Monday, July 31, 2006

ಬುಷ್ ಬರಬೇಡವೆಂದದ್ದು ಮೋದಿಯನ್ನಾ : ನಿರ್ಗತಿಕ ಭಾರತವನ್ನಾ?

ರವಿ ಬೆಳಗೆರೆ
ರವಿ ಬೆಳಗೆರೆಜಾಗತಿಕ ಮಟ್ಟದಲ್ಲಿ ನರೇಂದ್ರ ಮೋದಿಗೊಂದು ಛೀಮಾರಿ ಆಗಲೇಬೇಕಿತ್ತು. ಆಗಿದೆ. ಅಷ್ಟರ ಮಟ್ಟಿಗೆ it's fine. ಆದರೆ, ಹೀಗೊಂದು ಛೀಮಾರಿ ಹಾಕಿದ್ದಾರಲ್ಲಾ, ಅವರು ಯಾರು? ಅವರ ಬುಡದ ನೆಲ ಸ್ವಚ್ಛವಾಗಿದೆಯಾ ? ಅವರ ಎದೆಯ ಮೇಲೆ ರಕ್ತದ ಕಲೆಗಳಿಲ್ಲವಾ? ಅವರ ಕೈಯಲ್ಲಿನ ಬಂದೂಕಿನಲ್ಲಿ ಹೊಗೆಯಿಲ್ಲವಾ? ಅವರೇನು ಸಂತರಾ? ಹೋಗಲಿ, ಮನುಷ್ಯರಾ? ಅಥವಾ, ನಮ್ಮ ದೇಶವನ್ನು ಗುತ್ತಿಗೆಗೆ ಪಡೆದು ಕೊಂಡಿರುವ ಧಣಿಗಳಾ?

ಮೋದಿಈ ಅಮೆರಿಕ ಎಂಬ ಉದ್ಧಟ ದೊಡ್ಡಣ್ಣನ ಅತಿರೇಕಗಳು ಯಾಕೋ ದಿನದಿನಕ್ಕೂ ಜಾಸ್ತಿಯಾಗುತ್ತಿವೆ. ನನಗೇನೂ ಮೋದಿಯ ಬಗ್ಗೆ ಪ್ರೀತಿಯಾಗಲಿ, ಅಭಿಮಾನವಾಗಲಿ, ಕನಿಷ್ಠ ಮೆಚ್ಚುಗೆಯಾಗಲಿ, ಏನೂ ಇಲ್ಲ. ಬಿಜೆಪಿಯ ಅನೇಕ ಬಾಯಿಬುಡುಕರ ಪೈಕಿ ಆತನೂ ಒಬ್ಬ. ನಮ್ಮ ದೇಶದ ಅನೇಕ ನಿರಂಕುಶ ಮದಗಜಗಳ ಸಾಲಿನಲ್ಲಿ ಮೋದಿಯದು ಅಗ್ರಸ್ಥಾನ. ಅಕಾರಕ್ಕಾಗಿ ಯಾವ ನೈತಿಕ ಪ್ರಪಾತಕ್ಕೆ ಧುಮುಕುವುದಕ್ಕೂ ಸಿದ್ಧವಿರುವ ಮನುಷ್ಯ ಅಂತ ನೋಡಿದ ತಕ್ಷಣ ಅನ್ನಿಸಿಬಿಡುತ್ತದೆ.

ಆದರೆ, ಆತ ನಮ್ಮ ಮನೆಯ ಸದಸ್ಯ. ಈ ದೇಶದ ಪ್ರಜೆ. ತನ್ನ ರಾಜ್ಯದ ಜನಗಳ ಪ್ರತಿನಿ. ಆತ ಬರೀ ಮೋದಿಯಲ್ಲ; ಒಂದು ರಾಜ್ಯದ ಮುಖ್ಯಮಂತ್ರಿ. ನಮ್ಮ ಪ್ರಜಾತಂತ್ರ ವ್ಯವಸ್ಥೆಯಲ್ಲಿನ ಒಬ್ಬ ಅತಿಮುಖ್ಯ ಪಾತ್ರಧಾರಿ.


ಬುಶ್ನಮ್ಮ ಮನೆಯವರನ್ನು ತೆಗಳುವ, ತಿದ್ದಿಬುದ್ಧಿ ಹೇಳುವ, ಅಗತ್ಯಬಿದ್ದರೆ ಮನೆಯಾಚೆ ದೂಡುವ ಹಕ್ಕು ಮತ್ತು ಕರ್ತವ್ಯ ನಮ್ಮದು ಮಾತ್ರ. ಪಕ್ಕದ ಮನೆಯವರು ಶ್ರೀಮಂತ, ಅವನಿಂದ ನಮಗೆ ಕೋಟ್ಯಂತರ ಡಾಲರುಗಳ ಬಿಸಿನೆಸ್ ಹರಿದುಬರುತ್ತಿದೆ, ಎಂಬ ಮಾತ್ರಕ್ಕೇ ನಾವು ನಮ್ಮ ಸಂಸಾರದ ಓರೆ ಕೋರೆಗಳನ್ನು ಅವನ ಕೈಗೊಪ್ಪಿಸಲಾಗುವುದಿಲ್ಲವಲ್ಲ ? ಅದು ಆ ಶ್ರೀಮಂತನಿಗೆ ಅರ್ಥವಾಗಬೇಕು. ಬುಷ್ ಎಂಬ ಅರೆಬೆಂದ ಯುದ್ಧ ದಾಹಿಗೆ ಆಗಿಲ್ಲ.

ನಿಜ; ಗುಜರಾತ್‌ನಲ್ಲಿ ನಡೆದ ನರಮೇಧವಿದೆಯಲ್ಲಾ , ಅದು ನಮ್ಮನ್ನು ಸದಾ ಕುಟುಕುತ್ತಿರಲೇಬೇಕು, ನಮ್ಮನ್ನು ಪದೇ ಪದೆ ನಾಚಿಕೆಗೆ- ಅವಮಾನಕ್ಕೆ ದೂಡುತ್ತಲೇ ಇರಬೇಕು, ನಮ್ಮ ಆತ್ಮಸಾಕ್ಷಿಯನ್ನು ಜಾಗೃತಗೊಳಿಸುತ್ತಲೇ ಇರಬೇಕು. ನಾವು ಎಂದೂ ಮರೆಯ ಬಾರದು ಪಾಠವಾಗಿ ಅದು ನಮ್ಮ ತಲೆಯಲ್ಲಿ ಗುಂಯ್‌ಗುಡುತ್ತಲೇ ಇರಬೇಕು. ಆದರೆ, ಈ ಸಂಕಟದ ಬೇಗುದಿಯನ್ನು ಜೀವಂತವಿರಿಸಲಿಕ್ಕೆ, ನಮಗೆ ಹೊರಗಿನವರ ಹಂಗಿನ ತುಪ್ಪ ಬೇಕಿಲ್ಲ.


ಹಾಗೆ ನೋಡಿದರೆ, ಈ ದೇಶಕ್ಕೆ ಹತ್ಯಾಕಾಂಡಗಳು ಹೊಸತೇನಲ್ಲ. ಅನೇಕ ದಶಕ ಶತಮಾನಗಳಿಂದಲೂ ನಾವದನ್ನು ಅನುಭವಿಸುತ್ತಲೇ ಬಂದಿದ್ದೇವೆ; ನಮ್ಮ ಹೆಚ್ಚುಗಾರಿಕೆಯೆಂದರೆ, ಅಂಥ ಪ್ರತಿಯೊಂದು ದುರಂತದ ನಂತರವೂ ನಾವು ಒಂದು ಜನಾಂಗವಾಗಿ-ಒಂದು ಸಂಸ್ಕೃತಿಯಾಗಿ-ಒಂದು ದೇಶವಾಗಿ ಭದ್ರಗೊಂಡು ಬೆಳೆಯುತ್ತಾ ಬಂದಿದ್ದೇವೆ. ಅಮೆರಿಕನ್ನರಿಗೆ ಇತಿಹಾಸದ ಪರಿಚಯವಿಲ್ಲ.

ವಿಭಜನೆಯ ಸಮಯದಲ್ಲಾದ ಮಾರಣ ಹೋಮಗಳ ಬಗ್ಗೆ ಇಡೀ ಜಗತ್ತಿಗೇ ಗೊತ್ತಿದೆ. ಅದೆಷ್ಟು ಸಾವಿರ ಹಿಂದೂ ಮುಸ್ಲಿಮರ ಕುಟುಂಬಗ ಳು ಸರ್ವನಾಶವಾಗಿ ಹೋದವು ಅನ್ನುವುದನ್ನು ಇತಿಹಾಸ ದಾಖಲಿಸಿದೆ. ಆದರೆ, ಆ ದುರಂತವೇ ಈ ದೇಶದ ಕೊನೆಯಾಗಲಿಲ್ಲ ; ಅದು ಹೊಸ ಬದುಕೊಂದರ ಆರಂಭವಾಯಿತು, ಹೊಸತಾಗಿ ಹುಟ್ಟಿದ ದೇಶಕ್ಕೊಂದು ಶಾಶ್ವತ ಪಾಠವಾಯಿತು. ಅದೇ ಶಾಶ್ವತ ಶಾಪವೂ ಆಯಿತು.

೧೯೫೦ರ ದಶಕದಲ್ಲಿ ತಮಿಳುನಾಡಿನಲ್ಲೊಂದು ನರಮೇಧ ನಡೆದಿತ್ತು. ತಮ್ಮನ್ನು ತಾವು ಉಚ್ಚ ಕುಲದವರು ಅಂತ ಕರೆದುಕೊಳ್ಳುವ ಕೆಲ ಹಿಂದೂ ಗುಂಪುಗಳವರು, ನೂರಾರು ಹರಿಜನರನ್ನು ಮನಸೋ ಇಚ್ಛೆ ಕೊಚ್ಚಿ ಹಾಕಿದ್ದರು. ಪ್ರತ್ಯಕ್ಷದರ್ಶಿಗಳಾಗಿದ್ದ ಪೊಲೀಸರಿಂದ ಮಾಡ ಲಾಗಿದ್ದು, ಸುಮ್ಮನೆ ಅಸಹಾಯಕವಾಗಿ ನಿಂತು ನೋಡುವುದೊಂದೇ. ಅವರಿಂದ ಅನಾಹುತ ತಡೆಯಲಾಗಿರಲಿಲ್ಲ. ಕಾಂಗ್ರೆಸ್ ಎಂಬ ಗಾಂಧಾರೀ ಗರ್ಭದಲ್ಲಿ ಹುಟ್ಟಿದ ಅಪರೂಪದ ನಾಯಕರಲ್ಲೊಬ್ಬರಾದ ಮುಖ್ಯಮಂತ್ರಿ ಕಾಮರಾಜ್, ನಾಚಿಕೆ-ಅವಮಾನಗಳಿಂದ ತಲೆಕೆಳಗೆ ಹಾಕಿ ನಿಂತಿದ್ದರು. He was ashamed of himself. ಅದಾದ ಮೇಲೆ, ೧೯೬೦ರ ದಶಕದ ಮಧ್ಯಭಾಗದಲ್ಲಿ ಅವತ್ತಿನ ಪೂರ್ವ ಪಾಕಿಸ್ತಾನದಲ್ಲಿ ನಡೆದ ಧರ್ಮ ದಳ್ಳಾರಿಯನ್ನು ಇತಿಹಾಸ ಬರೆದಿಟ್ಟಿದೆ. ಈಗ ಬಾಂಗ್ಲಾದೇಶ ಅಂತ ಕರೆಸಿಕೊಳ್ಳುವ ಆ ನೆಲದಲ್ಲಿ ಅವತ್ತು ಹಿಂದೂಗಳನ್ನು ಕೋಳಿಗಳ ಥರ ತರಿದು ಹಾಕಲಾಗಿತ್ತು. ಪಾಪದ ತರುಣಿಯರ ಮೇಲೆ ಸಾಮೂಹಿಕ ಅತ್ಯಾಚಾರಗಳಾಗಿದ್ದವು. ಅವರೆದೆ ಗಳನ್ನು ಕತ್ತರಿಸಿ ಎಸೆಯಲಾಗಿತ್ತು. ಹಿಂಸೆ ತಡೆಯಲಾರದೆ ಲಕ್ಷಗಟ್ಟಲೆ ಹಿಂದೂಗಳು ಭಾರತಕ್ಕೆ ರಾತ್ರೋರಾತ್ರಿ ಓಡಿಬಂದಿದ್ದರು. ಅತ್ಯಂತ ಮಾನವೀಯವಾಗಿ ವರ್ತಿಸಿದ ನೆಹರೂ ಅವತ್ತು ಅವರನ್ನೆಲ್ಲಾ ಮಧ್ಯಪ್ರದೇಶದ ಬಸ್ತಾರ್‌ಜಿಲ್ಲೆಯಲ್ಲಿರುವ ದಂಡಕಾರಣ್ಯದಲ್ಲಿ ನಿರಾಶ್ರಿತರ ಶಿಬಿರಗಳನ್ನು ಕಟ್ಟಿಸಿ ನಮ್ಮದೇ ದೇಶದ ಮಕ್ಕಳ ಹಾಗೆ ನೋಡಿಕೊಂಡಿದ್ದರು. ಆದರೆ, ಕೋಲ್ಕತ್ತಾದಿಂದ ಬಸ್ತಾರ್‌ಗೆ ಬರುವ ದಾರಿಯಲ್ಲಿ ಈ ನತದೃಷ್ಟ ಹಿಂದೂಗಳು ಹೇಳಿದ ಕಥೆ ಕೇಳಿ ದಾರಿಯುದ್ದಕ್ಕೂ ಭುಗಿಲೆದ್ದ ಹಿಂಸಾಚಾರವನ್ನೂ, ಮುಸ್ಲಿಂ ನರಮೇಧವನ್ನು ತಡೆಯಲು ಅವರಿಂದ ಆಗಿರಲಿಲ್ಲ. He was helpless.

ಅಷ್ಟೊಂದು ಹಿಂದೆ ಯಾಕೆ; ೧೯೮೪ರಲ್ಲಿ ಇಂದಿರಾಗಾಂಯ ಹತ್ಯೆಯಾಗುತ್ತಿದ್ದಂತೆಯೇ ಮೂರು ದಿನಗಳ ಕಾಲ ದೆಹಲಿಯಲ್ಲಿ ನಿರಂತರವಾಗಿ ನಡೆಯಿತಲ್ಲಾ ಸಿಖ್ ಹತ್ಯಾಸರಣಿ, ಅದನ್ನು ಮರೆಯುವುದು ಸಾಧ್ಯವೆ? ಆಗಲೂ ಪೊಲೀಸರು ಅಪರಾಧಕ್ಕೆ ಪ್ರತ್ಯಕ್ಷದರ್ಶಿಗಳಾಗಿದ್ದರು. ಪ್ರಧಾನಿ ಗದ್ದುಗೆಗೇರಿದ ರಾಜೀವ್ ಗಾಂಯಂತೂ, ಹೆಚ್ಚು-ಕಡಿಮೆ ಈ ನರಮೇಧವನ್ನು ಡಿಫೆಂಡ್ ಮಾಡಿಕೊಳ್ಳುವಂಥ insensitive ಧಾಟಿಯಲ್ಲೇ ಮಾತಾಡಿಬಿಟ್ಟರು.

ಆದಾದ ಮೇಲೆ ಆಯೋಧ್ಯೆ ಸಂಭವಿಸಿತು. ಮುಂಬೈಯಲ್ಲಿ ಬಾಂಬ್ ಸೋಟಗಳಾದವು. ಕಾಶ್ಮೀರ ಕಂಗೆಟ್ಟು ಹೋಯಿತು. ಗುಜರಾತ್‌ಗೆ ಬೆಂಕಿ ಬಿದ್ದಿತು.

ಇವೆಲ್ಲವನ್ನೂ ಸಹಿಸಿಕೊಂಡು ಈ ದೇಶ ಇವತ್ತು ಒಂದು ದೇಶವಾಗಿ ಯಾಕೆ ಉಳಿದಿದೆಯೆಂದರೆ, ಇಲ್ಲಿನ ಸಂಸ್ಕೃತಿಯಲ್ಲಿ ಮಾನವೀಯತೆಯೆಂ ಬುದೂ ಕೌಟುಂಬಿಕ ವಿವೇಚನೆಯೆಂಬುದೂ ಗುಪ್ತಗಾಮಿನಿಯಾಗಿ ಹೊಸೆದುಕೊಂಡಿದೆ. ಜಗಳವಾಡಿದ ತಕ್ಷಣ ಡೈವರ್ಸ್‌ಕೊಟ್ಟು ಬಿಡುವ ಪಾಶ್ಚಾತ್ಯ ಸಂಸ್ಕಾರವಲ್ಲ ನಮ್ಮದು. ಹಾಗಂತ, ಎಲ್ಲ ಕೋಮುದಳ್ಳುರಿಗಳೂ-ಧರ್ಮಹತ್ಯೆಗಳೂ ಸಹಜ ಅಂತಾಗಲಿ, ನ್ಯಾಯಸಮ್ಮತ ಅಂತಾಗ ಲಿ ಅಲ್ಲ. ಅವು ಎಂದಿದ್ದರೂ ನಾಚಿಕೆಗೇಡಿನ ಸಂಗತಿಗಳೇ. ಆದರೆ, ಅಂಥ ಹುಯಿಲುಗಳಿಂದ ಅಲುಗಾಡದಷ್ಟು ಗಟ್ಟಿಯಾಗಿ ಬೆಳೆದಿದೆ, ಉಳಿದಿದೆ, ನಮ್ಮ ಡೆಮಾಕ್ರಸಿ. ಇಲ್ಲಿನ ತಪ್ಪಿತಸ್ಥರಿಗೆ ಇಲ್ಲೇ ಶಿಕ್ಷೆ ಕೊಡುವ ವ್ಯವಸ್ಥೆಯಿದೆ. ಮೋದಿ ನೀಚ ಅಂತಾದರೆ, ಆ ನೀಚತನಕ್ಕೆ ಪಾಠ ಕಲಿಸುವಷ್ಟು ವಿವೇಚನೆ ಮತ್ತು ಪ್ರಜ್ಞೆ ನಮ್ಮ ಪ್ರಜಾತಂತ್ರಕ್ಕಿದೆ. ಇವತ್ತು ಎಡವಿದರೂ ನಾಳೆ ತನ್ನನ್ನು ತಾನು ತಿದ್ದಿಕೊಂಡು ಪುಟಿದೇಳುವ ಶಕ್ತಿಯಿದೆ. ಹಾಗಾಗೇ, ನಮ್ಮ ಪ್ರಜಾತಂತ್ರಕ್ಕೆ ಅವಮಾನವಾಗುವುದನ್ನು ನಾವು ಮೋದಿ ಅನ್ನುವ ವ್ಯಕ್ತಿಗಾದ ಅವಮಾನದಷ್ಟು ಸಲೀಸಾಗಿ ಸಹಿಸುವುದು ಸಾಧ್ಯವಿಲ್ಲ.

ಬುಷ್‌ಗಿದು ಗೊತ್ತಿಲ್ಲ. ನಮ್ಮ ಸಾಂವಿಧಾನಿಕ ಪ್ರಜ್ಞೆಯನ್ನೇ ತನ್ನ ಉದ್ಧಟತನದಿಂದ ಅವಮಾನಿಸಿಬಿಟ್ಟಿದ್ದಾನೆ. ಬಿಜೆಪಿಯ ಮೋದಿಯನ್ನು ಕೆಳಕ್ಕೆ ದೂಡಿದರೆ, ಯುಪಿ‌ಎ ಸರ್ಕಾರ ಖುಷಿಯಿಂದ ಕುಣಿದು ತನ್ನ ಜೊತೆ ಡ್ಯುಯೆಟ್ ಹಾಡುತ್ತದೆ ಅಂದು ಕೊಂಡಿದ್ದನೇನೋ. ನಮ್ಮ ಪುಣ್ಯ; ನಮ್ಮ ರಾಜಕಾರಣಕ್ಕಿನ್ನೂ ಅಂಥ ವಿವೇಚನಾ ದಾರಿದ್ರ್ಯಬಡಿದಿಲ್ಲ. ಮೋದಿಯನ್ನು ವೈಯಕ್ತಿಕವಾಗಿ ಒಪ್ಪದಿದ್ದರೂ, ಕಾಂಗ್ರೆಸ್ ಮತ್ತು ಕಮ್ಯು ನಿಷ್ಟ್ ಧುರೀಣರು ಬುಷ್‌ನ ಅತಿಬುದ್ಧಿವಂತಿಕೆಗೆ ಕ್ಯಾಕರಿಸಿ ಉಗಿದಿದ್ದಾರೆ. ಸರ್ಕಾರ ಮತ್ತು ವಿರೋಧ ಪಕ್ಷಗಳೆಲ್ಲವೂ ಒಂದೇ ದನಿಯಿಂದ ಮೋದಿಯ ಗಾದಿಗೆ ಮತ್ತು ಆ ಮೂಲಕ ನಮ್ಮ ಪ್ರಜಾತಂತ್ರಕ್ಕೆ ಆದ ಅವಮಾನವನ್ನು ಪ್ರತಿಭಟಿಸಿವೆ. ಇಲ್ಲಿ ಮೋದಿ ಮುಖ್ಯವಲ್ಲ ಅನ್ನುವುದ ನ್ನು ಎಲ್ಲ ನಾಯಕರೂ ಅರ್ಥ ಮಾಡಿಕೊಂಡಿದ್ದಾರೆ. ಇದೇ ನಿಜವಾದ ದೇಶಪ್ರೇಮದ ಹಾಗೂ ಪ್ರಜಾತಂತ್ರದ ಶಕ್ತಿ.

ಆದು ಒತ್ತಟ್ಟಿಗಿರಲಿ ಬಿಡಿ; ಈಗ, ಯಾವ ಆಧಾರದ ಮೇಲೆ ಅಮೆರಿಕದ ಸರ್ಕಾರ ನರೇಂದ್ರ ಮೋದಿಗೆ ವೀಸಾ ನಿರಾಕರಿಸಿತು ಅನ್ನುವುದನ್ನಷ್ಟು ನೋಡಿ. ತನ್ನ ದೇಶದ `ಇಮಿಗ್ರೇಷನ್ ಮತ್ತು ನ್ಯಾಷನಾಲಿಟಿ ಆಕ್ಟ್' ಸೆಕ್ಷನ್ 212(a)(2)(G) ಪ್ರಕಾರ, ಧಾರ್ಮಿಕ ಸ್ವಾತಂತ್ರ್ಯವನ್ನು ತೀವ್ರವಾಗಿ ಉಲ್ಲಂಘಿಸುವಂಥ- ಹತ್ತಿಕ್ಕುವಂಥ ಕೆಲಸಕ್ಕೆ ಹೊಣೆಯಾದ ಯಾವುದೇ ವಿದೇಶಿ ಸರ್ಕಾರಿ ಅಕಾರಿಗೂ ವೀಸಾ ಕೊಡುವಂತಿಲ್ಲ ಅಂತ ಅಮೆರಿಕ ಹೇಳಿದೆ. ಆದರೆ, ಹೀಗೆ ಹೇಳುವ ಮೂಲಕ ಅದು ಮೋಸ ಮಾಡುತ್ತಿದೆ!

ಅಮೆರಿಕ ತನ್ನ ಯಾವ ಕಾಯ್ದೆಯ ಯಾವ ಸೆಕ್ಷನ್ನಿನ ನೆಪ ಮುಂದೆ ಮಾಡಿದೆಯೋ ಆ ಸೆಕ್ಷನ್ನು ನಿಜವಾಗಿಯೂ ಏನು ಹೇಳುತ್ತದೆ ಗೊತ್ತೆ ?

`... ಯಾವುದೇ ವಿದೇಶಿಗ, ತಾನು ಸರ್ಕಾರಿ ಹುದ್ದೆಯಲ್ಲಿದ್ದಾಗ, ಕಳೆದ ಇಪ್ಪತ್ನಾಲ್ಕು ತಿಂಗಳ ಅವಯಲ್ಲಿ, ನೇರವಾಗಿ ಅಥವಾ ಪರೋಕ್ಷ ವಾಗಿ, ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘಿಸುವಂಥ ಗಲಭೆಗಳಿಗೆ ಕಾರಣವಾಗಿದ್ದರೆ, ೧೯೯೮ರ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ- ಸೆಕ್ಷನ್ ಮೂರರ ಪ್ರಕಾರ, ಆತನಿಗೂ ಆತನ ಕುಟುಂಬಕ್ಕೂ ವೀಸಾ ಕೊಡುವಂತಿಲ್ಲ' ಅಂತಿದೆ. ಅಂದರೆ, ಅಮೆರಿಕ ಅರ್ಧ ಸತ್ಯವನ್ನು ಮಾತ್ರ ಹೇಳುತ್ತಿದೆ!

ಒಂದು ವೇಳೆ ಅಮೆರಿಕ ಹೇಳುವಂತೆ ಗುಜರಾತ್‌ನ ಹತ್ಯಾಕಾಂಡಕ್ಕೆ ನರೇಂದ್ರ ಮೋದಿಯೇ ಹೊಣೆ ಅಂತಿಟ್ಟುಕೊಂಡರೂ, ಅದು ಘಟಿಸಿದ್ದು ೨೦೦೨ರ ಫೆಬ್ರವರಿ ಕೊನೆ ಮತ್ತು ಮಾರ್ಚ್ ಮೊದಲ ವಾರದೊಳಗೆ. ಅಂದರೆ, ಅದು ಎರಡು ವರ್ಷಕ್ಕಿಂತಲೂ ಇಪ್ಪತ್ನಾಲ್ಕು ತಿಂಗಳುಗಳಿ ಗಿಂತಲೂ-ಹಳೆಯದು! ಹಾಗಿದ್ದ ಮೇಲೆ, ಕಾನೂನಿನ ಪ್ರಕಾರ, ಮೋದಿಗೆ ವೀಸಾ ಕೊಡಲು ಅಮೆರಿಕ ಉದ್ಧರಿಸಿದ ಕಾಯ್ದೆಗಳು-ಸೆಕ್ಷನ್‌ಗಳು ಅಡಿಯಾಗುವುದೇ ಇಲ್ಲ.

ಹೋಗಲಿ, ಮೋದಿ ವಿರುದ್ಧ ಅಮೆರಿಕ ಮಾಡಿರುವ ಆರೋಪಗಳು ಭಾರತದ ಕೋರ್ಟುಗಳಲ್ಲಿ ಸಾಬೀತಾದರೂ ಆಗಿವೆಯಾ, ಯಾವು ದಾದರೊಂದು ಕೋರ್ಟಾದರೂ ಮೋದಿಗೆ ಶಿಕ್ಷೆ ಘೋಷಿಸಿದೆಯಾ ಅಂದರೆ ಅದೂ ಇಲ್ಲ. ಸರ್ಕಾರ ನೇಮಿಸಿದ ನಾನಾವತಿ-ಶಾ ಕಮಿಷನ್ ಇನ್ನೂ ತನ್ನ ವರದಿ ಕೊಡಬೇಕಿವೆ. ವಿಚಾರಣೆ ನಡೆಯಬೇಕಿದೆ ಆದರೆ, ಈ ಬಗ್ಗೆ ತಲೆಕೆಡಸಿಕೊಳ್ಳದ ಅಮೆರಿಕ, ಗುಜರಾತ್ ಗಲಭೆಯ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಕೊಟ್ಟ ವರದಿಯನ್ನೂ, ಕೆಲವು ಎನ್‌ಜಿ‌ಓಗಳು ನೀಡಿದ ದೂರನ್ನೂ, ಸೆಕ್ರೆಟರಿ ಆಫ್ ಸ್ಟೇಟ್ ಕೊಂಡ ಲೀಜಾ ರೈಸ್‌ಗೆ ಅಮೆರಿಕದ ಸಂಸದ ಜೋ ಪಿಟ್ಸ್ ಬರೆದ ಪತ್ರವನ್ನೂ ಆಧರಿಸಿ ಮೋದಿಗೆ- ಇಂಡಿಯಾಕ್ಕೆ ಮಂಗಳಾರತಿಯೆತ್ತಿಬಿಟ್ಟಿದೆ. ಇಲ್ಲಿ ನಾವು ಗಮನಿಸಬೇಕಾದ್ದು, ರಾಷ್ಟ್ರೀಯ ಮಾನವ ಹಕ್ಕು ಆಯೋಗದ ವರದಿಗೆ ಕಾನೂನಿನ ಚೌಕಟ್ಟಾಗಲಿ-ಬಂಧ ವಾಗಲಿ ಇಲ್ಲ ಅನ್ನುವುದ ನ್ನ. ಆ ಆಯೋಗದ ಎಲ್ಲ ವರದಿಗಳನ್ನೂ ಅಮೆರಿಕ ಗಂಭೀರವಾಗೇ ತೆಗೆದುಕೊಳ್ಳುವುದಾದರೆ, ಕಾಶ್ಮೀರದಲ್ಲಿನ ಮಾನವ ಹಕ್ಕು ಉಲ್ಲಂಘನೆ ಗಳಿಗೆ ಪಾಕಿಸ್ತಾನವನ್ನೇ ಹೊಣೆಯಾಗಿಸಿ ಅದು ಕೊಟ್ಟಿರುವ ವರದಿಯನ್ನೂ ಗಂಭೀರವಾಗಿ ಪರಿಗಣಿಸಬೇಕು, ಮತ್ತು ಪರ್ವೇಜ್ ಮುಷರ್ರಫ್‌ಗೂ ವೀಸಾ ನಿರಾಕರಿಸಬೇಕು!

ಮೋದಿ ವಿರುದ್ಧ ಅಮೆರಿಕಾದಲ್ಲಿ ಲಾಬಿ ನಡೆಸಿರುವ ಇಂಡಿಯನ್ ಅಮೆರಿಕನ್ನರು, ಮೋದಿ ಒಬ್ಬ ಹಿಟ್ಲರ್‌ಪ್ರೇಮಿ ಅಂತ ದೂರಿ, ಅದಕ್ಕೆ ಸಾಕ್ಷಿಯಾಗಿ ಗುಜರಾತ್‌ನ ಕೆಲವು ಶಾಲಾ ಪಠ್ಯಗಳ ಸಾಲುಗಳನ್ನು ಬೊಟ್ಟು ಮಾಡಿ ತೋರಿಸಿದ್ದಾರೆ. ಅವರು ಹೋಮ್‌ವರ್ಕ್ ಸರಿಯಾಗಿ ಮಾಡಿಲ್ಲ! ಆ ಪುಸ್ತಕಗಳು ಪ್ರಕಟವಾಗಿದ್ದು ೧೯೮೬ರಿಂದ ೧೯೯೨ರ ನಡುವಿನ ಅವಯಲ್ಲಿ ; ಆಗ ಮೋದಿ ಅಕಾರದಲ್ಲಿರಲೇ ಇಲ್ಲ ! ಸ್ವಲ್ಪ ಕೇರ್‌ಫುಲ್ ಆಗಿ ಹುಡುಕಿದ್ದರೆ, ಅವರಿಗೆ ಮೋದಿ ಬಗ್ಗೆ ಇದಕ್ಕಿಂತಲೂ ಭಯಂಕರವಾದ facts and figures ಸಿಗುತ್ತಿದ್ದವೇನೋ. ಆದರೆ, ಅವಮಾನಿಸುವ ಭರದಲ್ಲಿ ಅವಸರಕ್ಕೆ ಬಿದ್ದು ಬಿಟ್ಟರು.

ಅಮೆರಿಕಕ್ಕೆ ನಿಜಕ್ಕೂ ಗುಜರಾತ್ ನರಮೇಧದಿಂದ ಆಗಬೇಕಾದ್ದು ಏನೂ ಇಲ್ಲ. ಮುಸ್ಲಿಮರ ಬಗ್ಗೆ ಆ ದೇಶಕ್ಕೆ ಎಂಥಾ ಕಾಳಜಿ ಇದೆ ಅನ್ನುವುದನ್ನು ನಾವು ಇರಾಕ್‌ನ ಅಬು ಫರೇಬ್‌ನಿಂದ ನೇರವಾಗಿ ಹರಿದು ಬಂದ ಟೀವಿ ಚಿತ್ರಗಳಲ್ಲಿ ಕಂಡಿದ್ದೇವೆ. ಇರಾಕಿನ ಬೀದಿಗಳಲ್ಲಿ ಅಮೆರಿಕನ್ ಸೈನಿಕರು ನಡೆಸಿದ ಪ್ರಳಯೋನ್ಮಾದದ ನೃತ್ಯವನ್ನು ನೋಡಿದ್ದೇವೆ.

ಮೋದಿಯ ವಿಷಯದಲ್ಲಿ ಅಮೆರಿಕಕ್ಕೂ ಮತ್ತು ಅಲ್ಲಿನ ಸರ್ಕಾರವನ್ನು ನಿಯಂತ್ರಿಸುತ್ತಿರುವ ಕ್ರಿಶ್ಚಿಯನ್ ಮಿಷನರಿಗಳಿಗೂ ಇರಬಹುದಾದ ಒಂದು ಅತಿದೊಡ್ಡ ದೂರೆಂದರೆ ಆತನ ಮತಾಂತರ ನಿಷೇಧ ಕಾಯ್ದೆ!

ಬುಷ್ ಮೇಲೆ ಚರ್ಚುಗಳ ಪ್ರಭಾವ ಎಷ್ಟಿದೆ ಅನ್ನುವುದು ಇವತ್ತು ರಹಸ್ಯವಾಗೇನೂ ಉಳಿದಿಲ್ಲ. ಹಾಗಾಗಿ, ಮೋದಿಯ ಮತಾಂತರ ನಿಷೇಧ ಕಾಯ್ದೆಯೇ ಅಮೆರಿಕನ್ ಸರ್ಕಾರದ ಕೆಂಗಣ್ಣಿನ ಮೂಲ ಅನ್ನುವುದನ್ನು ಗುರುತಿಸುವುದಕ್ಕೆ ದಿವ್ಯದೃಷ್ಟಿ ಯೇನೂ ಬೇಡ.

ಆದರೆ, ಈ ಮತಾಂತರದ ಕಾಯ್ದೆಯೇನೂ ಮೋದಿ ಕಂಡುಹಿಡಿದಿದ್ದಲ್ಲ ಅನ್ನುವುದು ಅಮೆರಿಕನ್ನರಿಗೆ ಗೊತ್ತಿರಬೇಕಿತ್ತು. ಕ್ರಿಶ್ಚಿಯನ್ನು ಬಡ ಜನರಿಗೆ ಆಮಿಷ ತೋರಿಸಿ ಅವರನ್ನು ತಮ್ಮ ಧರ್ಮಕ್ಕೆಳೆದು ಕೊಳ್ಳುತ್ತಿದ್ದರ ಬಗ್ಗೆ ಜಸ್ಟಿಸ್ ನಿಯೋಗಿ ಕಮಿಷನ್ ನೀಡಿದ ವರದಿಯಾಧಾರದ ಮೇಲೆ, ೧೯೬೦-೭೦ರ ದಶಕದಲ್ಲೇ ಮಧ್ಯಪ್ರದೇಶ ಒರಿಸ್ಸಾ ಹಾಗೂ ಅರುಣಾಚಲ ಪ್ರದೇಶ ಸರ್ಕಾರಗಳು ಮತಾಂತರ ನಿಷೇಧವನ್ನು ಜಾರಿಗೆ ತಂದಿದ್ದವು. ಅಂಥದ್ದೊಂದು ಕ್ರಮಕ್ಕೆ ಪ್ರೋತ್ಸಾಹ ಕೊಟ್ಟಿದ್ದು, ಶ್ರೀಮತಿ ಇಂದಿರಾಗಾಂ!

ಬುಷ್‌ಗೆ ಇದು ಗೊತ್ತಿಲ್ಲ. ಭಾರತೀಯರ ದೇಶ ಪ್ರೇಮದ ತೀವ್ರತೆಯೂ ಅವನಿಗೆ ಗೊತ್ತಿಲ್ಲ. ಅದನ್ನು ಗೊತ್ತು ಪಡಿಸಬೇಕು. ಯಾವುದೋ ಎನ್‌ಜಿ‌ಓಗಳ-ಆಯೋಗಗಳ ವರದಿಯನ್ನಾಧರಿಸಿ ಅವನು ನಮಗೆ ಅವಮಾನ ಮಾಡಬಲ್ಲನಾದರೆ, ಅದೇ ತಂತ್ರದ ಮೇಲೆ ನಮ್ಮವರು ಅವನ ಸರ್ಕಾರದ ಅಕಾರಿಗಳಿಗೆ ವೀಸಾ ನಿರಾಕರಿಸಲಾರರೆ? ಅಮೆರಿಕ ಸರ್ಕಾರದ ವಿರುದ್ಧ ಅಂಥ ಸಾವಿರಾರು ವರದಿಗಳು ಬಂದಿವೆ. ಮನ್ ಮೋಹನ್‌ಸಿಂಗ್ ಸ್ವಲ್ಪ ಧಾರ್ಷ್ಟ್ಯ ತೋರಿಸಬೇಕು, ಅಷ್ಟೆ.

ಕಪಾಳಕ್ಕೆ ಹೊಡೆಯದ ಹೊರತು, ದೊಡ್ಡಣ್ಣನಿಗೆ ತನ್ನ ತಮ್ಮಂದಿರು ತನ್ನೆರಕ್ಕೆ ಬೆಳೆದು ನಿಂತಿದ್ದಾರೆ ಅನ್ನುವುದು ಗೊತ್ತಾಗುವುದಿಲ್ಲ.

No comments: