Tuesday, July 25, 2006

ಹಿಂದೂ ಭುಗಿಲು: ಕಾಂಗ್ರೆಸ್ಸಿಗರ ಕಣ್ಣಲ್ಲಿ ಕಂಡಿದೆ ದಿಗಿಲು !

ರವಿ ಬೆಳಗೆರೆ


`ಇನ್ನು ಈ ದೇಶದ ಮುಸ್ಲಿಮರನ್ನು ಕೈಬಿಟ್ಟು ಹಿಂದೂಗಳ ಪರವಾಗಿ ನಿಂತುಬಿಡಿ. ಓಲೈಸುತ್ತೀರೋ ಬಿಡ್ತೀರೋ: ಹಿಂದೂಗಳನ್ನು ಎದುರಂತೂ ಹಾಕಿಕೊಳ್ಳಬೇಡಿ' ಎಂಬ ಸಂದೇಶ ಎಸ್ಸೆಂ ಕೃಷ್ಣರ ಸರ್ಕಾರಕ್ಕೆ ಹೈಕಮ್ಯಾಂಡಿನಿಂದ ಅದೆಷ್ಟು ಬಲವಾಗಿ ಬಂದು ತಲುಪಿದೆ ಎಂದರೆ, ಮೊನ್ನೆ ಬೆಂಗಳೂರಿಗೆ ಬಂದಿದ್ದ ತೊಗಾಡಿಯಾನನ್ನು ಎಸ್ಸೆಂ ಕೃಷ್ಣ ಮನೆಗೆ ಊಟಕ್ಕೆ ಕರೆಯುವುದೊಂದನ್ನು ಬಿಟ್ಟು ಇನ್ನೆಲ್ಲ ಮಾಡಿದರು.

ಬೆಂಗಳೂರಿನಲ್ಲಿ ನಡೆದ ವಿರಾಟ್ ಸಭೆ, ಬಾಬಾ ಬುಡನ್‌ಗಿರಿಯಲ್ಲಿ ನಡೆದ ಕೇಸರಿ ಜಾತ್ರೆಗಳು ಏನನ್ನಾದರೂ ಇಂಡಿಕೇಟ್ ಮಾಡುತ್ತಿವೆ ಅಂದರೆ, ಅದು ಕಾಂಗ್ರೆಸ್ಸಿಗರ ಬದಲಾದ ನಿಲುವುಗಳನ್ನಷ್ಟೇ ಇಂಡಿಕೇಟ್ ಮಾಡುತ್ತಿವೆ. ಕೇಸರಿ ಜನಪ್ರವಾಹ ನೋಡಿದ `ಕನ್ನಡಪ್ರಭ' ಪತ್ರಿಕೆಯವರು ಮೊಳಕೈ ಗಾತ್ರದ ಅಕ್ಷರಗಳಲ್ಲಿ ಅದನ್ನು ಹಿಂದೂ ಮಹಾಸಾಗರ ಅಂತ ಬಣ್ಣಿಸಿ ಕೃತಾರ್ಥರಾಗಿ ಹೋದರು. ಅವತ್ತಿನ ತನಕ `ವಿಜಯ ಕರ್ನಾಟಕ'ದವರಷ್ಟೇ ಪ್ರಗತಿಪರ ಬುದ್ಧಿಜೀವಿಗಳ ವಿರುದ್ಧ ಇದ್ದಾರೆ ಎಂಬ ಭಾವನೆಯಿತ್ತು . `ಹಿಂದೂ ಮಹಾಸಾಗರ' ಎಂಬ ದೈತ್ಯಾಕಾರದ ಹೆಡ್ಡಿಂಗು ನೋಡುತ್ತಿದ್ದಂತೆಯೇ ಎಲ್ಲರಿಗೂ ಒಂದು ವಿಷಯ ಮನವರಿಕೆಯಾಗಿ ಹೋಯಿತು; ಬೀಸುವ ಗಾಳಿಯ ದಿಕ್ಕು ಬದಲಾಗಿದೆ !

ಸ್ವಾತಂತ್ರ್ಯ ಬಂದಾಗಿನಿಂದಲೂ ಉತ್ತರ ಪ್ರದೇಶ್, ಮಧ್ಯಪ್ರದೇಶ್, ಈಗಿನ ಛತ್ತೀಸ್‌ಘಡ ಮುಂತಾದವು ಚುನಾವಣೆಗಳಲ್ಲಿ ಒಂದು ರಾಷ್ಟ್ರಮಟ್ಟದ ರಾಜಕೀಯ ಸ್ಥಿತಿಯ ಸಿಗ್ನಲ್ಲು -ಸಂದೇಶಗಳನ್ನು ಕೊಡುತ್ತಲೇ ಬಂದಂಥವು. ಹಿಂದಿ ಬೆಲ್ಟ್‌ನಲ್ಲಿ ಅಕಾರಕ್ಕೆ ಬಂದ ಪಕ್ಷವೇ ದೇಶವನ್ನಾಳುತ್ತದೆ ಎಂಬ ಮಾತು ದಶಕಗಳ ಕಾಲ ಜಾರಿಯಲ್ಲಿತ್ತು . ಮಧ್ಯೆ ಒಂದೆರಡು ಕಲಬೆರಕೆಗಳಾದರೂ ಜಾತಿ ಆಧಾರಿತವಾದ ಮತ ಚಲಾವಣೆಯ ಪ್ಯಾಟರ್ನ್ ಮೊನ್ನೆ ಮೊನ್ನೆಯ ತನಕ ತೀವ್ರವಾಗಿ ಬದಲಾಗಿರಲಿಲ್ಲ . ಆದರೆ ಇವತ್ತು ಉಮಾಭಾರತಿಯ ಗೆಲುವನ್ನು ನೋಡುತ್ತಿದ್ದರೆ, ಇದು ಕೇವಲ ಹಿಂದೂಗಳ ಕ್ರೋಢೀಕರಣದಿಂದಾಗಿ, ಕೇವಲ ಹಿಂದೂಗಳ ಒಗ್ಗೂಡುವಿಕೆಯ ನಿರ್ಧಾರದಿಂದಾಗಿ ಒದಗಿ ಬಂದ ಗೆಲುವಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಮೊಟ್ಟ ಮೊದಲ ಬಾರಿಗೆ ಮುಸ್ಲಿಮರೂ ಬಿಜೆಪಿಯ ಕಡೆಗೆ ವಾಲಿದ್ದಾರೆ. ಇಲ್ಲದಿದ್ದರೆ ದಿಗ್ವಿಜಯ್ ಸಿಂಗ್ ವಿರುದ್ಧ ಉಮಾಭಾರತಿಯ ಬಿಜೆಪಿ ೧೭೩ ಸ್ಥಾನಗಳಲ್ಲಿ ನೆಲೆಯೂರಲು ಸಾಧ್ಯವೇ ಇರಲಿಲ್ಲ . ರಾಜಸ್ತಾನ್ ಮತ್ತು ಛತ್ತೀಸ್‌ಘಡದಲ್ಲೂ ಕೂಡ ಮುಸ್ಲಿಮರು ಏಕಾ‌ಏಕಿ ಕಾಂಗ್ರೆಸ್‌ನ ಕೈಬಿಟ್ಟು ಬಿಜೆಪಿಯತ್ತ ನಡೆದುಹೋಗಿರುವ ಸೂಚನೆಗಳಿವೆ.

ಇದನ್ನು ಗಮನಿಸುತ್ತಿದ್ದಂತೆಯೇ ಬಹುಶಃ ಕರ್ನಾಟಕದಲ್ಲಿ ಮೊದಲು ಬೆಚ್ಚಿಬಿದ್ದವರು ಎಸ್ಸೆಂ.ಕೃಷ್ಣ . ಮೂಡಿಗೆರೆಯಂತಹ ಅಂಗೈಯಗಲದ ಊರಿಗೆ ತೊಗಾಡಿಯಾ ಬರುತ್ತಾನೆಂದರೆ, `ಕೈ ಮುರೀತೀನಿ, ಕಾಲು ಮುರೀತಿನಿ' ಅಂದಿದ್ದರು ಕಾಂಗ್ರೆಸ್ ನಾಯಕಿ ಮೋಟಮ್ಮ. ಆ ಮಾತ್ರದ ಧೈರ್ಯ ಕೃಷ್ಣರಿಗಿರಲಿಲ್ಲವಾ ? `ನಮ್ಮದು ಪ್ರಜಾಪ್ರಭುತ್ವವಾದೀ ದೇಶ. ಯಾರು ಬೇಕಾದರೂ ಬಂದು ಭಾಷಣ ಮಾಡಿಕೊಂಡು ಹೋಗಬಹುದು' ಅಂದರು. ಅಷ್ಟೇ ಅಲ್ಲ , ಚಂದ್ರೇಗೌಡರಂಥ ಮಂತ್ರಿಗೆ ಕೌಪೀನ ತೊಡಿಸಿ ಅಪ್ಪಟ ಬ್ರಾಹ್ಮಣ ವಟುವಿನಂತೆ ಮಾತಾಡಲು ಬಿಟ್ಟು ತಾವು ಸುಮ್ಮನುಳಿದು ಬಿಟ್ಟರು.

ಇವತ್ತು ಮಲೇಬೆನ್ನೂರಿನಲ್ಲಿ , ಬಾಬಾ ಬುಡನ್ ಗಿರಿಯಲ್ಲಿ , ಬೆಂಗಳೂರಿನಲ್ಲಿ ತೊಗಾಡಿಯೂ ಮತ್ತು ಮುತಾಲಿಕ್‌ರಂಥವರು ಮಾಡುತ್ತಿರುವ ವಿನಾಶಕಾರಿ ಭಾಷಣಗಳನ್ನು ಕೇಳಿಕೊಂಡು ಕಾಂಗ್ರೆಸ್ಸೆಂಬ ಕಾಂಗ್ರೆಸ್ಸು ಖಿಮಕ್ಕೆನ್ನದೆ ಕೂತಿದೆಯೆಂದರೆ, ಅದರ ಹಿಂದಿನ ಸಾರಾಂಶ ಇಷ್ಟೇ.

ಇವರು ಮುಸ್ಲಿಮರನ್ನು ಪೂರ್ತಿ ಕೈಬಿಟ್ಟಿದ್ದಾರೆ ! ಇದಕ್ಕೆ ಕಾರಣಗಳೂ ಸ್ಪಷ್ಟವಾಗಿಯೇ ಇವೆ. ಕಾಂಗ್ರೆಸ್‌ನಂಥ ಪರಾವಲಂಬಿ ಪಕ್ಷಕ್ಕೆ ಈ ಅರ್ಧ ಶತಮಾನದಲ್ಲಿ ಎಲ್ಲೂ ಬಲವಾದ ಬೇರುಗಳೇ ಇಳಿದಿಲ್ಲ . ಅವತ್ತಿಗೂ ಇವತ್ತಿಗೂ ಈ ಪಕ್ಷ ನೆಹರೂ ಮನೆತನದ ಚರಂಡಿಯ ಪಕ್ಕದಿಂದ ಎದ್ದು ಬಂದಿಲ್ಲ . ಇಂದಿರಾಗಾಂಯ ಹತ್ಯೆಯ ನಂತರ ಇವರು ತಿಥಿ ಊಟ ಉಂಡಾಗ ಮಾತ್ರ ಗೆದ್ದವರು. ಇಂದಿರಾ ಹತ್ಯೆಯಾಯಿತು; ಗೆದ್ದರು. ರಾಜೀವ್ ಹತ್ಯೆಯಾಯಿತು: ಗೆದ್ದರು. ಆನಂತರ ಇವರ ಕ್ಯಾಲ್ಕುಲೇಷನ್ನು ಎಷ್ಟು ಅಡ್ಡದಾರಿ ಹಿಡಿಯಿತೆಂದರೆ, ಸೋನಿಯಾಗಾಂಯ ವೈಧವ್ಯವನ್ನು ಮುಂದಿಟ್ಟುಕೊಂಡು ಬಂದು ತಟ್ಟೆ ಕಾಸು ಕೇಳತೊಡಗಿದರು. ಅಲ್ಲಿಗೆ ಪರಿಸ್ಥಿ ತಿ ಉಲ್ಟಾ ಹೊಡೆಯಲಾರಂಭಿಸಿತು. ಕಾಂಗ್ರೆಸ್ಸಿಗರ `ತಿಥಿಯೂಟ'ದ ರಾಜಕಾರಣಕ್ಕೆ ವಿರುದ್ಧವಾಗಿ ಬಿಜೆಪಿಯವರು ಅರಿಶಿನ ಕುಂಕುಮ, ಬಾಗಿನ ತಂದು ಮತದಾರರನ್ನು ತಮ್ಮೆಡೆಗೆ ಸೆಳೆದುಕೊಳ್ಳಲಾರಂಭಿಸಿದರು. ಅವತ್ತಿನ ಆ ಕ್ಷಣದ ತನಕ ಕಾಂಗ್ರೆಸ್ಸಿಗರು ಮಾತನಾಡುತ್ತಿದ್ದುದು ಮುಸ್ಲಿಮರ, ಕ್ರೈಸ್ತರ ಮತ್ತು ಇತರ ಅಲ್ಪಸಂಖ್ಯಾತರ ಪರವಾಗಿಯೇ. ನಿಮಗೆ ನೆನಪಿದೆಯಾ? ಗುಜರಾತದ ಮುಸ್ಲಿಂ ಮಾರಣಹೋಮ ನಡೆದ ಸಂದರ್ಭದಲ್ಲಿ `ಮುಸ್ಲಿಂಮರನ್ನು ಓಲೈಸುವುದನ್ನು ನಿಲ್ಲಿಸಿ' ಎಂಬ ತಲೆಬರಹದ ಸಂಪಾದಕೀಯವೊಂದನ್ನು ನಾನು ಬರೆದಿದ್ದೆ. ನನ್ನ ಪತ್ರಕರ್ತ ಮಿತ್ರರನೇಕರು ಕಿಡಿಕಿಡಿಯಾಗಿದ್ದರು. ಯಥಾಪ್ರಕಾರ ಮುಸ್ಲಿಂ ಓಲೈಸುವಿಕೆಯ ವಿರುದ್ಧ ಮಾತನಾಡುತ್ತಿದ್ದಂತೆಯೇ ನೀನು ಆರೆಸ್ಸೆಸ್ಸು, ನೀನು ಭಜರಂಗಿ, ನೀನು ಬಿಜೆಪಿ ಅಂದಿದ್ದರು. ಆದರೆ ಮುಸ್ಲಿಮರನ್ನು ಓಲೈಸುವುದು ತೀರಾ ಮುಸ್ಲಿಮರಿಗೆ ಎಷ್ಟು ಅಪಾಯಕಾರಿ ಎಂಬುದನ್ನು ನನ್ನ ಮುಸ್ಲಿಂ ಓದುಗ ಮಿತ್ರರೂ ಸೇರಿದಂತೆ, ದೊಡ್ಡದೊಂದು ಓದುಗ ಸಮೂಹ ಅರ್ಥ ಮಾಡಿಕೊಂಡಿತ್ತು . ಇವತ್ತು ಅದು ಪ್ರಾಕ್ಟಿಕಲ್ ಆಗೇ ಸಾಬೀತಾಗಿದೆ. ಕಾಂಗ್ರೆಸ್ಸಿಗರ ಢೋಂಗು, ಉಳಿದ ಪಕ್ಷಗಳ ನಾಯಕರ ದಗಲುಬಾಜಿತನ ಎರಡನ್ನೂ ಮುಸ್ಲಿಮರು ಅರ್ಥ ಮಾಡಿಕೊಂಡಿದ್ದಾರೆ.

ನಿನ್ನೆ ಮೊನ್ನೆಯ ತನಕ ಯಾರ್‍ಯಾರು ಸೆಕ್ಯುಲರಿಸಂ ಬಗ್ಗೆ ಮಾತನಾಡುತ್ತಿದ್ದರು ಮತ್ತು ಯಾರ್‍ಯಾರು ಮುಸ್ಲಿಮರ ಪರವಾಗಿ ದನಿಯೆತ್ತುತ್ತಿದ್ದರು ಎಂಬುದನ್ನು ನೀವೇ ಕೂತು ಪಟ್ಟಿ ಮಾಡಿರಿ. ಜಾರ್ಜ್ ಫನಾಂಡಿಸ್ ಅದರಲ್ಲಿ ಮೊದಲಿಗರಾಗುತ್ತಾರೆ. ಮಮತಾ ಬ್ಯಾನರ್ಜಿ ಕೇವಲ ಭಾರತೀಯ ಮುಸಲ್ಮಾನರಷ್ಟೇ ಅಲ್ಲ ; ಬಾಂಗ್ಲಾದೇಶದ ಮುಸಲ್ಮಾನರೂ ತನ್ನ ಬೆನ್ನಲ್ಲೇ ಹುಟ್ಟಿದವರು ಎಂಬಂತೆ ಮಾತನಾಡುವಾಕೆ. ಉಳಿದಂತೆ ಕರುಣಾನಿ, ಚಂದ್ರಬಾಬು ನಾಯ್ಡು, ಶರದ್ ಯಾದವ್, ಮುಲಾಯಂ ಸಿಂಗ್ ಯಾದವ್- ಇವರೆಲ್ಲರೂ ಮೈನಾರಿಟಿಗಳ ಪರವಾಗಿ ಮಾತನಾಡಿದವರೇ. ಆದರೆ ಅಕಾರದ ವಿಷಯಕ್ಕೆ ಬಂದಾಗ ಇವರ್‍ಯಾರಾದರೂ ಅಟಲ ಬಿಹಾರಿ ವಾಜಪೇಯಿಯೊಂದಿಗೆ ಕೈ ಕುಲುಕುವುದಕ್ಕೆ ಹಿಂಜರಿದರಾ? ಪರೀಕ್ಷಿಸಿ ನೋಡಿ. ಈ ನಾಯಕರು ನೂರೈವತ್ತು ಮಾತು ಆಡಬಹುದು. ಆದರೆ ಅಕಾರ ಅನ್ನೋದು ಕೈನಿಲುಕಿನ ಸಂಗತಿಯಾದಾಗ ಮುಸ್ಲಿಮರನ್ನೂ ಕೈಬಿಡುತ್ತಾರೆ, ದಲಿತರನ್ನೂ ಕೈಬಿಡುತ್ತಾರೆ, ತಮ್ಮ ಗೆಲುವಿಗೆ ಕಾರಣರಾದ ಯಾವ ಚಿಕ್ಕ ವರ್ಗವನ್ನು ಬೇಕಾದರೂ ಕೈಬಿಡುತ್ತಾರೆ. ಇದಕ್ಕೆ ಮಾಯಾವತಿಗಿಂತ ಬೇರೆ ಉದಾಹರಣೆ ಬೇಕಿಲ್ಲ . ಅಷ್ಟೇಕೆ: ಮೈ ತುಂಬ ಕಾಂಗ್ರೆಸ್ ಮೆತ್ತಿಕೊಂಡಿರುವ ಶರದ್ ಪವಾರ್‌ನಂಥ ರಾಜಕಾರಣಿಯೇ, `ಸೋನಿಯಾ ಗಾಂ ವಿದೇಶಿ ಮಹಿಳೆಯಾಗಿರುವಾಗ ಆಕೆಯನ್ನು ನಾಯಕಿಯಾಗಿ ಸ್ವೀಕರಿಸುವುದು ಹೇಗೆ ?' ಎಂಬ ಮಾತನ್ನಾಡುತ್ತಿದ್ದಾರೆ. ಅಂದಮೇಲೆ ಈ ಕಾಂಗ್ರೆಸ್ಸಿಗರನ್ನು , ಸೆಕ್ಯುಲರಿಸ್ಟ್ ಮುಖವಾಡಿಗಳನ್ನು ನಂಬಿಕೊಂಡು ಮುಸಲ್ಮಾನರು ಬದುಕುವುದಾದರೂ ಹೇಗೆ ?

ಉಳಿದೆಲ್ಲರಿಗಿಂತ ಮುಂಚೆ ಈ ಢೋಂಗಿಗಳನ್ನು ಅರ್ಥ ಮಾಡಿಕೊಂಡವರೇ ಮುಸ್ಲಿಮರು. ಕೇವಲ ಭಾರತದ ಮಟ್ಟದಲ್ಲಲ್ಲ : ಜಾಗತಿಕ ಮಟ್ಟದಲ್ಲೂ ಮುಸ್ಲಿಂ ಸಮುದಾಯ ಪ್ರತ್ಯೇಕಗೊಳ್ಳುತ್ತಿದೆ ಎಂಬುದನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ. ತೀರ ಕಟ್ಟರ್ ಮುಸ್ಲಿಂ ದೇಶಗಳನ್ನು ಅಮೆರಿಕ ಕೂಡ ಮೊದಲಿನಂತೆ ಪಕ್ಕಕ್ಕೆ ಕೂಡಿಸಿಕೊಂಡು ಪ್ರೀತಿಸುತ್ತಿಲ್ಲ . ಮುಸ್ಲಿ ಂ ಉಗ್ರವಾದದಿಂದಾಗಿ ರಷ್ಯದಂತಹ ದೇಶ ಹೈರಾಣಾಗಿ ಹೋಗಿದೆ. ಫ್ರಾನ್ಸ್ ಮತ್ತು ಇಂಗ್ಲೆಂಡ್‌ಗಳು ಪಾಕಿಸ್ತಾನವನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿಲ್ಲ . ಜಗತ್ತಿನ ಅತ್ಯಂತ ಪ್ರಬಲ ಶಕ್ತಿಯಾಗಿ ಬೆಳೆಯುತ್ತಿರುವ ಚೀನಾ, ವ್ಯಾಪಾರೀಕರಣದ ಪ್ರವಾಹದಲ್ಲಿ ತೇಲಿ ಹೋಗುತ್ತಿದೆಯೇ ಹೊರತು, ಪಾಕಿಸ್ತಾನಕ್ಕೆ ಬೆಂಬಲ ಕೊಟ್ಟು ಭಾರತದ ಮೇಲೆ ದಂಡೆತ್ತಿ ಕಳಿಸುವ ಉತ್ಸಾಹ ತೋರುತ್ತಿಲ್ಲ .

ಪರಿಸ್ಥಿತಿ ಹೀಗಿರುವಾಗ, ಯಾವತ್ತಾದರೊಂದು ದಿನ ಭಾರತದಲ್ಲಿರುವ ತಮಗೆ ತೊಂದರೆಯಾದರೆ ಪಕ್ಕದ ಪಾಕಿಸ್ತಾನದಿಂದ ಅಥವಾ ಬಾಂಗ್ಲಾದೇಶದಿಂದ ತಮಗೆ ನೆರವು ಸಿಗಬಹುದು ಎಂಬ ಮೂಢನಂಬಿಕೆಯಿದ್ದ ಚಿಕ್ಕದೊಂದು ಮುಸ್ಲಿಂ ಸಮೂಹವಿತ್ತಲ್ಲ ? ಈ ಚಿಕ್ಕ ಸಮೂಹಕ್ಕೂ ಈಗ ಮನವರಿಕೆಯಾಗಿ ಹೋಗಿದೆ. ಪಕ್ಕದ ದೇಶಗಳಿಂದ ನೆರವು ಬರುವುದಿಲ್ಲ . ಸೌದಿ, ದುಬೈ ಮತ್ತು ಇತರೆ ಕೊಲ್ಲಿ ರಾಷ್ಟ್ರಗಳಲ್ಲೂ ಭಾರತೀಯ ಮುಸ್ಲಿಮರು ಬೇಡವಾಗುತ್ತಿದ್ದಾರೆ. ಮೊದಲಿನ ಹಾಗೆ ಗಲ್ ಮನಿ ಇನ್ನು ಹರಿದು ಬರುವುದಿಲ್ಲ . ಈ ಪರಿಸ್ಥಿತಿಯಲ್ಲಿ ಭಾರತೀಯ ಮುಸಲ್ಮಾನರಿಗೆ ಉಳಿದಿರುವ ಮತ್ತು ಅವರು ಈಗಾಗಲೇ ಆಯ್ದುಕೊಂಡೂ ಉಳಿದಿರುವ ಒಂದು ಸರಳ ದಾರಿಯೆಂದರೆ- ಬಹುಸಂಖ್ಯಾತರೊಂದಿಗೆ ಕೂಡಿ, ನೆಮ್ಮದಿಯಾಗಿ ಬಾಳುವುದು.

ಇದನ್ನೇ ಮುಸ್ಲಿಮರು ೧೯೪೭ರಿಂದಲೂ ಬಯಸಿದ್ದರು. ಆವತ್ತು ಭಜರಂಗಿಗಳೂ ಇರಲಿಲ್ಲ . ಇದ್ದವರು ಬೆರಳೆಣಿಕೆಯಷ್ಟು ಆರೆಸ್ಸಿಸ್ಸಿಗರು ಮತ್ತು ದೇಶ ವಿಭಜನೆಯ ಸಮಯದಲ್ಲಿ ಪಾಕಿಸ್ತಾನಿ ಮುಸ್ಲಿಮರ ಕೈಗಳಲ್ಲಿ ನೊಂದವರು. ಕಾಲಾಂತರದಲ್ಲಿ ಇವರೂ ಸುಮ್ಮನಾಗಿ ಹೋಗುತ್ತಿದ್ದರೇನೋ? ಆದರೆ ಈ ಕಾಂಗ್ರೆಸ್ಸಿಗರು `ಮುಸ್ಲಿಂ ಮನವೊಲಿಸುವಿಕೆ' ಎಂಬುದನ್ನು ಅದ್ಯಾವ ಮಟ್ಟದ ಕ್ಲೀಷೆಯನ್ನಾಗಿ, ಪೀಡೆಯನ್ನಾಗಿ ಬೆಳೆಸುತ್ತ ಹೋದರೆಂದರೆ, ಐವತ್ತು ವರ್ಷಗಳ ಅವಯಲ್ಲಿ ಹಿಂದೂ ಸಂಕುಲ, ಇವರ ಮುಸ್ಲಿಂ ಓಲೈಸುವಿಕೆಯಿಂದಾಗಿಯೇ ಬೇಸತ್ತು ಬಿಜೆಪಿಯ ಕಡೆಗೆ ಜಮೆಯಾಗಿ ಹೋಯಿತು. ಅದಕ್ಕೆ ಸರಿಯಾಗಿ ತಿಥಿಯೂಟದ ಕಾಂಗ್ರೆಸ್ಸಿಗರು ರಾಜಕಾರಣದ ಎಡಬಲ ಗೊತ್ತಿಲ್ಲದ ಸೋನಿಯಾರನ್ನು ತಂದು ತಮ್ಮ ಅನಾಯಕಿಯನ್ನಾಗಿ ಕೂರಿಸಿಕೊಂಡರು. ಆಕೆಯ ಅಪಕ್ವತೆ ಒಂದು ಐಬಾದರೆ, ಆಕೆಯ ವಿದೇಶಿ ಮೂಲವೇ ಇನ್ನೊಂದು ಐಬಾಯಿತು. ಮುಸ್ಲಿಮರು, ಕ್ರಿಶ್ಚಿಯನ್ನರು ಆಕೆಯನ್ನು ವಿದೇಶಿಯಳಾಗಿದ್ದರೂ ಪರವಾಗಿಲ್ಲ ಅಂತ ಒಪ್ಪಿಕೊಂಡರೆಂದು ಗೊತ್ತಾದ ಘಳಿಗೆಯಲ್ಲೇ ಉಳಿದ ಅಷ್ಟೂ ಹಿಂದೂ ಸಂಕುಲ ಬಿಜೆಪಿಯ ಪರವಾಗಿ ನಿಂತು ಬಿಟ್ಟಿತು.

ಈಗ ಕಾಂಗ್ರೆಸ್ಸಿಗರ ಮುಖಗಳಲ್ಲಿ ಕೇವಲ ದಿಗಿಲು ಕಾಣಿಸುತ್ತಿದೆ. ಮೊನ್ನೆ ನಡೆದ ವಿರಾಟ ಸಭೆಗೆ ಬಂದಿದ್ದ ಕೇಸರಿ ಜನ ಕೃಷ್ಣರ ಹಣೆಯಲ್ಲಿ ಬೆವರೆಬ್ಬಿಸಿ ಹೋಗಿದ್ದಾರೆ. ಬಂದವರೆಲ್ಲರ ಮತಗಳೂ ಬಿಜೆಪಿ ಜೋಳಿಗೆಗೆ ಬೀಳುತ್ತವೋ ಇಲ್ಲವೋ, ಆ ಮಾತು ಬೇರೆ. ಬಂದವರಿಗೂ, ಇಲ್ಲೇ ಇದ್ದವರಿಗೂ ಮನವರಿಕೆಯಾಗಿರುವ ಒಂದು ಸತ್ಯವೆಂದರೆ, ಕಾಂಗ್ರೆಸ್ಸಿಗರು ಇನ್ನು ಹಿಂದೂಗಳನ್ನು ಎದುರುಹಾಕಿಕೊಳ್ಳುವುದಿಲ್ಲ .

ನೀವೇ ನೋಡುತ್ತಿರಿ: ಕಾಂಗ್ರೆಸ್ಸು ಇನ್ನೂ ಬದಲಾಗುತ್ತದೆ. ಸೋನಿಯಾ ಜಾಗಕ್ಕೆ ಪ್ರಿಯಾಂಕಾ ಬರಬೇಕಾಗುತ್ತದೆ. ಹೊಸ ಭಜನೆ ಆರಂಭವಾಗುತ್ತದೆ. ಈ ದೇಶ ಇನ್ನೂ ಅದೆಷ್ಟೋ ಮನ್ವಂತರಗಳನ್ನು ಕಣ್ಣಾರೆ ನೋಡಬೇಕಾಗುತ್ತದೆ.

No comments: