Saturday, July 29, 2006

ದುಷ್ಟರಿಗೆ ಮಣಿಯಲಾರೆವು ಅಂದ್ರೆ ಮಣಿಸಲಾರೆವು ಎಂದೂ ಅರ್ಥ!

ವಿಶ್ವೇಶ್ವರ ಭಟ್
ವಿಶ್ವೇಶ್ವರ ಭಟ್:



ನಮ್ಮ ದೇಶದ ಎಲ್ಲ ನಗರಗಳನ್ನು ತಲ್ಲಣಗೊಳಿಸಲು ಬಾಂಬ್‌ಗಳನ್ನೇ ಹಾಕಬೇಕಿಲ್ಲ, ಟ್ರೇನ್ ಸೋಟವನ್ನೂ ಮಾಡಬೇಕಿಲ್ಲ, ಭಯೋತ್ಪಾದಕ ಕೃತ್ಯವನ್ನೂ ಎಸಗಬೇಕಿಲ್ಲ. ಎರಡು ದಿನ ಉಧೋ ಎಂದು ಮಳೆ ಸುರಿದರೂ ಸಾಕು. ಎಲ್ಲ ನಗರಗಳೂ ಭಯೋತ್ಪಾದಕ ದಾಳಿಗೆ ಸಿಲುಕಿದಂತೆ ಬಾಲ ಮುದುಡಿಕೊಂಡು ಸ್ತಬ್ಧವಾಗುತ್ತವೆ. ಹಾಗಂತ ಇದೇನು ಪ್ರಕೃತಿ ವಿಕೋಪವೂ ಅಲ್ಲ, ವರುಣನ ಮುನಿಸೂ ಅಲ್ಲ. ಒಂದೇ ಒಂದು ದಿನದ ಮಳೆಯನ್ನು ಸಹಿಸಿಕೊಳ್ಳುವ ಸಹನೆ, ಶಕ್ತಿ ನಮ್ಮ ಯಾವ ನಗರಗಳಿಗೂ ಇಲ್ಲ. ಅವು ಅಷ್ಟೊಂದು ಶಿಥಿಲ, ಪೊಳ್ಳು.

ಮೊನ್ನೆ ದಿಲ್ಲಿಯಲ್ಲಿ ಎರಡು ದಿನ ಮಳೆ ಸುರಿಯಿತು. ಇಡೀ ದಿಲ್ಲಿ ಗಪ್. ಅಲ್ಲಿನ ರಸ್ತೆಗಳು `ನಗರದಲಿ ಇದೇನಿದು ನದಿಯೊಂದು ಓಡಿದೆ' ಎಂಬಂತೆ ಜಲಾವೃತಗೊಂಡಿದ್ದವು. ಕೇಂದ್ರ ಸರ್ಕಾರ ಕೈಕಟ್ಟಿ ಸುಮ್ಮನೆ ಕುಳಿತಿತ್ತು. ಏನಿಲ್ಲವೆಂದರೂ ದಿಲ್ಲಿಯ ಕಾಲುಭಾಗ ತೇಲುತ್ತಿತ್ತು. ಮುಂಬೈ, ದಿಲ್ಲಿ, ಬೆಂಗಳೂರು, ಚೆನ್ನೈನಲ್ಲಿ ಜೋರಾಗಿ ನಾಲ್ಕು ಹನಿ ಮಳೆ ಸುರಿದರೆ ಜನಜೀವನ ಗಾಳುಮೇಳು. ಅದರಲ್ಲೂ ಮಳೆರಾಯನಿಗೆ `ಹುಯ್ಯೋ, ಹುಯ್ಯೋ' ಎಂದು ತಿದಿ ಊದಿದರೆ ಮುಗಿದೇ ಹೋಯಿತು. ಬಾಂಬ್ ದಾಳಿ ಮಾಡಬೇಕಿಲ್ಲ. ನಮ್ಮ ನಗರಗಳನ್ನು ಆ ಪರಿ ಗಬ್ಬೆಬ್ಬಿಸಿಬಿಟ್ಟಿದ್ದೇವೆ. ನಮ್ಮ ನಗರಗಳು ನಮ್ಮ ಸ್ವಾರ್ಥ, ದುರಾಸೆ, ಲಜ್ಜೆಗೇಡಿತನ, ಭ್ರಷ್ಟತೆಯ ನಾಗರಿಕತೆಯಂತೆ ಭಾಸವಾಗುತ್ತದೆ.

ಎಂಥ ವಿಪರ್ಯಾಸ ನೋಡಿ, ಎಲ್ಲರ ಮನೆಗಳೂ ಫಳಫಳ. ಆದರೆ ಹೊರಗೆ ಕಾಲಿಟ್ಟರೆ ಕೊಚ್ಚೆ. ಎಲ್ಲರದ್ದೂ ಸುಂದರ ಮಹಲು. ಹೊರಗೆ ಮಾತ್ರ ಗಲೀಜು. ನಮ್ಮ ಮನೆಯಷ್ಟೇ ಸುಂದರವಾಗಿದ್ದರೆ ಸಾಕು, ಹೊರಗೇನಾದರೂ ನಮಗೆ ಸಂಬಂಧವೇ ಇಲ್ಲ. ಮನೆ ಮುಂದಿನ ರಸ್ತೆ, ಗಟಾರದ ತೂಬು ಕಟ್ಟಿದರೆ ನೀರು ನಮ್ಮ ಮನೆಯ ಹೊಸ್ತಿಲೊಳಗೇ ನುಗ್ಗುತ್ತದೆಂಬುದನ್ನೂ ಯೋಚಿಸುವುದಿಲ್ಲ. ಇದು ತಗ್ಗು ಪ್ರದೇಶಗಳಲ್ಲಿ ವಾಸಿಸುವವರದ್ದೊಂದೇ ಗೋಳಲ್ಲ. ನಗರವಾಸಿಗಳೆಲ್ಲರ ಮಳೆಗಾಲದ ಬವಣೆ.

ಇರಲಿ, ಮೊನ್ನೆ ಮುಂಬಯಿ ರೈಲಿನಲ್ಲಿ ಸೋಟಗಳಾಗಿ ಇನ್ನೂರಕ್ಕೂ ಹೆಚ್ಚು ಮಂದಿ ಸತ್ತು, ಏಳು ನೂರಕ್ಕೂ ಹೆಚ್ಚು ಜನರಿಗೆ ಗಾಯಗಳಾದಾಗ, ಕೇವಲ ೨೪ ಗಂಟೆಯೊಳಗೆ ಮುಂಬಯಿ ಸಹಜಸ್ಥಿತಿಗೆ ಮರಳಿತು ಎಂದು ಎಲ್ಲ ಪತ್ರಿಕೆಗಳು ಬರೆದವು. ಇಡೀ ಘಟನೆಗೆ ಮುಂಬಯಿ ವಾಸಿಗಳು ತೋರಿದ ಪ್ರತಿಕ್ರಿಯೆ ಅದ್ಭುತವಾದುದು, ಬಾಂಬ್ ಸೋಟದಿಂದ ಮುಂಬಯಿ ತಲ್ಲಣಗೊಳ್ಳಲಿಲ್ಲ, ಘಟನೆಯ ಮರುದಿನ ಜನಜೀವನ ಮಾಮೂಲಿನಂತಿತ್ತು, ರೈಲು ಸಂಚಾರಕ್ಕೂ ವ್ಯತ್ಯಯವುಂಟಾಗಲಿಲ್ಲ, ಏನೂ ಆಗಿಯೇ ಇಲ್ಲವೆಂಬಂತೆ ಜನರು ಪ್ರತಿಕ್ರಿಯಿಸಿದರು ಎಂದು ಪತ್ರಿಕೆಗಳಲ್ಲಿ ವರದಿಯಾಗಿದ್ದವು.

ಆದರೆ ಅಸಲಿ ಚಿತ್ರಣವೇ ಬೇರೆ ಎಂದು ಮುಂಬಯಿಯಿಂದ ಬಂದ ಪತ್ರಕರ್ತ ಮಿತ್ರರೊಬ್ಬರು ಹೇಳುತ್ತಿದ್ದರು. ಮುಂಬಯಿ ಅದೆಷ್ಟು ಯಾಂತ್ರಿಕವಾಗಿದೆಯೆಂದರೆ ಇಂಥ ಪ್ರಮುಖ ದುರ್ಘಟನೆ ಸಂಭವಿಸಿದಾಗಲೂ ಅಲ್ಲಿನ ಜನರಿಗೆ ಕಂಬನಿ ಮಿಡಿಯಲು, ಪ್ರತಿಭಟನೆ ವ್ಯಕ್ತಪಡಿಸಲು ಪುರುಸೊತ್ತಿರಲಿಲ್ಲ. ಪಕ್ಕದ ಮನೆಯವನೇ ಬಾಂಬ್ ಸೋಟಕ್ಕೆ ಬಲಿಯಾದಾಗಲೂ ಸಹಾಯಹಸ್ತ ಚಾಚಲು ಸಮಯವಿರಲಿಲ್ಲ. ಅಲ್ಲಲ್ಲಿ ಕೆಲವರು ನೆರವಿಗೆ ಬಂದಿರಬಹುದು, ರಕ್ತದಾನ ಮಾಡಿರಬಹುದು. ಆದರೆ ಹೆಚ್ಚಿನವರ ಪ್ರತಿಕ್ರಿಯೆ ತಣ್ಣಗಿತ್ತು. ಹೀಗಿರುವಾಗ ಜನಜೀವನ ಮಾಮೂಲಿಗೆ ಬಾರದಿರುವುದೇ? ಹಾಗೆ ನೋಡಿದರೆ ಮುಂಬಯಿ ವಾಸಿಗಳು ಇಂಥ ಘಟನೆಯಾದಾಗಲೂ ಪ್ರತಿಕ್ರಿಯಿಸಲೇ ಇಲ್ಲ. ಒಂದು ವೇಳೆ ಪ್ರತಿಕ್ರಿಯಿಸಿದ್ದರೆ ೨೪ ಗಂಟೆಯೊಳಗೆ ಜನಜೀವನ ಸಹಜಸ್ಥಿತಿಗೆ ಮರಳುತ್ತಿರಲೇ ಇಲ್ಲ. ಬಹುತೇಕ ಮಂದಿಗೆ ಇದೊಂದು ಕೆಟ್ಟ ನೆನಪು ಎಂಬುದನ್ನು ಬಿಟ್ಟರೆ ದೊಡ್ಡ ದುರ್ಘಟನೆಯಾಗಿ ಕಾಡಲೇ ಇಲ್ಲ.

ಇದು ಜನರ ಪ್ರತಿಕ್ರಿಯೆಯಾದರೆ, ಸರ್ಕಾರಗಳದ್ದು ಸಹ ಭಿನ್ನವಾಗೇನೂ ಇರಲಿಲ್ಲ. ಮುಂಬಯಿ ನಗರಿ ಮೇಲೆ ಇಂಥ ಆಪತ್ತು ಎಗರಿ ಬರಬಹುದೆಂದು ಸೂಚನೆಯಿತ್ತು. ಗುಪ್ತಚಾರ ದಳಕ್ಕೆ ಸಣ್ಣ ಸುಳಿವಿತ್ತು. ಆದರೆ ಸಕಾಲಕ್ಕೆ ಎಚ್ಚರಗೊಳ್ಳುವಲ್ಲಿ ಅದು ವಿಫಲವಾಯಿತು. ಬಾಂಬ್ ಸೋಟದ ನಂತರ ನಮ್ಮ ಪ್ರಧಾನಿ ಪ್ರತಿಕ್ರಿಯಿಸಿದ ರೀತಿ ನೋಡಿ. ದೇಶವನ್ನುದ್ದೇಶಿಸಿ ೨೪ ಗಂಟೆಗಳ ನಂತರ ಪ್ರಧಾನಿ ಮಾತಾಡಿದರು. ಅದರಲ್ಲಿ ಹೊಸತೇನೂ ಇರಲಿಲ್ಲ. `ಭಯೋತ್ಪಾದಕ ಕೃತ್ಯಗಳು ನಮ್ಮನ್ನು ಅರಗೊಳಿಸಲಾರವು' ಎಂಬ `ಬೃಹನ್ನಳೆಯ ಗರ್ಜನೆ' ಮಾಡಿದರು.

ಪಾಕ್ ಪ್ರಣೀತ ಭಯೋತ್ಪಾದಕ ಸಂಘಟನೆಗಳು ಭಾರತದ ಬೆನ್ನು ಮುರಿಯಲು ಸಾಧ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು, ಎಲ್ಲ ನಗರ, ಪುಣ್ಯ ಕ್ಷೇತ್ರ, ದೇಗುಲಗಳನ್ನು ಗುರಿಯಾಗಿಟ್ಟುಕೊಂಡು ಅಲ್ಲೆಲ್ಲ ಬಾಂಬ್ ಸೋಟಿಸಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದರೆ, ನಮ್ಮ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮಾತ್ರ`ಜಗತ್ತಿನ ಯಾವ ದುಷ್ಟಶಕ್ತಿಗೂ ಭಾರತ ಮಣಿಯುವುದಿಲ್ಲ' ಎಂಬ ಪ್ರಯೋಜನಕ್ಕೆ ಬಾರದ ಮಾತುಗಳನ್ನು ಆಡುತ್ತಿದ್ದರು.

ಕಳೆದ ಎರಡು ವರ್ಷಗಳಲ್ಲಿ ೨೫ಕ್ಕಿಂತ ಹೆಚ್ಚು ಬಾಂಬ್‌ಸೋಟ ಸಂಭವಿಸಿದ ನಂತರವೂ ಪ್ರಧಾನಿಯಾದವರು ದೃಢಚಿತ್ತದಿಂದ ಭಯೋತ್ಪಾದಕ ಶಕ್ತಿಗಳನ್ನು ಬಗ್ಗುಬಡಿಯುವುದನ್ನು ಬಿಟ್ಟು, ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಈ ಸಮಸ್ಯೆಗೆ ಬೆಂಬಲ ಪಡೆದು ದುಷ್ಟಶಕ್ತಿಗಳನ್ನು ಸದೆಬಡಿಯುವುದನ್ನು ಬಿಟ್ಟು `ನಾವು ಯಾರಿಗೂ ಮಣಿಯುವುದಿಲ್ಲ' ಎಂಬ ಉತ್ತರಕುಮಾರನ ಪೌರುಷ ಮೆರೆದರೆ ಏನೂ ಆಗುವುದಿಲ್ಲ. ಮುಂಬಯಿಯಲ್ಲಿ ಸೋ ಸಂಭವಿಸಿದ ೪೮ ಗಂಟೆಗಳವರೆಗೂ ಪ್ರಧಾನಿಗೆ ಈ ಕೃತ್ಯದ ಹಿಂದಿರುವ ಶಕ್ತಿಗಳ ಬಗ್ಗೆ ಸ್ಪಷ್ಟ ಮಾಹಿತಿ ಇರಲಿಲ್ಲ. ಇದ್ದರೂ ಸ್ಪಷ್ಟವಾಗಿ ಹೇಳಿರಲಿಲ್ಲ. `ನಮ್ಮ ಗಡಿಯಲ್ಲಿ ಕ್ರಿಯಾಶೀವಾಗಿರುವ ಭಯೋತ್ಪಾದಕ ಶಕ್ತಿಗಳು ಈ ಕೃತ್ಯವೆಸಗಿವೆ' ಎಂದು ಅನುಮಾನಪಡುತ್ತಲೇ, ಗಟ್ಟಿಯಾಗಿ ಬೊಟ್ಟು ಮಾಡಿ ಹೇಳಿದರೆ ಭಯೋತ್ಪಾದಕರು ಬೇಸರಿಸಿಕೊಂಡಾರು ಎಂಬ ಧಾಟಿಯಲ್ಲೇ ಪ್ರಧಾನಿ ಹೇಳುತ್ತಿದ್ದರು. ಇದು ನಿಜಕ್ಕೂ ದುರ್ದೈವ. ಭಯೋತ್ಪಾದನೆಗೆ ನಾವು ನೀಡುತ್ತಿರುವ ಉತ್ತರ ಇದು!

ಕಳೆದ ಹತ್ತು ವರ್ಷಗಳಲ್ಲಿ ಈ ದೇಶದಲ್ಲಿ ೨೫೦ಕ್ಕೂ ಹೆಚ್ಚು ಬಾಂಬ್ ಸೋಟಗಳಾಗಿವೆ. ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಕಾಶ್ಮೀರದಲ್ಲಿ ಬಾಂಬ್ ಸೋಟಿಸದ ದಿನಗಳಿರಲಿಕ್ಕಿಲ್ಲ. ಈ ಎಲ್ಲ ದುಷ್ಕೃತ್ಯಗಳ ಹಿಂದೆ ಯಾವ ದೇಶದ ಕೈವಾಡವಿದೆ, ಯಾವ ಇಸ್ಲಾಮಿಕ್ ಸಂಘಟನೆಗಳು ಕೈಜೋಡಿಸಿವೆ ಎಂಬ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ಮಾಹಿತಿಯಿದೆ. ಆದರೆ ಸರ್ಕಾರ ಮಾಡಿದ್ದಾದರೂ ಏನು?

ದೇಶದಲ್ಲಿನ ಕೆಲವು ಇಸ್ಲಾಮಿಕ್ ಸಂಘಟನೆಗಳು ಈ ಭಯೋತ್ಪಾದಕ ಪಡೆಗಳಿಗೆ ಖುದ್ದು ನೆರವು ನೀಡುತ್ತಿವೆಯೆಂಬುದೂ ಸರ್ಕಾರಕ್ಕೆ ಗೊತ್ತು. ಆದರೆ ಸರ್ಕಾರ ಇವರ ವಿರುದ್ಧ ಯಾವ ಕ್ರಮ ಕೈಗೊಂಡಿದೆ? ಮುಂಬಯಿ ಸೋಟದ ಹಿಂದೆ ಸ್ಥಳೀಯ ಇಸ್ಲಾಮಿಕ್ ಸಂಘಟನೆಗಳ ಸಹಾಯವಿದ್ದೇ ಇದೆ. ಪಾಕಿಸ್ತಾನದಲ್ಲಿ ಕುಳಿತು ಇಂಥ ಕೃತ್ಯ ಎಸಗಲು ಸಾಧ್ಯವೇ ಇಲ್ಲ. ಪಾಕ್ ಪ್ರಾಯೋಜಿತ ಲಷ್ಕರ್-ಎ-ತಯ್ಬಾ, ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ(ಸಿಮಿ)ದಂಥ ಸಂಘಟನೆಗಳೇ ಈ ಘಟನೆಯ ಹಿಂದಿವೆಯೆಂಬುದು ಜಗತ್ತಿಗೇ ಗೊತ್ತಿದ್ದರೂ, ನಮ್ಮ ಮಂತ್ರಿಗಳು, ಅಕಾರಿಗಳು ಹೇಳುವುದನ್ನು ಕೇಳಬೇಕು.`ಮುಂಬಯಿ ಸೋಟಕ್ಕೆ ತಾವೇ ಕಾರಣವೆಂದು ಯಾವ ಉಗ್ರ ಸಂಘಟನೆಗಳೂ ಹೊಣೆಗಾರಿಕೆ ಹೊತ್ತಿಲ್ಲ. ಹೀಗಾಗಿ ಈಗಲೇ ಏನನ್ನೂ ಹೇಳುವಂತಿಲ್ಲ' ಎಂದು ಹೇಳಿಕೆ ನೀಡುತ್ತಾರೆ. ಇದೆಂಥ ಬೇಜವಾಬ್ದಾರಿತನ? ಇದೆಂಥ ಮೂರ್ಖ ಹೇಳಿಕೆ? ಅಪರಾಧ ಮಾಡಿದವನೇ ಅಪರಾಧದ ಬಗ್ಗೆ ಹೇಳಲಿ ಎಂದು ಇವರೆಲ್ಲ ಕಾದು ಕುಳಿತಿದ್ದಾರಾ?

ಈ ಮಧ್ಯೆ ಉತ್ತರಪ್ರದೇಶದ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್, `ಸಿಮಿ ಅಪ್ಪಟ ಸೆಕ್ಯುಲರ್ ಸಂಘಟನೆ' ಎಂದು ಭಯೋತ್ಪಾದಕ ಸಂಘಟನೆ ಪರವಾಗಿ ವಕಾಲತ್ತು ವಹಿಸಿ ಮಾತಾಡುತ್ತಾರೆ. ಇಡೀ ದೇಶ ಸುಮ್ಮನೆ ಕೇಳಿಸಿಕೊಳ್ಳುತ್ತದೆ. ಬೇರೆ ಯಾವ ದೇಶದಲ್ಲೂ ಇಂಥ ಹುಚ್ಚಾಟ ನಡೆಯಲಿಕ್ಕಿಲ್ಲ. ಪಾಕ್ ಪ್ರಾಯೋಜಿತ ಡಜನ್ ಗಟ್ಟಲೆ ಉಗ್ರಗಾಮಿ ಸಂಘಟನೆಗಳು ಒಂದೊಂದು ಗುರಿ, ಉದ್ದೇಶ, ಕಾರ್ಯ ಸಾಧನೆಯಿಟ್ಟುಕೊಂಡು ಭಾರತದ ಮೇಲೆ ಅಘೋಷಿತ ಯುದ್ಧವನ್ನೇ ಸಾರಿವೆ. ಆದರೆ ಸರ್ಕಾರ ಮಾತ್ರ ಕಣ್ಮುಚ್ಚಿ ಶಾಂತಿಮಂತ್ರ ಬೋಸುತ್ತಿದೆ. `ಯಾವ ದುಷ್ಟಶಕ್ತಿಗಳಿಗೂ ಮಣಿಯಲಾರೆವು' ಎಂದು ಪ್ರಧಾನಿ ಟಿವಿ ಮುಂದೆ ಹೇಳುತ್ತಾರೆ. What's this nonsense? ಯುದ್ಧ ಸಾರಿದವರ ಮುಂದೆ ಇನ್ನೂ ಶಾಂತಿಪಠಣ ಮಾಡುತ್ತಿದ್ದಾರಲ್ಲ? ಇದನ್ನು ಅಸಾಮರ್ಥ್ಯವೆನ್ನೋಣ, ಅಸಹಾಯಕವೆನ್ನೋಣವಾ?

ಇಲ್ಲೊಂದು ಪ್ರಸಂಗವನ್ನು ಹೇಳಬೇಕು. ಜಿಹಾದಿ ಉಗ್ರಗಾಮಿಗಳು ಮುಂಬಯಿ ರೈಲುಗಳಲ್ಲಿ ಸರಣಿ ಬಾಂಬ್‌ಗಳನ್ನು ಸೋಟಿಸುತ್ತಿದ್ದಾಗ ಲೆಬನಾನ್‌ನ ಹಸನ್ ನಸರುಲ್ಲಾ ನೇತೃತ್ವದ ಭಯೋತ್ಪಾದಕ ಸಂಘಟನೆ ಹಿಜ್‌ಬುಲ್ಲಾ, ಇಸ್ರೇಲ್‌ನ ಇಬ್ಬರು ಸೈನಿಕರನ್ನು ಅಪಹರಿಸಿತ್ತು. ಆದರೆ ಇಸ್ರೇಲ್ ಶಾಂತಿಮಂತ್ರ ಪಠಿಸುತ್ತಾ, ಬುದ್ಧಿವಾದ ಹೇಳುತ್ತಾ ಕುಳಿತುಕೊಳ್ಳಲಿಲ್ಲ. ಇಸ್ರೇಲ್ ಪ್ರಧಾನಿ ಇಹುದ್ ಒಲ್ಮೆಟ್ ಹುಜ್‌ಬುಲ್ಲಾ ಕೃತ್ಯವನ್ನು ಯುದ್ಧ ಪ್ರೇರಕ ಎಂದು ಪ್ರತಿಕ್ರಿಯಿಸಿದರು. ತನ್ನ ಕೇವಲ ಇಬ್ಬರು ಸೈನಿಕರನ್ನು ಅಪಹರಿಸಿದ್ದನ್ನೇ ಗಂಭೀರವಾಗಿ ಪರಿಗಣಿಸಿದ ಇಸ್ರೇಲ್, ಲೆಬನಾನ್ ಮೇಲೆ ದಾಳಿಗೆ ನಿರ್ಧರಿಸಿತು. ಇಸ್ರೇಲ್‌ನ ವಾಯುಪಡೆ ಕೇವಲ ಆರು ತಾಸಿನೊಳಗೆ ಲೆಬನಾನ್ ಮೇಲೆ ಬಾಂಬ್ ದಾಳಿ ಮಾಡಿತು. ಜನವಸತಿ ಕಟ್ಟಡ, ಸೇತುವೆ, ರಸ್ತೆ, ವಿಮಾನ ನಿಲ್ದಾಣಗಳ ಮೇಲೆ ಇಸ್ರೇಲ್ ಬಾಂಬ್ ಹಾಕಿತು. ಇದಕ್ಕೆ ಪ್ರತಿಯಾಗಿ ಲೆಬನಾನ್ ಇಸ್ರೇಲ್‌ನ ಶ್ಲೋಮಿ ಪಟ್ಟಣಕ್ಕೆ ಬಾಂಬ್ ಎಸೆಯಿತು.

ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಇಸ್ರೇಲ್ ಲೆಬನಾನ್‌ನ ಬೈರೂತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂರು ರನ್‌ವೇಗಳನ್ನು ಧ್ವಂಸಗೊಳಿಸಿತು. ಇಸ್ರೇಲ್ ಇಷ್ಟಕ್ಕೇ ಸುಮ್ಮನಾಗಲಿಲ್ಲ. ನಮ್ಮ ತಂಟೆಗೆ ಬಂದರೆ ಹಿಜ್‌ಬುಲ್ಲಾ ನಾಯಕ ಹಸನ್ ನಸರುಲ್ಲಾನನ್ನು ಕೊಲ್ಲುವುದಾಗಿ ಇಸ್ರೇಲ್ ಆಂತರಿಕ ಭದ್ರತಾ ಸಚಿವ ಬಹಿರಂಗವಾಗಿ ಹೇಳಿಕೆ ನೀಡಿದ. ಇಸ್ರೇಲ್ ಪ್ರತಿಕ್ರಿಯಿಸಿದ ರೀತಿಗೆ ಲೆಬನಾನ್ ಜಂಘಾಬಲವೇ ಉಡುಗಿ ಹೋಯಿತು. ಎರಡು ದಿನಗಳಲ್ಲಿ ಲೆಬನಾನ್‌ನ ೬೧ ಮಂದಿ ಸತ್ತರು. ಕೇವಲ ತನ್ನ ಇಬ್ಬರು ಸೈನಿಕರ ಅಪಹರಣಕ್ಕೆ ಇಸ್ರೇಲ್ ನೀಡಿದ ತಿರುಗೇಟು ಇದು!

ಇಸ್ರೇಲ್ ಹೊಡೆತಕ್ಕೆ ಬೆಚ್ಚಿಬಿದ್ದ ಲೆಬನಾನ್ ವಿಶ್ವಸಂಸ್ಥೆ ಮುಂದೆ ಸಹಾಯಕ್ಕಾಗಿ ಅಂಗಲಾಚಿತು. ಯುದ್ಧ ನಿಲ್ಲಿಸುವಂತೆ ಇಸ್ರೇಲ್‌ಗೆ ಆದೇಶಿಸಬೇಕೆಂದು ಒತ್ತಾಯಿಸಿತು. ಅಮೆರಿಕಾ ಅಧ್ಯಕ್ಷ ಜಾರ್ಜ್ ಬುಷ್‌ನ ಮೇಲೆ ಸಹ ಒತ್ತಡ ಹೇರಿತು. ಪ್ರತೀಕಾರದ ತೀಕ್ಷ್ಣತೆ ಬಲ್ಲ ಬುಷ್ ಇಸ್ರೇಲನ್ನು ಸುಮ್ಮನಿರಿಸುವ ಉಸಾಬರಿಗೆ ಹೋಗಲಿಲ್ಲ. ಅದರ ಬದಲು ಗಡಿಯಾಚಿನ ಭಯೋತ್ಪಾದನೆಯನ್ನು ತತ್‌ಕ್ಷಣ ನಿಲ್ಲಿಸುವಂತೆ ಲೆಬನಾನ್‌ಗೇ ತಿರುಗೇಟು ಕೊಟ್ಟ! ಮೂರು ದಿನಗಳೊಳಗೆ ಲೆಬನಾನ್ `ಕುಂಯೋ ಮುರ್ರೋ' ಎಂದು ತೆಪ್ಪಗಾಯಿತು.

ಒಂದು ವೇಳೆ ಇದೇ ಘಟನೆ ಭಾರತದಲ್ಲಾಗಿದ್ದರೆ, ನಮ್ಮ ಸರ್ಕಾರ ಹೇಗೆ ನಡೆದುಕೊಳ್ಳುತ್ತಿತ್ತು? ಇಂಥ ಸಂದರ್ಭಗಳಲ್ಲಿ ಹಿಂದೆ ನಮ್ಮ ಸರ್ಕಾರಗಳು ಹೇಗೆ ವರ್ತಿಸಿವೆ ಎಂಬುದು ನಮಗೆ ಗೊತ್ತಿದೆ. ಮುಂಬಯಿ ಸೋಟದಲ್ಲಿ ಇನ್ನೂರು ಜನ ಸತ್ತಾಗಲೂ ನಾವು ಭಯೋತ್ಪಾದಕ ಸಂಘಟನೆಗಳಿಗೆ, ಅವನ್ನು ಬೆಂಬಲಿಸುವ ಪಾಕಿಸ್ತಾನಕ್ಕೆ ತಿರುಗೇಟು ಕೊಡುವುದಿರಲಿ, ಒಂದು ಸಣ್ಣ ಬಿಸಿಯನ್ನೂ ಮುಟ್ಟಿಸುವುದಿಲ್ಲವೆಂದರೆ, ನಮ್ಮ ಸರ್ಕಾರ, ನಾಯಕರು ಅದೆಷ್ಟು ನಿರ್ಲಜ್ಜರು, ಷಂಡರಾಗಿರಬಹುದು ಯೋಚಿಸಿ.

ಇಷ್ಟಾದ ನಂತರ ನಾವು ಕೈಗೊಂಡ ದೊಡ್ಡ ನಿರ್ಧಾರವೆಂದರೆ ಪಾಕ್ ಜತೆಗೆ ಕಾರ್ಯದರ್ಶಿ ಮಟ್ಟದ ಮಾತುಕತೆಯನ್ನು ಸ್ಥಗಿತಗೊಳಿಸುವುದು, ಅಷ್ಟೇ. ಎರಡೂ ದೇಶಗಳ ಮುಖ್ಯಸ್ಥರ ಮಾತುಕತೆಯೇ ಆಚರಣೆಗೆ ಬರದಿರುವಾಗ ಕಾರ್ಯದರ್ಶಿಗಳದ್ದ್ಯಾವ ಲೆಕ್ಕ? ಇದರಿಂದ ಭಾರತ ಸಾಸಿದ್ದಾದರೂ ಏನು?

ಇನ್ನು ಕೆಲವೇ ದಿನಗಳಲ್ಲಿ ಮುಂಬಯಿ ರೈಲು ಸೋಟ ಘಟನೆಯನ್ನು ನೆನಪಿನ ಚೀಲದಲ್ಲಿಟ್ಟು ಮರೆತುಬಿಡುತ್ತೇವೆ. ಸತ್ತವರ ನೆನಪೂ ಆಗುವುದಿಲ್ಲ. ತನಿಖೆ, ವಿಚಾರಣೆ ಎಂದು ಸರ್ಕಾರ ತಿಪ್ಪೆ ಸಾರಿಸುತ್ತದೆ. ಸರ್ಕಾರ ಈಗ ನೀಡಿದ ಭದ್ರತಾ ಕ್ರಮಗಳನ್ನೆಲ್ಲ ವಾಪಸ್ ಪಡೆಯುತ್ತದೆ. ಎಲ್ಲವೂ ಸುಮ್ಮನಾಯಿತೆಂದು ಅಂದುಕೊಳ್ಳುತ್ತೇವೆ.

ಆದರೆ ಉಗ್ರರು ಸುಮ್ಮನಿರುವುದಿಲ್ಲ. ಗೊತ್ತಿರಲಿ. ಮುಂದಿನ ಸೋಟ ಸಂಭವಿಸುವವರೆಗಷ್ಟೇ ವಿರಾಮ. ಛೀ! ನಮಗೊಂದಿಷ್ಟು...!?

No comments: