಟೆ. ನಿಜಕ್ಕೂ ಏನು ನಡೆದಿದೆ ಅಂತ ನಾನು ವಿಚಾರಿಸ್ತೀನಿ... ಅಂದರು.

ಈತನಕ ಬಾಬಯ್ಯ ಯಾರನ್ನೂ ವಿಚಾರಿಸಿದ ಬಗ್ಗೆ ಮಾಹಿತಿ ಇಲ್ಲ. ಅದೇ ಸೋಮನಾಥ ಮೂವರು ವಿವಾಹಿತ- ವಿಚ್ಛೇದಿತ ಸ್ತ್ರೀಯರಿಗೆ ಮೂರು ಮನೆ ಮಾಡಿ ಕೊಟ್ಟು ಇಟ್ಟುಕೊಂಡ. ಅವರಲ್ಲಿ ಒಬ್ಬಾಕೆ `ಲಂಕೇಶ್ ಪತ್ರಿಕೆ' ಕಚೇರಿಗೇ ಹೋಗಿ ಗೌರಿ ಲಂಕೇಶ್ ಎದುರಿನಲ್ಲೇ ರಾ.ಸೋಮನಾಥನನ್ನು ಚಪ್ಪಲಿಯಲ್ಲಿ ಹೊಡೆದು ಬಂದಳು. ಬಾಬಯ್ಯ fact findinguಇನ್ನೂ ನಡೆಯುತ್ತಲೇ ಇದೆ. ನಮ್ಮ ಬುದ್ಧಿಜೀವಿಗಳು ಎಷ್ಟು ಬಲ ಹೀನರು, ಆತುರ ಗಾರರು, vulnerable and inconsistant fellows ಎಂಬುದಕ್ಕೆ ಈ ಉದಾಹರಣೆ ನೀಡಿದೆ.

ಜೀಸಸ್ ಆಗ್ಬೇಕು! : ನಂತರದ್ದು , ಪೀಠಿ ಅನಂತ ಮೂರ್ತಿಯವರ ನಿಲುವು ಮತ್ತು ದ್ವಂದ್ವಗಳ ಸಂಗತಿ. ಅನಂತಮೂರ್ತಿ ತಮ್ಮ ೬೦ನೇ ಹುಟ್ಟುಹಬ್ಬವನ್ನು ಉಡುಪಿಯ ಸಾರ್ವಜನಿಕ ವೇದಿಕೆಯೊಂದರ ಮೇಲೆ ಪತ್ನಿ ಎಸ್ತರ್ ಅವರ ಸಮೇತ ಅತ್ಯಂತ ಶಾಸ್ತ್ರೋಕ್ತವಾಗಿ ಆಚರಿಸಿಕೊಂಡರು. ವೇದಿಕೆಯ ಮೇಲೆಯೇ ಒಂದೇ ಲೋಟದಲ್ಲಿ ಹಾಲು ಹಂಚಿಕೊಂಡು, ಗಂಡ-ಹೆಂಡತಿ ಕುಡಿದರು. ಅವರ ಬುದ್ಧಿಜೀವಿತನ, ಕ್ರಾಂತಿ,ಬ್ರಾಹ್ಮಣ ವಿರೋಧ, ಜಾತಿನಾಶ ಸಿದ್ಧಾಂತಗಳಿಗಾಗಿ ಅವರನ್ನು ಇಷ್ಟಪಟ್ಟ ಅಭಿಮಾನಿಗಳ ಮುಖಕ್ಕೆ ಆ ಕಾರ್ಯಕ್ರಮ ಕೆರದಲ್ಲಿ ಹೊಡೆದಂತಾಗಿತ್ತು.

