Monday, July 31, 2006

ಅಂಥದೊಂದು ಫತ್ವಾ ಹೊರಟರೂ ಸುಮ್ಮನೇ ಇದೆ ಬುದ್ಧಿಜೀವಿ!

ರವಿ ಬೆಳಗೆರೆ
ರವಿ ಬೆಳಗೆರೆ



ಅಯೋಧ್ಯೆಯಲ್ಲಿ ಮತ್ತೆ ರಕ್ತ ಹರಿದಿದೆ. ಯಥಾಪ್ರಕಾರ ಬಿಜೆಪಿಗಳು ಕೈಯಲ್ಲಿ ದಂಡ ಹಿಡಿದುಕೊಂಡು ದೇಶವನ್ನು ಬಂದ್ ಮಾಡಿಸಲು ಹೊರಟುಬಿಟ್ಟಿದ್ದಾರೆ. ಬಂದ್ ಯಾತಕ್ಕೆ ಅನ್ನುವುದು ಯಾರಿಗೂ ಗೊತ್ತಿಲ್ಲ. ನಮ್ಮ ಗಂಡೆದೆಯ ಸಿ‌ಆರ್‌ಪಿ‌ಎಫ್ ಯೋಧರು ಉಗ್ರರನ್ನು ಗುಂಡಿಕ್ಕಿ ನೆಲಕ್ಕುರುಳಿಸಿದ್ದು ಬಂದ್ ಮಾಡಿ ಪ್ರತಿಭಟಿಸಬೇಕಾದ ವಿಷಯವಾ? ಅವರ ಸಾಹಸ ಮೆಚ್ಚಿ ಎದೆಯುಬ್ಬಿಸಿ ರಸ್ತೆಯಲ್ಲಿ ನಡೆಯುವ ಬದಲು ಬಾಗಿಲು ಹಾಕಿಕೊಂಡು ಮನೆಯಲ್ಲೇ ಇರಿ ಅನ್ನುವಂತೆ ಆಡಿಬಿಟ್ಟಿತು ಬಿಜೆಪಿ.

ಪ್ರತಿಯೊಂದಕ್ಕೂ ರಾಜಕೀಯದ ಲೇಪನ ಮಾಡಿದರೆ ಆಗುವುದೇ ಹೀಗೆ. ಆಯೋಧ್ಯೆಯೂ ಸೇರಿದಂತೆ ಇವತ್ತಿನ ಈ ದೇಶದ ಸಮಸ್ತ ಪಾಪಗಳಿಗೂ ಮೂಲ ಕಾರಣವೇ ಇಂಥ ಕರ್ಮಠ ಕೈಗೆ ಅಕಾರ ಸಿಕ್ಕರೆ ಏನಾಗುತ್ತದೆ ಅನ್ನುವುದನ್ನು ಈ ದೇಶ ಸಾವಿರಾರು ವರ್ಷಗಳಿಂದಲೂ ನೋಡುತ್ತಲೇ ಬಂದಿದೆ, ಅನುಭವಿಸುತ್ತಲೇ ಬಂದಿದೆ. ವಿಧವೆಯರ ಕೇಶಮಂಡನವಾಗಬೇಕು ಅನ್ನುವ ಕಟ್ಟಳೆ ಬಂದಿದ್ದು, ವಿಧವಾ ವಿವಾಹ ನಿಷಿದ್ಧವಾಗಿದ್ದು, ಸತಿಪದ್ಧತಿ ಹುಟ್ಟಿದ್ದು, ಎಲ್ಲಕ್ಕೂ ಕಾರಣ ಧರ್ಮದ ಕರ್ಮಠ ವ್ಯಾಖ್ಯಾನಗಳೇ. ದಾಸಯ್ಯ ಹಾಡಿದ್ದೇ ಹಾಡು ಅನ್ನುವ ಹಾಗೆ ಕರ್ಮಠರು ಹೇಳಿದ್ದೇ ಧರ್ಮವಾಯಿತು. ಭಗವದ್ಗೀತೆಯನ್ನೂ-ವೇದಗಳನ್ನೂ,ಬೈಬಲ್-ಕುರಾನ್‌ಗಳನ್ನೂ ಪಾಮರರು ಓದಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿರುವುದೇ ಇಂಥವರ ಸೃಷ್ಟಿಗೆ ಕಾರಣವಾಯಿತು. ನಮ್ಮ ಅಜ್ಞಾನವನ್ನು ಕರ್ಮಠರು ಅತ್ಯಂತ ವ್ಯವಸ್ಥಿತವಾಗೇ ಬಳಸಿಕೊಂಡರು.

ಈಗ, ಉತ್ತರಪ್ರದೇಶದಿಂದ ಇನ್ನೊಂದು ಕರ್ಮಠ ಅನರ್ಥದ ವರದಿ ಬಂದಿದೆ. ಆ ರಾಜ್ಯದ ಮುಜಫರ್‌ನಗರದ ಹತ್ತಿರವಿರುವ ದೇವ್‌ಬಂದ್ ಅನ್ನುವ ಊರನ್ನು ನೋಡಿದರೆ, ತಾಲಿಬಾನ್ ಆಡಳಿತವಿದ್ದ ಅಫಘಾನಿಸ್ತಾನವನ್ನು ನೋಡುವುದೇ ಬೇಡ! ಅಲ್ಲೊಂದು ಮುಸ್ಲಿಂ ಪಂಚಾಯ್ತಿಯಿದೆ. ತಾಲಿಬಾನ್‌ನಿಂದಲೇ ನೇರವಾಗಿ ಬಂದವರಂತಿದ್ದಾರೆ ಪಂಚಾಯ್ತಿದಾರರು. ಅವರೀಗ, ಇಮ್ರಾನಾ ಅನ್ನುವ ಹೆಣ್ಣುಮಗಳಿಗೆ ಅವಳ ಸ್ವಂತ ಮಾವನ ಜೊತೆ ಮದುವೆ ಮಾಡಿಸಲು ಹೊರಟುಬಿಟ್ಟಿದ್ದಾರೆ. ಈ ಮಾವ ಅನ್ನಿಸಿಕೊಂಡ ಮನುಷ್ಯ ಅವಳ ಮೇಲೆ ಅತ್ಯಾಚಾರವೆಸಗಿದ್ದ! ಪೊಲೀಸರು ಅವನನ್ನು ಬಂಸಿ ಎಳೆದೊಯ್ದು ಲಾಕಪ್ಪಿಗೆ ತಳ್ಳಿದರು.

ಆಮೇಲೆ ಆದ್ಯಾರು ಕರೆದರೋ ಏನೋ ಈ ಪಂಚಾಯ್ತಿದಾರರನ್ನ; ಅವರು ಖುದ್ದಾಗಿ ತಾವೇ ಇಮ್ರಾನಾಳ ಮನೆಗೆ ಬಂದು, ಪಂಚಾಯ್ತಿ ನಡೆಸಿ, ಅವಳು ತನ್ನ `ಗಂಡನನ್ನು ಮತ್ತು ಐದು ಜನ ಮಕ್ಕಳನ್ನು ಬಿಟ್ಟು ತನ್ನ ಮಾವನನ್ನೇ ಮದುವೆಯಾಗಬೇಕು, ಗಂಡನನ್ನು ಇನ್ನು ಮುಂದೆ `ಮಗ' ನಂತೆ ಕಾಣಬೇಕು ಅನ್ನುವ ಒಂದು ಅನಾಹುತಕಾರೀ ತೀರ್ಪು ಕೊಟ್ಟುಬಿಟ್ಟರು. ಸಾಲದೆಂಬಂತೆ, ಈ ಮಾವನೆಂಬ ಮಹಾಶಯನ ಪತ್ನಿಯಾಗುವ ಅರ್ಹತೆ ಪಡೆಯುವುದಕ್ಕಾಗಿ ಅವಳು ಏಳು ತಿಂಗಳ ಕಾಲ ಏಕಾಂತವಾಸ ಮಾಡಿ `ಪವಿತ್ರ'ಗೊಳ್ಳಬೇಕು ಅಂತಲೂ ಆಣತಿ ಮಾಡಿದರು. ಆದರೆ, ಮಾವನನ್ನು ಶಿಕ್ಷೆಸುವ ಬಗ್ಗೆ ಮಾತೇ ಆಡಲಿಲ್ಲ!

ಈ ದೇಶದಲ್ಲಿ ಪ್ರಜಾಪ್ರಭುತ್ವವಿದೆ. ಇಲ್ಲೊಂದು ಜಾತ್ಯತೀತ ವ್ಯವಸ್ಥೆಯಿದೆ. ಹೀಗಿರುವಾಗ, ಜವಾಬ್ದಾರಿಯಿರುವ ಯಾವುದೇ ನಾಯಕನಾದರೂ ಪಾಪದ ಇಮ್ರಾನಳ ಸಹಾಯಕ್ಕೆ ಧಾವಿಸಬೇಕಿತ್ತು. ಆದರೆ ಆ ರಾಜಕಾರಣಿಗಳಿಗೆ ತಮ್ಮ ವೋಟ್‌ಬ್ಯಾಂಕಿನ ಕರ್ಮಠ ತನವಿರುತ್ತದಲ್ಲಾ! ಅದಕ್ಕೇ, ಮುಲಾಯಂ ಸಿಂಗ್ ಅನ್ನುವ ಆ ರಾಜ್ಯದ ಮುಖ್ಯಮಂತ್ರಿ, `...ತುಂಬಾ ಯೋಚಿಸಿದ ಮೇಲೆ ಇಂಥದ್ದೊಂದು ತೀರ್ಪನ್ನ ಪಂಚಾಯ್ತಿ ಕೊಟ್ಟಿರಬೇಕು' ಅಂತ ಹೇಳಿ ಕೈತೊಳೆದುಕೊಂಡು ಬಿಟ್ಟರು! ಕಾಂಗ್ರೆಸ್ ಎಂಬ ಎಡಬಿಡಂಗಿ ಪಕ್ಷದ ವಕ್ತಾರ ಸಲ್ಮಾನ್ ಖುರ್ಷಿದ್, ವೈಯಕ್ತಿಕ ಕಾನೂನನ್ನು ಮಾನ್ಯ ಮಾಡುವ ಈ ದೇಶದ ಕಾನೂನನ್ನು ನಾವು ಮಾನ್ಯ ಮಾಡಲೇಬೇಕು.' ಅನ್ನುವ ಒಂದು ಪರಮ ಎಡವಟ್ಟು ಹೇಳಿಕೆ ಕೊಟ್ಟರು.

ವೈಯಕ್ತಿಕ ಕಾನೂನುಗಳನ್ನು ಮಾನ್ಯ ಮಾಡಬಾರದೆಂದು ಯಾರೂ ಹೇಳುತ್ತಿಲ್ಲ. ಆದರೆ, ಎಲ್ಲ ಕಾನೂನಿಗೂ ಒಂದು ಮಾನವೀಯ ಮುಖ ಇರಬೇಕಲ್ಲವೆ? ಅಮಾನವೀಯ ತೀರ್ಪೊಂದು ಮುಖಕ್ಕೇ ರಾಚುತ್ತಿದ್ದರೂ, ಅದಕ್ಕೂ-ತನಗೂ ಸಂಬಂಧವಿಲ್ಲದಂತೆ ಮುಖ ತಿರುಗಿಸಿಕೊಳ್ಳುವುದು ಪಾಷಂಡಿತನ. ನಿಜವಾದ ಸಾಮಾಜಿಕ ಕಾಳಜಿಗಿಂತ ರಾಜಕೀಯವೇ ಮುಖ್ಯ‌ಅನ್ನುವಂತಾಗಿಬಿಟ್ಟರೆ ನಮ್ಮ ನಾಯಕರುಗಳು ಏನಾಗುತ್ತಾರೆ ಅನ್ನುವುದಕ್ಕೆ ಇದೊಂದು ಉದಾಹರಣೆ ಸಾಕು.

ದೇವ್‌ಬಂದ್ ಪಂಚಾಯ್ತಿಯ ತೀರ್ಪನ್ನು ಅನೇಕ ಮುಸ್ಲಿಂ ಸಂಘಟನೆಗಳೇ ಒಪ್ಪಿಕೊಂಡಿಲ್ಲ. ಮದೀನಾ ಯೂನಿವರ್ಸಿಟಿಯ ವೈಸ್‌ಛಾನ್ಸಲರ್ ಪ್ರೊ.ಅಬ್ದುಲ್‌ಕರೀಮ್ ಮದಾನಿಯವರು, ಇಂಥದ್ದೊಂದು ಅರ್ಥಹೀನ ತೀರ್ಪಿಗೆ ಇಸ್ಲಾಂನಲ್ಲಿ ಅವಕಾಶವೇ ಇಲ್ಲ ಅಂದಿದ್ದಾರೆ. ಇಂಥ ಕಾನೂನು ಮುಂದುವರೆದರೆ, ಮುಂದೆ ತನ್ನ ಸೊಸೆಯ ಮೇಲೆ ಕಣ್ಣು ಹಾಕಿದ ಯಾವ ಮಾವ ಬೇಕಿದ್ದರೂ ಅವಳ ಮೇಲೆ ಅತ್ಯಾಚಾರ ನಡೆಸಿ ಅವಳನ್ನು ತನ್ನವಳಾಗಿಸಿಕೊಂಡು ಬಿಡಬಹುದಾದ ಅಪಾಯವಿದೆ ಅಂತ ಅಖಿಲ ಭಾರತ ಮುಸ್ಲಿಂ ಮಹಿಳಾ ವೈಯಕ್ತಿಕ ಕಾನೂನು ಮಂಡಳಿಯ ಅಧ್ಯಕ್ಷೆ ಖೈಸ್ತಾ ಅಂಬರ್ ಹೇಳಿದ್ದಾರೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಕಾನೂನು ಸಲಹೆಗಾರ ಜಫರ್‍ಯಾಬ್ ಜಿಲಾನಿ ಅವರೂ ಕೂಡ, ಆ ಮಂಡಳಿಯು ದೇವ್‌ಬಂದ್‌ನ ಫತ್ವಾವನ್ನು ಬೆಂಬಲಿಸಿರುವುದನ್ನೂ ಲೆಕ್ಕಿಸದೆ,`ಯಾರೂ ಯಾಕೆ ರೇಪ್ ಮಾಡಿದ ಪಾಪಿಯನ್ನು ಶಿಕ್ಷಿಸುವ ಬಗ್ಗೆ ಮಾತಾಡುತ್ತಿಲ್ಲ?' ಅಂತ ಕೇಳಿದ್ದಾರೆ.

ಇಷ್ಟಾದರೂ, ಕರ್ಮಠ ಮುಸ್ಲಿಂ ಸಂಘಟನೆಗಳು ಮತ್ತು ದೇವ್‌ಬಂದ್‌ನ ಮುಸ್ಲಿಂ ಪಂಚಾಯ್ತಿದಾರರು ಮಾತ್ರ, ಇಮ್ರಾನಾಳ ಮೇಲೆ ಆತ್ಯಾಚಾರ ನಡೆಸಿದ್ದು ಅವಳ ಮಾವ ಅಲ್ಲದೆ ಬೇರ್‍ಯಾರಾದರೂ ಆಗಿದ್ದಿದ್ದರೆ ಅವಳು ತನ್ನ ಗಂಡನ ಜೊತೆಯೇ ಬದುಕು ನಡೆಸಬಹುದಿತ್ತು. ಆದರೀಗ ಅವಳು ತನ್ನ ಮದುವೆ ಮುರಿದುಕೊಳ್ಳಲೇಬೇಕು'ಅಂತ ಸಾಸುತ್ತಿದ್ದಾರೆ. ಅಪರಾಯನ್ನು ರಕ್ಷಿಸಿ, ರಕ್ಷಿಸಬೇಕಾದವಳನ್ನು ಶಿಕ್ಷಿಸಲು ಟೊಂಕಕಟ್ಟಿ ನಿಂತು ಬಿಟ್ಟಿದ್ದಾರೆ.

ನಾಡಿನ ಬುದ್ಧಿಜೀವಿಗಳೂ ನಾಯಕ ಶಿಖಾಮಣಿಗಳೂ ಮುಖಕ್ಕೆ ಕೂಲಿಂಗ್ ಗ್ಲಾಸ್ ಏರಿಸಿಕೊಂಡು ತಣ್ಣಗೆ ಕೂತುಬಿಟ್ಟಿದ್ದಾರೆ. ಇಂಥ ಫತ್ವಾ ಮತ್ತು ಬುದ್ಧಿಜೀವಿಗಳ ಇಂಥ ಜಾಣ ಮೌನ ಹೊಸದೇನಲ್ಲ. ಸ್ವಲ್ಪ ದಿನಗಳ ಹಿಂದೆ, ಇನ್ನೊಬ್ಬ ಮುಸ್ಲಿಂ ಹೆಣ್ಣು ಮಗಳಿಗೂ ಇಂಥದ್ದೇ ವಿಚಿತ್ರ ತೀರ್ಪು ಸಿಕ್ಕಿತ್ತು. ಮದುವೆಯಾದ ತಕ್ಷಣ ಅವಳನ್ನು ಹಳ್ಳಿಯಲ್ಲೇ ಬಿಟ್ಟು ಸೇನೆಯ ಕೆಲಸಕ್ಕೆಂದು ಹೋದ ಅವಳ ಗಂಡ, ಆಮೇಲೆ ಸೇನೆಯಿಂದಲೇ ಕಣ್ಮರೆಯಾಗಿ ಬಿಟ್ಟಿದ್ದ. ಅವನು ಯುದ್ಧದಲ್ಲಿ ತೀರಿಕೊಂಡಿರಬಹುದು ಅಂತಲೇ ಎಲ್ಲರೂ ಭಾವಿಸಿದ್ದರು. ಒಂದಷ್ಟು ದಿನ ಕಾದು, ಇನ್ನವನು ಬರುವ ಸಾಧ್ಯತೆಗಳಿಲ್ಲ ಅನ್ನಿಸಿದ ಮೇಲೆ ಅವಳ ಹಿರಿಯರು ಅವಳಿಗೆ ಇನ್ನೊಂದು ಮದುವೆ ಮಾಡಿದರು. ಅವಳು ಗರ್ಭವತಿಯೂ ಆದಳು. ಆಗ ಪ್ರತ್ಯಕ್ಷನಾಗಿಬಿಟ್ಟನಲ್ಲ ಅವಳ ಮೊದಲ ಗಂಡ! ಅವನು ಪಾಕಿಸ್ತಾನದ ಜೈಲಿನಲ್ಲಿದ್ದನಂತೆ.

ಬಿಡುಗಡೆಗೊಂಡವನೇ ನೇರವಾಗಿ ಹಳ್ಳಿಗೆ ಬಂದು, ತನ್ನ ಹೆಂಡತಿಯ ಮೇಲೆ ಹಕ್ಕು ಸಾಸಲು ಹೊರಟು ಬಿಟ್ಟ. ಪಂಚಾಯ್ತಿ ಸೇರಿತು. ಅವಳು ತನ್ನ ಎರಡನೇ ಮದುವೆ ಮುರಿದುಕೊಂಡು ಮೊದಲ ಗಂಡನ ಜೊತೆಯೇ ಬಾಳ್ವೆ ನಡೆಸಬೇಕು ಅನ್ನುವ ತೀರ್ಪು ಹೊರಬಿತ್ತು. ಆಗ ಸೇನೆಯ ಆಸಾಮಿ ಹೊಸ ತಕರಾರು ತೆಗೆದ; ತಾನು ಅವಳ ಮಗುವನ್ನು ಸ್ವೀಕರಿಸಲಾರೆ ಅಂದ. ಆಗ ಪಂಚಾಯ್ತಿದಾರರು ತೀರ್ಪನ್ನು ಸ್ವಲ್ಪ ಬದಲಿಸಿದರು; ಅವಳು ತನ್ನ ಮಗುವನ್ನು ಹೆತ್ತು ಎರಡನೇ ಗಂಡನಿಗೆ ಕೊಟ್ಟು, ಆಮೇಲೆ ಮೊದಲ ಗಂಡನ ಜೊತೆ ಸಂಸಾರ ಮಾಡತಕ್ಕದ್ದು ಅಂದುಬಿಟ್ಟರು!

ಹೆಣ್ಣು ಅನ್ನುವ ಮನಸ್ಸು ಇಲ್ಲೊಂದು commodityಯಾಗಿ ಹೋಗಿತ್ತು. ಈ ದೇಶದ ಕಾನೂನಾಗಲೀ ಬುದ್ಧಿಜೀವಿಯಾಗಲೀ, `ಪುರೋಗಾಮಿ'ಚಿಂತನೆಯ ಸಂಘಟನೆಗಳಾಗಲೀ ಆಗಲೂ ಚಕಾರವೆತ್ತಿರಲಿಲ್ಲ. ಈಗಲೂ ಬಾಯಿಬಿಟ್ಟಿಲ್ಲ.

ಇದೂ ಒಂದು ರೀತಿಯ ಕರ್ಮಠತನವೇ; ಶತಾಯಗತಾಯ ತಮ್ಮ ಹಿತವನ್ನಷ್ಟೇ ಕಾಯ್ದುಕೊಳ್ಳುವ selective ಮಡಿವಂತಿಕೆಯಿದು.

ಕರ್ಮಠತನವೆನ್ನುವುದು ಧರ್ಮಕ್ಕೆ ಸಂಬಂಧಪಟ್ಟ ವಿಷಯವಲ್ಲ; ಅದು ಮನಸ್ಸಿಗೆ ಸಂಬಂಧಪಟ್ಟಿದ್ದು. ಒಂದಿಡೀ ಧರ್ಮದ ಎಲ್ಲರೂ ಮೂಲಭೂತವಾದಿಗಳಾಗಿರುವುದಿಲ್ಲ. ಆದರೆ, ಅವರು ತಮ್ಮ ತನವನ್ನು assert ಮಾಡಿಕೊಳ್ಳುವವರೂ ಆಗಿರುವುದಿಲ್ಲ. ಹಾಗಾಗೇ, ಅವರ ದನಿಯನ್ನು ಕರ್ಮಠರು ಬಹಳ ಸುಲಭವಾಗಿ ಮುಳುಗಿಸಿಬಿಡುತ್ತಾರೆ. ತಾವು ಹೇಳಿದ್ದೇ ತಮ್ಮ ಧರ್ಮದ ಸಾರ ಅನ್ನುವಂತೆ ಜಗತ್ತು ನಂಬುವ ಹಾಗೆ ಮಾಡುತ್ತಾರೆ. ಮುಸ್ಲಿ ವೈಯಕ್ತಿಕ ಕಾನೂನು ಮಂಡಳಿಗಳೂ ಭಜರಂಗಿಗಳೂ ತಾವೇ ತಮ್ಮ ಧರ್ಮದ ಅಕೃತ ಮುಖಗಳು ಅನ್ನುವಂತಾಡುತ್ತಾರೆ. ಅರ್ಥಹೀನ ಫತ್ವಾಗಳೂ ತಿಳಿಗೇಡಿ ಬಂದ್‌ಗಳೂ, ಬಂದ್ ಹೆಸರಿನಲ್ಲಿ ಧರ್ಮದಹನಗಳೂ ಸಂಭವಿಸುತ್ತವೆ.

ಇವತ್ತು ಅಯೋಧ್ಯೆ ಅನ್ನುವುದು ಒಂದು ರಕ್ತ ಸಿಕ್ತ ಸಮಸ್ಯೆಯಾಗಿರುವುದೂ ಇಂಥ ಕರ್ಮಠತನದಿಂದಲೇ, ರಾಜಕಾರಣಿಗಳ ಪಾಖಂಡಿತನದಿಂದಲೇ. ಯಾವತ್ತೋ ಬಗೆಹರಿದುಹೋಗಬಹುದಾಗಿದ್ದ-ಅಥವಾ, ಸಮಸ್ಯೆ ಅನ್ನುವ ಸ್ವರೂಪವನ್ನೇ ಪಡೆಯದೆ ನಿರುಮ್ಮಳವಾಗಿ ಇದ್ದು ಬಿಡಬಹುದಾಗಿದ್ದ- ವಿಷಯ ಇವತ್ತು ವ್ರಣವಾಗಿದೆ. ಮೊನ್ನೆ ನಡೆದ ಉಗ್ರಗಾಮಿಗಳ ದಾಳಿ ಅಯೋಧ್ಯೆಯ ಮಟ್ಟಿಗೆ ಇದು ಮೊದಲನೆಯದಿರಬಹುದು. ಆದರೆ, ಇದೇ ಕೊನೆಯದಂತೂ ಖಂಡಿತ ಇರಲಾರದು. ದೇವಸ್ಥಾನಗಳು-ಮಸೀದಿಗಳೇ ಕರ್ಮಠರ ಸಾಫ್ಟ್‌ಟಾರ್ಗೆಟ್‌ಗಳಾಗಿದ್ದರಿಂದ ಇಂಥ ದಾಳಿಗಳು ಇನ್ನು ಮುಂದೆ ಎಲ್ಲೆಡೆಯೂ ನಡೆಯಬಹುದು. ಇಂಡಿಯಾ-ಪಾಕಿಸ್ತಾನಗಳ ಸಮಸ್ತ ಗಡಿ ಸಮಸ್ಯೆಗಳೂ ಬಗೆಹರಿದರೂ ಕೂಡ, ಈ ಧಾರ್ಮಿಕ ಯುದ್ಧಗಳು ಕೊನೆಯಾಗುತ್ತವೆ ಅನ್ನುವ ನಂಬಿಕೆಯೇನೂ ಇಲ್ಲ. ಯಾಕೆಂದರೆ, ಕರ್ಮಠ ತನವೆನ್ನುವುದು ದೇಶ-ದೇಶಗಳ ನಡುವೆ ಇರುವ ಗೋಡೆಯಲ್ಲ, ಹೊಡೆದುರುಳಿಸುವುದಕ್ಕೆ.

ಈ ಅನಾಹುತಗಳು ತಪ್ಪಬೇಕಿದ್ದರೆ, ಧಾರ್ಮಿಕ ಗ್ರಂಥಗಳನ್ನು ಅಪಭ್ರಂಶಗೊಳಿಸಿ interpret ಮಾಡುವವರ ಅನಾಹುತಕಾರೀ ಧೋರಣೆಗಳು ಬದಲಾಗಬೇಕು. ಧರ್ಮ ಇರುವುದು ಮನುಷ್ಯನ ಬದುಕನ್ನು ಉತ್ತಮ ಗೊಳಿಸುವುದಕ್ಕೇ ಹೊರತು, ಅಸಹನೀಯಗೊಳಿಸುವುದಕ್ಕಲ್ಲ ಅನ್ನುವುದನ್ನು ನಾವು ಅರ್ಥ ಮಾಡಿಕೊಂಡು ಬಿಟ್ಟರೂ ಸಾಕು. ಅನಾಹುತಕಾರಿ ಧರ್ಮ ವ್ಯಾಖ್ಯಾನಗಳನ್ನೂ- ವ್ಯಾಖ್ಯಾನಿಗಳನ್ನೂ ಮೂಲೆಗೆಸೆಯಬಹುದು.

ಯಾಕೆಂದರೆ, ಯಾವ ಧರ್ಮವೂ ಜೀವವಿರೋಯಲ್ಲ. ಧರ್ಮವನ್ನು ತಮ್ಮ ಸ್ವತ್ತು ಮಾಡಿಕೊಂಡವರು ಮಾತ್ರ ಜೀವವಿರೋಗಳು. ಎರಡರ ನಡುವಿನ ವ್ಯತ್ಯಾಸ ನಮಗೆ ಗೊತ್ತಿರಬೇಕು.

No comments: