Monday, July 31, 2006

ಬೆಳಗಾವಿ ನಗರದ ಮೇಲೆ ಮರಾಠಿಗರಿಗೆ ಯಾವುದೇ ಬಗೆಯ ಹಕ್ಕು ಇಲ್ಲ

ಪಾಟೀಲ ಪುಟ್ಟಪ್ಪ
ಪಾಟೀಲ ಪುಟ್ಟಪ್ಪ



ಬೆಳಗಾವಿ ನಗರದ ಮೇಲೆ ಮರಾಠಿಗರಿಗೆ ಯಾವುದೇ ಬಗೆಯ ಹಕ್ಕು ಇಲ್ಲ. ಹೊರಗಿನಿಂದ ಬಂದವರು ಮನೆಯೇ ತಮ್ಮದೆಂದು ಹೇಳುವಂತೆ ಅವರ ವಾದವಿದೆ. ಬೆಳಗಾವಿಯು ಮರಾಠಿಯಾಗಿದ್ದರೆ ಯುರೋಪಿನಿಂದ ಬಂದ ಬಾಸೆಲ್ ಮಿಶನ್ನಿನವರು ಅಲ್ಲಿ ಮರಾಠಿ ಶಾಲೆಯನ್ನೇ ಆರಂಭ ಮಾಡುತ್ತಿದ್ದರು. ಆದರೆ ಅವರು ೧೮೩೮ರಲ್ಲಿ ಬೆಳಗಾವಿಯಲ್ಲಿ ಕನ್ನಡದ ಶಾಲೆಯನ್ನು ಆರಂಭಿಸಿದರೆನ್ನುವುದು ಮಹತ್ವದ ಸಂಗತಿಯಾಗಿದೆ. ಆಗ ಅವರನ್ನು ಅಲ್ಲಿ ಕನ್ನಡ ಶಾಲೆಯನ್ನೇಕೆ ಆರಂಭಿಸಿದಿರಿ ಎಂದು ಯಾರೊಬ್ಬರೂ ಕೇಳಲಿಲ್ಲ.

ಬೆಳಗಾವಿ ನಗರದ ಸುತ್ತಮುತ್ತಲಿನ ಹೊಲಗಳೆಲ್ಲ ಕನ್ನಡಿಗರ ಒಡೆತನಕ್ಕೆ ಒಳಪಟ್ಟಿದ್ದವು. ಬೆಳಗಾವಿ ನಗರದ ಗ್ರಾಮ ದೇವತೆಗಳೆಲ್ಲ ಕನ್ನಡಿಗರ ದೇವತೆಗಳೇ ಆಗಿದ್ದವು. ಒಂದು ನಗರ ಯಾರದೆನ್ನುವ ಭಾವನೆಗೆ ಅಲ್ಲಿಯ ಪರಿಶಿಷ್ಟ ವರ್ಗದವರ ಭಾಷೆಯೇ ಮೂಲ ಕಾರಣವೆನಿಸಿದೆ. ಒಂದು ನಗರದ ಮೂಲಭಾಷೆಯನ್ನು ತಿಳಿಯಬೇಕೆನ್ನುವವರು ಅಲ್ಲಿಯ ಪರಿಶಿಷ್ಟ ವರ್ಗದವರು ವಾಸ ಮಾಡುವ ಸ್ಥಳಕ್ಕೆ ಹೋಗಿ ನೋಡಿದರೆ ಆ ಸ್ಥಳದ ಭಾಷೆ ಯಾವುದೆನ್ನುವುದು ತಿಳಿಯುತ್ತದೆ. ಉಳಿದ ಜನರು ಸ್ಥಳಾಂತರಗೊಳ್ಳುವಂತೆ ಪರಿಶಿಷ್ಟ ವರ್ಗದ ಜನರು ಎಂದೂ ಸ್ಥಳಾಂತರಗೊಳ್ಳುವುದಿಲ್ಲ. ಅವರು ಇದ್ದಲ್ಲಿಯೇ ಇರುತ್ತಾರೆ. ಆದರಿಂದ ಬೆಳಗಾವಿ ನಗರದ ಭಾಷೆ ಕನ್ನಡ ಎನ್ನುವುದನ್ನು ಅಲ್ಲಿ ವಾಸವಾಗಿರುವ ಪರಿಶಿಷ್ಟ ವರ್ಗದ ಜನರು ನಮಗೆ ತೋರಿಸಿಕೊಟ್ಟಿದ್ದಾರೆ.

ಬೆಳಗಾವಿ ನಗರ ಕನ್ನಡದ್ದು ಎನ್ನುವ ಬಗ್ಗೆ ಯಾವುದೇ ತಂಟೆ ತಕರಾರುಗಳು ಇರಲಿಲ್ಲ. ೧೯೨೦ ರಷ್ಟು ಹಿಂದೆ ದೇಶದ ರಾಜಕೀಯ ಪಕ್ಷವಾದ ಕಾಂಗ್ರೆಸ್ ಪಕ್ಷದ ಸಂವಿಧಾನವನ್ನು ರಚನೆ ಮಾಡುವ ಕೆಲಸವನ್ನು ಕಾಂಗ್ರೆಸ್, ಕೇಸರಿ ಪತ್ರಿಕೆಯ ಸಂಪಾದಕರಾದ ನರಸಿಂಹ ಚಿಂತಾಮಣಿ ಕೇಳಕರರಿಗೆ ವಹಿಸಿಕೊಟ್ಟಿತು. ಅವರು ಕರ್ನಾಟಕ ಪ್ರಾಂತವನ್ನು ಕಾಂಗ್ರೆಸ್ ಸಂವಿಧಾನದಲ್ಲಿ ಸೇರ್ಪಡೆ ಮಾಡುವಾಗ ಬೆಳಗಾವಿ ನಗರ ಹಾಗೂ ಜಿಲ್ಲೆಗಳನ್ನು ಮಹಾರಾಷ್ಟ್ರ ಪ್ರಾಂತದಲ್ಲಿ ಇಡದೇ ಅವರು ಅವುಗಳನ್ನು ಕರ್ನಾಟಕ ಪ್ರಾಂತದಲ್ಲಿ ಇರಿಸಿದರು. ಈ ಕೇಳಕರರು ಕನ್ನಡಿಗರಾಗಿ ಇರದೇ ಅಚ್ಚ ಮರಾಠಿಗರೇ ಆಗಿದ್ದರು. ೧೯೨೪ ರಲ್ಲಿ ಮಹಾತ್ಮಾ ಗಾಂಧಿ ಅವರು ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಅಧಿವೇಶನವು ಬೆಳಗಾವಿಯಲ್ಲಿ ಸೇರಿದ್ದಿತು. ಅದನ್ನು ಎಲ್ಲರೂ -ಅವರಲ್ಲಿ ಮರಾಠಿಗರೇ ಸೇರಿದ್ದಾರೆ- ಕರ್ನಾಟಕ ಅಧಿವೇಶನ ವೆಂದೇ ಕರೆದರು.

೧೯೨೯ ರಲ್ಲಿ ಬೆಳಗಾವಿ ನಗರದಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನ ಸೇರಬೇಕಾದಾಗ, ಅದು ಸೇರುವುದಕ್ಕೆ ಕನ್ನಡ ಜನರು ವಿರೋಧ ಮಾಡಿದರು. ಬೆಳಗಾವಿಯ್ಲಲಿ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಸೇರಿಸಿ, ಅದು ಮರಾಠಿ ಎಂದು ಸಾಧಿಸುವ ಗತ್ತುಗಾರಿಕೆ ಆ ಅಧಿವೇಶನವನ್ನು ಸೇರಿಸಲಾಗುತ್ತಿದೆ ಎಂದು ಕನ್ನಡ ಜನರು ವಿರೋಧಿಸಿದರು.

ಆಗ ಕೇಸರಿ ಪತ್ರಿಕೆಯ ಸಂಪಾದಕರಾದ ನರಸಿಂಹ ಚಿಂತಾಮಣಿ ಕೇಳಕರರು ಕನ್ನಡಿಗರ ಭಯ, ಸಂದೇಹಗಳನ್ನು ನಿವಾರಣೆ ಮಾಡಿದರು. 'ಬೆಳಗಾವಿ ಕನ್ನಡ ಎನ್ನುವುದು ನಿವಿರ್ವಾದ. ಅದರ ಮೇಲೆ ಮಹಾರಾಷ್ಟ್ರದ ಯಾವ ಹಕ್ಕುದಾರಿಕೆ ಇಲ್ಲ. ನಾವು ಅದನ್ನು ನಮ್ಮದೆಂದು ಸಾಧಿಸುವುದಿಲ್ಲ. ನಮಗೆ ಸಮ್ಮೇಳನ ಮಾಡುವುದಕ್ಕೆ ಅವಕಾಶ ಕೊಡಿ' ಎಂದು ಹೇಳಿದರು. ಕನ್ನಡಿಗರು ಮರಾಠಿ ಸಾಹಿತ್ಯ ಸಮ್ಮೇಳನ ಅಲ್ಲಿ ನಡೆಯುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟರು. ಇದಾದ ಮೇಲೆ ೧೯೪೪ ರಲ್ಲಿ ರಾಜಗೋಪಾಲಾಚಾರಿ ಅವರು ಮುಸ್ಲಿಂರಿಗೆ ಸ್ವಯಂ ನಿರ್ಣಯ ಅಧಿಕಾರವನ್ನು ಕೊಡಬೇಕೆನ್ನುವ ತಮ್ಮ ತತ್ವ ಪ್ರಚಾರ ಮಾಡುತ್ತಾ ಬೆಳಗಾವಿ ನಗರಕ್ಕೆ ಬಂದು ಅಲ್ಲಿಯ ದರ್ಗಾದ ಬಯಲಿನಲ್ಲಿ ಸಾರ್ವಜನಿಕ ಭಾಷಣ ಮಾಡಿದರು.

ರಾಜಾಜಿ ಅನಿಸಿಕೆ: ಆ ಸಭೆಯಲ್ಲಿ ರಾಜಾಜಿ ಅವರ ಭಾಷಣವು ಮರಾಠಿಯಲ್ಲಿ ಭಾಷಾಂತರವಾಗುತ್ತಿತ್ತು. ಆಗ ಅಲ್ಲಿ ಸೇರಿದ್ದ ಕನ್ನಡ ಜನ ವರ್ಗ, `ಕನ್ನಡ ಕನ್ನಡ' ಎಂದು ಕೂಗತೊಡಗಿದರು. ಬಹು ಕುಶಾಗ್ರಮತಿಗಳಾಗಿದ್ದ ರಾಜಾಜಿ, ಗದ್ದಲ ಮಾಡುತ್ತಿದ್ದ ಜನರ ಕಡೆಗೆ ತಿರುಗಿ, `ನಿಮಗೆ ಏನು ಆಗಬೇಕೆಂದು' ಕೇಳಿದರು.

ಅಲ್ಲಿ ಗಲಾಟೆ ಎಬ್ಬಿಸಿದ ಜನರು, `ನಿಮ್ಮ ಭಾಷಣ ಕನ್ನಡದಲ್ಲಿ ಭಾಷಾಂತರಗೊಳ್ಳಬೇಕು' ಎಂದರು. ಆಗ ರಾಜಾಜಿ ಆ ಸಭೆಯಲ್ಲಿ ಸೇರಿದ್ದ ಜನರ ಮನೋಭಾವನೆ ಏನಿದೆ ಎನ್ನುವುದನ್ನು ತಿಳಿಯಬೇಕೆಂದು ಅಪೇಕ್ಷಿಸಿದರು. ಅಲ್ಲಿ ಸೇರಿದ್ದ ಎಷ್ಟು ಜನರಿಗೆ ಕನ್ನಡ ಬರುತ್ತದೆ, ಮರಾಠಿ ತಿಳಿಯುತ್ತದೆ ಎನ್ನುವುದನ್ನು ಪರಿಶೀಲನೆ ಮಾಡಿದರು. ಕನ್ನಡ ಹಾಗೂ ಮರಾಠಿ ಜನರು ಸಮಸಮನಾಗಿ ಕೈ ಎತ್ತಿ ತಮ್ಮ ಮನೋಗತವನ್ನು ತಿಳಿಸಿದರು.

ಆಗ ರಾಜಾಜಿಯವರು ಆ ಸಭೆಯಲ್ಲಿದ್ದ ಜನರನ್ನು ಉದ್ದೇಶಿಸಿ ಹೇಳಿದರು- ''ನೀವು ಕೈ ಎತ್ತಿರುವುದನ್ನು ನೋಡಿದರೆ, ನಿಮಗೆ ಯಾರಿಗೆ ಕನ್ನಡ ಬರುತ್ತದೆಯೋ, ಅವರಿಗೆ ಮರಾಠಿ ತಿಳಿಯುತ್ತಿದೆ. ಯಾರಿಗೆ ಮರಾಠಿ ತಿಳಿಯುತ್ತದೆಯೋ ಅವರಿಗೆ ಕನ್ನಡ ಬರುತ್ತದೆ. ಬೆಳಗಾವಿ ನಗರವು ಕನ್ನಡವಾದುದರಿಂದ ನನ್ನ ಭಾಷಣ ಕನ್ನಡದಲ್ಲಿ ಭಾಷಾಂತರಗೊಳ್ಳಬೇಕು''.

ಆಗ ಅನಂತರಾವ್ ಚಿಕ್ಕೋಡಿ ಅವರು ರಾಜಾಜಿಯವರ ಭಾಷಣವನ್ನು ಕನ್ನಡದಲ್ಲಿ ಭಾಷಾಂತರ ಮಾಡಿದರು. ಅವರ ಭಾಷಾಂತರ ಅದ್ಭುತವಾಗಿದ್ದಿತು. ಕನ್ನಡ ಬರುತ್ತಿದ್ದ ರಾಜಾಜಿಯವರು ತಮ್ಮ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಿದ ಚಿಕ್ಕೋಡಿ ಅವರನ್ನು ಬಹುವಾಗಿ ಮೆಚ್ಚಿಕೊಂಡರು.

ಅಲ್ಲಿ ಜನರನ್ನುದ್ದೇಶಿಸಿ ರಾಜಾಜಿಯವರು ಹೇಳಿದರು: ''ಗಡಿ ಪ್ರದೇಶಗಳಲ್ಲಿ ಇಂತಹ ಪ್ರಶ್ನೆಗಳು ಸಹಜವಾಗಿ ಉದ್ಭವಿಸುತ್ತವೆ. ಮರಾಠಿ ಜನರು ಇಲ್ಲಿಯವರಾಗಿ ಕನ್ನಡವನ್ನು ಕಲಿತಿರದಿದ್ದರೆ ಅದು ಅವರ ತಪ್ಪು. ಅವರು ಕನ್ನಡ ಭಾಷೆಯನ್ನು ಕಲಿತು ಕನ್ನಡ ಜನರೊಂದಿಗೆ ಬೆರೆತು ಹೋಗಬೇಕು''.

ಆನಂತರ ಧರ್ ಸಮಿತಿ, ವಾಂಛೂ ಸಮಿತಿ ಹಾಗೂ ಕಾಂಗ್ರೆಸ್ಸಿನ ಜೆ.ವಿ.ಪಿ. (ಜವಾಹರಲಾಲ, ವಲ್ಲಭಬಾಯಿ ಹಾಗೂ ಪಟ್ಟಾಭಿ) ಸಮಿತಿ ಎಲ್ಲವೂ ಬೆಳಗಾವಿಯು ನಿರ್ವಿವಾದವಾಗಿಯೂ ಕನ್ನಡವೆಂದು ಹೇಳಿದವು.

ಮುಂದೆ ೧೯೫೫ ರಲ್ಲಿ ಸರ್ವೋನ್ನತ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾಯಮೂರ್ತಿ ಫಜಲ್ ಅಲಿ ಅವರ ಅಧ್ಯಕ್ಷತೆಯಲ್ಲಿ ಪಂಡಿತ ಹೃದಯನಾಥ ಕುಂಜರೂ, ಸರ್ದಾರ ಕೆ.ಎಂ.ಫಣಿಕ್ಕರ, ತ್ರಿಸದಸ್ಯರ ಆಯೋಗವನ್ನು ಕೇಂದ್ರ ಸರಕಾರ ರಚನೆ ಮಾಡಿತು. ಈ ರಾಜ್ಯ ಪುನರ್ ಸಂಘಟನಾ ಆಯೋಗವು ದೇಶದಲ್ಲಿ ಸಂಚಾರ ಮಾಡಿ ಸಾವಿರಾರು ಸಾಕ್ಷಿ ಪುರಾವೆಯನ್ನು ಕೇಳಿ ತಿಳಿದುಕೊಂಡಿತು.

ಮಹಾರಾಷ್ಟ್ರ ವಾದ ತಿರಸ್ಕೃತ:
ಈಗ ಮಹಾರಾಷ್ಟ್ರದವರು ಮುಂದೆ ಮಾಡುತ್ತಿರುವ ಎಲ್ಲ ವಾದಗಳು ರಾಜ್ಯ ಪುನರ್‌ಸಂಘಟನಾ ಆಯೋಗದ ಮುಂದೆ ಬಂದವು. ಅವುಗಳನ್ನು ಮುಂದೆ ಪಾರ್ಲಿಮೆಂಟಿನಲ್ಲಿ ಈ ಆಯೋಗದ ವರದಿಯ ಚರ್ಚೆ ನಡೆದಾಗ, ಮಹಾರಾಷ್ಟ್ರದವರು ತಾವು ಹೇಳುವುದನ್ನೆಲ್ಲ ತಿದ್ದುಪಡಿಗಳ ಮೂಲಕ ಪಾರ್ಲಿಮೆಂಟಿನಲ್ಲಿ ಮಂಡಿಸಿದರು. ಅವೆಲ್ಲವುಗಳನ್ನು ಪಾರ್ಲಿಮೆಂಟು ತಿರಸ್ಕರಿಸಿತು.

ಲೋಕಸಭೆಯ ೫೪೫ ಜನ ಸದಸ್ಯರಲ್ಲಿ ಕರ್ನಾಟಕದವರು ಕೇವಲ ೨೭ ಜನ ಇದ್ದರು. ಮಹಾರಾಷ್ಟ್ರದವರು ಅಧಿಕ ಸಂಖ್ಯೆಯಲ್ಲಿದ್ದರು. ಆಗ ಲೋಕಸಭೆಯು ಮಹಾರಾಷ್ಟ್ರದವರು ಮುಂದೆ ಮಾಡಿದ ಎಲ್ಲ ವಾದಗಳನ್ನು ತಿರಸ್ಕರಿಸಿ ರಾ.ಪು. ಆಯೋಗದ ವರದಿಯನ್ನು ಒಪ್ಪಿಸಿಕೊಂಡಿತು.

ಮಹಾರಾಷ್ಟ್ರದವರು, ಕೊಂಕಣಿಯು ಮರಾಠಿ ಭಾಷೆಯ ಉಪಭಾಷೆ ಎಂದು ಸಾಧಿಸುತ್ತಿದ್ದುದನ್ನು ಆ ಆಯೋಗವನ್ನು ತಿರಸ್ಕರಿಸಿ ಕೊಂಕಣಿಯು ಮರಾಠಿಯ ಉಪಭಾಷೆಯಾಗಿರದೇ ಸ್ವತಂತ್ರ ಭಾಷೆ ಎಂದು ಹೇಳಿತು. ೧೯೫೬ ರಲ್ಲಿ ಕರ್ನಾಟಕ ರಾಜ್ಯ ರಚನೆ ನಡೆದ ಮೇಲೆ ಮರಾಠಿಗರು ಇಲ್ಲದ ವಾದಗಳನ್ನು ಎಬ್ಬಿಸಿ ಕಿತಾಪತಿ ಕೆಲಸಕ್ಕೆ ತೊಡಗಿದರು. ತಮಗೆ ಅನ್ಯಾಯವಾಗಿದೆ ಎಂದು ಬೊಬ್ಬೆ ಹಾಕುತ್ತ ದೇಶದ ಸಹಾನುಭೂತಿಯನ್ನು ತಮ್ಮೆಡೆಗೆ ಸೆಳೆದುಕೊಳ್ಳಬೇಕೆಂದರು. ಮಹಾರಾಷ್ಟ್ರದ ಒತ್ತಡಕ್ಕೆ ಮಣಿದು ಕೇಂದ್ರ ಸರಕಾರವು ಕಾಂಗ್ರೆಸ್ ಕಾರ್ಯ ಸಮಿತಿಯ ಸಲಹೆ ಮೇರೆಗೆ ಒಂದು ಏಕಸದಸ್ಯ ಆಯೋಗವನ್ನು ರಚನೆ ಮಾಡಿತು. ಆಗ ಕಾಂಗ್ರೆಸ್ ಕಾರ್ಯ ಸಮಿತಿಯಲ್ಲಿ ಸರ್ವ ಸಮ್ಮತವಾದ ಒಂದು ತೀರ್ಮಾನಕ್ಕೆ ಬರಲಾಯಿತು. ಏಕಸದಸ್ಯ ಆಯೋಗವು ಏನು ತೀರ್ಮಾನ ಕೈಗೊಳ್ಳುವುದೋ ಅದು ಅಖೈರಾದದ್ದು ಎಂದು ಒಪ್ಪಿ ಅದನ್ನು ಸ್ವೀಕರಿಸಬೇಕು ಎಂದು ಹೇಳಲಾಯಿತು.

ಏಕಸದಸ್ಯ ಆಯೋಗದ ರಚನೆಯು ತಮ್ಮ ವಿಜಯವೆಂದು ಮರಾಠಿಗರು ಬೀಗಿದರು. ಆಯೋಗದ ವರದಿ ಬರುವವರೆಗೆ ಮಹಾರಾಷ್ಟ್ರಿಯರು ಅದರ ಪರವಾಗಿಯೇ ಇದ್ದರು. ಯಾವಾಗ ಆಯೋಗವು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಕೊಡಲಿಲ್ಲವೋ ಆವಾಗ ಮಹಾರಾಷ್ಟ್ರವು ಆ ವರದಿಯನ್ನು ವಿಕ್ಷಿಪ್ತವೆಂದು ಹೇಳಿ ತಿರಸ್ಕರಿಸಿತು.

ಮಹಾರಾಷ್ಟ್ರದವರು, ಮಹಾಜನ ಆಯೋಗದ ಎದುರು ೮೬೨ ಗ್ರಾಮ ಪಟ್ಟಗಳು ಕರ್ನಾಟಕದಿಂದ ತಮಗೆ ಬರಬೇಕೆಂದು ಕೇಳಿದ್ದರು. ಮಹಾಜನರು ಕರ್ನಾಟಕ ಮಹಾರಾಷ್ಟ್ರಗಳ ವಾದವನ್ನು ಕೂಲಂಕಷವಾಗಿ ಪರಿಶೀಲಿಸಿ ೨೬೨ ಗ್ರಾಮ ಪಟ್ಟಗಳು ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೋಗಬೇಕೆಂದು, ಅದೇ ರೀತಿ ೨೩೮ ಗ್ರಾಮ ಪಟ್ಟಗಳು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರಬೇಕೆಂದು ವಾದ ಮಾಡಿದರು.

ಮಹಾಜನ ಆಯೋಗವು ಬೆಳಗಾವಿ ನಗರವನ್ನು ಕರ್ನಾಟಕದಲ್ಲಿ ಇರಿಸಿದಂತೆ ಕೇರಳದ ಭಾಗವಾಗಿದ್ದ ಕಾಸರಗೋಡನ್ನು ಕರ್ನಾಟಕಕ್ಕೆ ಬರಬೇಕೆಂದು ಹೇಳಿತ್ತು.

ಈ ಸಭ್ಯ ಗೃಹಸ್ಥರ ಒಡಂಬಡಿಕೆಯನ್ನು ಕಾರ್ಯರೂಪಕ್ಕೆ ತರುವುದು ತನ್ನ ಕರ್ತವ್ಯವೆಂದು ಕೇಂದ್ರ ಸರಕಾರ ತಿಳಿಯಬೇಕಾಗಿದ್ದಿತು. ಈ ಏಕ ಸದಸ್ಯ ಆಯೋಗಕ್ಕೆ ನ್ಯಾಯಮೂರ್ತಿ ಮೆಹರ ಚಂದ್ ಮಹಾಜನರನ್ನು ನೇಮಕ ಮಾಡುವಾಗ, ಮಹಾಜನರು ಆಗಿನ ಗೃಹಮಂತ್ರಿ ಗುಲ್ಜಾರಿಲಾಲ ನಂದಾ ಅವರಿಗೆ, ''ನನ್ನ ವರದಿಯನ್ನು ನೀವು ಶೀತಲ ಪೆಟ್ಟಿಗೆಯಲ್ಲಿ ಹಾಕಿ ಇಡುತ್ತೀರಿ. ಹಾಗಿದ್ದ ಮೇಲೆ ನಾನೇಕೆ ಕೃತಜ್ಞತೆ ಇಲ್ಲದ ಈ ಕೆಲಸ ಕೈಗೊಳ್ಳಬೇಕು'' ಎಂದು ಕೇಳಿದರು. ಆಗ ಗುಲ್ಜಾರಿಲಾಲ ನಂದಾ ಅವರು ನ್ಯಾಯಮೂರ್ತಿ ಮಹಾಜನರಿಗೆ ''ನೀವೇನು ವರದಿ ಮಾಡುತ್ತಿರೋ ಅದನ್ನು ಚಾಚೂ ತಪ್ಪದೇ ಅನುಷ್ಠಾನಕ್ಕೆ ತರುತ್ತೇನೆ'' ಎಂದು ಹೇಳಿದಾಗ ನ್ಯಾಯಮೂರ್ತಿ ಮಹಾಜನರು ಆಯೋಗದ ಕೆಲಸವನ್ನು ಸ್ವೀಕರಿಸಿದರು.

ಅವರ ವರದಿಯನ್ನು ಸ್ವೀಕರಿಸಿ ಅದನ್ನು ಕಾರ್ಯರೂಪಕ್ಕೆ ತರುವುದು ಕೇಂದ್ರ ಸರಕಾರವು ಒಪ್ಪಿದ ಜವಾಬ್ದಾರಿಯಾಗಿದ್ದಿತು. ಆದರೆ ಈಗ ಅದು ಊರು ಸುಟ್ಟರೂ ಹನುಮಪ್ಪ ಹೊರಗೆ ಎಂಬಂತೆ ಸುಮ್ಮನೆ ಕುಳಿತು ಬಿಟ್ಟಿದೆ. ಆ ವರದಿಯನ್ನು ಕಾರ್ಯರೂಪಕ್ಕೆ ತರದೇ ಕೇಂದ್ರ ಸರಕಾರಕ್ಕೆ ಬೇರೆ ಗತ್ಯಂತರವೇ ಇಲ್ಲ.

ಬುಷ್ ಬರಬೇಡವೆಂದದ್ದು ಮೋದಿಯನ್ನಾ : ನಿರ್ಗತಿಕ ಭಾರತವನ್ನಾ?

ರವಿ ಬೆಳಗೆರೆ
ರವಿ ಬೆಳಗೆರೆ



ಜಾಗತಿಕ ಮಟ್ಟದಲ್ಲಿ ನರೇಂದ್ರ ಮೋದಿಗೊಂದು ಛೀಮಾರಿ ಆಗಲೇಬೇಕಿತ್ತು. ಆಗಿದೆ. ಅಷ್ಟರ ಮಟ್ಟಿಗೆ it's fine. ಆದರೆ, ಹೀಗೊಂದು ಛೀಮಾರಿ ಹಾಕಿದ್ದಾರಲ್ಲಾ, ಅವರು ಯಾರು? ಅವರ ಬುಡದ ನೆಲ ಸ್ವಚ್ಛವಾಗಿದೆಯಾ ? ಅವರ ಎದೆಯ ಮೇಲೆ ರಕ್ತದ ಕಲೆಗಳಿಲ್ಲವಾ? ಅವರ ಕೈಯಲ್ಲಿನ ಬಂದೂಕಿನಲ್ಲಿ ಹೊಗೆಯಿಲ್ಲವಾ? ಅವರೇನು ಸಂತರಾ? ಹೋಗಲಿ, ಮನುಷ್ಯರಾ? ಅಥವಾ, ನಮ್ಮ ದೇಶವನ್ನು ಗುತ್ತಿಗೆಗೆ ಪಡೆದು ಕೊಂಡಿರುವ ಧಣಿಗಳಾ?

ಮೋದಿಈ ಅಮೆರಿಕ ಎಂಬ ಉದ್ಧಟ ದೊಡ್ಡಣ್ಣನ ಅತಿರೇಕಗಳು ಯಾಕೋ ದಿನದಿನಕ್ಕೂ ಜಾಸ್ತಿಯಾಗುತ್ತಿವೆ. ನನಗೇನೂ ಮೋದಿಯ ಬಗ್ಗೆ ಪ್ರೀತಿಯಾಗಲಿ, ಅಭಿಮಾನವಾಗಲಿ, ಕನಿಷ್ಠ ಮೆಚ್ಚುಗೆಯಾಗಲಿ, ಏನೂ ಇಲ್ಲ. ಬಿಜೆಪಿಯ ಅನೇಕ ಬಾಯಿಬುಡುಕರ ಪೈಕಿ ಆತನೂ ಒಬ್ಬ. ನಮ್ಮ ದೇಶದ ಅನೇಕ ನಿರಂಕುಶ ಮದಗಜಗಳ ಸಾಲಿನಲ್ಲಿ ಮೋದಿಯದು ಅಗ್ರಸ್ಥಾನ. ಅಕಾರಕ್ಕಾಗಿ ಯಾವ ನೈತಿಕ ಪ್ರಪಾತಕ್ಕೆ ಧುಮುಕುವುದಕ್ಕೂ ಸಿದ್ಧವಿರುವ ಮನುಷ್ಯ ಅಂತ ನೋಡಿದ ತಕ್ಷಣ ಅನ್ನಿಸಿಬಿಡುತ್ತದೆ.

ಆದರೆ, ಆತ ನಮ್ಮ ಮನೆಯ ಸದಸ್ಯ. ಈ ದೇಶದ ಪ್ರಜೆ. ತನ್ನ ರಾಜ್ಯದ ಜನಗಳ ಪ್ರತಿನಿ. ಆತ ಬರೀ ಮೋದಿಯಲ್ಲ; ಒಂದು ರಾಜ್ಯದ ಮುಖ್ಯಮಂತ್ರಿ. ನಮ್ಮ ಪ್ರಜಾತಂತ್ರ ವ್ಯವಸ್ಥೆಯಲ್ಲಿನ ಒಬ್ಬ ಅತಿಮುಖ್ಯ ಪಾತ್ರಧಾರಿ.


ಬುಶ್ನಮ್ಮ ಮನೆಯವರನ್ನು ತೆಗಳುವ, ತಿದ್ದಿಬುದ್ಧಿ ಹೇಳುವ, ಅಗತ್ಯಬಿದ್ದರೆ ಮನೆಯಾಚೆ ದೂಡುವ ಹಕ್ಕು ಮತ್ತು ಕರ್ತವ್ಯ ನಮ್ಮದು ಮಾತ್ರ. ಪಕ್ಕದ ಮನೆಯವರು ಶ್ರೀಮಂತ, ಅವನಿಂದ ನಮಗೆ ಕೋಟ್ಯಂತರ ಡಾಲರುಗಳ ಬಿಸಿನೆಸ್ ಹರಿದುಬರುತ್ತಿದೆ, ಎಂಬ ಮಾತ್ರಕ್ಕೇ ನಾವು ನಮ್ಮ ಸಂಸಾರದ ಓರೆ ಕೋರೆಗಳನ್ನು ಅವನ ಕೈಗೊಪ್ಪಿಸಲಾಗುವುದಿಲ್ಲವಲ್ಲ ? ಅದು ಆ ಶ್ರೀಮಂತನಿಗೆ ಅರ್ಥವಾಗಬೇಕು. ಬುಷ್ ಎಂಬ ಅರೆಬೆಂದ ಯುದ್ಧ ದಾಹಿಗೆ ಆಗಿಲ್ಲ.

ನಿಜ; ಗುಜರಾತ್‌ನಲ್ಲಿ ನಡೆದ ನರಮೇಧವಿದೆಯಲ್ಲಾ , ಅದು ನಮ್ಮನ್ನು ಸದಾ ಕುಟುಕುತ್ತಿರಲೇಬೇಕು, ನಮ್ಮನ್ನು ಪದೇ ಪದೆ ನಾಚಿಕೆಗೆ- ಅವಮಾನಕ್ಕೆ ದೂಡುತ್ತಲೇ ಇರಬೇಕು, ನಮ್ಮ ಆತ್ಮಸಾಕ್ಷಿಯನ್ನು ಜಾಗೃತಗೊಳಿಸುತ್ತಲೇ ಇರಬೇಕು. ನಾವು ಎಂದೂ ಮರೆಯ ಬಾರದು ಪಾಠವಾಗಿ ಅದು ನಮ್ಮ ತಲೆಯಲ್ಲಿ ಗುಂಯ್‌ಗುಡುತ್ತಲೇ ಇರಬೇಕು. ಆದರೆ, ಈ ಸಂಕಟದ ಬೇಗುದಿಯನ್ನು ಜೀವಂತವಿರಿಸಲಿಕ್ಕೆ, ನಮಗೆ ಹೊರಗಿನವರ ಹಂಗಿನ ತುಪ್ಪ ಬೇಕಿಲ್ಲ.


ಹಾಗೆ ನೋಡಿದರೆ, ಈ ದೇಶಕ್ಕೆ ಹತ್ಯಾಕಾಂಡಗಳು ಹೊಸತೇನಲ್ಲ. ಅನೇಕ ದಶಕ ಶತಮಾನಗಳಿಂದಲೂ ನಾವದನ್ನು ಅನುಭವಿಸುತ್ತಲೇ ಬಂದಿದ್ದೇವೆ; ನಮ್ಮ ಹೆಚ್ಚುಗಾರಿಕೆಯೆಂದರೆ, ಅಂಥ ಪ್ರತಿಯೊಂದು ದುರಂತದ ನಂತರವೂ ನಾವು ಒಂದು ಜನಾಂಗವಾಗಿ-ಒಂದು ಸಂಸ್ಕೃತಿಯಾಗಿ-ಒಂದು ದೇಶವಾಗಿ ಭದ್ರಗೊಂಡು ಬೆಳೆಯುತ್ತಾ ಬಂದಿದ್ದೇವೆ. ಅಮೆರಿಕನ್ನರಿಗೆ ಇತಿಹಾಸದ ಪರಿಚಯವಿಲ್ಲ.

ವಿಭಜನೆಯ ಸಮಯದಲ್ಲಾದ ಮಾರಣ ಹೋಮಗಳ ಬಗ್ಗೆ ಇಡೀ ಜಗತ್ತಿಗೇ ಗೊತ್ತಿದೆ. ಅದೆಷ್ಟು ಸಾವಿರ ಹಿಂದೂ ಮುಸ್ಲಿಮರ ಕುಟುಂಬಗ ಳು ಸರ್ವನಾಶವಾಗಿ ಹೋದವು ಅನ್ನುವುದನ್ನು ಇತಿಹಾಸ ದಾಖಲಿಸಿದೆ. ಆದರೆ, ಆ ದುರಂತವೇ ಈ ದೇಶದ ಕೊನೆಯಾಗಲಿಲ್ಲ ; ಅದು ಹೊಸ ಬದುಕೊಂದರ ಆರಂಭವಾಯಿತು, ಹೊಸತಾಗಿ ಹುಟ್ಟಿದ ದೇಶಕ್ಕೊಂದು ಶಾಶ್ವತ ಪಾಠವಾಯಿತು. ಅದೇ ಶಾಶ್ವತ ಶಾಪವೂ ಆಯಿತು.

೧೯೫೦ರ ದಶಕದಲ್ಲಿ ತಮಿಳುನಾಡಿನಲ್ಲೊಂದು ನರಮೇಧ ನಡೆದಿತ್ತು. ತಮ್ಮನ್ನು ತಾವು ಉಚ್ಚ ಕುಲದವರು ಅಂತ ಕರೆದುಕೊಳ್ಳುವ ಕೆಲ ಹಿಂದೂ ಗುಂಪುಗಳವರು, ನೂರಾರು ಹರಿಜನರನ್ನು ಮನಸೋ ಇಚ್ಛೆ ಕೊಚ್ಚಿ ಹಾಕಿದ್ದರು. ಪ್ರತ್ಯಕ್ಷದರ್ಶಿಗಳಾಗಿದ್ದ ಪೊಲೀಸರಿಂದ ಮಾಡ ಲಾಗಿದ್ದು, ಸುಮ್ಮನೆ ಅಸಹಾಯಕವಾಗಿ ನಿಂತು ನೋಡುವುದೊಂದೇ. ಅವರಿಂದ ಅನಾಹುತ ತಡೆಯಲಾಗಿರಲಿಲ್ಲ. ಕಾಂಗ್ರೆಸ್ ಎಂಬ ಗಾಂಧಾರೀ ಗರ್ಭದಲ್ಲಿ ಹುಟ್ಟಿದ ಅಪರೂಪದ ನಾಯಕರಲ್ಲೊಬ್ಬರಾದ ಮುಖ್ಯಮಂತ್ರಿ ಕಾಮರಾಜ್, ನಾಚಿಕೆ-ಅವಮಾನಗಳಿಂದ ತಲೆಕೆಳಗೆ ಹಾಕಿ ನಿಂತಿದ್ದರು. He was ashamed of himself. ಅದಾದ ಮೇಲೆ, ೧೯೬೦ರ ದಶಕದ ಮಧ್ಯಭಾಗದಲ್ಲಿ ಅವತ್ತಿನ ಪೂರ್ವ ಪಾಕಿಸ್ತಾನದಲ್ಲಿ ನಡೆದ ಧರ್ಮ ದಳ್ಳಾರಿಯನ್ನು ಇತಿಹಾಸ ಬರೆದಿಟ್ಟಿದೆ. ಈಗ ಬಾಂಗ್ಲಾದೇಶ ಅಂತ ಕರೆಸಿಕೊಳ್ಳುವ ಆ ನೆಲದಲ್ಲಿ ಅವತ್ತು ಹಿಂದೂಗಳನ್ನು ಕೋಳಿಗಳ ಥರ ತರಿದು ಹಾಕಲಾಗಿತ್ತು. ಪಾಪದ ತರುಣಿಯರ ಮೇಲೆ ಸಾಮೂಹಿಕ ಅತ್ಯಾಚಾರಗಳಾಗಿದ್ದವು. ಅವರೆದೆ ಗಳನ್ನು ಕತ್ತರಿಸಿ ಎಸೆಯಲಾಗಿತ್ತು. ಹಿಂಸೆ ತಡೆಯಲಾರದೆ ಲಕ್ಷಗಟ್ಟಲೆ ಹಿಂದೂಗಳು ಭಾರತಕ್ಕೆ ರಾತ್ರೋರಾತ್ರಿ ಓಡಿಬಂದಿದ್ದರು. ಅತ್ಯಂತ ಮಾನವೀಯವಾಗಿ ವರ್ತಿಸಿದ ನೆಹರೂ ಅವತ್ತು ಅವರನ್ನೆಲ್ಲಾ ಮಧ್ಯಪ್ರದೇಶದ ಬಸ್ತಾರ್‌ಜಿಲ್ಲೆಯಲ್ಲಿರುವ ದಂಡಕಾರಣ್ಯದಲ್ಲಿ ನಿರಾಶ್ರಿತರ ಶಿಬಿರಗಳನ್ನು ಕಟ್ಟಿಸಿ ನಮ್ಮದೇ ದೇಶದ ಮಕ್ಕಳ ಹಾಗೆ ನೋಡಿಕೊಂಡಿದ್ದರು. ಆದರೆ, ಕೋಲ್ಕತ್ತಾದಿಂದ ಬಸ್ತಾರ್‌ಗೆ ಬರುವ ದಾರಿಯಲ್ಲಿ ಈ ನತದೃಷ್ಟ ಹಿಂದೂಗಳು ಹೇಳಿದ ಕಥೆ ಕೇಳಿ ದಾರಿಯುದ್ದಕ್ಕೂ ಭುಗಿಲೆದ್ದ ಹಿಂಸಾಚಾರವನ್ನೂ, ಮುಸ್ಲಿಂ ನರಮೇಧವನ್ನು ತಡೆಯಲು ಅವರಿಂದ ಆಗಿರಲಿಲ್ಲ. He was helpless.

ಅಷ್ಟೊಂದು ಹಿಂದೆ ಯಾಕೆ; ೧೯೮೪ರಲ್ಲಿ ಇಂದಿರಾಗಾಂಯ ಹತ್ಯೆಯಾಗುತ್ತಿದ್ದಂತೆಯೇ ಮೂರು ದಿನಗಳ ಕಾಲ ದೆಹಲಿಯಲ್ಲಿ ನಿರಂತರವಾಗಿ ನಡೆಯಿತಲ್ಲಾ ಸಿಖ್ ಹತ್ಯಾಸರಣಿ, ಅದನ್ನು ಮರೆಯುವುದು ಸಾಧ್ಯವೆ? ಆಗಲೂ ಪೊಲೀಸರು ಅಪರಾಧಕ್ಕೆ ಪ್ರತ್ಯಕ್ಷದರ್ಶಿಗಳಾಗಿದ್ದರು. ಪ್ರಧಾನಿ ಗದ್ದುಗೆಗೇರಿದ ರಾಜೀವ್ ಗಾಂಯಂತೂ, ಹೆಚ್ಚು-ಕಡಿಮೆ ಈ ನರಮೇಧವನ್ನು ಡಿಫೆಂಡ್ ಮಾಡಿಕೊಳ್ಳುವಂಥ insensitive ಧಾಟಿಯಲ್ಲೇ ಮಾತಾಡಿಬಿಟ್ಟರು.

ಆದಾದ ಮೇಲೆ ಆಯೋಧ್ಯೆ ಸಂಭವಿಸಿತು. ಮುಂಬೈಯಲ್ಲಿ ಬಾಂಬ್ ಸೋಟಗಳಾದವು. ಕಾಶ್ಮೀರ ಕಂಗೆಟ್ಟು ಹೋಯಿತು. ಗುಜರಾತ್‌ಗೆ ಬೆಂಕಿ ಬಿದ್ದಿತು.

ಇವೆಲ್ಲವನ್ನೂ ಸಹಿಸಿಕೊಂಡು ಈ ದೇಶ ಇವತ್ತು ಒಂದು ದೇಶವಾಗಿ ಯಾಕೆ ಉಳಿದಿದೆಯೆಂದರೆ, ಇಲ್ಲಿನ ಸಂಸ್ಕೃತಿಯಲ್ಲಿ ಮಾನವೀಯತೆಯೆಂ ಬುದೂ ಕೌಟುಂಬಿಕ ವಿವೇಚನೆಯೆಂಬುದೂ ಗುಪ್ತಗಾಮಿನಿಯಾಗಿ ಹೊಸೆದುಕೊಂಡಿದೆ. ಜಗಳವಾಡಿದ ತಕ್ಷಣ ಡೈವರ್ಸ್‌ಕೊಟ್ಟು ಬಿಡುವ ಪಾಶ್ಚಾತ್ಯ ಸಂಸ್ಕಾರವಲ್ಲ ನಮ್ಮದು. ಹಾಗಂತ, ಎಲ್ಲ ಕೋಮುದಳ್ಳುರಿಗಳೂ-ಧರ್ಮಹತ್ಯೆಗಳೂ ಸಹಜ ಅಂತಾಗಲಿ, ನ್ಯಾಯಸಮ್ಮತ ಅಂತಾಗ ಲಿ ಅಲ್ಲ. ಅವು ಎಂದಿದ್ದರೂ ನಾಚಿಕೆಗೇಡಿನ ಸಂಗತಿಗಳೇ. ಆದರೆ, ಅಂಥ ಹುಯಿಲುಗಳಿಂದ ಅಲುಗಾಡದಷ್ಟು ಗಟ್ಟಿಯಾಗಿ ಬೆಳೆದಿದೆ, ಉಳಿದಿದೆ, ನಮ್ಮ ಡೆಮಾಕ್ರಸಿ. ಇಲ್ಲಿನ ತಪ್ಪಿತಸ್ಥರಿಗೆ ಇಲ್ಲೇ ಶಿಕ್ಷೆ ಕೊಡುವ ವ್ಯವಸ್ಥೆಯಿದೆ. ಮೋದಿ ನೀಚ ಅಂತಾದರೆ, ಆ ನೀಚತನಕ್ಕೆ ಪಾಠ ಕಲಿಸುವಷ್ಟು ವಿವೇಚನೆ ಮತ್ತು ಪ್ರಜ್ಞೆ ನಮ್ಮ ಪ್ರಜಾತಂತ್ರಕ್ಕಿದೆ. ಇವತ್ತು ಎಡವಿದರೂ ನಾಳೆ ತನ್ನನ್ನು ತಾನು ತಿದ್ದಿಕೊಂಡು ಪುಟಿದೇಳುವ ಶಕ್ತಿಯಿದೆ. ಹಾಗಾಗೇ, ನಮ್ಮ ಪ್ರಜಾತಂತ್ರಕ್ಕೆ ಅವಮಾನವಾಗುವುದನ್ನು ನಾವು ಮೋದಿ ಅನ್ನುವ ವ್ಯಕ್ತಿಗಾದ ಅವಮಾನದಷ್ಟು ಸಲೀಸಾಗಿ ಸಹಿಸುವುದು ಸಾಧ್ಯವಿಲ್ಲ.

ಬುಷ್‌ಗಿದು ಗೊತ್ತಿಲ್ಲ. ನಮ್ಮ ಸಾಂವಿಧಾನಿಕ ಪ್ರಜ್ಞೆಯನ್ನೇ ತನ್ನ ಉದ್ಧಟತನದಿಂದ ಅವಮಾನಿಸಿಬಿಟ್ಟಿದ್ದಾನೆ. ಬಿಜೆಪಿಯ ಮೋದಿಯನ್ನು ಕೆಳಕ್ಕೆ ದೂಡಿದರೆ, ಯುಪಿ‌ಎ ಸರ್ಕಾರ ಖುಷಿಯಿಂದ ಕುಣಿದು ತನ್ನ ಜೊತೆ ಡ್ಯುಯೆಟ್ ಹಾಡುತ್ತದೆ ಅಂದು ಕೊಂಡಿದ್ದನೇನೋ. ನಮ್ಮ ಪುಣ್ಯ; ನಮ್ಮ ರಾಜಕಾರಣಕ್ಕಿನ್ನೂ ಅಂಥ ವಿವೇಚನಾ ದಾರಿದ್ರ್ಯಬಡಿದಿಲ್ಲ. ಮೋದಿಯನ್ನು ವೈಯಕ್ತಿಕವಾಗಿ ಒಪ್ಪದಿದ್ದರೂ, ಕಾಂಗ್ರೆಸ್ ಮತ್ತು ಕಮ್ಯು ನಿಷ್ಟ್ ಧುರೀಣರು ಬುಷ್‌ನ ಅತಿಬುದ್ಧಿವಂತಿಕೆಗೆ ಕ್ಯಾಕರಿಸಿ ಉಗಿದಿದ್ದಾರೆ. ಸರ್ಕಾರ ಮತ್ತು ವಿರೋಧ ಪಕ್ಷಗಳೆಲ್ಲವೂ ಒಂದೇ ದನಿಯಿಂದ ಮೋದಿಯ ಗಾದಿಗೆ ಮತ್ತು ಆ ಮೂಲಕ ನಮ್ಮ ಪ್ರಜಾತಂತ್ರಕ್ಕೆ ಆದ ಅವಮಾನವನ್ನು ಪ್ರತಿಭಟಿಸಿವೆ. ಇಲ್ಲಿ ಮೋದಿ ಮುಖ್ಯವಲ್ಲ ಅನ್ನುವುದ ನ್ನು ಎಲ್ಲ ನಾಯಕರೂ ಅರ್ಥ ಮಾಡಿಕೊಂಡಿದ್ದಾರೆ. ಇದೇ ನಿಜವಾದ ದೇಶಪ್ರೇಮದ ಹಾಗೂ ಪ್ರಜಾತಂತ್ರದ ಶಕ್ತಿ.

ಆದು ಒತ್ತಟ್ಟಿಗಿರಲಿ ಬಿಡಿ; ಈಗ, ಯಾವ ಆಧಾರದ ಮೇಲೆ ಅಮೆರಿಕದ ಸರ್ಕಾರ ನರೇಂದ್ರ ಮೋದಿಗೆ ವೀಸಾ ನಿರಾಕರಿಸಿತು ಅನ್ನುವುದನ್ನಷ್ಟು ನೋಡಿ. ತನ್ನ ದೇಶದ `ಇಮಿಗ್ರೇಷನ್ ಮತ್ತು ನ್ಯಾಷನಾಲಿಟಿ ಆಕ್ಟ್' ಸೆಕ್ಷನ್ 212(a)(2)(G) ಪ್ರಕಾರ, ಧಾರ್ಮಿಕ ಸ್ವಾತಂತ್ರ್ಯವನ್ನು ತೀವ್ರವಾಗಿ ಉಲ್ಲಂಘಿಸುವಂಥ- ಹತ್ತಿಕ್ಕುವಂಥ ಕೆಲಸಕ್ಕೆ ಹೊಣೆಯಾದ ಯಾವುದೇ ವಿದೇಶಿ ಸರ್ಕಾರಿ ಅಕಾರಿಗೂ ವೀಸಾ ಕೊಡುವಂತಿಲ್ಲ ಅಂತ ಅಮೆರಿಕ ಹೇಳಿದೆ. ಆದರೆ, ಹೀಗೆ ಹೇಳುವ ಮೂಲಕ ಅದು ಮೋಸ ಮಾಡುತ್ತಿದೆ!

ಅಮೆರಿಕ ತನ್ನ ಯಾವ ಕಾಯ್ದೆಯ ಯಾವ ಸೆಕ್ಷನ್ನಿನ ನೆಪ ಮುಂದೆ ಮಾಡಿದೆಯೋ ಆ ಸೆಕ್ಷನ್ನು ನಿಜವಾಗಿಯೂ ಏನು ಹೇಳುತ್ತದೆ ಗೊತ್ತೆ ?

`... ಯಾವುದೇ ವಿದೇಶಿಗ, ತಾನು ಸರ್ಕಾರಿ ಹುದ್ದೆಯಲ್ಲಿದ್ದಾಗ, ಕಳೆದ ಇಪ್ಪತ್ನಾಲ್ಕು ತಿಂಗಳ ಅವಯಲ್ಲಿ, ನೇರವಾಗಿ ಅಥವಾ ಪರೋಕ್ಷ ವಾಗಿ, ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘಿಸುವಂಥ ಗಲಭೆಗಳಿಗೆ ಕಾರಣವಾಗಿದ್ದರೆ, ೧೯೯೮ರ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ- ಸೆಕ್ಷನ್ ಮೂರರ ಪ್ರಕಾರ, ಆತನಿಗೂ ಆತನ ಕುಟುಂಬಕ್ಕೂ ವೀಸಾ ಕೊಡುವಂತಿಲ್ಲ' ಅಂತಿದೆ. ಅಂದರೆ, ಅಮೆರಿಕ ಅರ್ಧ ಸತ್ಯವನ್ನು ಮಾತ್ರ ಹೇಳುತ್ತಿದೆ!

ಒಂದು ವೇಳೆ ಅಮೆರಿಕ ಹೇಳುವಂತೆ ಗುಜರಾತ್‌ನ ಹತ್ಯಾಕಾಂಡಕ್ಕೆ ನರೇಂದ್ರ ಮೋದಿಯೇ ಹೊಣೆ ಅಂತಿಟ್ಟುಕೊಂಡರೂ, ಅದು ಘಟಿಸಿದ್ದು ೨೦೦೨ರ ಫೆಬ್ರವರಿ ಕೊನೆ ಮತ್ತು ಮಾರ್ಚ್ ಮೊದಲ ವಾರದೊಳಗೆ. ಅಂದರೆ, ಅದು ಎರಡು ವರ್ಷಕ್ಕಿಂತಲೂ ಇಪ್ಪತ್ನಾಲ್ಕು ತಿಂಗಳುಗಳಿ ಗಿಂತಲೂ-ಹಳೆಯದು! ಹಾಗಿದ್ದ ಮೇಲೆ, ಕಾನೂನಿನ ಪ್ರಕಾರ, ಮೋದಿಗೆ ವೀಸಾ ಕೊಡಲು ಅಮೆರಿಕ ಉದ್ಧರಿಸಿದ ಕಾಯ್ದೆಗಳು-ಸೆಕ್ಷನ್‌ಗಳು ಅಡಿಯಾಗುವುದೇ ಇಲ್ಲ.

ಹೋಗಲಿ, ಮೋದಿ ವಿರುದ್ಧ ಅಮೆರಿಕ ಮಾಡಿರುವ ಆರೋಪಗಳು ಭಾರತದ ಕೋರ್ಟುಗಳಲ್ಲಿ ಸಾಬೀತಾದರೂ ಆಗಿವೆಯಾ, ಯಾವು ದಾದರೊಂದು ಕೋರ್ಟಾದರೂ ಮೋದಿಗೆ ಶಿಕ್ಷೆ ಘೋಷಿಸಿದೆಯಾ ಅಂದರೆ ಅದೂ ಇಲ್ಲ. ಸರ್ಕಾರ ನೇಮಿಸಿದ ನಾನಾವತಿ-ಶಾ ಕಮಿಷನ್ ಇನ್ನೂ ತನ್ನ ವರದಿ ಕೊಡಬೇಕಿವೆ. ವಿಚಾರಣೆ ನಡೆಯಬೇಕಿದೆ ಆದರೆ, ಈ ಬಗ್ಗೆ ತಲೆಕೆಡಸಿಕೊಳ್ಳದ ಅಮೆರಿಕ, ಗುಜರಾತ್ ಗಲಭೆಯ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಕೊಟ್ಟ ವರದಿಯನ್ನೂ, ಕೆಲವು ಎನ್‌ಜಿ‌ಓಗಳು ನೀಡಿದ ದೂರನ್ನೂ, ಸೆಕ್ರೆಟರಿ ಆಫ್ ಸ್ಟೇಟ್ ಕೊಂಡ ಲೀಜಾ ರೈಸ್‌ಗೆ ಅಮೆರಿಕದ ಸಂಸದ ಜೋ ಪಿಟ್ಸ್ ಬರೆದ ಪತ್ರವನ್ನೂ ಆಧರಿಸಿ ಮೋದಿಗೆ- ಇಂಡಿಯಾಕ್ಕೆ ಮಂಗಳಾರತಿಯೆತ್ತಿಬಿಟ್ಟಿದೆ. ಇಲ್ಲಿ ನಾವು ಗಮನಿಸಬೇಕಾದ್ದು, ರಾಷ್ಟ್ರೀಯ ಮಾನವ ಹಕ್ಕು ಆಯೋಗದ ವರದಿಗೆ ಕಾನೂನಿನ ಚೌಕಟ್ಟಾಗಲಿ-ಬಂಧ ವಾಗಲಿ ಇಲ್ಲ ಅನ್ನುವುದ ನ್ನ. ಆ ಆಯೋಗದ ಎಲ್ಲ ವರದಿಗಳನ್ನೂ ಅಮೆರಿಕ ಗಂಭೀರವಾಗೇ ತೆಗೆದುಕೊಳ್ಳುವುದಾದರೆ, ಕಾಶ್ಮೀರದಲ್ಲಿನ ಮಾನವ ಹಕ್ಕು ಉಲ್ಲಂಘನೆ ಗಳಿಗೆ ಪಾಕಿಸ್ತಾನವನ್ನೇ ಹೊಣೆಯಾಗಿಸಿ ಅದು ಕೊಟ್ಟಿರುವ ವರದಿಯನ್ನೂ ಗಂಭೀರವಾಗಿ ಪರಿಗಣಿಸಬೇಕು, ಮತ್ತು ಪರ್ವೇಜ್ ಮುಷರ್ರಫ್‌ಗೂ ವೀಸಾ ನಿರಾಕರಿಸಬೇಕು!

ಮೋದಿ ವಿರುದ್ಧ ಅಮೆರಿಕಾದಲ್ಲಿ ಲಾಬಿ ನಡೆಸಿರುವ ಇಂಡಿಯನ್ ಅಮೆರಿಕನ್ನರು, ಮೋದಿ ಒಬ್ಬ ಹಿಟ್ಲರ್‌ಪ್ರೇಮಿ ಅಂತ ದೂರಿ, ಅದಕ್ಕೆ ಸಾಕ್ಷಿಯಾಗಿ ಗುಜರಾತ್‌ನ ಕೆಲವು ಶಾಲಾ ಪಠ್ಯಗಳ ಸಾಲುಗಳನ್ನು ಬೊಟ್ಟು ಮಾಡಿ ತೋರಿಸಿದ್ದಾರೆ. ಅವರು ಹೋಮ್‌ವರ್ಕ್ ಸರಿಯಾಗಿ ಮಾಡಿಲ್ಲ! ಆ ಪುಸ್ತಕಗಳು ಪ್ರಕಟವಾಗಿದ್ದು ೧೯೮೬ರಿಂದ ೧೯೯೨ರ ನಡುವಿನ ಅವಯಲ್ಲಿ ; ಆಗ ಮೋದಿ ಅಕಾರದಲ್ಲಿರಲೇ ಇಲ್ಲ ! ಸ್ವಲ್ಪ ಕೇರ್‌ಫುಲ್ ಆಗಿ ಹುಡುಕಿದ್ದರೆ, ಅವರಿಗೆ ಮೋದಿ ಬಗ್ಗೆ ಇದಕ್ಕಿಂತಲೂ ಭಯಂಕರವಾದ facts and figures ಸಿಗುತ್ತಿದ್ದವೇನೋ. ಆದರೆ, ಅವಮಾನಿಸುವ ಭರದಲ್ಲಿ ಅವಸರಕ್ಕೆ ಬಿದ್ದು ಬಿಟ್ಟರು.

ಅಮೆರಿಕಕ್ಕೆ ನಿಜಕ್ಕೂ ಗುಜರಾತ್ ನರಮೇಧದಿಂದ ಆಗಬೇಕಾದ್ದು ಏನೂ ಇಲ್ಲ. ಮುಸ್ಲಿಮರ ಬಗ್ಗೆ ಆ ದೇಶಕ್ಕೆ ಎಂಥಾ ಕಾಳಜಿ ಇದೆ ಅನ್ನುವುದನ್ನು ನಾವು ಇರಾಕ್‌ನ ಅಬು ಫರೇಬ್‌ನಿಂದ ನೇರವಾಗಿ ಹರಿದು ಬಂದ ಟೀವಿ ಚಿತ್ರಗಳಲ್ಲಿ ಕಂಡಿದ್ದೇವೆ. ಇರಾಕಿನ ಬೀದಿಗಳಲ್ಲಿ ಅಮೆರಿಕನ್ ಸೈನಿಕರು ನಡೆಸಿದ ಪ್ರಳಯೋನ್ಮಾದದ ನೃತ್ಯವನ್ನು ನೋಡಿದ್ದೇವೆ.

ಮೋದಿಯ ವಿಷಯದಲ್ಲಿ ಅಮೆರಿಕಕ್ಕೂ ಮತ್ತು ಅಲ್ಲಿನ ಸರ್ಕಾರವನ್ನು ನಿಯಂತ್ರಿಸುತ್ತಿರುವ ಕ್ರಿಶ್ಚಿಯನ್ ಮಿಷನರಿಗಳಿಗೂ ಇರಬಹುದಾದ ಒಂದು ಅತಿದೊಡ್ಡ ದೂರೆಂದರೆ ಆತನ ಮತಾಂತರ ನಿಷೇಧ ಕಾಯ್ದೆ!

ಬುಷ್ ಮೇಲೆ ಚರ್ಚುಗಳ ಪ್ರಭಾವ ಎಷ್ಟಿದೆ ಅನ್ನುವುದು ಇವತ್ತು ರಹಸ್ಯವಾಗೇನೂ ಉಳಿದಿಲ್ಲ. ಹಾಗಾಗಿ, ಮೋದಿಯ ಮತಾಂತರ ನಿಷೇಧ ಕಾಯ್ದೆಯೇ ಅಮೆರಿಕನ್ ಸರ್ಕಾರದ ಕೆಂಗಣ್ಣಿನ ಮೂಲ ಅನ್ನುವುದನ್ನು ಗುರುತಿಸುವುದಕ್ಕೆ ದಿವ್ಯದೃಷ್ಟಿ ಯೇನೂ ಬೇಡ.

ಆದರೆ, ಈ ಮತಾಂತರದ ಕಾಯ್ದೆಯೇನೂ ಮೋದಿ ಕಂಡುಹಿಡಿದಿದ್ದಲ್ಲ ಅನ್ನುವುದು ಅಮೆರಿಕನ್ನರಿಗೆ ಗೊತ್ತಿರಬೇಕಿತ್ತು. ಕ್ರಿಶ್ಚಿಯನ್ನು ಬಡ ಜನರಿಗೆ ಆಮಿಷ ತೋರಿಸಿ ಅವರನ್ನು ತಮ್ಮ ಧರ್ಮಕ್ಕೆಳೆದು ಕೊಳ್ಳುತ್ತಿದ್ದರ ಬಗ್ಗೆ ಜಸ್ಟಿಸ್ ನಿಯೋಗಿ ಕಮಿಷನ್ ನೀಡಿದ ವರದಿಯಾಧಾರದ ಮೇಲೆ, ೧೯೬೦-೭೦ರ ದಶಕದಲ್ಲೇ ಮಧ್ಯಪ್ರದೇಶ ಒರಿಸ್ಸಾ ಹಾಗೂ ಅರುಣಾಚಲ ಪ್ರದೇಶ ಸರ್ಕಾರಗಳು ಮತಾಂತರ ನಿಷೇಧವನ್ನು ಜಾರಿಗೆ ತಂದಿದ್ದವು. ಅಂಥದ್ದೊಂದು ಕ್ರಮಕ್ಕೆ ಪ್ರೋತ್ಸಾಹ ಕೊಟ್ಟಿದ್ದು, ಶ್ರೀಮತಿ ಇಂದಿರಾಗಾಂ!

ಬುಷ್‌ಗೆ ಇದು ಗೊತ್ತಿಲ್ಲ. ಭಾರತೀಯರ ದೇಶ ಪ್ರೇಮದ ತೀವ್ರತೆಯೂ ಅವನಿಗೆ ಗೊತ್ತಿಲ್ಲ. ಅದನ್ನು ಗೊತ್ತು ಪಡಿಸಬೇಕು. ಯಾವುದೋ ಎನ್‌ಜಿ‌ಓಗಳ-ಆಯೋಗಗಳ ವರದಿಯನ್ನಾಧರಿಸಿ ಅವನು ನಮಗೆ ಅವಮಾನ ಮಾಡಬಲ್ಲನಾದರೆ, ಅದೇ ತಂತ್ರದ ಮೇಲೆ ನಮ್ಮವರು ಅವನ ಸರ್ಕಾರದ ಅಕಾರಿಗಳಿಗೆ ವೀಸಾ ನಿರಾಕರಿಸಲಾರರೆ? ಅಮೆರಿಕ ಸರ್ಕಾರದ ವಿರುದ್ಧ ಅಂಥ ಸಾವಿರಾರು ವರದಿಗಳು ಬಂದಿವೆ. ಮನ್ ಮೋಹನ್‌ಸಿಂಗ್ ಸ್ವಲ್ಪ ಧಾರ್ಷ್ಟ್ಯ ತೋರಿಸಬೇಕು, ಅಷ್ಟೆ.

ಕಪಾಳಕ್ಕೆ ಹೊಡೆಯದ ಹೊರತು, ದೊಡ್ಡಣ್ಣನಿಗೆ ತನ್ನ ತಮ್ಮಂದಿರು ತನ್ನೆರಕ್ಕೆ ಬೆಳೆದು ನಿಂತಿದ್ದಾರೆ ಅನ್ನುವುದು ಗೊತ್ತಾಗುವುದಿಲ್ಲ.

ಅಂಥದೊಂದು ಫತ್ವಾ ಹೊರಟರೂ ಸುಮ್ಮನೇ ಇದೆ ಬುದ್ಧಿಜೀವಿ!

ರವಿ ಬೆಳಗೆರೆ
ರವಿ ಬೆಳಗೆರೆ



ಅಯೋಧ್ಯೆಯಲ್ಲಿ ಮತ್ತೆ ರಕ್ತ ಹರಿದಿದೆ. ಯಥಾಪ್ರಕಾರ ಬಿಜೆಪಿಗಳು ಕೈಯಲ್ಲಿ ದಂಡ ಹಿಡಿದುಕೊಂಡು ದೇಶವನ್ನು ಬಂದ್ ಮಾಡಿಸಲು ಹೊರಟುಬಿಟ್ಟಿದ್ದಾರೆ. ಬಂದ್ ಯಾತಕ್ಕೆ ಅನ್ನುವುದು ಯಾರಿಗೂ ಗೊತ್ತಿಲ್ಲ. ನಮ್ಮ ಗಂಡೆದೆಯ ಸಿ‌ಆರ್‌ಪಿ‌ಎಫ್ ಯೋಧರು ಉಗ್ರರನ್ನು ಗುಂಡಿಕ್ಕಿ ನೆಲಕ್ಕುರುಳಿಸಿದ್ದು ಬಂದ್ ಮಾಡಿ ಪ್ರತಿಭಟಿಸಬೇಕಾದ ವಿಷಯವಾ? ಅವರ ಸಾಹಸ ಮೆಚ್ಚಿ ಎದೆಯುಬ್ಬಿಸಿ ರಸ್ತೆಯಲ್ಲಿ ನಡೆಯುವ ಬದಲು ಬಾಗಿಲು ಹಾಕಿಕೊಂಡು ಮನೆಯಲ್ಲೇ ಇರಿ ಅನ್ನುವಂತೆ ಆಡಿಬಿಟ್ಟಿತು ಬಿಜೆಪಿ.

ಪ್ರತಿಯೊಂದಕ್ಕೂ ರಾಜಕೀಯದ ಲೇಪನ ಮಾಡಿದರೆ ಆಗುವುದೇ ಹೀಗೆ. ಆಯೋಧ್ಯೆಯೂ ಸೇರಿದಂತೆ ಇವತ್ತಿನ ಈ ದೇಶದ ಸಮಸ್ತ ಪಾಪಗಳಿಗೂ ಮೂಲ ಕಾರಣವೇ ಇಂಥ ಕರ್ಮಠ ಕೈಗೆ ಅಕಾರ ಸಿಕ್ಕರೆ ಏನಾಗುತ್ತದೆ ಅನ್ನುವುದನ್ನು ಈ ದೇಶ ಸಾವಿರಾರು ವರ್ಷಗಳಿಂದಲೂ ನೋಡುತ್ತಲೇ ಬಂದಿದೆ, ಅನುಭವಿಸುತ್ತಲೇ ಬಂದಿದೆ. ವಿಧವೆಯರ ಕೇಶಮಂಡನವಾಗಬೇಕು ಅನ್ನುವ ಕಟ್ಟಳೆ ಬಂದಿದ್ದು, ವಿಧವಾ ವಿವಾಹ ನಿಷಿದ್ಧವಾಗಿದ್ದು, ಸತಿಪದ್ಧತಿ ಹುಟ್ಟಿದ್ದು, ಎಲ್ಲಕ್ಕೂ ಕಾರಣ ಧರ್ಮದ ಕರ್ಮಠ ವ್ಯಾಖ್ಯಾನಗಳೇ. ದಾಸಯ್ಯ ಹಾಡಿದ್ದೇ ಹಾಡು ಅನ್ನುವ ಹಾಗೆ ಕರ್ಮಠರು ಹೇಳಿದ್ದೇ ಧರ್ಮವಾಯಿತು. ಭಗವದ್ಗೀತೆಯನ್ನೂ-ವೇದಗಳನ್ನೂ,ಬೈಬಲ್-ಕುರಾನ್‌ಗಳನ್ನೂ ಪಾಮರರು ಓದಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿರುವುದೇ ಇಂಥವರ ಸೃಷ್ಟಿಗೆ ಕಾರಣವಾಯಿತು. ನಮ್ಮ ಅಜ್ಞಾನವನ್ನು ಕರ್ಮಠರು ಅತ್ಯಂತ ವ್ಯವಸ್ಥಿತವಾಗೇ ಬಳಸಿಕೊಂಡರು.

ಈಗ, ಉತ್ತರಪ್ರದೇಶದಿಂದ ಇನ್ನೊಂದು ಕರ್ಮಠ ಅನರ್ಥದ ವರದಿ ಬಂದಿದೆ. ಆ ರಾಜ್ಯದ ಮುಜಫರ್‌ನಗರದ ಹತ್ತಿರವಿರುವ ದೇವ್‌ಬಂದ್ ಅನ್ನುವ ಊರನ್ನು ನೋಡಿದರೆ, ತಾಲಿಬಾನ್ ಆಡಳಿತವಿದ್ದ ಅಫಘಾನಿಸ್ತಾನವನ್ನು ನೋಡುವುದೇ ಬೇಡ! ಅಲ್ಲೊಂದು ಮುಸ್ಲಿಂ ಪಂಚಾಯ್ತಿಯಿದೆ. ತಾಲಿಬಾನ್‌ನಿಂದಲೇ ನೇರವಾಗಿ ಬಂದವರಂತಿದ್ದಾರೆ ಪಂಚಾಯ್ತಿದಾರರು. ಅವರೀಗ, ಇಮ್ರಾನಾ ಅನ್ನುವ ಹೆಣ್ಣುಮಗಳಿಗೆ ಅವಳ ಸ್ವಂತ ಮಾವನ ಜೊತೆ ಮದುವೆ ಮಾಡಿಸಲು ಹೊರಟುಬಿಟ್ಟಿದ್ದಾರೆ. ಈ ಮಾವ ಅನ್ನಿಸಿಕೊಂಡ ಮನುಷ್ಯ ಅವಳ ಮೇಲೆ ಅತ್ಯಾಚಾರವೆಸಗಿದ್ದ! ಪೊಲೀಸರು ಅವನನ್ನು ಬಂಸಿ ಎಳೆದೊಯ್ದು ಲಾಕಪ್ಪಿಗೆ ತಳ್ಳಿದರು.

ಆಮೇಲೆ ಆದ್ಯಾರು ಕರೆದರೋ ಏನೋ ಈ ಪಂಚಾಯ್ತಿದಾರರನ್ನ; ಅವರು ಖುದ್ದಾಗಿ ತಾವೇ ಇಮ್ರಾನಾಳ ಮನೆಗೆ ಬಂದು, ಪಂಚಾಯ್ತಿ ನಡೆಸಿ, ಅವಳು ತನ್ನ `ಗಂಡನನ್ನು ಮತ್ತು ಐದು ಜನ ಮಕ್ಕಳನ್ನು ಬಿಟ್ಟು ತನ್ನ ಮಾವನನ್ನೇ ಮದುವೆಯಾಗಬೇಕು, ಗಂಡನನ್ನು ಇನ್ನು ಮುಂದೆ `ಮಗ' ನಂತೆ ಕಾಣಬೇಕು ಅನ್ನುವ ಒಂದು ಅನಾಹುತಕಾರೀ ತೀರ್ಪು ಕೊಟ್ಟುಬಿಟ್ಟರು. ಸಾಲದೆಂಬಂತೆ, ಈ ಮಾವನೆಂಬ ಮಹಾಶಯನ ಪತ್ನಿಯಾಗುವ ಅರ್ಹತೆ ಪಡೆಯುವುದಕ್ಕಾಗಿ ಅವಳು ಏಳು ತಿಂಗಳ ಕಾಲ ಏಕಾಂತವಾಸ ಮಾಡಿ `ಪವಿತ್ರ'ಗೊಳ್ಳಬೇಕು ಅಂತಲೂ ಆಣತಿ ಮಾಡಿದರು. ಆದರೆ, ಮಾವನನ್ನು ಶಿಕ್ಷೆಸುವ ಬಗ್ಗೆ ಮಾತೇ ಆಡಲಿಲ್ಲ!

ಈ ದೇಶದಲ್ಲಿ ಪ್ರಜಾಪ್ರಭುತ್ವವಿದೆ. ಇಲ್ಲೊಂದು ಜಾತ್ಯತೀತ ವ್ಯವಸ್ಥೆಯಿದೆ. ಹೀಗಿರುವಾಗ, ಜವಾಬ್ದಾರಿಯಿರುವ ಯಾವುದೇ ನಾಯಕನಾದರೂ ಪಾಪದ ಇಮ್ರಾನಳ ಸಹಾಯಕ್ಕೆ ಧಾವಿಸಬೇಕಿತ್ತು. ಆದರೆ ಆ ರಾಜಕಾರಣಿಗಳಿಗೆ ತಮ್ಮ ವೋಟ್‌ಬ್ಯಾಂಕಿನ ಕರ್ಮಠ ತನವಿರುತ್ತದಲ್ಲಾ! ಅದಕ್ಕೇ, ಮುಲಾಯಂ ಸಿಂಗ್ ಅನ್ನುವ ಆ ರಾಜ್ಯದ ಮುಖ್ಯಮಂತ್ರಿ, `...ತುಂಬಾ ಯೋಚಿಸಿದ ಮೇಲೆ ಇಂಥದ್ದೊಂದು ತೀರ್ಪನ್ನ ಪಂಚಾಯ್ತಿ ಕೊಟ್ಟಿರಬೇಕು' ಅಂತ ಹೇಳಿ ಕೈತೊಳೆದುಕೊಂಡು ಬಿಟ್ಟರು! ಕಾಂಗ್ರೆಸ್ ಎಂಬ ಎಡಬಿಡಂಗಿ ಪಕ್ಷದ ವಕ್ತಾರ ಸಲ್ಮಾನ್ ಖುರ್ಷಿದ್, ವೈಯಕ್ತಿಕ ಕಾನೂನನ್ನು ಮಾನ್ಯ ಮಾಡುವ ಈ ದೇಶದ ಕಾನೂನನ್ನು ನಾವು ಮಾನ್ಯ ಮಾಡಲೇಬೇಕು.' ಅನ್ನುವ ಒಂದು ಪರಮ ಎಡವಟ್ಟು ಹೇಳಿಕೆ ಕೊಟ್ಟರು.

ವೈಯಕ್ತಿಕ ಕಾನೂನುಗಳನ್ನು ಮಾನ್ಯ ಮಾಡಬಾರದೆಂದು ಯಾರೂ ಹೇಳುತ್ತಿಲ್ಲ. ಆದರೆ, ಎಲ್ಲ ಕಾನೂನಿಗೂ ಒಂದು ಮಾನವೀಯ ಮುಖ ಇರಬೇಕಲ್ಲವೆ? ಅಮಾನವೀಯ ತೀರ್ಪೊಂದು ಮುಖಕ್ಕೇ ರಾಚುತ್ತಿದ್ದರೂ, ಅದಕ್ಕೂ-ತನಗೂ ಸಂಬಂಧವಿಲ್ಲದಂತೆ ಮುಖ ತಿರುಗಿಸಿಕೊಳ್ಳುವುದು ಪಾಷಂಡಿತನ. ನಿಜವಾದ ಸಾಮಾಜಿಕ ಕಾಳಜಿಗಿಂತ ರಾಜಕೀಯವೇ ಮುಖ್ಯ‌ಅನ್ನುವಂತಾಗಿಬಿಟ್ಟರೆ ನಮ್ಮ ನಾಯಕರುಗಳು ಏನಾಗುತ್ತಾರೆ ಅನ್ನುವುದಕ್ಕೆ ಇದೊಂದು ಉದಾಹರಣೆ ಸಾಕು.

ದೇವ್‌ಬಂದ್ ಪಂಚಾಯ್ತಿಯ ತೀರ್ಪನ್ನು ಅನೇಕ ಮುಸ್ಲಿಂ ಸಂಘಟನೆಗಳೇ ಒಪ್ಪಿಕೊಂಡಿಲ್ಲ. ಮದೀನಾ ಯೂನಿವರ್ಸಿಟಿಯ ವೈಸ್‌ಛಾನ್ಸಲರ್ ಪ್ರೊ.ಅಬ್ದುಲ್‌ಕರೀಮ್ ಮದಾನಿಯವರು, ಇಂಥದ್ದೊಂದು ಅರ್ಥಹೀನ ತೀರ್ಪಿಗೆ ಇಸ್ಲಾಂನಲ್ಲಿ ಅವಕಾಶವೇ ಇಲ್ಲ ಅಂದಿದ್ದಾರೆ. ಇಂಥ ಕಾನೂನು ಮುಂದುವರೆದರೆ, ಮುಂದೆ ತನ್ನ ಸೊಸೆಯ ಮೇಲೆ ಕಣ್ಣು ಹಾಕಿದ ಯಾವ ಮಾವ ಬೇಕಿದ್ದರೂ ಅವಳ ಮೇಲೆ ಅತ್ಯಾಚಾರ ನಡೆಸಿ ಅವಳನ್ನು ತನ್ನವಳಾಗಿಸಿಕೊಂಡು ಬಿಡಬಹುದಾದ ಅಪಾಯವಿದೆ ಅಂತ ಅಖಿಲ ಭಾರತ ಮುಸ್ಲಿಂ ಮಹಿಳಾ ವೈಯಕ್ತಿಕ ಕಾನೂನು ಮಂಡಳಿಯ ಅಧ್ಯಕ್ಷೆ ಖೈಸ್ತಾ ಅಂಬರ್ ಹೇಳಿದ್ದಾರೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಕಾನೂನು ಸಲಹೆಗಾರ ಜಫರ್‍ಯಾಬ್ ಜಿಲಾನಿ ಅವರೂ ಕೂಡ, ಆ ಮಂಡಳಿಯು ದೇವ್‌ಬಂದ್‌ನ ಫತ್ವಾವನ್ನು ಬೆಂಬಲಿಸಿರುವುದನ್ನೂ ಲೆಕ್ಕಿಸದೆ,`ಯಾರೂ ಯಾಕೆ ರೇಪ್ ಮಾಡಿದ ಪಾಪಿಯನ್ನು ಶಿಕ್ಷಿಸುವ ಬಗ್ಗೆ ಮಾತಾಡುತ್ತಿಲ್ಲ?' ಅಂತ ಕೇಳಿದ್ದಾರೆ.

ಇಷ್ಟಾದರೂ, ಕರ್ಮಠ ಮುಸ್ಲಿಂ ಸಂಘಟನೆಗಳು ಮತ್ತು ದೇವ್‌ಬಂದ್‌ನ ಮುಸ್ಲಿಂ ಪಂಚಾಯ್ತಿದಾರರು ಮಾತ್ರ, ಇಮ್ರಾನಾಳ ಮೇಲೆ ಆತ್ಯಾಚಾರ ನಡೆಸಿದ್ದು ಅವಳ ಮಾವ ಅಲ್ಲದೆ ಬೇರ್‍ಯಾರಾದರೂ ಆಗಿದ್ದಿದ್ದರೆ ಅವಳು ತನ್ನ ಗಂಡನ ಜೊತೆಯೇ ಬದುಕು ನಡೆಸಬಹುದಿತ್ತು. ಆದರೀಗ ಅವಳು ತನ್ನ ಮದುವೆ ಮುರಿದುಕೊಳ್ಳಲೇಬೇಕು'ಅಂತ ಸಾಸುತ್ತಿದ್ದಾರೆ. ಅಪರಾಯನ್ನು ರಕ್ಷಿಸಿ, ರಕ್ಷಿಸಬೇಕಾದವಳನ್ನು ಶಿಕ್ಷಿಸಲು ಟೊಂಕಕಟ್ಟಿ ನಿಂತು ಬಿಟ್ಟಿದ್ದಾರೆ.

ನಾಡಿನ ಬುದ್ಧಿಜೀವಿಗಳೂ ನಾಯಕ ಶಿಖಾಮಣಿಗಳೂ ಮುಖಕ್ಕೆ ಕೂಲಿಂಗ್ ಗ್ಲಾಸ್ ಏರಿಸಿಕೊಂಡು ತಣ್ಣಗೆ ಕೂತುಬಿಟ್ಟಿದ್ದಾರೆ. ಇಂಥ ಫತ್ವಾ ಮತ್ತು ಬುದ್ಧಿಜೀವಿಗಳ ಇಂಥ ಜಾಣ ಮೌನ ಹೊಸದೇನಲ್ಲ. ಸ್ವಲ್ಪ ದಿನಗಳ ಹಿಂದೆ, ಇನ್ನೊಬ್ಬ ಮುಸ್ಲಿಂ ಹೆಣ್ಣು ಮಗಳಿಗೂ ಇಂಥದ್ದೇ ವಿಚಿತ್ರ ತೀರ್ಪು ಸಿಕ್ಕಿತ್ತು. ಮದುವೆಯಾದ ತಕ್ಷಣ ಅವಳನ್ನು ಹಳ್ಳಿಯಲ್ಲೇ ಬಿಟ್ಟು ಸೇನೆಯ ಕೆಲಸಕ್ಕೆಂದು ಹೋದ ಅವಳ ಗಂಡ, ಆಮೇಲೆ ಸೇನೆಯಿಂದಲೇ ಕಣ್ಮರೆಯಾಗಿ ಬಿಟ್ಟಿದ್ದ. ಅವನು ಯುದ್ಧದಲ್ಲಿ ತೀರಿಕೊಂಡಿರಬಹುದು ಅಂತಲೇ ಎಲ್ಲರೂ ಭಾವಿಸಿದ್ದರು. ಒಂದಷ್ಟು ದಿನ ಕಾದು, ಇನ್ನವನು ಬರುವ ಸಾಧ್ಯತೆಗಳಿಲ್ಲ ಅನ್ನಿಸಿದ ಮೇಲೆ ಅವಳ ಹಿರಿಯರು ಅವಳಿಗೆ ಇನ್ನೊಂದು ಮದುವೆ ಮಾಡಿದರು. ಅವಳು ಗರ್ಭವತಿಯೂ ಆದಳು. ಆಗ ಪ್ರತ್ಯಕ್ಷನಾಗಿಬಿಟ್ಟನಲ್ಲ ಅವಳ ಮೊದಲ ಗಂಡ! ಅವನು ಪಾಕಿಸ್ತಾನದ ಜೈಲಿನಲ್ಲಿದ್ದನಂತೆ.

ಬಿಡುಗಡೆಗೊಂಡವನೇ ನೇರವಾಗಿ ಹಳ್ಳಿಗೆ ಬಂದು, ತನ್ನ ಹೆಂಡತಿಯ ಮೇಲೆ ಹಕ್ಕು ಸಾಸಲು ಹೊರಟು ಬಿಟ್ಟ. ಪಂಚಾಯ್ತಿ ಸೇರಿತು. ಅವಳು ತನ್ನ ಎರಡನೇ ಮದುವೆ ಮುರಿದುಕೊಂಡು ಮೊದಲ ಗಂಡನ ಜೊತೆಯೇ ಬಾಳ್ವೆ ನಡೆಸಬೇಕು ಅನ್ನುವ ತೀರ್ಪು ಹೊರಬಿತ್ತು. ಆಗ ಸೇನೆಯ ಆಸಾಮಿ ಹೊಸ ತಕರಾರು ತೆಗೆದ; ತಾನು ಅವಳ ಮಗುವನ್ನು ಸ್ವೀಕರಿಸಲಾರೆ ಅಂದ. ಆಗ ಪಂಚಾಯ್ತಿದಾರರು ತೀರ್ಪನ್ನು ಸ್ವಲ್ಪ ಬದಲಿಸಿದರು; ಅವಳು ತನ್ನ ಮಗುವನ್ನು ಹೆತ್ತು ಎರಡನೇ ಗಂಡನಿಗೆ ಕೊಟ್ಟು, ಆಮೇಲೆ ಮೊದಲ ಗಂಡನ ಜೊತೆ ಸಂಸಾರ ಮಾಡತಕ್ಕದ್ದು ಅಂದುಬಿಟ್ಟರು!

ಹೆಣ್ಣು ಅನ್ನುವ ಮನಸ್ಸು ಇಲ್ಲೊಂದು commodityಯಾಗಿ ಹೋಗಿತ್ತು. ಈ ದೇಶದ ಕಾನೂನಾಗಲೀ ಬುದ್ಧಿಜೀವಿಯಾಗಲೀ, `ಪುರೋಗಾಮಿ'ಚಿಂತನೆಯ ಸಂಘಟನೆಗಳಾಗಲೀ ಆಗಲೂ ಚಕಾರವೆತ್ತಿರಲಿಲ್ಲ. ಈಗಲೂ ಬಾಯಿಬಿಟ್ಟಿಲ್ಲ.

ಇದೂ ಒಂದು ರೀತಿಯ ಕರ್ಮಠತನವೇ; ಶತಾಯಗತಾಯ ತಮ್ಮ ಹಿತವನ್ನಷ್ಟೇ ಕಾಯ್ದುಕೊಳ್ಳುವ selective ಮಡಿವಂತಿಕೆಯಿದು.

ಕರ್ಮಠತನವೆನ್ನುವುದು ಧರ್ಮಕ್ಕೆ ಸಂಬಂಧಪಟ್ಟ ವಿಷಯವಲ್ಲ; ಅದು ಮನಸ್ಸಿಗೆ ಸಂಬಂಧಪಟ್ಟಿದ್ದು. ಒಂದಿಡೀ ಧರ್ಮದ ಎಲ್ಲರೂ ಮೂಲಭೂತವಾದಿಗಳಾಗಿರುವುದಿಲ್ಲ. ಆದರೆ, ಅವರು ತಮ್ಮ ತನವನ್ನು assert ಮಾಡಿಕೊಳ್ಳುವವರೂ ಆಗಿರುವುದಿಲ್ಲ. ಹಾಗಾಗೇ, ಅವರ ದನಿಯನ್ನು ಕರ್ಮಠರು ಬಹಳ ಸುಲಭವಾಗಿ ಮುಳುಗಿಸಿಬಿಡುತ್ತಾರೆ. ತಾವು ಹೇಳಿದ್ದೇ ತಮ್ಮ ಧರ್ಮದ ಸಾರ ಅನ್ನುವಂತೆ ಜಗತ್ತು ನಂಬುವ ಹಾಗೆ ಮಾಡುತ್ತಾರೆ. ಮುಸ್ಲಿ ವೈಯಕ್ತಿಕ ಕಾನೂನು ಮಂಡಳಿಗಳೂ ಭಜರಂಗಿಗಳೂ ತಾವೇ ತಮ್ಮ ಧರ್ಮದ ಅಕೃತ ಮುಖಗಳು ಅನ್ನುವಂತಾಡುತ್ತಾರೆ. ಅರ್ಥಹೀನ ಫತ್ವಾಗಳೂ ತಿಳಿಗೇಡಿ ಬಂದ್‌ಗಳೂ, ಬಂದ್ ಹೆಸರಿನಲ್ಲಿ ಧರ್ಮದಹನಗಳೂ ಸಂಭವಿಸುತ್ತವೆ.

ಇವತ್ತು ಅಯೋಧ್ಯೆ ಅನ್ನುವುದು ಒಂದು ರಕ್ತ ಸಿಕ್ತ ಸಮಸ್ಯೆಯಾಗಿರುವುದೂ ಇಂಥ ಕರ್ಮಠತನದಿಂದಲೇ, ರಾಜಕಾರಣಿಗಳ ಪಾಖಂಡಿತನದಿಂದಲೇ. ಯಾವತ್ತೋ ಬಗೆಹರಿದುಹೋಗಬಹುದಾಗಿದ್ದ-ಅಥವಾ, ಸಮಸ್ಯೆ ಅನ್ನುವ ಸ್ವರೂಪವನ್ನೇ ಪಡೆಯದೆ ನಿರುಮ್ಮಳವಾಗಿ ಇದ್ದು ಬಿಡಬಹುದಾಗಿದ್ದ- ವಿಷಯ ಇವತ್ತು ವ್ರಣವಾಗಿದೆ. ಮೊನ್ನೆ ನಡೆದ ಉಗ್ರಗಾಮಿಗಳ ದಾಳಿ ಅಯೋಧ್ಯೆಯ ಮಟ್ಟಿಗೆ ಇದು ಮೊದಲನೆಯದಿರಬಹುದು. ಆದರೆ, ಇದೇ ಕೊನೆಯದಂತೂ ಖಂಡಿತ ಇರಲಾರದು. ದೇವಸ್ಥಾನಗಳು-ಮಸೀದಿಗಳೇ ಕರ್ಮಠರ ಸಾಫ್ಟ್‌ಟಾರ್ಗೆಟ್‌ಗಳಾಗಿದ್ದರಿಂದ ಇಂಥ ದಾಳಿಗಳು ಇನ್ನು ಮುಂದೆ ಎಲ್ಲೆಡೆಯೂ ನಡೆಯಬಹುದು. ಇಂಡಿಯಾ-ಪಾಕಿಸ್ತಾನಗಳ ಸಮಸ್ತ ಗಡಿ ಸಮಸ್ಯೆಗಳೂ ಬಗೆಹರಿದರೂ ಕೂಡ, ಈ ಧಾರ್ಮಿಕ ಯುದ್ಧಗಳು ಕೊನೆಯಾಗುತ್ತವೆ ಅನ್ನುವ ನಂಬಿಕೆಯೇನೂ ಇಲ್ಲ. ಯಾಕೆಂದರೆ, ಕರ್ಮಠ ತನವೆನ್ನುವುದು ದೇಶ-ದೇಶಗಳ ನಡುವೆ ಇರುವ ಗೋಡೆಯಲ್ಲ, ಹೊಡೆದುರುಳಿಸುವುದಕ್ಕೆ.

ಈ ಅನಾಹುತಗಳು ತಪ್ಪಬೇಕಿದ್ದರೆ, ಧಾರ್ಮಿಕ ಗ್ರಂಥಗಳನ್ನು ಅಪಭ್ರಂಶಗೊಳಿಸಿ interpret ಮಾಡುವವರ ಅನಾಹುತಕಾರೀ ಧೋರಣೆಗಳು ಬದಲಾಗಬೇಕು. ಧರ್ಮ ಇರುವುದು ಮನುಷ್ಯನ ಬದುಕನ್ನು ಉತ್ತಮ ಗೊಳಿಸುವುದಕ್ಕೇ ಹೊರತು, ಅಸಹನೀಯಗೊಳಿಸುವುದಕ್ಕಲ್ಲ ಅನ್ನುವುದನ್ನು ನಾವು ಅರ್ಥ ಮಾಡಿಕೊಂಡು ಬಿಟ್ಟರೂ ಸಾಕು. ಅನಾಹುತಕಾರಿ ಧರ್ಮ ವ್ಯಾಖ್ಯಾನಗಳನ್ನೂ- ವ್ಯಾಖ್ಯಾನಿಗಳನ್ನೂ ಮೂಲೆಗೆಸೆಯಬಹುದು.

ಯಾಕೆಂದರೆ, ಯಾವ ಧರ್ಮವೂ ಜೀವವಿರೋಯಲ್ಲ. ಧರ್ಮವನ್ನು ತಮ್ಮ ಸ್ವತ್ತು ಮಾಡಿಕೊಂಡವರು ಮಾತ್ರ ಜೀವವಿರೋಗಳು. ಎರಡರ ನಡುವಿನ ವ್ಯತ್ಯಾಸ ನಮಗೆ ಗೊತ್ತಿರಬೇಕು.

ನಮ್ಮ ವಿಚಾರವಾದಿಗಳ ಮುಂದೆ ಭಯೋತ್ಪಾದನೆಯ ಪ್ರಶ್ನೆಯಿಡುತ್ತಾ...

ರವಿ ಬೆಳಗೆರೆ
ರವಿ ಬೆಳಗೆರೆ


ಒಬ್ಬ ಮುಸಲ್ಮಾನ ಯಾಕೆ ಉಗ್ರವಾದಿಯಾಗುತ್ತಾನೆ?

ಅದು ನಂತರದ ಪ್ರಶ್ನೆ. ಒಬ್ಬ ಮುಸಲ್ಮಾನ ಹೇಗೆ ಉಗ್ರವಾದಿಯಾಗುತ್ತಾನೆ?ಎಂಬುದು ತಕ್ಷಣಕ್ಕೆ ಉತ್ತರ ಹುಡುಕ ಬೇಕಾಗಿರುವ ಪ್ರಶ್ನೆ.

ನಾನು ತುಂಬ ಆರ್ಡಿನರಿಯಾದ, ತುಂಬ ಸಜ್ಜನರಾದ, ಸಭ್ಯರಾದ, ಸ್ನೇಹಪರರೂ ಆದ ಬಳ್ಳಾರಿಯ ಬಡ ಮುಸಲ್ಮಾನರ ಗಲ್ಲಿಗಳಲ್ಲಿ ಆಡಿ ಬೆಳೆದವನು. ಇವತ್ತಿಗೂ ನನ್ನ ಸ್ನೇಹ ವಲಯದಲ್ಲಿ, ನನ್ನ ನೇತೃತ್ವದ ಸಂಸ್ಥೆಗಳಲ್ಲಿ ಅನೇಕ ಮುಸಲ್ಮಾನರಿದ್ದಾರೆ. ಅವರನ್ನು ಜಾತಿಯ ಕಾರಣಕ್ಕೆ ದ್ವೇಷಿಸುವುದು ನನ್ನಿಂದ ಸಾಧ್ಯವಾಗಿಲ್ಲ, ಈ ತನಕ. ಯಾರನ್ನೂ ಜಾತಿಯ ಕಾರಣಕ್ಕೆ ಪ್ರೀತಿಸುವುದು ಅಥವಾ ದ್ವೇಷಿಸುವುದು ನನಗೆ ಸಾಧ್ಯವಿಲ್ಲ. ಹಾಗೆ ಮಾಡುವವರು ನನ್ನ ದೃಷ್ಟಿಯಲ್ಲಿ ಬಾಲಿಶ ಅನ್ನಿಸುತ್ತಾರೆ. ನಮ್ಮ ಸೋಷಲಿಸ್ಟರು, ವಿಚಾರವಾದಿಗಳೆನ್ನಿಸಿಕೊಂಡವರು ಬ್ರಾಹ್ಮಣರ ವಿರುದ್ಧ ಹೂಂಕರಿಸಿ, ಬೈದು, ಅವಹೇಳನ ಮಾಡುತ್ತಿದ್ದರೆ ಅದು stupidity ಅನ್ನಿಸುತ್ತದೆ. ಹಾಗೇನೇ, ಮುಸಲ್ಮಾನರನ್ನು ಯಾರಾದರೂ ಖಂಡಿಸಿ, ಹೀಯಾಳಿಸಿ ಮಾತನಾಡುತ್ತಿದ್ದರೆ ಅದೂ ಮೂರ್ಖತನ ಅನ್ನಿಸುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ`ಮುಸ್ಲಿಮರು ಅಲ್ಪ ಸಂಖ್ಯಾತರು. ಅವರಲ್ಲಿ insecurity ಇರುವುದು ಸಹಜ. ಆದ್ದರಿಂದಲೇ ತಮ್ಮ ಧರ್ಮ, ಭಾಷೆ, ಮಸೀದಿಗಳ ವಿಷಯ ಬಂದಾಗ ಅವರು ವ್ಯಗ್ರಗೊಂಡು ದಂಗೆಯೇಳುತ್ತಾರೆ. ಅದು ಸಹಜ. ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು' ಅಂತ ಇವೇ ಸೋಷಲಿಸ್ಟ್ ಶಿಖಾಮಣಿಗಳು ಮಾತನಾಡಿದಾಗ ಇವರು ಬೌದ್ಧಿಕವಾಗಿ ಬೆಳೆದೇ ಇಲ್ಲ ಅನ್ನಿಸುತ್ತದೆ.

ನಾನು ಯಾವತ್ತೂ ರಾಜಕಾರಣಿಯ ಧಾಟಿಯಲ್ಲಿ ಬರೆದವನಲ್ಲ, ಮಾತನಾಡಿದವನಲ್ಲ. ಮನುಷ್ಯನ ಸಂಕಟ ನನಗೆ ಅರ್ಥವಾದಂತೆಯೇ ಅವನ ಸಣ್ಣತನ, ಧೂರ್ತತೆಗಳೂ ಅರ್ಥವಾಗುತ್ತವೆ. ಇವತ್ತು ಬೆಂಗಳೂರಿನ ಶಿವಾಜಿನಗರದ ಒಬ್ಬ ಹುಡುಗ, ಆಂಧ್ರದ ನಲ್ಗೊಂಡ ಜಿಲ್ಲೆಯ ಒಬ್ಬ ಯುವಕ, ಹೈದರಾಬಾದಿನ ಒಬ್ಬ ಗೃಹಸ್ಥ- ಭಯೋತ್ಪಾದಕರಾಗಿ ಪರಿವರ್ತಿತರಾಗಿ ದೇಶದ ಮೇಲೆ ಬಂದೂಕು ತಿರುವುತ್ತಾರೆಂದರೆ- ಅವರದು ಯಾವುದೇ ಜಾತಿಯಿರಲಿ, ಅವರು ಅಲ್ಪ ಸಂಖ್ಯಾತರೇ ಇರಲಿ, ಮಹಾನ್‌ಧಾರ್ಮಿಕರೇ ಇರಲಿ- ಇವರನ್ನು ಗೋಡೆಗೆ ನಿಲ್ಲಿಸಿ ಗುಂಡಿಕ್ಕಿ ಕೊಲ್ಲಬೇಕು ಅಂತಲೇ ವಾದಿಸುತ್ತೇನೆ. ಹಾಗಂತ, ಈ ಮುಸಲ್ಮಾನರೆಲ್ಲಾ ಹೀಗೇ ಕಣ್ರೀ ಅನ್ನುವುದೂ ತಪ್ಪು.`ಮುಸಲ್ಮಾನರನ್ನು ಎಲ್ಲರೂ ಅನುಮಾನದಿಂದ ನೋಡುತ್ತಿದ್ದಾರೇ! ಅವರನ್ನು ರಕ್ಷಿಸಬೇಕೂ!' ಅಂತ ವಿಚಾರವಾದಿಗಳು ಬಾಯಿ ಬಡಿದುಕೊಳ್ಳುವುದೂ ತಪ್ಪೇ.

ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನ shoot outನ ನಂತರ ಯಾವ ಶಿವಾಜಿನಗರದ ಮುಸ್ಲಿಮನೂ ಭೀತಗೊಂಡು, ತತ್ತರಿಸುತ್ತಾ, ಘಳಿಗೆಗೊಮ್ಮೆ ಹಿಂದಕ್ಕೂ ಮುಂದಕ್ಕೂ ನೋಡುತ್ತ ಓಡಾಡುತ್ತಿಲ್ಲ. ಆ ಕರ್ಮ ಬಂದಿರುವುದು, ಬೆಂಗಳೂರಿಗರಿಗೆ! ಮಸೀದಿ ಕೆಡವಿದ ಕೂಡಲೆ `ಹಿಂದೂಗಳು ಹೀಗೆ ಮಾಡಬಾರದಿತ್ತು' ಅಂತ ವಿಚಾರವಾದಿಗಳು ಹೇಳಿಕೆ ಕೊಟ್ಟರು. ದಸರೆಗೆ ದೀಪ ಹಚ್ಚಿದರೆ `ಇದು ಪುರೋಹಿತಶಾಹಿ ಮನಸ್ಸು' ಅಂತ ಬರಗೂರು ರಾಮಚಂದ್ರಪ್ಪನವರು ತಿಥಿ ಮಾಡಿಸೋ ಬ್ರಾಹ್ಮಣರಿಂದ ಹಿಡಿದು ಎಲ್ಲರನ್ನೂ ಬೈದರು. ಅಂಥ ಶ್ರೇಷ್ಠ ಸಂಸ್ಥೆಯಾದ IISc ಯೊಳಕ್ಕೆ ಎ.ಕೆ.೫೬ಹಿಡಿದುಕೊಂಡು ನುಗ್ಗಿ ಶ್ರೇಷ್ಠ ವಿಜ್ಞಾನಿಯೊಬ್ಬನನ್ನು ಕೊಂದು ಹಾಕಿದರೆ ಮುಸ್ಲಿಂ ಉಗ್ರಗಾಮಿಯ `ಮೌಲ್ವಿ' ಮನಸ್ಸನ್ನು ಯಾವನಾದರೂ ವಿಚಾರವಾದಿ ಖಂಡಿಸಿದನಾ ಕೇಳಿ? ಇವರು ಹಗಲು ವೇಷದ ಜನ. ಬೈಸಿಕೊಂಡರೆ ಬಯ್ಯುವ, ಕೈಲಾಗದವರನ್ನು ಖಂಡಿಸುವ, ಸುಮ್ಮನಿರುವವರನ್ನು ದಂಡಿಸುವ ಖೋಟಾ ಕ್ರಾಂತಿಕಾರಿಗಳನ್ನು ನಾವು ಗೌರವಿಸಿಕೊಂಡು ಬಂದಿದ್ದೇವೆ.`ಯಾರೋ ಮುಸ್ಲಿಂ ಉಗ್ರರು ಮಾಡಿರಬಹುದಾದ ಕೆಲಸವಿದು. ಮುಸ್ಲಿಮರೇ ಮಾಡಿದ್ದಾರೆಂಬುದಕ್ಕೆ ಇನ್ನೂ ಸಾಕ್ಷ್ಯವಿಲ್ಲ. ಮುಸ್ಲಿಂ ಉಗ್ರರು ಮಾಡಿದ್ದರೂ ಮಾಡಿರಬಹುದು. ಅಂದ ಮಾತ್ರಕ್ಕೆ ನಾವು ಮುಸ್ಲಿಮರೆಲ್ಲರನ್ನೂ ಅನುಮಾನದಿಂದ ನೋಡಬಾರದು' ಅಂತ ಬರೆಯುತ್ತಾರೆ. `ಇದು ಕರ್ಮಠ, ಜಾತ್ಯಂಧ, ಮುಸ್ಲಿಂ ಮೌಲ್ವಿ ಮನಸುಗಳ, ದೇಶದ್ರೋಹಿಗಳ, ಪಾಖಂಡಿಗಳ ಕೆಲಸ' ಅಂತ ಮಾತನಾಡುವ ಧೈರ್ಯ ಇವರಿಗಿಲ್ಲ.

`ಛೆಛೆ, ನಾವು ಮುಸ್ಲಿಮರಲ್ಲಿರುವ ಪುರೋಹಿತಶಾಹಿಯನ್ನೂ ಖಂಡಿಸುತ್ತೇವೆ. ನಮ್ಮ ಅರ್ಥದಲ್ಲಿ ಪುರೋಹಿತಶಾಹಿ ಅಂದ್ರೆ, ಕೇವಲ ಬ್ರಾಹ್ಮಣರು ಅಂತ ಅಂದುಕೋಬೇಡಿ' ಎಂದು ಮತ್ತೆ ವಿಚಾರವಾದಿಗಳು ಹಗ್ಗ ಹೊಸೆಯುತ್ತಾರೆ. ನೆಮ್ಮದಿಯಾಗಿದ್ದ ಬೆಂಗಳೂರಿನ ಸ್ವಾಸ್ಥ್ಯವನ್ನು ಹಾಳುಗೆಡವಿದ ಮುಸ್ಲಿಂ ಭಯೋತ್ಪಾದಕರ ವಿರುದ್ಧ ಒಬ್ಬ ಬುದ್ಧಿಜೀವಿ, ಒಂದು ಸಾಂಕೇತಿಕ ಉಪವಾಸ ಮಾಡಿದನಾ?ಅದೇ ಒಂದು ಮಸೀದಿಯ ಗೋಡೆ ನಡುಗಲಿ?ಈ ಮಂದಿ ಯಾವ ಪರಿ ಒಂದು ಜಾತಿಯ ಸೌಖ್ಯದ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೋ ನೋಡುತ್ತಿರಿ.

ಯಾವುದೇ ಧರ್ಮ, ಅದು ಎಷ್ಟೇ ಮಹತ್ವಪೂರ್ಣದ್ದಾಗಿರಲಿ : ಅದರ ಅನುಯಾಯಿಗಳು ಅರ್ಥಹೀನ ಸ್ವೇಚ್ಛಾಚಾರಕ್ಕೆ, ಉಗ್ರವಾದಕ್ಕೆ, ಹಿಂಸಾಚಾರಕ್ಕೆ ಇಳಿದಾಗ ಅದನ್ನು ಖಂಡಿಸಬೇಕು. ಆ ಧರ್ಮದ ಕಿಡಿಗೇಡಿಗಳನ್ನು ಬುಡಸಮೇತ ಕಿತ್ತು ಚೆಲ್ಲಬೇಕು. `ಧರ್ಮಕ್ಕೆ ಆಪತ್ತು ಬಂದಾಗ ಅದಕ್ಕಾಗಿ ಹೋರಾಟ ಮಾಡು' ಅಂತ ಹೇಳಿರುವುದೇ ನಮ್ಮ ಸಮರ್ಥನೆ ಎಂದು ಯಾರಾದರೂ ಹೇಳಿದರೆ,`ದೇಶಕ್ಕೆ ಆಪತ್ತು ಬಂದಾದ ಕೆಡವಿ ಕೊಲ್ಲು ಅಂತ ನಮ್ಮ ಸಂವಿಧಾನ ಹೇಳಿದೆ' ಎಂಬ ಉತ್ತರ ನೀಡಬೇಕು. ಅಂತಹ ಒಬ್ಬೇ ಒಬ್ಬ ನಾಯಕ, ಬುದ್ಧಿಜೀವಿ, ವಿಚಾರ ವಾದಿ- ಹತ್ತಿರದಲ್ಲೆಲ್ಲಾದರೂ ಕಾಣಿಸುತ್ತಾನಾ? ಕಂಡರೆ ಹೇಳಿ. ಕಡೇಪಕ್ಷ, ಮುಸ್ಲಿಂ ಸಮಾಜದ ಹಿರಿಯರಲ್ಲಾದರೂ ಕೆಲವರು ಪ್ರಜ್ಞಾವಂತರು ಈ ಉಗ್ರವಾದಿ ಮಾರ್ಗವನ್ನು ಖಂಡಿಸಿ ಹೇಳಿಕೆ ಕೊಟ್ಟರಾ?ನಾನು ಗಮನಿಸಿಲ್ಲ.

ಇವತ್ತು ಓಟುಗಳಿಗಾಗಿ, ಜನಪ್ರಿಯತೆಗಾಗಿ, ಖೊಟ್ಟಿ ಸಿದ್ಧಾಂತಗಳಿಗಾಗಿ ಒಂದೇ ಒಂದು ಉಗ್ರವಾದಿ ಚಟುವಟಿಕೆಯನ್ನು ಪ್ರತಿಭಟಿಸದೆ ಸಹಿಸಿಕೊಂಡರೆ, ನಾಳೆ ಇದಕ್ಕಿಂತ ದೊಡ್ಡ ಮೆನೇಸ್ ಇನ್ನೊಂದಿರಲಾರದು. ಸಿಖ್ಖರ ಉಗ್ರಗಾಮಿತ್ವವನ್ನು ಆರಂಭದಲ್ಲಿ ಸಹಿಸಿಕೊಂಡ ಸಿಖ್ಖರೇ ಕಡೆಗೆ ನಾಶವಾಗಿ ಹೋದರು. `ಖಲಿಸ್ತಾನ್'ಯಾರಿಗೂ ಬೇಡದ ಚಳವಳಿಯಾಗಿತ್ತು. ಕಾಶ್ಮೀರದ ಜನ ಇವತ್ತು ಉಗ್ರರನ್ನು ಶಪಿಸಿದಷ್ಟು ಮತ್ಯಾರನ್ನೂ ಶಪಿಸುವುದಿಲ್ಲ. ಮೊದಲ ಸುತ್ತಿನ ಉಗ್ರರನ್ನು ಮನೆಗೆ ಕರೆದು ಇಟ್ಟುಕೊಂಡ ಅವಿವೇಕಿಗಳು ಅವರೇ. ನಾವು ಇತಿಹಾಸದಿಂದ ಪಾಠ ಕಲಿಯದಿದ್ದರೆ ನಾಶವಾಗಿ ಹೋದೇವು. ಹಿಂದೂ ಸನ್ಯಾಸಿ ಎಂಬ ಕಾರಣಕ್ಕೆ ಸಾಯಿಬಾಬಾನ ಸಲಿಂಗ ಚೇಷ್ಟೆ, ಬೂದಿ ವಂಚನೆ, ಖೊಟ್ಟಿ ಪವಾಡಗಳನ್ನು ಬೆಂಬಲಿಸುವವರಿಗೂ, ಅಲ್ಪ ಸಂಖ್ಯಾತರೆಂಬ ಕಾರಣಕ್ಕೆ ಕಿಡಿಗೇಡಿ ಮೌಲ್ವಿಗಳನ್ನು ಸಹಿಸುವುದಕ್ಕೂ ಅಸಲು ವ್ಯತ್ಯಾಸವಿಲ್ಲ.

ಇಷ್ಟಕ್ಕೂ ಒಬ್ಬ ಸಜ್ಜನ ಮುಸಲ್ಮಾನ ಹೇಗೆ ಭಯೋತ್ಪಾದಕನಾಗುತ್ತಾನೆ ಗೊತ್ತೆ? ಅದೊಂದು ವ್ಯವಸ್ಥಿತ ಪ್ರಕ್ರಿಯೆ. ಇಂದು ಅನೇಕ ಮುಸ್ಲಿಂ ಧರ್ಮ ಮಂದಿರಗಳಲ್ಲಿರುವ ಚಿಕ್ಕ ಮಟ್ಟದ ಧರ್ಮಗುರುಗಳು, ಮೌಲ್ವಿಗಳು, ಮದನಿಗಳು ಸ್ಥಳೀಯರಲ್ಲ. ಕೇಳಿದರೆ ಲಖನೌದವರು ಅನ್ನುತ್ತಾರೆ. ಅವರು ಬಾಂಗ್ಲಾದೇಶಿಗಳಾಗಿದ್ದರೆ ಗೊತ್ತು ಆಗುವುದಿಲ್ಲ. ಪ್ರತಿನಿತ್ಯ ನಮಾಜಿಗೆ ಬರುವ ಸಜ್ಜನ ಮುಸ್ಲಿಂ ಯುವಕನೊಬ್ಬನನ್ನು ಆ ಯುವಕನಿಗೆ ಧರ್ಮ-ದೇವರು-ನಂಬಿಕೆ-ನಮಾಜು ಇಷ್ಟು ಬಿಟ್ಟರೆ ಬೇರೆ ಯಾವ ವಿಚಾರವೂ ಗೊತ್ತಿರುವುದಿಲ್ಲ. ಅವನು ಅಪ್ಪಟ ನಿರುಪದ್ರವಿ. ನಮಗೆಲ್ಲ ಇರುವಂತೆಯೇ ಅವನಿಗೂ ಮನೆಯಲ್ಲಿ ಕಷ್ಟ-ಕಾರ್ಪಣ್ಯ, ನಿರುದ್ಯೋಗ, ತಂಗಿಯರ ಮದುವೆ ಮುಂತಾದ ಜಂಜಡಗಳಿರುತ್ತದೆ. ಅಂಥ ಒಬ್ಬ ಯುವಕನನ್ನು ಗುರುತಿಸಿ, ಮಾತನಾಡಿಸಿ, ಯಾವಾಗಾದರೊಮ್ಮೆ ಊರಿಗೆ ಬರುವ ಧರ್ಮಪ್ರಚಾರಕನಿಗೆ ಅವನನ್ನು ಪರಿಚಯಿಸುತ್ತಾನೆ ಬಾಂಗ್ಲಾದೇಶಿ. ಅಲ್ಲಿಂದ ರಿಕ್ರೂಟ್‌ಮೆಂಟ್ ಪ್ರಕ್ರಿಯೆ ಆರಂಭವಾಗುತ್ತದೆ. ಧರ್ಮ ಪ್ರಚಾರಕ ತಲೆ ತೊಳೆಯುತ್ತಾನೆ. ಧರ್ಮ ಅಪಾಯದಲ್ಲಿದೆ ಅಂತಾನೆ. ಇಸ್ರೇಲಿಗಳ ಕುರಿತು ಹೇಳುತ್ತಾನೆ. ಅಮೆರಿಕನ್ನರನ್ನು ಬಯ್ಯುತ್ತಾನೆ. ಭಾರತಿಯರಿನ್ನೇನು? ಅನ್ನುತ್ತಾನೆ. ಗುಜರಾತದ ಕತೆ ಹೇಳುತ್ತಾನೆ. ಒಂದು ಸಲ ನೀನೇ ಸೌದಿ ಅರೇಬಿಯಾಕ್ಕೆ ಹೋಗಿ ನೋಡಿಕೊಂಡು ಬಾ : ಇಡೀ ವಿಶ್ವ ಹಾಗಾಗಬೇಕು ಅನ್ನುತ್ತಾನೆ. ಆಮೇಲಿಂದ ವೀಸಾ -ಪಾಸ್‌ಪೋರ್ಟು ಯಾವುದೂ ತಡವಾಗುವುದಿಲ್ಲ. ಅಲ್ಲಿಂದ ಹಿಂತಿರುಗುವ ಹೊತ್ತಿಗೆ ಈ ಸಜ್ಜನ ಮುಸಲ್ಮಾನ ಆಲ್ಮೋಸ್ಟ್ ಉಗ್ರವಾದಿಯೇ!

ಶಿವಾಜಿನಗರ, ಆಂಧ್ರದ ನಲ್ಗೊಂಡ, ಕರಾವಳಿಯ ಮಂಗಳೂರು, ಕೇರಳದ ಚಿಕ್ಕಪುಟ್ಟ ಹಳ್ಳಿಗಳು, ಚೆನ್ನೈನಂಥ `ಇಂಗ್ಲಿಷರಿಗೆ ಹುಟ್ಟಿದ' ಊರಿನಲ್ಲೂ ಭಯೋತ್ಪಾದಕರು ತಯಾರಾಗುತ್ತಾರೆಂದರೆ- ಅವರು ತಯಾರಾಗುವುದು ಹೀಗೇ. ಇಸ್ರೇಲಿಗಳ ವಿರುದ್ಧದ ಅವರ ಹೋರಾಟ ತುಂಬ ಸಮರ್ಥನೀಯವಾಗಿರಬಹುದು. ಅಮೆರಿಕನ್ನರ ವಿರುದ್ಧ ಸೌದಿಗಳ ಅಸಹನೆ ಕೂಡ ಸಮರ್ಥನೀಯವೇ ಆಗಿರಬಹುದು. ಆದರೆ ರಕ್ತದಾಹಕ್ಕೆ ಬಿದ್ದವರಿಗೆ ಕ್ರಮೇಣ ಎಲ್ಲವೂ ಅವರಂತೆಯೇ ಆಗಬೇಕೆಂಬ ಹಟ ಹುಟ್ಟುತ್ತದೆ. ಕೈಲಿರುವುದು ಕೇವಲ ಸುತ್ತಿಗೆ ಅಂತಾದಾಗ, ಸುತ್ತಲಿನದೆಲ್ಲ ಮೊಳೆ ಅಂತಲೇ ಅನ್ನಿಸತೊಡಗುತ್ತದೆ. ಇಲ್ಲದಿದ್ದರೆ, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಕೊಲೆಯಾದ ಪ್ರೊಫೆಸರ್ ಪುರಿ, ಯಾವತ್ತು ಮುಸ್ಲಿಂ ವಿರೋ ಕೆಲಸ ಮಾಡಿದ್ದ? ಆತನಿಗೆ ಎಷ್ಟು ಜನ ಮುಸಲ್ಮಾನ ಮಿತ್ರರಿದ್ದರೋ?

ಮುಸ್ಲಿಮರಲ್ಲದವರಿಗೂ ಇಸ್ಲಾಂ ಒಂದು ವೈಜ್ಞಾನಿಕ ಧರ್ಮ ಅನ್ನಿಸಬಹುದು. ಖುರಾನ್ ನಮ್ಮ ಅಕಾಡೆಮಿಕ್ ಆಸಕ್ತಿಗಳನ್ನು ಕೆರಳಿಸಬಹುದು. ಇಸ್ಲಾಮಿಕ್ law ಗಿಂತ ಆಸಕ್ತಿಕರ ಸಬ್ಜೆಕ್ಟು ಬೇಕೆ? ಇದೆಲ್ಲದರ ಜೊತೆಯಲ್ಲೇ ನಾವು ನಮ್ಮ ನಡುವಿನ ಮುಸ್ಲಿಮರು ಸುಶಿಕ್ಷಿತರಾಗಲಿ, ಶ್ರೀಮಂತರಾಗಲಿ, ಕ್ರೀಡಾಪಟುಗಳಾಗಲಿ, ವಿಜ್ಞಾನಿಗಳಾಗಲಿ, ಸಾಹಿತಿಗಳಾಗಲಿ, ರಾಜಕಾರಣಿಗಳಾಗಲಿ- ಅಂತ ಬಯಸುತ್ತೇವೆ. ಅವರನ್ನು ಕೇವಲ ಭಾರತೀಯರನ್ನಾಗಿ ನೋಡುತ್ತೇವೆ. ಮುಸ್ಲಿಮರನ್ನು ನಾವು ನೋಡಿಕೊಂಡಷ್ಟು ಚೆನ್ನಾಗಿ ಚೀನಾ, ರಷಿಯಾಗಳು ಕೂಡ ನೋಡಿಕೊಂಡಿಲ್ಲ. ಅಷ್ಟೇಕೆ, ಪಾಕಿಸ್ತಾನಕ್ಕಿಂತ ಭಾರತದಲ್ಲಿ ಮುಸಲ್ಮಾನರು ಹೆಚ್ಚು ಸಂತೋಷವಾಗಿದ್ದಾರೆ. ಕೂಳಿಗೆ ಗತಿಯಿಲ್ಲದ ಸುಮಾರು ಎರಡು ಕೋಟಿ ಬಾಂಗ್ಲಾದೇಶೀಯರಿಗೆ ಭಾರತ ಇವತ್ತಿಗೂ ಆಶ್ರಯ ನೀಡಿದೆ. ಮುಂಬಯಿ ಮತ್ತು ಕಲ್ಕತ್ತಾಗಳಲ್ಲಿ ಅಷ್ಟೂ ಟ್ಯಾಕ್ಸಿ ಡ್ರೈವರುಗಳು ಬಾಂಗ್ಲಾದೇಶೀಯರು. ಅವರ ಕಳ್ಳ ಓಟುಗಳಿಗಾಗಿ ನಮ್ಮ ರಾಜಕಾರಣಿಗಳು ಅವರನ್ನು ಸಹಿಸಿಕೊಂಡರು. ಬಾಂಗ್ಲಾದೇಶಕ್ಕೆ ನಾವು ಮಾಡಿದ ಸೈನಿಕ ಸಹಾಯವನ್ನು ಆ ದೇಶ ಶತಶತಮಾನ ಕಳೆದರೂ ವಾಪಸು ಮರಳಿಸಲಾರದು.

ಆದರೆ ಆದದ್ದೇನು? ಬಾಂಗ್ಲಾದಿಂದ ಹೊರಟ ವಿದ್ರೋಹದ, ದೇಶದ್ರೋಹದ ಬಂದೂಕು ಬೆಂಗಳೂರಿನ ತನಕ ತಲುಪಿತು. ಇಲ್ಲಿನ ಅವಿವೇಕಿಗಳು ಕೆಲವರು ವಿನಾಕಾರಣ ದೇಶದ್ರೋಹಿಗಳಾದರು. ರಸ್ತೆ ಪಕ್ಕದಲ್ಲಿ ಅವರ ಮಸೀದಿ ಕಾಣಿಸಿದರೆ,`ಗಾಡೀನ ಹಾರ್ನ್ ಮಾಡಿ ಅವರ ಮನಸು ಕೆಡಿಸುವುದು ಬೇಡ' ಅಂತ ಯೋಚಿಸಿ, ಅವರಿಗೆ ಗೌರವಕೊಟ್ಟು ಸದ್ದಿಲ್ಲದೆ ಮುಂದಕ್ಕೆ ಹೋಗುವ ಸಭ್ಯ ಬೆಂಗಳೂರಿಗನ ಎದೆಗೇ ಗುಂಡು ಬಿದ್ದಿದೆ.

ಸುಮ್ಮನಿರು ಅಂದರೆ, ಇನ್ನೆಷ್ಟು ದಿನ?

Saturday, July 29, 2006

`ಡ ವಿನ್ಸಿ ಕೋಡ್'ನಲ್ಲಿ ಕಳಚಿಬಿದ್ದ ನಮ್ಮ ಕೀರ್ತಿ ಕೋಡು!

ವಿಶ್ವೇಶ್ವರ ಭಟ್
ವಿಶ್ವೇಶ್ವರ ಭಟ್:



ಇಂಥ ವಿಚಿತ್ರಗಳು, ತಿರಸಟ್ಟುಗಳು ನಡೆಯೋದು ನಮ್ಮ ದೇಶದಲ್ಲಿ ಮಾತ್ರ. ಈ ವಿಷಯದಲ್ಲಿ ನಮ್ಮನ್ನು ಮೀರಿಸುವವರು ಸದ್ಯಕ್ಕೆ ಯಾರು ಇಲ್ಲವೆಂಬುದು ನನ್ನ ಭಾವನೆ. ಅದೆಂಥ ದೇಶ ನಮ್ಮದು, ಇಲ್ಲಿ ಯಾವುದೂ ವಿವಾದಗಳಿಲ್ಲದೇ ಮೋಕಳೀಕ್ ಆಗುವುದಿಲ್ಲ.

`ಡ ವಿನ್ಸಿ ಕೋಡ್' ಚಿತ್ರದ ಸುತ್ತ ಕವಿದಿರುವ ವಿವಾದವನ್ನು ನೀವು ಗಮನಿಸುತ್ತಿರಬೇಕು. ಇದು ಚಿತ್ರವಾಗುವುದಕ್ಕಿಂತ ಮೊದಲೇ, ಇದೇ ಹೆಸರಿನಲ್ಲಿ ಕಾದಂಬರಿಯಾಗಿತ್ತು. ಮೂರು ವರ್ಷಗಳ ಹಿಂದೆಯೇ ಬಿಡುಗಡೆಯಾಗಿತ್ತು. ಈ ಕೃತಿ ೪೪ ಭಾಷೆಗಳಿಗೆ ಅನುವಾದಗೊಂಡಿತ್ತು. ಈ ಕಾದಂಬರಿ ಜನಪ್ರಿಯವಾಗಬಹುದೆಂದು ಅದನ್ನು ಬರೆದ ೪೨ವರ್ಷದ ಅಮೆರಿಕದ ಡಾನ್ ಬ್ರೌನ್ ಕನಸುಮನಸಿನಲ್ಲೂ ಊಹಿಸಿರಲಿಲ್ಲ. `ಡಿಜಿಟಲ್ ಫೋರ್‌ಟ್ರೆಸ್' ಸೇರಿದಂತೆ ಆತನ ಮೊದಲ ಮೂರು ಕಾದಂಬರಿಗಳ ಹತ್ತು ಸಾವಿರ ಪ್ರತಿಗಳು ಸಹ ಮಾರಾಟವಾಗಿರಲಿಲ್ಲ. ಯಾವಾಗ `ದ ವಿನ್ಸಿ ಕೋಡ್' ಪ್ರಕಟವಾಯಿತೋ, ಅದು ಮೊದಲ ವಾರವೇ `ನ್ಯೂಯಾರ್ಕ್ ಟೈಮ್ಸ್'ಪತ್ರಿಕೆಯ ಟಾಪ್ ಟೆನ್ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆಯಿತೋ ಡಾನ್ ಬ್ರೌನ್‌ನ ದೆಸೆ ತಿರುಗಿ ಹೋಯಿತು. ಟೈಮ್ ಮ್ಯಾಗಜಿನ್ ಆತನನ್ನು ವಿಶ್ವದ ನೂರು ಪ್ರಭಾವಿ ವ್ಯಕ್ತಿಗಳಲ್ಲೊಬ್ಬ ಎಂದು ಹೇಳಿದ್ದು ಪುಸ್ತಕ ಮಾರಾಟಕ್ಕೆ ಮತ್ತಷ್ಟು ಇಂಬು ನೀಡಿತು.


ಹಾಗೆಂದು `ಡ ವಿನ್ಸಿ ಕೋಡ್' ಅಂಥ ಹೋಳಿಕೊಳ್ಳುವಂಥ ಕಾದಂಬರಿಯೇನೂ ಆಗಿರಲಿಲ್ಲ. ಭಾಷೆ, ನಿರೂಪಣೆ, ಶೈಲಿಯ ದೃಷ್ಟಿಯಿಂದಲೂ ಅದ್ಭುತವೆನಿಸುವ ಕೃತಿಯೂ ಆಗಿರಲಿಲ್ಲ. ಪತ್ತೇದಾರಿ-ಥ್ರಿಲ್ಲರ್-ಸಂಚು- ಈ ಮೂರರ ಮಿಶ್ರಣವನ್ನು ಹೊಂದಿದ ಈ ಕಾದಂಬರಿ, ಗಟ್ಟಿ ವಿಮರ್ಶಕರಿಂದ ಪ್ರಶಂಸೆಗೆ ಒಳಗಾದ ಕೃತಿಯೂ ಆಗಿರಲಿಲ್ಲ. ಆದರೆ ಇವ್ಯಾವೂ ಮಾರಾಟದ ಮೇಲೆ ಪ್ರಭಾವ ಬೀರಲಿಲ್ಲ. ಬಿಡುಗಡೆಯಾಗಿ ಎರಡು ವರ್ಷಗಳ ನಂತರವೂ ಅದರ ಜನಪ್ರಿಯತೆಗೆ ಧಕ್ಕೆಯಾಗಲಿಲ್ಲ. ಹಾಗೆಂದು ಈ ಕೃತಿ ಎಲ್ಲೂ ಸಣ್ಣ ಪುಟ್ಟ ವಿವಾದವನ್ನು ಹುಟ್ಟು ಹಾಕಲಿಲ್ಲ. ಹಾಗೆ ನೋಡಿದರೆ `ಡ ವಿನ್ಸಿ ಕೋಡ್'ನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ.

ಆದರೆ ಯಾವಾಗ ಈ ಕಾದಂಬರಿಯನ್ನು ಆಧರಿಸಿ ನಿರ್ದೇಶಕ ರಾನ್ ಹೋವರ್ಡ್ ಅದೇ ಹೆಸರಿನಲ್ಲಿ ಸಿನಿಮಾ ಮಾಡಿದನೋ, ಶುರುವಾಯಿತು ನೋಡಿ ವಿವಾದ. ಈ ಚಿತ್ರವನ್ನು ನಿಷೇಸಬೇಕು, ಏಸುವಿಗೆ ಅವಮಾನ ಮಾಡಲಾಗಿದೆ, ಕ್ರಿಶ್ಚಿಯನ್ ಧರ್ಮದ ಅವಹೇಳನ ಮಾಡಲಾಗಿದೆ, ಡಾನ್ ಬ್ರೌನ್‌ನನ್ನು ಮುಗಿಸಿ, ಕಾದಂಬರಿಯನ್ನು ಸುಟ್ಟು ಹಾಕಿ ಎಂಬ ಮಾತುಗಳು ಕೇಳಿಬರಲಾರಂಭಿಸಿದವು. ಆಸ್ಕರ್ ಪ್ರಶಸ್ತಿ ಪುರಸ್ಕೃತ ಟಾಮ್ ಹ್ಯಾಂಕ್ಸ್ ಅಭಿನಯದ ಈ ಚಿತ್ರ ಬಿಡುಗಡೆಯಾದ ಮೂರು ದಿನಗಳಲ್ಲಿ ವಿಶ್ವದೆಲ್ಲೆಡೆ ಪ್ರದರ್ಶನದಿಂದ ೨೨೪ ದಶಲಕ್ಷ ಡಾಲರ್ ದಾಖಲೆಯ ಹಣ ಗಳಿಸಿತು. ಇದು ಈ ಕತೆಯ ಒಂದು ಘಟ್ಟ.

ಈ ಕತೆ ವಿವಾದಕ್ಕೆ ತಿರುಗಲು ಕಾರಣಗಳೇನೆಂಬ ಇನ್ನೊಂದು ಘಟ್ಟವನ್ನು ಗಮನಿಸೋಣ. ಅಷ್ಟಕ್ಕೂ ಈ ಕಾದಂಬರಿ-ಚಿತ್ರದಲ್ಲಿ ಇರುವುದಾದರೂ ಏನು? ಪ್ಯಾರಿಸ್‌ನ ಪ್ರಸಿದ್ಧ ಲಾವ್ರ್ ಮ್ಯೂಸಿಯಂನ ಕ್ಯೂರೇಟರ್ ಜಾಕ್ ಸುನೀರ್ ಅನುಮಾನಾಸ್ಪದವಾಗಿ ಹತ್ಯೆಗೀಡಾದಾಗ ಹಾರ್ವರ್ಡ್ ವಿಶ್ವವಿದ್ಯಾಲಯದ ಧಾರ್ಮಿಕ ಸಂಕೇತಶಾಸ್ತ್ರದ ಪ್ರಾಧ್ಯಾಪಕ ಪ್ರೊ. ರಾಬರ್ಡ್ ಲ್ಯಾಂಗ್‌ಡನ್‌ನನ್ನು ಈ ಕೊಲೆ ರಹಸ್ಯ ಭೇದಿಸುವಂತೆ ಕರೆಸಲಾಗುತ್ತದೆ. ಸುನೀರ್ ಮೃತದೇಹ ಮ್ಯೂಸಿಯಂನಲ್ಲಿ ನಗ್ನವಾಗಿ ಬಿದ್ದಿರುತ್ತದೆ. ಅದು ಖ್ಯಾತ ಕಲಾವಿದ ಲಿಯೋನಾರ್ಡೋ ಡಾ ವಿನ್ಸಿಯ ಕಲಾಕೃತಿ `ವಿಟ್ರುವಿಯನ್ ಮ್ಯಾನ್'ರೀತಿಯಂತೆ ಕಾಣುತ್ತದೆ. ಈ ಚಿತ್ರದಲ್ಲಿ ದೇಹದ ಮೇಲ್ಭಾಗ ಹಾಗೂ ಕೆಳಭಾಗದಲ್ಲಿ ಕೆಲವು ಸಂಕೇತಗಳು, ಸಂದೇಶಗಳಿರುತ್ತವೆ. ವಿನ್ಸಿಯ ಪ್ರಸಿದ್ಧ ಕಲಾಕೃತಿಗಳಾದ `ಮೊನಾಲಿಸಾ'ಹಾಗೂ `ಲಾಸ್ಟ್ ಸಪ್ಟರ್'ನಲ್ಲಿ ಸಹ ಅಲ್ಲಲ್ಲಿ ಹುದುಗಿದ ಸಂದೇಶಗಳಿರುವಂತೆ ಈ ಕೃತಿಯಲ್ಲೂ ಅದು ಇದ್ದಿರಬಹುದೆಂದು ಭಾವಿಸಲಾಗುತ್ತದೆ. ಅನಂತರ ಇದೇ ರಹಸ್ಯ ಭೇದಿಸಲು ಸಹಾಯಕವಾಗುತ್ತದೆ.


ಅಲ್ಲದೇ ಈ ಕಾದಂಬರಿಯಲ್ಲಿ ಏಸುಗೆ ಸಂಬಂಸಿದ ಕೆಲವು ಉಲ್ಲೇಖಗಳು ವಿವಾದಕ್ಕೆ ಮತ್ತಷ್ಟು ಕಾವನ್ನು ಕೊಡುತ್ತವೆ. ಮೇರಿ ಮ್ಯಾಗ್ಡಲಿನ್ ಎಂಬ ವೇಶ್ಯೆಯೊಂದಿಗೆ ಏಸುವಿಗೆ ದೈಹಿಕ ಸಂಬಂಧ ಇತ್ತು ಹಾಗೂ ಇವರಿಬ್ಬರಿಗೂ ಒಬ್ಬ ಹೆಣ್ಣು ಮಗಳು ಹುಟ್ಟಿದಳು. ಈಕೆಗೆ ಹುಟ್ಟಿದ ಸಂತತಿ ಇಂದಿಗೂ ಮುಂದುವರಿದುಕೊಂಡು ಬಂದಿದೆಯೆಂದು ಡಾನ್ ಬ್ರೌನ್ ಬರೆದಿದ್ದು, ಎಲ್ಲರ ಹುಬ್ಬುಗಳೇರಲು ಮುಖ್ಯ ಕಾರಣ. ಕ್ರೈಸ್ತರ ಒಂದು ಗುಂಪು ಇಂದಿಗೂ ಮ್ಯಾಗ್ಡಲಿನ್‌ಳನ್ನು ಗೌರವದಿಂದ ಪೂಜಿಸುತ್ತದೆಂದೂ, ಚರ್ಚ್ ಈ ರಹಸ್ಯವನ್ನು ಗೌಪ್ಯವಾಗಿ ಕಾದಿಟ್ಟಿಯೆಂದೂ, ಯಾರಾದರೂ ಬಹಿರಂಗಪಡಿಸಿದರೆ ಅಂಥವರನ್ನು ಮುಗಿಸಿ ಬಿಡುವ ಬೆದರಿಕೆಯನ್ನು ಹಾಕುತ್ತಿದೆಯೆಂದು ಡಾನ್ ಬ್ರೌನ್ ತಮ್ಮ ಕಾದಂಬರಿಯಲ್ಲಿ ಬರೆಯುತ್ತಾರೆ.

ಸರಿ, ಈ ವಿವಾದಕ್ಕೆ ಬ್ರೌನ್ ಏನಂತಾನೆ?

ಇದು ಐತಿಹಾಸಿಕ ಸಂಗತಿಗಳನ್ನು ಆಧರಿಸಿದ ಶುದ್ಧ ಕಾಲ್ಪನಿಕ ಕತೆ ಅಂತಾನೆ. ಮೊದಲೇ ಹೇಳಿದ್ದೇನೆ ಇದು ಕಾದಂಬರಿ ಅಂತ. ಯಾಕೆ ಅನಗತ್ಯ ವಿವಾದ? -ಇದು ಬ್ರೌನ್‌ನ ವಾದ.

ಹಾಗೆ ನೋಡಿದರೆ ಈ ವಿವಾದ ಇಲ್ಲಿಗೆ ಅಂತ್ಯವಾಗಬೇಕಿತ್ತು. ವಿಚಿತ್ರವೆಂದರೆ ವಿವಾದ ಆರಂಭವಾಗುವುದೇ ಇಲ್ಲಿ. ಕೋಟಿಗಟ್ಟಲೆ ಪ್ರತಿಗಳು ಮಾರಾಟವಾದ ಬಳಿಕ ಸ್ವಲ್ಪವೂ ವಿವಾದವಾಗದ ಪುಸ್ತಕ, ಏಕಾ‌ಏಕಿ ಸುದ್ದಿಯಾಗುವುದೆಂದರೆ ಅದರಲ್ಲಿ ಏನೋ ಇರಲೇಬೇಕು. ಆಷ್ಟಕ್ಕೂ ಈ ಚಿತ್ರ ಭಾರತದಲ್ಲಿ ಹುಟ್ಟಿಸಿದ ವಿವಾದ ಮಾತ್ರ ಅನೇಕ ಗುಮಾನಿಗಳಿಗೆ ಈಡು ಮಾಡಿದ್ದು ಸತ್ಯ.

ಈ ಚಿತ್ರಕ್ಕೆ ಕ್ಯಾಥೋಲಿಕ್ ರಾಷ್ಟ್ರವಾದ ಫಿಲಿಪ್ಪೀನ್ಸ್ `ಎ'ಸರ್ಟಿಫಿಕೇಟ್ ನೀಡಿ ಸುಮ್ಮನಾಯಿತು. ಇದನ್ನು ನಿಷೇಸಬೇಕೆಂದು ಕ್ರೈಸ್ತರ ಧರ್ಮಗುರು ಪೋಪ್ ಸಹ ಒತ್ತಾಯಿಸಲಿಲ್ಲ. ಅದೆಷ್ಟೇ ಪ್ರತಿಭಟನೆ, ಕೋಲಾಹಲಗಳಾದರೂ ಕ್ರೈಸ್ತರೇ ಬಹುಸಂಖ್ಯಾತರಾಗಿರುವ ಪಾಶ್ಚಿಮಾತ್ಯ ದೇಶಗಳಲ್ಲಿ ಯಾವ ಸರಕಾರವೂ ಈ ವಿವಾದದಲ್ಲಿ ಮಧ್ಯ ಪ್ರವೇಶಿಸಲಿಲ್ಲ. ಚಿತ್ರವನ್ನು ನಿಷೇಸುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದವು.

ಆದರೆ ಭಾರತ ಸರಕಾರ ಮಾತ್ರ ನಿದ್ದೆ ಮಾಡಲಿಲ್ಲ.

ಈ ಚಿತ್ರವನ್ನು ನಿಷೇಸಬೇಕೋ, ಬೇಡವೋ ಎಂಬುದನ್ನು ನಿರ್ಧರಿಸುವ ನ್ಯಾಯಪೀಠದಲ್ಲಿ ತಾವೇ ಸ್ವತಃ ಹೋಗಿ ಕೇಂದ್ರ ವಾರ್ತಾ ಹಾಗೂ ಪ್ರಸಾರ ಖಾತೆ ಮಂತ್ರಿ ಪ್ರಿಯರಂಜನ್ ದಾಸ್ ಮುನ್ಯಿ ಕುಳಿತುಬಿಟ್ಟರು! ಸಿನಿಮಾವನ್ನು ನಿಷೇಸಬೇಕೋ, ಬೇಡವೋ ಎಂಬುದನ್ನು ನಿರ್ಧರಿಸಲು ಈ ದಾಸ್‌ಮುನ್ಯಿ ಯಾರು? ಅವರಿಗೆ ಚಿತ್ರದ ಬಗ್ಗೆ ಏನು ಗೊತ್ತು? ಅವರೇಕೆ ಏಕಾ‌ಏಕಿ ಕಾರ್ಯಪ್ರವೃತ್ತರಾದರು? ಅವರ ಅರ್ಹತೆಗಳೇನು? ಈ ಚಿತ್ರ ಯಾವುದೇ ಅಡೆತಡೆಗಳಿಲ್ಲದೇ ಕ್ಯಾಥೋಲಿಕ್ ಚರ್ಚ್‌ನ ಕೇಂದ್ರವಾದ ರೋಮ್‌ನಲ್ಲಿ ಬಿಡುಗಡೆಯಾಯಿತು. ಆದರೆ ಭಾರತದಲ್ಲಿ ಬಿಡುಗಡೆಯಾಗಲಿಲ್ಲ.

ಕೇಂದ್ರ ಸರಕಾರ ಆದೇಶಿಸಿತ್ತು -ತನ್ನ ಅನುಮತಿಯಿಲ್ಲದೇ ಬಿಡುಗಡೆ ಮಾಡುವಂತಿಲ್ಲ. ದಾಸ್‌ಮುನ್ಯಿ ಮತ್ತು ಕ್ರಿಶ್ಚಿಯನ್ ಚರ್ಚ್ ಸಂಘಟನೆಯ ಪ್ರತಿನಿಗಳು ಹಾಗೂ ತಮ್ಮ ಸಚಿವಾಲಯದ ಮೂವರು ಅಕಾರಿಗಳನ್ನು ಇಟ್ಟುಕೊಂಡು ಒಂದು ಸಮಿತಿ ರಚಿಸಿಕೊಂಡರು. ಈ ಚಿತ್ರದ ವಿತರಕರಾದ ಸೋನಿ ಪಿಕ್ಚರ್‍ಸ್‌ಗೆ ತನ್ನ ಗ್ರೀನ್ ಸಿಗ್ನಲ್ ಇಲ್ಲದೇ ಚಿತ್ರ ಬಿಡುಗಡೆ ಮಾಡದಂತೆ ತಾಕೀತು ಮಾಡಿತು. ಅನಂತರ ಸೆನ್ಸಾರ್ ಮಂಡಳಿ ಸಚಿವರ ಆದೇಶದ ಮೇರೆಗೆ ಜಾಗೃತವಾಯಿತು. ಈ ಸಮಿತಿ ಚಿತ್ರ ನೋಡಿದ ಬಳಿಕ, ಸಿನಿಮಾದ ಆರಂಭ ಹಾಗೂ ಅಂತ್ಯದಲ್ಲಿ `ಇದೊಂದು ಕಾಲ್ಪನಿಕ ಕತೆ'ಎಂದು ದೊಡ್ಡದಾಗಿ ಬರೆಯುವಂತೆ ಸೂಚಿಸಿತು. ಅದನ್ನು ಬಿಟ್ಟರೆ, ಮತ್ತ್ಯಾವ ಬದಲಾವಣೆಯನ್ನೂ ಸೂಚಿಸಲಿಲ್ಲ. ಅದಕ್ಕಿಂತ ಮುಖ್ಯವಾಗಿ ಬೇರಾವ ಬದಲಾವಣೆ ಮಾಡಲು ಸಾಧ್ಯವೂ ಇರಲಿಲ್ಲ.

ಕೇಂದ್ರದ ಯುಪಿ‌ಎ ಸರಕಾರ ನಿದ್ದೆಯಲ್ಲಿ ದಿಡಗ್ಗನೆ ಎದ್ದು ಕುಳಿತವರಂತೆ ಹಠಾತ್ತನೆ ಮೈ ಕೊಡವಿಕೊಂಡು ಉತ್ತಿಷ್ಠವಾಗಿದ್ದಕ್ಕೆ ಯಾರಾದರೂ ಕಾರಣ ಹೇಳಿಯಾರು. ವ್ಯಾಟಿಕನ್ ಹೇಳುವ ಮೊದಲೇ ನಮ್ಮ ಮಂತ್ರಿಗಳು ಆದೇಶಕ್ಕೆ ಎದುರು ನೋಡುತ್ತಿರುತ್ತಾರೆ. ಈ ಆದೇಶ ಹತ್ತನೇ ಜನಪಥದಿಂದ ಬರುವ ಮುನ್ನವೇ, ತಾವೇ ಕಾರ್ಯಪ್ರವೃತ್ತರಾಗಿರುತ್ತಾರೆ. ಈ ಎರಡು ಕಾರಣಗಳನ್ನು ಬಿಟ್ಟರೇ, ದಾಸ್‌ಮುನ್ಯಿ ಸಿನಿಮಾ ನೋಡಲು ಮುನ್ನುಗ್ಗಿ ಕುಳಿತುಕೊಳ್ಳುವ ಅಗತ್ಯವೇ ಇರಲಿಲ್ಲ.

`ಡ ವಿನ್ಸಿ ಕೋಡ್'ಪುಸ್ತಕವನ್ನು ಲೆಬನಾನ್ ಹಾಗೂ ಜೋರ್ಡಾನ್ ನಿಷೇಸಿದವು. ಬಿಟ್ಟರೆ ಮತ್ಯಾವ ದೇಶವೂ ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಈ ವಿಷಯದಲ್ಲಿ ಅತೀವ ಆಸಕ್ತಿ ತೋರಿದ್ದು ಭಾರತ ಮಾತ್ರ. ಕೇವಲ ಶೇ.೨.೩೭ರಷ್ಟು ಕ್ರಿಶ್ಚಿಯನ್‌ರನ್ನು ಹೊಂದಿರುವ ಭಾರತದ ಈ ಉತ್ಸಾಹ ಅನೇಕ ಪಾಶ್ಚಿಮಾತ್ಯ ದೇಶಗಳ ನಗೆಪಾಟಲಿಗೆ ಗುರಿಯಾಗಿದ್ದು ದುರ್ದೈವ. ಅವರಿಗಾಗದ ಗಾಯಕ್ಕಿಂತ ನಮಗಾದ ನೋವು ಅವರಿಗೆ ವಿಚಿತ್ರವಾಗಿ ಕಂಡಿರಲಿಕ್ಕೂ ಸಾಕು. ಇಷ್ಟೂ ಸಾಲದೆಂಬಂತೆ ಕೆಲ ಮುಸ್ಲಿಂ ಸಂಘಟನೆಗಳು ಈ ಚಿತ್ರ ನಿಷೇಧಕ್ಕೆ ಒತ್ತಾಯಿಸಿದ್ದು ಭಲೇ ತಮಾಷೆಯಾಗಿತ್ತು.

ಯಾರಿಗೋ `ಪ್ರಿಯ'ರಾಗಲು, ಯಾರನ್ನೋ `ರಂಜಿಸಲು' ತನ್ನನ್ನು ಹಾಗೂ ಸರಕಾರವನ್ನು ಯಾರದ್ದೋ `ದಾಸ'ರನ್ನಾಗಿ ಮಾಡುವುದಿದೆಯಲ್ಲ ಅದು ನಾಚಿಕೆಗೇಡು. ಶುದ್ಧ ಬೌದ್ಧಿಕ ದಿವಾಳಿತನ.

ಖ್ಯಾತ ಕಲಾವಿದ ಎಂ.ಎಫ್.ಹುಸೇನ್ ಹಿಂದೂ ದೇವತೆಗಳನ್ನು ನಗ್ನವಾಗಿ ಚಿತ್ರಿಸಿ ಅವಹೇಳನ ಮಾಡಿದರೆ, `ಅದರಲ್ಲಿ ತಪ್ಪೇನೂ ಇಲ್ಲ. ಅದು ಕಲಾವಿದನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಸಿದ ವಿಚಾರ. ಅದನ್ನು ವಿರೋಸುವುದೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಚಾರ ಮಾಡಿದಂತೆ'ಎಂದು ನಮ್ಮ ಬುದ್ಧಿಜೀವಿಗಳು ಬೊಬ್ಬೆ ಹೊಡೆಯುತ್ತಾರೆ. ಈ ವಿವಾದವನ್ನು ನೋಡುತ್ತಾ, ತಾನಿದ್ದೇನೆ, ತನಗೆ ಕಣ್ಣು-ಕಿವಿಗಳಿವೆ ಎಂಬುದನ್ನು ಸಹ ಮರೆತು ಸರಕಾರ ಕುಳಿತುಬಿಡುತ್ತದೆ. ಯಾವ ಮಂತ್ರಿಯೂ ತುಟಿಪಿಟಿಕ್ಕೆನ್ನುವುದಿಲ್ಲ. ಆದರೆ ಜಗತ್ತಿನೆಲ್ಲೆಡೆ ಪ್ರದರ್ಶನವಾದರೂ, ಯಾವ ಅಹಿತಕರ ಘಟನೆಗಳಾಗದಿದ್ದರೂ `ಡ ವಿನ್ಸಿ ಕೋಡ್'ನ್ನು ನಿಷೇಸಿದರೆ ಹೇಗೆ, ನಿಷೇಸಲಾಗದಿದ್ದರೆ ಏನು ಮಾಡಬೇಕೆಂದು ಸರಕಾರ ಯೋಚಿಸುವುದಿದೆಯಲ್ಲ, ಇದು ಗಾಬರಿ ಹುಟ್ಟಿಸುವ ವಿಚಾರ.

ಪುಸ್ತಕವಿರಬಹುದು, ಸಿನಿಮಾವಿರಬಹುದು ಅದನ್ನು ನಿಷೇಸುವ ಕಲ್ಪನೆಯೇ ಆಘಾತಕಾರಿಯಾದದ್ದು. `ರಂಗ್ ದೇ ಬಸಂತಿ'ಚಿತ್ರ ಬಿಡುಗಡೆಗೆ ಮುನ್ನ ವಿವಾದಕ್ಕೊಳಗಾದಾಗ ಈ ಚಿತ್ರವನ್ನು ಸೈನಿಕ ಅಕಾರಿಗಳು ವೀಕ್ಷಿಸಿ, ಪ್ರದರ್ಶನಕ್ಕೆ ಅನುಮತಿ ನೀಡಿದರು. `ಬಾಂಬೆ'ಚಿತ್ರ ಶಿವಸೇನೆ ನಾಯಕ ಬಾಳಠಾಕ್ರೆ ನೋಡಿ ಅನುಮತಿ ನೀಡಿದ ನಂತರವೇ ತೆರೆಕಂಡಿದ್ದು. ಅಲ್ಪಸಂಖ್ಯಾತರಿಗೆ ನೋವಾಗುವುದೆಂದು ಭಾವಿಸಿ ಸಲ್ಮಾನ್ ರಶ್ದಿಯ `ಸೆಟಾನಿಕ್ ವರ್ಸಸ್'ಪುಸ್ತಕವನ್ನು ನಿಷೇಸಲಾಯಿತು. ಗೊತ್ತಿರಲಿ, `ಜೀಸಸ್ ಕ್ರೈಸ್ಟ್ ಸೂಪರ್‌ಸ್ಟಾರ್'ಎಂಬ ಚಿತ್ರದ ಮೇಲೆ ನಿಷೇಧ ಹೇರಿದ ವಿಶ್ವದ ಏಕೈಕ ಪ್ರಜಾಪ್ರಭುತ್ವ ದೇಶವೆಂದರೆ ಭಾರತ! ಬೇರೆ ಯಾವ ದೇಶವೂ ಈ ಚಿತ್ರದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.

ಬೇರೆಯವರಿಗಿಲ್ಲದ ಕಾಳಜಿ ನಮಗೇಕೆ? ಅವರ ಕಾಳಜಿಯೆಲ್ಲವನ್ನೂ ನಾವೇ ಗುತ್ತಿಗೆ ಪಡೆದಿದ್ದೇವಾ? ಬಗ್ಗಿ ಎನ್ನದಿದ್ದರೂ ಮೊದಲೇ ಬಾಗಿ, ಬೆಂಡಾಗಿ ಬೋರಲಾಗುವ ನಮ್ಮ ದಾಸ್ಯತ್ವಕ್ಕೆ ಏನನ್ನೋಣ? `ಡ ವಿನ್ಸಿ ಕೋಡ್' ಚಿತ್ರ ಜಗತ್ತಿನಾದ್ಯಂತ ಪ್ರದರ್ಶಿತವಾಗುತ್ತಿದೆ. ಜನ ಮುಗಿಬಿದ್ದು ಚಿತ್ರ ನೋಡುತ್ತಿದ್ದಾರೆ. ಅದು ಯಾವ ಹಿಂಸೆಗೂ ಪ್ರಚೋದನೆಯಾಗಿಲ್ಲ. ಜಗತ್ತಿನ ಎಲ್ಲ ಕ್ರೈಸ್ತರು ಈ ಚಿತ್ರವನ್ನು ಸಹಜವಾಗಿ, ಮುಕ್ತವಾಗಿ ಸ್ವೀಕರಿಸುತ್ತಿರುವಾಗ ಭಾರತೀಯ ಕ್ರೈಸ್ತರು ನಿಷೇಧದ ಮಾತನಾಡುತ್ತಿರುವುದೇಕೆ? ಪುಸ್ತಕ ಬಂದಾಗ ನಿಷೇಸಬೇಕೆಂದು ಅನಿಸದಿದ್ದುದು ಈಗೇಕೆ ಅನಿಸುತ್ತಿದೆ? ಇದೊಂದು ಕಾಲ್ಪನಿಕ, ಕಟ್ಟುಕತೆಯೆಂದು ಸ್ವತಃ ಲೇಖಕನೇ ಹೇಳಿದ್ದಾನೆ. ಹೀಗಿರುವಾಗ ನಮಗೇಕೆ ತುರಿಕೆಯಾಗ ಬೇಕು?

ದುಷ್ಟರಿಗೆ ಮಣಿಯಲಾರೆವು ಅಂದ್ರೆ ಮಣಿಸಲಾರೆವು ಎಂದೂ ಅರ್ಥ!

ವಿಶ್ವೇಶ್ವರ ಭಟ್
ವಿಶ್ವೇಶ್ವರ ಭಟ್:



ನಮ್ಮ ದೇಶದ ಎಲ್ಲ ನಗರಗಳನ್ನು ತಲ್ಲಣಗೊಳಿಸಲು ಬಾಂಬ್‌ಗಳನ್ನೇ ಹಾಕಬೇಕಿಲ್ಲ, ಟ್ರೇನ್ ಸೋಟವನ್ನೂ ಮಾಡಬೇಕಿಲ್ಲ, ಭಯೋತ್ಪಾದಕ ಕೃತ್ಯವನ್ನೂ ಎಸಗಬೇಕಿಲ್ಲ. ಎರಡು ದಿನ ಉಧೋ ಎಂದು ಮಳೆ ಸುರಿದರೂ ಸಾಕು. ಎಲ್ಲ ನಗರಗಳೂ ಭಯೋತ್ಪಾದಕ ದಾಳಿಗೆ ಸಿಲುಕಿದಂತೆ ಬಾಲ ಮುದುಡಿಕೊಂಡು ಸ್ತಬ್ಧವಾಗುತ್ತವೆ. ಹಾಗಂತ ಇದೇನು ಪ್ರಕೃತಿ ವಿಕೋಪವೂ ಅಲ್ಲ, ವರುಣನ ಮುನಿಸೂ ಅಲ್ಲ. ಒಂದೇ ಒಂದು ದಿನದ ಮಳೆಯನ್ನು ಸಹಿಸಿಕೊಳ್ಳುವ ಸಹನೆ, ಶಕ್ತಿ ನಮ್ಮ ಯಾವ ನಗರಗಳಿಗೂ ಇಲ್ಲ. ಅವು ಅಷ್ಟೊಂದು ಶಿಥಿಲ, ಪೊಳ್ಳು.

ಮೊನ್ನೆ ದಿಲ್ಲಿಯಲ್ಲಿ ಎರಡು ದಿನ ಮಳೆ ಸುರಿಯಿತು. ಇಡೀ ದಿಲ್ಲಿ ಗಪ್. ಅಲ್ಲಿನ ರಸ್ತೆಗಳು `ನಗರದಲಿ ಇದೇನಿದು ನದಿಯೊಂದು ಓಡಿದೆ' ಎಂಬಂತೆ ಜಲಾವೃತಗೊಂಡಿದ್ದವು. ಕೇಂದ್ರ ಸರ್ಕಾರ ಕೈಕಟ್ಟಿ ಸುಮ್ಮನೆ ಕುಳಿತಿತ್ತು. ಏನಿಲ್ಲವೆಂದರೂ ದಿಲ್ಲಿಯ ಕಾಲುಭಾಗ ತೇಲುತ್ತಿತ್ತು. ಮುಂಬೈ, ದಿಲ್ಲಿ, ಬೆಂಗಳೂರು, ಚೆನ್ನೈನಲ್ಲಿ ಜೋರಾಗಿ ನಾಲ್ಕು ಹನಿ ಮಳೆ ಸುರಿದರೆ ಜನಜೀವನ ಗಾಳುಮೇಳು. ಅದರಲ್ಲೂ ಮಳೆರಾಯನಿಗೆ `ಹುಯ್ಯೋ, ಹುಯ್ಯೋ' ಎಂದು ತಿದಿ ಊದಿದರೆ ಮುಗಿದೇ ಹೋಯಿತು. ಬಾಂಬ್ ದಾಳಿ ಮಾಡಬೇಕಿಲ್ಲ. ನಮ್ಮ ನಗರಗಳನ್ನು ಆ ಪರಿ ಗಬ್ಬೆಬ್ಬಿಸಿಬಿಟ್ಟಿದ್ದೇವೆ. ನಮ್ಮ ನಗರಗಳು ನಮ್ಮ ಸ್ವಾರ್ಥ, ದುರಾಸೆ, ಲಜ್ಜೆಗೇಡಿತನ, ಭ್ರಷ್ಟತೆಯ ನಾಗರಿಕತೆಯಂತೆ ಭಾಸವಾಗುತ್ತದೆ.

ಎಂಥ ವಿಪರ್ಯಾಸ ನೋಡಿ, ಎಲ್ಲರ ಮನೆಗಳೂ ಫಳಫಳ. ಆದರೆ ಹೊರಗೆ ಕಾಲಿಟ್ಟರೆ ಕೊಚ್ಚೆ. ಎಲ್ಲರದ್ದೂ ಸುಂದರ ಮಹಲು. ಹೊರಗೆ ಮಾತ್ರ ಗಲೀಜು. ನಮ್ಮ ಮನೆಯಷ್ಟೇ ಸುಂದರವಾಗಿದ್ದರೆ ಸಾಕು, ಹೊರಗೇನಾದರೂ ನಮಗೆ ಸಂಬಂಧವೇ ಇಲ್ಲ. ಮನೆ ಮುಂದಿನ ರಸ್ತೆ, ಗಟಾರದ ತೂಬು ಕಟ್ಟಿದರೆ ನೀರು ನಮ್ಮ ಮನೆಯ ಹೊಸ್ತಿಲೊಳಗೇ ನುಗ್ಗುತ್ತದೆಂಬುದನ್ನೂ ಯೋಚಿಸುವುದಿಲ್ಲ. ಇದು ತಗ್ಗು ಪ್ರದೇಶಗಳಲ್ಲಿ ವಾಸಿಸುವವರದ್ದೊಂದೇ ಗೋಳಲ್ಲ. ನಗರವಾಸಿಗಳೆಲ್ಲರ ಮಳೆಗಾಲದ ಬವಣೆ.

ಇರಲಿ, ಮೊನ್ನೆ ಮುಂಬಯಿ ರೈಲಿನಲ್ಲಿ ಸೋಟಗಳಾಗಿ ಇನ್ನೂರಕ್ಕೂ ಹೆಚ್ಚು ಮಂದಿ ಸತ್ತು, ಏಳು ನೂರಕ್ಕೂ ಹೆಚ್ಚು ಜನರಿಗೆ ಗಾಯಗಳಾದಾಗ, ಕೇವಲ ೨೪ ಗಂಟೆಯೊಳಗೆ ಮುಂಬಯಿ ಸಹಜಸ್ಥಿತಿಗೆ ಮರಳಿತು ಎಂದು ಎಲ್ಲ ಪತ್ರಿಕೆಗಳು ಬರೆದವು. ಇಡೀ ಘಟನೆಗೆ ಮುಂಬಯಿ ವಾಸಿಗಳು ತೋರಿದ ಪ್ರತಿಕ್ರಿಯೆ ಅದ್ಭುತವಾದುದು, ಬಾಂಬ್ ಸೋಟದಿಂದ ಮುಂಬಯಿ ತಲ್ಲಣಗೊಳ್ಳಲಿಲ್ಲ, ಘಟನೆಯ ಮರುದಿನ ಜನಜೀವನ ಮಾಮೂಲಿನಂತಿತ್ತು, ರೈಲು ಸಂಚಾರಕ್ಕೂ ವ್ಯತ್ಯಯವುಂಟಾಗಲಿಲ್ಲ, ಏನೂ ಆಗಿಯೇ ಇಲ್ಲವೆಂಬಂತೆ ಜನರು ಪ್ರತಿಕ್ರಿಯಿಸಿದರು ಎಂದು ಪತ್ರಿಕೆಗಳಲ್ಲಿ ವರದಿಯಾಗಿದ್ದವು.

ಆದರೆ ಅಸಲಿ ಚಿತ್ರಣವೇ ಬೇರೆ ಎಂದು ಮುಂಬಯಿಯಿಂದ ಬಂದ ಪತ್ರಕರ್ತ ಮಿತ್ರರೊಬ್ಬರು ಹೇಳುತ್ತಿದ್ದರು. ಮುಂಬಯಿ ಅದೆಷ್ಟು ಯಾಂತ್ರಿಕವಾಗಿದೆಯೆಂದರೆ ಇಂಥ ಪ್ರಮುಖ ದುರ್ಘಟನೆ ಸಂಭವಿಸಿದಾಗಲೂ ಅಲ್ಲಿನ ಜನರಿಗೆ ಕಂಬನಿ ಮಿಡಿಯಲು, ಪ್ರತಿಭಟನೆ ವ್ಯಕ್ತಪಡಿಸಲು ಪುರುಸೊತ್ತಿರಲಿಲ್ಲ. ಪಕ್ಕದ ಮನೆಯವನೇ ಬಾಂಬ್ ಸೋಟಕ್ಕೆ ಬಲಿಯಾದಾಗಲೂ ಸಹಾಯಹಸ್ತ ಚಾಚಲು ಸಮಯವಿರಲಿಲ್ಲ. ಅಲ್ಲಲ್ಲಿ ಕೆಲವರು ನೆರವಿಗೆ ಬಂದಿರಬಹುದು, ರಕ್ತದಾನ ಮಾಡಿರಬಹುದು. ಆದರೆ ಹೆಚ್ಚಿನವರ ಪ್ರತಿಕ್ರಿಯೆ ತಣ್ಣಗಿತ್ತು. ಹೀಗಿರುವಾಗ ಜನಜೀವನ ಮಾಮೂಲಿಗೆ ಬಾರದಿರುವುದೇ? ಹಾಗೆ ನೋಡಿದರೆ ಮುಂಬಯಿ ವಾಸಿಗಳು ಇಂಥ ಘಟನೆಯಾದಾಗಲೂ ಪ್ರತಿಕ್ರಿಯಿಸಲೇ ಇಲ್ಲ. ಒಂದು ವೇಳೆ ಪ್ರತಿಕ್ರಿಯಿಸಿದ್ದರೆ ೨೪ ಗಂಟೆಯೊಳಗೆ ಜನಜೀವನ ಸಹಜಸ್ಥಿತಿಗೆ ಮರಳುತ್ತಿರಲೇ ಇಲ್ಲ. ಬಹುತೇಕ ಮಂದಿಗೆ ಇದೊಂದು ಕೆಟ್ಟ ನೆನಪು ಎಂಬುದನ್ನು ಬಿಟ್ಟರೆ ದೊಡ್ಡ ದುರ್ಘಟನೆಯಾಗಿ ಕಾಡಲೇ ಇಲ್ಲ.

ಇದು ಜನರ ಪ್ರತಿಕ್ರಿಯೆಯಾದರೆ, ಸರ್ಕಾರಗಳದ್ದು ಸಹ ಭಿನ್ನವಾಗೇನೂ ಇರಲಿಲ್ಲ. ಮುಂಬಯಿ ನಗರಿ ಮೇಲೆ ಇಂಥ ಆಪತ್ತು ಎಗರಿ ಬರಬಹುದೆಂದು ಸೂಚನೆಯಿತ್ತು. ಗುಪ್ತಚಾರ ದಳಕ್ಕೆ ಸಣ್ಣ ಸುಳಿವಿತ್ತು. ಆದರೆ ಸಕಾಲಕ್ಕೆ ಎಚ್ಚರಗೊಳ್ಳುವಲ್ಲಿ ಅದು ವಿಫಲವಾಯಿತು. ಬಾಂಬ್ ಸೋಟದ ನಂತರ ನಮ್ಮ ಪ್ರಧಾನಿ ಪ್ರತಿಕ್ರಿಯಿಸಿದ ರೀತಿ ನೋಡಿ. ದೇಶವನ್ನುದ್ದೇಶಿಸಿ ೨೪ ಗಂಟೆಗಳ ನಂತರ ಪ್ರಧಾನಿ ಮಾತಾಡಿದರು. ಅದರಲ್ಲಿ ಹೊಸತೇನೂ ಇರಲಿಲ್ಲ. `ಭಯೋತ್ಪಾದಕ ಕೃತ್ಯಗಳು ನಮ್ಮನ್ನು ಅರಗೊಳಿಸಲಾರವು' ಎಂಬ `ಬೃಹನ್ನಳೆಯ ಗರ್ಜನೆ' ಮಾಡಿದರು.

ಪಾಕ್ ಪ್ರಣೀತ ಭಯೋತ್ಪಾದಕ ಸಂಘಟನೆಗಳು ಭಾರತದ ಬೆನ್ನು ಮುರಿಯಲು ಸಾಧ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು, ಎಲ್ಲ ನಗರ, ಪುಣ್ಯ ಕ್ಷೇತ್ರ, ದೇಗುಲಗಳನ್ನು ಗುರಿಯಾಗಿಟ್ಟುಕೊಂಡು ಅಲ್ಲೆಲ್ಲ ಬಾಂಬ್ ಸೋಟಿಸಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದರೆ, ನಮ್ಮ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮಾತ್ರ`ಜಗತ್ತಿನ ಯಾವ ದುಷ್ಟಶಕ್ತಿಗೂ ಭಾರತ ಮಣಿಯುವುದಿಲ್ಲ' ಎಂಬ ಪ್ರಯೋಜನಕ್ಕೆ ಬಾರದ ಮಾತುಗಳನ್ನು ಆಡುತ್ತಿದ್ದರು.

ಕಳೆದ ಎರಡು ವರ್ಷಗಳಲ್ಲಿ ೨೫ಕ್ಕಿಂತ ಹೆಚ್ಚು ಬಾಂಬ್‌ಸೋಟ ಸಂಭವಿಸಿದ ನಂತರವೂ ಪ್ರಧಾನಿಯಾದವರು ದೃಢಚಿತ್ತದಿಂದ ಭಯೋತ್ಪಾದಕ ಶಕ್ತಿಗಳನ್ನು ಬಗ್ಗುಬಡಿಯುವುದನ್ನು ಬಿಟ್ಟು, ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಈ ಸಮಸ್ಯೆಗೆ ಬೆಂಬಲ ಪಡೆದು ದುಷ್ಟಶಕ್ತಿಗಳನ್ನು ಸದೆಬಡಿಯುವುದನ್ನು ಬಿಟ್ಟು `ನಾವು ಯಾರಿಗೂ ಮಣಿಯುವುದಿಲ್ಲ' ಎಂಬ ಉತ್ತರಕುಮಾರನ ಪೌರುಷ ಮೆರೆದರೆ ಏನೂ ಆಗುವುದಿಲ್ಲ. ಮುಂಬಯಿಯಲ್ಲಿ ಸೋ ಸಂಭವಿಸಿದ ೪೮ ಗಂಟೆಗಳವರೆಗೂ ಪ್ರಧಾನಿಗೆ ಈ ಕೃತ್ಯದ ಹಿಂದಿರುವ ಶಕ್ತಿಗಳ ಬಗ್ಗೆ ಸ್ಪಷ್ಟ ಮಾಹಿತಿ ಇರಲಿಲ್ಲ. ಇದ್ದರೂ ಸ್ಪಷ್ಟವಾಗಿ ಹೇಳಿರಲಿಲ್ಲ. `ನಮ್ಮ ಗಡಿಯಲ್ಲಿ ಕ್ರಿಯಾಶೀವಾಗಿರುವ ಭಯೋತ್ಪಾದಕ ಶಕ್ತಿಗಳು ಈ ಕೃತ್ಯವೆಸಗಿವೆ' ಎಂದು ಅನುಮಾನಪಡುತ್ತಲೇ, ಗಟ್ಟಿಯಾಗಿ ಬೊಟ್ಟು ಮಾಡಿ ಹೇಳಿದರೆ ಭಯೋತ್ಪಾದಕರು ಬೇಸರಿಸಿಕೊಂಡಾರು ಎಂಬ ಧಾಟಿಯಲ್ಲೇ ಪ್ರಧಾನಿ ಹೇಳುತ್ತಿದ್ದರು. ಇದು ನಿಜಕ್ಕೂ ದುರ್ದೈವ. ಭಯೋತ್ಪಾದನೆಗೆ ನಾವು ನೀಡುತ್ತಿರುವ ಉತ್ತರ ಇದು!

ಕಳೆದ ಹತ್ತು ವರ್ಷಗಳಲ್ಲಿ ಈ ದೇಶದಲ್ಲಿ ೨೫೦ಕ್ಕೂ ಹೆಚ್ಚು ಬಾಂಬ್ ಸೋಟಗಳಾಗಿವೆ. ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಕಾಶ್ಮೀರದಲ್ಲಿ ಬಾಂಬ್ ಸೋಟಿಸದ ದಿನಗಳಿರಲಿಕ್ಕಿಲ್ಲ. ಈ ಎಲ್ಲ ದುಷ್ಕೃತ್ಯಗಳ ಹಿಂದೆ ಯಾವ ದೇಶದ ಕೈವಾಡವಿದೆ, ಯಾವ ಇಸ್ಲಾಮಿಕ್ ಸಂಘಟನೆಗಳು ಕೈಜೋಡಿಸಿವೆ ಎಂಬ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ಮಾಹಿತಿಯಿದೆ. ಆದರೆ ಸರ್ಕಾರ ಮಾಡಿದ್ದಾದರೂ ಏನು?

ದೇಶದಲ್ಲಿನ ಕೆಲವು ಇಸ್ಲಾಮಿಕ್ ಸಂಘಟನೆಗಳು ಈ ಭಯೋತ್ಪಾದಕ ಪಡೆಗಳಿಗೆ ಖುದ್ದು ನೆರವು ನೀಡುತ್ತಿವೆಯೆಂಬುದೂ ಸರ್ಕಾರಕ್ಕೆ ಗೊತ್ತು. ಆದರೆ ಸರ್ಕಾರ ಇವರ ವಿರುದ್ಧ ಯಾವ ಕ್ರಮ ಕೈಗೊಂಡಿದೆ? ಮುಂಬಯಿ ಸೋಟದ ಹಿಂದೆ ಸ್ಥಳೀಯ ಇಸ್ಲಾಮಿಕ್ ಸಂಘಟನೆಗಳ ಸಹಾಯವಿದ್ದೇ ಇದೆ. ಪಾಕಿಸ್ತಾನದಲ್ಲಿ ಕುಳಿತು ಇಂಥ ಕೃತ್ಯ ಎಸಗಲು ಸಾಧ್ಯವೇ ಇಲ್ಲ. ಪಾಕ್ ಪ್ರಾಯೋಜಿತ ಲಷ್ಕರ್-ಎ-ತಯ್ಬಾ, ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ(ಸಿಮಿ)ದಂಥ ಸಂಘಟನೆಗಳೇ ಈ ಘಟನೆಯ ಹಿಂದಿವೆಯೆಂಬುದು ಜಗತ್ತಿಗೇ ಗೊತ್ತಿದ್ದರೂ, ನಮ್ಮ ಮಂತ್ರಿಗಳು, ಅಕಾರಿಗಳು ಹೇಳುವುದನ್ನು ಕೇಳಬೇಕು.`ಮುಂಬಯಿ ಸೋಟಕ್ಕೆ ತಾವೇ ಕಾರಣವೆಂದು ಯಾವ ಉಗ್ರ ಸಂಘಟನೆಗಳೂ ಹೊಣೆಗಾರಿಕೆ ಹೊತ್ತಿಲ್ಲ. ಹೀಗಾಗಿ ಈಗಲೇ ಏನನ್ನೂ ಹೇಳುವಂತಿಲ್ಲ' ಎಂದು ಹೇಳಿಕೆ ನೀಡುತ್ತಾರೆ. ಇದೆಂಥ ಬೇಜವಾಬ್ದಾರಿತನ? ಇದೆಂಥ ಮೂರ್ಖ ಹೇಳಿಕೆ? ಅಪರಾಧ ಮಾಡಿದವನೇ ಅಪರಾಧದ ಬಗ್ಗೆ ಹೇಳಲಿ ಎಂದು ಇವರೆಲ್ಲ ಕಾದು ಕುಳಿತಿದ್ದಾರಾ?

ಈ ಮಧ್ಯೆ ಉತ್ತರಪ್ರದೇಶದ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್, `ಸಿಮಿ ಅಪ್ಪಟ ಸೆಕ್ಯುಲರ್ ಸಂಘಟನೆ' ಎಂದು ಭಯೋತ್ಪಾದಕ ಸಂಘಟನೆ ಪರವಾಗಿ ವಕಾಲತ್ತು ವಹಿಸಿ ಮಾತಾಡುತ್ತಾರೆ. ಇಡೀ ದೇಶ ಸುಮ್ಮನೆ ಕೇಳಿಸಿಕೊಳ್ಳುತ್ತದೆ. ಬೇರೆ ಯಾವ ದೇಶದಲ್ಲೂ ಇಂಥ ಹುಚ್ಚಾಟ ನಡೆಯಲಿಕ್ಕಿಲ್ಲ. ಪಾಕ್ ಪ್ರಾಯೋಜಿತ ಡಜನ್ ಗಟ್ಟಲೆ ಉಗ್ರಗಾಮಿ ಸಂಘಟನೆಗಳು ಒಂದೊಂದು ಗುರಿ, ಉದ್ದೇಶ, ಕಾರ್ಯ ಸಾಧನೆಯಿಟ್ಟುಕೊಂಡು ಭಾರತದ ಮೇಲೆ ಅಘೋಷಿತ ಯುದ್ಧವನ್ನೇ ಸಾರಿವೆ. ಆದರೆ ಸರ್ಕಾರ ಮಾತ್ರ ಕಣ್ಮುಚ್ಚಿ ಶಾಂತಿಮಂತ್ರ ಬೋಸುತ್ತಿದೆ. `ಯಾವ ದುಷ್ಟಶಕ್ತಿಗಳಿಗೂ ಮಣಿಯಲಾರೆವು' ಎಂದು ಪ್ರಧಾನಿ ಟಿವಿ ಮುಂದೆ ಹೇಳುತ್ತಾರೆ. What's this nonsense? ಯುದ್ಧ ಸಾರಿದವರ ಮುಂದೆ ಇನ್ನೂ ಶಾಂತಿಪಠಣ ಮಾಡುತ್ತಿದ್ದಾರಲ್ಲ? ಇದನ್ನು ಅಸಾಮರ್ಥ್ಯವೆನ್ನೋಣ, ಅಸಹಾಯಕವೆನ್ನೋಣವಾ?

ಇಲ್ಲೊಂದು ಪ್ರಸಂಗವನ್ನು ಹೇಳಬೇಕು. ಜಿಹಾದಿ ಉಗ್ರಗಾಮಿಗಳು ಮುಂಬಯಿ ರೈಲುಗಳಲ್ಲಿ ಸರಣಿ ಬಾಂಬ್‌ಗಳನ್ನು ಸೋಟಿಸುತ್ತಿದ್ದಾಗ ಲೆಬನಾನ್‌ನ ಹಸನ್ ನಸರುಲ್ಲಾ ನೇತೃತ್ವದ ಭಯೋತ್ಪಾದಕ ಸಂಘಟನೆ ಹಿಜ್‌ಬುಲ್ಲಾ, ಇಸ್ರೇಲ್‌ನ ಇಬ್ಬರು ಸೈನಿಕರನ್ನು ಅಪಹರಿಸಿತ್ತು. ಆದರೆ ಇಸ್ರೇಲ್ ಶಾಂತಿಮಂತ್ರ ಪಠಿಸುತ್ತಾ, ಬುದ್ಧಿವಾದ ಹೇಳುತ್ತಾ ಕುಳಿತುಕೊಳ್ಳಲಿಲ್ಲ. ಇಸ್ರೇಲ್ ಪ್ರಧಾನಿ ಇಹುದ್ ಒಲ್ಮೆಟ್ ಹುಜ್‌ಬುಲ್ಲಾ ಕೃತ್ಯವನ್ನು ಯುದ್ಧ ಪ್ರೇರಕ ಎಂದು ಪ್ರತಿಕ್ರಿಯಿಸಿದರು. ತನ್ನ ಕೇವಲ ಇಬ್ಬರು ಸೈನಿಕರನ್ನು ಅಪಹರಿಸಿದ್ದನ್ನೇ ಗಂಭೀರವಾಗಿ ಪರಿಗಣಿಸಿದ ಇಸ್ರೇಲ್, ಲೆಬನಾನ್ ಮೇಲೆ ದಾಳಿಗೆ ನಿರ್ಧರಿಸಿತು. ಇಸ್ರೇಲ್‌ನ ವಾಯುಪಡೆ ಕೇವಲ ಆರು ತಾಸಿನೊಳಗೆ ಲೆಬನಾನ್ ಮೇಲೆ ಬಾಂಬ್ ದಾಳಿ ಮಾಡಿತು. ಜನವಸತಿ ಕಟ್ಟಡ, ಸೇತುವೆ, ರಸ್ತೆ, ವಿಮಾನ ನಿಲ್ದಾಣಗಳ ಮೇಲೆ ಇಸ್ರೇಲ್ ಬಾಂಬ್ ಹಾಕಿತು. ಇದಕ್ಕೆ ಪ್ರತಿಯಾಗಿ ಲೆಬನಾನ್ ಇಸ್ರೇಲ್‌ನ ಶ್ಲೋಮಿ ಪಟ್ಟಣಕ್ಕೆ ಬಾಂಬ್ ಎಸೆಯಿತು.

ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಇಸ್ರೇಲ್ ಲೆಬನಾನ್‌ನ ಬೈರೂತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂರು ರನ್‌ವೇಗಳನ್ನು ಧ್ವಂಸಗೊಳಿಸಿತು. ಇಸ್ರೇಲ್ ಇಷ್ಟಕ್ಕೇ ಸುಮ್ಮನಾಗಲಿಲ್ಲ. ನಮ್ಮ ತಂಟೆಗೆ ಬಂದರೆ ಹಿಜ್‌ಬುಲ್ಲಾ ನಾಯಕ ಹಸನ್ ನಸರುಲ್ಲಾನನ್ನು ಕೊಲ್ಲುವುದಾಗಿ ಇಸ್ರೇಲ್ ಆಂತರಿಕ ಭದ್ರತಾ ಸಚಿವ ಬಹಿರಂಗವಾಗಿ ಹೇಳಿಕೆ ನೀಡಿದ. ಇಸ್ರೇಲ್ ಪ್ರತಿಕ್ರಿಯಿಸಿದ ರೀತಿಗೆ ಲೆಬನಾನ್ ಜಂಘಾಬಲವೇ ಉಡುಗಿ ಹೋಯಿತು. ಎರಡು ದಿನಗಳಲ್ಲಿ ಲೆಬನಾನ್‌ನ ೬೧ ಮಂದಿ ಸತ್ತರು. ಕೇವಲ ತನ್ನ ಇಬ್ಬರು ಸೈನಿಕರ ಅಪಹರಣಕ್ಕೆ ಇಸ್ರೇಲ್ ನೀಡಿದ ತಿರುಗೇಟು ಇದು!

ಇಸ್ರೇಲ್ ಹೊಡೆತಕ್ಕೆ ಬೆಚ್ಚಿಬಿದ್ದ ಲೆಬನಾನ್ ವಿಶ್ವಸಂಸ್ಥೆ ಮುಂದೆ ಸಹಾಯಕ್ಕಾಗಿ ಅಂಗಲಾಚಿತು. ಯುದ್ಧ ನಿಲ್ಲಿಸುವಂತೆ ಇಸ್ರೇಲ್‌ಗೆ ಆದೇಶಿಸಬೇಕೆಂದು ಒತ್ತಾಯಿಸಿತು. ಅಮೆರಿಕಾ ಅಧ್ಯಕ್ಷ ಜಾರ್ಜ್ ಬುಷ್‌ನ ಮೇಲೆ ಸಹ ಒತ್ತಡ ಹೇರಿತು. ಪ್ರತೀಕಾರದ ತೀಕ್ಷ್ಣತೆ ಬಲ್ಲ ಬುಷ್ ಇಸ್ರೇಲನ್ನು ಸುಮ್ಮನಿರಿಸುವ ಉಸಾಬರಿಗೆ ಹೋಗಲಿಲ್ಲ. ಅದರ ಬದಲು ಗಡಿಯಾಚಿನ ಭಯೋತ್ಪಾದನೆಯನ್ನು ತತ್‌ಕ್ಷಣ ನಿಲ್ಲಿಸುವಂತೆ ಲೆಬನಾನ್‌ಗೇ ತಿರುಗೇಟು ಕೊಟ್ಟ! ಮೂರು ದಿನಗಳೊಳಗೆ ಲೆಬನಾನ್ `ಕುಂಯೋ ಮುರ್ರೋ' ಎಂದು ತೆಪ್ಪಗಾಯಿತು.

ಒಂದು ವೇಳೆ ಇದೇ ಘಟನೆ ಭಾರತದಲ್ಲಾಗಿದ್ದರೆ, ನಮ್ಮ ಸರ್ಕಾರ ಹೇಗೆ ನಡೆದುಕೊಳ್ಳುತ್ತಿತ್ತು? ಇಂಥ ಸಂದರ್ಭಗಳಲ್ಲಿ ಹಿಂದೆ ನಮ್ಮ ಸರ್ಕಾರಗಳು ಹೇಗೆ ವರ್ತಿಸಿವೆ ಎಂಬುದು ನಮಗೆ ಗೊತ್ತಿದೆ. ಮುಂಬಯಿ ಸೋಟದಲ್ಲಿ ಇನ್ನೂರು ಜನ ಸತ್ತಾಗಲೂ ನಾವು ಭಯೋತ್ಪಾದಕ ಸಂಘಟನೆಗಳಿಗೆ, ಅವನ್ನು ಬೆಂಬಲಿಸುವ ಪಾಕಿಸ್ತಾನಕ್ಕೆ ತಿರುಗೇಟು ಕೊಡುವುದಿರಲಿ, ಒಂದು ಸಣ್ಣ ಬಿಸಿಯನ್ನೂ ಮುಟ್ಟಿಸುವುದಿಲ್ಲವೆಂದರೆ, ನಮ್ಮ ಸರ್ಕಾರ, ನಾಯಕರು ಅದೆಷ್ಟು ನಿರ್ಲಜ್ಜರು, ಷಂಡರಾಗಿರಬಹುದು ಯೋಚಿಸಿ.

ಇಷ್ಟಾದ ನಂತರ ನಾವು ಕೈಗೊಂಡ ದೊಡ್ಡ ನಿರ್ಧಾರವೆಂದರೆ ಪಾಕ್ ಜತೆಗೆ ಕಾರ್ಯದರ್ಶಿ ಮಟ್ಟದ ಮಾತುಕತೆಯನ್ನು ಸ್ಥಗಿತಗೊಳಿಸುವುದು, ಅಷ್ಟೇ. ಎರಡೂ ದೇಶಗಳ ಮುಖ್ಯಸ್ಥರ ಮಾತುಕತೆಯೇ ಆಚರಣೆಗೆ ಬರದಿರುವಾಗ ಕಾರ್ಯದರ್ಶಿಗಳದ್ದ್ಯಾವ ಲೆಕ್ಕ? ಇದರಿಂದ ಭಾರತ ಸಾಸಿದ್ದಾದರೂ ಏನು?

ಇನ್ನು ಕೆಲವೇ ದಿನಗಳಲ್ಲಿ ಮುಂಬಯಿ ರೈಲು ಸೋಟ ಘಟನೆಯನ್ನು ನೆನಪಿನ ಚೀಲದಲ್ಲಿಟ್ಟು ಮರೆತುಬಿಡುತ್ತೇವೆ. ಸತ್ತವರ ನೆನಪೂ ಆಗುವುದಿಲ್ಲ. ತನಿಖೆ, ವಿಚಾರಣೆ ಎಂದು ಸರ್ಕಾರ ತಿಪ್ಪೆ ಸಾರಿಸುತ್ತದೆ. ಸರ್ಕಾರ ಈಗ ನೀಡಿದ ಭದ್ರತಾ ಕ್ರಮಗಳನ್ನೆಲ್ಲ ವಾಪಸ್ ಪಡೆಯುತ್ತದೆ. ಎಲ್ಲವೂ ಸುಮ್ಮನಾಯಿತೆಂದು ಅಂದುಕೊಳ್ಳುತ್ತೇವೆ.

ಆದರೆ ಉಗ್ರರು ಸುಮ್ಮನಿರುವುದಿಲ್ಲ. ಗೊತ್ತಿರಲಿ. ಮುಂದಿನ ಸೋಟ ಸಂಭವಿಸುವವರೆಗಷ್ಟೇ ವಿರಾಮ. ಛೀ! ನಮಗೊಂದಿಷ್ಟು...!?

Tuesday, July 25, 2006

ಹಿಂದೂ ಭುಗಿಲು: ಕಾಂಗ್ರೆಸ್ಸಿಗರ ಕಣ್ಣಲ್ಲಿ ಕಂಡಿದೆ ದಿಗಿಲು !

ರವಿ ಬೆಳಗೆರೆ


`ಇನ್ನು ಈ ದೇಶದ ಮುಸ್ಲಿಮರನ್ನು ಕೈಬಿಟ್ಟು ಹಿಂದೂಗಳ ಪರವಾಗಿ ನಿಂತುಬಿಡಿ. ಓಲೈಸುತ್ತೀರೋ ಬಿಡ್ತೀರೋ: ಹಿಂದೂಗಳನ್ನು ಎದುರಂತೂ ಹಾಕಿಕೊಳ್ಳಬೇಡಿ' ಎಂಬ ಸಂದೇಶ ಎಸ್ಸೆಂ ಕೃಷ್ಣರ ಸರ್ಕಾರಕ್ಕೆ ಹೈಕಮ್ಯಾಂಡಿನಿಂದ ಅದೆಷ್ಟು ಬಲವಾಗಿ ಬಂದು ತಲುಪಿದೆ ಎಂದರೆ, ಮೊನ್ನೆ ಬೆಂಗಳೂರಿಗೆ ಬಂದಿದ್ದ ತೊಗಾಡಿಯಾನನ್ನು ಎಸ್ಸೆಂ ಕೃಷ್ಣ ಮನೆಗೆ ಊಟಕ್ಕೆ ಕರೆಯುವುದೊಂದನ್ನು ಬಿಟ್ಟು ಇನ್ನೆಲ್ಲ ಮಾಡಿದರು.

ಬೆಂಗಳೂರಿನಲ್ಲಿ ನಡೆದ ವಿರಾಟ್ ಸಭೆ, ಬಾಬಾ ಬುಡನ್‌ಗಿರಿಯಲ್ಲಿ ನಡೆದ ಕೇಸರಿ ಜಾತ್ರೆಗಳು ಏನನ್ನಾದರೂ ಇಂಡಿಕೇಟ್ ಮಾಡುತ್ತಿವೆ ಅಂದರೆ, ಅದು ಕಾಂಗ್ರೆಸ್ಸಿಗರ ಬದಲಾದ ನಿಲುವುಗಳನ್ನಷ್ಟೇ ಇಂಡಿಕೇಟ್ ಮಾಡುತ್ತಿವೆ. ಕೇಸರಿ ಜನಪ್ರವಾಹ ನೋಡಿದ `ಕನ್ನಡಪ್ರಭ' ಪತ್ರಿಕೆಯವರು ಮೊಳಕೈ ಗಾತ್ರದ ಅಕ್ಷರಗಳಲ್ಲಿ ಅದನ್ನು ಹಿಂದೂ ಮಹಾಸಾಗರ ಅಂತ ಬಣ್ಣಿಸಿ ಕೃತಾರ್ಥರಾಗಿ ಹೋದರು. ಅವತ್ತಿನ ತನಕ `ವಿಜಯ ಕರ್ನಾಟಕ'ದವರಷ್ಟೇ ಪ್ರಗತಿಪರ ಬುದ್ಧಿಜೀವಿಗಳ ವಿರುದ್ಧ ಇದ್ದಾರೆ ಎಂಬ ಭಾವನೆಯಿತ್ತು . `ಹಿಂದೂ ಮಹಾಸಾಗರ' ಎಂಬ ದೈತ್ಯಾಕಾರದ ಹೆಡ್ಡಿಂಗು ನೋಡುತ್ತಿದ್ದಂತೆಯೇ ಎಲ್ಲರಿಗೂ ಒಂದು ವಿಷಯ ಮನವರಿಕೆಯಾಗಿ ಹೋಯಿತು; ಬೀಸುವ ಗಾಳಿಯ ದಿಕ್ಕು ಬದಲಾಗಿದೆ !

ಸ್ವಾತಂತ್ರ್ಯ ಬಂದಾಗಿನಿಂದಲೂ ಉತ್ತರ ಪ್ರದೇಶ್, ಮಧ್ಯಪ್ರದೇಶ್, ಈಗಿನ ಛತ್ತೀಸ್‌ಘಡ ಮುಂತಾದವು ಚುನಾವಣೆಗಳಲ್ಲಿ ಒಂದು ರಾಷ್ಟ್ರಮಟ್ಟದ ರಾಜಕೀಯ ಸ್ಥಿತಿಯ ಸಿಗ್ನಲ್ಲು -ಸಂದೇಶಗಳನ್ನು ಕೊಡುತ್ತಲೇ ಬಂದಂಥವು. ಹಿಂದಿ ಬೆಲ್ಟ್‌ನಲ್ಲಿ ಅಕಾರಕ್ಕೆ ಬಂದ ಪಕ್ಷವೇ ದೇಶವನ್ನಾಳುತ್ತದೆ ಎಂಬ ಮಾತು ದಶಕಗಳ ಕಾಲ ಜಾರಿಯಲ್ಲಿತ್ತು . ಮಧ್ಯೆ ಒಂದೆರಡು ಕಲಬೆರಕೆಗಳಾದರೂ ಜಾತಿ ಆಧಾರಿತವಾದ ಮತ ಚಲಾವಣೆಯ ಪ್ಯಾಟರ್ನ್ ಮೊನ್ನೆ ಮೊನ್ನೆಯ ತನಕ ತೀವ್ರವಾಗಿ ಬದಲಾಗಿರಲಿಲ್ಲ . ಆದರೆ ಇವತ್ತು ಉಮಾಭಾರತಿಯ ಗೆಲುವನ್ನು ನೋಡುತ್ತಿದ್ದರೆ, ಇದು ಕೇವಲ ಹಿಂದೂಗಳ ಕ್ರೋಢೀಕರಣದಿಂದಾಗಿ, ಕೇವಲ ಹಿಂದೂಗಳ ಒಗ್ಗೂಡುವಿಕೆಯ ನಿರ್ಧಾರದಿಂದಾಗಿ ಒದಗಿ ಬಂದ ಗೆಲುವಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಮೊಟ್ಟ ಮೊದಲ ಬಾರಿಗೆ ಮುಸ್ಲಿಮರೂ ಬಿಜೆಪಿಯ ಕಡೆಗೆ ವಾಲಿದ್ದಾರೆ. ಇಲ್ಲದಿದ್ದರೆ ದಿಗ್ವಿಜಯ್ ಸಿಂಗ್ ವಿರುದ್ಧ ಉಮಾಭಾರತಿಯ ಬಿಜೆಪಿ ೧೭೩ ಸ್ಥಾನಗಳಲ್ಲಿ ನೆಲೆಯೂರಲು ಸಾಧ್ಯವೇ ಇರಲಿಲ್ಲ . ರಾಜಸ್ತಾನ್ ಮತ್ತು ಛತ್ತೀಸ್‌ಘಡದಲ್ಲೂ ಕೂಡ ಮುಸ್ಲಿಮರು ಏಕಾ‌ಏಕಿ ಕಾಂಗ್ರೆಸ್‌ನ ಕೈಬಿಟ್ಟು ಬಿಜೆಪಿಯತ್ತ ನಡೆದುಹೋಗಿರುವ ಸೂಚನೆಗಳಿವೆ.

ಇದನ್ನು ಗಮನಿಸುತ್ತಿದ್ದಂತೆಯೇ ಬಹುಶಃ ಕರ್ನಾಟಕದಲ್ಲಿ ಮೊದಲು ಬೆಚ್ಚಿಬಿದ್ದವರು ಎಸ್ಸೆಂ.ಕೃಷ್ಣ . ಮೂಡಿಗೆರೆಯಂತಹ ಅಂಗೈಯಗಲದ ಊರಿಗೆ ತೊಗಾಡಿಯಾ ಬರುತ್ತಾನೆಂದರೆ, `ಕೈ ಮುರೀತೀನಿ, ಕಾಲು ಮುರೀತಿನಿ' ಅಂದಿದ್ದರು ಕಾಂಗ್ರೆಸ್ ನಾಯಕಿ ಮೋಟಮ್ಮ. ಆ ಮಾತ್ರದ ಧೈರ್ಯ ಕೃಷ್ಣರಿಗಿರಲಿಲ್ಲವಾ ? `ನಮ್ಮದು ಪ್ರಜಾಪ್ರಭುತ್ವವಾದೀ ದೇಶ. ಯಾರು ಬೇಕಾದರೂ ಬಂದು ಭಾಷಣ ಮಾಡಿಕೊಂಡು ಹೋಗಬಹುದು' ಅಂದರು. ಅಷ್ಟೇ ಅಲ್ಲ , ಚಂದ್ರೇಗೌಡರಂಥ ಮಂತ್ರಿಗೆ ಕೌಪೀನ ತೊಡಿಸಿ ಅಪ್ಪಟ ಬ್ರಾಹ್ಮಣ ವಟುವಿನಂತೆ ಮಾತಾಡಲು ಬಿಟ್ಟು ತಾವು ಸುಮ್ಮನುಳಿದು ಬಿಟ್ಟರು.

ಇವತ್ತು ಮಲೇಬೆನ್ನೂರಿನಲ್ಲಿ , ಬಾಬಾ ಬುಡನ್ ಗಿರಿಯಲ್ಲಿ , ಬೆಂಗಳೂರಿನಲ್ಲಿ ತೊಗಾಡಿಯೂ ಮತ್ತು ಮುತಾಲಿಕ್‌ರಂಥವರು ಮಾಡುತ್ತಿರುವ ವಿನಾಶಕಾರಿ ಭಾಷಣಗಳನ್ನು ಕೇಳಿಕೊಂಡು ಕಾಂಗ್ರೆಸ್ಸೆಂಬ ಕಾಂಗ್ರೆಸ್ಸು ಖಿಮಕ್ಕೆನ್ನದೆ ಕೂತಿದೆಯೆಂದರೆ, ಅದರ ಹಿಂದಿನ ಸಾರಾಂಶ ಇಷ್ಟೇ.

ಇವರು ಮುಸ್ಲಿಮರನ್ನು ಪೂರ್ತಿ ಕೈಬಿಟ್ಟಿದ್ದಾರೆ ! ಇದಕ್ಕೆ ಕಾರಣಗಳೂ ಸ್ಪಷ್ಟವಾಗಿಯೇ ಇವೆ. ಕಾಂಗ್ರೆಸ್‌ನಂಥ ಪರಾವಲಂಬಿ ಪಕ್ಷಕ್ಕೆ ಈ ಅರ್ಧ ಶತಮಾನದಲ್ಲಿ ಎಲ್ಲೂ ಬಲವಾದ ಬೇರುಗಳೇ ಇಳಿದಿಲ್ಲ . ಅವತ್ತಿಗೂ ಇವತ್ತಿಗೂ ಈ ಪಕ್ಷ ನೆಹರೂ ಮನೆತನದ ಚರಂಡಿಯ ಪಕ್ಕದಿಂದ ಎದ್ದು ಬಂದಿಲ್ಲ . ಇಂದಿರಾಗಾಂಯ ಹತ್ಯೆಯ ನಂತರ ಇವರು ತಿಥಿ ಊಟ ಉಂಡಾಗ ಮಾತ್ರ ಗೆದ್ದವರು. ಇಂದಿರಾ ಹತ್ಯೆಯಾಯಿತು; ಗೆದ್ದರು. ರಾಜೀವ್ ಹತ್ಯೆಯಾಯಿತು: ಗೆದ್ದರು. ಆನಂತರ ಇವರ ಕ್ಯಾಲ್ಕುಲೇಷನ್ನು ಎಷ್ಟು ಅಡ್ಡದಾರಿ ಹಿಡಿಯಿತೆಂದರೆ, ಸೋನಿಯಾಗಾಂಯ ವೈಧವ್ಯವನ್ನು ಮುಂದಿಟ್ಟುಕೊಂಡು ಬಂದು ತಟ್ಟೆ ಕಾಸು ಕೇಳತೊಡಗಿದರು. ಅಲ್ಲಿಗೆ ಪರಿಸ್ಥಿ ತಿ ಉಲ್ಟಾ ಹೊಡೆಯಲಾರಂಭಿಸಿತು. ಕಾಂಗ್ರೆಸ್ಸಿಗರ `ತಿಥಿಯೂಟ'ದ ರಾಜಕಾರಣಕ್ಕೆ ವಿರುದ್ಧವಾಗಿ ಬಿಜೆಪಿಯವರು ಅರಿಶಿನ ಕುಂಕುಮ, ಬಾಗಿನ ತಂದು ಮತದಾರರನ್ನು ತಮ್ಮೆಡೆಗೆ ಸೆಳೆದುಕೊಳ್ಳಲಾರಂಭಿಸಿದರು. ಅವತ್ತಿನ ಆ ಕ್ಷಣದ ತನಕ ಕಾಂಗ್ರೆಸ್ಸಿಗರು ಮಾತನಾಡುತ್ತಿದ್ದುದು ಮುಸ್ಲಿಮರ, ಕ್ರೈಸ್ತರ ಮತ್ತು ಇತರ ಅಲ್ಪಸಂಖ್ಯಾತರ ಪರವಾಗಿಯೇ. ನಿಮಗೆ ನೆನಪಿದೆಯಾ? ಗುಜರಾತದ ಮುಸ್ಲಿಂ ಮಾರಣಹೋಮ ನಡೆದ ಸಂದರ್ಭದಲ್ಲಿ `ಮುಸ್ಲಿಂಮರನ್ನು ಓಲೈಸುವುದನ್ನು ನಿಲ್ಲಿಸಿ' ಎಂಬ ತಲೆಬರಹದ ಸಂಪಾದಕೀಯವೊಂದನ್ನು ನಾನು ಬರೆದಿದ್ದೆ. ನನ್ನ ಪತ್ರಕರ್ತ ಮಿತ್ರರನೇಕರು ಕಿಡಿಕಿಡಿಯಾಗಿದ್ದರು. ಯಥಾಪ್ರಕಾರ ಮುಸ್ಲಿಂ ಓಲೈಸುವಿಕೆಯ ವಿರುದ್ಧ ಮಾತನಾಡುತ್ತಿದ್ದಂತೆಯೇ ನೀನು ಆರೆಸ್ಸೆಸ್ಸು, ನೀನು ಭಜರಂಗಿ, ನೀನು ಬಿಜೆಪಿ ಅಂದಿದ್ದರು. ಆದರೆ ಮುಸ್ಲಿಮರನ್ನು ಓಲೈಸುವುದು ತೀರಾ ಮುಸ್ಲಿಮರಿಗೆ ಎಷ್ಟು ಅಪಾಯಕಾರಿ ಎಂಬುದನ್ನು ನನ್ನ ಮುಸ್ಲಿಂ ಓದುಗ ಮಿತ್ರರೂ ಸೇರಿದಂತೆ, ದೊಡ್ಡದೊಂದು ಓದುಗ ಸಮೂಹ ಅರ್ಥ ಮಾಡಿಕೊಂಡಿತ್ತು . ಇವತ್ತು ಅದು ಪ್ರಾಕ್ಟಿಕಲ್ ಆಗೇ ಸಾಬೀತಾಗಿದೆ. ಕಾಂಗ್ರೆಸ್ಸಿಗರ ಢೋಂಗು, ಉಳಿದ ಪಕ್ಷಗಳ ನಾಯಕರ ದಗಲುಬಾಜಿತನ ಎರಡನ್ನೂ ಮುಸ್ಲಿಮರು ಅರ್ಥ ಮಾಡಿಕೊಂಡಿದ್ದಾರೆ.

ನಿನ್ನೆ ಮೊನ್ನೆಯ ತನಕ ಯಾರ್‍ಯಾರು ಸೆಕ್ಯುಲರಿಸಂ ಬಗ್ಗೆ ಮಾತನಾಡುತ್ತಿದ್ದರು ಮತ್ತು ಯಾರ್‍ಯಾರು ಮುಸ್ಲಿಮರ ಪರವಾಗಿ ದನಿಯೆತ್ತುತ್ತಿದ್ದರು ಎಂಬುದನ್ನು ನೀವೇ ಕೂತು ಪಟ್ಟಿ ಮಾಡಿರಿ. ಜಾರ್ಜ್ ಫನಾಂಡಿಸ್ ಅದರಲ್ಲಿ ಮೊದಲಿಗರಾಗುತ್ತಾರೆ. ಮಮತಾ ಬ್ಯಾನರ್ಜಿ ಕೇವಲ ಭಾರತೀಯ ಮುಸಲ್ಮಾನರಷ್ಟೇ ಅಲ್ಲ ; ಬಾಂಗ್ಲಾದೇಶದ ಮುಸಲ್ಮಾನರೂ ತನ್ನ ಬೆನ್ನಲ್ಲೇ ಹುಟ್ಟಿದವರು ಎಂಬಂತೆ ಮಾತನಾಡುವಾಕೆ. ಉಳಿದಂತೆ ಕರುಣಾನಿ, ಚಂದ್ರಬಾಬು ನಾಯ್ಡು, ಶರದ್ ಯಾದವ್, ಮುಲಾಯಂ ಸಿಂಗ್ ಯಾದವ್- ಇವರೆಲ್ಲರೂ ಮೈನಾರಿಟಿಗಳ ಪರವಾಗಿ ಮಾತನಾಡಿದವರೇ. ಆದರೆ ಅಕಾರದ ವಿಷಯಕ್ಕೆ ಬಂದಾಗ ಇವರ್‍ಯಾರಾದರೂ ಅಟಲ ಬಿಹಾರಿ ವಾಜಪೇಯಿಯೊಂದಿಗೆ ಕೈ ಕುಲುಕುವುದಕ್ಕೆ ಹಿಂಜರಿದರಾ? ಪರೀಕ್ಷಿಸಿ ನೋಡಿ. ಈ ನಾಯಕರು ನೂರೈವತ್ತು ಮಾತು ಆಡಬಹುದು. ಆದರೆ ಅಕಾರ ಅನ್ನೋದು ಕೈನಿಲುಕಿನ ಸಂಗತಿಯಾದಾಗ ಮುಸ್ಲಿಮರನ್ನೂ ಕೈಬಿಡುತ್ತಾರೆ, ದಲಿತರನ್ನೂ ಕೈಬಿಡುತ್ತಾರೆ, ತಮ್ಮ ಗೆಲುವಿಗೆ ಕಾರಣರಾದ ಯಾವ ಚಿಕ್ಕ ವರ್ಗವನ್ನು ಬೇಕಾದರೂ ಕೈಬಿಡುತ್ತಾರೆ. ಇದಕ್ಕೆ ಮಾಯಾವತಿಗಿಂತ ಬೇರೆ ಉದಾಹರಣೆ ಬೇಕಿಲ್ಲ . ಅಷ್ಟೇಕೆ: ಮೈ ತುಂಬ ಕಾಂಗ್ರೆಸ್ ಮೆತ್ತಿಕೊಂಡಿರುವ ಶರದ್ ಪವಾರ್‌ನಂಥ ರಾಜಕಾರಣಿಯೇ, `ಸೋನಿಯಾ ಗಾಂ ವಿದೇಶಿ ಮಹಿಳೆಯಾಗಿರುವಾಗ ಆಕೆಯನ್ನು ನಾಯಕಿಯಾಗಿ ಸ್ವೀಕರಿಸುವುದು ಹೇಗೆ ?' ಎಂಬ ಮಾತನ್ನಾಡುತ್ತಿದ್ದಾರೆ. ಅಂದಮೇಲೆ ಈ ಕಾಂಗ್ರೆಸ್ಸಿಗರನ್ನು , ಸೆಕ್ಯುಲರಿಸ್ಟ್ ಮುಖವಾಡಿಗಳನ್ನು ನಂಬಿಕೊಂಡು ಮುಸಲ್ಮಾನರು ಬದುಕುವುದಾದರೂ ಹೇಗೆ ?

ಉಳಿದೆಲ್ಲರಿಗಿಂತ ಮುಂಚೆ ಈ ಢೋಂಗಿಗಳನ್ನು ಅರ್ಥ ಮಾಡಿಕೊಂಡವರೇ ಮುಸ್ಲಿಮರು. ಕೇವಲ ಭಾರತದ ಮಟ್ಟದಲ್ಲಲ್ಲ : ಜಾಗತಿಕ ಮಟ್ಟದಲ್ಲೂ ಮುಸ್ಲಿಂ ಸಮುದಾಯ ಪ್ರತ್ಯೇಕಗೊಳ್ಳುತ್ತಿದೆ ಎಂಬುದನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ. ತೀರ ಕಟ್ಟರ್ ಮುಸ್ಲಿಂ ದೇಶಗಳನ್ನು ಅಮೆರಿಕ ಕೂಡ ಮೊದಲಿನಂತೆ ಪಕ್ಕಕ್ಕೆ ಕೂಡಿಸಿಕೊಂಡು ಪ್ರೀತಿಸುತ್ತಿಲ್ಲ . ಮುಸ್ಲಿ ಂ ಉಗ್ರವಾದದಿಂದಾಗಿ ರಷ್ಯದಂತಹ ದೇಶ ಹೈರಾಣಾಗಿ ಹೋಗಿದೆ. ಫ್ರಾನ್ಸ್ ಮತ್ತು ಇಂಗ್ಲೆಂಡ್‌ಗಳು ಪಾಕಿಸ್ತಾನವನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿಲ್ಲ . ಜಗತ್ತಿನ ಅತ್ಯಂತ ಪ್ರಬಲ ಶಕ್ತಿಯಾಗಿ ಬೆಳೆಯುತ್ತಿರುವ ಚೀನಾ, ವ್ಯಾಪಾರೀಕರಣದ ಪ್ರವಾಹದಲ್ಲಿ ತೇಲಿ ಹೋಗುತ್ತಿದೆಯೇ ಹೊರತು, ಪಾಕಿಸ್ತಾನಕ್ಕೆ ಬೆಂಬಲ ಕೊಟ್ಟು ಭಾರತದ ಮೇಲೆ ದಂಡೆತ್ತಿ ಕಳಿಸುವ ಉತ್ಸಾಹ ತೋರುತ್ತಿಲ್ಲ .

ಪರಿಸ್ಥಿತಿ ಹೀಗಿರುವಾಗ, ಯಾವತ್ತಾದರೊಂದು ದಿನ ಭಾರತದಲ್ಲಿರುವ ತಮಗೆ ತೊಂದರೆಯಾದರೆ ಪಕ್ಕದ ಪಾಕಿಸ್ತಾನದಿಂದ ಅಥವಾ ಬಾಂಗ್ಲಾದೇಶದಿಂದ ತಮಗೆ ನೆರವು ಸಿಗಬಹುದು ಎಂಬ ಮೂಢನಂಬಿಕೆಯಿದ್ದ ಚಿಕ್ಕದೊಂದು ಮುಸ್ಲಿಂ ಸಮೂಹವಿತ್ತಲ್ಲ ? ಈ ಚಿಕ್ಕ ಸಮೂಹಕ್ಕೂ ಈಗ ಮನವರಿಕೆಯಾಗಿ ಹೋಗಿದೆ. ಪಕ್ಕದ ದೇಶಗಳಿಂದ ನೆರವು ಬರುವುದಿಲ್ಲ . ಸೌದಿ, ದುಬೈ ಮತ್ತು ಇತರೆ ಕೊಲ್ಲಿ ರಾಷ್ಟ್ರಗಳಲ್ಲೂ ಭಾರತೀಯ ಮುಸ್ಲಿಮರು ಬೇಡವಾಗುತ್ತಿದ್ದಾರೆ. ಮೊದಲಿನ ಹಾಗೆ ಗಲ್ ಮನಿ ಇನ್ನು ಹರಿದು ಬರುವುದಿಲ್ಲ . ಈ ಪರಿಸ್ಥಿತಿಯಲ್ಲಿ ಭಾರತೀಯ ಮುಸಲ್ಮಾನರಿಗೆ ಉಳಿದಿರುವ ಮತ್ತು ಅವರು ಈಗಾಗಲೇ ಆಯ್ದುಕೊಂಡೂ ಉಳಿದಿರುವ ಒಂದು ಸರಳ ದಾರಿಯೆಂದರೆ- ಬಹುಸಂಖ್ಯಾತರೊಂದಿಗೆ ಕೂಡಿ, ನೆಮ್ಮದಿಯಾಗಿ ಬಾಳುವುದು.

ಇದನ್ನೇ ಮುಸ್ಲಿಮರು ೧೯೪೭ರಿಂದಲೂ ಬಯಸಿದ್ದರು. ಆವತ್ತು ಭಜರಂಗಿಗಳೂ ಇರಲಿಲ್ಲ . ಇದ್ದವರು ಬೆರಳೆಣಿಕೆಯಷ್ಟು ಆರೆಸ್ಸಿಸ್ಸಿಗರು ಮತ್ತು ದೇಶ ವಿಭಜನೆಯ ಸಮಯದಲ್ಲಿ ಪಾಕಿಸ್ತಾನಿ ಮುಸ್ಲಿಮರ ಕೈಗಳಲ್ಲಿ ನೊಂದವರು. ಕಾಲಾಂತರದಲ್ಲಿ ಇವರೂ ಸುಮ್ಮನಾಗಿ ಹೋಗುತ್ತಿದ್ದರೇನೋ? ಆದರೆ ಈ ಕಾಂಗ್ರೆಸ್ಸಿಗರು `ಮುಸ್ಲಿಂ ಮನವೊಲಿಸುವಿಕೆ' ಎಂಬುದನ್ನು ಅದ್ಯಾವ ಮಟ್ಟದ ಕ್ಲೀಷೆಯನ್ನಾಗಿ, ಪೀಡೆಯನ್ನಾಗಿ ಬೆಳೆಸುತ್ತ ಹೋದರೆಂದರೆ, ಐವತ್ತು ವರ್ಷಗಳ ಅವಯಲ್ಲಿ ಹಿಂದೂ ಸಂಕುಲ, ಇವರ ಮುಸ್ಲಿಂ ಓಲೈಸುವಿಕೆಯಿಂದಾಗಿಯೇ ಬೇಸತ್ತು ಬಿಜೆಪಿಯ ಕಡೆಗೆ ಜಮೆಯಾಗಿ ಹೋಯಿತು. ಅದಕ್ಕೆ ಸರಿಯಾಗಿ ತಿಥಿಯೂಟದ ಕಾಂಗ್ರೆಸ್ಸಿಗರು ರಾಜಕಾರಣದ ಎಡಬಲ ಗೊತ್ತಿಲ್ಲದ ಸೋನಿಯಾರನ್ನು ತಂದು ತಮ್ಮ ಅನಾಯಕಿಯನ್ನಾಗಿ ಕೂರಿಸಿಕೊಂಡರು. ಆಕೆಯ ಅಪಕ್ವತೆ ಒಂದು ಐಬಾದರೆ, ಆಕೆಯ ವಿದೇಶಿ ಮೂಲವೇ ಇನ್ನೊಂದು ಐಬಾಯಿತು. ಮುಸ್ಲಿಮರು, ಕ್ರಿಶ್ಚಿಯನ್ನರು ಆಕೆಯನ್ನು ವಿದೇಶಿಯಳಾಗಿದ್ದರೂ ಪರವಾಗಿಲ್ಲ ಅಂತ ಒಪ್ಪಿಕೊಂಡರೆಂದು ಗೊತ್ತಾದ ಘಳಿಗೆಯಲ್ಲೇ ಉಳಿದ ಅಷ್ಟೂ ಹಿಂದೂ ಸಂಕುಲ ಬಿಜೆಪಿಯ ಪರವಾಗಿ ನಿಂತು ಬಿಟ್ಟಿತು.

ಈಗ ಕಾಂಗ್ರೆಸ್ಸಿಗರ ಮುಖಗಳಲ್ಲಿ ಕೇವಲ ದಿಗಿಲು ಕಾಣಿಸುತ್ತಿದೆ. ಮೊನ್ನೆ ನಡೆದ ವಿರಾಟ ಸಭೆಗೆ ಬಂದಿದ್ದ ಕೇಸರಿ ಜನ ಕೃಷ್ಣರ ಹಣೆಯಲ್ಲಿ ಬೆವರೆಬ್ಬಿಸಿ ಹೋಗಿದ್ದಾರೆ. ಬಂದವರೆಲ್ಲರ ಮತಗಳೂ ಬಿಜೆಪಿ ಜೋಳಿಗೆಗೆ ಬೀಳುತ್ತವೋ ಇಲ್ಲವೋ, ಆ ಮಾತು ಬೇರೆ. ಬಂದವರಿಗೂ, ಇಲ್ಲೇ ಇದ್ದವರಿಗೂ ಮನವರಿಕೆಯಾಗಿರುವ ಒಂದು ಸತ್ಯವೆಂದರೆ, ಕಾಂಗ್ರೆಸ್ಸಿಗರು ಇನ್ನು ಹಿಂದೂಗಳನ್ನು ಎದುರುಹಾಕಿಕೊಳ್ಳುವುದಿಲ್ಲ .

ನೀವೇ ನೋಡುತ್ತಿರಿ: ಕಾಂಗ್ರೆಸ್ಸು ಇನ್ನೂ ಬದಲಾಗುತ್ತದೆ. ಸೋನಿಯಾ ಜಾಗಕ್ಕೆ ಪ್ರಿಯಾಂಕಾ ಬರಬೇಕಾಗುತ್ತದೆ. ಹೊಸ ಭಜನೆ ಆರಂಭವಾಗುತ್ತದೆ. ಈ ದೇಶ ಇನ್ನೂ ಅದೆಷ್ಟೋ ಮನ್ವಂತರಗಳನ್ನು ಕಣ್ಣಾರೆ ನೋಡಬೇಕಾಗುತ್ತದೆ.

ಈ ಮತ ಪ್ರಚಾರಕ ಪಾಪಿಗಳನ್ನು ಯಾರು ಕ್ಷಮಿಸಬೇಕು ?

ರವಿ ಬೆಳಗೆರೆ


ಒಳ್ಳೆ ಸುದ್ದಿ ಬಂದಿದೆ. ಆಸ್ಟ್ರೇಲಿಯಾದ ಕ್ರೈಸ್ತ ಮತ ಪ್ರಚಾರಕ ಸ್ಟಿವರ್ಟ್ ಗ್ರಹಾಂ ಸ್ಟೇನ್ಸ್‌ನನ್ನು ಅವನ ಮಕ್ಕಳಾದ ಫಿಲಿಪ್ ಮತ್ತು ಟಿಮೂತಿ ಸಮೇತ ೧೯೯೯ರ ಜನವರಿ ೨೨ರಂದು ಒರಿಸ್ಸಾದ ಮನೋಹರ್ ಪುರದಲ್ಲಿ ದಾರಾ ಸಿಂಗ್ ಮತ್ತು ಇತರೆ ಒಂದಷ್ಟು ಜನ ಸೇರಿಕೊಂಡು, ವ್ಯಾನ್‌ನಲ್ಲಿ ಮಲಗಿದ್ದಂತೆಯೇ ಸುಟ್ಟು ಹಾಕಿದ್ದರಲ್ಲ ? ಅವರ ಪೈಕಿ ದಾರಾ ಸಿಂಗ್ ಸೇರಿದಂತೆ ಹದಿಮೂರು ಜನ ತಪ್ಪಿತಸ್ಥರೆಂದು ಒರಿಸ್ಸಾದ ನ್ಯಾಯಾಲಯ ಘೋಷಿಸಿದೆ. ಅವರಿಗೆ ಯಾವ ಶಿಕ್ಷೆ ನೀಡಬೇಕೆಂಬುದನ್ನು ನಾಳೆ ಸೆಪ್ಟೆಂಬರ್ ೨೨ರಂದು ನ್ಯಾಯಾಲಯವು ತಿಳಿಸಲಿದೆ.

`ದೇವರೇ, ಅವರನ್ನು ಕ್ಷಮಿಸು. ನನ್ನ ಗಂಡ ಹಾಗೂ ಇಬ್ಬರು ಮಕ್ಕಳನ್ನು ಜೀವಂತ ಸುಟ್ಟವರನ್ನು ನಾನು ಆವತ್ತೇ ಕ್ಷಮಿಸಿದ್ದೇನೆ. ಈಗ ಭಾರತೀಯ ನ್ಯಾಯಾಲಯ ತಾನು ಮಾಡಬೇಕಾಗಿದ್ದ ಕರ್ತವ್ಯವನ್ನು ದಕ್ಷತೆಯಿಂದ ಮಾಡಿದೆ. ಆದರೆ ಕ್ರೈಸ್ತ ಧರ್ಮದ ಮೂಲ ಮಂತ್ರವೇ ಪ್ರೀತಿ, ಕರುಣೆ, ಕ್ಷಮೆ ! ತಾವೇನು ಮಾಡುತ್ತಿದ್ದೇವೆಂದು ಗೊತ್ತಿಲ್ಲದೆಯೇ ತಪ್ಪು ಮಾಡಿದ ಆ ಜನರನ್ನು ಮರಣ ದಂಡನೆಗೆ ಮಾತ್ರ ಈಡು ಮಾಡಬಾರದು. ದೇವರೇ, ಅವರನ್ನು ಕ್ಷಮಿಸು...ಆಮೆನ್'ಅಂದಿದ್ದಾಳೆ ಗ್ರಹಾಂನ ಪತ್ನಿ ಗ್ಲಾಡಿಸ್ ಜೂನ್ ಸ್ಟೇನ್ಸ್.

ಪಾಪ, ದೊಡ್ಡ ಮನಸ್ಸಿನ ಹೆಣ್ಣು ಮಗಳು. ಗಂಡನನ್ನು ಕೊಂದ ಕಡು ಪಾಪಿಗಳನ್ನೇ ಕ್ಷಮಿಸು ಎಂದು ದೇವರಲ್ಲಿ ಮೊರೆಯಿಟ್ಟಿದ್ದಾಳೆ. ಆಕೆಯ ದೊಡ್ಡತನವನ್ನು ನಾವು ಮೆಚ್ಚಬೇಕು.ಅಂತೆಯೇ ಧರ್ಮ ಪ್ರಚಾರಕ ಗ್ರಹಾಂನನ್ನೂ ಅವನ ಇಬ್ಬರು ಅಪ್ರಾಪ್ತ ಮಕ್ಕಳನ್ನೂ ವ್ಯಾನಿನಲ್ಲಿ ಮಲಗಿರುವಾಗ ಜೀವಂತ ಸುಟ್ಟ ದಾರಾ ಸಿಂಗ್ ಮತ್ತು ಅವನ ಹಿಂದೂ ಮತಾಂಧ ಬೆಂಬಲಿಗರಿಗೆ ಕಟುವಾದ ಶಿಕ್ಷೆ ಆಗಲೇಬೇಕು. ಆದರೆ ನನ್ನದೊಂದು ಸಣ್ಣ ಪ್ರಶ್ನೆಯಿದೆ. ನಿಮಗದು ವಿಚಿತ್ರ ಎನಿಸಬಹುದು. ಗ್ರಹಾಂ ಸ್ಟೇನ್ಸ್‌ನನ್ನು ಸುಟ್ಟು ಕೊಂದವರಿಗೆ ಕೋರ್ಟು ಶಿಕ್ಷೆ ಕೊಡಲಿದೆ. ಗಂಡನನ್ನು ಸುಟ್ಟು ಕೊಂದರೂ ಆ ಪಾಪಿಗಳನ್ನು ಕ್ಷಮಿಸು ಎಂದು ಸ್ಟೇನ್ಸ್ ಪತ್ನಿ ಏಸುವಿನಲ್ಲಿ ಮೊರೆಯಿಟ್ಟಿದ್ದಾಳೆ. ಆದರೆ ಭಾರತಕ್ಕೆ ಎಲ್ಲೆಲ್ಲಿಂದಲೋ ಬಂದು ಮತ ಪ್ರಚಾರ ಮಾಡುತ್ತಿದ್ದಾರಲ್ಲ ?

ಈ ಮತ ಪ್ರಚಾರಕ ಪಾಪಿಗಳನ್ನು ಯಾರು ಕ್ಷಮಿಸಬೇಕು ? ಅಥವಾ ಇವರನ್ನು ಯಾರು ದಂಡಿಸಬೇಕು ?

ನನ್ನ ಪ್ರಶ್ನೆ ಅಲ್ಲಿಗೇ ನಿಲ್ಲುವುದಿಲ್ಲ. ಗೋ ಹತ್ಯೆಗೆ, ಗೋ ಮಾಂಸ ತಿನ್ನುವುದಕ್ಕೆ ಸಂಬಂಸಿದಂತೆ ದೇವೇಗೌಡರು ಆಡಿದರೆನ್ನಲಾದ ಮಾತುಗಳನ್ನು ಕೇಳಿಸಿಕೊಳ್ಳಿ. `ಅಯ್ಯೋ ಬಿಡ್ರೀ, ದನದ ಮಾಂಸ ತಿನ್ನೋರು ಎಲ್ಲಾ ಜಾತೀಲೂ ಇದ್ದಾರೆ. ಒಕ್ಕಲಿಗರು ತಿನ್ನಲ್ವಾ ? ಲಿಂಗಾಯತರು ತಿನ್ನಲ್ವಾ ?' ಎಂಬ ಧಾಟಿಯ ಅತ್ಯಂತ ಬೇಜವಾಬ್ದಾರಿಯುತ ಮಾತುಗಳಿವು. ಅವುಗಳನ್ನು ಗೌಡರು ತೀರ ಉದ್ದೇಶ ಪೂರ್ವಕವಾಗಿ ಆಡಿಲ್ಲ. ಲಿಂಗಾಯತರನ್ನಾಗಲೀ ವಕ್ಕಲಿಗರನ್ನಾಗಲೀ of course ಯಾವುದೇ ಜಾತಿಯವರನ್ನಾಗಲೀ ಒಬ್ಬ ರಾಜಕಾರಣಿ ತೀರ ಚುನಾವಣೆಗಳ ಸಮಯದಲ್ಲಿ ಹೀಗೆ ಎದುರು ಹಾಕಿಕೊಳ್ಳುವ ಧೈರ್‍ಯ ಮಾಡುವುದಿಲ್ಲ. ಆದರೆ ಮಾತನಾಡುವ ಭರದಲ್ಲಿ ಪಕ್ಕದಲ್ಲಿ ಕುಳಿತ ಮುಸ್ಲಿಮರಿಗೋ ಕ್ರೈಸ್ತರಿಗೋ ಖುಷಿಯಾಗಲೀ ಅಂತ `ಅಯ್ಯೋ ತಿನ್ನದೆ ಏನು ನಮ್ಮೋರೂ ತಿಂತಾರೆ ಬಿಡಿ !' ಅಂದಿರುತ್ತಾರೆ.

ನೀವು ಗಮನಿಸಿ ನೋಡಿ. ಹೀಗೆ ಮಾತನಾಡುವುದು ಭಾರತದ ಎಲ್ಲ ಜಾತಿಗಳ ಎಲ್ಲ ರಾಜಕೀಯ ಪಕ್ಷಗಳ ಕೆಲವೊಮ್ಮೆ ಎಲ್ಲ ಪತ್ರಕರ್ತ- ಬುದ್ಧಿಜೀವಿಗಳ ಅಭ್ಯಾಸ. ಅದು ಚಟ. ಅದು ಬಾಯಿ ತುರಿಕೆ. ಅದು ಮುಸ್ಲಿಂ- ಕ್ರಿಶ್ಚಿಯನ್ ಜಾತಿಗಳವರ ಓಟು ಸೆಳೆದುಕೊಳ್ಳುವ ಕ್ಷುದ್ರ ವಿಧಾನ. ಭಾರತದಂತಹ ದೇಶದಲ್ಲಿ ಮುಸ್ಲಿಮರ, ಕ್ರೈಸ್ತರ ಹತ್ಯೆಗಳಾದಾಗ ಅದನ್ನು ಲಬ್ಬಗುಟ್ಟಿ ಬಾಯಿ ಬಡಿದುಕೊಂಡು ಖಂಡಿಸಿದರೆ ಅದು ಸೆಕ್ಯುಲರಿಸಂ. ಉಳಿದಂತೆ ಪಂಜಾಬರ, ಸಿಖ್ಖರ, ಕಾಶ್ಮೀರಿ ಪಂಡಿತರ ನರಮೇಧಗಳು ನಡೆದು ಹೋದಾಗ ಆ ಬಗ್ಗೆ ದಿವ್ಯ ಮೌನ ಧರಿಸಿದರೆ, ಆಹಾ ಅದು ಕಣ್ರೀ ಜನಪ್ರಿಯತೆ. ಅದು ಕಣ್ರೀ ಮಾನವೀಯತೆ. ನಿಜವಾದ ಸೆಕ್ಯುಲರಿಸಂ ಅಂದರೆ ಅದಲ್ಲವೇ ? ಹೀಗಾಗಿ ನೀವು ಹೆಗಡೆ ಬೊಮ್ಮಾಯಿ- ದೇವೇಗೌಡ- ಕೃಷ್ಣ - ಕಾಗೋಡು ತಿಮ್ಮಪ್ಪ ಮುಂತಾದ ಯಾರೂ ಒಂದೇ ಒಂದು ಸಲ ಕಾಶ್ಮೀರದ ಹಿಂದೂ ಮತ್ತು ಸಿಖ್ ಹತ್ಯೆಗಳ್ನು ಖಂಡಿಸಿ ಒಂದೇ ಒಂದು ಹೇಳಿಕೆ ಕೊಡುವುದಿಲ್ಲ. ಶಹಬಾಸ್ ಸೆಕ್ಯುಲರಿಸಂ !

ಅದು ಒತ್ತಟ್ಟಿಗಿರಲಿ. ಗ್ರಹಾಂ ಸ್ಟೇನ್ಸ್ ಹತ್ಯೆಯನ್ನು ಮೈ ತುಂಬ ಬಾಯಿ ಮಾಡಿಕೊಂಡು ಖಂಡಿಸಿದ ರಾಜಕಾರಣಿಗಳ ಪಟ್ಟಿ ತೆಗೆದುನೋಡಿ. ಅದರಲ್ಲಿ ಸೋನಿಯಾ ಗಾಂಯಿಂದ ಹಿಡಿದು ಬಾಬುರಾವ್ ಚಿಂಚನಸೂರ್ ತನಕ ಎಲ್ಲ ತರಹದ ಅವಿವೇಕಿಗಳೂ ಇದ್ದಾರೆ. ನಡೆದು ಹೋದ ಮೂರು ಬರ್ಬರ ಹತ್ಯೆಗಳಿಗಾಗಿ ಅವರು ಕಣ್ಣೀರು ಸುರಿಸಿದ್ದಾರೆ.

ಆದರೆ ಭಾರತ ದೇಶದ ಇಡೀ ಈಶಾನ್ಯ ಭಾಗದಲ್ಲಿ ಪ್ರತಿನಿತ್ಯ ಸ್ಥಳೀಯ ಧರ್ಮದ ಕೊಲೆಯಾಗುತ್ತಿದೆ. ಕೊರಳಲ್ಲಿ ರುದ್ರಾಕ್ಷಿ, ಹಣೆಗೆ ನಾಮ, ರಾಮಮಂದಿರ, ಭಗವಾ ಧ್ವಜ, ಕೈಲಿ ತ್ರಿಶೂಲ ಇದ್ಯಾವುದೂ ಧರಿಸದೆ ತಮ್ಮ ಪಾಡಿಗೆ ತಾವು ಬದುಕುತ್ತಿದ್ದ ಬುಡಕಟ್ಟು ಜನ ಇವತ್ತು ಏನಾಗಿ ಹೋಗಿದ್ದಾರೆ ಎಂಬುದನ್ನು ಯಾರಾದರೂ ಗಮನಿಸಿದ್ದಾರಾ ? ಅವರು ಹಿಂದೂಗಳಾಗಿರಲಿಲ್ಲ. ಅವರು ರಾಮನ ಪೂಜೆಯವರಲ್ಲ. ಆರೆಸ್ಸೆಸಿಗರಲ್ಲ. ನಾನು ಅಂಥವರ ಪರವಾಗಿ ಮಾತನಾಡುತ್ತಿಲ್ಲ. ಅವರೆಲ್ಲ ಬುಡಕಟ್ಟಿನವರಾಗಿದ್ದರು. ಅವರಿಗೆ ತಮ್ಮದೇ ಆದ ದೇವ ದೇವತೆಗಳಿದ್ದವು. ಹಾಡಿದ್ದವು. ನೃತ್ಯಗಳಿದ್ದವು. ಅವರದೊಂದು ಸಂಸ್ಕೃತಿ ಅಂತ ಇತ್ತು. ಅದೆಲ್ಲದರ ನಡುವೆಯೂ ಅವರಿಗೆ ಭಾರತದ ಮೇಲೆ ಪ್ರೀತಿಯಿತ್ತು. ಚೀಣದಂತಹ ಚೀಣ ಮೈಮೇಲೇರಿ ಬಂದಾಗ ಅವರು ಭಾರತದ ಪರವಾಗಿ ನಿಂತು ಬಡಿದಾಡಿದ್ದರು. ಭಾರತದ ನೌಕರಿ- ಚಾಕರಿ ಮಾಡಿದ್ದರು. ಪ್ರತೀ ಜನವರಿ ೨೬ಕ್ಕೆ ದಿಲ್ಲಿಗೆ ಬಂದು ಪರೇಡಿನಲ್ಲಿ ಕುಣಿದು ಜೈ ಹಿಂದ್ ಅಂದು ತಂತಮ್ಮ ಬೆಟ್ಟಗಳ ತಪ್ಪಲುಗಳಿಗೆ ವಾಪಸು ಹೋಗಿದ್ದರು. ಈಶಾನ್ಯ ಭಾರತದ ಬುಡಕಟ್ಟಿನ ಜನ ನಮ್ಮ ಲಮಾಣಿಗರಂತೆ, ಹಕ್ಕಿ ಪಿಕ್ಕಿಗಳಂತೆ, ಸಿದ್ದಿಗಳಂತೆ ತಮ್ಮ ಪಾಡಿಗೆ ತಾವಿದ್ದರು. ಅವರ್‍ಯಾರನ್ನೂ `ನೀವು ಹಿಂದೂಗಳಾಗಿ' ಎಂದು ಭಾರತೀಯರು ಒತ್ತಾಯಿಸಿರಲಿಲ್ಲ. ರಥಯಾತ್ರೆಗೆ ಕರೆದಿರಲಿಲ್ಲ. ಇಟ್ಟಿಗೆ ಹೊರೆಸಿ ತಿಲಕ ಹಚ್ಚಿರಲಿಲ್ಲ.

ಆದರೆ ಅಂಥ ಲಕ್ಷಾಂತರ ಜನರ ಕೊರಳಿಗೆ ಇಂದು ಶಿಲುಬೆ ಹಾಕಿದವರ್‍ಯಾರು ಸ್ವಾಮಿ ? ನಿಮಗೂ ಗೊತ್ತಿರಬಹುದು. ಬುಡಕಟ್ಟು ಜನಾಂಗದವರು ಎಲ್ಲೆಲ್ಲಿರುತ್ತಾರೋ ಅಲ್ಲೆಲ್ಲ ಕ್ರೈಸ್ತ ಮತ ಪ್ರಚಾರಕರು ಕೆಲಸ ಮಾಡುತ್ತಾರೆ. ಅಲ್ಲಿಗೆ ಏಸುವು ಬರುವುದಿಲ್ಲ . ಕೋಟ್ಯಂತರ ಡಾಲರುಗಳು ಬರುತ್ತವೆ. ಪೆಪ್ಸಿ ಬರುತ್ತದೆ. ಅಮೆರಿಕದ ಅಪತ್ಯ ಮತ್ತು ಕ್ರೈಸ್ತ ಧರ್ಮ ಹೇಗೆ ಜೊತೆ ಜೊತೆಯಾಗಿ ಬಿಡುತ್ತವೋ ಗಮನಿಸಿ. ಇವತ್ತು ನಾಗಾಲ್ಯಾಂಡ್‌ನ ೯೦ ಪರ್ಸೆಂಟ್ ಜನ ಕ್ರೈಸ್ತರು. ಮಿಜೋರಾಂನಲ್ಲಿ ಅವರು ೮೫ ಪರ್ಸೆಂಟಿನಷ್ಟಿದ್ದಾರೆ. ಮೇಘಾಲಯದಲ್ಲಿ ಅರವತ್ತೈದು ಪರ್ಸೆಂಟು ! ತೀರ ಅರುಣಾಚಲ ಪ್ರದೇಶದಂತಹ ಗುಡ್ಡ ಮೋಡಗಳ ಸೀಮೆಯಲ್ಲಿ ೧೯೬೧ರಲ್ಲಿ ಬರೀ ೧೭೫೦ ಜನ ಕ್ರೈಸ್ತರಿದ್ದರು. ಅವರಿವತ್ತು ಒಂದು ಲಕ್ಷ ಹದಿನೈದು ಸಾವಿರದಷ್ಟಾಗಿದ್ದಾರೆ. ಅಲ್ಲಿ ಮೊದಲು ಒಂದೇ ಒಂದು ಗುಡಿಯಿರಲಿಲ್ಲ. ಇವತ್ತು ೭೦೦ ಚರ್ಚುಗಳಿವೆ. ಇದೂ ಸಂತೋಷವೇ. ಪ್ರೇಮ- ಕರುಣೆ-ಕ್ಷಮೆಯನ್ನು ಬೋಸುವ ಏಸುವಿನ ಧರ್ಮ ನಮ್ಮಲ್ಲಿಗೆ ಬಂದರೆ ಅದನ್ನು ಸ್ವೀಕರಿಸೋಣ. ಆದರೆ ತೀರ ಹಿರಿಯೂರಿನಂಥ ಚಿಕ್ಕ ಊರಿನಲ್ಲಿ, ಕರ್ನಾಟಕದ ನಟ್ಟ ನಡುವೆ ಪಾದ್ರಿಯೊಬ್ಬ ಬರೀ ಒಂದು ಸೈಕಲ್ ಕೊಡಿಸಿದುದಕ್ಕಾಗಿ ಇಡೀ ಒಂದು ಕುಟುಂಬದಷ್ಟು ಲಮಾಣಿಗರು ಕ್ರೈಸ್ತರಾಗಿ ಪರಿವರ್ತಿತರಾಗಿ ಹೋದರಲ್ಲ ? ಅಂಥ ಪಾತಕವನ್ನು ಹೇಗೆ ಸಹಿಸಿಕೊಳ್ಳೋಣ. ನೆನಪಿರಲಿ, ನಮ್ಮದು ಸಾವಿರ ದೇವರುಗಳ, ದೈವಗಳ ಬಗ್ಗೆ ಬಹುಮುಖೀ ನಂಬಿಕೆಗಳ ಬಣ್ಣ ಬಣ್ಣ ಸಮಾಜ. ಇದರ ಕೊರಳಿಗೆ ಒಂದೇ ಒಂದು ಶಿಲುಬೆ ಹಾಕಿ ಇಡೀ ಬಣ್ಣಗಳ ಸಮೂಹವನ್ನೇ ಬಿಳೀ ನಿಲುವಂಗಿಯಲ್ಲಿ ಮುಚ್ಚಿ ಹಾಕುವುದು ಗ್ರಹಾಂ ಸ್ಟೇನ್ಸ್‌ನ ಹತ್ಯೆಗಿಂತ ದೊಡ್ಡ ಅಪರಾಧ.

ಹೋಗಲಿ, ಬುಡಕಟ್ಟಿನ ಜನ ಏಸು ಸಿದ್ಧಾಂತಗಳೆಡೆಗೆ ಹೃತ್ಪೂರ್ವಕವಾಗಿ ಆಕರ್ಷಿತರಾಗಿ ಕನ್ವರ್ಟ್ ಆಗುತ್ತಾರಾ ? ಆದರೆ ಸಂತೋಷವೇ. ಆದರೆ ಬುಡಕಟ್ಟಿನವರಿರುವ ಹಳ್ಳಿಗಳಲ್ಲಿ ಕ್ರೈಸ್ತ ಪಾದರಿಗಳು ಮೊದಲು ಎಲ್ಲರನ್ನೂ ಪ್ರಾರ್ಥನೆಗೆ ಕರೆಯುತ್ತಾರೆ. ಅಲ್ಲಿ ಒಂದು ಮಿರ್‍ಯಾಕಲ್ ಬಾಕ್ಸ್ ಎಂಬ ಹೆಸರಿನ ಪವಾಡ ಪೆಟ್ಟಿಗೆ ಇಟ್ಟಿರುತ್ತಾರೆ. ಶಾಲೆಯ ಫೀಜಿಗೆ ನಂಗೆ ಹಣವಿಲ್ಲ. ಖಾಯಿಲೆಯ ಖರ್ಚಿಗೆ ಹಣವಿಲ್ಲ. ನಂಗೊಂದು ಹಸು ಬೇಕು. ಗಂಡನಿಗೆ ಸೈಕಲ್ ಬೇಕು- ಇಂಥ ವಿನಂತಿಗಳನ್ನು ಚೀಟಿಯಲ್ಲಿ ಬರೆದು ಹಾಕಿಬಿಟ್ಟರೆ ಸಾಕು. ಒಂದೇ ವಾರದಲ್ಲಿ ಪವಾಡ ಸಂಭವಿಸುತ್ತದೆ. ಫೀಜು, ಹಸು, ಸೈಕಲ್ಲು, ಔಷ - ಎಲ್ಲವೂ ಅವರವರ ಮನೆಗೆ ತಲುಪಿ ಪವಾಡ ಸಂಭವಿಸಿಬಿಟ್ಟಿರುತ್ತದೆ. ಅದರ ಮುಂದಿನ ವಾರ ಅವೆಲ್ಲ ಕುಟುಂಬಗಳ ಕೊರಳಿಗೆ ಶಿಲುಬೆ ನೇತಾಡುತ್ತಿರುತ್ತದೆ. ನಿಜವಾದ ಪವಾಡ ಅದು.

ಒರಿಸ್ಸಾದ ದಾರಾ ಸಿಂಗ್ ಮಾಡಿದ್ದು ಹೇಯ ಕೃತ್ಯ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇ ಬೇಕು. ಖಂಡಿಸಬೇಕು. ಆದರೆ ಬದುಕಿದ್ದಷ್ಟು ದಿನ ಒರಿಸ್ಸಾದಲ್ಲಿ ಗ್ರಹಾಂ ಸ್ಟೇನ್ಸ್ ಮಾಡಿದ್ದು ಇದೇ ಪವಾಡಗಳನ್ನ. ಅದನ್ನು ಮಾತ್ರ ಯಾರೂ ಖಂಡಿಸುವುದಿಲ್ಲ. ಏಕೆಂದರೆ ಕ್ರೈಸ್ತರ, ಮುಸಲ್ಮಾನರ ಓಟುಗಳು ಎಣಿಕೆಗೆ ಸಿಗುತ್ತವೆ. ಕಾಶ್ಮೀರಿ ಪಂಡಿತರು, ಸಿಖ್ಖರು ಯಾವ ಗಿಡದ ತೊಪ್ಪಲು ?
ಇಷ್ಟಾಗಿ, ನಾನು ಹಿಂದೂ ಧರ್ಮ ಸಂರಕ್ಷಣೆಯಾಗಬೇಕು ಎಂದು ಬೊಬ್ಬಿರಿಯುತ್ತಿಲ್ಲ. ಅಸಲು ದೇವರನ್ನೇ ನಂಬದ ನನಗೆ ಎಲ್ಲ ಧರ್ಮಗಳೂ ಒಂದೇ. ಆದರೆ ನಮ್ಮ ದೇಶದ ಸಂಸ್ಕೃತಿ, ಅದರ ವೈವಿಧ್ಯತೆ, ಅದರ ಐಡೆಂಟಿಟಿಗಳಿಗೆ ಆಪತ್ತು ಬಂದಾಗ ಪ್ರತಿಭಟಿಸದೇ ಇದ್ದರೆ ಅದನ್ನು ನಾನು ಸೆಕ್ಯುಲರಿಸಂ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಒಮ್ಮೆ ಫ್ರಾನ್ಸ್ ಕಡೆಗೆ ತಿರುಗಿ ನೋಡಿ. ಅಲ್ಲಿ ಪಂಥ (Sect) ಗಳನ್ನು ನಿಯಂತ್ರಿಸಲೆಂದೇ ಒಂದು ಇಲಾಖೆಯಿದೆ. ಒಬ್ಬ ಮಂತ್ರಿಯಿದ್ದಾನೆ. ಫ್ರಾನ್ಸ್‌ನಲ್ಲಿ ಇತ್ತೀಚೆಗೆ ಬ್ರಹ್ಮಕುಮಾರಿ ಸಿದ್ಧಾಂತದ ಕುರಿತು ಪಾಠ ಮಾಡಿದ ಇಬ್ಬರು ಮೇಷ್ಟ್ರುಗಳನ್ನು ಫ್ರೆಂಚ್ ಪೊಲೀಸರು ಜೈಲಿಗೆ ಹಾಕಿದ್ದರು. ( ಟೈಮ್ಸ್ ಆಫ್ ಇಂಡಿಯಾ ೧೭.೧೦.೦೩). ಜಪಾನದಲ್ಲಿ ಸಾಯಿಬಾಬಾ ನಿಷಿದ್ಧ. ಅಮೆರಿಕದಿಂದ ರಜನೀಶರನ್ನು ಓಡಿಸಿದ್ದೇ, ಆತ ಕ್ರಿಸ್ತನ ವಿರುದ್ಧ ಮಾತನಾಡಿದ್ದಕ್ಕಾಗಿ. ಚೀನದಲ್ಲಿ ಮುಸ್ಲಿಮರನ್ನು ಸಂಘಟಿತರಾಗಲು ಬಿಡುವುದಿಲ್ಲ. ಇದನ್ನೆಲ್ಲ `ಸರಿ' ಅಂತ ನಾನು ವಾದಿಸುತ್ತಿಲ್ಲ. ನಮ್ಮದು ಪ್ರಜಾಪ್ರಭುತ್ವ. ಎಲ್ಲವುದಕ್ಕೂ ಇಲ್ಲಿ ಸ್ವಾಗತವಿದೆ. ಆದರೆ ಪ್ರಜೆಗಳ ಬದುಕಿನ ವೈವಿಧ್ಯತೆಯನ್ನೇ ದೋಚಿ ಇಡೀ ದೇಶದ ಕೊರಳಿಗೆ ಯಾರಾದರೂ ಶಿಲುಬೆ ಹಾಕುತ್ತಿದ್ದರೆ ಸುಮ್ಮನಿರಬೇಕಾ ? ಹಾಗೆ ಸುಮ್ಮನಿರುವವನ್ನು ಏನನ್ನಬೇಕು.

ದೇವೇಗೌಡ ? ಕೃಷ್ಣ ? ಸೆಕ್ಯುಲರಿಸಂ ? ಅಥವಾ ಓಟುಗಳಿಗಾಗಿ ಏನನ್ನು ಬೇಕಾದರೂ ಮಾರಿಕೊಳ್ಳುವ ದೇಶನಾಶಕರು ?
ಹೆಸರು ನೀವೇ ಇಡಿ.