Thursday, August 24, 2006

ವಂದೇ ಮಾತರಂಗೆ ಕಡೆವಂದೇ ಹೇಳಹೊರಟವರ ಕುರಿತು

ವಿಶ್ವೇಶ್ವರ ಭಟ್
ವಿಶ್ವೇಶ್ವರ ಭಟ್:


ಪತ್ರಕರ್ತ ಚೋ.ರಾಮಸ್ವಾಮಿ ಹೇಳುತ್ತಿದ್ದರು, `ನಮ್ಮ ರಾಜಕಾರಣಿಗಳು ಎಂಥ ನೀಚ ಮಟ್ಟಕ್ಕೆ ಬೇಕಾದರೂ ಹೋಗಲೂ ಹೇಸದವರು. ಅದಕ್ಕೆ ಭಾರತದ ರಾಜಕಾರಣದಲ್ಲಿ ಅಸಂಖ್ಯ‌ಉದಾಹರಣೆಗಳು ಸಿಗುತ್ತವೆ. ಗಡಿಯಲ್ಲಿನ ನಮ್ಮ ಬೇಹುಗಾರನ ಸುಳಿವನ್ನು ಶತ್ರು ದೇಶದ ಸೈನಿಕರಿಗೆ ಹೇಳುವುದರಿಂದ ಹಿಡಿದು ರಕ್ಷಣೆ, ಬಾಹ್ಯಾಕಾಶ, ಅಣುಸ್ಥಾವರ, ದೇಶದ ಭದ್ರತೆಗೆ ಸಂಬಂಸಿದ ಅಮೂಲ್ಯ, ಸೂಕ್ಷ್ಮ ಮಾಹಿತಿಯನ್ನು ಸಹಾ ಮಾರಾಟಕ್ಕಿಡಬಲ್ಲರು. ತಮ್ಮ ಸ್ವಾರ್ಥಕ್ಕಾಗಿ ದೇಶವನ್ನೇ ಮಾರಾಟ ಮಾಡುವ ಸಂದರ್ಭ ಬಂದರೆ, ಚೌಕಾಶಿ ಮಾತುಕತೆಗೆ ಕುಳಿತುಕೊಳ್ಳಬಲ್ಲರು'. ಚೋ ಏರಿದ ದನಿಯಲ್ಲಿ ಪಟಾಕಿಸರಕ್ಕೆ ಬೆಂಕಿಯಿಟ್ಟವರಂತೆ ಸಡಸಡ ಮಾತಾಡುವಾಗ ವಿಷಯವನ್ನು ಉತ್ಪ್ರೇಕ್ಷಿಸಬಹುದೇನೋ ಎಂದೆನಿಸುತ್ತದೆ. ಆಗ ಅವರು ಹೇಳುತ್ತಿದ್ದರು -ನಾನು ಹೀಗೆ ಮಾತಾಡಿದರೆ ನಿಮಗೆ ಅನಿಸುತ್ತದೆ ಈ ಚೋ.ರಾಮಸ್ವಾಮಿಗೆ ಬುದ್ಧಿಯಿಲ್ಲ. ಬಾಯಿಗೆ ಬಂದಿದ್ದನ್ನೆಲ್ಲ ಹೇಳುತ್ತಾನೆ. ರಾಜಕಾರಣಿಗಳನ್ನು ಹೀನಾಯಮಾನವಾಗಿ ಬೈಯುತ್ತಾನೆ ಅಂತ ಒಳಗೊಳಗೆ ಅಂದುಕೊಳ್ಳುತ್ತಾರೆ. ನನ್ನ ಮಾತಿನ ಮರ್ಮ ತಕ್ಷಣ ಅವರಿಗೆ ಅರ್ಥವಾಗದಿರಬಹುದು. ಆದರೆ ನನ್ನ ಮಾತು ಅವರಿಗೆ ಅರ್ಥವಾಗಲು ಹೆಚ್ಚು ದಿನ ಬೇಕಾಗುವುದಿಲ್ಲ.

ಯಾಕೋ ಎಂದೋ ಹೇಳಿದ ಚೋ ಮಾತು ಮನಸ್ಸಿನ ಮುಂದೆ ಹಾದು ಹೋಯಿತು.

`ವಂದೇ ಮಾತಾರಂ' ಕುರಿತು ಎದ್ದಿರುವ ವಿವಾದವನ್ನೇ ನೋಡಿ. ನಮ್ಮ ಸ್ವಾರ್ಥ ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಹೋಗಬಲ್ಲರೆಂಬುದಕ್ಕೆ ನಿದರ್ಶನ. ವೋಟ್‌ಬ್ಯಾಂಕ್ ರಾಜಕಾರಣದ ಮುಂದೆ ನಮ್ಮ ದೇಶ, ದೇಶಗೀತೆ, ಧ್ಯೇಯ, ಮೌಲ್ಯ, ದೇಶಹಿತ ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಧ್ಯೇಯದೀವಿಗೆಯಾಗಿ ಅಸಂಖ್ಯ ಭಾರತೀಯರ ಅಪದಮನಿ, ಅಭಿದಮನಿಗಳಲ್ಲಿ ಸೂರ್ತಿ ಕಾರಂಜಿ ಸೃಜಿಸಿದ ಗೀತೆ -`ವಂದೇ ಮಾತರಂ' ಸಹ ರಾಜಕಾರಣಿಗಳ ಕೈಯಲ್ಲಿ ಹೇಗೆ ದಾಳವಾಗುತ್ತದೆ ನೋಡಿ.

`ವಂದೇ ಮಾತರಂ' ವಿವಾದ ಆರಂಭವಾಗುವುದು ಹೀಗೆ.

ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಅರ್ಜುನ್ ಸಿಂಗ್ ದೇಶದ ಎಲ್ಲ ಮುಖ್ಯಮಂತ್ರಿಗಳಿಗೆ ಒಂದು ಪತ್ರ ಬರೆಯುತ್ತಾರೆ. ವಿಷಯ ಏನಂದ್ರೆ -`ಸೆಪ್ಟೆಂಬರ್ ೭ರಂದು ವಂದೇ ಮಾತರಂ ಶತಮಾನೋತ್ಸವ ನಿಮಿತ್ತ, ಅಂದು ಬೆಳಗ್ಗೆ ೧೧ಕ್ಕೆ ದೇಶಾದ್ಯಂತ ಎಲ್ಲ ಶಾಲೆಗಳಲ್ಲಿ ಈ ರಾಷ್ಟ್ರಗೀತೆ(ವಂದೇ ಮಾತರಂ)ಯ ಮೊದಲ ಎರಡು ಪಲ್ಲವಿಗಳನ್ನು ಕಡ್ಡಾಯವಾಗಿ ಹಾಡಬೇಕು. ' ಈ ಪತ್ರ ಬರುತ್ತಿದ್ದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ರಾಜ್ಯದ ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ಸುತ್ತೋಲೆ ಕಳುಹಿಸಿದರು. `ವಂದೇ ಮಾತರಂ'ನ್ನು ಹಾಡುವಂತೆ ಅದರಲ್ಲಿ ಸೂಚಿಸಲಾಗಿತ್ತು. ಮುಲಾಯಂ ಸಿಂಗ್‌ರು ಅಜುನ್‌ಸಿಂಗ್ ಅವರ ಪತ್ರವನ್ನು ಅನುಮೋದಿಸಿದ್ದರು.

ಯಾವಾಗ ಮುಲಾಯಂ ಸಿಂಗ್ ಯಾದವ್‌ರ ಸುತ್ತೋಲೆ ಹೊರಬಿತ್ತೋ, ಉತ್ತರ ಪ್ರದೇಶದ ಮುಸ್ಲಿಂ ಸಮುದಾಯದ ಹಿರಿಯರು, ಧರ್ಮಗುರುಗಳು, ಮೌಲ್ವಿಗಳು ರಾತ್ರೋ ರಾತ್ರಿ ಸಭೆ ಸೇರಿದರು. ವಂದೇ ಮಾತರಂ ವಿರುದ್ಧ ದನಿ‌ಎತ್ತಲು ನಿರ್ಧರಿಸಿದರು. ಪ್ರಮುಖ ಇಸ್ಲಾಮಿಕ್ ಸಂಘಟನೆಗಳ ಪೈಕಿ ಒಂದಾದ ಫಿರಂಗಿ ಮಹಲ್ ಅಧ್ಯಕ್ಷ ಮೌಲಾನ ಖಲೀದ್ ರಶೀದ್ ಹೇಳಿದರು -`ಮುಸ್ಲಿಂ ವಿದ್ಯಾರ್ಥಿಗಳು ವಂದೇಮಾತರಂ ಹಾಡುವುದು ಇಸ್ಲಾಂ ವಿರೋ. ನಮ್ಮ ಸಮುದಾಯದವರ್‍ಯಾರೂ ಇದನ್ನು ಹಾಡಬಾರದು. ವಂದೇಮಾತರಂ ಹಾಡಿದರೆ ಇಸ್ಲಾಮ್‌ಗೆ ಅವಹೇಳನ ಮಾಡಿದ ಹಾಗೆ. ಸೆಪ್ಟೆಂಬರ್ ೭ರಂದು ಮುಸ್ಲಿಂ ವಿದ್ಯಾರ್ಥಿಗಳು ಇದನ್ನು ಹಾಡಕೂಡದೆಂದು ನಾನು ಕರೆ ಕೊಡುತ್ತೇನೆ.'

ದಿಲ್ಲಿಯ ಜಮಾ ಮಸೀದಿ ಶಾಹಿ ಇಮಾಮ್ ಸಯ್ಯದ್ ಅಹಮದ್ ಬುಖಾರಿ ಮಿಂಚಿನಂತೆ ಕಾರ್ಯಪ್ರವೃತ್ತರಾದರು. ತಕ್ಷಣ ತಮ್ಮ ಬೆಂಬಲಿಗರೊಂದಿಗೆ ಮುಸ್ಲಿಂ ಸಮುದಾಯದ ಹಿರಿಯರೊಂದಿಗೆ ಸಭೆ ಸೇರಿ ಅನಂತರ ಕರೆ ಕೊಟ್ಟರು -`ವಂದೇಮಾತರಂನ್ನು ಯಾವ ಕಾರಣಕ್ಕೂ ಹಾಡಕೂಡದು. ಅದು ಇಸ್ಲಾಮಿನ ನಂಬಿಕೆಗಳಿಗೆ ವಿರುದ್ಧವಾಗಿದೆ. ಒಂದು ವೇಳೆ ವಂದೇ ಮಾತರಂನ್ನು ಹಾಡಲೇ ಬೇಕೆಂಬ ಒತ್ತಡ ಹೇರುವುದೆಂದರೆ ನಮ್ಮ ಸಮುದಾಯವನ್ನು ತುಳಿದಂತೆ. ಇಸ್ಲಾಂ ಪ್ರಕಾರ ಒಬ್ಬನು ತನ್ನ ದೇಶವನ್ನು ಪ್ರೀತಿಸುವುದು, ಗೌರವಿಸುವುದು ತಪ್ಪಲ್ಲ. ಅಷ್ಟೇ ಅಲ್ಲ ಸಂದರ್ಭ ಬಂದರೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಬಹುದು. ಆದರೆ ಯಾರನ್ನಾದರೂ ಪೂಜಿಸುವ ಪ್ರಶ್ನೆ ಎದುರಾದರೆ, ಅಲ್ಲಾಹನನ್ನು ಮಾತ್ರ ಪೂಜಿಸಬೇಕು. ಮುಸ್ಲಿಮನಾದವನು ತನ್ನ ತಂದೆ, ತಾಯಿ, ಮಾತೃಭೂಮಿ ಹಾಗೂ ಪ್ರವಾದಿಯನ್ನು ಉನ್ನತ ಸ್ಥಾನದಲ್ಲಿರಿಸಿ ಗೌರವಿಸಿದರೂ, ಇವರೆಲ್ಲರನ್ನೂ ಪೂಜಿಸುವಂತಿಲ್ಲ. ಸ್ವಾತಂತ್ರ್ಯ ನಂತರದಿಂದ ಕೇಂದ್ರದ ಹಾಗೂ ರಾಜ್ಯಗಳ ಎಲ್ಲ ಸರ್ಕಾರಗಳು ಮುಸ್ಲಿಮರನ್ನು ತುಳಿಯುತ್ತಿವೆ. ವಂದೇಮಾತರಂ ಹಾಡಬೇಕೆಂಬ ಸುತ್ತೋಲೆ ಈ ದಿಸೆಯಲ್ಲಿ ಮುಸ್ಲಿಂ ಸಮುದಾಯದ ಮೇಲೆ ಎಸಗಿದ ಮತ್ತೊಂದು ಗದಾಪ್ರಹಾರ. ಸ್ವಯಂಪ್ರೇರಿತರಾಗಿ ಯಾರಾದರೂ ಹಾಡುವುದಾದರೆ ನನ್ನ ಆಕ್ಷೇಪವಿಲ್ಲ. ಆದರೆ ಹಾಡಲೇ ಬೇಕೆಂಬ Pಕ್ಷಿಟ್ಟಳೆ, ಕಟ್ಟುಪಾಡು ವಿಸಿದರೆ, ಅದನ್ನು ಬಲವಾಗಿ ಪ್ರತಿಭಟಿಸಬೇಕಾದೀತಿ. ಇಂಥ ಸುತ್ತೋಲೆ ವಾಪಸ್ ಪಡೆಯುವಂತೆ ಸರಕಾರಕ್ಕೆ ಎಚ್ಚರಿಕೆ ನೀಡಬೇಕಾದೀತು. ದೇಶವನ್ನು ಪೂಜಿಸುವುದು ವಂದೇ ಮಾತರಂ ಉದ್ದೇಶ ಅಲ್ಲ. ಈ ಹಾಡಿನಲ್ಲಿ ದೇಶವನ್ನು ತಾಯಿಗೆ ಹೋಲಿಸಲಾಗಿದೆ ಹಾಗೂ ಜನರನ್ನು ಆಕೆಯ ಮಕ್ಕಳೆಂದು ಚಿತ್ರಿಸಲಾಗಿದೆ. ಈ ವಾದವನ್ನು ನಾವು ಒಪ್ಪುವುದಿಲ್ಲ. ಇದು ನಮ್ಮ ಧರ್ಮಕ್ಕೆ ವಿರೋಧವಾದುದು. '

ಅರ್ಜುನ್ ಸಿಂಗ್ ಸುತ್ತೋಲೆ ಕೇವಲ ೨೪ ಗಂಟೆಗಳಲ್ಲಿ ಮುಸ್ಲಿಂ ಸಮುದಾಯದಲ್ಲಿ ಅದೆಂಥ ಸಂಚಲನವನ್ನುಂಟು ಮಾಡಿತೆಂದರೆ, ದೇಶದೆಲ್ಲೆಡೆಯಿರುವ ಮುಸ್ಲಿಂ ಸಮುದಾಯದ ಮುಖಂಡರು ತಮ್ಮ ತಮ್ಮ ಊರುಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ, ವಂದೇ ಮಾತರಂನ್ನು ಹಾಡಬೇಕೆಂಬ ಪ್ರಸ್ತಾಪವನ್ನು ವಿರೋಸಿದರು.

ಅರ್ಜುನ್ ಸಿಂಗ್ ಮುಸ್ಲಿಂ ಸಮುದಾಯದ ಅಂತರಂಗ ತುಮುಲವೇನೆಂಬುದು ತಟ್ಟನೆ ಅರ್ಥವಾಯಿತು. ತಮ್ಮ ಮೊದಲಿನ ಆದೇಶದಿಂದ ದೇಶಾದ್ಯಂತವಿರುವ ಮುಸ್ಲಿಮರಿಗೆ ಅಸಮಾಧಾನವಾಗಿದೆಯೆಂದು ಮನವರಿಕೆಯಾಯಿತು. ಅದು ರಾಷ್ಟ್ರಗೀತೆಯ ವಿಚಾರವಾಗಿರಬಹುದು ಅಥವಾ ಇನ್ನಿತರ ಯಾವುದೇ ವಿಷಯವಾಗಿರಬಹುದು, ಅಲ್ಪಸಂಖ್ಯಾತರನ್ನು ಎದುರು ಹಾಕಿಕೊಳ್ಳುವುದುಂಟಾ? ಅರ್ಜುನ್ ಸಿಂಗ್ ಮತ್ತೊಂದು ಸುತ್ತೋಲೆ ಕಳಿಸಿದರು. ಅಂದು ಭಾನುವಾರ ಸರಕಾರಿ ಕಚೇರಿಗೆ ರಜೆಯಿದ್ದರೂ ತಮ್ಮ ಸಿಬ್ಬಂದಿಯನ್ನು ಕರೆದು ಆದೇಶ ಹೊರಡಿಸಿದರು. ವಾರಣಸಿಯಲ್ಲಿ ಪತ್ರಿಕಾಗೋಷ್ಠಿಯನ್ನೂ ಕರೆದರು -`ವಂದೇಮಾತರಂನ್ನು ಹಾಡಲೇಬೇಕೆಂಬ ಕಡ್ಡಾಯವಿಲ್ಲ. ಹಾಡಬಹುದು ಅಥವಾ ಬಿಡಬಹುದು' ಎಂದು ಬಿಟ್ಟರು.

ಆಗಲೇ ಮುಸ್ಲಿಂ ಸಮುದಾಯ ನಿಟ್ಟುಸಿರುಬಿಟ್ಟಿದ್ದು. ಅರ್ಜುನ್‌ಸಿಂಗ್ ಹೇಳಿದ್ದಕ್ಕೆ ಕಾಂಗ್ರೆಸ್ ಠಸ್ಸೆ ಒತ್ತಿತ್ತು. ಆ ಪಕ್ಷದ ವಕ್ತಾ ಅಭಿಷೇಕ್ ಮನು ಸಿಂಘ್ವಿ ಹೇಳಿದರು -`ನಮ್ಮ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರೇರಣೆ ಮೂಡಿಸಿದ, ದೇಶಕ್ಕಾಗಿ ಬಲಿದಾನಗೈದ ಅಸಂಖ್ಯ ಜನರಿಗೆ ಸೂರ್ತಿಯಾದ ವಂದೇಮಾತರಂ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಈ ರಾಷ್ಟ್ರಕ್ಕೆ ಅಪಾರ ಗೌರವವಿದೆ. ಆದರೂ ಯಾವುದೋ ಒಂದು ಸಮುದಾಯ ಅಥವಾ ಗುಂಪು ವಂದೇ ಮಾತರಂ ಹಾಡುವುದರ ಬಗ್ಗೆ ಬೇರೆ ರೀತಿ ಯೋಚಿಸಿದರೆ ಅವರು ಹಾಡಬಹುದು, ಇಲ್ಲವೇ ಬಿಡಬಹುದು. ಅದು ಅವರಿಗೆ ಬಿಟ್ಟ ವಿಚಾರ. ಈ ವಿಷಯದಲ್ಲಿ ಕೇಂದ್ರ ಮಂತ್ರಿ ಅರ್ಜುನ್ ಸಿಂಗ್ ನಿರ್ಧಾರವನ್ನು ಕಾಂಗ್ರೆಸ್ ಸಮ್ಮತಿಸುತ್ತದೆ. ವಂದೇ ಮಾತರಂನ್ನು ಹಾಡಲೇಬೇಕೆಂಬ ನಿಯಮ ಕಡ್ಡಾಯವೇನಿಲ್ಲ. ಅದು ಐಚ್ಛಿಕ. '

ಯಾವ ವಾರಾಣಸಿ ಅಖಿಲ ಭಾರತ ಕಾಂಗ್ರೆಸ್ ಅವೇಶನದಲ್ಲಿ ೧೯೦೫ರಲ್ಲಿ ವಂದೇ ಮಾತರಂನ್ನು ಹಾಡಲಾಗಿದ್ದೋ ಹಾಗೂ ರಾಷ್ಟ್ರೀಯ ಹಾಡು ಎಂದು ಮಾನ್ಯ ಮಾಡಿ ಸ್ವೀಕರಿಸಲಾಗಿತ್ತೋ, ಅದೇ ವಾರಾಣಸಿಯಲ್ಲಿ ಅರ್ಜುನ್ ಸಿಂಗ್ `ವಂದೇ ಮಾತರಂನ್ನು ಹಾಡಿದರೆ ಹಾಡಿ ಬಿಟ್ಟರೆ ಬಿಡಿ' ಎಂದು ಅಪ್ಪಣೆ ಕೊಡಿಸಿದ್ದರು.

೧೮೭೬ರಲ್ಲಿ ಬಂಕಿಮ್‌ಚಂದ್ರ ಚಟರ್ಜಿ ವಂದೇ ಮಾತರಂ ಬರೆದಾಗ ಅದು ಸ್ವಾತಂತ್ರ್ಯದ ರಣಕಹಳೆಯಂತೆ ಎಲ್ಲ ದೇಶಭಕ್ತರ ಬಾಯಲ್ಲಿ ಮೊಳಗತೊಡಗಿತು. `ವಂದೇ ಮಾತರಂ' ಘೋಷಣೆಯಿಲ್ಲದೇ ಯಾವ ಕಾರ್ಯಕ್ರಮವೂ ಆರಂಭವಾಗುತ್ತಿರಲಿಲ್ಲ. ಕೊನೆಗೊಳ್ಳುತ್ತಿರಲಿಲ್ಲ. ವಂದೇ ಮಾತರಂ ಅಂದರೆ ಪ್ರಖರ ದೇಶಪ್ರೇಮ, ದೇಶಭಕ್ತಿಯ ಸಂಕೇತ. ಈ ಘೋಷಣೆಗೆ ಇಡೀ ದೇಶವಾಸಿಗಳನ್ನು ಬಡಿದೆಬ್ಬಿಸುವ ಃಶಕ್ತಿಯಿತ್ತು. ಒಂದು ಹಂತದಲ್ಲಿ ವಂದೇಮಾತರಂ ಘೋಷಣೆಯನ್ನು ಬ್ರಿಟಿಷರು ನಿಷೇಸಿದ್ದರು. ಇದನ್ನು ಪ್ರತಿಭಟಿಸಿ ಘೋಷಣೆ ಕೂಗಿದರೆಂಬ ಕಾರಣಕ್ಕೆ ಸಹಸ್ರಾರು ಜನರನ್ನು ಅವರು ಜೈಲಿಗೆ ಹಾಕಿದ್ದರು. ವಂದೇ ಮಾತರಂ ಅಂದ್ರೆ ಭಾರತವನ್ನು ಪ್ರೀತಿಸುವವರೆಲ್ಲರ ರಾಷ್ಟ್ರೀಯ ಮಂತ್ರ. ೧೮೯೬ರಲ್ಲಿ ಕೋಲ್ಕತಾ ಕಾಂಗ್ರೆಸ್ ಅವೇಶನದಲ್ಲಿ ಸ್ವತಃ ರವೀಂದ್ರ ನಾಥ ಟಾಗೋರ್‌ರು ವಂದೇ ಮಾತರಂ ಹಾಡಿದ್ದರು. ಲಾಲಾ ಲಜಪತರಾಯ್ ಲಾಹೋರ್‌ನಿಂದ ವಂದೇ ಮಾತರಂ ಹೆಸರಿನ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಬ್ರಿಟಿಷ್ ಗುಂಡಿಗೆ ಬಲಿಯಾದ, ನೇಣಿಗೆ ಶರಣಾದ ಅದೆಷ್ಟೋ ದೇಶಪ್ರೇಮಿಗಳ ಕೊನೆಯ ಉದ್ಗಾರ -ವಂದೇ ಮಾತರಂ!

ಅನೇಕ ವರ್ಷಗಳ ಕಾಲ ವಂದೇ ಮಾತರಂ ನಮ್ಮ ರಾಷ್ಟ್ರಗೀತೆಯೂ ಆಗಿತ್ತು. ಅನಂತರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಗ `ಜನಗಣಮನ' ರಾಷ್ಟ್ರಗೀತೆಯಾಯಿತು. ಇದರ ಹಿಂದಿನ ರಾಜಕೀಯ, ಉದ್ದೇಶ ಅದೇನೇ ಇರಲಿ, ಜನಗಣಮನಕ್ಕಿಂತ ವಂದೇಮಾತರಂನಲ್ಲೇ ರಾಷ್ಟ್ರಭಕ್ತಿಯ ಅದಮ್ಯ ಸುರಣವಿದೆಯೆಂಬ ಅಭಿಪ್ರಾಯವಿದೆ. ಅಂತಿಮವಾಗಿ ವಂದೇಮಾತರಂ ಬದಲಿಗೆ `ಜನಗಣಮನ'ವನ್ನೇ ರಾಷ್ಟ್ರಗೀತೆಯಾಗಿ ಆಯ್ಕೆ ಮಾಡಲಾಯಿತು. ೧೯೫೦ರ ಜನವರಿ ೨೪ರಂದು ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಕಾನ್‌ಸ್ಟಿಟುಯೆಂಟ್ ಅಸೆಂಬ್ಲಿ ಉದ್ದೇಶಿಸಿ ಮಾತನಾಡುತ್ತಾ ಹೇಳಿದ್ದು ಉಲ್ಲೇಖಾರ್ಹ -`ಜನಗಣಮನ ಪದಗಳುಳ್ಳ ಹಾಡನ್ನು ಭಾರತದ ರಾಷ್ಟ್ರಗೀತೆ(anthem)ಯಾಗಿ ವಂದೇ ಮಾತರಂನ್ನು ರಾಷ್ಟ್ರೀಯ ಹಾಡಾಗಿ(national song) ಸ್ವೀಕರಿಸಲಾಗಿದೆ. ಆದರೂ ವಂದೇ ಮಾತರಂ ಹಾಡಿಗೆ ಜನಗಣಮನದಷ್ಟೇ ಸಮನಾದ ಗೌರವ ಮತ್ತು ಸ್ಥಾನಮಾನವಿದೆ' ರಾಷ್ಟ್ರಪತಿಯವರ ಈ ಘೋಷಣೆಯನ್ನು ಇಡೀ ಅಸೆಂಬ್ಲಿ ಮೇಜುಕುಟ್ಟಿ ಸ್ವಾಗತಿಸಿತ್ತು. ಆನಂತರ ನಮ್ಮ ಸಂವಿಧಾನದಲ್ಲೂ ಸಹ ವಂದೇ ಮಾತರಂನ್ನು ಸಂಸತ್ತಿನಲ್ಲೂ ಹಾಡುವ ಸಂಪ್ರದಾಯವಿದೆ.

ಹೀಗಿರುವಾಗ ಒಂದು ಕೋಮಿನ ಕೆಲ ನಾಯಕರು ಆಕ್ಷೇಪಿಸಿದರೆಂಬ ಕಾರಣಕ್ಕೆ, ವೋಟ್‌ಬ್ಯಾಂಕ್ ರಾಜಕಾರಣಕ್ಕೆ ವಂದೇ ಮಾತರಂ ಬಗ್ಗೆ ಸರಕಾರ ಹಾಗೂ ಕಾಂಗ್ರೆಸ್ ಪಕ್ಷ ತೆಗೆದುಕೊಂಡ ನಿರ್ಧಾರ ದುಗ್ಭ್ರಮೆ ಮೂಡಿಸುವಂಥದ್ದು. ಜಗತ್ತಿನ ಬೇರಾವ ದೇಶದಲ್ಲೂ ಘಟಿಸದ, ಊಹಿಸಲೂ ಆಗದಂಥ ಘಟನೆಗೆ ನಾವೆಲ್ಲ ಸಾಕ್ಷಿಯಾಗಬೇಕಿರುವುದು ದುರ್ದೈವ. ಇದು ರಾಷ್ಟ್ರಕ್ಕೆಸಗಲಾದ ಅವಮಾನವಲ್ಲದೇ ಮತ್ತೇನು? ಈ ದೇಶದಲ್ಲಿ ನೆಲೆಸುವ ಪ್ರತಿಯೊಬ್ಬರೂ ರಾಷ್ಟ್ರ, ರಾಷ್ಟ್ರೀಯತೆಯನ್ನು ಪ್ರತಿನಿಸುವ ಸಂಕೇತಗಳಿಗೆ ತಲೆಬಾಗಲೇಬೇಕು. ಇಂದು ರಾಷ್ಟ್ರೀಯ ಹಾಡಿಗೆ ಆಕ್ಷೇಪಿಸುವವರು ನಾಳೆ ರಾಷ್ಟ್ರಧ್ವಜದ ಬಗ್ಗೆ ತಕರಾರು ತೆಗೆಯಬಹುದು. ಅವರನ್ನು ಓಲೈಸಲು ಸರಕಾರ ಮಣಿಯುವುದಿಲ್ಲವೆನ್ನುವ ಗ್ಯಾರಂಟಿಯೇನು? ರಾಷ್ಟ್ರಗೀತೆಗೂ ಇದೇ ಒತ್ತಡ ಬಂದರೆ? ಆಗಲೂ ನಮ್ಮ ಮಾನಗೆಟ್ಟ ಸರಕಾರಗಳು ಮಣಿಯಲಾರವೆಂಬ ಗ್ಯಾರಂಟಿಯೇನು?

ಈ ದೇಶದ ಘೋಷವಾಕ್ಯಕ್ಕೇ ಅದರ ಶತಮಾನೋತ್ಸವ ಆಚರಿಸುವ ಈ ಸಂದರ್ಭದಲ್ಲಿ ಈ ಗತಿ ಬಂದರೂ ಯಾರೂ ಕ್ಕಾರದ ಘೋಷಣೆ ಹಾಕುತ್ತಿಲ್ಲ. ಏನೆನ್ನೋಣ?

3 comments:

Anonymous said...

ನಮ್ಮ ದೇಶದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಾನೂನಿದೆ.

ಬಡವರಿಗೆ ಒಂದು ಕಾನೂನು. ಶ್ರೀಮಂತರಿಗೊಂದು ಕಾನೂನು.
ಜನಸಾಮಾನ್ಯರಿಗೆ ಒಂದು ಕಾನೂನು. ರಾಜಕಾರಣಿಗಳಿಗೆ ಒಂದು ಕಾನೂನು.
ಹಿಂದೂಗಳಿಗೆ ಒಂದು ಕಾನೂನು. ಮುಸ್ಲಿಮರಿಗೆ ಒಂದು ಕಾನೂನು.

'ಹುಚ್ಚುಮುಂಡೆ ಮದುವೇಲಿ ಉಂಡವನೇ ಜಾಣ' ಎಂಬ ಮಾತಿದೆ. ಭಾರತ ಮಾತೆಯನ್ನು 'ಹುಚ್ಚು ಮುಂಡೆ'ಯನ್ನಾಗಿ ಮಾಡಿದ ಕೀರ್ತಿ ಇದುವರೆಗೂ ಆಗಿಹೋಗಿರುವ ಈ ದೇಶದ ರಾಜಕಾರಣಿಗಳಿಗೆ ಸಲ್ಲಬೇಕು.

Anonymous said...

ಹಿನ್ನೆಲೆ : ೧೮೭೦ರ ದಶಕದಲ್ಲಿ ಬಂಕಿಮ ಚಂದ್ರ ಚಟರ್ಜಿ ಬರೆದ ಹಾಡಿದು. ಆದರೆ ಇದು ಪ್ರಕಟಗೊಳ್ಳಲು ಬಹಳ ಸಮಯವೇ ಹಿಡಿಯಿತು. ೧೮೮೧ರಲ್ಲಿ ಬಂಕಿಚಂದ್ರರ `ಅನಂದಮಠ ಕಾದಂಬರಿ ಪ್ರಕಟವಾದಾಗ ಅದರಲ್ಲಿ ಈ ಹಾಡನ್ನು ಸೇರಿಸಲಾಗಿತ್ತು. ೧೮೯೬ರಲ್ಲಿ ಕಲ್ಕತ್ತಾದ ಕಾಂಗ್ರೆಸ್ ಅಧಿವೇಶನದಲ್ಲಿ ಠಾಗೋರರ ಸಂಗೀತ ಸಂಯೋಜನೆಯಲ್ಲಿ ಇದನ್ನು ಹಾಡಲಾಯಿತು. ಯಾವಾಗ ೧೯೦೫ರಲ್ಲಿ ಸ್ವದೇಶಿ ಚಳವಳಿ ಶುರುವಾಯಿತೋ ಆಗ ಈ ಗೀತೆ ಪ್ರತಿಯೊಬ್ಬರ ರಾಷ್ಟ್ರೀಯ ಮಂತ್ರವಾಗಿಬಿಟ್ಟಿತು. ವಂದೇ ಮಾತರಂ ಗೆ ಬ್ರಿಟಿಷರು ಅದೆಷ್ಟು ತತ್ತರಿಸಿಹೋಗಿದ್ದರೆಂದರೆ ಗೀತೆಯನ್ನೇ ಬ್ಯಾನ್ ಮಾಡಲಾಗಿತ್ತು. ಆವಾಗಲೇ ವಂದೇ ಮಾತರಂ ಇನ್ನಿಲ್ಲದಂತೆ ಸ್ವಾತಂತ್ರ್ಯ ಹೋರಾಟಗಾರರನ್ನು ಆವರಿಸಿಕೊಂಡುಬಿಟ್ಟಿತ್ತು. ಆದರೆ ೧೯೩೦ರ ವೇಳೆಯಲ್ಲಿ ಗೀತೆಯ ಕುರಿತು ಪ್ರತ್ಯೇಕತಾವಾದಿಗಳಿಂದ ಅಕ್ಷೇಪಣೆ ಕೇಳಿ ಬಂತು. ಇಲ್ಲಿ ವಿರೋಧಕ್ಕೆ ಕಾರಣ ಏನಿತ್ತೆಂದರೆ, ಬಂಕಿಮರು ಈ ಗೀತೆಯನ್ನು ಸೇರಿಸಿಕೊಂಡಿದ್ದ ಕೃತಿ `ಆನಂದ ಮಠದಲ್ಲಿ ೧೭೭೧ರ ಕಾಲದ ನವಾಬರನ್ನು ಬಡವಾಗಿ ಚಿತ್ರಿಸಲಾಗಿದೆ ಎಂಬುದಾಗಿತ್ತು. ಗೀತೆಯ ಕೊನೆಯೆರಡು ಚರಣಗಳಲ್ಲಿ ಮಾತೆಯ ವರ್ಣನೆಯಲ್ಲಿ ದೇವತೆ ದುರ್ಗೆಗೆ ಹೋಲಿಕೆಯಾಗಬಹುದಾದ ಕೆಲವು ವಿವರಗಳಿದ್ದವು. ಈ ನಿಟ್ಟಿನಲ್ಲಿ ಇದನ್ನು ರಾಷ್ಟ್ರಗೀತೆ ಅಂತ ಒಪ್ಪಿಕೊಳ್ಳುವುದೋ ಬಿಡುವುದೋ ಎಂಬ ಜಿಜ್ಞಾಸೆಗೆ ಬಿದ್ದ ನೆಹರೂ ೧೯೩೭ರಲ್ಲಿ ಠಾಗೋರರಿಗೆ ಪತ್ರ ಬರೆದಾಗ ಗೀತೆಯ ಮೊದಲೆರಡು ಪ್ಯಾರಾಗಳನ್ನು ಒಪ್ಪಿಕೊಂಡು ಹಾಡಬೇಕು ಎಂಬ ಉತ್ತರ ಸಿಕ್ಕಿತು.

ಆದಾದ ನಂತರ ಕಾಂಗ್ರೆಸ್ ಸಭೆಗಳಲ್ಲಿ ಮೊದಲಿನ ಎರಡು ಚರಣಗಳನ್ನು ಮಾತ್ರ ಹಾಡಲಾಗುತ್ತಿತ್ತು. ಆದರೆ ಅದೂ ಕೂಡ ಜಿನ್ನಾರಂತರವರಿಗೆ ಸರಿ ಕಂಡಿರಲಿಲ್ಲ. ಹಾಗಾಗಿ ವಂದೇ ಮಾತರಂ ಹಾಡಬಾರದೆಂದು ಕೊಂಡವರು ಹಾಗೆಯೇ ಇರಬಹುದೆಂಬ ಉದಾರತೆ ತೋರಿಸಲಾಯಿತು.

ಸ್ವಾತಂತ್ರ್ಯಾ ನಂತರ ಕಾರಣಾಂತರಗಳಿಂದ ವಂದೇ ಮಾತರಂಗೆ ರಾಷ್ಟ್ರಗೀತೆ ಪಟ್ಟ ತಪ್ಪಿತು. ಆದರೆ ಅವತ್ತು ೧೯೫೦ ಜನವರಿ ೨೪ ರಂದು ಕಾನ್‌ಸ್ಟಿಟ್ಯೂಯೆಂಟ್ ಅಸೆಂಬ್ಲಿಯಲ್ಲಿ ತೆಗೆದುಕೊಂಡ ನಿರ್ಣಯ ಗಮನಾರ್ಹವಾದದ್ದು. ರಾಷ್ಟ್ರಗೀತೆ ಸ್ಥಾನದಲ್ಲಿ ಜನಗಣಮನ ಇದ್ದರೂ ವಂದೇ ಮಾತರಂ ಗೂ ಅಂತಹದೇ ಸ್ಥಾನ ನೀಡಿ ಅದನ್ನು ರಾಷ್ಟ್ರೀಯ ಹಾಡನ್ನಾಗಿ ಸ್ವೀಕರಿಸಲಾಯಿತು. ಅದನ್ನು ಎಲ್ಲರೂ ಸ್ವಾಗತಿಸಿದ್ದರು. ಈಗ ವಂದೇ ಮಾತರಂ ನೂರರ ಹೊಸ್ತಿಲಲ್ಲಿ ಇರುವಾಗ ಅನಗತ್ಯ ವಿವಾದ ಶುರುವಾಗಿದೆ. ಕಾರಣ ಮತ್ತೊಮ್ಮೆ ವಂದೇ ಮಾತರಂ ಹಾಡುವುದನ್ನು ಮುಸ್ಲಿಂ ಸಂಘಟನೆ `ಜಮಾತೆ ಇಸ್ಲಾಮಿ ವಿರೋಧಿಸಿದೆ. ಬ್ರಿಟಿಷರು ನಿಷೇಧಿಸಿದ ಹಾಡನ್ನು ಮುಸ್ಲಿಮರೂ ನಿಷೇಧಿಸಿದ್ದಾರೆ ಎನ್ನುವುದು ಅಚ್ಚರಿಯ ವಿಷಯ. ಆದರೆ ಯಾಕೆ ನಿಷೇಧ...ಎನ್ನುವುದಕ್ಕೆ ಸರಿಯಾದ ಕಾರಣಗಳಿಲ್ಲವಾದರೂ ದೆಹಲಿಯ ಜಮಾ ಮಸೀದಿಯ ಶಾಹಿ ಇಮಾಮ್, ವಂದೇ ಮಾತರಂ ಹಾಡು ಇಸ್ಲಾಮಿಕ್ ನಂಬಿಕೆಗಳಿಗೆ ವಿರುದ್ಧವಾದುದಾಗಿದೆ. ಮುಸ್ಲಿಮರಿಗೆ ಈ ಹಾಡನ್ನು ಹಾಡುವಂತೆ ಒತ್ತಾಯಿಸುವುದು ಆತನನ್ನು ಮುಸ್ಲಿಂ ಸಮುದಾಯದಿಂದ ಅಮಾನತುಗೊಳಿಸಿದಂತೆ ಎನ್ನುತ್ತಾರೆ.

ಆದರೆ ಎಲ್ಲ ಮುಸ್ಲಿಮರು ಇದನ್ನು ಒಪ್ಪುವುದಿಲ್ಲ. ವಂದೇ ಮಾತರಂ ಹಾಡುವುದರಲ್ಲಿ ತಪ್ಪಿಲ್ಲ ಎನ್ನುವ ಗಣ್ಯ ಮುಸ್ಲಿಮರೂ ಇದ್ದಾರೆ. ಅವರನ್ನು ಉಲ್ಲೇಖಿಸುವುದಾದರೆ:

ಭಕ್ತಿ ಗೀತೆಗಳನ್ನು, ಶ್ಲೋಕಗಳನ್ನು ಶಹನಾಯಿ ನಾದದ ಮೂಲಕ ಪಸರಿಸಿದ ಬಿಸ್ಮಿಲ್ಲಾ ಖಾನ್
ವಂದೇ ಮಾತರಂನ್ನು ಗೌರವಿಸುವ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ
ವಂದೇ ಮಾತರಂಗೆ ಸಂಗೀತ ನೀಡಿ ಫ್ಯಾಶನ್ ಲೋಕಕ್ಕೆ ಈ ಗೀತೆಯನ್ನು ಪರಿಚಯಿಸಿದ ಎ. ಆರ್. ರೆಹಮಾನ್
ಮೌಲಾನಾ ಅಬ್ದುಲ್ ಕಲಾಂ ಅಜಾದ್‌ರ ಸಂಬಂಧಿ ಶಿಕ್ಷಣ ತಜ್ಞ ಫೀರೋಜ್ ಭಕ್ತ್ ಅಹ್ಮದ್ (ಜನಗಣಮನದ ಸ್ಥಾನದಲ್ಲಿರಬೇಕಾದ್ದು ವಂದೇಮಾತರಂ ಹಾಡು. ಮುಸ್ಲಿಂನಾಗಿ ನಾನು ಈ ಸಂದೇಶವನ್ನು ಇಡೀ ಮುಸ್ಲಿಂ ಸಮುದಾಯಕ್ಕೆ ಮತ್ತು ನನ್ನ ದೇಶ ಬಾಂಧವರಿಗೆ ತಿಳಿಸಲು ಇಚ್ಛಿಸುತ್ತೇನೆ)
ವಂದೇ ಮಾತರಂ ಹಾಡುವುದು ದೇಶಭಕ್ತಿಗೆ ಪ್ರಮಾಣಪತ್ರವಲ್ಲ. ಆದರೆ ಅದನ್ನು ವಿರೋಧಿಸುವುದು ಪ್ರತ್ಯೇಕವಾದದ ಸಂಕೇತ ಎನ್ನುವ ಮುಕ್ತಾರ್ ಅಬ್ಬಾಸ್ ನಖ್ವಿ.

Anonymous said...

ವಂದೇ ಮಾತರಂ...ಗೆ ರಾಷ್ಟ್ರಗೀತೆ ರೂಪದಲ್ಲಿ ಮಾನ್ಯತೆ ದೊರೆತು ನೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸಮಾರೋಪ ಸಮಾರಂಭದ ನಿಮಿತ್ತ ಸೆಪ್ಟೆಂಬರ್ ೭ ರಂದು ದೇಶದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಸಾಮೂಹಿಕವಾಗಿ
ವಂದೇ ಮಾತರಂ ಹಾಡುವ ಕುರಿತು ಕೇಂದ್ರ ಸರಕಾರ ಹೊರಡಿಸಿರುವ ಆದೇಶದ ವಿರುದ್ಧ ಕೆಲವು ಪ್ರತ್ಯೇಕತಾವಾದಿ ಮುಸ್ಲಿಮರು ವಿವಾದ ಸೃಷ್ಟಿಸಿದ್ದಾರೆ. ಈ ಗೀತೆ ಇಸ್ಲಾಂ ವಿರೋಧಿ ಎಂದು ಇವರು ಹೇಳುತ್ತಿದ್ದಾರೆ.

ಪ್ರತ್ಯೇಕತಾವಾದಿಗಳ ಗುರಿ ೧೯೦೫ರಲ್ಲಿ ಬೇರೆ ಇತ್ತು. ಮತ್ತು ಈಗ ಸಹ ಬೇರೆ ಇದೆ ಎಂದು ಕಾಣುತ್ತಿದೆ. ರಾಷ್ಟ್ರೀಯ ಮುಖ್ಯವಾಹಿನಿಯ ವಿರುದ್ಧ ತಮ್ಮ ಯೋಚನೆಗೆ ಮಾನ್ಯತೆ ದೊರಕಿಸಿಕೊಡಬೇಕು ಎಂಬುದಷ್ಟೇ ಇವರ ಉದ್ದೇಶವಿದ್ದಂತಿದೆ. ಹೆಸರೇನೋ ಇಸ್ಲಾಂನದ್ದಾಗಿದೆ. ಆದರೆ ಕೆಲಸವೆಲ್ಲವೂ ರಾಜಕೀಯ ಮತ್ತು ಕುಟಿಲ ನೀತಿಯದ್ದಾಗಿದೆ. ಸ್ವಾತಂತ್ರ್ಯಕ್ಕೆ ಮೊದಲು ಹಾಗೂ ನಂತರ ಇಸ್ಲಾಂ ಹೆಸರಿನಲ್ಲಿ ಸಾಕಷ್ಟು ಫತ್ವಾಗಳನ್ನು ಹೊರಡಿಸಲಾಗಿದೆ. ಈ ಪೈಕಿ ವಂದೇ ಮಾತರಂ ವಿರೋಧ ಸಹ ಇವುಗಳ ಮುಖ್ಯ ಉದ್ದೇಶಗಳ ಪೈಕಿ ಒಂದಾಗಿತ್ತು. ವಂದೇಮಾತರಂ ವಿರೋಧಿಗಳು ಎಬ್ಬಿಸುತ್ತಿರುವ ಈ ಹುಯಿಲಿನಲ್ಲಿ ಎಷ್ಟರ ಮಟ್ಟಿಗೆ ತಥ್ಯವಿದೆ ಎಂಬುದನ್ನು ಅರಿಯಲು ಇದನ್ನು ಇಸ್ಲಾಂ ದೃಷ್ಟಿಕೋನದಿಂದ ಪರಿಶೀಲಿಸುವುದು ಅನಿವಾರ್ಯ ಎಂಬ ಪ್ರಶ್ನೆ ಇಲ್ಲಿ ಏಳುತ್ತದೆ.

ಹಾಗಿಲ್ಲ ಎನ್ನುವುದಾದರೆ ಇಂತಹ ಶಕ್ತಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ಭಯೋತ್ಪಾದನೆಯ ಶಕ್ತಿಯನ್ನು ಹೆಚ್ಚಿಸುವ ಇಂತಹ ಚರ್ಯೆ ಇಡೀ ರಾಷ್ಟ್ರಕ್ಕೆ ಅಪಾಯಕಾರಿ. ಈ ಕುರಿತು ಆಳವಾಗಿ ವಿಚಾರ ಮಾಡುವುದು ಅಗತ್ಯ. ವಂದೇ ಮಾತರಂನ ಪ್ರತಿ ಸಾಲೂ ಭಾರತಮಾತೆಯ ಗುಣಗಾನ ಮಾಡುತ್ತದೆ. ಇದು ಕೇವಲ ವಸುಂಧರೆಯ ವರ್ಣನೆಗೆ ಮಾತ್ರ ಸೀಮಿತವಾಗಿಲ್ಲ. ಆದರೆ ಕವಿ ಜೀವಂತ ದೇವತೆಯ ಪ್ರತಿರೂಪ ಎಂಬಂತೆ ಭಾರತವನ್ನು ವರ್ಣಿಸುತ್ತಿದ್ದಾನೆ. ಅದರ ಶಕ್ತಿ ಏನು ಮತ್ತು ಶತ್ರುಗಳನ್ನು ಸದೆಬಡಿಯವ ಅದರ ತಾಕತ್ತೇನು ಎಂಬುದರ ರೋಚಕ ವಿವರಣೆ ಇಲ್ಲಿದೆ. ವಂದೇ ಮಾತರಂ ಕೇವಲ ಹಾಡಲ್ಲ. ಭಾರತದ ನೈಜತೆಯನ್ನು ಪ್ರತಿಬಿಂಬಿಸುವ ಒಂದು ದಾಖಲೆ. ಭಾರತವನ್ನು ಅರಿಯಬೇಕಾದಲ್ಲಿ ನಿಮ್ಮ ತಾಯಿಯನ್ನು ಅರಿಯಿರಿ ಎಂದು ಬಂಕಿಮ್‌ಚಂದ್ರರು ಆಹ್ವಾನ ನೀಡುತ್ತಿದ್ದಾರೆ.

ಇದರ ಸಂಪೂರ್ಣ ಉದ್ದೇಶ, ಆಕೆಯ ಪುತ್ರ ಪುತ್ರಿಯ ರಲ್ಲಿ ವಿಶ್ವಾಸ ಮೂಡಿಸುವುದಾಗಿದೆ. ದೇಶದ ಶತ್ರುಗಳಿಗೆ ತಾವು ಒಂದು ನಿಗೂಢ ಆಧ್ಯಾತ್ಮಿಕ ಶಕ್ತಿಯನ್ನು ಎದುರಿಸುತ್ತಿದ್ದೇವೆ ಎಂಬ ಅನುಭವ ಮೂಡಿಸುತ್ತದೆ. ತಮ್ಮ ದೇಶದ ನೆಲವನ್ನು ಸ್ವತಂತ್ರಗೊಳಿಸುವುದು ಅಂತಿಮವಾಗಿ ಬಂಕಿಮರ ಉದ್ದೇಶವಾಗಿತ್ತು. ಹೀಗಾಗಿ ದೇಶಕ್ಕಾಗಿ ಸರ್ವಸ್ವ ಅರ್ಪಿಸುವುದು ಇಲ್ಲಿ ಉಸಿರಾಡುವ ಎಲ್ಲರ ಧರ್ಮವಾಗಿದೆ. ಭಾರತದಲ್ಲಿ ಒಂದೇ ಧರ್ಮ, ಜಾತಿ, ನಂಬಿಕೆಯ ವ್ಯಕ್ತಿಗಳಿಲ್ಲ. ಹಾಗಾಗಿ ದೇಶವನ್ನು ಮಾತೆಯಂತೆ ಪೂಜಿಸುವುದು ಹೇಗೆ ಎಂಬ ಪ್ರಶ್ನೆಯನ್ನು ಕೇಳಬಹುದು. ನಿರೀಶ್ವರ ವಾದಿಗಳು ಇದು ನಮ್ಮ ನಂಬಿಕೆ ಮತ್ತು ವಿಚಾರಧಾರೆಗೆ ವಿರುದ್ಧವಾಗಿದೆ ಎಂದು ಹೇಳಬಹುದು. ಆದರೆ ನಿರ್ಗುಣ, ನಿರಾಕಾರ ಭಗವಂತನಲ್ಲಿ ನಂಬಿಕೆ ಇಟ್ಟಿರುವವರೂ ಸಹ ಆತ ಅಪಾರ ಶಕ್ತಿಯ ಒಡೆಯನಾಗಿದ್ದಾನೆ ಎಂದು ನಂಬುತ್ತಾರೆ. ಯಾರದೇ ಗುಣ ಅಥವಾ ಶಕ್ತಿಗೆ ಮನ್ನಣೆ ನೀಡುವುದು ಅಥವಾ ಅದರ ಅನುಭವ ಆಗುವುದು ಎಂದರೆ ನಿರೀಶ್ವರವಾದಿ ಸಿದ್ಧಾಂತವನ್ನು ಅಲ್ಲಗಳೆಯುವುದು ಎಂದಲ್ಲ.

ವಂದೇ ಮಾತರಂ ಕುರಿತು ಎಲ್ಲರಿಗಿಂತ ಹೆಚ್ಚು ವಿರೋಧ ಬೆರಳೆಣಿಕೆಯ ಮುಸ್ಲಿಂ ಬಾಂಧವರಿಗೆ ಮಾತ್ರ ಇದೆ. ಇಲ್ಲಿನ ವರ್ಣನೆ ಯಾವುದೋ ದೇವಿಯ ಸಾಕ್ಷಾತ್ ವರ್ಣನೆಯಂತಿದೆ ಮತ್ತು ಇಲ್ಲಿ ಉಪಯೋಗಿಸಿರುವ ಅಲಂಕಾರಗಳು ಆಕೆಯ
ಪೂಜೆಯೇ ಆಗಿದೆಯಲ್ಲವೇ ಎಂದು ಅವರು ಪ್ರಶ್ನಿಸ ಬಹುದು. ಈ ವಾದವನ್ನು ಆರಂಭಿಸಿದರೆ ವಂದೇ ಮಾತರಂ ಇಸ್ಲಾಂನ ಸಿದ್ಧಾಂತಗಳಿಗೆ ಪೂರಕವಾಗಿಯೇ ಇದೆ ಎನ್ನಬಹುದು. ಇಸ್ಲಾಂನಲ್ಲಿ ತಾಯಿಯನ್ನು ಪೂಜ್ಯ ಎಂದಿಲ್ಲವೇ? ಪೈಗಂಬರ್ ಮೊಹಮ್ಮದ್ ಸಾಹೇಬರ ನುಡಿಯಲ್ಲಿ ತಾಯಿಯ ಕಾಲಿನಡಿ ಸ್ವರ್ಗವಿದೆ ಎಂಬ ಮಾತಿದೆ. ಇಸ್ಲಾಂ ಮೂರ್ತಿಪೂಜೆಗೆ ವಿರುದ್ಧ ಎಂದಾದರೆ ತಾಯಿ ಮತ್ತು ಅವರ ಕಾಲಿನ ಕಲ್ಪನೆ ಚಿತ್ರವೊಂದನ್ನು ನಮ್ಮ ಕಣ್ಣಿನ ಮುಂದೆ ತರುವುದಿಲ್ಲವೇ? ಸ್ವಂತ ತಾಯಿಗಾ
ದರೂ ಶರೀರ ಇದೆ. ಆದರೆ ವಂದೇ ಮಾತರಂನಲ್ಲಿ ವರ್ಣಿಸಿರುವ ತಾಯಿಗೆ ಯಾವುದೇ ಶರೀರವಾಗಲಿ, ಬಣ್ಣ ಅಥವಾ ರೂಪವಾಗಲಿ ಇಲ್ಲ. ಹೀಗಿರುವಾಗ ಇದನ್ನು ದೇವತೆ ರೂಪದಲ್ಲಿ ಪೂಜಿಸುವ ಪ್ರಶ್ನೆ ಎಲ್ಲಿ ಉದ್ಭವಿಸುತ್ತದೆ? ಇಲ್ಲಿ ಕೇವಲ ಅಲಂಕಾರ ಮತ್ತು ವಿಶೇಷಣಗಳಿವೆ. ಇದೇ ಕಾರಣಕ್ಕಾಗಿ ಅದಕ್ಕೆ ಆದರ ಲಭಿಸಿದೆ. ಈ ಆದರವನ್ನು ಪೂಜನೀಯ ಶಬ್ಧಗಳಲ್ಲಿ ಅಭಿವ್ಯಕ್ತ ಗೊಳಿಸಿದರೆ ಅದು ಮೂರ್ತಿ ಪೂಜೆಗೆ ಸಮವೇ ?

ಭಾರತದಲ್ಲಿ ಮೊಗಲರ ಆಡಳಿತ ಇದ್ದಾಗ ಬಾದಶಹಾರನ್ನು. "ಜಿಲ್ಲೆ ಇಲಾಹಿ' ಎಂದು ಕರೆಯಲಾಗುತ್ತಿತ್ತು. (ಉದಾ: ಮುಗಲ್ ಎ ಅಜಂ ಚಿತ್ರ) ಭಗವಂತನ ದಿವ್ಯ ಪ್ರಕಾಶ ಎಂಬುದು ಇದರರ್ಥ. ಈ ಪದ, ಪ್ರತಿಮೆಯೊಂದರ ಪ್ರಶಂಸೆಯನ್ನು ಹೇಳುವಂತಿಲ್ಲವೇ? ಇಲ್ಲಂತೂ ಸಾಕ್ಷಾತ್ ಮೂಳೆ-ಮಾಂಸದಿಂದ ನಿರ್ಮಾಣಗೊಂಡ ಮನುಷ್ಯನಿಗಾಗಿ ಈ ಪದವನ್ನು ಉಪಯೋಗಿಸಲಾಗಿದೆ. ಮತ್ತೊಂದು ಅರ್ಥದಲ್ಲಿ ಹೇಳಬೇಕೆಂದರೆ ಈ ಪದದ ಮೂಲಕ ನೀವು ಒಂದು ಕಲ್ಲು ಅಥವಾ ದೇಶವನ್ನಲ್ಲ ಆದರೆ ಮನುಷ್ಯನೊಬ್ಬನನ್ನು ದೇವರೆಂದು ಮಾನ್ಯ ಮಾಡುತ್ತಿರುವಿರಿ ಅಲ್ಲವೇ? ಈ ತರ್ಕದ ಹಿನ್ನೆಲೆಯಲ್ಲಿ ನೋಡಿದರೆ ಇಸ್ಲಾಂ ಬಂಧುಗಳಿಗೆ ವಂದೇ ಮಾತರಂ ಪದಕ್ಕಿಂತ "ಜಿಲ್ಲೆ ಇಲಾಹಿ' ಹೆಚ್ಚು ಆಕ್ಷೇಪಾರ್ಹ ಆಗಬೇಕಲ್ಲವೇ? ಒಂದೊಮ್ಮೆ ಇದನ್ನು
ವಿಶೇಷಣ ಎಂದು ಅವರು ಹೇಳುವುದಾದರೆ ಭಾರತದ ವರ್ಣನೆಯ ವಿಶೇಷಣಗಳ ಬಗ್ಗೆ ಅವರಿಗೆ ಯಾವುದೇ ಹಿಂಜರಿಕೆ ಇರಬಾ ರದು ತಾನೇ? ವ್ಯಕ್ತಿಯ ಮುಖದಲ್ಲಿ ದೈವತ್ವದ ಪ್ರಕಾಶ ಇರ ಬಹುದಾದರೆ, ಶತ್ರುಗಳ ಸಂಹಾರ ಮಾಡುವ ಸಾಮರ್ಥ್ಯ ಹೊಂದಿರುವ ಮಾತೆಯನ್ನು ಸಹಸ್ರ ಬಾಹುಗಳನ್ನು ಹೊಂದಿರುವ ವಳು ಎಂದು ಪ್ರಶಂಸೆ ಮಾಡಬಹುದು ತಾನೇ? ಇಸ್ಲಾಂ ತನ್ನ ಧ್ವಜದಲ್ಲಿ ಚಂದ್ರ ಮತ್ತು ತಾರೆಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತದೆ. ಈ ಧ್ವಜಕ್ಕೆ ವಂದನೆ ಸಲ್ಲಿಸಲಾಗುತ್ತದೆ. ಅದಕ್ಕೆ ರಾಷ್ಟ್ರೀಯ ಗೌರವ ನೀಡಲಾಗುತ್ತದೆ. ಧ್ವಜಕ್ಕೆ ಅಪಮಾನ ಮಾಡಿದವರನ್ನು ಶಿಕ್ಷಿಸಲಾಗುತ್ತದೆ. ಹಸಿರು ಬಣ್ಣ ಮತ್ತು ಚಂದ್ರತಾರೆಯರು ಈ ಬ್ರಹ್ಮಾಂಡದ ಅಂಗ ತಾನೇ? ಧ್ವಜಕ್ಕೆ ಪ್ರಣಾಮ ಸಲ್ಲುತ್ತದೆಯಾದರೆ ಭೂತಾಯಿಗೆ ಯಾಕಾಗಬಾರದು? ಆಕಾಶದ
ವಸ್ತುಗಳು ವಂದನೆಗೆ ಅರ್ಹ ಎಂದಾದಲ್ಲಿ ಭೂಮಿಯ ಮೇಲಿನ ಇತರ ವಸ್ತುಗಳು ಪೂಜನೀಯ ಎಂದು ಒಪ್ಪಲು ಹಿಂಜರಿಕೆ ಏಕೆ? ಭಾರತೀಯ ಸಂದರ್ಭದಲ್ಲಿ ಭಕ್ತಿ ಪ್ರದರ್ಶನವೆಂದರೆ ಪೂಜೆ ಎಂದಾಗುತ್ತದೆ. ಪೂಜೆ (ಇಬಾದತ್)ಪ್ರಾರ್ಥನೆಯ
ಸಮಾ ನಾರ್ಥಕ ಪದವಾಗಿದ್ದು ಇದನ್ನು ಒಪ್ಪಲೇಬೇಕಾಗುತ್ತದೆ. ಬಂಗಾಳಿ ಭಾಷೆಯ ಅನೇಕ ಮುಸ್ಲಿಂ ಕವಿ ಹಾಗೂ ಸಾಹಿತಿಗಳು ಮಾನವನ ವಿಷಯದಲ್ಲಿ ವಂದನಾ ಎಂಬ ಪದವನ್ನು ಬಳಸಿದ್ದಾರೆ. ಯಾವೊಬ್ಬ ಬಂಗಾಳಿ ಮುಸ್ಲಿಂಗೂ ವಂದನಾ ಪದ
ಎಂದರೆ ಅಲರ್ಜಿ ಇಲ್ಲ. ಆದರೆ ಅದನ್ನು ಅರಬ್ಬಿ ಮಾಧ್ಯಮದ ಮೂಲಕ ಪ್ರಯೋಗಿಸಿದರೆ ಖಂಡಿತಾ ಮುಸಲ್ಮಾನರು ಆಕ್ಷೇಪಣೆ ಎತ್ತುತ್ತಾರೆ. ಏಕೆಂದರೆ ಸಮಯ, ಕಾಲ ಮತ್ತು ದೇಶಾನುಸಾರ ಪ್ರತಿ ಸ್ಥಳದಲ್ಲೂ ತಮ್ಮದೇ ಆದ ಪದಗಳಿರುತ್ತವೆ ಮತ್ತು ಅವನ್ನು ತಮ್ಮದೇ ಆದ ರೀತಿಯಲ್ಲಿ ಬಳಸಲಾಗುತ್ತದೆ. ಪ್ರಸಿದ್ಧ ಬಂಗಾಳಿ ವಿದ್ವಾನ್ ಮೌಲಾನಾ ಅಕ್ರಂ ಖಾನ್ ಸಾಹೇಬರ ಮುಖ್ಯ ಕೃತಿ "ಮೊಸ್ತಪಾಚರಿತ'ದಲ್ಲಿ ಪುಟ ೧೫೭೫ರಲ್ಲಿ ಅರಬ್ ದೇಶದ ಭೌಗೋಳಿಕ ವಿವರಣೆ ಇದ್ದು ಅದರಲ್ಲಿ ಅವರು ಹೀಗೆ ಬರೆಯುತ್ತಾರೆ. "ಧರಿಯಾಚೆ ವಕ್ಷೆ ಮಾಗೊ, ಕಾರ್ ಪದಲೇಖಾ, ಹೇ ಅರಬ್ ಮಾನವೇರ್ ಆದಿ ಮಾತೃಭೂಮಿ...ಅಂದರೆ ಕವಿ ಇಲ್ಲಿ ಅರಬ್ ದೇಶವನ್ನು ತಾಯಿ ಎಂದು ಸಂಬೋಧಿಸಿದ್ದಾರೆ.

ದೇಶವನ್ನು ನಾವು ತಾಯಿ ಎಂದರೆ ಅದನ್ನು ರೂಪಕ ಅರ್ಥದಲ್ಲಿ ಹೇಳುತ್ತೇವೆ. ದೇಶವನ್ನು ತಾಯಿಯ ರೂಪದಲ್ಲಿ ಸಂಬೋಧಿಸುವುದರ ಮೂಲ ಉದ್ದೇಶ ಇದೇ ಆಗಿದೆ. ಇಲ್ಲಿ ನಾವು ದೇಶವನ್ನು ಖುದಾ(ದೇವರು) ಎಂದು ಹೇಳುತ್ತಿಲ್ಲ. ನಾವು ತಾಯಿಯನ್ನು ತಾಯಿ ಎಂದು ಕರೆಯುವಲ್ಲಿ ಯಾವುದೇ ದೋಷ ಇಲ್ಲ ಎಂದಾದರೆ ದೇಶವನ್ನು ರೂಪಕ ಭಾವದಲ್ಲಿ ತಾಯಿ ಎಂದು ಸಂಬೋಧಿಸುವಲ್ಲಿ ಸಹ ಯಾವುದೇ ದೋಷ ಇರಲು ಸಾಧ್ಯವಿಲ್ಲ.

ದೇಶಭಕ್ತಿ, ದೇಶ-ಪೂಜೆ, ದೇಶ ವಂದನೆ, ದೇಶ-ಮಾತೃಕೆ, ಒಂದೇ ಪ್ರಕಾರದ ವಿಭಿನ್ನ ಪದಗಳಾಗಿದ್ದು ಇಸ್ಲಾಂನ ದೃಷ್ಟಿಯಿಂದ ಸಂಪೂರ್ಣ ಗೌರವಾನ್ವಿತವಾಗಿವೆ. ಹಾಗಾಗಿ ವಂದೇ ಮಾತರಂ ಹಾಡುವುದು ಒಂದೇ ಧರ್ಮಕ್ಕೆ ಸೀಮಿತ ಅಲ್ಲ ಮತ್ತು ಅದು ಇಸ್ಲಾಂ ವಿರೋಧಿಯೂ ಅಲ್ಲ.

ದೇಶವನ್ನು ತಾಯಿ ರೂಪದಲ್ಲಿ ಸಂಬೋಧಿಸುವ ಪದ್ಧತಿ ಅರಬ್ ಮತ್ತು ಪಾರ್ಸಿಯಲ್ಲಿ ಹಿಂದಿನಿಂದಲೂ ನಡೆದು ಬಂದಿದೆ. ಉಮ್ಮುಲ್ ಕೋಶ(ಬಾಮ್ಯ ಜನನಿ), ಉಮ್ಮುಲ್ ಮೂಮಿನಿನ್ (ಮುಮಿಮೋಗಳ ಜನನಿ)ಉಮ್ಮುಲ್ ಕಿತಾಬ್(ಪುಸ್ತಕಗಳ
ಜನನಿ) ಇವೆಲ್ಲವೂ ತಾಯಿ ರೂಪದಲ್ಲಿ ಇರುವುದಾದರೆ ವಂದೇ ಮಾತರಂ ಪದಕ್ಕೆ ವಿರೋಧ ವ್ಯಕ್ತಪಡಿಸುವುದು ಎಷ್ಟು ಹಾಸ್ಯಾಸ್ಪದ ಅಲ್ಲವೇ?

ದೇಶದ ವರ್ಣನೆ ಇರುವ ಕಾರಣಕ್ಕಾಗಿ ವಂದೇ ಮಾತರಂ ಆಕ್ಷೇಪಾರ್ಹ ಎನ್ನುವುದಾದರೆ ಅರಬರ ರಾಷ್ಟ್ರಗೀತೆಯಲ್ಲಿ ಅರಬ್ ಖಂಡದ ಅನೇಕ ಭೂಭಾಗಗಳ ವರ್ಣನೆ ಇದೆಯ ಲ್ಲವೇ? ಉಜ್ಬೆಕಿಸ್ತಾನ ಅಥವಾ ಕಿರ್ಗಿಸ್ತಾನವಿರಲಿ, ಎಲ್ಲ ಕಡೆ
ಯಲ್ಲೂ ಅವರ ರಾಷ್ಟ್ರಗೀತೆಯಲ್ಲಿ ಅಲ್ಲಿನ ಪಶುಪಕ್ಷಿಗಳ, ನದಿ ಬೆಟ್ಟಗಳ ಸುಂದರ ವರ್ಣನೆ ಕಾಣಸಿಗುತ್ತದೆ. ಹಿಂದೂಗಳು ಗೋವುಗಳನ್ನು ಆಪ್ಯಾಯತೆಯಿಂದ ನೋಡುವಂತೆ ಯೆಮನ್ ದೇಶದ ಜನ ತಮ್ಮ ಹೇಸರಗತ್ತೆಗಳನ್ನು ಪ್ರೀತಿಸುತ್ತಾರೆ. ಹೇಸರಗತ್ತೆ
ನಮ್ಮ ಜೀವನದ ರೇಖೆ ಎಂದು ಅಲ್ಲಿನ ರಾಷ್ಟ್ರಗೀತೆಯಲ್ಲಿ ಹೇಳಲಾಗಿದೆ. ನಂಗಾ ಪರ್ಬತ್ ಬಹು ದೂರದವರೆಗೂ ಹರಡಿದ್ದು ಅನೇಕ ಕಡೆ ನೀರಿನ ಝರಿಗಳು ಮಾತೆಯ ಸ್ತನಗಳಿಂದ ಮಮತೆಯ ಕ್ಷೀರಧಾರೆಯಂತೆ ಕವಲೊಡೆಯುವುದನ್ನು ನೋಡ
ಬಹುದು. ಈಜಿಪ್ಟ್ ರಾಷ್ಟ್ರಗೀತೆಯಲ್ಲಂತೂ ಕೆಂಪು ಸಾಗರ, ಭೂಮಧ್ಯ ಸಾಗರ ಇತ್ಯಾದಿಗಳ ವರ್ಣನೆ ಇದೆ. ನೈಲ್ ನದಿ ಅವರಿಗೆ ಗಂಗೆಯಷ್ಟೇ ಪವಿತ್ರ. ಮರಣದ ನಂತರ ಸ್ವರ್ಗದಲ್ಲೂ ತಮಗೆ ನೈಲ್ ನದಿಯ ನೀರು ಕುಡಿಯಲು ದೊರೆಯಬೇಕೆಂದು
ಅವರು ಬಯಸುತ್ತಾರೆ. ಪಿರಮಿಡ್‌ಗಳನ್ನು ಹೆಮ್ಮೆಯ ಸಂಕೇತ ಮತ್ತು ಪೂರ್ವಿಕರ ಪರಂಪರೆ ಎಂಬಂತೆ ರಾಷ್ಟ್ರಗೀತೆಯಲ್ಲಿ ಸ್ಮರಿಸಲಾಗುತ್ತದೆ.

ಡಾಕ್ಟರ್ ಇಕ್ಬಾಲ್ ತಮ್ಮ "ನಯಾ ಶಿವಾಲಯ್...ನಲ್ಲಿ ಕಲ್ಲಿನಲ್ಲಿ ಕೆತ್ತಿದ ಮೂರ್ತಿಯಲ್ಲಿ ಮಾತ್ರವಲ್ಲ , ಭಾರತದ ಮಣ್ಣಿನ ಎಲ್ಲ ಕಣಕಣದಲ್ಲೂ ದೇವರೇ ಕಾಣುತ್ತಾನೆ ಎಂದು ಬರೆದಿದ್ದಾರೆ. ಭಾರತವನ್ನು ದೇವರು ಎಂದು ಹೇಳುವ ಮೂಲಕ ಇಕ್ಬಾಲ್
ಇಸ್ಲಾಂ ವಿರೋಧಿ ಭಾವನೆ ವ್ಯಕ್ತಪಡಿಸಿದ್ದಾರೆ ಎಂದು ವಂದೇ ಮಾತರಂ ವಿರೋಧಿಗಳು ಹೇಳುತ್ತಾರೆಯೇ? ವಂದೇ ಮಾತರಂ ನಲ್ಲಿ ಪ್ರತಿ ವಸ್ತುವಿನ ಪ್ರಶಂಸೆ ಇದ್ದು, ಇದು, ಈ ಗೀತೆಯ ಆತ್ಮವೂ ಆಗಿದೆ. ಪಾಕಿಸ್ತಾನದ ಜನಕ ಮೊಹಮ್ಮದ್ ಅಲಿ ಜಿನ್ನಾ
ಲಾಹೋರಿನ ಆಗಿನ ಪ್ರಸಿದ್ಧ ಕವಿ ಜಗನ್ನಾಥ್ ಪ್ರಸಾದ್ ಆಜಾದ್ ಮೂಲಕ ಮೊದಲ ರಾಷ್ಟ್ರಗೀತೆ ಬರೆಸಿದ್ದರು. ಒಂದೂವರೆ ವರ್ಷದ ನಂತರ ಲಿಯಾಕತ್ ಅದನ್ನು ಬದಲಾಯಿಸಿದರು. ಪಾಕಿಸ್ತಾನದಲ್ಲಿ ರಾಷ್ಟ್ರಗೀತೆ ಮೂರು ಬಾರಿ ಬದಲಾವಣೆಗೊಂಡಿದೆ.
ಜಗತ್ತಿನ ಪ್ರತಿ ರಾಷ್ಟ್ರದ ಜನತೆ ತಮ್ಮ ದೇಶದ ಬಗ್ಗೆ ಹೆಮ್ಮೆ ಹಾಗೂ ವಿಶ್ವಾಸ ಹೊಂದಿರುವಾಗ ಭಾರತದ ಕೋಟಿ ಕೋಟಿ ಜನತೆ ತಮ್ಮ ಕಲರವ ನಿನಾದದ ಮೂಲಕ ವಂದೇ ಮಾತರಂ ಅನ್ನು ತಮ್ಮ ಹೃದಯದ ಮಿಡಿತವಾಗಿರಿಸಿದರೆ ಅದರಲ್ಲಿ ಆಶ್ಚರ್ಯದ ಮಾತೇನೂ ಇಲ್ಲ. ಏಕೆಂದರೆ ರಾಷ್ಟ್ರಕ್ಕೆ ವಂದನೆ ಸಲ್ಲಿಸುವುದು ನಮ್ಮ ಧರ್ಮ, ಕರ್ತವ್ಯ ಮತ್ತು ಜೀವನದ ಮರ್ಮವೂ ಹೌದು.

-ಮುಜಫ್ಫರ್ ಹುಸೇನ್