Monday, September 25, 2006

ಇತಿಹಾಸದ ಸುಳ್ಳು ಚಿತ್ರಣ ಬೇಡ

ಎಸ್.ಎಲ್. ಭೈರಪ್ಪ

"ಇತಿಹಾಸದ ಸುಳ್ಳು ಚಿತ್ರಣದ ಮೇಲೆ ರಾಷ್ಟ್ರೀಯತೆ ಗಟ್ಟಿಗೊಳಿಸುವುದು ಅಸಾಧ್ಯ"ವಿದ್ಯಾಮಂತ್ರಿ ಶಂಕರಮೂರ್ತಿಯವರು, ಮೊದಲು ಇದ್ದ ಕನ್ನಡದ ಬದಲಿಗೆ ಫಾರಸಿಯನ್ನು ಮೈಸೂರು ರಾಜ್ಯದ ಆಡಳಿತ ಭಾಷೆಯಾಗಿ ಮಾಡಿಕೊಂಡ ಟಿಪ್ಪುಸುಲ್ತಾನನು ಒಬ್ಬ ಕನ್ನಡ ವಿರೋಧಿ ಎಂದು ಹೇಳಿದುದಕ್ಕೆ ನಿರೀಕ್ಷಿತ ವಲಯಗಳಲ್ಲಿ ನಿರೀಕ್ಷಿತ ಗುಂಪುಗಳಿಂದ ವಿರೋಧ ವ್ಯಕ್ತವಾಗುತ್ತಿರುವುದು, ಅವರು ರಾಜೀನಾಮೆ ಕೊಡದಿದ್ದರೆ, ಮುಖ್ಯಮಂತ್ರಿಗಳು ಅವರನ್ನು ವಜಾ ಮಾಡದಿದ್ದರೆ, ಉಗ್ರ ಹೋರಾಟ ಪ್ರಾರಂಭಿಸುವುದಾಗಿ ಎಚ್ಚರಿಕೆ ಕೊಡುತ್ತಿರುವುದು ಕರ್ನಾಟಕ ರಾಜಕೀಯದ ಸದ್ಯದ ರಂಜಕ ಸುದ್ದಿಯಾಗಿದೆ. ಈ ವಿಷಯದಲ್ಲಿ ತಾವು ಸಾರ್ವಜನಿಕ ಚರ್ಚೆಗೆ ಸಿದ್ಧವಾಗಿರುವುದಾಗಿ ಸಚಿವರು ಪುನಃ ಸಮರ್ಥಿಸಿಕೊಂಡಿದ್ದಾರೆ.

ನಿನ್ನೆ(೨೧-೯-೨೦೦೬) ಅದಕ್ಕಾಗಿಯೇ ತಮ್ಮ ಸಂಗಡಿಗರಾದ ಕೆ. ಮರುಳಸಿದ್ದಪ್ಪ, ಕಾಂಗ್ರೆಸ್‌ನ ಮಾಜಿ ಪ್ರಾಥಮಿಕ ವಿದ್ಯಾಮಂತ್ರಿ ಪ್ರೊ.ಬಿ.ಕೆ. ಚಂದ್ರಶೇಖರ್ ಸಂಗಡ ಒಂದು ಮಾಧ್ಯಮಗೋಷ್ಠಿ ಯನ್ನು ಕರೆದ ನಟ, ನಿರ್ದೇಶಕ, ನಾಟಕ ಕಾರ ಗಿರೀಶ್ ಕಾರ್ನಾಡರು ಟಿಪ್ಪುಕುರಿತು ನಾಟಕ ಬರೆದಿರುವ ತಾವು ಶಂಕರಮೂರ್ತಿಯವರೊ ಡನೆ ಬಹಿರಂಗ ಚರ್ಚೆಗೆ ಸಿದ್ಧವಿರುವುದಾಗಿ ಘೋಷಿಸಿದ್ದಾರೆ. ಇದನ್ನು ನಾನು ಮೆಚ್ಚುತ್ತೇನೆ. ಆದರೆ ಅವರು ಮತ್ತು ಅವರ ಸಂಗಡಿಗರು ಶಂಕರಮೂರ್ತಿಗಳ ಮಾತು ಅಪಾಯಕಾರಿ, ರಾಷ್ಟ್ರಘಾತಕ ಎಂಬ ತೀರ್ಪನ್ನೂ ನೀಡಿ ಬಿಟ್ಟಿದ್ದಾರೆ. ಈ ಚರ್ಚೆಯ ರಾಜಕೀಯ ಒಳ ಸುಳಿಗಳನ್ನು ಚರ್ಚಿಸುವುದು ಇಲ್ಲಿ ನನ್ನ ಉದ್ದೇಶವಲ್ಲ. ಕಾರ್ನಾಡರನ್ನು ಒಬ್ಬ ಸಾಹಿತಿ, ಕಲಾವಿದ ಎಂದು ಮಾತ್ರ ಭಾವಿಸಿ, ನಾನು ಕೆಳಗಿನ ನಾಲ್ಕು ಮಾತುಗಳನ್ನು ಹೇಳಲಿಚ್ಛಿಸುತ್ತೇನೆ.

ಅವರ `ತುಘಲಕ್' ನಾಟಕವು ಪ್ರಕಟವಾದ ಹೊಸತರಲ್ಲಿಯೇ ನಾನು ಓದಿದೆ. ಅದರ ರಚನಾ ಕೌಶಲ ಚೆನ್ನಾಗಿದೆ. ಹಾಸ್ಯ ಗಂಭೀರಗಳ ಮಿಶ್ರಣ ಪರಿಣಾಮಕಾರಿಯಾಗಿದೆ. ನಿರ್ದೇಶನಕ್ಕೆ ತುಂಬ ಅವಕಾಶವಿದೆ. ಆಗ ಯೂರೋಪಿನಲ್ಲಿ ಪ್ರಭಾವಶಾಲಿ ಲೇಖಕನಾಗಿದ್ದ ಎಕ್ಸಿಸ್ಟೆಂಶಿಯಲಿಸ್ಟ್ ಕಾಮೂನ `ಕಾಲಿಗುಲ' ನಾಟಕದ ಮಾದರಿಯಲ್ಲಿ ಅದರ ಪ್ರಭಾವದಿಂದ ರಚಿತವಾಗಿದೆ. ನಾನು ತಿಳಿದ ಐತಿಹಾಸಿಕ ಮಹಮ್ಮದ್ ಬಿನ್ ತುಘಲಕ್‌ನ ಪಾತ್ರಕ್ಕಿಂತ ಇಲ್ಲಿ ಅವನನ್ನು ಆದರ್ಶೀಕರಿಸಿದ್ದಾರೆ ಎಂಬುದು ನನ್ನ ಭಾವನೆಯಾಗಿತ್ತು. ಆ ಕುರಿತು ಹೆಚ್ಚು ಸಂಶೋಧನೆ ಮಾಡುವ ಆಸಕ್ತಿಯಾಗಲಿ ವ್ಯವಧಾನವಾಗಲಿ ನನಗೆ ಆಗ ಇರಲಿಲ್ಲ.

ಅನಂತರ, ಸುಮಾರು ನಲವತ್ತು ವರ್ಷಗಳ ಮೇಲೆ, ಅವರ `ಟಿಪೂ ಸುಲ್ತಾನ್ ಕಂಡ ಕನಸು' ಎಂಬ ನಾಟಕವನ್ನು ಓದಿದೆ. ನಾನು ತಿಳಿದ ಟಿಪ್ಪುವಿಗೆ ಅವರು ಸಂಪೂರ್ಣ ವಾಗಿ ಬಿಳಿ ಬಣ್ಣ ಬಳಿದು ಅವನನ್ನೊಬ್ಬ ಧೀರೋದಾತ್ತ ದುರಂತ ನಾಯಕನನ್ನಾಗಿ ಮಾಡಿದ್ದಾರೆ ಎನಿಸಿತು. ಏಕೆಂದರೆ ಹಳೆ ಮೈಸೂರಿನವನಾದ ನನಗೆ ಟಿಪ್ಪುವಿನ ವಿಷಯ ಸಹಜವಾಗಿಯೇ ಹೆಚ್ಚು ವಿವರವಾಗಿ ತಿಳಿದಿತ್ತು.

ಈ ನಡುವೆ ಕಾರ್ನಾಡರ ರಾಜಕೀಯ ಹಿನ್ನೆಲೆಯ ಹೇಳಿಕೆಗಳು, ಚಟುವಟಿಕೆಗಳು, ಧರಣಿ ಮೊದಲಾದವನ್ನು ಗಮನಿಸಿ ಅವರೊಬ್ಬ ಕಟ್ಟಾ ಎಡಪಂಥೀಯರು ಎಂಬುದನ್ನು ಅರ್ಥಮಾಡಿಕೊಂಡಿದ್ದೆ. ಅದು ಅವರ ಸ್ವಂತ ಅನಿಸಿಕೆ ಮತ್ತು ಚಟುವಟಿಕೆಗಳು. ಪ್ರತಿಯೊಬ್ಬನಿಗೂ ಅವನವನ ನಂಬಿಕೆಗಳಿರುತ್ತವೆ ಎಂಬ ದೂರ ಭಾವದಲ್ಲಿದ್ದೆ. `ಟಿಪೂ ಸುಲ್ತಾನ್ ಕಂಡ ಕನಸು' ಓದಿದ ಮೇಲೆ `ತುಘಲಕ್' ಮತ್ತು ಟಿಪ್ಪುವಿನ ಬಗೆಗೆ ತುಸು ವಿವರವಾಗಿ ಅಧ್ಯಯನ ಮಾಡಿ ಈ ನಾಟಕಕಾರರಿಗೆ ಇತಿಹಾಸದ ಸತ್ಯದ ಬಗೆಗಿರುವ ನಿಷ್ಠೆಯು ಎಷ್ಟು ಮಟ್ಟಿನದು ಎಂಬುದನ್ನು ತಿಳಿಯಬೇಕೆನ್ನಿಸಿತು. ಅಧ್ಯಯನದಲ್ಲಿ ತೊಡಗಿದೆ. ಇತಿಹಾಸ ನನಗೆ ಮೊದಲಿನಿಂದ ಆಸಕ್ತಿ ಇರುವ ವಿಷಯ. ಅದರಲ್ಲಿಯೂ ಭಾರತೀಯ ಇತಿಹಾಸವನ್ನು ತಕ್ಕಮಟ್ಟಿಗೆ ಓದಿಯೂ ಇದ್ದೇನೆ.

ಈ ನಾಟಕದ ಕಥಾವಸ್ತು ಐತಿಹಾಸಿಕವಾಗಿದ್ದರೂ ಇದರ ಉದ್ದೇಶ ಇತಿಹಾಸದ ಚಿತ್ರಣವಲ್ಲ ಎಂದು ಬೆನ್ನುಡಿಯಲ್ಲಿ ಹೇಳಿದ್ದರೂ `ತುಘಲಕ್' ನಾಟಕ ವನ್ನು ಆಡಿದ ಕಡೆಯಲ್ಲೆಲ್ಲ ನೋಡಿದವರ ಮನಸ್ಸಿನಲ್ಲೆಲ್ಲ ಆಡಿದವರ ಮನಸ್ಸಿನಲ್ಲಿ ಕೂಡ ಅವನೇ ನಿಜವಾದ ಸುಲ್ತಾನ ಎಂಬ ಭಾವನೆ ಹುಟ್ಟಿತ್ತು. `ನನ್ನ ಅಧಿಕಾರಿಗಳಿಂದ ಒಬ್ಬ ಬ್ರಾಹ್ಮಣನಿಗೆ ಅನ್ಯಾಯ ವಾಯಿತು. ಆ ಅನ್ಯಾಯವನ್ನು ಅಳಿಸಿ ನಾನು ನ್ಯಾಯದ ಮಾರ್ಗವನ್ನು ಅನುಸರಿಸಲಿಕ್ಕೆ ಸಿದ್ಧನಿದ್ದೇನೆ ಎಂಬುದನ್ನು ನೀವು ಕಂಡಿರಿ. ಧರ್ಮ ದ್ವೇಷದಿಂದ ಒಡೆದು ಚೂರಾಗಿದ್ದ ನಮ್ಮ ರಾಜ್ಯದ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ ಗಳಿಗೆ. ನನಗೆ ರಾಜ್ಯದಲ್ಲಿ ಸಮತೆ ಬೇಕು, ಪ್ರಗತಿ ಬೇಕು, ತರ್ಕಶುದ್ಧ ನ್ಯಾಯ ಬೇಕು. ಶಾಂತಿ ಇದ್ದರೆ ಸಾಕಾಗಲಿಲ್ಲ. ಜೀವಕಳೆ ಬೇಕು'. `ಎಲ್ಲಕ್ಕೂ ಮಹತ್ತ್ವದ ಮಾತೆಂದರೆ ದೌಲತಾಬಾದ್ ಮುಖ್ಯತಃ ಹಿಂದೂ ಜನರ ನಗರವಾಗಿದೆ. ನನ್ನ ರಾಜಧಾನಿಯನ್ನು ಅಲ್ಲಿಗೊಯ್ದು ನನಗೆ ಹಿಂದೂ ಮುಸಲ್ಮಾನರಲ್ಲಿ ಹೆಚ್ಚಿನ ಮೈತ್ರಿ ಬೆಳೆಸಬೇಕಾಗಿದೆ' ಎಂಬ ಸುಲ್ತಾನನ ಮಾತು. `ಬ್ರಾಹ್ಮಣನೊಡನೆ ಮುಸಲ್ಮಾನ ಗೆಳೆಯನನ್ನು ಕಂಡರೆ ಸುಲ್ತಾನರು ಹಿರಿ ಹಿರಿ ಹಿಗ್ಗುತ್ತಾರೆ' ಎಂಬ ಮಾತು ಗಳು ಸುಲ್ತಾನನು ಅಕ್ಬರನಿಗಿಂತ ಇನ್ನೂರ ಮೂವತ್ತು ವರ್ಷ ಮೊದಲು ಅಕ್ಬರನಿಗಿಂತ ಹೆಚ್ಚು ಪರಧರ್ಮ ಸಹಿಷ್ಣುವೂ ಸರ್ವ ಸಮಾನ ಭಾವದವನೂ ಎಂಬ ಭಾವನೆಯನ್ನು ಕೊಡುತ್ತದೆ. ಆದರೆ ಇದೇ ಸುಲ್ತಾನನಲ್ಲವೆ ಐತಿಹಾಸಿಕವಾಗಿ ದೇವಗಿರಿ ಎಂಬ ಹಿಂದೂ ಹೆಸರನ್ನು ದೌಲತ್ತಾಬಾದ್ ಎಂಬ ಮುಸ್ಲಿಂ ಹೆಸರಿಗೆ ಬದಲಾಯಿಸಿದವನು? ಕ್ರಿಸ್ತಶಕ ೧೩೨೭ರಲ್ಲಿ ಅವನ ವಿರುದ್ಧ ದಂಗೆ ಎದ್ದಿದ್ದ ದಕ್ಷಿಣದ ತುಂಗಭದ್ರಾ ತೀರದ ಕಂಪ್ಲಿಯ ರಾಜನ ಹನ್ನೊಂದು ಗಂಡು ಮಕ್ಕಳನ್ನು ಒಟ್ಟಿಗೆ ಸೆರೆ ಹಿಡಿದು ಇಸ್ಲಾಮಿಗೆ ಮತಾಂತರಿಸಿದ ಎಂದು ಇಬನ್ ಬತ್ತೂತನು ದಾಖಲಿಸಿದ್ದಾನೆ. (Ibn Battuta, The Rehla of Ibn Battuta, English translation by Dr.Mahdi Hussain 1953, P 95. ಈಶ್ವರೀ ಪ್ರಸಾದರ Qaraunah Turks in India. Vol I, Allahabad 1936 P 65-66. Mahdi Hussain: TugalaQ Dynasty, calutta 1963 P 207-208. Quoted in Muslim Slave System in Medieval India by K.S.Lal. Aditya Prakashan. New Delhi, 1994, P 56)

ಆದರೆ (Ibn Battuta, The Rchla of Ibn Battuta, eng.translation by Dr.Mahdi Hussain 1953, ಪುಟ 95. ಈಶ್ವರೀ ಪ್ರಸಾದರ Qaraunah Turks in India. Vol I, Allahabad 1936 P 65-66. Mahdi Hussain: Tugalaq Dynasty, calcutta 1963 P207-208. Quoted in muslim slave system in medieval India by K.S.lal. Aditya Prakashan. New Delhi, 1994, P 56) ಇದೇ ಮಹಮ್ಮದ್ ಬಿನ್ ತುಘಲಕನು ಹಿಂದೂ ದೇವಾಲಯವನ್ನು ನಾಶಮಾಡಿ ಅವೇಜಾಗಳಲ್ಲಿ ಮಸೀದಿಗಳನ್ನು ಕಟ್ಟಿಸದೆ ಬಿಟ್ಟವನಲ್ಲ. ಆಂಧ್ರಪ್ರದೇಶದ ನಿಜಾಮಾಬಾದ್ ಜಿಲ್ಲೆಯ ಬೋಧನ್‌ನಲ್ಲಿ ದೇವಲ್ ಮಸೀದಿ ಎಂಬ ಒಂದು ಮಸೀದಿ ಇದೆ. ಹೆಸರೇ ಹೇಳುವಂತೆ ಅದೊಂದು ದೇವಾಲಯವನ್ನು ಒಡೆದು ಕಟ್ಟಿದ ಮಸೀದಿ. ಮಹಮ್ಮದ್ ಬಿನ್ ತುಘಲಕ್‌ನ ಆಡಳಿತದಲ್ಲಿ ಕಟ್ಟಿಸಿದ್ದೆಂದು ಹೇಳುವ ಎರಡು ಶಾಸನಗಳು ಇನ್ನೂ ಇವೆ. ಜಿ. ಯಜ್‌ದಾನಿಯವರು Epigraphia Indomosliemica 1919-1920 ಪುಟ ೧೬ರಲ್ಲಿ ಹೇಳುತ್ತಾರೆ: `ಹೆಸರೇ ಹೇಳುವಂತೆ ದೇವಲ್ ಮಸೀದಿಯು ಮೂಲ ಜೈನ ಮಂದಿರವಾಗಿದ್ದು ಮಹಮ್ಮದ್ ತುಘಲಕನು ಡೆಕ್ಕನ್ನನ್ನು ಗೆದ್ದಾಗ ಈ ಮಂದಿರವನ್ನು ಮಸೀದಿಯಾಗಿ ಮಾರ್ಪಡಿಸಿದ. ಈ ಕಟ್ಟಡವು ನಕ್ಷತ್ರಾಕೃತಿಯಲ್ಲಿತ್ತು. ಆದರೆ ಮುಸ್ಲಿಮರು (ತುಘಲಕನು) ಗರ್ಭಗೃಹವನ್ನು ತೆಗೆದು ಉಪದೇಶ ವೇದಿಕೆ ನಿರ್ಮಿಸುವುದನ್ನು ಬಿಟ್ಟು ಹೆಚ್ಚು ಬದಲಾವಣೆ ಮಾಡಿಲ್ಲ. ಮೂಲದ ಕಂಬಗಳು ಹಾಗೆಯೇ ಇವೆ. ಕಂಬಗಳ ಮೇಲೆ ಕೆತ್ತಿರುವ ತೀರ್ಥಂಕರರ ವಿಗ್ರಹಗಳು ಇವತ್ತಿಗೂ ಇವೆ.' (ಸೀತಾರಾಮ ಗೋಯೆಲ್: Hindu Temples: What happend to them? Vol II ಪುಟ ೬೭ ನೋಡಿ)

ಅಬೂನಾಸಿರ್ ಐಸಿಯು ಹೇಳುವ ಪ್ರಕಾರ ಸುಲ್ತಾನ್ ಮಹಮ್ಮದ್ ಬಿನ್ ತುಘಲಕನು ಇಸ್ಲಾಮಿಕನ ಬಾವುಟಗಳನ್ನು ಹಿಂದೆ ಎಂದೂ ತಲುಪದ ಎಡೆಗಳಿಗೆ ಒಯ್ದು ಹಾರಿಸಿದ; ಹಿಂದೆ ಎಂದೂ ಕೇಳದ ಕಡೆಗಳಲ್ಲಿ ಕುರಾನಿನ ಶ್ಲೋಕಗಳನ್ನು ಕೇಳಿಸಿದ. ಅಗ್ನಿಪೂಜಕ ಮಂತ್ರಗಳನ್ನು ನಿಲ್ಲಿಸಿ ಅಜಾನನ್ನು ಮೊಳಗಿಸಿದ. (S.A.A. ರಿಜ್ವಿ: ತುಘಲಕ್ ಕಾಲೀನ ಭಾರತ. ಅಲಿಗಡ್, 1956, 1ನೇ ಸಂಪುಟ, ಪುಟ ೩೨೫) ಇವನನ್ನು ಪರಮತ ಸಹಿಷ್ಣುವೆಂದು ಚಿತ್ರಿಸಲು ಈ ನಾಟಕಕಾರರಿಗೆ ಮಾರ್ಕ್ಸಿಸ್ಟ್ ಪ್ರಚಾರವನ್ನು ಬಿಟ್ಟು ಬೇರೆ ಯಾವ ಆಧಾರವಿತ್ತು ?

ಸುಲ್ತಾನ್ ಮಹಮ್ಮದ್ ತುಘಲಕ್‌ನ ಗುಲಾಮ ಬೇಟೆಯು ದೂರ ದೇಶಗಳಲ್ಲೆಲ್ಲಾ ಕುಖ್ಯಾತವಾಗಿತ್ತು. ಅವನ ಈ ಹುರುಪಿನ ಬಗೆಗೆ ಶಿಹಾಬುದ್ದೀನ್ ಅಹಮದ್ ಅಬ್ಬಾಸ್ ಬರೆದಿದ್ದಾನೆ: `ಕಾಫಿರರ ಮೇಲೆ ಯುದ್ಧ ಮಾಡುವ ಸುಲ್ತಾನನ ಉತ್ಸಾಹ ಎಂದಿಗೂ ಕಡಿಮೆಯಾಗಿಲ್ಲ. ಅವರು ಬೇಟೆಯಾಡಿದ ಕೈದಿಗಳ ಸಂಖ್ಯೆ ಎಷ್ಟಿರುತ್ತೆಂದರೆ ಪ್ರತಿ ದಿನವೂ ಸಾವಿರಾರು ಗುಲಾಮರನ್ನು ತೀರ ಹೀನ ಬೆಲೆಗೆ ಮಾರುತ್ತಿದ್ದರು. (ಮಸಾಲಿಕ್-ಉಲ್-ಅಬಸರ್ ಫಿ ಮುಮಾ ಲಿಕ್-ಉಲ್-ಅಂಸರ್. Translated in E.D. III, P 580. ಹಿಂದೀ ಅನುವಾದ ರಿಜ್ವಿಯ ತುಘಲಕ್ ಕಾಲೀನ ಭಾರತ). ಯುದ್ಧದಲ್ಲಿ ಮಾತ್ರವಲ್ಲ ವಿದೇಶ ಮತ್ತು ಹಿಂದೂಸ್ತಾನಿ ಗುಲಾಮರನ್ನು ಕೊಂಡು ಸಂಗ್ರಹಿಸುವ ಶೋಕಿ ಅವನಿಗೆ ಬಹಳ ಇತ್ತು. ಪ್ರತಿ ಯುದ್ಧ ಅಥವಾ ದಂಗೆಯನ್ನು ಅಡಗಿಸುವಾಗಲೂ ಸುಲ್ತಾನನು ಹಿಡಿಸಿ ತರುತ್ತಿದ್ದ ಕಾಫಿರ್(ಮುಸ್ಲಿಮೇತರ) ಹೆಂಗಸು ಕೈದಿಗಳ ಸಂಖ್ಯೆ ಎಷ್ಟಿರುತ್ತಿತ್ತೆಂದರೆ ಇಬನ್ ಬತ್ತೂತ ಬರೆದಿದ್ದಾನೆ: `ಒಂದು ಸಲ ದಿಲ್ಲಿಯಲ್ಲಿ ಬಹಳ ಜನ ಹೆಂಗಸು ಕೈದಿಗಳನ್ನು ಜಮಾಯಿಸಿದರು. ಅವರಲ್ಲಿ ಹತ್ತು ಜನರನ್ನು ವಜೀರರು ನನಗೆ ಕಳಿಸಿದರು. ಅವರಲ್ಲಿ ಒಬ್ಬಳನ್ನು ನಾನು ಅವರನ್ನು ತಂದವನಿಗೇ ಕೊಟ್ಟೆ. ಆದರೆ ಅವನಿಗೆ ತೃಪ್ತಿಯಾಗಲಿಲ್ಲ. ನನ್ನ ಜತೆಗಾರನು ಮೂವರು ಚಿಕ್ಕ ಹುಡುಗಿಯರನ್ನು ತೆಗೆದುಕೊಂಡ. ಉಳಿದವರು ಏನಾದರೋ ನಾನು ಕಾಣೆ. (ಇಬನ್ ಬತ್ತೂತ, ಮೇಲ್ಕಾಣಿಸಿದ ಗ್ರಂಥ ಪುಟ ೧೨೩). ಸುಲ್ತಾನ್ ಮಹಮ್ಮದನ ಬಗೆಗೆ ಶಿಹಾಬುದ್ದೀನ್ ಅಲ್ ಉಮರಿ ಹೇಳು ತ್ತಾನೆ: ರಾಜಕುಮಾರನಾಗಿದ್ದಾಗ ಅವನು ಬೇಟೆಗೆ ಹೋದಾಗ ೧೨೦೦ ಹಕೀಮರು, ಅಶ್ವಾರೋಹಿಗಳಾಗಿ ಗಿಡಗಳನ್ನು ಹಾರಿ ಬಿಡುವ ಹತ್ತು ಸಾವಿರ ಪರಿಣತರು. ಮುನ್ನೂರು ಜನ ತಮ್ಮಟೆ ಬಾರಿಸುವವರು, ಬೇಟೆಯ ಸಾಮಾನುಗಳನ್ನು ಮಾರುವ ಮೂರು ಸಾವಿರ ವ್ಯಾಪಾರಿಗಳು, ಜತೆಯಲ್ಲಿ ಊಟ ಮಾಡುವ ಐನೂರು ಜನರು, ಗುಲಾಮ ಸಂಗೀತಗಾರರಲ್ಲದೆ ಸಂಬಳ ಪಡೆಯುವ ಒಂದು ಸಾವಿರ ಸಂಗೀತಗಾರರು, ಒಂದು ಸಾವಿರ ಕವಿಗಳು ಹೋಗುತ್ತಿದ್ದರು. (ಶಿಹಾಬುದ್ದೀನ್ ಅಲ್ ಉಮರಿ: ಮೇಲ್ಕಾಣಿಸಿದ ಗ್ರಂಥ. ಪುಟ ೫೭೮-೮೦).

ಈ ಸುಲ್ತಾನನನ್ನು ಯಾವ ಬಗೆಯ ಆದರ್ಶದ ಬೆನ್ನು ಹತ್ತಿದ ರಾಜನೆನ್ನಬೇಕು ?

`ಟಿಪೂ ಸುಲ್ತಾನ್ ಕಂಡ ಕನಸು' ನಾಟಕದಲ್ಲೂ ಗಿರೀಶ್ ಕಾರ್ನಾಡರ ಮನಸ್ಸು ಇದೇ ರೀತಿ ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡಿದೆ.

ಭಾರತದ ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಹಳೆ ಮೈಸೂರಿನ ಸಂತೆ ಜಾತ್ರೆಗಳಲ್ಲಿ ಮಾರುಕಟ್ಟೆಯ ಮೂಲೆಗಳಲ್ಲಿ ಇತಿಹಾಸದ ಅಧ್ಯಯನವಿಲ್ಲದ, ಅರೆ ಓದು ಬರಹ ಬಲ್ಲ ಲಾವಣಿಕಾರರು ಟಿಪ್ಪುವನ್ನು ವೈಭವೀಕರಿಸಿ ಬರೆದ ಲಾವಣಿಗಳನ್ನು ದಮಡಿ ಬಾರಿಸಿಕೊಂಡು ಹಾಡುತ್ತಿದ್ದರು. ಮುಸಲ್ಮಾನರು ಅದರಲ್ಲೂ ಮುಸಲ್ಮಾನ ವ್ಯಾಪಾರಿಗಳು ಈ ಲಾವಣಿ ಕಾರರಿಗೆ ಹಣ ಕೊಟ್ಟು ಪ್ರೋತ್ಸಾಹಿಸುತ್ತಿದ್ದರು. ಹಾಗೆಯೇ ಟಿಪ್ಪುವನ್ನು ವೈಭವೀಕರಿಸಿದ ನಾಟಕಗಳು. ಬ್ರಿಟಿಷರ ವಿರುದ್ಧ ಚಳವಳಿ ಮಾಡುತ್ತಿದ್ದಾಗ ಅವರ ವಿರುದ್ಧ ಹೋರಾಡಿದನೆಂಬ ಏಕೈಕ ಕಾರಣದಿಂದ ಆತನನ್ನು ಭಾರತ ದೇಶದ ಭಕ್ತನೆಂದು ಚಿತ್ರಿಸಿ ನಾಟಕ ಬರೆದರು. ಪ್ರೇಕ್ಷಕರು ಆ ಚಿತ್ರವನ್ನೆಲ್ಲಾ ನಿಜವಾದ ಇತಿಹಾಸವೆಂದು ನಂಬಿದರು. ಸ್ವಾತಂತ್ರ್ಯಾನಂತರವಂತೂ ಮಾರ್ಕ್ಸಿಸ್ಟರು, ಓಟು ಬ್ಯಾಂಕಿನವರು, ನಿಷ್ಠ ಮುಸ್ಲಿಮ ಕಲಾವಿದರು, ನಾಟಕಕಾರರು, ಚಲನಚಿತ್ರ ತಯಾರಕರು ಟಿಪ್ಪುವನ್ನು ರಾಷ್ಟ್ರೀಯ ನಾಯಕನೆಂದು ಬಿಂಬಿಸಿದರು. ನಿಜವಾದ ಇತಿಹಾಸ ಸತ್ತೇ ಹೋಯಿತು. ತನ್ನ ಇಬ್ಬರು ಮಕ್ಕಳನ್ನು ಬ್ರಿಟಿಷರಿಗೆ ಒತ್ತೆ ಇಟ್ಟ ಪ್ರಸಂಗವನ್ನು ಎತ್ತಿಕೊಂಡು ಬ್ರಿಟಿಷರು ಎಂಥ ಕಟುಕರೆಂದು ಚಿತ್ರಿಸಿದರು. ಮೇಲೆ ಹೇಳಿದ ಟಿಪ್ಪುವನ್ನು ರಾಷ್ಟ್ರೀಯ ನಾಯಕನೆಂದು ಚಿತ್ರಿಸುವ ಸಂಪ್ರದಾಯಕ್ಕೆ ಬದ್ಧರಾದ ಗಿರೀಶ್ ಕಾರ್ನಾಡರೂ ಈ ಪ್ರಸಂಗವನ್ನು ಎತ್ತಿಕೊಂಡು ಟಿಪ್ಪುವಿನ ಬಾಯಿಯಲ್ಲಿ `ನಮ್ಮ ನಾಡಿನಲ್ಲೊಂದು ಹೊಸ ಭಾಷೆ ಬಂದಿದೆ. ಹೊಸ ಸಂಸ್ಕೃತಿ ಬಂದಿದೆ. ಅಂಗ್ರೇ ಜಿ ! ಏಳು-ಎಂಟು ವರ್ಷದ ಕಂದಮ್ಮಗಳನ್ನು ಯುದ್ಧ ಕೈದಿಯಾಗಿ ಬಳಸಬಲ್ಲ ಸಂಸ್ಕೃತಿ' ಎಂಬ ಸಮಾಜ ಶಾಸ್ತ್ರದ ದಾರ್ಶನಿಕ ಮಾತನ್ನು ಹಾಕುತ್ತಾರೆ.

ಆದರೆ ಯುದ್ಧ ಬಂಧಿಗಳನ್ನು ತೆಗೆದುಕೊಳ್ಳುವುದು ಭಾರತವನ್ನಾಳಿದ ಮುಸ್ಲಿಂ ದೊರೆಗಳ ಸಂಪ್ರದಾಯವೇ ಆಗಿತ್ತು. ಅದನ್ನು ಬ್ರಿಟಿಷರು ಇಲ್ಲಿ ಅನುಸರಿಸಿದರು ಎಂಬ ಸತ್ಯ ಕಾರ್ನಾಡರಿಗೆ ತಿಳಿದಿಲ್ಲ ಅಥವಾ ತಿಳಿದಿದ್ದರೂ ಮರೆ ಮಾಚಿದ್ದಾರೆ. ಔರಂಗಜೇಬನ ಸೇನಾಪತಿ ಮೀರ್ ಜುಮ್ಲಾನು ಅಸ್ಸಾಮಿನ ರಾಜನನ್ನು ಸೋಲಿಸಿದಾಗ ಅವನಲ್ಲಿದ್ದ ಚಿನ್ನ, ಬೆಳ್ಳಿ, ನಗದನ್ನೆಲ್ಲ ದೋಚಿ, ಬಲವಂತವಾಗಿ ಕೇಳಿದ ಇನ್ನಷ್ಟು ನಗದನ್ನು ಒಪ್ಪಿಸುವವರೆಗೆ ರಾಜನ ಮಗಳು ಮತ್ತು ಗಂಡು ಮಕ್ಕಳು; ಬುರ್ಹ ಗೋಹೆನ್, ಬಾರ್ ಗೊಹೇನ್, ಘಡ ದೊನಿಯಾಪುಖಾನ್ ಮತ್ತು ಬಡ್ ಪತ್ರಾಪುಖಾನ್ ಎಂಬ ನಾಲ್ವರು ಸಾಮಂತರ ಗಂಡು ಮಕ್ಕಳನ್ನು ಯುದ್ಧ ಬಂಧಿಗಳಾಗಿರುವಂತೆ ಬಲಾತ್ಕರಿಸಿ ಕೊಂಡೊಯ್ದನೆಂದು ಔರಂಗಜೇಬನ ಅಧಿಕೃತ ಇತಿಹಾಸದಲ್ಲೇ ಬರೆದಿದೆ. (ಮಾಸಿರ್ -ಇ-ಅಲಂಗೀರ್, ಪುಸ್ತಕ ಬರೆದವನು ಸಾಕಿ ಮುಸ್ತಾದ್ ಖಾನ್, ಐದನೆಯ ವರ್ಷ, ೫ನೇ ಜಮಾದ್, ಅಲ್ ಹಿಜಿರಾ ೧೦೭೨, ೫. ಜನವರಿ ೧೬೬೩) ಮೊಘಲರ ಕಾಲದಲ್ಲಿ ರಾಜಪೂತ ರಾಜರುಗಳು ತಮ್ಮ ಒಬ್ಬನಾದರೂ ಮಗನನ್ನು ಬಾದಶಹನ ಆಸ್ಥಾನದಲ್ಲಿ ಇಡಬೇಕಾಗಿತ್ತು. ಅವರು ವಸ್ತುತಃ ಯುದ್ಧಬಂಧಿಗಳೇ. ಅಕ್ಬರ್‌ನಿಂದ ಆರಂಭವಾಗಿ ಮುಂದುವರಿದ ಪದ್ಧತಿ ಸೋತ ರಾಜಪೂತ ರಾಜನು ತನ್ನ ಮಗಳನ್ನು ಬಾದಶಹರಿಗೆ ಕೊಟ್ಟು ಮದುವೆ ಮಾಡಬೇಕಾದದ್ದು ಕೂಡ ವಸ್ತುತಃ ಯುದ್ಧ ಬಂಧಿಯಾಗಿಯೇ. ಮಹಾರಾಣಾ ಪ್ರತಾಪನು ಅವನ ಮಗನನ್ನು ತನ್ನ ಆಸ್ಥಾನಕ್ಕೆ ಕಳಿಸಬೇಕೆಂದು ಅಕ್ಬರನು ಕೇಳಿದ್ದ. ಆದರೆ ಪ್ರತಾಪನು ಒಪ್ಪಲಿಲ್ಲ. ಮುಂದೆ ಶಹಜಹಾನನೆಂದು ನಾಮಕರಣ ಮಾಡಿಕೊಂಡ ಖುರ್ರಮ್ ತನ್ನ ತಂದೆ ಜಹಾಂಗೀರನ ವಿರುದ್ಧ ದಂಗೆ ಎದ್ದು ಸೋತಾಗ ಜಹಾಂಗೀರನು ಖುರ್ರಮನ ಇಬ್ಬರು ಮಕ್ಕಳು ಎಂದರೆ ತನ್ನ ಮೊಮ್ಮಕ್ಕಳು, ದಾರಾ ಮತ್ತು ಔರಂಗಜೇಬರುಗಳನ್ನು ಯುದ್ಧ ಬಂಧಿಗಳನ್ನಾಗಿ ತೆಗೆದುಕೊಂಡಿದ್ದ. ಬ್ರಿಟಿಷನಾದ ಕಾರ್ನ್‌ವಾಲೀಸನು ಟಿಪ್ಪುವಿನ ಇಬ್ಬರು ಮಕ್ಕಳನ್ನು ನೋಡಿಕೊಂಡಷ್ಟು ಮುಚ್ಚಟೆಯಿಂದ, ಮುಸ್ಲಿಮ ದೊರೆಗಳು ತಮ್ಮ ಯುದ್ಧ ಬಂಧಿಗಳನ್ನು ಎಂದೂ ನೋಡಿಕೊಳ್ಳುತ್ತಿರಲಿಲ್ಲ. ಯುದ್ಧಬಂಧಿಗಳು ಅನ್ಯ ಧರ್ಮೀಯರಾದರೆ ಅವರನ್ನು ಧರ್ಮಾಂತರಿಸದೆ ಬಿಡುತ್ತಿರಲಿಲ್ಲ.

ಟಿಪ್ಪುವು ಮಕ್ಕಳನ್ನು ಯುದ್ಧ ಬಂಧಿಗಳಾಗಿ ಇಟ್ಟ ಕರಾರು ಯಾವುದು? ಯುದ್ಧದಲ್ಲಿ ಸೋತ ನಂತರ ಇಂತಿಷ್ಟು ಹಣವನ್ನು ಬ್ರಿಟಿಷರಿಗೆ ಕೊಡುವುದಾಗಿ ಅವನು ಒಪ್ಪಿಕೊಂಡ. ಸದ್ಯದಲ್ಲಿ ಕೈಲಿ ಹಣವಿರಲಿಲ್ಲ. ಹೊಂದಿಸಿಕೊಡುವ ತನಕ ಒತ್ತೆ ಇಡಲು ಬೇರೇನೂ ಇರಲಿಲ್ಲ. ಅವನ ಬರಿ ಮಾತನ್ನು, ಆಣೆ ಪ್ರಮಾಣಗಳನ್ನು ಬ್ರಿಟಿಷರು ನಂಬಿ ಹೋಗಬಹುದಿತ್ತೆ? ಮಕ್ಕಳನ್ನು ಒಯ್ಯುವುದು ಬ್ರಿಟಿಷರ ಉದ್ದೇಶವಾ ಗಿರಲಿಲ್ಲ. ಒತ್ತೆ ಇಡಲು ಟಿಪ್ಪುವಿನ ಹತ್ತಿರ ಬೇರೆ ಏನೂ ಇರಲಿಲ್ಲ. ಒತ್ತೆ ಇರಿಸಿಕೊಂಡ ಮಕ್ಕಳ ಯೋಗಕ್ಷೇಮವನ್ನು ಬ್ರಿಟಿಷರು ಚೆನ್ನಾಗಿಯೇ ನೋಡಿಕೊಂಡರು.

ಟಿಪ್ಪುವನ್ನು ಕನ್ನಡದ ಕುವರನೆಂದು ಕೆಲವು ರಾಜ ಕಾರಣಿಗಳು ಭಾಷಣ ಮಾಡುವುದು ಹೊಸತಲ್ಲ. ಆದರೆ ಒಡೆಯರ ಕಾಲದಲ್ಲಿ ಆಡಳಿತ ಭಾಷೆಯಾಗಿದ್ದ ಕನ್ನಡವನ್ನು ಟಿಪ್ಪು ಬದಲಿಸಿ ಫಾರಸಿ ಭಾಷೆಯನ್ನು ತಂದ. ಹಳೆ ಮೈಸೂರಿನ ಕಂದಾಯ ಇಲಾಖೆಗೆ ಸೇರಿದ ಶ್ಯಾನುಭೋಗರ ಮನೆತನದ ನನಗೆ ಆಗಿನ ಕಂದಾಯದ ಲೆಕ್ಕಗಳ ಪರಿಚಯವಿದೆ. ಖಾತೆ, ಖಿರ್ದಿ, ಪಹಣಿ, ಖಾನೀಸು ಮಾರಿ, ಗುದಸ್ತಾ, ತಖ್ತೆ, ತರಿ, ಖುಷ್ಕಿ, ಬಾಗಾಯ್ತು, ಬಂಜರು, ಜಮಾಬಂದಿ, ಅಹವಾಲು, ಖಾವಂದ್, ಅಮ ಲ್ದಾರ್, ಶಿರಸ್ತೇದಾರ್ ಹೀಗೆ ಆಡಳಿತದ ಪ್ರತಿಯೊಂದು ಶಬ್ದವೂ ಫಾರಸಿಯಾದದ್ದು ಟಿಪ್ಪುವಿನ ಕಾಲದಲ್ಲಿ ಸೇರಿದ್ದು.

ಊರುಗಳ ಮೂಲ ಹೆಸರುಗಳನ್ನೆಲ್ಲ ಟಿಪ್ಪುವು ಬದಲಿಸಿದ್ದ. ಬ್ರಹ್ಮಪುರಿಯನ್ನು ಸುಲ್ತಾನ್ ಪೇಟ್ ಎಂದು ಬದಲಿಸಿದ. ಕೇರಳದ ಕಾಳೀಕೋಟೆ-ಈಗಿನ ಕಲ್ಲೀಕೋಟೆಯನ್ನು ಫರೂಕಾಬಾದ್; ಚಿತ್ರದುರ್ಗ ವನ್ನು ಫಾರ್ರುಕ್ ಯಬ್ ಹಿಸ್ಸಾರ್; ಕೊಡಗನ್ನು ಜಫರಾಬಾದ್; ದೇವನಹಳ್ಳಿಯನ್ನು ಯೂಸುಫಾಬಾದ್; ದಿಂಡಿಗಲ್ ಅನ್ನು ಖಲೀಲಾಬಾದ್; ಗುತ್ತಿ ಯನ್ನು ಫೈಜ್ ಹಿಸ್ಸಾರ್; ಕೃಷ್ಣಗಿರಿಯನ್ನು ಫಲ್ಕ್ ಇಲ್ ಅಜಮ್; ಮೈಸೂರನ್ನು ನಜರಾಬಾದ್(ಈಗ ನಜರ್‌ಬಾದ್ ಎನ್ನುವುದು ಮೈಸೂರಿನ ಒಂದು ಮೊಹಲ್ಲಾ ಆಗಿದೆ); ಪೆನುಗೊಂಡವನ್ನು ಫಕ್ರಾಬಾದ್; ಸಂಕ್ರಿದುರ್ಗವನ್ನು ಮುಜ್ಜಫರಾಬಾದ್; ಸಿರಾವನ್ನು ರುಸ್ತುಮಾಬಾದ್; ಸಕಲೇಶಪುರವನ್ನು ಮಂಜ್ರಾಬಾದ್ ಎಂದು ಬದಲಿಸಿದ. ಇವೆಲ್ಲ ಟಿಪ್ಪುವಿನ ರಾಷ್ಟ್ರೀಯತೆಯನ್ನು, ಕನ್ನಡ ನಿಷ್ಠೆಯನ್ನು ಅನ್ಯಧರ್ಮ ಸಹಿಷ್ಣುತೆಯನ್ನು ತೋರಿಸುತ್ತದೆಯೆ?

`ಟಿಪೂ ಸುಲ್ತಾನ್ ಕಂಡ ಕನಸು' ಎಂಬ ತಮ್ಮ ನಾಟಕದ ಹೆಸರನ್ನು ಗಿರೀಶ್ ಕಾರ್ನಾಡರು `ಟಿಪ್ಪು ಸುಲ್ತಾನನ ಕನಸುಗಳು' ಎಂಬ ಟಿಪ್ಪುವು ಸ್ವತಃ ಅಕ್ಷರಗಳಲ್ಲಿ ಫಾರ್ಸಿ ಭಾಷೆಯಲ್ಲಿ ಬರೆದಿಡುತ್ತಿದ್ದ ಕಿರು ಹೊತ್ತಗೆ, ಅದರ ಇಂಗ್ಲಿಷ್ ಸಂಪಾದಕ ಮೇಜರ್ ಬೀಟ್‌ಸನ್ ಕೊಟ್ಟ ಹೆಸರಿನಿಂದ ತೆಗೆದುಕೊಂಡಿದ್ದಾರೆ. ಈ ಇಂಗ್ಲಿಷ್ ಅನುವಾದವನ್ನು ನಾನು ಓದಿದ್ದೇನೆ. ತಾನು ಬರೆಯುವಾಗ, ಬರೆದದ್ದನ್ನು ಓದುವಾಗ ಯಾರೂ ನೋಡಬಾರದೆಂದು ಟಿಪ್ಪುವು ಕಳವಳ ಪಡುತ್ತಿದ್ದ. ಶ್ರೀರಂಗಪಟ್ಟಣದ ಅರಮನೆಯ ಕಕ್ಕಸಿನಲ್ಲಿ ಪತ್ತೆ ಹಚ್ಚಿದ್ದಾಗಿ ಟಿಪ್ಪುವಿನ ಅತ್ಯಂತ ನಂಬಿಕೆಯ ಸೇವಕ ಹಬೀ ಬುಲ್ಲಾಹನು ಅದನ್ನು ಗುರುತಿಸಿ ಟಿಪ್ಪುವೇ ಬರೆದದ್ದೆಂದು ಹೇಳಿದ. ಅದರ ಮೂಲ ಮತ್ತು ಇಂಗ್ಲಿಷ್ ಅನುವಾದಗಳು ಲಂಡನ್ನಿನ ಇಂಡಿಯಾ ಆಫೀಸಿನಲ್ಲಿವೆ. ಅದನ್ನು ಓದಿದರೆ ಟಿಪ್ಪುವು ಎಂಥ ಧರ್ಮಾಂಧನೆಂಬುದು ಇನ್ನಷ್ಟು ಖಚಿತವಾಗುತ್ತದೆ. ಅದರಲ್ಲೆಲ್ಲ ಹಿಂದೂಗಳನ್ನು ಕಾಫಿರರೆಂದೇ ಕರೆಯುತ್ತಾನೆ. ಇಂಗ್ಲಿಷರನ್ನು ಕ್ರೈಸ್ತ ರೆಂದು ನಿರ್ದೇಶಿಸುತ್ತಾನೆ. ಉದ್ದನೆಯ ಗಡ್ಡ ಬಿಟ್ಟ ಮೌಲ್ವಿಗಳು ಆತನ ಕನಸಿನಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಾರೆ. ತಾನು ಮೆಕ್ಕಾ ಯಾತ್ರೆ ಹೋಗಿದ್ದಂತೆ ಕನಸು ಕಾಣುತ್ತಾನೆ. ಸ ಪ್ರವಾದಿ ಮೊಹಮ್ಮದರು(೫) `ಟಿಪ್ಪುವನ್ನು ಬಿಟ್ಟು ನಾನು ಸ್ವರ್ಗದೊಳಕ್ಕೆ ಹೆಜ್ಜೆ ಇಡುವುದಿಲ್ಲವೆಂದು ಹೇಳಿದರು' ಎಂದು ಒಬ್ಬ ಉದ್ದನೆಯ ಗಡ್ಡದ ಅರಬನು ಹೇಳುತ್ತಾನೆ. ಮುಸ್ಲಿಮರಲ್ಲದ ಸಮಸ್ತರನ್ನೂ ಮುಸ್ಲಿಮರಾಗಿ ಮುಸ್ಲಿಮೇತರ ರಾಜ್ಯವನ್ನು ಸಂಪೂರ್ಣ ಮುಸ್ಲಿಂ ರಾಜ್ಯವಾಗಿ ಪರಿವರ್ತಿಸುವ ಕನಸು ಕಾಣುತ್ತಾನೆ.

ಈ ಇಡೀ ಕಿರುಹೊತ್ತಗೆಯಲ್ಲಿ ಭಾರತವನ್ನು ಆಧುನೀಕರಿಸುವ ಕಿಂಚಿತ್ ಆಲೋಚನೆಯೂ ಇಲ್ಲ. ತನಗೆ ದೊಡ್ಡ ಮುಳುವಾಗಿದ್ದ ಇಂಗ್ಲಿಷರನ್ನು (ಅವರನ್ನು ಉದ್ದಕ್ಕೂ ಕ್ರೈಸ್ತರೆಂದು ಜಾತಿವಾಚಕದಿಂದ ನಿರ್ದೇಶಿಸುತ್ತಾನೆ) ಓಡಿಸುವ ಬಯಕೆ ಇದೆ.

ಮಲಬಾರ್ ಮತ್ತು ಕೊಡಗುಗಳಲ್ಲಿ ಹಿಂದೂಗಳನ್ನು ಬಲವಂತವಾಗಿ ಮತಾಂತರಿಸಿದ ಟಿಪ್ಪು ಮೈಸೂರು ಪ್ರಾಂತ್ಯದಲ್ಲಿ ಆ ದುಸ್ಸಾಹಸಕ್ಕೆ ಹೋಗಲಿಲ್ಲ. ೧೭೯೧ ರಲ್ಲಿ ಮೂರನೇ ಮೈಸೂರು ಯುದ್ಧ ವಾಗಿ ಸೋತು ಬ್ರಿಟಿಷರಿಗೆ ದೊಡ್ಡ ಮೊತ್ತದ ಸಂಪತ್ತನ್ನು ರಾಜ್ಯದ ಮುಖ್ಯ ಭಾಗಗಳನ್ನೂ ಒಪ್ಪಿಸಿ ಮಕ್ಕಳನ್ನು ಯುದ್ಧ ಬಂಧಿಯಾಗಿ ಕೊಟ್ಟ ಮೇಲೆ ಶೃಂಗೇರಿ ಮಠಕ್ಕೆ ಕಾಣಿಕೆ ಸಲ್ಲಿಸುವ ಮೂಲಕ ಹಿಂದೂಗಳ ಅಸಮಾಧಾನವನ್ನು ಕಡಿಮೆ ಮಾಡಲು ಪ್ರಯತ್ನಿಸಿದುದನ್ನು ಇವತ್ತಿನ ಜಾತ್ಯತೀತವಾದಿಗಳು ದೊಡ್ಡದು ಮಾಡಿ ಅವನನ್ನೊಬ್ಬ ಧರ್ಮ ಸಹಿಷ್ಣುನೆಂದು ಬಿಂಬಿಸುತ್ತಿದ್ದಾರೆ. ಆಫ್‌ಘಾನ್ ದೊರೆ ಜಿಮಾಳ್‌ಶಾಹನಿಗೆ ಮತ್ತು ತುರ್ಕಿಯ ಖಲೀಫನಿಗೆ ಭಾರತದ ಮೇಲೆ ದಂಡೆತ್ತಿ ಬಂದು ಇಸ್ಲಾಂ ರಾಜ್ಯವನ್ನು ಸಂಪೂರ್ಣವಾಗಿ ಸ್ಥಾಪಿಸುವಂತೆ ಟಿಪ್ಪು ಕಾಗದ ಬರೆದಿದ್ದ. ೧೭೯೬ರಲ್ಲಿ ಮೈಸೂರಿನ ರಾಜರ ಅರಮನೆಯನ್ನು ಲೂಟಿ ಮಾಡಿದಾಗ ಅರಮನೆಯ ಗ್ರಂಥಾಲಯದಲ್ಲಿದ್ದ ಅಮೂಲ್ಯ ಗ್ರಂಥಗಳು ತಾಳೆಯೋಲೆಯ ಹಸ್ತಪ್ರತಿಗಳು ಮತ್ತು ಕಡತಗಳನ್ನು ಕುದುರೆಗಳಿಗೆ ಹುರುಳಿ ಬೇಯಿಸಲು ಇಂಧನವಾಗಿ ಉಪಯೋಗಿಸುವಂತೆ ಅಪ್ಪಣೆ ಮಾಡಿದ.

ಮಲಬಾರಿನ ಮುಸ್ಲಿಮರು ಮಲೆಯಾಳಂ ಭಾಷೆಯನ್ನು, ತಮಿಳುನಾಡಿನ ಮುಸ್ಲಿಮರು ಮನೆಯಲ್ಲಿ ತಮಿಳನ್ನು ಇಂದಿಗೂ ಮಾತನಾಡುತ್ತಾರೆ. ಓದಿ ಬರೆಯುತ್ತಾರೆ. ಆದರೆ ಮೈಸೂರಿನ ಮುಸ್ಲಿಮರು ಇಂದಿಗೂ ಉರ್ದು ಮಾತನಾಡುವುದು. ಕನ್ನಡದಲ್ಲಿ ಓದಿ ಬರೆಯದೆ ಇರುವುದು. ಕನ್ನಡ ರಾಜ್ಯ ಭಾಷಾ ಮುಖ್ಯವಾಹಿನಿಯಲ್ಲಿ ಸೇರದೆ ಇರುವುದು ಟಿಪ್ಪು ಆರಂಭಿಸಿದ ಫಾರ್ಸಿ ಮತ್ತು ಉರ್ದು ವಿದ್ಯಾಭ್ಯಾಸ ಪದ್ಧತಿಯಿಂದ.

ನನ್ನ ಮೂಲಭೂತ ಪ್ರಶ್ನೆ ಎಂದರೆ ಐತಿಹಾಸಿಕ ವಸ್ತು ಮತ್ತು ವ್ಯಕ್ತಿಗಳನ್ನು ಪಾತ್ರಗಳಾಗಿ ಚಿತ್ರಿಸುವಾಗ ಸಾಹಿತಿಯು ವಹಿಸಬಹುದಾದ ಸ್ವಾತಂತ್ರ್ಯ ಯಾವ ರೀತಿಯದು? ಕಾಲ್ಪನಿಕ ಪಾತ್ರಗಳನ್ನು ತನಗಿಷ್ಟ ಬಂದಂತೆ ರಚಿಸುವ ಸ್ವಾತಂತ್ರ್ಯ ಸಾಹಿತಿಗೆ ಯಾವತ್ತೂ ಇದೆ. ಏಕೆಂದರೆ ಅದು ಆತನ ಸ್ವಂತ ಸೃಷ್ಟಿ. ಆದರೆ ಐತಿಹಾಸಿಕ ಪಾತ್ರವನ್ನು ಚಿತ್ರಿಸುವಾಗ ಐಸಿಹಾಸಿಕ ಸತ್ಯಕ್ಕೆ ಅವನು ನಿಷ್ಠನಾಗಿರಬೇಕು. ಸರ್ವ ಸಮ್ಮತ ವಾದ ಐತಿಹಾಸಿಕ ಸತ್ಯತೆಯೆಂಬುದೇ ಇಲ್ಲ. ಇತಿಹಾಸಕಾರನು ವ್ಯಾಖ್ಯಾನಿಸಿದಂತೆಯೇ ಅದರ ಸತ್ಯ ಎಂದು ಹೇಳುವವರೂ ಇದ್ದಾರೆ. ಸಾಹಿತಿಯು ಯಾವುದಾದರೊಂದು ಸಿದ್ಧಾಂತಕ್ಕೆ ಬದ್ಧನಾಗಿದ್ದರೆ ಆ ಸಿದ್ಧಾಂತವು ಅಥವಾ ಆ ಸಿದ್ಧಾಂತದ ಗುಂಪು ಹೇಳಿ ನಿರ್ದೇಶಿಸದಂತೆಯೇ ಇತಿಹಾಸದ ಪ್ರತಿಯೊಂದು ಘಟನೆ ಮತ್ತು ಪಾತ್ರಗಳನ್ನು ಅರ್ಥೈಸುವುದು ಅವನಿಗೆ ಅನಿವಾರ್ಯವಾಗುತ್ತದೆ. ಕಮ್ಯುನಿಸ್ಟ್, ಜೆ.ಎನ್.ಯು.ಗುಂಪು. ವಾಮ ಪಂಥೀಯ ಎಂಬ ಒಳ ಜಾತಿ, ಉಪ ಜಾತಿಗಳು ಏನೇ ಇದ್ದರೂ ಗಿರೀಶ್ ಕಾರ್ನಾಡರು ಮಾರ್ಕ್ಸಿಸ್ಟ್ ಪಂಥಕ್ಕೆ ಸೇರಿದವರು. ಇಸ್ಲಾಂನಲ್ಲಿ ಸಮಾಜವಾದವಿದೆ. ಹಿಂದೂಗಳಲ್ಲಿ ಇಲ್ಲ ಎಂದು ನಂಬಿದ ಗುಂಪು ಇದು. ಶೀತ ಯುದ್ಧವಾಗುತ್ತಿದ್ದಾಗ ಬಂಡವಾಳಶಾಹಿ ಅಮೆರಿಕ ವಿರುದ್ಧವಾಗಿ ಅರಬರ ಸ್ನೇಹವನ್ನು ಗಳಿಸುವ ಹುನ್ನಾರದಿಂದ ಸ್ಟಾಲಿನ್ ಇಸ್ಲಾಮಿನ ಸಾಮಾಜಿಕ ನ್ಯಾಯವನ್ನು ಮತ್ತೊಮ್ಮೆ ಒತ್ತಿ ಹೇಳಿದ. ಭಾರತದ ಇತಿಹಾಸದ ಮುಸ್ಲಿಂ ವ್ಯಕ್ತಿಗಳನ್ನು ವಿಮರ್ಶಾತ್ಮಕವಾಗಿ ನೋಡಲು ಅವರಿಗೆ ಸಾಧ್ಯವಿಲ್ಲದಂತಾಯಿತು. ಜೊತೆಗೆ ಹಿಂದೂವಾದದ ಬಿಜೆಪಿಯನ್ನು ಹೊಡೆಯಲು ಮುಸ್ಲಿಮರನ್ನು ಎತ್ತಿ ಕಟ್ಟಿ ಬೆಂಬಲಿಸುವ ಒಳ ಸನ್ನಾಹ. ಆದುದರಿಂದ ಕಾರ್ನಾಡರಂಥ ಬುದ್ಧಿಜೀವಿಗಳು ರಾಜಕೀಯವಾಗಿ ಯಾವಾಗಲೂ ಬಿಜೆಪಿಯ ವಿರುದ್ಧ ಗದ್ದಲ ಮಾಡಲು ಸಿದ್ಧವಾಗಿ ನಿಂತಿರುತ್ತಾರೆ. ದತ್ತ ಜಯಂತಿಯ ವಿಷಯವಾಗಲಿ, ಶಾಲೆಯಲ್ಲಿ ಸರಸ್ವತಿ ಪ್ರಾರ್ಥನೆಯ ವಿಷಯದಲ್ಲಿಯಾಗಲಿ ಸಮಯ ಕಾಯುತ್ತಿರುತ್ತಾರೆ. ಇಷ್ಟೊಂದು ಸೈದ್ಧಾಂತಿಕ ಬದ್ಧತೆ ಇರುವ ಲೇಖಕರು ತಮ್ಮ ಸೃಜನಶಕ್ತಿಯನ್ನು ತಮ್ಮ ಸಿದ್ಧಾಂತದ ಅಡಿಯಾಳಾಗಿ ದುಡಿಸಿಕೊಳ್ಳುತ್ತಾರೆ. ಅವರಿಗೆ ಕಲೆ ಎನ್ನುವುದು ತಮ್ಮ ರಾಜಕೀಯ ನಂಬಿಕೆಗಳ ಒಂದು ಸಾಧನ ಮಾತ್ರವಾಗಿ ಬಿಡುತ್ತದೆ. ಸಾಹಿತಿಯು ರಾಜಕೀಯದಿಂದ ತಟಸ್ಥವಾಗಿರಬೇಕು. ಅಕಸ್ಮಾತ್ ರಾಜಕೀಯಕ್ಕೆ ಇಳಿದರೂ ತನ್ನ ಬರವಣಿಗೆಯಲ್ಲಿ ಅದರಿಂದ ತಟಸ್ಥನಾಗಬೇಕು (ಅದು ಕಷ್ಟ ಸಾಧ್ಯ) ಎಂದು ನಾನು ನಂಬಿದ್ದೇನೆ. ರಾಜಕಾರಣದ ಆಯಾಮವಿಲ್ಲದ ಕಲೆ, ನೀತಿ ಅರ್ಥ. ಇತಿಹಾಸ ಆಧ್ಯಾತ್ಮ ಯಾವುದೂ ಇಲ್ಲವೆಂದು ವಾಮಪಂಥೀಯರು ಹೇಳುತ್ತಾರೆ.

ನನ್ನ ಈ ಲೇಖನದ ಉದ್ದೇಶ ಶಂಕರಮೂರ್ತಿ ಯವರನ್ನು ಬೆಂಬಲಿಸುವುದಲ್ಲ. ಮುಸ್ಲಿಂ ಐತಿಹಾಸಿಕ ವ್ಯಕ್ತಿಗಳನ್ನು ಹೀಗಳೆಯುವುದೂ ಅಲ್ಲ. ಭಾರತ ದೇಶದಲ್ಲಿರುವ ಮುಸ್ಲಿಮರೆಲ್ಲರೂ ನಮ್ಮ ಭ್ರಾತೃಗಳು. ಈ ಭ್ರಾತೃತ್ವದ ಬುನಾದಿಯ ಮೇಲೆಯೇ ನಮ್ಮ ರಾಷ್ಟ್ರೀಯತೆ ಗಟ್ಟಿಗೊಳ್ಳಬೇಕು. ಹಾಗೆಂದು ಇತಿ ಹಾಸದ ಸುಳ್ಳು ಚಿತ್ರಣದ ಮೇಲೆ ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸಲು ಸಾಧ್ಯವಿಲ್ಲ. ಹಿಂದೂಗಳ ತಪ್ಪು ನೆಪ್ಪುಗಳನ್ನು ನಾವು ನಿರ್ಭಯವಾಗಿ ಚರ್ಚಿಸಿ ಸರಿ ಪಡಿಸಲು ಆರಂಭಿಸಿ ಒಂದು ಶತಮಾನವಾಯಿತು. ಇಂಥ ಮುಕ್ತ ಚರ್ಚೆ ವಿಮರ್ಶೆಗಳಿಂದ ಹಿಂದೂ ಸಮಾಜವು ಗಟ್ಟಿಯಾಗುತ್ತಿದೆ. ಮುಸ್ಲಿಂ ಆಡಳಿತದಲ್ಲಿ ನಡೆದ ವಾಸ್ತವಾಂಶಗಳನ್ನು ಮುಕ್ತವಾಗಿ ಬರೆಯುವು ದರಿಂದ ಅವರಿಗೆ ಅಪಮಾನಮಾಡಿದಂತೆ ಆಗುವುದಿಲ್ಲ. ನಾವೆಲ್ಲ ಇತಿಹಾಸದಿಂದ ಪಾಠ ಕಲಿಯಬೇಕು. ಇತಿಹಾಸದ ವಾಸ್ತವತೆಯನ್ನು ಹೇಳಿದರೆ ಎಲ್ಲಿ ಯಾರು ಮುನಿಸಿಕೊಳ್ಳುತ್ತಾರೋ ಎಂಬ ಅಂಜಿಕೆಯಿಂದ ಸತ್ಯವನ್ನು ಮುಚ್ಚಿ ಸುಳ್ಳು ಇತಿಹಾಸವನ್ನು ಸೃಷ್ಟಿಸಿದರೆ ಅಂಥ ಸುಳ್ಳು ಬುನಾದಿಯ ಮೇಲೆ ಗಟ್ಟಿ ಕಟ್ಟಡವನ್ನು ಕಟ್ಟಲು ಸಾಧ್ಯವಿಲ್ಲ. ಹಿಂದಿನವರ ತಪ್ಪುಗಳಿಗೆ ಇಂದಿನವರನ್ನು ದೂಷಿಸುವುದು ಅಪಕತ್ವತೆಯ ಕುರುಹು. ಹಿಂದಿನವರೊಡನೆ ತಮ್ಮನ್ನು ತಾವು ಸಮೀಕರಿಸಿಕೊಂಡು ವಾರಸುದಾರರಂತೆ ಕಲ್ಪಿಸಿಕೊಂಡು ಉಬ್ಬುವುದು ಅಥವಾ ಕುಗ್ಗುವುದು ಅಷ್ಟೇ ಅಪಕತ್ವತೆಯ ಲಕ್ಷಣ.

ಎಸ್.ಎಲ್. ಭೈರಪ್ಪ. [ಸೆಪ್ಟೆಂಬರ್ ೨೪, ೨೦೦೬, ವಿಜಯ ಕರ್ನಾಟಕ]