ಡಾಲರ್‍ಸ್ ಕಾಲನಿಯಲ್ಲಿ ಸರ್ಕಾರದ ಭಿಕ್ಷೆ ಪಡೆದು ಬಂಗಲೆ ಕಟ್ಟಿಸಿಕೊಂಡ ಅನಂತಮೂರ್ತಿ, ಏನು ಮಾಡೋದು ಬೆಳಗೆರೇ? ಜೀಸಸ್‌ಗೆ ಕೂಡ ಜೀಸಸ್ ಆಗಬೇಕು ಅನ್ನೋ ಆಸೆಯಿತ್ತು. ಗಾಂಜಿ ಕೂಡ ಗಾಂಜಿ ಆಗಬೇಕು ಅಂತ ಬಯಸ್ತಿದ್ರು. ನಾನು ಕೂಡ ಅನಂತಮೂರ್ತಿ ಆಗಬೇಕಿದೆ..! ಅಂತ ವೇದಾಂತ ಮಾತಾಡಿದ್ದರು. ಹೌದ್ದಲೆ ಪೀಠಿ! ಅಂದುಕೊಂಡು ಹಿಂತಿರುಗಿದ್ದೆ. ಅನಂತರದ ದಿನಗಳಲ್ಲಿ ಅನಂತಮೂರ್ತಿಯವರ ಆಷಾಢಭೂತಿತನದ ಬಗ್ಗೆ ನನಗೆ ಅನುಮಾನಗಳುಳಿಯಲಿಲ್ಲ. ಅವರನ್ನು ಟೀಕಿಸಿ ಬರೆದೆ. ನನ್ನ ಮೇಲೆ ಅನಂತ ಮೂರ್ತಿ ಇಹ-ಪರ ಎರಡಕ್ಕೂ ಆಗುವಷ್ಟು ದ್ವೇಷ ಸಾಸಿದರು.

ಅವನೇನಾದ? : ಇವತ್ತಿಗಾದರೂ ಪೀಠಿ ಮೂರ್ತಿ, ತಮ್ಮ ಹಾಗೂ ಪೇಜಾವರ ಮಠದ ಸ್ವಾಮಿಯ ನಡುವಿನ ಸ್ನೇಹ ಚೆದುರಗೊಟ್ಟಿಲ್ಲ. ಆ ಖಾಸಾತನ ಹಾಗೇ ಉಳಿಸಿಕೊಂಡು, ಬಿಜೆಪಿ ವಿರುದ್ಧದ ರ್‍ಹೆಟಾರಿಕ್ ಜಾರಿಯಲ್ಲಿಡುತ್ತಾರೆ. ಬಿಜೆಪಿ ವಿರುದ್ಧ ನೀವಿಬ್ಬರೂ ಬೆಂಬಲಿಸುವುದಾದರೆ ನಾನು ಅನಂತಕುಮಾರ್ ವಿರುದ್ಧ ರ್ಸ್ಪಸುತ್ತೇನೆ ಅಂತ ಪರಮಭ್ರಷ್ಟ ರಾಜಕಾರಣಿ ಎಸ್ಸೆಂ ಕೃಷ್ಣ ಹಾಗೂ ದೇವೇಗೌಡ ಅವರಿಗೆ ಪತ್ರ ಬರೆಯುತ್ತಾರೆ. ಕಡೇ ಪಕ್ಷ ಅಡಿಗರಿಗೆ ಬಲಪಂಥೀಯ ರ ಟಿಕೆಟ್ಟಿನೊಂದಿಗೆ ಚುನಾವಣೆಗೆ ನಿಂತು ಸೋಲುವ ಧೈರ್ಯವಾದರೂ ಇತ್ತು: ಇವರಿಗೆ ಅದೂ ಇಲ್ಲ. ಕಾಲದಿಂದ ಕಾಲಕ್ಕೆ ಹೆಗಡೆ, ಪಟೇಲ್, ಎಸ್ಸೆಂ ಕೃಷ್ಣ -ಹೀಗೆ ಅಕಾರರೂಢರೊಂದಿಗೆ ರಾಕ್ ಅಂಡ್ ರೋಲ್ ಮಾಡಿಕೊಂಡು ಬಂದರೇ ಹೊರತು, ಅನಂತಮೂರ್ತಿ ಯಾವತ್ತೂ ನಿರ್ಗತಿಕರ ಪರ ಹೋರಾಟಕ್ಕಿಳಿಯಲಿಲ್ಲ. ತುಂಗಾ ಮೂಲದ ಮಾತು ಅಲ್ಲಿಗೇಬಿಟ್ಟರು. ಇದರಿಂದಾಗಿಯೇ ದಲಿತ ಚಳವಳಿ ಹೋಳಾಯಿತು ಅಂತ ಇತ್ತಿಗೂ ದ.ಸಂ.ಸ ಕಾರ್ಯಕರ್ತರು ಹಲ್ಲು ಮಸೆಯುತ್ತಾರೆ. ಲಂಕೇಶರು ನೇರವಾಗಿ ಹೋರಾಟಗಳನ್ನು ಕಟ್ಟಿ ಬೆಳೆಸಲಿಲ್ಲ. ಆದರೆ ಸರ್ಕಾರದಿಂದ, ಅವರ ಪ್ರಲೋಭನೆಗಳಿಂದ ಕಡೆತನಕ ದೂರ ಉಳಿದರು. ಈ ಪೀಠಿ ಅದ್ಯಾವುದನ್ನೂ ಉಳಿಸಿಕೊಳ್ಳಲಿಲ್ಲ. ಎಲ್ಲಿಗೆ ಹೋಯಿತು ಇವರ ಮೂರ್ತಿ ಭಂಜಕತೆ?ಎಲ್ಲಿಗೆ ಹೋಯಿತು ಇವರ ಕ್ರಾಂತಿಕಾರಿ, ಜಾತಿ ವಿರೋ, ಶೋಷಿತರ ಪರ ನಿಲುವು ? ಕಡೆಗೆ, ಇವರೊಳಗಿನ ಒಬ್ಬ ಮನುಷ್ಯನಿದ್ದನಲ್ಲ ? ಅವನೇನಾದ ?

ಅಯ್ಯನಿಗೆ ಸನ್ಮಾನ : ನನಗೆ ಜಾಣಗೆರೆ ವೆಂಕಟರಾಮಯ್ಯನವರಂಥ ಅಥವಾ ನಾರಾಯಣ ಗೌಡನಂಥ ವೀರಾಭಿಮಾನಿ ಕನ್ನಡ ಹೋರಾಟಗಾರರು, ಅವರ ಎಲ್ಲ ಒರಟುತನ, ಭೋಳೆತನ, ತಪ್ಪು ಕನ್ನಡಗಳ ಸಮೇತ ಇಷ್ಟವಾಗುತ್ತಾರೆ. ಯಾಕೆಂದರೆ, ಅವರದು ಒಂದು ನಿಲುವು. ಅಚಲ ಬದ್ಧತೆ. ರಾಜ್ ಕುಟುಂಬದ ವಿರುದ್ಧ ದನಿ ತೆಗೆದದ್ದೇ ಜಾಣಗೆರೆ ವೆಂಕಟರಾಮಯ್ಯ. ರಾಜ್‌ಗೆ ಬಂದ ಆಪತ್ತು ಕನ್ನಡಕ್ಕೆ ಬರಬಹುದಾದ ಆಪತ್ತಿಗಿಂತ ದೊಡ್ಡದು ಅಂತ ಅವರಿಗನ್ನಿಸಲಿಲ್ಲ. ಕೆಲವು ಬುದ್ಧಿಜೀವಿ ಮಿತ್ರರು ಮದ್ರಾಸಿಗೆ ಹೋಗಿ ಅಯ್ಯ ನೆಡುಮಾರನ್‌ರನ್ನು ಓಲೈಸಿ, ರಾಜಕುಮಾರ್‌ರನ್ನು ಬಿಡುಗಡೆ ಮಾಡಿಸಿ ತಂದ ನಂತರ ಅವರಿಗೆ ಸನ್ಮಾನ ಮಾಡುತ್ತೇವೆಂದರು. ನಮ್ಮ ರುಂಡ ಕಡಿದರೂ ಸರಿಯೇ, ಸನ್ಮಾನ ಕಾರ್ಯಕ್ರಮ ನಡೆಯಲು ನಾವು ಬಿಡುವುದಿಲ್ಲ ಅಂದವರು ಬುದ್ಧಿಜೀವಿಗಳಲ್ಲ, ಭಾವನಾ ಜೀವಿಗಳಾದ ಹೋರಾಟಗಾರರು! ಮುಂದೆ ಅವೇ ಬುದ್ಧಿಜೀವಿ ಮಿತ್ರರು ಕನ್ನಡ ಸಿನಿಮಾ ಇಂಡಸ್ಟ್ರಿಯ ಸಮಸ್ಯೆಯನ್ನು ಈ ನಾಡಿನ ಸಮಸ್ತ ಕನ್ನಡ, ದಲಿತ, ರೈತ ಸಮಸ್ಯೆಗಳಿಗೆ ಸಮ ಎಂಬಂತೆ project ಮಾಡಿ ಐದು ಲಕ್ಷ ಕನ್ನಡಿಗರನ್ನು ಕರ್‍ಕೊಂಡು ಬರ್‍ತೀವಿ ಅಂತ ಹೂಂಕರಿಸಿದರು. ಎರಡನೇ ದಿನದ ಸಭೆಗೆ ಸಿನೆಮಾದವರೇ ಬರಲಿಲ್ಲ. ಐದು ಲಕ್ಷ ಕನ್ನಡಿಗರು ಹ್ಯಾಗೆ ವಾಪಸು ಹೋದರೋ ?ಗೊತ್ತೇ ಆಗಲಿಲ್ಲ.

ಬಾಬಾ ಬುಡನ್‌ಗಿರಿಯಲ್ಲಿ ಜಿ.ಕೆ.ಗೋವಿಂದರಾವ್ ಥರದ ಬುದ್ಧಿಜೀವಿಗಳು ಮಾಡಿದ್ದೂ ಅದನ್ನೇ. ಮಾತಿಗೆ ನಿಂತರೆ, ಇಡೀ ಜಗತ್ತಿನ್ನೇ ಎದುರು ಹಾಕಿಕೊಂಡು ಬಿಡುವ ತಾಕತ್ತಿರುವವರಂತೆ ಮಾತನಾಡುತ್ತಾರೆ. ಭಜರಂಗ ದಳದವರಂತೆ, ಅರೆಸ್ಸೆಸ್ಸಿನವರಂತೆ, ಬಿಜೆಪಿಯವರಂತೆ, ಕಮ್ಯುನಿಸ್ಟ್ ಟ್ರೇಡ್ ಯೂನಿಯನ್‌ಗಳ ನಾಯಕರಂತೆ - ಇವರು ಯಾವತ್ತೂ ಒಂದು ಚಳವಳಿ ಕಟ್ಟಲಾರರು. ಒಂದೇ ಒಂದು ಸಾಮಾಜಿಕ ಉಪಯೋಗದ ಕೆಲಸ ಮಾಡಲಾರರು. ಒಂದು ಬದುಕು ಕಟ್ಟಿಕೊಡುವ ಕೈಂಕರ್ಯಕ್ಕೆ ಮುಂದಾಗಲಾರರು.

ಯಾವತ್ತು ಮಿಡಿದರು? : ಕಾರ್ಗಿಲ್ ಯುದ್ಧದಲ್ಲಿ ನಮ್ಮದೇ ಅಕ್ಕಪಕ್ಕದ ಮನೆಗಳ ಹುಡುಗರು ಸತ್ತರು. ಇವರು ಮಾಡಿದ್ದೇನು? `ವಾಜಪೇಯಿ ಯುದ್ಧದಾಹಿ ಕಣ್ರೀ!' ಅಂತ ಅಬ್ಬರಿಸಿದರು. ಅದಾಯ್ತು. ನಮ್ಮ ಹುಡುಗರು ಸತ್ತ ರಲ್ಲ?ಅವರ ಕುಟುಂಬಗಳ ಗತಿಯೇನು ಅಂತ ಕೇಳಿದರೆ, ಉತ್ತರ ಕೂಡ ಕೊಡಲಿಲ್ಲ. ಉತ್ತರ ಕೊಟ್ಟವರು ಈ ನೆಲದ ಗಾರೆ ಕೆಲಸದವರು, ರಿಕ್ಷಾ ಡ್ರೈವರುಗಳು, ಸಣ್ಣಗಾತ್ರದ ಸಂಬಳದವರು, ಪ್ರಾಮಾಣಿಕ ದೇಶಭಕ್ತರು. ಈ ಬುದ್ಧಿಜೀವಿಗಳ ಪೈಕಿ ಯಾರೊಬ್ಬರಾದರೂ ಯುದ್ಧ ವೀರರ ಮನೆಗೆ ಅರಪಾವು ಅಕ್ಕಿ ಕಳಿಸಿದ್ದರಾ ? ಕೇಳಿ.

ಗುಜರಾತ್ ಹತ್ಯಾಕಾಂಡವಾಯಿತು. `ಲಬ್ಬೋ' ಅಂತ ಬೊಬ್ಬಿರಿದುಬಿಟ್ಟಿತು ಬುದ್ಧಿಜೀವಿ ಸಮೂಹ. ಹಿಂದೂ ಉಗ್ರರು ಕೊಂದ ಮುಸಲ್ಮಾನ ಶವಗಳನ್ನು ನೋಡಿ ನೋಡಿ ಕಣ್ಣೀರಿಟ್ಟಿತು. ಸಭೆ ನಡೆಸಿತು. ಠರಾವು ಪಾಸು ಮಾಡಿತು. ಎಲ್ಲ ಪತ್ರಿಕೆಗಳಲ್ಲೂ ಇವರ ಹೇಳಿಕೆಗಳು ಪ್ರಕಟವಾದವು. ಅಲ್ಲಿಗೆ ಮುಗಿಯಿತು.

ಈ ನರಮೇಧಕ್ಕೆ ಕೆಲವೇ ತಿಂಗಳಿಗೆ ಮುಂಚೆ ಅದೇ ಗುಜರಾತದಲ್ಲೊಂದು ಭೂಕಂಪವಾಗಿತ್ತು. ಸಾವಿರಾರು ಜನ ಸತ್ತಿದ್ದರು. ಇಡೀ ದೇಶ ಅವರಿಗಾಗಿ ಮರುಗಿ ತನ್ನ ಕೈಲಿದ್ದ ತುತ್ತು, ಗುಜರಾತಕ್ಕೆ ಕಳಿಸಿತು: ಹಿಂದೂ ಮುಸ್ಲಿಮರೆಂಬ ಭೇದವಿಲ್ಲದೆ. ಕಡೆಗೆ ಮುತ್ತಪ್ಪ ರೈ ನಂಥ ಭೂಗತ ಲೋಕದ ಮನುಷ್ಯ ಕೂಡ ಹಣ ಕಳಿಸಿದ. ಈ ಬುದ್ಧಿಜೀವಿಗಳ ಪೈಕಿ ಯಾರಾದರೂ ಅರ್ಧ ರೂಪಾಯಿ ಚಂದಾ ವಸೂಲು ಮಾಡಿ ಕಳಿಸಿದರಾ ಗುಜರಾತಕ್ಕೆ ?

ಪ್ರೀತಿಯ ಅಲೆ : ಮೊನ್ನೆಯ ಸುನಾಮಿ ಅವಘಡಕ್ಕೆ ಇವರು ಪ್ರತಿ ಕ್ರಿಯಿಸಿದ್ದು ಹೇಗೆ ? ಮನೆಮನೆ ಗಳಲ್ಲೂ ಕೂತು ಹಗಲೂ ರಾತ್ರಿ ಚಪಾತಿ ಲಟ್ಟಿಸಿ, ಸಮುದ್ರ ತೀರದ ಹಳ್ಳಿಗಳಿಗೆ ಲಾರಿಗಳಲ್ಲಿ ಕೊಂಡೊಯ್ದರು ಜನ. ಅವರ್‍ಯಾರೂ ಶ್ರೀಮಂತರಲ್ಲ, ಬುದ್ಧಿಜೀವಿಗಳು ಮೊದಲೇ ಅಲ್ಲ. ಮನುಷ್ಯನ ಸಂಕಟಕ್ಕೆ ಮನುಷ್ಯ ಮರುಗಬೇಕು ಅಂತ ಇಚ್ಛಿಸಿದ, ಹಾಗೆಯೇ ವರ್ತಿಸಿದ ಅತಿ ಸಾಮಾನ್ಯ ಜನ.

ಈ ಬುದ್ಧಿಜೀವಿಗಳು ಜೀವನದುದ್ದಕ್ಕೂ ಬರೆದದ್ದು ಆ ನಿರ್ಗತಿಕರ ಬಗ್ಗೆಯೇ! ಆದರೆ ಅವರನ್ನು ಸುನಾಮಿ ಅಲೆ ತಿಂದು ಹಾಕಿದಾಗ, ಈ ಜನ ರಜೆಯಲ್ಲಿದ್ದರು: ಲಾಂಗ್ ಲೀವ್! ತೀರ ಬಾಂಬೆ ಚಿತ್ರರಂಗದ ನಟ-ನಟಿಯರು, ತಂತ್ರಜ್ಞರು ಬಂದು show ಮಾಡಿ ಹಣ ಕೂಡಿಸಿಕೊಟ್ಟರು. ಜಾವೇದ್ ಅಖ್ತರ್‌ನಂಥ ಕವಿ `ಒಂದೊಂದು ಹನಿ ಪ್ರೇಮ, ಪ್ರೀತಿ, ಅಂತಃಕರಣ ಸೇರಿದರೆ ಉಂಟಾಗುವ ಅಲೆಯ ಮುಂದೆ ಸುನಾಮಿ ಅಲೆಯಾವ ಲೆಕ್ಕ? ಬನ್ನಿ. ಸಂತ್ರಸ್ತರಿಗೆ ಸಹಾಯ ಮಾಡೋಣ' ಅಂತ ಕರೆ ನೀಡಿದ. ಸಮಾಜ ಮುಖಿ ಚಿಂತನೆ ಅಂದರೆ ಅದು. ಜನಪರತೆ ಅಂದರೆ ಅದು.

ವರವರರಾವ್ ನಿಲುವು : ಆದರೆ ಇವರೇನು ಮಾಡಿದರು? ಇವರದು ಯಾವ ಜನಪರತೆ? ಹೋಗಲಿ, ತೆಗೆದುಕೊಂಡ ನಿಲುವುಗಳಿಗೆ ಬದ್ಧರಾಗಿಯಾದರೂ ಇರುತ್ತಾರಾ ? ಅವುಗಳ ಆಗುಹೋಗುಗಳ ಬಗ್ಗೆ ಯೋಚನೆಯನ್ನಾದರೂ ಮಾಡುತ್ತಾರಾ? ಅದೂ ಇಲ್ಲ. ಇವರ ಕಣ್ಣೆದುರಿಗೆ ಸಂಘ ಪರಿವಾರ ಎಂಬುದೊಂದು ಬೃಹತ್ `ಶತ್ರು'ವಿರುತ್ತದೆ. ಅದು ಏನನ್ನೇ ಮಾಡಿದರೂ, ಅದಕ್ಕೆ ಉಲ್ಟಾ ಹೊಡೆಯುವುದಷ್ಟೆ ಇವರ ಪ್ರಗತಿ ಪರತೆ. ಆಂಧ್ರದಿಂದ ಗದ್ದರ್ ಮತ್ತು ವರವರರಾವು ಬಂದರು. ತಕ್ಷಣ ನಮ್ಮ ಬುದ್ಧಿ ಜೀವಿಗಳು ಅವರೊಂದಿಗೆ ಐಡೆಂಟಿಫೈ ಮಾಡಿಕೊಂಡರು. ಸಾಕೇತ್ ಸಾವಿನ ಸುದ್ಧಿ ಕೇಳಿ ಧಾವಿಸಿ ಬಂದ ವರವರರಾವು, ಆಂಧ್ರದಲ್ಲಿ ಸರ್ಕಾರ ಮತ್ತು ನಕ್ಸಲ್ ಚಳವಳಿಯ ಮಧ್ಯದ ಮಾತುಕತೆಯ ಮುಖ್ಯಕೊಂಡಿ. ಹಾಗೊಂದು ಪಾತ್ರ ವಹಿಸುವಲ್ಲಿನ ಸಾಧಕ ಬಾಧಕಗಳೆರಡೂ ವರವರರಾವ್‌ಗೆ ಗೊತ್ತು. ಇವತ್ತು ಕೂಡ ಅಲ್ಲಿ ಆತ ಹೇಳಿಕೆ ಕೊಟ್ಟಿದ್ದಾರೆ: `ಇನ್ನು ಸರ್ಕಾರದೊಂದಿಗೆ ಮಾತುಕತೆಯ ಪ್ರಶ್ನೆಯಿಲ್ಲ. ನಕ್ಸಲರು ಶಸ್ತ್ರ ಕೆಳಗಿಟ್ಟರೇನೇ ಮಾತುಕತೆ ಅಂತ ವೈ.ರಾಜ ಶೇಖರ ರೆಡ್ಡಿ ಸರ್ಕಾರ ಹೇಳುತ್ತಿದೆ. ನಕ್ಸಲರು ಶಸ್ತ್ರ ಕೆಳಗಿಡುವುದಿಲ್ಲ ಅನ್ನುತ್ತಿದ್ದಾರೆ. ಹೀಗಾಗಿ ಮಾತುಕತೆ ಮುರಿದುಬಿದ್ದಿದೆ. ನನ್ನ ಅಭಿಪ್ರಾಯದ ಪ್ರಕಾರ ನಕ್ಸಲರು ಶಸ್ತ್ರಾಸ್ತ್ರ ಕೆಳಗಿಡುವುದು ಬೇಕಾಗಿಲ್ಲ' ಅಂದಿದ್ದಾರೆ ವರವರರಾವು. ಅದು ಚಳವಳಿಯ ಆಳ-ಅಗಲ ಗೊತ್ತಿರುವ, ಅದರಲ್ಲಿ ಪಳಗಿರುವ, ಸರ್ಕಾರದೊಂದಿಗೆ ಮಾತಿಗಿಳಿಯಬಲ್ಲ ಅಪ್ಪಟ negotiater ನ ಮಾತು. ಆದರೆ ಇವರೇನು ಮಾಡಿದರು ನೋಡಿ?

ಜನನಂಬುತ್ತಾರಾ? : ವೆಂಕಟಂಪಲ್ಲಿ ಹತ್ಯಾಕಾಂಡದ ಸುದ್ಧಿ ಬಂದ ತಕ್ಷಣ, `ಹ್ಞಾಂ, ಇದು ತಪ್ಪು. ಅಲ್ಲಿ ಮೆಣಸಿನ ಹಾಡ್ಯದಲ್ಲಿ ಪೊಲೀಸರು ನಕ್ಸಲರನ್ನು ಕೊಂದಿದ್ದೂ ತಪ್ಪು. ವೆಂಕಟಂಪಲ್ಲಿಯಲ್ಲಿ ಪೊಲೀಸರನ್ನು ನಕ್ಸಲರು ಕೊಂದಿದ್ದೂ ತಪ್ಪು. ಹಿಂಸೇನ ನಾವು ಬೆಂಬಲಿಸಲ್ಲಪ್ಪ !'ಅಂದುಬಿಟ್ಟರು. ಇವರ ನಿಲುವು ರಾತ್ರೋ ರಾತ್ರಿ ಹೇಗೆ ಬದಲಾಯಿತೆಂದರೆ, ವೆಂಕಟಂಪಲ್ಲಿ ಹತ್ಯಾಕಾಂಡದ ಜವಾಬ್ದಾರಿಯನ್ನು ನಾವು ಹೊರಬೇಕಾಗಿ ಬರುತ್ತದೇನೋ ಎಂಬಂತೆ ವರ್ತಿಸಿಬಿಟ್ಟರು. ಸಾಕೇತ್ ಸಾವಿಗೆ ಕಣ್ಣೀರಿಟ್ಟ ವರು ಘಳಿಗೆಯೇ ಪೊಲೀಸರ ಸಾವಿಗೂ ಕಣ್ಣೀರಿಟ್ಟರೆ -ಇವರನ್ನು ಜನ ನಂಬುವುದು ಹೇಗೆ? ನಂಬುತ್ತಾರಾದರೂ ಯಾರು?

ಗೌರಿಯಂಥವಳಿಗೆ ಚಳಿವಳಿಯ ಪರಿಣಾಮಗಳು ಗೊತ್ತಿಲ್ಲ. ರಾಜ್ಯಾಂಗದ ವಿರುದ್ಧ ಪ್ರತಿಭಟಿಸುವುದು ಬೇರೆ, ಸಂವಿಧಾನ ಬದ್ಧ ಸರ್ಕಾರದ ವಿರುದ್ಧ ಬಂಡೇಳುವುದು ಬೇರೆ. ನಕ್ಸಲ್‌ಚಳವಳಿ ೧೯೬೯ರಿಂದಲೂ ಇದೆ. ಅನೇಕರನ್ನು ಹೊಸಕಿ ನಾಶ ಮಾಡಿಬಿಟ್ಟಿದೆ. ತಾನೂ ಕಾಲದಿಂದ ಕಾಲಕ್ಕೆ ನಶಿಸಿದೆ. ಆದರೆ ಮತ್ತೆ ಜಿಗಿತಿದೆ. ಈತನಕ ಭಾರತದಲ್ಲಿ ಲಕ್ಷಾಂತರ ನಕ್ಸಲೀಯರನ್ನು ಸರ್ಕಾರಗಳು ಕೊಂದು ಹಾಕಿವೆ. ಆದರೂ ಚಳವಳಿ ಮತ್ತೆ ಮತ್ತೆ ತಲೆಯೆತ್ತಿದೆ. ವರವರರಾವು, ಗದ್ದರ್, ತಾರ್ಕುಂಡೆ, ಕನ್ನಬೀರನ್‌ನಂಥವರು ಲಾಠಿ- ಜೈಲು ಜೀವಿಗಳು ನಾಶವೇ ಆಗಿಹೋದರು.

ನಮ್ಮ ಬುದ್ಧಿಜೀವಿಗಳಲ್ಲಿ ಆ ಸ್ಥಿರತೆಯೂ ಇಲ್ಲ, ಬದ್ಧತೆಯೂ ಇಲ್ಲ. ಇವರಿಗೆ ಬುದ್ಧಿ ಹೇಳುವವರು ಯಾರು?

No comments: