Monday, July 31, 2006

ನಮ್ಮ ವಿಚಾರವಾದಿಗಳ ಮುಂದೆ ಭಯೋತ್ಪಾದನೆಯ ಪ್ರಶ್ನೆಯಿಡುತ್ತಾ...

ರವಿ ಬೆಳಗೆರೆ
ರವಿ ಬೆಳಗೆರೆ


ಒಬ್ಬ ಮುಸಲ್ಮಾನ ಯಾಕೆ ಉಗ್ರವಾದಿಯಾಗುತ್ತಾನೆ?

ಅದು ನಂತರದ ಪ್ರಶ್ನೆ. ಒಬ್ಬ ಮುಸಲ್ಮಾನ ಹೇಗೆ ಉಗ್ರವಾದಿಯಾಗುತ್ತಾನೆ?ಎಂಬುದು ತಕ್ಷಣಕ್ಕೆ ಉತ್ತರ ಹುಡುಕ ಬೇಕಾಗಿರುವ ಪ್ರಶ್ನೆ.

ನಾನು ತುಂಬ ಆರ್ಡಿನರಿಯಾದ, ತುಂಬ ಸಜ್ಜನರಾದ, ಸಭ್ಯರಾದ, ಸ್ನೇಹಪರರೂ ಆದ ಬಳ್ಳಾರಿಯ ಬಡ ಮುಸಲ್ಮಾನರ ಗಲ್ಲಿಗಳಲ್ಲಿ ಆಡಿ ಬೆಳೆದವನು. ಇವತ್ತಿಗೂ ನನ್ನ ಸ್ನೇಹ ವಲಯದಲ್ಲಿ, ನನ್ನ ನೇತೃತ್ವದ ಸಂಸ್ಥೆಗಳಲ್ಲಿ ಅನೇಕ ಮುಸಲ್ಮಾನರಿದ್ದಾರೆ. ಅವರನ್ನು ಜಾತಿಯ ಕಾರಣಕ್ಕೆ ದ್ವೇಷಿಸುವುದು ನನ್ನಿಂದ ಸಾಧ್ಯವಾಗಿಲ್ಲ, ಈ ತನಕ. ಯಾರನ್ನೂ ಜಾತಿಯ ಕಾರಣಕ್ಕೆ ಪ್ರೀತಿಸುವುದು ಅಥವಾ ದ್ವೇಷಿಸುವುದು ನನಗೆ ಸಾಧ್ಯವಿಲ್ಲ. ಹಾಗೆ ಮಾಡುವವರು ನನ್ನ ದೃಷ್ಟಿಯಲ್ಲಿ ಬಾಲಿಶ ಅನ್ನಿಸುತ್ತಾರೆ. ನಮ್ಮ ಸೋಷಲಿಸ್ಟರು, ವಿಚಾರವಾದಿಗಳೆನ್ನಿಸಿಕೊಂಡವರು ಬ್ರಾಹ್ಮಣರ ವಿರುದ್ಧ ಹೂಂಕರಿಸಿ, ಬೈದು, ಅವಹೇಳನ ಮಾಡುತ್ತಿದ್ದರೆ ಅದು stupidity ಅನ್ನಿಸುತ್ತದೆ. ಹಾಗೇನೇ, ಮುಸಲ್ಮಾನರನ್ನು ಯಾರಾದರೂ ಖಂಡಿಸಿ, ಹೀಯಾಳಿಸಿ ಮಾತನಾಡುತ್ತಿದ್ದರೆ ಅದೂ ಮೂರ್ಖತನ ಅನ್ನಿಸುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ`ಮುಸ್ಲಿಮರು ಅಲ್ಪ ಸಂಖ್ಯಾತರು. ಅವರಲ್ಲಿ insecurity ಇರುವುದು ಸಹಜ. ಆದ್ದರಿಂದಲೇ ತಮ್ಮ ಧರ್ಮ, ಭಾಷೆ, ಮಸೀದಿಗಳ ವಿಷಯ ಬಂದಾಗ ಅವರು ವ್ಯಗ್ರಗೊಂಡು ದಂಗೆಯೇಳುತ್ತಾರೆ. ಅದು ಸಹಜ. ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು' ಅಂತ ಇವೇ ಸೋಷಲಿಸ್ಟ್ ಶಿಖಾಮಣಿಗಳು ಮಾತನಾಡಿದಾಗ ಇವರು ಬೌದ್ಧಿಕವಾಗಿ ಬೆಳೆದೇ ಇಲ್ಲ ಅನ್ನಿಸುತ್ತದೆ.

ನಾನು ಯಾವತ್ತೂ ರಾಜಕಾರಣಿಯ ಧಾಟಿಯಲ್ಲಿ ಬರೆದವನಲ್ಲ, ಮಾತನಾಡಿದವನಲ್ಲ. ಮನುಷ್ಯನ ಸಂಕಟ ನನಗೆ ಅರ್ಥವಾದಂತೆಯೇ ಅವನ ಸಣ್ಣತನ, ಧೂರ್ತತೆಗಳೂ ಅರ್ಥವಾಗುತ್ತವೆ. ಇವತ್ತು ಬೆಂಗಳೂರಿನ ಶಿವಾಜಿನಗರದ ಒಬ್ಬ ಹುಡುಗ, ಆಂಧ್ರದ ನಲ್ಗೊಂಡ ಜಿಲ್ಲೆಯ ಒಬ್ಬ ಯುವಕ, ಹೈದರಾಬಾದಿನ ಒಬ್ಬ ಗೃಹಸ್ಥ- ಭಯೋತ್ಪಾದಕರಾಗಿ ಪರಿವರ್ತಿತರಾಗಿ ದೇಶದ ಮೇಲೆ ಬಂದೂಕು ತಿರುವುತ್ತಾರೆಂದರೆ- ಅವರದು ಯಾವುದೇ ಜಾತಿಯಿರಲಿ, ಅವರು ಅಲ್ಪ ಸಂಖ್ಯಾತರೇ ಇರಲಿ, ಮಹಾನ್‌ಧಾರ್ಮಿಕರೇ ಇರಲಿ- ಇವರನ್ನು ಗೋಡೆಗೆ ನಿಲ್ಲಿಸಿ ಗುಂಡಿಕ್ಕಿ ಕೊಲ್ಲಬೇಕು ಅಂತಲೇ ವಾದಿಸುತ್ತೇನೆ. ಹಾಗಂತ, ಈ ಮುಸಲ್ಮಾನರೆಲ್ಲಾ ಹೀಗೇ ಕಣ್ರೀ ಅನ್ನುವುದೂ ತಪ್ಪು.`ಮುಸಲ್ಮಾನರನ್ನು ಎಲ್ಲರೂ ಅನುಮಾನದಿಂದ ನೋಡುತ್ತಿದ್ದಾರೇ! ಅವರನ್ನು ರಕ್ಷಿಸಬೇಕೂ!' ಅಂತ ವಿಚಾರವಾದಿಗಳು ಬಾಯಿ ಬಡಿದುಕೊಳ್ಳುವುದೂ ತಪ್ಪೇ.

ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನ shoot outನ ನಂತರ ಯಾವ ಶಿವಾಜಿನಗರದ ಮುಸ್ಲಿಮನೂ ಭೀತಗೊಂಡು, ತತ್ತರಿಸುತ್ತಾ, ಘಳಿಗೆಗೊಮ್ಮೆ ಹಿಂದಕ್ಕೂ ಮುಂದಕ್ಕೂ ನೋಡುತ್ತ ಓಡಾಡುತ್ತಿಲ್ಲ. ಆ ಕರ್ಮ ಬಂದಿರುವುದು, ಬೆಂಗಳೂರಿಗರಿಗೆ! ಮಸೀದಿ ಕೆಡವಿದ ಕೂಡಲೆ `ಹಿಂದೂಗಳು ಹೀಗೆ ಮಾಡಬಾರದಿತ್ತು' ಅಂತ ವಿಚಾರವಾದಿಗಳು ಹೇಳಿಕೆ ಕೊಟ್ಟರು. ದಸರೆಗೆ ದೀಪ ಹಚ್ಚಿದರೆ `ಇದು ಪುರೋಹಿತಶಾಹಿ ಮನಸ್ಸು' ಅಂತ ಬರಗೂರು ರಾಮಚಂದ್ರಪ್ಪನವರು ತಿಥಿ ಮಾಡಿಸೋ ಬ್ರಾಹ್ಮಣರಿಂದ ಹಿಡಿದು ಎಲ್ಲರನ್ನೂ ಬೈದರು. ಅಂಥ ಶ್ರೇಷ್ಠ ಸಂಸ್ಥೆಯಾದ IISc ಯೊಳಕ್ಕೆ ಎ.ಕೆ.೫೬ಹಿಡಿದುಕೊಂಡು ನುಗ್ಗಿ ಶ್ರೇಷ್ಠ ವಿಜ್ಞಾನಿಯೊಬ್ಬನನ್ನು ಕೊಂದು ಹಾಕಿದರೆ ಮುಸ್ಲಿಂ ಉಗ್ರಗಾಮಿಯ `ಮೌಲ್ವಿ' ಮನಸ್ಸನ್ನು ಯಾವನಾದರೂ ವಿಚಾರವಾದಿ ಖಂಡಿಸಿದನಾ ಕೇಳಿ? ಇವರು ಹಗಲು ವೇಷದ ಜನ. ಬೈಸಿಕೊಂಡರೆ ಬಯ್ಯುವ, ಕೈಲಾಗದವರನ್ನು ಖಂಡಿಸುವ, ಸುಮ್ಮನಿರುವವರನ್ನು ದಂಡಿಸುವ ಖೋಟಾ ಕ್ರಾಂತಿಕಾರಿಗಳನ್ನು ನಾವು ಗೌರವಿಸಿಕೊಂಡು ಬಂದಿದ್ದೇವೆ.`ಯಾರೋ ಮುಸ್ಲಿಂ ಉಗ್ರರು ಮಾಡಿರಬಹುದಾದ ಕೆಲಸವಿದು. ಮುಸ್ಲಿಮರೇ ಮಾಡಿದ್ದಾರೆಂಬುದಕ್ಕೆ ಇನ್ನೂ ಸಾಕ್ಷ್ಯವಿಲ್ಲ. ಮುಸ್ಲಿಂ ಉಗ್ರರು ಮಾಡಿದ್ದರೂ ಮಾಡಿರಬಹುದು. ಅಂದ ಮಾತ್ರಕ್ಕೆ ನಾವು ಮುಸ್ಲಿಮರೆಲ್ಲರನ್ನೂ ಅನುಮಾನದಿಂದ ನೋಡಬಾರದು' ಅಂತ ಬರೆಯುತ್ತಾರೆ. `ಇದು ಕರ್ಮಠ, ಜಾತ್ಯಂಧ, ಮುಸ್ಲಿಂ ಮೌಲ್ವಿ ಮನಸುಗಳ, ದೇಶದ್ರೋಹಿಗಳ, ಪಾಖಂಡಿಗಳ ಕೆಲಸ' ಅಂತ ಮಾತನಾಡುವ ಧೈರ್ಯ ಇವರಿಗಿಲ್ಲ.

`ಛೆಛೆ, ನಾವು ಮುಸ್ಲಿಮರಲ್ಲಿರುವ ಪುರೋಹಿತಶಾಹಿಯನ್ನೂ ಖಂಡಿಸುತ್ತೇವೆ. ನಮ್ಮ ಅರ್ಥದಲ್ಲಿ ಪುರೋಹಿತಶಾಹಿ ಅಂದ್ರೆ, ಕೇವಲ ಬ್ರಾಹ್ಮಣರು ಅಂತ ಅಂದುಕೋಬೇಡಿ' ಎಂದು ಮತ್ತೆ ವಿಚಾರವಾದಿಗಳು ಹಗ್ಗ ಹೊಸೆಯುತ್ತಾರೆ. ನೆಮ್ಮದಿಯಾಗಿದ್ದ ಬೆಂಗಳೂರಿನ ಸ್ವಾಸ್ಥ್ಯವನ್ನು ಹಾಳುಗೆಡವಿದ ಮುಸ್ಲಿಂ ಭಯೋತ್ಪಾದಕರ ವಿರುದ್ಧ ಒಬ್ಬ ಬುದ್ಧಿಜೀವಿ, ಒಂದು ಸಾಂಕೇತಿಕ ಉಪವಾಸ ಮಾಡಿದನಾ?ಅದೇ ಒಂದು ಮಸೀದಿಯ ಗೋಡೆ ನಡುಗಲಿ?ಈ ಮಂದಿ ಯಾವ ಪರಿ ಒಂದು ಜಾತಿಯ ಸೌಖ್ಯದ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೋ ನೋಡುತ್ತಿರಿ.

ಯಾವುದೇ ಧರ್ಮ, ಅದು ಎಷ್ಟೇ ಮಹತ್ವಪೂರ್ಣದ್ದಾಗಿರಲಿ : ಅದರ ಅನುಯಾಯಿಗಳು ಅರ್ಥಹೀನ ಸ್ವೇಚ್ಛಾಚಾರಕ್ಕೆ, ಉಗ್ರವಾದಕ್ಕೆ, ಹಿಂಸಾಚಾರಕ್ಕೆ ಇಳಿದಾಗ ಅದನ್ನು ಖಂಡಿಸಬೇಕು. ಆ ಧರ್ಮದ ಕಿಡಿಗೇಡಿಗಳನ್ನು ಬುಡಸಮೇತ ಕಿತ್ತು ಚೆಲ್ಲಬೇಕು. `ಧರ್ಮಕ್ಕೆ ಆಪತ್ತು ಬಂದಾಗ ಅದಕ್ಕಾಗಿ ಹೋರಾಟ ಮಾಡು' ಅಂತ ಹೇಳಿರುವುದೇ ನಮ್ಮ ಸಮರ್ಥನೆ ಎಂದು ಯಾರಾದರೂ ಹೇಳಿದರೆ,`ದೇಶಕ್ಕೆ ಆಪತ್ತು ಬಂದಾದ ಕೆಡವಿ ಕೊಲ್ಲು ಅಂತ ನಮ್ಮ ಸಂವಿಧಾನ ಹೇಳಿದೆ' ಎಂಬ ಉತ್ತರ ನೀಡಬೇಕು. ಅಂತಹ ಒಬ್ಬೇ ಒಬ್ಬ ನಾಯಕ, ಬುದ್ಧಿಜೀವಿ, ವಿಚಾರ ವಾದಿ- ಹತ್ತಿರದಲ್ಲೆಲ್ಲಾದರೂ ಕಾಣಿಸುತ್ತಾನಾ? ಕಂಡರೆ ಹೇಳಿ. ಕಡೇಪಕ್ಷ, ಮುಸ್ಲಿಂ ಸಮಾಜದ ಹಿರಿಯರಲ್ಲಾದರೂ ಕೆಲವರು ಪ್ರಜ್ಞಾವಂತರು ಈ ಉಗ್ರವಾದಿ ಮಾರ್ಗವನ್ನು ಖಂಡಿಸಿ ಹೇಳಿಕೆ ಕೊಟ್ಟರಾ?ನಾನು ಗಮನಿಸಿಲ್ಲ.

ಇವತ್ತು ಓಟುಗಳಿಗಾಗಿ, ಜನಪ್ರಿಯತೆಗಾಗಿ, ಖೊಟ್ಟಿ ಸಿದ್ಧಾಂತಗಳಿಗಾಗಿ ಒಂದೇ ಒಂದು ಉಗ್ರವಾದಿ ಚಟುವಟಿಕೆಯನ್ನು ಪ್ರತಿಭಟಿಸದೆ ಸಹಿಸಿಕೊಂಡರೆ, ನಾಳೆ ಇದಕ್ಕಿಂತ ದೊಡ್ಡ ಮೆನೇಸ್ ಇನ್ನೊಂದಿರಲಾರದು. ಸಿಖ್ಖರ ಉಗ್ರಗಾಮಿತ್ವವನ್ನು ಆರಂಭದಲ್ಲಿ ಸಹಿಸಿಕೊಂಡ ಸಿಖ್ಖರೇ ಕಡೆಗೆ ನಾಶವಾಗಿ ಹೋದರು. `ಖಲಿಸ್ತಾನ್'ಯಾರಿಗೂ ಬೇಡದ ಚಳವಳಿಯಾಗಿತ್ತು. ಕಾಶ್ಮೀರದ ಜನ ಇವತ್ತು ಉಗ್ರರನ್ನು ಶಪಿಸಿದಷ್ಟು ಮತ್ಯಾರನ್ನೂ ಶಪಿಸುವುದಿಲ್ಲ. ಮೊದಲ ಸುತ್ತಿನ ಉಗ್ರರನ್ನು ಮನೆಗೆ ಕರೆದು ಇಟ್ಟುಕೊಂಡ ಅವಿವೇಕಿಗಳು ಅವರೇ. ನಾವು ಇತಿಹಾಸದಿಂದ ಪಾಠ ಕಲಿಯದಿದ್ದರೆ ನಾಶವಾಗಿ ಹೋದೇವು. ಹಿಂದೂ ಸನ್ಯಾಸಿ ಎಂಬ ಕಾರಣಕ್ಕೆ ಸಾಯಿಬಾಬಾನ ಸಲಿಂಗ ಚೇಷ್ಟೆ, ಬೂದಿ ವಂಚನೆ, ಖೊಟ್ಟಿ ಪವಾಡಗಳನ್ನು ಬೆಂಬಲಿಸುವವರಿಗೂ, ಅಲ್ಪ ಸಂಖ್ಯಾತರೆಂಬ ಕಾರಣಕ್ಕೆ ಕಿಡಿಗೇಡಿ ಮೌಲ್ವಿಗಳನ್ನು ಸಹಿಸುವುದಕ್ಕೂ ಅಸಲು ವ್ಯತ್ಯಾಸವಿಲ್ಲ.

ಇಷ್ಟಕ್ಕೂ ಒಬ್ಬ ಸಜ್ಜನ ಮುಸಲ್ಮಾನ ಹೇಗೆ ಭಯೋತ್ಪಾದಕನಾಗುತ್ತಾನೆ ಗೊತ್ತೆ? ಅದೊಂದು ವ್ಯವಸ್ಥಿತ ಪ್ರಕ್ರಿಯೆ. ಇಂದು ಅನೇಕ ಮುಸ್ಲಿಂ ಧರ್ಮ ಮಂದಿರಗಳಲ್ಲಿರುವ ಚಿಕ್ಕ ಮಟ್ಟದ ಧರ್ಮಗುರುಗಳು, ಮೌಲ್ವಿಗಳು, ಮದನಿಗಳು ಸ್ಥಳೀಯರಲ್ಲ. ಕೇಳಿದರೆ ಲಖನೌದವರು ಅನ್ನುತ್ತಾರೆ. ಅವರು ಬಾಂಗ್ಲಾದೇಶಿಗಳಾಗಿದ್ದರೆ ಗೊತ್ತು ಆಗುವುದಿಲ್ಲ. ಪ್ರತಿನಿತ್ಯ ನಮಾಜಿಗೆ ಬರುವ ಸಜ್ಜನ ಮುಸ್ಲಿಂ ಯುವಕನೊಬ್ಬನನ್ನು ಆ ಯುವಕನಿಗೆ ಧರ್ಮ-ದೇವರು-ನಂಬಿಕೆ-ನಮಾಜು ಇಷ್ಟು ಬಿಟ್ಟರೆ ಬೇರೆ ಯಾವ ವಿಚಾರವೂ ಗೊತ್ತಿರುವುದಿಲ್ಲ. ಅವನು ಅಪ್ಪಟ ನಿರುಪದ್ರವಿ. ನಮಗೆಲ್ಲ ಇರುವಂತೆಯೇ ಅವನಿಗೂ ಮನೆಯಲ್ಲಿ ಕಷ್ಟ-ಕಾರ್ಪಣ್ಯ, ನಿರುದ್ಯೋಗ, ತಂಗಿಯರ ಮದುವೆ ಮುಂತಾದ ಜಂಜಡಗಳಿರುತ್ತದೆ. ಅಂಥ ಒಬ್ಬ ಯುವಕನನ್ನು ಗುರುತಿಸಿ, ಮಾತನಾಡಿಸಿ, ಯಾವಾಗಾದರೊಮ್ಮೆ ಊರಿಗೆ ಬರುವ ಧರ್ಮಪ್ರಚಾರಕನಿಗೆ ಅವನನ್ನು ಪರಿಚಯಿಸುತ್ತಾನೆ ಬಾಂಗ್ಲಾದೇಶಿ. ಅಲ್ಲಿಂದ ರಿಕ್ರೂಟ್‌ಮೆಂಟ್ ಪ್ರಕ್ರಿಯೆ ಆರಂಭವಾಗುತ್ತದೆ. ಧರ್ಮ ಪ್ರಚಾರಕ ತಲೆ ತೊಳೆಯುತ್ತಾನೆ. ಧರ್ಮ ಅಪಾಯದಲ್ಲಿದೆ ಅಂತಾನೆ. ಇಸ್ರೇಲಿಗಳ ಕುರಿತು ಹೇಳುತ್ತಾನೆ. ಅಮೆರಿಕನ್ನರನ್ನು ಬಯ್ಯುತ್ತಾನೆ. ಭಾರತಿಯರಿನ್ನೇನು? ಅನ್ನುತ್ತಾನೆ. ಗುಜರಾತದ ಕತೆ ಹೇಳುತ್ತಾನೆ. ಒಂದು ಸಲ ನೀನೇ ಸೌದಿ ಅರೇಬಿಯಾಕ್ಕೆ ಹೋಗಿ ನೋಡಿಕೊಂಡು ಬಾ : ಇಡೀ ವಿಶ್ವ ಹಾಗಾಗಬೇಕು ಅನ್ನುತ್ತಾನೆ. ಆಮೇಲಿಂದ ವೀಸಾ -ಪಾಸ್‌ಪೋರ್ಟು ಯಾವುದೂ ತಡವಾಗುವುದಿಲ್ಲ. ಅಲ್ಲಿಂದ ಹಿಂತಿರುಗುವ ಹೊತ್ತಿಗೆ ಈ ಸಜ್ಜನ ಮುಸಲ್ಮಾನ ಆಲ್ಮೋಸ್ಟ್ ಉಗ್ರವಾದಿಯೇ!

ಶಿವಾಜಿನಗರ, ಆಂಧ್ರದ ನಲ್ಗೊಂಡ, ಕರಾವಳಿಯ ಮಂಗಳೂರು, ಕೇರಳದ ಚಿಕ್ಕಪುಟ್ಟ ಹಳ್ಳಿಗಳು, ಚೆನ್ನೈನಂಥ `ಇಂಗ್ಲಿಷರಿಗೆ ಹುಟ್ಟಿದ' ಊರಿನಲ್ಲೂ ಭಯೋತ್ಪಾದಕರು ತಯಾರಾಗುತ್ತಾರೆಂದರೆ- ಅವರು ತಯಾರಾಗುವುದು ಹೀಗೇ. ಇಸ್ರೇಲಿಗಳ ವಿರುದ್ಧದ ಅವರ ಹೋರಾಟ ತುಂಬ ಸಮರ್ಥನೀಯವಾಗಿರಬಹುದು. ಅಮೆರಿಕನ್ನರ ವಿರುದ್ಧ ಸೌದಿಗಳ ಅಸಹನೆ ಕೂಡ ಸಮರ್ಥನೀಯವೇ ಆಗಿರಬಹುದು. ಆದರೆ ರಕ್ತದಾಹಕ್ಕೆ ಬಿದ್ದವರಿಗೆ ಕ್ರಮೇಣ ಎಲ್ಲವೂ ಅವರಂತೆಯೇ ಆಗಬೇಕೆಂಬ ಹಟ ಹುಟ್ಟುತ್ತದೆ. ಕೈಲಿರುವುದು ಕೇವಲ ಸುತ್ತಿಗೆ ಅಂತಾದಾಗ, ಸುತ್ತಲಿನದೆಲ್ಲ ಮೊಳೆ ಅಂತಲೇ ಅನ್ನಿಸತೊಡಗುತ್ತದೆ. ಇಲ್ಲದಿದ್ದರೆ, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಕೊಲೆಯಾದ ಪ್ರೊಫೆಸರ್ ಪುರಿ, ಯಾವತ್ತು ಮುಸ್ಲಿಂ ವಿರೋ ಕೆಲಸ ಮಾಡಿದ್ದ? ಆತನಿಗೆ ಎಷ್ಟು ಜನ ಮುಸಲ್ಮಾನ ಮಿತ್ರರಿದ್ದರೋ?

ಮುಸ್ಲಿಮರಲ್ಲದವರಿಗೂ ಇಸ್ಲಾಂ ಒಂದು ವೈಜ್ಞಾನಿಕ ಧರ್ಮ ಅನ್ನಿಸಬಹುದು. ಖುರಾನ್ ನಮ್ಮ ಅಕಾಡೆಮಿಕ್ ಆಸಕ್ತಿಗಳನ್ನು ಕೆರಳಿಸಬಹುದು. ಇಸ್ಲಾಮಿಕ್ law ಗಿಂತ ಆಸಕ್ತಿಕರ ಸಬ್ಜೆಕ್ಟು ಬೇಕೆ? ಇದೆಲ್ಲದರ ಜೊತೆಯಲ್ಲೇ ನಾವು ನಮ್ಮ ನಡುವಿನ ಮುಸ್ಲಿಮರು ಸುಶಿಕ್ಷಿತರಾಗಲಿ, ಶ್ರೀಮಂತರಾಗಲಿ, ಕ್ರೀಡಾಪಟುಗಳಾಗಲಿ, ವಿಜ್ಞಾನಿಗಳಾಗಲಿ, ಸಾಹಿತಿಗಳಾಗಲಿ, ರಾಜಕಾರಣಿಗಳಾಗಲಿ- ಅಂತ ಬಯಸುತ್ತೇವೆ. ಅವರನ್ನು ಕೇವಲ ಭಾರತೀಯರನ್ನಾಗಿ ನೋಡುತ್ತೇವೆ. ಮುಸ್ಲಿಮರನ್ನು ನಾವು ನೋಡಿಕೊಂಡಷ್ಟು ಚೆನ್ನಾಗಿ ಚೀನಾ, ರಷಿಯಾಗಳು ಕೂಡ ನೋಡಿಕೊಂಡಿಲ್ಲ. ಅಷ್ಟೇಕೆ, ಪಾಕಿಸ್ತಾನಕ್ಕಿಂತ ಭಾರತದಲ್ಲಿ ಮುಸಲ್ಮಾನರು ಹೆಚ್ಚು ಸಂತೋಷವಾಗಿದ್ದಾರೆ. ಕೂಳಿಗೆ ಗತಿಯಿಲ್ಲದ ಸುಮಾರು ಎರಡು ಕೋಟಿ ಬಾಂಗ್ಲಾದೇಶೀಯರಿಗೆ ಭಾರತ ಇವತ್ತಿಗೂ ಆಶ್ರಯ ನೀಡಿದೆ. ಮುಂಬಯಿ ಮತ್ತು ಕಲ್ಕತ್ತಾಗಳಲ್ಲಿ ಅಷ್ಟೂ ಟ್ಯಾಕ್ಸಿ ಡ್ರೈವರುಗಳು ಬಾಂಗ್ಲಾದೇಶೀಯರು. ಅವರ ಕಳ್ಳ ಓಟುಗಳಿಗಾಗಿ ನಮ್ಮ ರಾಜಕಾರಣಿಗಳು ಅವರನ್ನು ಸಹಿಸಿಕೊಂಡರು. ಬಾಂಗ್ಲಾದೇಶಕ್ಕೆ ನಾವು ಮಾಡಿದ ಸೈನಿಕ ಸಹಾಯವನ್ನು ಆ ದೇಶ ಶತಶತಮಾನ ಕಳೆದರೂ ವಾಪಸು ಮರಳಿಸಲಾರದು.

ಆದರೆ ಆದದ್ದೇನು? ಬಾಂಗ್ಲಾದಿಂದ ಹೊರಟ ವಿದ್ರೋಹದ, ದೇಶದ್ರೋಹದ ಬಂದೂಕು ಬೆಂಗಳೂರಿನ ತನಕ ತಲುಪಿತು. ಇಲ್ಲಿನ ಅವಿವೇಕಿಗಳು ಕೆಲವರು ವಿನಾಕಾರಣ ದೇಶದ್ರೋಹಿಗಳಾದರು. ರಸ್ತೆ ಪಕ್ಕದಲ್ಲಿ ಅವರ ಮಸೀದಿ ಕಾಣಿಸಿದರೆ,`ಗಾಡೀನ ಹಾರ್ನ್ ಮಾಡಿ ಅವರ ಮನಸು ಕೆಡಿಸುವುದು ಬೇಡ' ಅಂತ ಯೋಚಿಸಿ, ಅವರಿಗೆ ಗೌರವಕೊಟ್ಟು ಸದ್ದಿಲ್ಲದೆ ಮುಂದಕ್ಕೆ ಹೋಗುವ ಸಭ್ಯ ಬೆಂಗಳೂರಿಗನ ಎದೆಗೇ ಗುಂಡು ಬಿದ್ದಿದೆ.

ಸುಮ್ಮನಿರು ಅಂದರೆ, ಇನ್ನೆಷ್ಟು ದಿನ?

No comments: