Thursday, August 03, 2006

ಇಂಡಿಯಾ, ನಿನ್ನನ್ನು ಆಳಲು ಒಬ್ಬ ಶುದ್ಧ ಇಂಡಿಯನ್ ಇಲ್ಲವಾ ?

ರವಿ ಬೆಳಗೆರೆ
ರವಿ ಬೆಳಗೆರೆ


ಇನ್ನು ಮೇಲೆ ಜಗತ್ತಿನ ಯಾವುದೇ ದೇಶದ ಯಾವುದೇ ಪತ್ರಿಕೆ ಸುದ್ದಿ ಬರೆದರೂ, `ಇಟಲಿ ಮೂಲದ ಭಾರತದ ಪ್ರಧಾನಿ ಸೋನಿಯಾಗಾಂ ಏನೆಂದರೆಂದರೆ... ' ಅಂತಲೇ ಬರೆಯುತ್ತದೆ.

ಇತಿಹಾಸ ರಿಪೀಟಾಗಿದೆ. ಭಾರತ ಇನ್ನೊಂದು ಸಲ ವಿದೇಶದವರ ಆಳ್ವಿಕೆಗೆ ಒಳಪಟ್ಟಿದೆ. ನೂರು ಕೋಟಿ ಜನರಿರುವ ದೇಶಕ್ಕೆ ಒಬ್ಬೇ ಒಬ್ಬ ಭಾರತೀಯ ಪ್ರಧಾನಿಯನ್ನು ಹುಡುಕಲಾಗಲಿಲ್ಲ. ಇದಲ್ಲವೇ ದುರಂತ? ಇದು ನಾಚಿಕೆಗೇಡು. ವಂದೇ ಮಾತ ರೋಮ್!' ಅಂತ ಬಿಜೆಪಿಯವರು ಒಬ್ಬರಾದ ಮೇಲೊಬ್ಬರಂತೆ ಮೊಬೈಲುಗಳಿಗೆ ಮೆಸೇಜು ಕಳಿಸಿ ನಿಡುಸುಯ್ಯುತ್ತಿದ್ದಾರೆ. ಮತ್ತೆ ನೆಹರೂ ಕುಟುಂಬದ ಕೂಸು ಕೆಂಪುಕೋಟೆಯ ಬುರುಜಿನ ಮೇಲೆ ನಿಂತು ಆಗಸ್ಟ್ ಪಂದ್ರಾದ ಪತಾಕೆ ಹಾರಿಸುವ ಕಾಲ ಬಂದಿದೆ.

ಇಲ್ಲಿ ಎಸ್ಸೆಂ ಕೃಷ್ಣ, ಪಕ್ಕದಲ್ಲಿ ನಾಯುಡು ಕೆತ್ತಾ ಪತ್ತಾ ಒದೆ ತಿಂದಿದ್ದಾರೆ. ಕೃಷ್ಣ ಒಬ್ಬರೇ ಅಲ್ಲ: ಅವರೊಂದಿಗೆ ಅನೈತಿಕ ಸಂಧಾನಗಳನ್ನು ಮಾಡಿಕೊಂಡ ಮಾದೇಗೌಡ, ರೈತ ಸಂಘದ ಪುಟ್ಟಣ್ಣನಯ್ಯನಂಥವರು ಕೂಡಾ ತಪರಾಕಿ ತಿಂದಿದ್ದಾರೆ. ಮೋಟಮ್ಮ, ಸಗೀರ್, ವಿಶ್ವನಾಥ್, ಮಲಕರೆಡ್ಡಿ ಮುಂತಾದ ಸಜ್ಜನ ಮಂತ್ರಿಗಳನ್ನು ಸೋಲಿಸಿದ ಕೈಯಲ್ಲೇ ಜಯಚಂದ್ರ, ದಿವಾಕರ ಬಾಬು, ಬೆಂಕಿ ಮಹದೇವ, ಚಂದ್ರೇಗೌಡ, ಉಸ್ತಾದ್, ರಮನಾಥ ರೈ, ಚಿಂಚನಸೂರ, ಶ್ರಿಕಂಠಯ್ಯ, ಕಮರುಲ್ಲ ಇಸ್ಲಾಂರಂತಹದ ನೀಚ ಮಂತ್ರಿಗಳನ್ನೂ ಮತದಾರ ಕೆನ್ನೆಗೆ ಬಾರಿಸಿ ಮನೆಗೆ ಕಳಿಸಿದ್ದಾನೆ. ಈ ಸೋಲು, ಅವಮಾನ, ಹೀನಾಯ ಸ್ಥಿತಿಯ ಅಷ್ಟೂ ಜವಾಬ್ದಾರಿ ಕೃಷ್ಣರದು ಮತ್ತು ಅವರ ಮೂರ್ಖತನದ್ದು.

ಎಸ್ಸೆಂ ಕೃಷ್ಣ ಕೆಲವು ಎಚ್ಚರಿಕೆಗಳನ್ನು ಸಾರಾಸಗಟಾಗಿ ignore ಮಾಡಿದರು. ಆರಂಭದಿಂದಲೂ ಅವರು ಜನರ ಕಣ್ಣಿಗೆ ಮಿತ್ರನಾಗಿ ಕಾಣಲಿಲ್ಲ. ಅವರ ಮಿತ್ರರ್‍ಯಾರೂ ಜನಸಾಮಾನ್ಯರ ದೃಷ್ಟಿಯಲ್ಲಿ ಗೌರವವಂತರಾಗಿರಲಿಲ್ಲ. ಪಂಚತಾರಾ ಹೊಟೇಲುಗಳಲ್ಲಿ ಸಣ್ಣ ಪ್ರಾಯದ ಹುಡುಗಿಯರ ಜೀವ ಹಿಸುಕುತ್ತ ಕೂತಿರುತ್ತಿದ್ದ ನಾರಾಯಣ-ಕೃಷ್ಣರ ಅರ್ಧಕಾಲದ ಆಡಳಿತ ನುಂಗಿದರು. ಇನ್ನರ್ಧ ನುಂಗಿದವನು yellow pages ನ ರಾಘವೇಂದ್ರ ಶಾಸ್ತ್ರಿ . ಅವನೇನು ರಾಜಕಾರಣಿಯೇ? ಅಕಾರಿಯೇ? ಆಡಳಿತ ಬಲ್ಲವನೇ? ಬುದ್ಧಿಜೀವಿಯೇ? ಇದ್ಯಾವುದೂ ಅಲ್ಲ. ಅಂಥವನನ್ನು ಸದಾ ಬೆನ್ನಿಗೆ ಶನಿಯನ್ನು ಕಟ್ಟಿಕೊಂಡಂತೆ ಕಟ್ಟಿಕೊಂಡು ತಿರುಗಿದ ಕೃಷ್ಣರಿಗೆ ತಾವು ಆಳುವ ಜನರ ಮನಸ್ಸೇನು ಎಂಬುದೂ ಕಡೆಗೂ ಗೊತ್ತಾಗಲಿಲ್ಲ. ಆತ ಒಬ್ಬೇ ಒಬ್ಬ ರೈತನನ್ನು ಹತ್ತಿರಕ್ಕೆಳೆದು ತಬ್ಬಿಕೊಳ್ಳಲಿಲ್ಲ. ಕೈ ಕುಲುಕಲಿಲ್ಲ, ಒಬ್ಬ ಊರಾಚಿನ ಅಸ್ಪ್ರಶ್ಯನ ಮನೆಯಲ್ಲಿ ನೀರುಕೇಳಿ ಕುಡಿಯಲಿಲ್ಲ.

ಎಸ್ಸೆ ಂ ಕೃಷ್ಣ ಮತ್ತು ನಾಯುಡು ಬೀಗತನ ಮಾಡಿದ್ದೇ ಐ.ಟಿ.-ಬಿ.ಟಿ.ಯವರೊಂದಿಗೆ. ಈ ನೆಲದ ರೈತ ಸಗಾಟಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ. ಅವರೆಡೆಗೆ ತಿರುಗಿ ಕೂಡಾ ನೋಡದ ಕೃಷ್ಣ ಜಿಲ್ಲಾಕಾರಿಗಳೊಂದಿಗೆ ವಿಡಿಯೋ ಕಾನರೆನ್ಸಿಂಗ್ ಮಾಡಿಕೊಂಡು ಕೂತರು. ಅವರ ಮೇಲೆ ರೈತರಿಗಿದ್ದ ವಿಶ್ವಾಸ ಎಕ್ಕುಟ್ಟಿ ಹೋಯಿತು. ಇಂಗ್ಲೀಷ್ ಪತ್ರಿಕೆಗಳವರು, ಟೀವಿ ಛಾನಲ್ಲುಗಳವರು ಕೈತುಂಬ ಸೈಟು ಪಡೆದು ಕೃಷ್ಣರನ್ನು ಬೆಸ್ಟು ಚೀಫ್ ಮಿನಿಸ್ಟರು ಅಂತ ಹೊಗಳಿ ಮರ್ಯಾದೆ ಕಳೆದು ಕೊಂಡರೇ ಹೊರತು ಅದನ್ನು ಮತದಾರ ನಯಾ ಪೈಸೆಯಸ್ಟು ವಿಶ್ವಾಸದಿಂದ ನೋಡಲಿಲ್ಲ, ಓದಲಿಲ್ಲ. ಪ್ರತೀ ವಾರ ಒಂದಲ್ಲ ಒಂದು ರೀತಿಯಲ್ಲಿ ಕೃಷ್ಣರನ್ನು ಎಚ್ಟರಿಸಿ, ಅವರ ಸುತ್ತಲಿನ ಭ್ರಷ್ಟರ ಬಗ್ಗೆ ವಿವರ ನೀಡಿ ಇಂಥವರನ್ನು ದೂರವಿಡಿ ಅಂತ ಬರೆಯಿತು `ಪತ್ರಿಕೆ'. ಆದರೆ ಎಸ್ಸೆಂ ಕೃಷ್ಣ ಪರಿಮಳ ನಾಗಪ್ಪನವರ ಮನೆಬಾಗಿಲಲ್ಲಿ ನಿಂತು ಅದನ್ಯಾಕೆ ಓದ್ತೀರಿ? ಪುಂಡ ಪೋಕುರಿಗಳ ಪತ್ರಿಕೆಯನ್ನ? ಅಂದರು. ಅದೇ ಪರಿಮಳ ನಾಗಪ್ಪ ಇವತ್ತು ಕೃಷ್ಣರ ಪುಂಡು ಪೋಕರಿ ಶಿಷ್ಯರ ಮುಖಕ್ಕೆ ಎಕ್ಕಡದಲ್ಲಿ ಹೊಡೆದಂತೆ ಗೆದ್ದಿದ್ದಾರೆ. ಶುದ್ಧ ಅರ್ಬನ್ ಮತದಾರರನ್ನು ಓಲೈಸಿಕೊಂಡೇ ನಾಲ್ಕೂವರೆ ವರ್ಷ ಕಳೆದ ಕೃಷ್ಣ ಚಾಮರಾಜಪೇಟೆಯಲ್ಲಿ ಪಡೆದ ಓಟುಗಳಾದರೂ ಎಷ್ಟು? ಒಬ್ಬ ಬೆಸ್ಟು ಚೀಫ್ ಮಿನಿಸ್ಟರು ಪಡೆಯಬೇಕಾದ ಲೀಡಾ ಅದು?

ಇನ್ನು ರಾಜ್ಯದ ರಾಜಕಾರಣದಲ್ಲಿ ಕೃಷ್ಣರಿಗೆ ಕವಡೆ ಕಾಸಿನ ಕಿಮ್ಮತ್ತೂ ಉಳಿದಿಲ್ಲ. ಅವರು ಸೈಟು ಕೊಟ್ಟು ಬೆನ್ನು ಕೆರೆಸಿಕೊಂಡ ಪತ್ರಕರ್ತರೇ ಕೃಷ್ಣರ ಮನೆ ಕಂಪೌಡಿನ ಬಳಿ ಸುಳಿಯುತ್ತಿಲ್ಲ.

ಆದರೆ ರಾಜ್ಯದ ರಾಜಕೀಯ ಭವಿಷ್ಯ ಅತಂತ್ರಕ್ಕೆ ಬಿದ್ದಂತಾಗಿದೆ. ದೇವೇಗೌಡ ಕಾಂಗ್ರೆಸ್ ಸೇರಿ ಸರಕಾರ ರಚಿಸುತ್ತಾರೆ. ಅಂದರೆ ಬರಲಿರುವ ದಿನಗಳಲ್ಲಿ ರಾಜ್ಯಾದ್ಯಂತ ಕದನ ಕುತೂಹಲ ರಾಗದ ಮ್ಯಾಳವೇ! ದೇವೇಗೌಡರನ್ನು ಖುದ್ದು ಅವರ ಮಕ್ಕಳು ಸಹಿಸಿಕೊಳ್ಳುವುದು ಕಷ್ಟ. ಈಗಾಗಲೇ ಸಿದ್ರಾಮಯ್ಯ ಮುಖ್ಯಮಂತ್ರಿಯಾಗ ಕೂಡದು ಎಂಬ ರಾಗ ಆರಂಭವಾಗಿದೆ. ಮುಂದೆ ಏನನ್ನು ಕಾಣಲಿಕ್ಕಿದೆಯೋ? ಒಂದೇ ಸಂತೋಷವೆಂದರೆ ಮೂರು ಪಕ್ಷಗಳ ಪೈಕಿ ಯಾವ ಪಕ್ಷ ಒಪೋಸಿಷನ್‌ನಲ್ಲಿ ಕುಳಿತರೂ, ರಾಜ್ಯದಲ್ಲಿ ಒಂದು ಪ್ರಬಲ ಮತ್ತು vibrant ಆದ ವಿರೋಧ ಪಕ್ಷವಾಗಿ ವರ್ತಿಸಬೇಕಾಗುತ್ತದೆ. ಕೆಲವರ ಗೆಲುವುಗಳು ನಿಜಕ್ಕೂ ಈ ಸಲದ ಅಸೆಂಬ್ಲಿ ಹಾಲಿಗೆ ಚುರುಕು, ರಂಗು ಮತ್ತು ಕಳೆ ತಂದಿತ್ತಿವೆ. ಶಿರಾದ ಸತ್ಯನಾರಾಯಣ, ರಮೇಶ್ ಕುಮಾರ್, ಕೆ.ಆರ್.ಪೇಟೆ ಕೃಷ್ಣ , ವಾಟಾಳ್ ನಾಗರಾಜ್, ಎವಿ ರಾಮಸ್ವಾಮಿ, ಮಹಿಮಾ ಪಟೇಲ್, ಕುಮಾರ್ ಬಂಗಾರಪ್ಪ ಮುಂತಾದವರ ಗೆಲುವು ನಿಜಕ್ಕೂ ಸ್ವಾಗತಾರ್ಹ. ಆ ಮಟ್ಟಿಗೆ `ಪತ್ರಿಕೆ' ಯಾರ್‍ಯಾರು ಗೆಲ್ಲ ಬೇಕು ಅಂತ ಬಯಸಿತ್ತೋ, ಯಾರ್‍ಯಾರು ಗೆಲ್ಲುತ್ತಾರೆ ಅಂತ ಅಂದುಕೊಂಡಿತ್ತೋ, ಆ ಪಟ್ಟಿಯಲ್ಲಿ ೯೦% ನಷ್ಟು ನಿರೀಕ್ಷೆಗಳು ನಿಜವಾಗಿವೆ. ಕಳೆದ ಎಂಟು ವರ್ಷಗಳಿಂದ ಶತಾಯಗತಾಯ ವಿರೋಸಿಕೊಂಡು ಬಂದಿದ್ದ ಮಾಲಿಕಯ್ಯ ಗುತ್ತೇದಾರ ಮತ್ತು ಸುಭಾಷ್ ಗುತ್ತೇದಾರ ಎಂಬ ಹಂತಕರಿಬ್ಬರೂ ಸೋತು ಸರ್ವನಾಶವಾಗಿದ್ದಾರೆ. ಶಿವರಾಮೇಗೌಡನ ಸೋಲಿದೆಯಲ್ಲ ? ಅದನ್ನೇನು ನಾನು `ಪತ್ರಿಕೆ'ಯ ದಿಗ್ವಿಜಯ ಅಂತ ಭಾವಿಸಿಲ್ಲ. ಒಂದು ಹುಳು ಸೋಲಬೇಕಿತ್ತು ; ಸೋತಿದೆ. ಅದೇ ರೀತಿಯ ಮರ್ಡರಸ್ ರಾಜಕಾರಣಿ ಬಚ್ಚೇಗೌಡ, ಕೆ.ಆರ್.ಪೇಟೆಯ ಚಂದ್ರ ಶೇಖರ, ಕೆರೆಗೋಡು ಶಿವಕುಮಾರ, ಗಾಂ ನಗರದ ಬಾಂಬ್ ನಾಗ, ಸಾಗರದ ಕಾಗೋಡು ತಿಮ್ಮಪ್ಪ ಮುಂತಾದವರು ಸೋತಿದ್ದಾರೆ.

ಹಂಗ್ ಅಸೆಂಬ್ಲಿ ಆಗುತ್ತಿರುವುದು ಬೇಸರದ ಸಂಗತಿಯೇ ಆದರೂ, ಕರ್ನಾಟಕದ ಮಟ್ಟಿಗೆ ಪ್ರಜಾಪ್ರಭುತ್ವವಾದಿ ಮೌಲ್ಯಗಳನ್ನು ಇನ್ನೂ ಒಂದಿಷ್ಟು ಉಳಿಸಿಕೊಂಡು ಬಂದಿರುವ ಜಾತ್ಯತೀತ ಜನತಾದಳ ಈ ಬಾರಿ ಪ್ರಖರಗೊಂಡಿರುವುದು ಸಮಾಧಾನದ ಸಂಗತಿ. ಹಡಗಲಿಯಿಂದ ಪ್ರಕಾಶ್, ಕನಕಪುರದಿಂದ ಸಿಂಧ್ಯಾ, ನಂಜನಗೂಡಿನಿಂದ ಜಯಕುಮಾರ್ ಮುಂತಾದವರು ಗೆದ್ದು ಬಂದಿರುವುದು ಆರೋಗ್ಯವಂತ ಲಕ್ಷಣವೇ. ಒಂದು ಕಡೆಯಿಂದ ಲೆಕ್ಕ ಹಾಕಿ ನೋಡಿದರೆ, ನನಗೆ ವೈಯುಕ್ತಿಕವಾಗಿ ಪರಿಚಯವಿರುವ ಸುಮಾರು ಇಪ್ಪತ್ತು ಶಾಸಕರು ಸಾಲಿಟ್ಟು ಗೆದ್ದು ಬಂದಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಅವರ ಪೈಕಿ ಎಷ್ಟು ಜನ ಶತ್ರುಗಳಾಗುತ್ತಾರೋ? ಆ ಮಾತು ಬೇರೆ. ಆದರೆ ಹೊಸ ಸರಕಾರ , ಹೊಸ ಕಾಂಬಿನೇಷನ್ನು, ಹೊಸ ಮುಖಗಳು ಎಲ್ಲ ಸೇರಿ ಒಂದು ಹೊಸ ವಾತಾವರಣ ಮತ್ತು ಒಂದು ಹೊಸ hope ಸೃಷ್ಟಿಸಿದರೆ ಅದಕ್ಕಿಂತ ಸಂತೋಷ ಇನ್ನೊಂದಿರಲಾರದು. ಬಸವನಗುಡಿಯಿಂದ ಗೆದ್ದು ಬಂದಿರುವ ಚಂದ್ರಶೇಖರ್‌ರಂತಹ ಮಿತ್ರರೂ ಕಾಂಗ್ರೆಸ್‌ನಲ್ಲೇ ಇದ್ದರೂ, ನನ್ನಂಥವರಲ್ಲಿ ಒಂದು ಆಸೆ ಮೂಡಿಸುತ್ತಾರೆ. ಅಷ್ಟರಮಟ್ಟಿಗೆ ಆ ಚುನಾವಣೆಗಳು ತೃಪ್ತಿಕರವೇ.

ಆದರೆ ಪ್ರಧಾನಿಯಾಗಿ ಸೋನಿಯಾ ಗತಿ ಮತ್ತು ಭಾರತದ ಗತಿ ಏನಾಗಲಿದೆಯೋ ಎಂಬ ಕಳವಳಕ್ಕೆ ನಿಮ್ಮಂತೆಯೇ ನಾನೂ ಬಿದ್ದಿದ್ದೇನೆ. ಆಕೆ ವಿದೇಶಿಯಳು ಎಂಬುದು ಸುಲಭಕ್ಕೆ ಮರೆಯುವಂಥ ಮಾತಲ್ಲ. ನಮ್ಮ ಇಂದಿರಮ್ಮನ ಸೊಸೆಯಲ್ವಾ? ಇಷ್ಟು ವರ್ಷ ಇದ್ದ ಮೇಲೆ ನಮ್ಮ ಮನೆಯ ಹೆಣ್ಣು ಮಗಳೇ ಬಿಡು ಅಂತಾ ಅಂದುಕೊಳ್ಳುತ್ತೇವಾದರೂ, ಈ ದೇಶದ ಪ್ರಧಾನಿಯಾಗಿ ಆಕೆ ಇನ್ನೊಂದು ದೇಶದೊಂದಿಗೆ ವ್ಯವಹರಿಸುವಾಗ ಇಡೀ ದೇಶ ಒಂದು ಆತಂಕಕ್ಕೆ, ಅನುಮಾನಕ್ಕೆ ಬೀಳುವುದು ಸಹಜ. ಈ ಹಿಂದೆ ಹೊರಗಿನಿಂದ ಆಪತ್ತುಗಳು ಬಂದಾಗ ನಮ್ಮ ನೆಹರೂ, ನಮ್ಮ ಶಾಸ್ತ್ರೀಜಿ, ನಮ್ಮ ರಾಜೀವ್, ನಮ್ಮ ವಾಜಪೇಯಿ- ಇವರೆಲ್ಲ `ನೋಡ್ಕೋತಾರೆ ಬಿಡು'ಎಂಬಂಥ ಅನಿಸಿಕೆಯೊಂದು ಮನಸ್ಸಿನಲ್ಲಿರುತ್ತಿತ್ತು. ಆದರೆ ಸ್ವತಃ ಸೋನಿಯಾ ವಿದೇಶಿ ಮೂಲದವರಾಗಿರುವಾಗ ಆಕೆಯ ನಿಲುವು ಅದೆಷ್ಟರ ಮಟ್ಟಿಗೆ ಭಾರತದ ಆಸಕ್ತಿಗಳನ್ನು protect ಮಾಡುತ್ತದೋ ಎಂಬ ಆತಂಕ ಎಂಥವರನ್ನೂ ಕಾಡಿಯೇ ಕಾಡುತ್ತದೆ. ತನ್ನ ಅತ್ತೆ ಕೊಲೆಯಾಗಿ, ಆಕೆಯ ಶವದೆದುರೇ ರಾಜೀವ್ ಗಾಂ ಭಾರತದ ಪ್ರಧಾನಿಯಾಗಲು ಅಣಿಯಾದಾಗ ಇದೇ ಸೋನಿಯಾ ದೊಡ್ಡ ದನಿಯಲ್ಲಿ ಹಟ ತೆಗೆದಿದ್ದರು. ಈ ರಾಜಕೀಯ, ಈ ದೇಶ ನಮಗೆ ಹೇಳಿ ಮಾಡಿಸಿದ್ದುದಲ್ಲ ಅಂದಿದ್ದರು. ಈಗ ಅದೇ ಸೋನಿಯಾ ಪ್ರಧಾನಿಯಾಗುತ್ತಿದ್ದಾರೆ. ಅವರನ್ನು ಮುಲಾಯಂ, ಶರದ್‌ಪವಾರ್, ಲಾಲೂ, ದೇವೇಗೌಡ, ಜ್ಯೋತಿ ಬಸು, ಸುರ್ಜಿತ್- ಹೀಗೇ ಘಟಾನುಘಟಿಗಳು ಒಪ್ಪಿಕೊಂಡಾಗಿದೆ. ವಿದೇಶಿ ಮೂಲದ issue ಈಗ ದೊಡ್ಡ ಸಂಗತಿಯಾಗಿ ಉಳಿದಿಲ್ಲ. ಸುಪ್ರಿಂ ಕೋರ್ಟ್ ಕೂಡಾ ಆಕೆಯನ್ನು ಶುದ್ಧ ಭಾರತೀಯಳೆಂದು ಘೋಷಿಸಿಯಾಗಿದೆ. ಆ ಮಾತು ಅಲ್ಲಿಗೆ ಬಿಡೋಣ.

ಆದರೆ ಇವತ್ತಿನ ಭಾರತದ ರಾಜಕೀಯ ಸ್ಥಿತಿ ನೋಡಿ? ಇಡೀ ದೇಶ ನಾನಾ ನಮೂನೆಯ ಪಾಳೆಯಗಾರರ ಕೈಗೆ ಸಿಕ್ಕುಹೋಗಿದೆ. ಆ ರಾಜ್ಯಕ್ಕೆ ಅವನೇ ನಾಯಕ! ಅಂಥವರನ್ನೆಲ್ಲ ಒಟ್ಟುಗೂಡಿಸಿ ಒಂದು ಸರ್ಕಾರ ಅಂತ ರಚಿಸಿ ಹೇಗೋ ರಾಜ್ಯಭಾರ ತೂಗಿಸಿಕೊಂಡು ಹೋಗಬಹುದು ಮತ್ತು ಹೋಗಲೇ ಬೇಕು ಎಂಬುದನ್ನು ತೋರಿಸಿಕೊಟ್ಟದ್ದು ವಾಜಪೇಯಿ. ಆ ತಾಕತ್ತು ಆತನಿಗಿತ್ತು. ಆದರೆ ಸೋನಿಯಾಗೆ ಅಂಥ vision, ಅಂಥ ನಾಯಕತ್ವ, ಅಂಥಾ ಮುತ್ಸದ್ದಿತನ ಇದೆಯಾ ಎಂಬುದೇ ಪ್ರಶ್ನೆ. ರಾಜಕಾರಣದ ಪಾಠಗಳನ್ನು ಸೋನಿಯಾ ತನ್ನ ಅತ್ತೆಯಂತೆ ರಾತ್ರೋರಾತ್ರಿ ಕಲಿತ ಬುದ್ಧಿವಂತೆಯಲ್ಲ. ಆಕೆ ಚದುರಂಗದಲ್ಲಿ ಪಳಗಲಿಕ್ಕೆ ವರ್ಷಗಳೇ ಬೇಕಾದವು. ಇವತ್ತಿಗೂ ಆಕೆಯ ಮುಖದಲ್ಲಿ ಒಬ್ಬ ಆಡಳಿತಗಾರ್ತಿ ಕಾಣುವುದಿಲ್ಲ. ಈ ತೆರನಾದ ಪ್ರಾದೇಶಿಕ, ಪಾಳೇಗಾರಿ ಪಕ್ಷಗಳು, ಅನನುಭವಿ ನಾಯಕಿ, ಆಕೆಯ ಸುತ್ತಲಿನ ಭಟ್ಟಂಗಿ ಕೂಟಗಳು ಇವೆಲ್ಲ form ಆದಾಗಲೇ ದೇಶ ಆಪತ್ತಿಗೆ ಬೀಳುವ ಅಪಾಯವಿರುತ್ತದೆ.

ಅಲ್ಲದೆ, ಇಂದಿರಾಗಾಂ ಆಳಿದ ಕಾಲಕ್ಕೂ ಸೋನಿಯಾ ಆಳಲಿರುವ ಕಾಲಕ್ಕೂ ಹೋಲಿಸಿಕೊಂಡರೆ ದೇಶದ ಸಮಸ್ಯೆಗಳು ಅಗಾಧ ಮತ್ತು ಆತಂಕಕಾರಿ ಸ್ಥಿತಿ ತಲುಪಿವೆ. ಜಾಗತೀಕರಣ ನಮ್ಮ ವ್ಯಾಪಾರಿಗಳನ್ನ, ಉದ್ದಿಮೆದಾರರನ್ನ ತಿಂದು ಹಾಕಿ ಬಿಟ್ಟಿದೆ. ಕುಡಿಯುವ ನೀರಿನ ಸಮಸ್ಯೆ ಹಳ್ಳಿಹಳ್ಳಿಯನ್ನೂ ಕಂಗೆಡಿಸಿದೆ. ವಾಜಪೇಯಿ ಕಾಲದ ವಿತ್ತ ನೀತಿ ಷೇರು ಮಾರುಕಟ್ಟೆಯನ್ನು ನಾಶ ಮಾಡಿ ಹಾಕಿದೆ. ಇವರು ಪ್ರತಿಯೊಂದನ್ನು disinvestment ಮಾಡಿ, ಸರ್ಕಾರಿ ಉದ್ದಿಮೆಗಳನ್ನು ಮಾರಿ ಕಾರ್ಮಿಕ ವಲಯದಲ್ಲಿ ದುರ್ಭರವಾದ ಹತಾಶ ಸ್ಥಿತಿ ಉಂಟುಮಾಡಿದ್ದಾರೆ. ಕೋಟ್ಯಂತರ ಜನಕ್ಕೆ ಉದ್ಯೋಗ ಬೇಕು, ನೀರು ಬೇಕು, ರಸ್ತೆಗಳು ಬೇಕು, ಮುಂದೆ ಬದುಕು ಹಸನಾದಿತೆಂಬ hope ಬೇಕು. ಸೋನಿಯಾ ಕೈಯಲ್ಲಿ ಅದನ್ನೆಲ್ಲ ಕೊಡಮಾಡಲು ಸಾಧ್ಯವಾದೀತೇ?

ಸಾಧ್ಯವಾಗಲೀ ಅಂತಲೇ ಇಟ್ಟುಕೊಳ್ಳೋಣ. ಆದರೂ ನೂರು ಕೋಟಿ ಜನ ಸಂಖ್ಯೆಯಿರುವ ಈ ರಾಷ್ಟ್ರಕ್ಕೆ, ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ಸಿಗೆ ಒಬ್ಬ ಭಾರತೀಯ ಪ್ರಜೆಯನ್ನು ಪ್ರಧಾನಿಯನ್ನಾಗಿ ಆಯ್ಕೆಮಾಡಿಕೊಳ್ಳಲು ಸಾಧ್ಯವಾಗಲಿಲ್ಲವಲ್ಲ? ಅದು ನಿಜಕ್ಕೂ ನೋವೇ.

No comments: