Monday, November 17, 2008
ಮತಾಂತರಿ ಪಾದ್ರಿ ಮತ್ತು ಕುವೆಂಪು
ತಂದೆಯವರ ದಿನಚರಿ ಕಾಲಕಾಲಕ್ಕೆ ಅನುಗುಣವಾಗಿ ಬದಲಾವಣೆ ಹೊಂದುತ್ತಿತ್ತು. ಬೇಗ ಕತ್ತಲು ಆವರಿಸುತ್ತಿದ್ದ ಚಳಿಗಾಲದ ದಿನಗಳಲ್ಲಿ ತಂದೆಯವರು ಸಂಜೆಯ ವಾಯುಸಂಚಾರ ಅರ್ಧಗಂಟೆ ಮುಂಚಿತವಾಗಿಯೇ ಮುಗಿಸುತ್ತಿದ್ದರು. ಅಂದು ಸಂಜೆ ಆಗತಾನೆ ಸಂಚಾರ ಮುಗಿಸಿ ಬಂದು ಎದುರು ವರಾಂಡದ ತಮ್ಮ ದೊಡ್ಡ ಸೋಫಾ ಮೇಲೆ ಕುಳಿತಿದ್ದರು. ಮುಸ್ಸಂಜೆ ಸಮಯ. ಬಿಳಿಬಟ್ಟೆ, ತೊಟ್ಟ ಒಬ್ಬ ಪಾದ್ರಿ ಮನೆಗೆ ಬಂದರು. ವರಾಂಡದ ಬಾಗಿಲು ತೆರೆದಿತ್ತು. ಪಾದ್ರಿ ಮೆಟ್ಟಿಲು ಹತ್ತಿ ವರಾಂಡ ಪ್ರವೇಶಿಸಿದೊಡನೆ ತಂದೆಯವರು ‘ಯಾರು ಏನುಬೇಕು?’ ಎಂದು ವಿಚಾರಿಸಿದರು. ‘ನಿಮ್ಮನ್ನು ನೋಡಲು ಬಂದೆ’ ಎಂದು ಹೇಳಿ ಪಾದ್ರಿ ನಮಸ್ಕರಿಸಿದರು. ತಂದೆಯವರು ಪ್ರತಿ ನಮಸ್ಕಾರದೊಡನೆ ಎದುರಿನ ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೇಳಿದರು. ಪಾದ್ರಿ ಕುರ್ಚಿಯಲ್ಲಿ ಕುಳಿತರು.
ಪಾದ್ರಿಗೆ ಮಧ್ಯವಯಸ್ಸು ಮೀರಿರಲಿಲ್ಲ. ಯಾವುದೋ ಕ್ರೈಸ್ತ ಸಂಸ್ಥೆ ಅವರನ್ನು ಮತಪ್ರಚಾರಕ್ಕೆ ಕಳುಹಿಸಿದೆ. ದೊಡ್ಡಮನೆ ನೋಡಿ ಬಂದಿರಬಹುದು. ಯಾರ ಮನೆಯೆಂದು ಗೊತ್ತಿಲ್ಲ. ಗೊತ್ತಾಗಿದ್ದರೆ ಬಹುಶಃ ಒಳಗೆ ಪ್ರವೇಶಿಸಲು ಧೈರ್ಯವಾಗುತ್ತಿರಲಿಲ್ಲವೇನೋ. ತಂದೆಯವರು ಏನು ವಿಚಾರ? ಏನು ಬೇಕು? ಎಂದು ಕೇಳಿದ ತಕ್ಷಣವೇ ಅವರಿಗೆ ಬಾಯಿಪಾಠ ಮಾಡಿಸಿದ ಏಸುವಿನ ವಿಚಾರ ಹೇಳಲು ಪ್ರಾರಂಭಿಸಿದರು.
ತಂದೆಯವರಿಗೆ ಅರ್ಥವಾಯಿತು ಪಾದ್ರಿ ಬಂದ ಉದ್ದೇಶ. ಇಂತಹ ಎಷ್ಟೋ ಮತ ಪ್ರಚಾರಕರನ್ನು ಅವರು ನೋಡಿದ್ದರು. ಸ್ವಲ್ಪ ಹೊತ್ತು ಸುಮ್ಮನಿದ್ದರು. ಪಾದ್ರಿ ಮಾತು ನಿಲ್ಲಿಸಿದ ಮೇಲೆ ತಂದೆಯವರ ವಾಕ್ ಪ್ರವಾಹ ಪ್ರಾರಂಭವಾಯಿತು.
“ಏತಕ್ಕಾಗಿ ಇನ್ನೂ ಈಗಿನ ಕಾಲದಲ್ಲಿ ಈ ರೀತಿ ಮತಪ್ರಚಾರ ಮಾಡುವಿರಿ? ಈ ಕಾಲದಲ್ಲಿ ಎಲ್ಲರೂ ವಿದ್ಯಾಭ್ಯಾಸ ಪಡೆದು ಅವರವರಿಗೆ ಬೇಕಾದ ದೃಷ್ಟಿ ಅವರವರು ಬೆಳೆಸಿಕೊಳ್ಳುತ್ತಾರೆ. ಏಸು ಕ್ರಿಸ್ತ ಎಲ್ಲರನ್ನೂ ತಮ್ಮ ಮತಕ್ಕೆ ಸೇರಿಸಿ ಎಂದು ಹೇಳಿರುವನಾ? ಅವನು ಎಷ್ಟು ಉದಾತ್ತ ಭಾವನೆಗಳನ್ನು ಹೇಳಿರುವನು. ಅದನ್ನಾದರೂ ಓದಿರುವಿರಾ? ಇದೆನ್ನೆಲ್ಲಾ ನನಗೆ ಹೇಳಲು ಬಂದಿರುವಿರಾ? ನಾನು ಓದಿರುವುದರಲ್ಲಿ ಕಾಲು ಅಂಶವಾದರೂ ನೀವು ಓದಿರುವಿರಾ? ಎಲ್ಲಾ ಪಂಗಡಗಳ, ಜಾತಿ ಧರ್ಮದ ಕಚ್ಚಾಟ ಹೋಗಲಾಡಿಸಲೇ ಶ್ರೀ ರಾಮಕೃಷ್ಣರು ಈ ಯುಗದಲ್ಲಿ ಬಂದಿದ್ದು. ಅವರ ವಿಚಾರವಾಗಿ ನಿಮಗೇನಾದರೂ ತಿಳಿದಿದೆಯೇ? ವಿವೇಕಾನಂದರು ಷಿಕಾಗೋದಲ್ಲಿ ಭಾಷಣ ಮಾಡಿದ್ದು ಗೊತ್ತಿದೆಯೇ? ಅವರನ್ನು ಇಡೀ ಪ್ರಪಂಚವೇ ಕೊಂಡಾಡಿರುವುದು ನಿಮಗೂ ಗೊತ್ತಿರಬೇಕು ಅಲ್ಲವೆ ಈಗ ಜನಕ್ಕೆ ಬೇಕಾಗಿರುವುದು ಉತ್ತಮ ಬದುಕು, ಉದಾತ್ತ ತತ್ವಗಳು, ಮನುಜಮತ ಮತ್ತು ವಿಶ್ವಪಥ. ಮತಾಂತರವಲ್ಲ. ಬರೀ ಬಾಯಲ್ಲಿ ಹೇಳುತ್ತಾ ಹೋದರೆ ಏನು ಪ್ರಯೋಜನ? ಸ್ವಲ್ಪವಾದರೂ ಏಸು ಹೇಳಿದ ಕೆಲಸವನ್ನಾದರೂ ಮಾಡಿರುವಿರಾ? ನನಗೆ ಉಪದೇಶ ಕೊಡುವ ಅಗತ್ಯವಿಲ್ಲ. ನೀವು ಶ್ರೀ ರಾಮಕೃಷ್ಣ ವಿವೇಕಾನಂದರ ಸಾಹಿತ್ಯ ಓದಿ ವಿಶಾಲ ಮನಸ್ಸು, ಒಳ್ಳೆಯ ಭಾವನೆಗಳನ್ನು ಬೆಳೆಸಿಕೊಳ್ಳಿ. ಇಲ್ಲೇ ಹತ್ತಿರದಲ್ಲಿ ರಾಮಕೃಷ್ಣ ಆಶ್ರಮ ಇದೆ. ಅಲ್ಲಿಗೆ ಹೋಗಿ, ಪುಸ್ತಕ ವಿಭಾಗದಲ್ಲಿ ಪುಸ್ತಕಗಳು ಮಾರಾಟಕ್ಕೆ ದೊರೆಯುತ್ತದೆ ನಿಮಗೆ ಬೇಕಾದ ಪುಸ್ತಕ ತೆಗೆದುಕೊಂಡು ಓದಿ, ನಿಮ್ಮ ಮನಸ್ಸು, ಹೃದಯ ವಿಶಾಲ ಮಾಡಿಕೊಳ್ಳಿ. ವಿಶ್ವಮಾನವರಾಗಿ. ನನ್ನ ವಿಶ್ವಮಾನವ ಸಂದೇಶವನ್ನು ಕೊಡುವೆನು ಓದಿ ವೈಚಾರಿಕ ಬುದ್ಧಿ ಬೆಳೆಸಿಕೊಳ್ಳಿ. ಹುಟ್ಟುತ್ತಲೇ ಎಲ್ಲರೂ ವಿಶ್ವಮಾನವರು. ಬೆಳೆಯುತ್ತಾ ನಾವೇ ಅವರನ್ನು ಅಲ್ಪಮಾನವರನ್ನಾಗಿ ಮಾಡುತ್ತೇವೆ. ಜಾತಿ, ಮತ, ವರ್ಗ, ಪಂಗಡ ಎಂದು ಹೊಡೆದಾಡುವುದು, ಬಡಿದಾಡುವುದು ಜಾಸ್ತಿಯಾಗುತ್ತಿದೆ. ಈ ಅಲ್ಪಮಾನವನನ್ನು ವಿಶ್ವಮಾನವನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯ” ಎಂದು ಹೇಳಿ ‘ವಿಶ್ವಮಾನವ ಸಂದೇಶ’ದ ಬಗ್ಗೆಯೂ ಆ ಪಾದ್ರಿಗೆ ಮಾತಾಡಲು ಅವಕಾಶವಿಲ್ಲದಂತೆ ಸಾಕಷ್ಟು ವಿವರಿಸಿದರು. ಪಾದ್ರಿಯೂ ಕಂಗಾಲಾಗಿ ಏನೂ ಮಾತಾಡಲು ತೋಚದೆ ಸುಮ್ಮನೆ ಕುಳಿತಿದ್ದರು.
ತಂದೆಯವರು ತಾವು ಅಚ್ಚು ಹಾಕಿಸಿರುವ ‘ವಿಶ್ವಮಾನವ ಸಂದೇಶ’ದ ಪತ್ರಿಕೆ ಕೊಟ್ಟು “ಓದಿ ನೋಡಿ, ನಮ್ಮ ರಾಮಕೃಷ್ಣರು ನಿಮ್ಮ ಏಸು, ಮೊಹಮೊದ್, ರಾಮ, ಬುದ್ಧ, ಕೃಷ್ಣ ಎಲ್ಲರನ್ನೂ ಜೀರ್ಣಿಸಿಕೊಂಡಿದ್ದಾರೆ. ಎಲ್ಲರ ಒಳ್ಳೆಯ ಭಾವನೆಯನ್ನು ತೆಗೆದುಕೊಂಡಿದ್ದಾರೆ. ಎಲ್ಲ ರೀತಿಯ ಸಾಧನೆಯಿಂದ ಅನುಭವ ಪಡೆದಿರುವರು” ಮುಂತಾಗಿ ಹೇಳಿದರು. ಆದರೆ ಪಾದ್ರಿಗೆ ಅರ್ಥವಾದಂತೆ ಕಾಣಲಿಲ್ಲ. ಪಾದ್ರಿ ಮಾತಿಲ್ಲದೆ ಎದ್ದು ಅಸಮಾಧಾನವಾದಂತೆ ತಂದೆಯವರು ಕೊಟ್ಟ ವಿಶ್ವಮಾನವ ಸಂದೇಶ ತೆಗೆದುಕೊಂಡು ವೇಗವಾಗಿ ಮೆಟ್ಟಲಿಳಿದು ಹೋದರು. ಅಷ್ಟರಲ್ಲಿ ಪೂರ್ತಿ ಕತ್ತಲೆ ಆವರಿಸಿತ್ತು. ಪಾದ್ರಿ ಹೋದ ನಂತರ ತಂದೆಯವರು ನಗುತ್ತಾ “ಇನ್ನೂ ಅಂದಿನ ಕತೆ ಇವರು ಬಿಟ್ಟಿಲ್ಲ. ನಿಮ್ಮ ಕೃಷ್ಣ ಬೆಣ್ಣೆ ಕದ್ದ, ನಮ್ಮ ಏಸು ಏನು ಮಾಡಿದ? ನೀವೆಲ್ಲಾ ಕುರಿಗಳು ನಮ್ಮ ಯೇಸು ಕುರುಬ ಎಂದು ಹೇಳುತ್ತಿದ್ದಾರೆ. ಪಾಪ ಪಾದ್ರಿ ಏನು ಮಾಡುವನು? ಮೇಲಿನವರು ಹೇಳಿಕೊಟ್ಟದ್ದು ಬಾಯಿಪಾಠಮಾಡಿ ಒಪ್ಪಿಸಿ ಹೋಗುವನು ಅಷ್ಟೆ” ಎಂದರು.
ಮಾರನೆಯ ದಿನ ಬೆಳಗ್ಗೆ ತಂದೆಯವರ ದಿನಚರಿಯಂತೆ ಐದೂವರೆ ಗಂಟೆಗೆ ಎದ್ದು ವಾಯು ಸಂಚಾರಕ್ಕೆ ಹೊರಟರು. (ಚಳಿಗಾಲದ ದಿನವಾದ್ದರಿಂದ ಇನ್ನೂ ಕತ್ತಲೆ ಇತ್ತು) ಹೊರಹೋಗಿ ಗೇಟು ತೆರೆಯಲು ನೋಡಿದಾಗ ಮನೆಯೊಳಗೆ ಗೇಟಿನ ಹತ್ತಿರ ಇರುವ ಗಿಡದ ಮೇಲೆ, ಸಂದಿಯಲ್ಲಿ ಒಂದು ದೊಡ್ಡ ಕಾಗದ ಬಿದ್ದಿರುವುದು ಕಾಣಿಸಿತು. ಕಾಗದ ತೆಗೆದುಕೊಂಡು ಮಡಚಿ ಜೇಬಿಗೆ ಇಟ್ಟುಕೊಂಡರು. ಕೆಲವು ಸಂದರ್ಭದಲ್ಲಿ ಯಾರಾದರು ಆಹ್ವಾನ ಪತ್ರಿಕೆ, ಇತ್ಯಾದಿಗಳನ್ನು ಮನೆ ಒಳಗೆ ಬಂದು ಕೊಡಲಾಗದೆ ಗೇಟಿನ ಒಳಗೆ ಎಸೆದು ಹೋಗುತ್ತಿದ್ದರು. ಏಕೆಂದರೆ ನಮ್ಮ ನಾಯಿ ಬಿಟ್ಟಿದ್ದರೆ ಅದು ಕಾಂಪೌಂಡ್ ಒಳಗೆ ಓಡಾಡುವುದು, ಬೊಗಳುವುದು ನೋಡಿ, ಒಳಗೆ ಬಂದರೆ ಅಪಾಯವೆಂದು ಕೆಲವರು ಗೇಟಿನ ಹತ್ತಿರವೇ ಎಸೆದು ಹೋಗುತ್ತಿದ್ದರು. ತಂದೆಯವರು ಅಂತಹುದೇ ಒಂದು ಕಾಗದ ಇರಬಹುದು ಎಂದು ಸಂಚಾರ ಮುಗಿಸಿ ನಂತರ ನೋಡೋಣ ಎಂದು ಜೇಬಿಗೆ ಹಾಕಿಕೊಂಡು ಹೊರಟರು. ಓದಲು ಕನ್ನಡಕವೂ ಇರಲಿಲ್ಲ. ಬೆಳಗಿನ ಸಂಚಾರ ಮುಗಿಸಿ ಏಳು ಗಂಟೆಗೆ ಮನೆಗೆ ಹಿಂದಿರುಗಿದರು. ಮನೆಗೆ ಬಂದ ನಂತರ ಚಪ್ಪಲಿಬಿಟ್ಟು ಹಾಲಿನಲ್ಲಿ ಕುಳಿತು ನಮ್ಮೆಲ್ಲರ ಎದುರಿಗೆ “ಬೆಳಗ್ಗೆ ಏನೋ ಕಾಗದವೊಂದು ಗೇಟಿನ ಹತ್ತಿರ ಬಿದ್ದಿತ್ತು” ಎಂದು ಜೇಬಿನಿಂದ ತೆಗೆಯುತ್ತಾ, “ನನ್ನ ಕನ್ನಡಕ ತಂದು ಕೊಡಕ್ಕಾ ಓದಿ ನೋಡುವೆ” ಎಂದರು. ಅಲ್ಲೇ ನಿಂತಿದ್ದ ನಾನು ಕನ್ನಡಕ ತಂದುಕೊಟ್ಟೆನು. ಕನ್ನಡಕ ಹಾಕಿ ನೋಡುತ್ತಾರೆ ಹಿಂದಿನ ದಿನ ಆ ಪಾದ್ರಿಗೆ ಕೊಟ್ಟಿದ್ದ ‘ವಿಶ್ವಮಾನವ ಸಂದೇಶ’ ಪತ್ರಿಕೆ ! ಇದೆಲ್ಲ ನೋಡುತ್ತಾ ನಿಂತಿದ್ದ ಮೊಮ್ಮಕ್ಕಳು “ಇದೇನು ಅಜ್ಜಯ್ಯ ನಿಮ್ಮ ವಿಶ್ವಮಾನವ ಸಂದೇಶ ಇದು. ಈ ಮೇಜಿನ ಮೇಲೆ ಇಟ್ಟಿರುವುದನ್ನು ಅಲ್ಲಿ ಯಾರು ಬಿಸಾಕಿದ್ದು? ಯಾರು ನಿಮ್ಮನ್ನು ಕೇಳದೆ ಇದನ್ನು ಮುಟ್ಟಿದ್ದು?” ಎಂದರು.
ವಿಶ್ವಮಾನವ ಸಂದೇಶ ತಂದೆಯವರು ಕೊಟ್ಟಾಗ ಪಾದ್ರಿ ತೆಗೆದುಕೊಂಡು ಹೋಗಿ, ನಂತರ ಗೇಟಿನಿಂದ ಹೊರಹೋಗುವಾಗ, ಗೇಟಿನ ಒಳಗೆ ಎಸೆದು ಹೋಗಿರುವುದು. ರಾತ್ರಿ ತಂದೆಯವರ ಗಮನಕ್ಕೂ ಅದು ಬಂದಿತ್ತು. ಹೊರಹೋಗಿದ್ದ ಪಾದ್ರಿ ಕೈ ಏನನ್ನೋ ಮನೆಯೊಳಗೆ ಎಸೆದಂತೆ ಕಾಣಿಸಿತಂತೆ. ಕತ್ತಲೆಯಾದ್ದರಿಂದ ತಂದೆಯವರಿಗೆ ಸ್ಪಷ್ಟವಾಗಿ ಪಾದ್ರಿ ಏನು ಮಾಡಿದರು ಎಂದು ಗೊತ್ತಾಗಲಿಲ್ಲ. ತಂದೆಯವರಿಗೆ ಏನೋ ಹಾಗೆ ಕಂಡಿರಬಹುದು ಎಂದು ಸುಮ್ಮನಾದರಂತೆ. ಬೆಳಗ್ಗೆ ಗೊತ್ತಾಯಿತು ಅವರು ಎಸೆದಿರುವುದು ಏನು ಎಂದು. ಅದನ್ನು ನೋಡಿ “ಅಯ್ಯೋ ಪಾಪ, ಪಾದ್ರಿ ತಾನು ಅಲ್ಪಮಾನವ ಅನ್ನುವುದನ್ನು ಪೂರ್ತಿ ಸಾಬೀತುಪಡಿಸಿದ. ಅದರಲ್ಲಿ ಏನಿದೆ ಎಂದು ನೋಡುವಷ್ಟು ದೊಡ್ಡತನವಿಲ್ಲ ದವರು. ಕ್ರೈಸ್ತಮತ ಪ್ರಚಾರಕ್ಕೆ ಕೈಹಾಕಿದ್ದಾರೆ. ಪಾಪ ಆತನ ಅಲ್ಪಮತಿಗೆ ಭಾರತೀಯ ದರ್ಶನಗಳ ಅರಿವೂ ಇಲ್ಲ. ಆ ಮರಿ ಕ್ರೈಸ್ತನ ಮತಭ್ರಾಂತಿಗೆ ಇದೆಲ್ಲಾ ಎಲ್ಲಿ ಹಿಡಿಸುತ್ತದೆ? ಹೊಟ್ಟೆ ಪಾಡಿಗೆ ಪಾದ್ರಿಯಾಗಿರುವರೇನೋ, ಏನು ಕೆಲಸ ಮಾಡುವರೋ ಆ ಯೇಸುವಿಗೇ ಗೊತ್ತು !” ಎಂದು ನಕ್ಕರು. ಅವರ ನಗುವಿನೊಡನೆ ಮೊಮ್ಮಕ್ಕಳೂ ಸೇರಿದರು. “ಅವರಿಗೆ ಬೇಡದಿದ್ದರೆ ಇನ್ಯಾರಿಗಾದರೂ ಕೊಡಬಹುದಿತ್ತು. ಸದ್ಯ ಹರಿದು ಎಸೆಯಲಿಲ್ಲವಲ್ಲಾ, ಮನೆಯೊಳಗೆ ಹಾಕಿ ಹೋದರು” ಎಂದು ವಿಶ್ವಮಾನವ ಸಂದೇಶದ ಕಾಗದ ತೆಗೆದುಕೊಂಡು ಮುದುರಿದ ಕಾಗದ ಬಿಚ್ಚಿ ಚೆನ್ನಾಗಿ ಮಡಿಕೆಯೆಲ್ಲಾ ಹೋಗುವಂತೆ ಉಜ್ಜಿ, ಸರಿಪಡಿಸಿ ಅಚ್ಚುಕಟ್ಟು ಮಾಡಿ ಅವರ ಮೇಜಿನ ಮೇಲೆ ಉಳಿದ ವಿಶ್ವಮಾನವ ಸಂದೇಶ ಪತ್ರಿಕೆಗಳ ಜತೆಗೆ ಜೋಡಿಸಿ ಇಟ್ಟರು. “ಸರಿ ಈಗ ನನಗೆ ತುಂಬಾ ಹಸಿವಾಗುತ್ತಿದೆ. ಎಲ್ಲರೂ ಬನ್ನಿ, ಎಲ್ಲರೂ ಬನ್ನಿ ಕಾಫಿ ಕುಡಿಯೋಣ” ಎಂದು ಎದ್ದು ಊಟದ ಮನೆ ಕಡೆ ಹೊರಟರು. ಮೊಮ್ಮಕ್ಕಳು ನಗುತ್ತಾ, “ಅಜ್ಜಯ್ಯ ಬಿಸಾಡುವ ಜನಗಳಿಗೆ ಇನ್ನು ಮುಂದೆ ವಿಶ್ವಮಾನವ ಸಂದೇಶ ಕೊಡಬೇಡಿ” ಎಂದು ಹೇಳುತ್ತಾ ಅಜ್ಜಯ್ಯನೊಡನೆ ತಿಂಡಿ ತಿನ್ನಲು ಅವರನ್ನು ಹಿಂಬಾಲಿಸಿದರು.
-ತಾರಿಣಿ ಚಿದಾನಂದ (ಕುವೆಂಪು ಮಗಳು), ಮೈಸೂರು
(ವಿಜಯ ಕರ್ನಾಟಕ, ನವಂಬರ್ ೧೧, ೨೦೦೮)
Thursday, October 23, 2008
ಅವ್ಯಾಹತ ಕ್ರಿಸ್ತೀಕರಣ: ಎಸ್.ಎಲ್.ಭೈರಪ್ಪ
- “ಸೆಪ್ಟೆಂಬರ್ ೧೧ರ ನಂತರ ಅಮೆರಿಕದಲ್ಲಿ ಒಂದೇ ಒಂದು ಭಯೋತ್ಪಾದಕ ಕೃತ್ಯ ನಡೆದಿಲ್ಲ. ನಮ್ಮಲ್ಲಿ ಪ್ರತಿ ದಿನ ಜನ ಉಗ್ರಗಾಮಿಗಳಿಂದ ಸಾಯುತ್ತಲೇ ಇದ್ದಾರೆ. ನಮ್ಮ ರಾಜಕಾರಣಿಗಳು ಇದನ್ನು ತಡೆಯುವುದು ಕನಸಿನ ಮಾತು.”
- “ಭಾರತದಲ್ಲಿ ದಿನಕ್ಕೆ ೫೦೦೦ ಜನರು ಕ್ರೈಸ್ತರಾಗಿ ಪರಿವರ್ತಿತರಾಗುತ್ತಿದ್ದಾರೆಂಬ ಒಂದು ಲೆಕ್ಕವಿದೆ. ಚರ್ಚಿಗೆ ಇರುವ ಆದಾಯ ಅಗಾಧವಾದದ್ದು. ಜನ ಬಲವೂ ಅಷ್ಟೇ ಅಗಾಧವಾದದ್ದು. ತಮ್ಮ ಮತ ವಿಸ್ತರಣೆಗಾಗಿ ಇವರು ಇಷ್ಟೊಂದು ಹಣ, ಮಾನವ ಶಕ್ತಿ ಮತ್ತು ಸಂಘಟನಾ ತಂತ್ರಗಳನ್ನೆಲ್ಲ ಯಾಕೆ ಕ್ರೋಡೀಕರಿಸಿ ವ್ಯಯ ಮಾಡುತ್ತಾರೆ?”
- “ಮತಾಂತರ ಚಟುವಟಿಕೆಯು ತಪ್ಪು ಎಂದು ನಾವು ಹೇಳುತ್ತೇವೆ. ಸರ್ವೋಚ್ಚ ನ್ಯಾಯಾಲಯವೂ ಹೀಗೆಯೇ ವ್ಯಾಖ್ಯೆ ಮಾಡಿದೆ. ಆದರೆ ಅದು ತಪ್ಪೆಂದು ಅವರು ಭಾವಿಸುವುದಿಲ್ಲ. ಧರ್ಮಬೋಧೆಯು ಅವಿಭಾಜ್ಯ ಅಂಗವಾಗಿ ಅವರ ತಲೆಯಲ್ಲಿ ಗಟ್ಟಿಯಾಗಿ ಕೂತಿರುವಾಗ ಅವರು ಬೇರೆ ರೀತಿ ಆಲೋಚಿಸುವುದು ಹೇಗೆ ಸಾಧ್ಯ?”
- “ಚರ್ಚಿನ ತಂತ್ರವು ಒಂದೊಂದು ಸಂದರ್ಭದಲ್ಲಿ ಒಂದೊಂದು ತೆರನಾಗಿರುತ್ತದೆ. ಬೆದರಿಸುವಲ್ಲಿ ಬೆದರಿಕೆ , ಹಿಂಸಿಸುವಲ್ಲಿ ಹಿಂಸೆ, ನಯಗಾರಿಕೆಯಲ್ಲಿ ನಯ, ಆಮಿಷದಲ್ಲಿ ಪೂರೈಕೆ ಮೊದಲಾಗಿ ಅವರದು ವಿವಿಧ ಸಮಯ ಸಾಧಕ ಮಾರ್ಗಗಳು.”
ನಾಲ್ಕು ಶತಮಾನಗಳಿಂದಲೂ ಸತತವಾಗಿ ಭಾರತದಲ್ಲಿ ನಡೆಯುತ್ತಿರುವ ಕ್ರಿಸ್ತೀಕರಣವು ಸೋನಿಯಾ ಗಾಂಧಿಯ ಪಟ್ಟಾಭಿಷೇಕವಾದ ನಂತರ ಅಗಾಧವಾದ ಪ್ರಮಾಣಕ್ಕೆ ಏರಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾದರೂ ಯಾವ ಪತ್ರಿಕೆ ಅಥವಾ ಟಿವಿ ಚಾನೆಲ್ ನವರು ಹಾಗೆಂದು ಸ್ಪಷ್ಟವಾಗಿ ಬರೆದಿಲ್ಲ, ಹೇಳಿಲ್ಲ. ಆದರೆ ಈ ಅಗಾಧತೆಯಿಂದ ಎಚ್ಚೆತ್ತು ಒರಿಸ್ಸಾ, ಕರ್ನಾಟಕ ಮೊದಲಾದ ಕಡೆ ಅಲ್ಲಲ್ಲಿ ಪ್ರತಿಕ್ರಿಯೆಯಾಗುತ್ತಿರುವುದನ್ನು ಎಲ್ಲ ಮಾಧ್ಯಮದವರೂ ಮುಖಪುಟದ ಸುದ್ದಿ ಮಾಡುತ್ತಿರುವುದು, ಜಾತ್ಯತೀತ ಪತ್ರಿಕೆಗಳು, ಎಡಪಂಥದ ಮಾಧ್ಯಮಗಳು ಭಾರತದ ವಿನಾಶವೇ ಸಂಭವಿಸುತ್ತಿದೆ ಎಂಬಂತೆ ಹುಯಿಲೆಬ್ಬಿಸಿ ಮಿಶನರಿಗಳಿಗೆ ಸಹಕಾರಿಯಾಗಿ ವರ್ತಿಸುತ್ತಿರುವುದು ಸಾಧಾರಣ ಓದುಗನಿಗೂ ಅರ್ಥವಾಗುತ್ತದೆ. ಈ ಹುಯಿಲನ್ನು ಸೋನಿಯಾಗಾಂಧಿಯ ಅನುಯಾಯಿಗಳು, ಬುದ್ಧಿಜೀವಿಗಳು, ಜಾತ್ಯತೀತರು, ತಾರಕಕ್ಕೇರಿಸಿ ಹಿಂದೂ ಪರ ಸಂಘಟನೆಗಳು, ಮಠಾಧೀಶರು ಮತ್ತು ಬಿಜೆಪಿ ಸರಕಾರಗಳಿಗೆ ಮಸಿ ಬಳಿಯುವುದು ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ, ವಿಶ್ವಸಂಸ್ಥೆಯ ಮಟ್ಟದಲ್ಲಿ ಭಾರತಕ್ಕೆ ಛೀಮಾರಿ ಹಾಕಿಸಲು ಉದ್ಯುಕ್ತವಾಗಿರುವ ಕ್ರೈಸ್ತ ಸಂಘಟನೆಗಳಿಗ ನೆರವಾಗುತ್ತಿರುವುದೂ ಸ್ಪಷ್ಟವಾಗಿದೆ. ಕೇಂದ್ರ ಸರಕಾರವನ್ನು ಹಿಡಿದುಕೊಂಡಿರುವ ಸೋನಿಯಾ ಗಾಂಧಿಯ ಕಾಂಗ್ರೆಸ್ ಪಕ್ಷವಂತೂ ಈ ಸನ್ನಿವೇಶವನ್ನು ದೊಡ್ಡದು ಮಾಡಿಕೊಂಡು ಕರ್ನಾಟಕ ಮತ್ತು ಒರಿಸ್ಸಾ ಸರಕಾರಗಳನ್ನು ಬರ್ಖಾಸ್ತ್ ಮಾಡುವ ಹುನ್ನಾರವನ್ನೂ ಮಾಡುತ್ತಿದೆ. ಹಾಗೆ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಜನಗಳು ಬರ್ಖಾಸ್ತುಗೊಂಡ ಸರಕಾರಗಳನ್ನು ಪುನರ್ಪ್ರತಿಷ್ಠಾಪಿಸಿಯಾರೆಂಬ ಲೆಕ್ಕಾಚಾರದಿಂದ ತಡೆದುಕೊಂಡಿದೆ. ಪ್ರತಿಕ್ರಿಯೆಯಾಗಿ ಗಲಭೆ ಮಾಡುತ್ತಿರುವವರು ಭಜರಂಗದಳದವರೆಂದು ಕೇಂದ್ರದ ಆಡಳಿತ ಪಕ್ಷವೂ ಎಡಪಂಥೀಯ ಮತ್ತು ವಿಶೇಷವಾಗಿ ಇಂಗ್ಲಿಷ್ ಮಾಧ್ಯಮವೂ ಥಟ್ಟನೆ ಆಪಾದಿಸುತ್ತಿವೆ. ಆದರೆ ಈ ಗಲಭೆಯಲ್ಲಿ ಭಜರಂಗದಳದ ಪಾತ್ರವೆಷ್ಟು ? ಭಜರಂಗದಳದ ಹೆಸರಿನಲ್ಲಿ ನಡೆಯುವ ಗಲಭೆಗಳೆಷ್ಟು ? ಮಿಶನರಿಗಳ ಆಮಿಷ ಮತ್ತು ಅಪಪ್ರಚಾರಕ್ಕೆ ಒಳಗಾಗಿ ಮತಾಂತರಗೊಂಡವರ ನೆರೆ ಹೊರೆಯವರೇ ಸ್ವಯಂಪ್ರೇರಿತರಾಗಿ ಗಲಭೆ ಮಾಡಿರುವವರೆಷ್ಟು ಎಂಬ ವಿವರಗಳನ್ನು ಯೋಚಿಸುವುದು ಇವರಾರಿಗೂ ಬೇಕಿಲ್ಲ.
ಭಾರತದಲ್ಲಿ ವಾಸಿಸುತ್ತಿರುವ ಫ್ರಾಂಕ್ವಾಗೋತಿಯೆ ಎಂಬ ಫ್ರೆಂಚ್ ಪತ್ರಕರ್ತನು ಸೋನಿಯಾಗಾಂಧಿಯ ಆಡಳಿತದಲ್ಲಿ ನಡೆಯುತ್ತಿರುವ ಕ್ರಿಸ್ತೀಕರಣವನ್ನು ವಿವರಿಸುತ್ತಾ ಅಂಜಿಕೆಯನ್ನು ವ್ಯಕ್ತಪಡಿಸಿದ್ದಾನೆ. ಆತ ಹೇಳುತ್ತಾನೆ;
“ನಾನು ಸ್ವತಃ ಪಾಶ್ಚಿಮಾತ್ಯ ಹಾಗೂ ಹುಟ್ಟಿನಿಂದ ಕ್ರೈಸ್ತ. ಹೆಚ್ಚಾಗಿ ಕ್ಯಾಥೊಲಿಕ್ ಶಾಲೆಗಳಲ್ಲಿ ಬೆಳೆದವನು. ಚಿನ್ನದಂಥ ಮನುಷ್ಯನಾಗಿದ್ದ ನನ್ನ ಚಿಕ್ಕಪ್ಪ ಹೈಗೋತಿಯೇ ಪ್ಯಾರಿಸ್ಸಿನ ಒಂದು ಸುಂದರ ಚರ್ಚಿನ ಅರ್ಚಕನಾಗಿದ್ದ. ಫ್ರ್ರಾನ್ಸಿನಲ್ಲಿ ಪ್ರಸಿದ್ಧ ಕಲಾವಿದನಾಗಿದ್ದ ನನ್ನ ತಂದೆ ಜೀವನವಿಡೀ ನಿಷ್ಠಾವಂತ ಕ್ಯಾಥೊಲಿಕ್. ಅವರು ಪ್ರತಿದಿನ ಚರ್ಚಿಗೆ ಹೋಗುತ್ತಿದ್ದರು...ಆದರೂ ಸೋನಿಯಾಗಾಂಧಿಯ ರಾಜ್ಯಭಾರದಲ್ಲಿ ಕ್ರೈಸ್ತ ಧರ್ಮವು ಎಷ್ಟೊಂದು ಪ್ರಮಾಣದಲ್ಲಿ ಭಾರತವನ್ನು ವಶಕ್ಕೆ ತೆಗೆದುಕೊಳ್ಳುತ್ತಿದೆ ಎಂಬುದನ್ನು ನೋಡಿದಾಗ ನಾನು ಕಸಿವಿಸಿಗೊಳ್ಳುತ್ತೇನೆ. ೨೦೦೧ನೇ ಸೆನ್ಸಸ್ ಪ್ರಕಾರ ಭಾರತದಲ್ಲಿ ೨೩೪ ಲಕ್ಷ ಕ್ರೈಸ್ತರಿದ್ದಾರೆ. ಎಂದರೆ ಶೇಕಡಾ ೨.೫ ರಷ್ಟೂ ಇಲ್ಲ. ಇದೊಂದು ನಗಣ್ಯ ಸಂಖ್ಯೆ. ಆದರೂ ಇಂದು ಭಾರತದಲ್ಲಿ ಐದು ಜನ ಕ್ರೈಸ್ತ ಮುಖ್ಯಮಂತ್ರಿಗಳಿದ್ದಾರೆ- ನಾಗಾಲ್ಯಾಂಡ್, ಮಿಜೋರಾಂ, ಮೇಘಾಲಯ, ಕೇರಳ ಮತ್ತು ಆಂಧ್ರ ಪ್ರದೇಶ. ಸೋನಿಯಾಗಾಂಧಿಯ ಸಮೀಪ ವರ್ತುಲದಲ್ಲಿರುವ ರಾಜಕಾರಣಿಗಳಲ್ಲಿ ಬಹುತೇಕರು ಕ್ರೈಸ್ತರು ಅಥವಾ ಮುಸ್ಲಿಮರು. ಆಕೆಗೆ ಹಿಂದೂಗಳಲ್ಲಿ ನಂಬಿಕೆ ಇಲ್ಲವೆಂದು ತೋರುತ್ತದೆ. ಕ್ರೈಸ್ತಳಾದ ಅಂಬಿಕಾ ಸೋನಿ ಕಾಂಗ್ರೆಸ್ಸಿನ ಜನರಲ್ ಸೆಕ್ರೆಟರಿ, ರಾಜಕೀಯವಾಗಿ ಬಹಳ ಬಲಶಾಲಿಯಾದ ವ್ಯಕ್ತಿ, ಸೋನಿಯಾ ಗಾಂಧಿಗೆ ಹತ್ತಿರದ ಪ್ರವೇಶಾಧಿಕಾರವುಳ್ಳವಳು. ಆಸ್ಕರ್ ಫರ್ನಾಂಡೀಸರು ಕೇಂದ್ರ ಸರಕಾರದ ಕಾರ್‍ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮಂತ್ರಿ. ಮಾರ್ಗರೇಟ್ ಆಳ್ವಾ ಮಹಾರಾಷ್ಟ್ರದಲ್ಲಿ ಭಯ ಹುಟ್ಟಿಸುವಂಥ ಹೆಗ್ಗಳಿಕೆಯವರು. ಕರ್ನಾಟಕವು ವಸ್ತುಶಃ ಎ.ಕೆ. ಆಂಟನಿಯವರ ನಿಯಂತ್ರಣದಲ್ಲಿದೆ; ಅವರ ಕಾರ್ಯದರ್ಶಿಗಳೆಲ್ಲ ದಕ್ಷಿಣ ಭಾರತದ ಕ್ರೈಸ್ತ ಸಂಘಟನೆಯಿಂದ ಬಂದವರು. ಹಿಂದೂ ದ್ವೇಷಿಯಾದ ವಾಲ್ಸನ್ ಥಂಪುವು ಎನ್‌ಸಿಇಆರ್‌ಟಿ (ನ್ಯಾಷನಲ್ ಕೌನ್ಸಿಲ್ ಫಾರ್ ಎಜುಕೇಷನಲ್ ರೀಸರ್ಚ್ ಅಂಡ್ ಟ್ರೈನಿಂಗ್) ಪಠ್ಯಕ್ರಮದ ವಿಮರ್ಶಾ ಸಮಿತಿಯ ಅಧ್ಯಕ್ಷ. ಹಿಂದೂ ಹಿಂಸಕನೆಂದೇ ಪ್ರಸಿದ್ಧನಾದ ಜಾನ್ ದಯಾಳ್ ಸೋನಿಯಾ ಗಾಂಧಿಯಿಂದ ರಾಷ್ಟ್ರೀಯ ಭಾವೈಕ್ಯತಾ ಸಮಿತಿಗೆ ನಾಮಕರಣಗೊಂಡವನು. ಹಿಂದೂ ದ್ವೇಷಿ ಕಾಂಚಾ ಎಲ್ಲಯ್ಯ ಅವರಿಗೆ ವಿಶ್ವಸಂಸ್ಥೆ ಮತ್ತು ಅಮೆರಿಕದ ಸಂಸತ್ತಿನಲ್ಲಿ ಭಾರತದಲ್ಲಿ ಜಾತಿ ಭೇದವಿರುವುದೆಂದೂ, ಅದನ್ನು ಈ ಸಂಸ್ಥೆಗಳು ಕೈಗೆತ್ತಿಕೊಳ್ಳಬೇಕೆಂದೂ ವಶೀಲಿ ಮಾಡಲು ಭಾರತ ಸರಕಾರವು ಅನುಮತಿ ಕೊಟ್ಟಿದೆ....
ಸೋನಿಯಾಗಾಂಧಿ ವಿರುದ್ಧ ನನಗೆ ವೈಯಕ್ತಿಕವಾಗಿ ಏನೂ ಕಹಿ ಭಾವನೆ ಇಲ್ಲ... ಆದರೆ ಆಕೆ ಅಧಿಕಾರದ ಅತ್ಯುನ್ನತ ಸ್ಥಾನದಲ್ಲಿ ತೊಡಗಿದಂದಿನಿಂದ ಕ್ರೈಸ್ತ ಮತಕ್ಕೆ ಪರಿವರ್ತನೆಗೊಳ್ಳುತ್ತಿರುವವರ ಸಂಖ್ಯೆ ನಾಗಾಲೋಟ ಹೊಡೆಯುತ್ತಿದೆ. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ವಿದೇಶಿ ಮಿಶನರಿಗಳು ಕ್ರೈಸ್ತ ಧರ್ಮ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯವು ಬಂದಾಗ ತ್ರಿಪುರದಲ್ಲಿ ಕ್ರೈಸ್ತರೇ ಇರಲಿಲ್ಲ; ಈಗ ಒಂದು ಲಕ್ಷ ಇಪ್ಪತ್ತು ಸಾವಿರವಿದ್ದಾರೆ. ೧೯೯೧ ರಿಂದ ಅವರ ಸಂಖ್ಯೆಯಲ್ಲಿ ಶೇ. ೯೦ ರಷ್ಟು ಹೆಚ್ಚಳವಾಗಿದೆ. ಅರುಣಾಚಲ ಪ್ರದೇಶದಲ್ಲಿ ಈ ಸಂಖ್ಯೆಯು ಇನ್ನೂ ಎದ್ದು ಹೊಡೆದು ಕಾಣುತ್ತದೆ. ೧೯೨೧ ರಲ್ಲಿ ೧೭೭೦ ಕ್ರೈಸ್ತರಿದ್ದದ್ದು, ಈಗ ಹನ್ನೆರಡು ಲಕ್ಷವಿದ್ದಾರೆ ; ಅಲ್ಲದೇ ೭೮೦ ಚರ್ಚುಗಳಿವೆ. ಆಂಧ್ರ ಪ್ರದೇಶದಲ್ಲಂತೂ ಹೊಸ ಹೊಸ ಚರ್ಚುಗಳು ಪ್ರತಿದಿನವೂ ದೂರದೂರದ ಹಳ್ಳಿಗಳಲ್ಲಿ ತಲೆ ಎತ್ತುತ್ತಿರುವುದು ಮಾತ್ರವಲ್ಲದೆ ತಿರುಪತಿಯಲ್ಲೂ ಕಟ್ಟುವ ಹುನ್ನಾರ ನಡೆದಿದೆ. ಈಶಾನ್ಯ ರಾಜ್ಯಗಳ ಮಿಜೋ, ಬೋಡೋಗಳಂಥ ಹಲವು ಚಳವಳಿಗಳು ಕ್ರೈಸ್ತ ಪ್ರಬಲವಾಗಿರುವುದು ಮಾತ್ರವಲ್ಲದೇ ಮಿಶನರಿಗಳ ಕುಮ್ಮಕ್ಕಿ ನಿಂದಲೇ ನಡೆಯುತ್ತಿವೆ...ಕಳೆದ ಎರಡು ದಶಕಗಳಲ್ಲಿ ಅಸ್ಸಾಮ್ ಮತ್ತು ಮಣಿಪುರಗಳಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನರು ದಂಗೆಯಿಂದ ಜೀವ ಕಳೆದುಕೊಂಡಿದ್ದಾರೆ....
ಸರಕಾರದ ಮಾಲೀಕತ್ವದಲ್ಲಿರುವ ಇಂಡಿಯನ್ ಏರ್ ಲೈನ್ಸ್‌ನವರು ದ್ವಾರಕಾ ಪೀಠದ ಸನ್ಯಾಸಿ ಅವಿಮುಕ್ತಾನಂದ ಸರಸ್ವತಿ ಅವರನ್ನು ಕೈಯಲ್ಲಿ ತನ್ನ ಸನ್ಯಾಸದ ಲಾಂಛನವಾದ ಒಂದು ದಂಡವನ್ನು ಹಿಡಿದುಕೊಂಡಿದ್ದರಿಂದ ವಿಮಾನದಿಂದ ಕೆಳಗಿಳಿಸಿದರು. ಅದೊಂದು ಸಣ್ಣ ಬಿದಿರು ತುಂಡು. ಸೋನಿಯಾಗಾಂಧಿಯಂಥ ವಿದೇಶಿಗೆ ರಾಷ್ಟ್ರದ ಪಟ್ಟ ಕಟ್ಟಿದ ಈ ದುರ್ಬಲ ದೇಶದಲ್ಲಲ್ಲದೇ ಇಂಥ ಘಟನೆ ಬೇರೆ ಯಾವ ದೇಶದಲ್ಲಿ ನಡೆಯಲು ಸಾಧ್ಯ?”
ನಾನು ಇಲ್ಲಿ ಫ್ರಾಂಕ್ವಾ ಗೋತಿಯೆ ಅವರ ಲೇಖನದ ಕೆಲವು ವಾಕ್ಯಗಳನ್ನಷ್ಟೇ ಉದ್ಧರಿಸಿದ್ದೇನೆ. (Francois Gautier:www.francoisgautier.com 09343538419/09442123255) .
ಕ್ರೈಸ್ತರ ಧರ್ಮಗುರು ಪೋಪ್ ಭಾರತಕ್ಕೆ ಭೇಟಿ ಕೊಟ್ಟಾಗ ಇಡೀ ಮಾಧ್ಯಮವು ಅದರಲ್ಲೂ ಇಂಗ್ಲಿಷ್ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳು ಎಷ್ಟೊಂದು ಸಂಭ್ರಮಪಟ್ಟವು ? ಸಂಭ್ರಮ ಸೃಷ್ಟಿಸಿದವು ! ಒಬ್ಬ ರಾಷ್ಟ್ರಾಧ್ಯಕ್ಷನಿಗೆ ಸಲ್ಲುವ ಸ್ವಾಗತವನ್ನು ಭಾರತ ಸರಕಾರವು ಸಲ್ಲಿಸಿತು. ಭಾರತದ ರಾಷ್ಟ್ರಾಧ್ಯಕ್ಷರು, ಪ್ರಧಾನಿಯಾದಿಯಾಗಿ ಮಂತ್ರಿ ಗಣವು ಸಾಲುಗಟ್ಟಿ ಅಭಿವಂದಿಸಿತು. ಇವರು ಭಾರತಕ್ಕೆ ಬರುತ್ತಿರುವುದು ನಮ್ಮ ಜನಗಳ ಮತ ಪರಿವರ್ತನೆಗೆ, ಈತನಿಗೆ ದೇಶದಲ್ಲಿ ಪ್ರವೇಶ ಕೊಡಕೂಡದು, ಕೊಟ್ಟರೂ ಸರ್ಕಾರದ ವತಿಯಿಂದ ಸ್ವಾಗತ ನೀಡಕೂಡದು ಎಂದು ಕೆಲವು ಹಿಂದೂ ಸಂಘಟನೆಗಳು ದನಿ ಎತ್ತಿದ್ದಕ್ಕೆ ಇಂಗ್ಲಿಷ್ ಮಾಧ್ಯಮಗಳು ಮತ್ತು ಪ್ರಗತಿಪರರೆಂದು ವೇಷ ಹಾಕುವ ಗುಂಪುಗಳು ಹಿಂದೂ ಮೂಲಭೂತವಾದಿಗಳೆಂದು ಬಾಯಿ ಬಡಿದುಕೊಂಡವು. ಆದರೂ ಈ ಪೋಪ್ ಮಹಾಶಯ ಮಾಡಿದ್ದೇನು? “ಮೊದಲನೆಯ ಸಹಸ್ರಮಾನದಲ್ಲಿ ಶಿಲುಬೆಯನ್ನು ಯೂರೋಪಿನ ನೆಲದಲ್ಲಿ ನೆಟ್ಟಂತೆ, ಎರಡನೆ ಸಹಸ್ರಮಾನದಲ್ಲಿ ಅಮೆರಿಕಗಳು ಮತ್ತು ಆಫ್ರಿಕದಲ್ಲಿ ನೆಟ್ಟಂತೆ, ಮೂರನೆಯ ಸಹಸ್ರಮಾನದಲ್ಲಿ ನಮ್ಮ ನಂಬಿಕೆಯ ಭಾರಿ ಫಸಲನ್ನು ಈ ದೊಡ್ಡ ಮತ್ತು ಸಶಕ್ತ ಖಂಡದಲ್ಲಿ (ಏಷ್ಯಾ) ತೆಗೆಯುತ್ತೇವೆ” ಎಂದು ರಾಜಾರೋಷವಾಗಿ ಘೋಷಿಸಿದರು. ಪೋಪರು ತಮ್ಮ ಉದ್ದೇಶದಲ್ಲಿ ಮುಚ್ಚು ಮರೆ ಮಾಡಲಿಲ್ಲ. ಆದರೆ ಹಿಂದೂ ಸಂಘಟನೆಗಳನ್ನು ಮೂಲಭೂತವಾದಿಗಳೆಂದು ಬಾಯಿ ಬಡಿದುಕೊಂಡಿದ್ದ ಮಾಧ್ಯಮದವರು ಮತ್ತು ಪ್ರಗತಿಶೀಲ ವೇಷಧಾರಿಗಳು ಸದ್ಯಕ್ಕೆ ಜಾಣ ಮೌನ ತಾಳಿದರು.
ಮೊದಲಿನಿಂದಲೂ ಕ್ರೈಸ್ತ ಮತದ ಸೋಂಕಿಲ್ಲದೆ ತಮ್ಮ ತಮ್ಮ ಮೂಲ ಮತಗಳನ್ನು ಅನುಸರಿಸಿಕೊಂಡು ಬದುಕುತ್ತಿದ್ದ ಈ ಕೆಳಕಂಡ ದೇಶಗಳು ಆಕ್ರಮಣಕಾರಿ ಮಿಶನರಿಗಳ ತಂತ್ರಗಳಿಂದ ಕ್ರೈಸ್ತರಾಗಿರುವ ಶೇಕಡವಾರು ಸಂಖ್ಯೆಯು ಈ ರೀತಿ ಇದೆ : ಅಂಗೋಲಾ ಶೇಕಡ ೯೦, ಬುರುಂಡಿ ಶೇಕಡ ೭೮, ಕೆಮರೂನ್ ಶೇಕಡ ೩೫, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ಶೇಕಡ ೮೨, ಚಾದ್ ಶೇಕಡ ೩೩, ಕಾಂಗೋ ಶೇಕಡ ೬೨, ಪೂರ್ವ ತೈಮೂರ್ ಶೇ.೯೮, ಇಥಿಯೋಪಿಯಾ ಶೇ.೫೨, ಈಕ್ವಟೋರಿಯಲ್‌ಗಿನಿ ಶೇ. ೯೪, ಗಬನ್ ಶೇ.೭೯, ಕೆನ್ಯ ಶೇ.೨೫, ಲೈಬೀರಿಯಾ ಶೇ.೬೮, ಮೊಸಾಂಬಿಕ್ ಶೇ.೩೧, ನೈಜೀರಿಯಾ ಶೇ.೫೨, ಪಾಪುವಾ ನ್ಯೂಗಿನೀ ಶೇ.೯೭, ಫಿಲಿಪ್ಪೀನ್ಸ್ ಶೇ.೮೪, ರುವಾಂಡ ಶೇ.೬೯, ದಕ್ಷಿಣ ಆಫ್ರಿಕ ಶೇ.೭೮, ದಕ್ಷಿಣ ಕೊರಿಯಾ ಶೇ.೪೯, ಸೂಡಾನ್ ಶೇ.೩೦, ತಾಂಜಾನಿಯಾ ಶೇ.೨೦, ಟೋಗೋ ಶೇ.೨೩, ಉಗಾಂಡಾ ಶೇ.೭೦, ಜೈರೆ ಶೇ.೯೦.
ಮಿಶನರಿ ಕೆಲಸಗಳಿಗೆ ಅಮೆರಿಕದಿಂದ (USA) ವರ್ಷಕ್ಕೆ ೧೪೫ ಬಿಲಿಯನ್ ಡಾಲರ್ ಹರಿದು ಬರುತ್ತದೆ. ಇಡೀ ಪ್ರಪಂಚದಲ್ಲಿ ಚರ್ಚುಗಳು ೧.೧ ಬಿಲಿಯನ್ ಡಾಲರ್‌ಗಳನ್ನು ಮತ ಪರಿವರ್ತನೆಯನ್ನು ಗುರಿಯಾಗಿಟ್ಟುಕೊಂಡ ಸಂಶೋಧನೆಗೆ ಖರ್ಚು ಮಾಡುತ್ತವೆ. ಇವುಗಳು ೩೦೦ ಭಾಷೆಗಳಲ್ಲಿ ೧೮೦ ವಿಷಯಗಳನ್ನು ಕುರಿತದ್ದಾಗಿರುತ್ತವೆ. ಪುಸ್ತಕ ಅಥವಾ ಲೇಖನಗಳು ೫೦೦ ಭಾಷೆಗಳಲ್ಲಿ ಪ್ರಕಟವಾಗುತ್ತವೆ. ಅವುಗಳ ಒಟ್ಟು ಸಂಖ್ಯೆ ೧೭೫೦೦೦. ಪ್ರತಿಯೊಬ್ಬ ವ್ಯಕ್ತಿಯ ಮತ ಪರಿವರ್ತನೆಗೂ ಒಟ್ಟು ೩,೩೦೦೦ ಡಾಲರ್‌ಗಳು ಖರ್ಚಾಗುತ್ತವೆ. ಈ ಮೊತ್ತವು ಪರಿವರ್ತಿತನಾಗುವವನಿಗೆ ಸೇರುತ್ತದೆಂದಲ್ಲ. ಪರಿವರ್ತನಾ ಚಟುವಟಿಕೆಗಳ ಆಡಳಿತ, ಯೋಜನೆ, ಕಾರ್ಯಾಚರಣೆ ಇವುಗಳ ಒಟ್ಟು ಲೆಕ್ಕದಲ್ಲಿ ಈ ಖರ್ಚನ್ನು ಲೆಕ್ಕ ಹಾಕಲಾಗಿದೆ. ಕ್ರಿ.ಶ. ೧೫೦೦ರಲ್ಲಿ ಮಿಶನರಿ ಕಾರ್ಯದಲ್ಲಿ ತೊಡಗಿಸಿಕೊಂಡ ಕ್ರೈಸ್ತರ ಸಂಖ್ಯೆ ಮೂವತ್ತು ಲಕ್ಷವಿತ್ತು.. ಈಗ ಅದು ೬೪.೮ ಕೋಟಿಯಾಗಿದೆ. ಅದರಲ್ಲಿ ಶೇ.೫೪ ಬಿಳಿಯೇತರರೇ ಆಗಿದ್ದಾರೆ. ಎಂದರೆ ಬಿಳಿಯೇತರರಿಗೆ ತರಬೇತಿ ಕೊಟ್ಟು, ಹಣ ಪ್ರಭಾವಗಳನ್ನು ಒದಗಿಸಿ ಮಿಶನರಿ ಕೆಲಸಗಳಲ್ಲಿ ತೊಡಗಿಸುವುದು ಈ ತಂತ್ರವಾಗಿದೆ. ಇದು ಬ್ರಿಟಿಷರ ಕಾಲದಲ್ಲಿ ಭಾರತೀಯರನ್ನು ಸೈನಿಕರಾಗಿ ನೇಮಿಸಿಕೊಂಡು ಸರಿಯಾದ ಸಂಬಳ ಸಾರಿಗೆ ಕೊಟ್ಟು ಭಾರತವನ್ನು ಆಳಲು ಬಳಸಿಕೊಳ್ಳುತ್ತಿದ್ದಂತೆ.
ಇದರಿಂದ ಯಾವ ಅಧ್ಯಾತ್ಮ ಸಾಧನೆಯಾಗುತ್ತದೆ? ಭಾರತೀಯರಿಗೆ ಇದು ಅರ್ಥವಾಗದ ಸಮಸ್ಯೆ. ಏಕೆಂದರೆ ಭಾರತೀಯರಿಗೆ ಅಧ್ಯಾತ್ಮವೆಂದರೆ ಕಾಡಿನ ಪರ್ಣಶಾಲೆಯಲ್ಲಿ, ಬೆಟ್ಟದ ಗುಹೆಗಳಲ್ಲಿ, ಹಿಮಾಲಯದ ಹೆಪ್ಪುಗಟ್ಟಿಸುವ ಎತ್ತರದಲ್ಲಿ ಕುಳಿತು ಅಂತರ್ಮುಖಿಯಾಗುವ ಸಾಧನೆ . ತನ್ನೊಳಗೆ ಬೆಳಕು ಸಾಧಿಸುವ ಮುನ್ನ ಅನ್ಯರಿಗೆ ಉಪದೇಶ ಮಾಡುವ ಅಧಿಕಾರವಿರುವುದಿಲ್ಲ. ಉಪದೇಶ ಮಾಡುವುದಾದರೂ ಏನನ್ನು? ಅಂತರ್ಮುಖಿಯಾಗು. ನಿನ್ನನ್ನು ನೀನು ಅರಿ. ಧರ್ಮವೆಂದರೆ ಈ ಅರಿವು. ಅದನ್ನು ವಿವರಿಸುವ ರೀತಿಗೆ ಜಿಜ್ಞಾಸೆ ಎಂದು ಹೆಸರು. ಆದರೆ ಕ್ರೈಸ್ತಮತದ ತಿರುಳಾಗಲಿ, ರೀತಿಯಾಗಲಿ ಅದಲ್ಲ.
ಕ್ರೈಸ್ತ ಮತವನ್ನು ಅರ್ಥಮಾಡಿಕೊಳ್ಳಬೇಕಾದರೆ ಸೆಮೆಟಕ್ ರಿಲಿಜನ್‌ಗಳ ಗುಣಲಕ್ಷಣಗಳನ್ನು ನಾವು ತಿಳಿಯಬೇಕು. ಇವುಗಳನ್ನು ಪ್ರವಾದಿ ಮತಗಳು (Prophetic Religions) ಎಂದು ಕೂಡ ಕರೆಯುತ್ತಾರೆ. ಎಂದರೆ ಈ ಮತಗಳು ಒಬ್ಬೊಬ್ಬ ಪ್ರವಾದಿಯಿಂದ ಸ್ಥಾಪಿತವಾದವು. ಪ್ರವಾದಿ ಅಬ್ರಹಾಮನಿಂದ ಸ್ಥಾಪಿತವಾದ ಎಹೂದಿ ಮತವು ಮೂಲ. ಅದರ ಪರಿವರ್ತಿತ ರೂಪವೇ ಏಸುವಿನಿಂದ ಸ್ಥಾಪಿತವಾದ ಕ್ರೈಸ್ತ ಮತ. ಅನಂತರ ಅದೇ ಅಬ್ರಹಾಮನ ಮತದ ಎಷ್ಟೋ ಗುಣಲಕ್ಷಣಗಳನ್ನು ಅಳವಡಿಸಿಕೊಂಡು ಪ್ರವಾದಿ ಮಹಮ್ಮದರಿಂದ ಸ್ಥಾಪಿತವಾದದ್ದು ಇಸ್ಲಾಂ. ಈ ಮೂರೂ ಪ್ರವಾದಿ ಮತಗಳಲ್ಲಿರುವ ಸಾಮಾನ್ಯ ಅಂಶವೆಂದರೆ : ದೇವರು ನಿಮಗೆ ನೇರವಾಗಿ ಲಭ್ಯನಲ್ಲ. ನೀವು ಮೂಲತಃ ಪಾಪಿಗಳು. ದೇವರು ಮಹಾ ಭಯಂಕರ, ಮಹಾಕ್ರೂರ ಶಿಕ್ಷೆಯನ್ನು ಮುಲಾಜಿಲ್ಲದೆ ಕೊಡುವವನು. ಪ್ರವಾದಿಯಾದ ನನ್ನನ್ನು ನಂಬಿ ನನ್ನ ಬೋಧೆಯಂತೆ ನಡೆದರೆ ನಿನಗೆ ಸತ್ತ ನಂತರ ಘೋರ ನರಕಕ್ಕೆ ಬೀಳುವುದನ್ನು ತಪ್ಪಿಸಿಕೊಳ್ಳುವ ಅವಕಾಶವುಂಟು. ಇಲ್ಲದಿದ್ದರೆ ಕೊನೆ ಇಲ್ಲದ ನೋವಿನ ನರಕ ಕಟ್ಟಿಟ್ಟದ್ದು. ನೀನು ನಂಬಬೇಕು. ಇತರರನ್ನು ನಂಬಿಸಬೇಕು. ಎಲ್ಲೆಲ್ಲಿಯೂ ಹೋಗಿ ಬಲ ಪ್ರಯೋಗವನ್ನಾದರೂ ಮಾಡಿ ನಂಬುವವರನ್ನು ಹೆಚ್ಚಿಸಬೇಕು. ಅದೇ ಧರ್ಮ, ಅದೇ ನೀತಿ. ನಂಬದವರನ್ನು ಹಿಂಸಿಸಿ ಕೊಲ್ಲುವ, ಗುಲಾಮರನ್ನಾಗಿ ತುಳಿದು ದುಡಿಸಿಕೊಳ್ಳುವ ವಿಧಾನವನ್ನು ಪ್ರವಾದಿ ಮಹಮದರು ಬೋಧಿಸಿದರು. ಈ ಬೋಧನೆಯು ಹಲವು ಕಡೆಗಳಲ್ಲಿ ಪ್ರಖರವಾಗಿ ಪ್ರಧಾನವಾಗಿ ಕುರಾನಿನ ಅವಿಭಾಜ್ಯ ಅಂಗವಾಗಿದೆ. ಅನ್ಯಮತಗಳ ದೇವರುಗಳನ್ನು ಯಾವ ಪ್ರವಾದಿಯೂ ಸಹಿಸುವುದಿಲ್ಲ. ನನ್ನ ‘ಆವರಣ’ ಕಾದಂಬರಿಯಲ್ಲಿ ಈ ಗುಣಲಕ್ಷಣಗಳನ್ನು ಚಿತ್ರಿಸಿದ್ದೇನೆ.
ಸಮರ್ಪಕ ಉತ್ತರ ಇಲ್ಲ
ಏಸುವೂ ಇಂಥ ಒಬ್ಬ ಪ್ರವಾದಿಯೇ.. ಆದರೆ ಅವನು ಪ್ರವಾದಿ ಅಬ್ರಹಾಮನ ಬೋಧನೆಗಿಂತ ಭಿನ್ನವಾದ ತಾಳ್ಮೆ ಮತ್ತು ಪ್ರೇಮವನ್ನು ಬೋಧಿಸಿದನೆಂದು ಪ್ರತೀತಿ. ವಾಸ್ತವವಾಗಿ ಏಸುವೆಂಬ ಒಬ್ಬ ವ್ಯಕ್ತಿ ಇದ್ದನೇ ಎಂಬ ಸಂಶಯವು ಸಂಶೋಧಕರಲ್ಲಿದೆ. ಇದ್ದಿದ್ದರೂ ಅವನು ಬೈಬಲಿನ ಹೊಸ ಒಡಂಬಡಿಕೆಯಲ್ಲಿ ಚಿತ್ರಿತವಾಗಿರುವಂತೆ ಇದ್ದನೇ? ಎಂಬ ಇನ್ನೊಂದು ಸಂಶಯವೂ ಪ್ರಬಲವಾಗಿದೆ. Dead Sea Scrolls ಸಂಶೋಧನೆಯಾದ ನಂತರ ಈ ಸಂಶಯವು ತುಂಬ ಗಟ್ಟಿಯಾಗಿದೆ. ವಾಸ್ತವವಾಗಿ ಕ್ರೈಸ್ತ ಧರ್ಮಕ್ಕೆ ಈಗಿರುವ ಸ್ವರೂಪವನ್ನು ಕೊಟ್ಟವನು ಚರ್ಚಿನ ಸ್ಥಾಪಕನಾದ ಪಾಲ್. ಅದು ಏನೇ ಇರಲಿ, ನೀವು ಬೈಬಲನ್ನು ನಂಬದಿದ್ದರೆ ನಿಮಗೆ ಮಹಾಘೋರ ನರಕವೇ ಗತಿ ಎಂಬ ವಿಷಯದಲ್ಲಿ ಬೈಬಲಿಗೂ ಕುರಾನಿಗೂ ವ್ಯತ್ಯಾಸವಿಲ್ಲ. ನಮ್ಮ ಏಸುವನ್ನು ಶಿಲುಬೆಗೆ ಏರಿಸಿದವರು ಎಹೂದಿಗಳು ಎಂಬ (ತಪ್ಪು) ಗ್ರಹಿಕೆಯಿಂದ ಆನಂತರ ಪ್ರಬಲರಾದ ಕ್ರೈಸ್ತರು, ಎಹೂದಿಗಳನ್ನು ಹಿಂಸಿಸತೊಡಗಿ, ಬಲವಂತ ಮತಾಂತರಗೊಳಿಸಿ, ಮತಾಂತರಕ್ಕೆ ಒಪ್ಪದವರನ್ನು ಮತ್ತಷ್ಟು ಹಿಂಸಿಸಿದ್ದರಿಂದ ಎಹೂದಿಗಳು ಬೇರೆಯವರನ್ನು ಮತಾಂತರಿಸಲು ಹೋಗಲಿಲ್ಲ. ಅಷ್ಟು ಮಾತ್ರವಲ್ಲ, ಆರಂಭ ಕಾಲದಿಂದಲೇ ಎಹೂದಿ ಧರ್ಮೀಯರು ಬೇರೆಯವರಿಂದ ಹಿಂಸೆಯನ್ನನುಭವಿಸಿದರು. ಇವತ್ತೂ ಅನುಭವಿಸುತ್ತಿದ್ದಾರೆ. ಹಿಟ್ಲರನು ಅರವತ್ತು ಲಕ್ಷ ಯಹೂದಿಗಳನ್ನು ಅನಿಲ ಕೋಣೆ (ಗ್ಯಾಸ್ ಚೇಂಬರ್)ಗಳಲ್ಲಿ ಕೊಲ್ಲುತ್ತಿದ್ದುದು ಆಗ ಪೋಪರಾಗಿದ್ದ ೧೨ನೇ ಪಯಸ್‌ಗೆ ಗೊತ್ತಿತ್ತು. ಪೋಪ್ ಪಯಸನು ‘ಹಿಟ್ಲರನ ಪೋಪ್’- ಎಂದೇ ಕುಖ್ಯಾತನಾಗಿದ್ದಾನೆ. ಅವರು ಮನಸ್ಸು ಮಾಡಿದ್ದರೆ ಕ್ರೈಸ್ತನಾದ ಹಿಟ್ಲರನಿಗೆ ಹೇಳಿ ಆ ಮಹಾಸಾಮೂಹಿಕ ಕೊಲೆಯನ್ನು ಸ್ವಲ್ಪಮಟ್ಟಿಗಾದರೂ ನಿಲ್ಲಿಸಬಹುದಿತ್ತು. ಆದರೆ ನಮ್ಮ ಏಸುವನ್ನು ಶಿಲುಬೆಗೆ ಏರಿಸಿದ ಆ ಜನಾಂಗದವರು ಸಾಯಲಿ ಎಂದು ಪೋಪರು ಸುಮ್ಮನಿದ್ದರು ಎಂಬ ಆಪಾದನೆಯು ಪ್ರಬಲವಾಗಿದೆ. ಅದಕ್ಕೆ ಕ್ರೈಸ್ತರು ಸಮರ್ಪಕ ಉತ್ತರ ಕೊಟ್ಟಿಲ್ಲ.
ಗೋವಾ ಇನ್‌ಕ್ವಿಸಿಶನ್ (Goa Inquisition)ಎಂದು ಕುಪ್ರಸಿದ್ಧವಾಗಿರುವ, ಮತಾಂತರಕ್ಕೆ ಒಪ್ಪದವರನ್ನು ಪೋರ್ಚ್‌ಗೀಸ್ ಪಾದ್ರಿಗಳು (೧೫೬೦ರಿಂದ ೧೮೧೭ರ ನಡುವಿನ ಇನ್ನೂರಐವತ್ತೆರಡು ವರ್ಷಗಳ ಅವಧಿಯಲ್ಲಿ) ಮಾಡುತ್ತಿದ್ದ ಕ್ರೂರ ಹಿಂಸೆಗಳ ವಿವರಗಳು ದಾಖಲಾಗಿವೆ. ಈ ಇನ್‌ಕ್ವಿಸಿಶನ್ ಕಾನೂನುಗಳು ೨೩೦ ಪುಟಗಳಷ್ಟು ದೊಡ್ಡದಾಗಿದ್ದವು. (Inquisition= ತನಿಖೆ, ಹಿಂಸಾತ್ಮಕ ತನಿಖೆ). ಸ್ಟಾಲಿನ್ ಮಾಡುತ್ತಿದ್ದ ಕ್ರೂರ ಹಿಂಸಾತ್ಮಕ ತನಿಖೆಯ ವಿಧಾನಗಳು ಕ್ರೈಸ್ತ inquisition ತನಿಖೆಗಳ ಮಾದರಿಯಿಂದ ಅಳವಡಿಸಿಕೊಂಡವು. ಗೋವಾದಲ್ಲಿ ಈ ತನಿಖೆಯನ್ನು ದೊಡ್ಡಮನೆ ಎಂಬಲ್ಲಿ ಕಿಟಕಿ ಬಾಗಿಲುಗಳನ್ನು ಮುಚ್ಚಿ ಮಾಡುತ್ತಿದ್ದರು. ಏಸುವನ್ನು ನಂಬುವುದಿಲ್ಲವೆಂದು ಹೇಳುವವನು ಸೈತಾನನ ಪ್ರಭಾವಕ್ಕೆ ಒಳಗಾದವನೇ ಇರಬೇಕು. ಶಿಕ್ಷೆಯಿಂದ ಅವನ ಬಾಯಿ ಬಿಡಿಸಬೇಕು, ಎಂದು ನಂಬದ ಗಂಡಸು, ಹೆಂಗಸು ಮತ್ತು ಮಕ್ಕಳನ್ನು ನಾನಾತರಹದ ಕ್ರೌರ್ಯಕ್ಕೆ ಒಳಪಡಿಸುತ್ತಿದ್ದರು. ರಾತ್ರಿಯ ನಿಶ್ಯಬ್ದದಲ್ಲಿ ಈ ಬಲಿಮಾನವರು ನೋವಿನಿಂದ ಚೀತ್ಕರಿಸುತ್ತಿದ್ದುದು ಕೇರಿಯ ಇತರರಿಗೂ ಕೇಳಿಸುತ್ತಿತ್ತು. ಅವರಿಗೆ ಚಾವಟಿಯಿಂದ ಬಾರಿಸುತ್ತಿದ್ದರು. ಅವರ ದೇಹದ ಅಂಗಗಳನ್ನು ಹರಿಯುತ್ತಿದ್ದರು. ಮುರಿಯುತ್ತಿದ್ದರು. ಕಣ್ಣು ರೆಪ್ಪೆಗಳನ್ನು ಕೀಳುತ್ತಿದ್ದರು. ಕೈ ಕಾಲುಗಳ ತುದಿಗಳನ್ನು ಸ್ವಲ್ಪಸ್ವಲ್ಪವಾಗಿ ಕತ್ತರಿಸುತ್ತಿದ್ದರು. ಇವೆಲ್ಲವನ್ನೂ ಆತನ (ಅವಳ) ಬಂಧುಗಳೆದುರಿಗೇ ಮಾಡುತ್ತಿದ್ದರು.
ಡೈಯಾಗೋ ಡಿ ಬೋರ್ಡೋ ಎಂಬ ಕ್ರೈಸ್ತ ಪೂಜಾರಿ ಮತ್ತು ಚರ್ಚುಗಳ ಪ್ರಾಂತ್ಯಾಧಿಕಾರಿ ಮಿಗ್ವೆಲ್‌ವಾಜ್ ಎಂಬುವವರು ಹಿಂದೂಗಳನ್ನು ಹಿಂಸಿಸುವ ೪೧ ಅಂಶಗಳ ಯೋಜನೆಯನ್ನು ಸಿದ್ಧಪಡಿಸಿದರು. ಈ ಯೋಜನೆಯಡಿಯಲ್ಲಿ ಗೋವಾದ ವೈಸ್‌ರಾಯ್ ಆಗಿದ್ದ ಅಂಟಾನೋಡಿ ನೊರೋನ್ಹಾನು ೧೫೬೬ರಲ್ಲಿ ಪೋರ್ಚುಗೀಸ್ ಆಳ್ವಿಕೆಯಲ್ಲಿದ್ದ ಇಡೀ ಪ್ರದೇಶಕ್ಕೆ ಅನ್ವಯವಾಗುವಂತೆ ಕೆಳಕಂಡ ಹುಕುಂ ಅನ್ನು ಜಾರಿ ಮಾಡಿದ. “ನಾನು ಈ ಮೂಲಕ ಹುಕುಂ ಮಾಡುವುದೇನೆಂದರೆ ನನ್ನ ದೊರೆಯ ಆಡಳಿತದಲ್ಲಿರುವ ಪ್ರದೇಶದಲ್ಲಿ ಯಾರೂ ಒಂದೂ ಹಿಂದೂ ದೇವಾಲಯವನ್ನು ಕಟ್ಟಕೂಡದು: ಈಗಾಗಲೇ ಕಟ್ಟಿರುವ ಯಾವ ದೇವಾಲಯದ ದುರಸ್ತಿಯನ್ನೂ ನನ್ನ ಅನುಮತಿ ಇಲ್ಲದೆ ಮಾಡಕೂಡದು. ಈ ಹುಕುಂ ಅನ್ನು ಉಲ್ಲಂಘಿಸಿದರೆ ಆ ದೇವಾಲಯಗಳನ್ನು ನಾಶಪಡಿಸಿ ಅವುಗಳಲ್ಲಿರುವ ವಸ್ತುಗಳನ್ನು ಪುಣ್ಯ ಕೆಲಸಗಳಿಗೆ ಬಳಸಿಕೊಳ್ಳಲಾಗುವುದು.”
ಇದಲ್ಲದೆ ಅವರು ಹುಕುಂ ಮಾಡಿದ ಇನ್ನೂ ಕೆಲವು ಉದಾಹರಣೆಗಳು: ಹಿಂದೂಗಳ ಮದುವೆಯಲ್ಲಿ ಯಾವ ವಾದ್ಯವನ್ನೂ ಬಾರಿಸಕೂಡದು. ವೀಳ್ಯಶಾಸ್ತ್ರದಲ್ಲಿ ಗಂಡು ಮತ್ತು ಹೆಣ್ಣಿನ ಯಾವ ಸಂಬಂಧಿಗಳನ್ನೂ ಕರೆಯಕೂಡದು. ಮದುವೆಯಲ್ಲಿ ಯಾರಿಗೂ ವೀಳ್ಯ ಕೊಡ ಕೂಡದು. ಹೂವು ಹಣ್ಣು ಅಡಕೆ ಮೊದಲಾದವನ್ನು ಹೆಣ್ಣು ಮತ್ತು ಗಂಡಿನ ಮನೆಗಳಿಗೆ ಕಳಿಸಬಾರದು. ಕುಲದೇವತೆಗಳ ಪೂಜೆ ಮಾಡಕೂಡದು: ಪದ್ಧತಿಯಂತೆ ಮದುವೆಗೆ ಮೊದಲು ಭತ್ತ ಕುಟ್ಟುವ , ಸಂಬಾರ ಪದಾರ್ಥಗಳನ್ನು ಪುಡಿ ಮಾಡುವುದಾಗಲಿ ಕೂಡದು: ಪೆಂಡಾಲ್ ಹಾಕಕೂಡದು. ಯಾರಾದರೂ ಸತ್ತಾಗ ವೈಕುಂಠ ಸಮಾರಾಧನೆ ಅಥವಾ ಗಣಾರಾಧನೆ ಮಾಡಕೂಡದು. ಸತ್ತ ಹನ್ನೆರಡನೆ ದಿನದ ಶಾಸ್ತ್ರವನ್ನು ಮಾಡಕೂಡದು. ಏಕಾದಶಿಯಂದು ಉಪವಾಸ ಮಾಡಕೂಡದು. ಹಿಂದೂ ಗಂಡಸರು ಯಾವತ್ತೂ ಪಂಚೆ ಉಡಕೂಡದು: ಹೆಂಗಸರು ರವಿಕೆ ತೊಡಕೂಡದು: ಮನೆಯ ಮುಂದಾಗಲಿ, ಹಿತ್ತಲಲ್ಲಾಗಲಿ, ತೋಟಗಳಲ್ಲಾಗಲಿ ಎಲ್ಲೂ ತುಳಸಿಯನ್ನು ಬೆಳೆಸಕೂಡದು. ಯಾರೂ ಹಿಂದೂ ಹೆಸರನ್ನಾಗಲಿ ಮನೆತನದ ಹೆಸರನ್ನಾಗಲಿ ಉಪಯೋಗಿಸಕೂಡದು.
೧೫೭೦ನೇ ಸೆಪ್ಟೆಂಬರ್ ೨೨ ರಂದು ಜಾರಿ ಮಾಡಿದ ಹುಕುಂ ಪ್ರಕಾರ ಕ್ರೈಸ್ತ ಧರ್ಮಕ್ಕೆ ಸೇರಿದ ಹಿಂದೂಗಳಿಗೆ ಹದಿನೈದು ವರ್ಷ ಕಾಲ ಸಮಸ್ತ ತೆರಿಗೆಗಳಿಂದಲೂ ವಿನಾಯಿತಿ ದೊರೆಯುತ್ತಿತ್ತು.
ಹೀಗೆಯೇ ಬರೆಯುತ್ತಾ ಹೋದರೆ ಈ ಸಣ್ಣ ಲೇಖನದಲ್ಲಿ ಸ್ಥಳ ಸಾಲುವುದಿಲ್ಲ. ಓದುಗರು A.K.PRIOLKAR ಅವರು ಬರೆದಿರುವ THE GOA INQUISITION (Voice of India. New Delhi) ಎಂಬ ಗ್ರಂಥವನ್ನು ಪೂರ್ತಿ ಓದಬೇಕು. ಈ ಗ್ರಂಥದ 79-80-81-82-83-84 ಪುಟಗಳ ಭರ್ತಿ ಮಿಶನರಿಗಳು ನಾಶ ಮಾಡಿದ ಹಿಂದೂ ದೇವಸ್ಥಾನಗಳ ಮತ್ತು ಅವುಗಳು ಇದ್ದ ಊರುಗಳ ಹೆಸರುಗಳಿವೆ. ಈ ಗ್ರಂಥದ ಕೊನೆಯಲ್ಲಿ ಸಮಕಾಲೀನ ಪೋರ್ಚುಗೀಸರೇ ಬರೆದ ಆಧಾರ ಗ್ರಂಥಗಳ ದೊಡ್ಡ ಪಟ್ಟಿಯೇ ಇದೆ. ಮತಾಂತರಕ್ಕೆ ಒಪ್ಪದವರಿಗೆ ಕೊಡುತ್ತಿದ್ದ ಕ್ರೂರ ಹಿಂಸೆ ಮತ್ತು ದೇವಾಲಯ ನಾಶಗಳಲ್ಲಿ ಈ ಕ್ರೈಸ್ತರಿಗೂ ಭಾರತದಲ್ಲಿ ಇದೇ ಕೆಲಸ ಮಾಡಿದ ಮುಸಲ್ಮಾನ ದೊರೆಗಳಿಗೂ ಯಾವ ವ್ಯತ್ಯಾಸವೂ ಇಲ್ಲ. ತಮ್ಮ ಧರ್ಮವನ್ನು ಬಿಡದೆ ಜೀವಿಸಲು ಗೋವೆಯ ಲಕ್ಷಾಂತರ ಜನರು ಪಕ್ಕದ ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳಗಳಿಗೆ ಓಡಿ ಹೋದರು. ಅವರೇ ಈಗ ತಮ್ಮನ್ನು ತಾವು ಕೊಂಕಣಿ ಹಿಂದೂಗಳೆಂದು ಗುರುತಿಸಿಕೊಳ್ಳುವವರು. ಬ್ರಾಹ್ಮಣರಲ್ಲಿ ಜಿಎಸ್‌ಬಿ (ಜಿಎಸ್‌ಬಿ = ಗೌಡ ಸಾರಸ್ವತ ಬ್ರಾಹ್ಮಣ) ಮತ್ತು ಸಾರಸ್ವತರೆಂದು ಪ್ರಸಿದ್ಧರಾದವರೂ ಹೀಗೆ ಓಡಿ ಬಂದು ತಮ್ಮ ಧರ್ಮ ಸಮೇತ ಜೀವ ಉಳಿಸಿಕೊಂಡವರ ವಂಶಜರು.
ಪ್ರಸಿದ್ಧ ಇತಿಹಾಸಕಾರ ಕೆ.ಎಂ.ಪಣಿಕ್ಕರ್ ಅವರು ತಮ್ಮ MALABAR AND THE PORTUGUESE ಎಂಬ ಗ್ರಂಥದ (VOICE OF INDIA, NEW DELHI 1997 RePrint) PORTUGUESE RELIGIOUS POLICY IN MALABAR ಎಂಬ ಹನ್ನೆರಡನೆ ಅಧ್ಯಾಯದಲ್ಲಿ ಬರೆಯುತ್ತಾರೆ: ಸಿರಿಯನ್ ಚರ್ಚಿನ ಕ್ರೈಸ್ತರನ್ನು ಮಲಬಾರಿನ ಹಿಂದೂ ರಾಜರು ಅವರ ಧರ್ಮಾಚರಣೆಗಳಲ್ಲಿ ಸ್ವಲ್ಪವೂ ತಲೆ ಹಾಕದೆ ಉದಾರವಾಗಿ ನಡೆಸಿಕೊಳ್ಳುತ್ತಿದ್ದರು. ಹಾಗೆಂದು ಪೋರ್ಚುಗೀಸ್ ಪ್ರವಾಸಿಗಳೇ ದಾಖಲಿಸಿದ್ದಾರೆ. ಆದರೆ ಈ ಭಾರತೀಯ ಸಿರಿಯನ್ ಕ್ರೈಸ್ತರು ತಮಗೊದಗಿದ ಮೊದಲ ಅವಕಾಶದಲ್ಲೇ ಹಿಂದೂ ರಾಜರಿಗೆ ತಾವು ಇಟ್ಟಿದ್ದ ನಿಷ್ಠೆಯನ್ನು ತಿರಸ್ಕರಿಸಿ ಪೋರ್ಚುಗಲ್ ರಾಜನ ಅಧಿಕಾರವನ್ನು ಸ್ವೀಕರಿಸಿರುವುದಾಗಿ ಘೋಷಿಸಿಕೊಂಡರು.... ತಮ್ಮಲ್ಲಿದ್ದ ಪುರಾತನ ದಾಖಲೆಗಳು ಮತ್ತು ಧರ್ಮ ಚಿಹ್ನೆಗಳನ್ನು ವಾಸ್ಕೊಡಗಾಮನಿಗೆ ಸಮರ್ಪಿಸಿದರು. ಅಲ್ಲದೆ ಹಿಂದೂ ರಾಜ್ಯಗಳನ್ನು ವಶಪಡಿಸಿಕೊಳ್ಳುವಂತೆಯೂ. ಅದಕ್ಕೆ ತಾವು ಸಹಾಯ ಮಾಡುವುದಾಗಿಯೂ ಅವನಿಗೆ ಸೂಚಿಸಿದರು. ಈ ಉದ್ದೇಶಕ್ಕಾಗಿ ಗ್ರಾಂಗನೂರಿನಲ್ಲಿ ಒಂದು ಕೋಟೆ ಕಟ್ಟುವಂತೆ ಆಹ್ವಾನಿಸಿದರು. ಕ್ರೈಸ್ತರಿಗೆ ತಾವು ತೋರಿಸಿದ ಔದಾರ್ಯ ಮತ್ತು ದಯೆಗೆ ಹಿಂದೂ ರಾಜರುಗಳು ಪಡೆದ ಪ್ರತಿಫಲ ಇದು. ಕೊಚಿನ್‌ನ ಹಿಂದೂ ರಾಜನನ್ನೇ ಮತ ಪರಿವರ್ತನೆ ಮಾಡುವಂತೆ ಪೋರ್ಚುಗಲ್‌ನ ವೈಸರಾಯಿಗೆ ಆದೇಶ ಮಾಡಲಾಯಿತು.
ಟಿಪ್ಪಣಿ ಮಾಡುವ ಅಗತ್ಯವಿಲ್ಲ
ಚರ್ಚು ತನ್ನ ಮತ ವಿಸ್ತರಣೆಯ ವಿಧಾನದಲ್ಲಿ ಕ್ರೌರ್ಯವನ್ನು ಕಡಿಮೆ ಮಾಡಿಕೊಂಡದ್ದಕ್ಕೆ ಪ್ರಮುಖ ಕಾರಣವೆಂದರೆ ಯೂರೋಪಿನಲ್ಲಿ ನವೋದಯ ಉಂಟಾಗಿ ವಿಜ್ಞಾನ ತಂತ್ರಜ್ಞಾನಗಳ ಬೆಳವಣಿಗೆಯಾಗಿ ಯೂರೋಪಿನ ಹಲವು ರಾಜ್ಯಗಳು ಹೊಸ ಭೂಮಿಗಳನ್ನು ಆಕ್ರಮಿಸಿ ಸಾಮ್ರಾಜ್ಯ ಸ್ಥಾಪನೆ ಮಾಡತೊಡಗಿ ಧರ್ಮವೆಂದರೆ ಚರ್ಚಿನ ಧರ್ಮವೊಂದೇ ಅಲ್ಲ, ಪ್ರಪಂಚದಲ್ಲಿ ಬೇರೆ ಬೇರೆ ನಂಬಿಕೆಗಳಿವೆ ಎಂಬ ತಿಳಿವಳಿಕೆಯು ಮೇಲುವರ್ಗದವರಲ್ಲಿ ಉಂಟಾದದ್ದು . ಚರ್ಚಿನ ಅಧಿಕಾರಕ್ಕೆ ಸವಾಲು ಹಾಕಿದ ರಾಜ್ಯಶಕ್ತಿಗಳು ಪ್ರೊಟೆಸ್ಟೆಂಟ್ ಧರ್ಮವನ್ನು ಆರಂಭಿಸಿದವು. ಆಧುನಿಕ ಭೌತಶಾಸ್ತ್ರ, ಜೀವಶಾಸ್ತ್ರ ಮತ್ತು ಸಮಾಜಶಾಸ್ತ್ರಗಳ ಉದಯವಾಗಿ ಚರ್ಚಿನ ಕಂದಾಚಾರಗಳನ್ನು ಜನರು ತಿರಸ್ಕರಿಸತೊಡಗಿದರು. ತನ್ನ ಉಳಿವಿಗಾಗಿ ಚರ್ಚು ಈ ಹೊಸ ಚಿಂತನೆಗಳನ್ನು ತನ್ನ ಹಳೆಯ ನಂಬಿಕೆಗಳಿಂದ ಉದ್ಭವಿಸಿದ ವಿಚಾರಗಳೇ ಎಂಬಂತೆ ಬಿಂಬಿಸತೊಡಗಿತು. Christian Science ಎಂಬ ಹೊಸ ನಾಮಕರಣವನ್ನು ಮಾಡಿತು. ವಿಜ್ಞಾನವೇ ಬೇರೆ, Faith ಬೇರೆ. ವಿಜ್ಞಾನದ ವಿಧಾನಗಳಿಂದ Faith ಅನ್ನು ಅಳೆಯುವುದಾಗಲಿ, ತಿರಸ್ಕರಿಸುವುದಾಗಲಿ ಸಲ್ಲದು ಎಂಬ ವಾದವನ್ನು ಮುಂದೆ ಮಾಡಿತು.
ಸಮಸ್ತ ಭಾರತದಲ್ಲಿ ಸಾಮ್ರಾಜ್ಯವನ್ನು ಕಟ್ಟಿದ ಬ್ರಿಟಿಷರು ರೋಮಿನ ವ್ಯಾಟಿಕನ್‌ನಿಂದ ಸ್ವತಂತ್ರವಾದ Church of England ಅನ್ನು ಸ್ಥಾಪಿಸಿಕೊಂಡವರು. ಭಾರತದ ಧರ್ಮಗಳನ್ನು ನೇರವಾಗಿ ಕೆಣಕಿ ತಮ್ಮ ಸಾಮ್ರಾಜ್ಯವನ್ನು ಅಸ್ಥಿರಗೊಳಿಸಿಕೊಳ್ಳಲು ಅವರು ಸಿದ್ಧರಿರಲಿಲ್ಲ. ಆದ್ದರಿಂದ ತೋರಿಕೆಗಾದರೂ ಮಿಶನರಿಗಳಿಗಿಂತ ಸರ್ಕಾರವು ಭಿನ್ನವೆಂಬ ನಿಲುವನ್ನು ಅಳವಡಿಸಿಕೊಂಡರು. ಆದರೆ ಒಂದು ಹಂತದಲ್ಲಿ ಮಿಶನರಿಗಳಿಗೂ ಬ್ರಿಟಿಷರಿಗೂ ಒಂದೇ ಗುರಿ, ಒಂದೇ ಉದ್ದೇಶವಿತ್ತು. ಭಾರತೀಯರ ಭಾರತೀಯತೆಯನ್ನು ನಾಶಪಡಿಸಿದರೆ ತಮ್ಮ ಸಾಮ್ರಾಜ್ಯವನ್ನು ವಿರೋಧಿಸುವ ಅವರ ಶಕ್ತಿಯು ಉಡುಗುತ್ತದೆಂದು ಅವರು ಆಲೋಚಿಸಿ ನಿರ್ಧರಿಸಿದರು. ಮೆಕಾಲೆಯ ವಿದ್ಯಾಭ್ಯಾಸ ನೀತಿ, ಆರ್ಯರು ಹೊರಗಿನಿಂದ ಬಂದವರೆಂಬ ಸಿದ್ಧಾಂತ, ಭಾರತದ ಇತಿಹಾಸ ವ್ಯಾಖ್ಯಾನ, ವರ್ಣಾಶ್ರಮದ ವ್ಯಾಖ್ಯಾನ, ಸಮಾಜಶಾಸ್ತ್ರದ ವಿಶ್ಲೇಷಣೆ, ಸೆನ್ಸಸ್ ನೀತಿ, ಬೌದ್ಧರು, ಜೈನರು, ಸಿಖ್ಖರು, ಹಿಂದೂಗಳಲ್ಲವೆಂಬ ಸಿದ್ಧಾಂತ, ಆರ್ಯ ದ್ರಾವಿಡ ಸಿದ್ಧಾಂತ, ಮುಸ್ಲಿಮರ ಪ್ರತ್ಯೇಕತಾಭಾವದ ಪೋಷಣೆ ಮೊದಲಾದ ವಿಘಟನಾತ್ಮಕ ವ್ಯಾಖ್ಯಾನವನ್ನು ಸಿದ್ಧಪಡಿಸಿ ವಿಶ್ವವಿದ್ಯಾಲಯಗಳಲ್ಲಿ, ಪಠ್ಯಗಳಲ್ಲಿ ಪ್ರಚುರಪಡಿಸಿ ಭಾರತದ ಹೊಸ ತಳಿಗಳಲ್ಲಿ ಬಿತ್ತಿ ಬೆಳೆಸಿದರು. ಇವೆಲ್ಲವನ್ನೂ ಮಿಶನರಿಗಳು ಬಳಸಿಕೊಂಡದ್ದಲ್ಲದೆ, ಹಿಂದೂ ದೇವ ದೇವತೆಗಳನ್ನು ಅಪವ್ಯಾಖ್ಯಾನಿಸಿ ಇಡೀ ಹಿಂದೂ ಧರ್ಮವನ್ನು ಹೀಗಳೆಯುವ ಕೆಲಸವನ್ನು ಮಾಡುವ ಮೂಲಕ ಮತ ಪರಿವರ್ತನೆಯನ್ನು ಸುಲಭ ಮಾಡಿಕೊಂಡರು. ಅಷ್ಟರಲ್ಲಿ ಮಿಶನರಿಗಳು ಮತ ಪರಿವರ್ತನೆಯ ಅಸ್ತ್ರವಾಗಿ ಬೆಳೆಸಿಕೊಂಡಿದ್ದ ಶಾಲೆ, ಕಾಲೇಜುಗಳು ಮತ್ತು ಆಸ್ಪತ್ರೆಗಳಿಗೆ ಅವರು ಕೇಳಿದ ಕಡೆ, ಕೇಳಿದಷ್ಟು ಜಾಗಗಳನ್ನು ಕೊಡುತ್ತಾ, ದೇಶಿ ರಾಜರುಗಳಿಂದ ಕೊಡಿಸುತ್ತಾ, ಅಲೋಪತಿ ಚಿಕಿತ್ಸೆಯ ಮುಖ್ಯ ವಾಹಕರನ್ನಾಗಿ ಅವರನ್ನು ಬಿಂಬಿಸುತ್ತಾ ಪ್ರೋತ್ಸಾಹಿಸಿದರು. ಕ್ರೈಸ್ತರಾಗಿ ಮತ ಪರಿವರ್ತಿತರಾದವರಿಗೆ ನೌಕರಿ ಮತ್ತು ಬಡ್ತಿಗಳಲ್ಲೂ ಆದ್ಯತೆ ಕೊಡತೊಡಗಿದರು. ಪರಿವರ್ತಿತರಾದವರು ಬೇರೆಯವರಿಗಿಂತ ಕೆಂಪು ದೊರೆಗಳಿಗೆ ಹೆಚ್ಚು ನಿಷ್ಠರಾಗಿರುವಂತೆ ಚರ್ಚು ಮತ್ತು ಆಡಳಿತ ಎರಡೂ ನೋಡಿಕೊಂಡವು. ಅಚಾರ ವಿಚಾರ, ವೇಷ, ಊಟದ ರೀತಿ, ಜೀವನ ಶೈಲಿ ಮೊದಲಾದ ಎಲ್ಲ ವಿಧಗಳಲ್ಲೂ ಅವರು ಬ್ರಿಟಿಷರ ರೀತಿಯಲ್ಲೇ ಇರುವಂತೆ, ಬೆಳೆಯುವಂತೆ ಚರ್ಚು ಮಾಡಿತು. ಎಂಥೆಂಥ ವಿದ್ಯಾಸಂಸ್ಥೆಗಳನ್ನು, ಆಸ್ಪತ್ರೆಗಳನ್ನು ಅವರು ಕಟ್ಟಿದರು! ಎಂದು ನಮ್ಮ ಎಷ್ಟೋ ಜನರು ಮೆಚ್ಚುಗೆಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡದ್ದನ್ನು ನಾನೇ ನೋಡಿದ್ದೇನೆ (ಈಗ ನಮ್ಮವರೂ ಅವಕ್ಕಿಂತ ದೊಡ್ಡ ಸಂಸ್ಥೆಗಳನ್ನು ಕಟ್ಟಿದ್ದಾರೆ. ಕಟ್ಟುತ್ತಿದ್ದಾರೆ). ಆದರೆ ಒಂದು ಅಂಶವನ್ನು ಮಾತ್ರ ನಾವು ಮರೆಯಬಾರದು. ಅವರ ವೈದ್ಯಕೀಯ ಕಾಲೇಜುಗಳ ಬಹುಭಾಗ ಸೌಲಭ್ಯಗಳನ್ನು ಬಳಸುತ್ತಿದ್ದುದು, ಈಗಲೂ ಬಳಸುತ್ತಿರುವುದು ಕ್ರೈಸ್ತರಿಗೆ ವೈದ್ಯಕೀಯ ತರಬೇತಿ ಕೊಡುವುದಕ್ಕೆ, ವಿಶೇಷ ಪರಿಣತಿಗಳಲ್ಲಿ ಅವರನ್ನು ಮುಂದೆ ತರುವುದಕ್ಕೆ. ಈ ಸಂಸ್ಥೆಗಳನ್ನು ಕಟ್ಟಲು ಅವರಿಗೆ ದೊರೆತ ಸೌಲಭ್ಯಗಳನ್ನು ಹೋಲುವ ಒಂದು ಉದಾಹರಣೆಯನ್ನು ಇಲ್ಲಿ ಕೊಡಬಹುದು. ಎಂಥ ಗೊಂಡಾರಣ್ಯಗಳನ್ನು ಕಡಿದು ಕಾಫಿ ತೋಟಗಳನ್ನಾಗಿ ಪರಿವರ್ತಿಸಿದ ಇಂಗ್ಲಿಷ್ ರ ಸಾಹಸ ನಮ್ಮವರಿಗೆ ಎಲ್ಲಿಂದ ಬರಬೇಕು! ಎಂದು ಅವರನ್ನು ಹೊಗಳುತ್ತಿದ್ದ ಮಾತನ್ನು ಚಿಕ್ಕ ಹುಡುಗನಲ್ಲಿ ನಾನು ಕೇಳಿದ್ದೇನೆ. ಆನಂತರ ಒಬ್ಬ ನಿವೃತ್ತ ಹಿರಿಯ ಕಂದಾಯ ಅಧಿಕಾರಿಯು ನನಗೆ ವಿವರಿಸಿದರು: ಬೆಂಗಳೂರಿನಲ್ಲಿರುತ್ತಿದ್ದ ಬ್ರಿಟಿಷ್ ರೆಸಿಡೆಂಟರಿಂದ ಸಂಸ್ಥಾನದ ಸರಕಾರಕ್ಕೆ ಇಂತಿಂಥವರಿಗೆ ಕಾಫಿ ತೋಟಕ್ಕೆ ಜಮೀನು ಕೊಡಿ ಎಂದು ಸೂಚನೆ ಹೋಗುತ್ತಿತ್ತು. ಸೂಚನೆ ಎಂದರೆ ವಸ್ತುಶಃ ಹುಕುಂ. ಅದು ಜಿಲ್ಲಾಧಿಕಾರಿಯ ಮೂಲಕ ತಾಲೂಕಿನ ಅಮಲ್ದಾರರಿಗೆ ತಲುಪಿ ಅವರು ಒಬ್ಬ ರೆವಿನ್ಯೂ ಇನ್ಸ್‌ಪೆಕ್ಟರನ್ನು ಕಳಿಸುತ್ತಿದ್ದರು. ಈ ರೆವಿನ್ಯೂ ಇನ್ಸ್‌ಪೆಕ್ಟರೊಡನೆ ಕುದುರೆ ಏರಿದ ಬಿಳಿಯ ದೊರೆಯು (ಆಗ ಬಿಳಿಯರನ್ನೆಲ್ಲ ದೊರೆ ಎಂದೇ ಕರೆಯುತ್ತಿದ್ದುದು) ಒಂದು ಗುಡ್ಡದ ನೆತ್ತಿಯನ್ನೇರಿ ನಿಂತು ವೃತ್ತಾಕಾರದಲ್ಲಿ ಬೆರಳು ತೋರಿಸಿ ಇಷ್ಟು ಭೂಮಿ ಬೇಕು ಎನ್ನುತ್ತಿದ್ದ. ಈ ರೆವಿನ್ಯೂ ಅಧಿಕಾರಿ ವಿನಯದಿಂದ ತಲೆಬಾಗಿ ಆ ವಿಶಾಲ ವೃತ್ತಾಕಾರವನ್ನು ಅಳತೆ ಮಾಡಿಸಿ ಮೇಲಧಿಕಾರಿಗಳಿಗೆ ವರದಿ ಮಾಡುತ್ತಿದ್ದ. ಒಂದು ವಾರದಲ್ಲಿ ಸಾವಿರಾರು ಎಕರೆ ಕಾಡು ಆ ದೊರೆಗೆ ಮಂಜೂರಾಗುತ್ತಿತ್ತು. ಸ್ಥಳೀಯರನ್ನು ಕೂಲಿಗಳಾಗಿ ನೇಮಿಸಿಕೊಂಡು ದೊರೆಯು ಕಾಡಿನ ತೇಗ, ಬೀಟೆ, ಮತ್ತಿ ಮೊದಲಾದ ಹೆಮ್ಮರಗಳನ್ನು ಕಡಿಸಿ ಮಾರಿ ಹಣ ಮಾಡಿಕೊಂಡು ಅದೇ ಹಣವನ್ನು ಕಾಫಿ ತೋಟ ಮಾಡಲು ಬಳಸಿಕೊಳ್ಳುತ್ತಿದ್ದ. ಜತೆಗೆ ಬ್ರಿಟಿಷ್ ಮಾಲೀಕತ್ವದ ಇಂಪೀರಿಯಲ್ ಬ್ಯಾಂಕ್ ಅಂಥ ದೊರೆಗಳಿಗೆ ಕಾಫಿ ಬೆಳೆ ಬರುವವರೆಗೆ ಬಡ್ಡಿ ರಹಿತ, ಬೆಳೆ ಶುರುವಾದ ನಂತರ ಶೇಕಡಾ ಒಂದರಂತೆ ಬಡ್ಡಿ ಸಹಿತ ಸಾಲ ಕೊಡುತ್ತಿತ್ತು. ಒಬ್ಬೊಬ್ಬ ದೊರೆಯೂ ಸಾವಿರಾರು ಎಕರೆ ಕಾಫಿ ತೋಟದ ಒಡೆಯನಾಗಿ ಗುಡ್ಡದ ನೆತ್ತಿಯ ಮೇಲೆ ಇಂಗ್ಲಿಷ್ ಶೈಲಿಯ ಬಂಗಲೆ ಕಟ್ಟಿಸಿಕೊಳ್ಳುತ್ತಿದ್ದ. ಎಂಥ ಸಾಹಸ ! ಭಾರತೀಯ ಹೇಡಿಗಳಿಗೆ ಎಲ್ಲಿಂದ ಬರಬೇಕು, ಈ ಸಾಹಸ ! ಆಗ ಸಕಲೇಶಪುರದಲ್ಲಿದ್ದ ಪ್ಲಾಂಟರ್ಸ್ ಅಸೋಸಿಯೇಶನ್ ಕಟ್ಟಡದ ಬಾಗಿಲಿನಲ್ಲಿ “ಸ್ಥಳೀಯರಿಗೂ ನಾಯಿಗಳಿಗೂ ಪ್ರವೇಶ ಇಲ್ಲ” ಎಂಬ ಬೋರ್ಡ್ ಇತ್ತೆಂದು ಈಗಲೂ ಹೇಳುತ್ತಾರೆ.
ಮರಳುಗಾಡಿನಲ್ಲಿ ಜನ್ಮ ತಳೆದ ಈ ಮೂರು ಪ್ರವಾದಿ ಮತಗಳಿಗೂ ಭಾರತದಲ್ಲಿ ಹುಟ್ಟಿದ ಧರ್ಮಕ್ಕೂ ಒಂದು ಮೂಲಭೂತ ವ್ಯತ್ಯಾಸವಿದೆ. ಪ್ರತಿಯೊಬ್ಬ ಪ್ರವಾದಿಯೂ ನಾನು ಹೇಳುವುದೇ ಪರಮ ಸತ್ಯ. ; ನನ್ನ ಮೂಲಕವೇ ದೈವವಾಣಿಯು ಅಭಿವ್ಯಕ್ತವಾಗಿದೆ. ನೀವು ಅದಕ್ಕೆ ಎಂದರೆ ನನಗೆ, ಸಮರ್ಪಿಸಿಕೊಳ್ಳದಿದ್ದರೆ ನರಕವೇ ಗತಿ. ಅಷ್ಟು ಮಾತ್ರವಲ್ಲ. ಅದನ್ನು ಹಿಂಸೆಯನ್ನಾದರೂ ಪ್ರಯೋಗಿಸಿ ಪ್ರಪಂಚದಲ್ಲೆಲ್ಲ ವಿಸ್ತರಿಸುವುದು ನಿಮ್ಮ ಮತ ನಿಷ್ಠೆಯ ಮೂಲ ಗುಣ, ಆದ್ಯ ಕರ್ತವ್ಯ ಎಂದು ಬೋಧಿಸುತ್ತಾನೆ. ಪ್ರವಾದಿ ಮತವು ಮೂಲತಃ ಮತಾಂಧವಾದದ್ದು. ಭಾರತ ಧರ್ಮದ ಅತ್ಯಂತ ಪ್ರಾಚೀನ ಅಭಿವ್ಯಕ್ತಿಯಾದ ವೇದದ ಬಹುಮುಖ್ಯವಾದ ಬೋಧೆ, ಏಕಂ ಸತ್ ವಿಪ್ರಾಃ ಬಹುಧಾ ವದಂತಿ. ಸತ್ ಎಂಬುದು ಒಂದೇ. ತಿಳಿದವರು ಅದನ್ನು ಹಲವು ವಿಧಗಳಲ್ಲಿ ಹೇಳುತ್ತಾರೆ ಎಂಬ ಅತ್ಯಂತ ಮುಕ್ತ ಕಲ್ಪನೆಯು ಆನಂತರ ಕವಲೊಡೆದ ಎಲ್ಲ ವಾಹಿನಿಗಳಲ್ಲೂ ವ್ಯಕ್ತವಾಗಿದೆ. ಜೈನ ಜಿಜ್ಞಾಸೆಯಲ್ಲಿ ಸ್ಯಾದ್ವಾದ (ಸ್ಯಾತ್=ಬಹುದು, ಇರಬಹುದು, may be) ಎಂಬುದು ಬಹು ಮುಖ್ಯವಾದ ತತ್ತ್ವ. ಯಾವುದನ್ನೂ ಇದೇ ಪರಮಸತ್ಯವೆಂದು ಹಟ ಹಿಡಿಯಬಾರದು. ಯಾವ ವಿಚಾರವಾಗಲಿ, ನಾನು ಹೇಳುತ್ತಿರುವುದನ್ನೂ ಸೇರಿಸಿ, ಇರಬಹುದು. ಅದರ ವಿರುದ್ಧವಾದುದೂ ಇರಬಹುದು. ಇವೆರಡೂ ಏಕಕಾಲದಲ್ಲಿ ಇರಬಹುದು. ಹೀಗೆ ಅವರು ಏಕಕಾಲದಲ್ಲಿ ಏಳು ಬಗೆಯ ಸಾಧ್ಯತೆಗಳನ್ನು ಗುರುತಿಸುತ್ತಾರೆ. ಇದು ವೇದದ ಏಕಂ ಸತ್ ವಿಪ್ರಾಃ ಬಹುಧಾ ವದಂತಿ ಎಂಬ ದೃಷ್ಟಿಯ ಬೇರೊಂದು ಉಕ್ತಿ. ಭಾರತೀಯ ದರ್ಶನಗಳೆಲ್ಲವೂ ತರ್ಕವನ್ನು ಒಪ್ಪಿಕೊಂಡವು. ವಾದ ವಿವಾದಗಳನ್ನು ಮಾನ್ಯ ಮಾಡಿದವು. ಹೀಗಾಗಿ ಇಲ್ಲಿ ಪ್ರವಾದಿ ಮತದ ಮೂಲ ಬೇರಾದ ಮತಾಂಧತೆಗೆ ಅವಕಾಶವಾಗಲಿಲ್ಲ. ವೇದ ಮತ್ತು ಉಪನಿಷತ್ತುಗಳ ಋಷಿಗಳಾರೂ ಪ್ರವಾದಿಗಳಲ್ಲ. ಬೆಲ್ಜಿಯಂ ದೇಶದ ಕಾನ್ರಾಡ್ ಎಲ್ಸ್ಟ್ (KOENRAAD ELST) ಎಂಬ ತೌಲನಿಕ ಮತಧರ್ಮಗಳ ವಿದ್ವಾಂಸನು PSYCHOLOGY OF PROPHETISM ಎಂಬ ತನ್ನ ಗ್ರಂಥದ ಕೊನೆಯ ಅಧ್ಯಾಯದಲ್ಲಿ “ಪ್ರವಾದಿಗಳು ತಮ್ಮ ಬಗೆಗೇ ತುಂಬ ಹೇಳಿಕೊಳ್ಳುತ್ತಾರೆ. ತಾವು ವಿಶೇಷವಾದ ವ್ಯಕ್ತಿಗಳು, ತಮಗೂ ಸೃಷ್ಟಿಕರ್ತನಿಗೂ ಬೇರಾರಿಗೂ ಇಲ್ಲದ ವಿಶೇಷ ಸಂಬಂಧವುಂಟೆಂದು ಭಾವಿಸುತ್ತಾರೆ. ಋಷಿಗಳಾದರೋ ವಿಶ್ವಾತ್ಮಕ ಸತ್ಯವನ್ನು ಮಾತ್ರ ಹೇಳುತ್ತಾರೆ. ಸತ್ಯವು ಚೇತನದ ಒಂದು ವಿಶೇಷ ಸ್ಥಿತಿಯಲ್ಲಿ ಅರಿಯಬಹುದಾದದ್ದು. ಆ ಸ್ಥಿತಿಯನ್ನು ನಾವು ನೀವೆಲ್ಲ ಸಾಧನೆಯಿಂದ ಪಡೆಯಬಹುದು” ಎನ್ನುತ್ತಾರೆ. ಕಾನ್ರಾಡ್ ಎಲ್ಸ್ಟ್ ಅವರ ಈ ಪುಸ್ತಕವನ್ನು ಈ ವಿಷಯದಲ್ಲಿ ಗಂಭೀರ ಆಸಕ್ತಿ ಇರುವ ಪ್ರತಿಯೊಬ್ಬರೂ ಓದಬೇಕು. ಬೌದ್ಧ ಧರ್ಮವನ್ನು ಬೋಧಿಸಿದ ಬುದ್ಧನು ಪ್ರವಾದಿಯಲ್ಲ; ಋಷಿ. ಉಪನಿಷತ್ ಯುಗದ ಧರ್ಮ ಜಿಜ್ಞಾಸೆಗೆ ತೊಡಗಿದ ಮಹರ್ಷಿ. ಅವನ ಕಾಣ್ಕೆಯು ಉಪನಿಷತ್ತುಗಳಿಗೆ ವಿರೋಧವಾಗಿಲ್ಲ. ಈ ಬಗೆಗೆ R.D. RANADE ಯವರ A Constructive Survey of the Upanishadic Philosophy ಎಂಬ ಗ್ರಂಥದ ನಾಲ್ಕನೆ ಪ್ರಕರಣ, ಎರಡನೆ ವಿಭಾಗವನ್ನು ನೋಡಬೇಕು. ಈ ಪುಸ್ತಕದ ಕನ್ನಡಾನುವಾದವನ್ನು ಆರ್.ಆರ್. ದಿವಾಕರ, ದ.ರಾ.ಬೇಂದ್ರೆ ಮತ್ತು ಶಂಬಾ ಜೋಷಿಯವರು ಜೊತೆಗೂಡಿ ಮಾಡಿ ಮೂಲ ಇಂಗ್ಲಿಷ್ ಕೃತಿಯು ಪ್ರಕಟವಾದ ಎರಡು ವರ್ಷದೊಳಗೆ ಪ್ರಕಟಿಸಿದರು. ನನ್ನಲ್ಲಿರುವುದು ೨೦೦೪ರಲ್ಲಿ ಗುರುದೇವ ರಾನಡೆ ಸಮಾಧಿ ಟ್ರಸ್ಟ್, ನಿಂಬಾಳ, ವಿಜಾಪುರ ಜಿಲ್ಲೆ ಅವರು ಪ್ರಕಟಿಸಿರುವ ನಾಲ್ಕನೆಯ ಆವೃತ್ತಿಯ ಕನ್ನಡ ಪ್ರತಿ. ವೈದಿಕ ವಾಹಿನಿಯಾಗಲಿ, ಜೈನ, ಬೌದ್ಧ ವಾಹಿನಿಗಳಾಗಲಿ ಬಳಸುವುದು ಧರ್ಮ ಎಂಬ ಶಬ್ದವನ್ನೇ ಹೊರತು ಪ್ರವಾದಿ ಮತಗಳು ತಮ್ಮನ್ನು ತಾವು ಬಳಸಿಕೊಳ್ಳುವ religion ಎಂಬ ಶಬ್ದವನ್ನಲ್ಲ.
ಅಧ್ಯಾತ್ಮವನ್ನು ಹೀಗೆ ಅಳೆಯದಿರಿ
ಇತರ ಧರ್ಮ ಅಥವಾ ಮತಗಳ ಬಗೆಗೆ ಔದಾರ್ಯ ಮತ್ತು ಧರ್ಮಭಾವಗಳನ್ನು ಸೃಷ್ಟಿಸಿದ ಏಕಂ ಸತ್‌ವಿಪ್ರಾಃ ಬಹುಧಾ ವದಂತಿ ತತ್ತ್ವವು ಬೇಟೆಗಾರ ಮತಗಳು ಭಾರತವನ್ನು ದಾಳಿ ಮಾಡಿ ಆಕ್ರಮಿಸಿಕೊಳ್ಳತೊಡಗಿದಾಗ ನಮ್ಮ ಮತಾಚಾರ್ಯರುಗಳನ್ನು ಮೈ ಮರೆಸಿತು. ದಾಳಿ ಮಾಡಿ ಅಮಾನವೀಯವಾಗಿ ಲಕ್ಷ ಲಕ್ಷ ಜನರನ್ನು ಕೊಂದು ಹೆಂಗಸರು ಮಕ್ಕಳನ್ನು ಅತ್ಯಾಚಾರ ಮಾಡಿ ಗುಲಾಮರನ್ನಾಗಿ ಎಳೆದು ಕೊಳ್ಳುವವರು ಹೀನವರ್ತನೆಯವರೇ ವಿನಾ ಅವರ ಧರ್ಮದಲ್ಲಿ ಏನೂ ತಪ್ಪಿಲ್ಲ ಎಂಬ ಅಭ್ಯಾಸ ಬಲದ ಗ್ರಹಿಕೆಯ ಅಜ್ಞಾನದಲ್ಲೇ ಅವರು ಪ್ರವಚನ ಮಾಡುತ್ತಿದ್ದರು. ಶೃಂಗೇರಿ ಮಠದ ಎರಡು ತಲೆಮಾರು ಹಿಂದಿನ ಚಂದ್ರಶೇಖರ ಭಾರತಿ ಸ್ವಾಮಿಗಳಿಗೆ ಸಂಬಂಧಿಸಿದ ಒಂದು ಘಟನೆಯನ್ನು ಬಹುಜನರು ಹಿಂದೂ ಧರ್ಮದ ಉದಾರತೆಯ ಉದಾಹರಣೆಯಾಗಿ ಬರೆದಿದ್ದಾರೆ. ಯಾರೋ ಒಬ್ಬ ಯೂರೋಪಿಯನ್ನನು ಸ್ವಾಮಿಗಳನ್ನು ಸಂದರ್ಶಿಸಿ “ನನಗೆ ಹಿಂದೂವಾಗುವ ಬಯಕೆ ಇದೆ. ದೀಕ್ಷೆ ಕೊಡಿ” ಎಂದನಂತೆ. ಅದಕ್ಕೆ ಸ್ವಾಮಿಗಳು “ನೀನು ಒಳ್ಳೆಯ, ಕ್ರೈಸ್ತನಾಗು. ಆಗ ಹಿಂದೂವೂ ಆಗುತ್ತೀಯೆ” ಎಂದರಂತೆ. ಆದರೆ ಒಳ್ಳೆಯ ಕ್ರೈಸ್ತ ಎಂದರೆ ಸಾಧ್ಯವಾದಷ್ಟು ಜನರನ್ನು ಕ್ರೈಸ್ತ ಮತಕ್ಕೆ ಪರಿವರ್ತನೆ ಮಾಡುವವನೂ ಆಗಿರಬೇಕು ಎಂಬ ಒಳ ತತ್ತ್ವವು ಸ್ವಾಮಿಗಳಿಗೆ ತಿಳಿದಿತ್ತೇ? ಅಥವಾ ಏಕಂ ಸತ್ ವಿಪ್ರಾಃ ಎಂಬ ಮಂತ್ರದಲ್ಲಿ ಅವರು ಮುಳುಗಿ ಹೋಗಿದ್ದರೆ? ಅಥವಾ ಅನ್ಯಜಾತಿ ಅಥವಾ ಅನ್ಯ ಧರ್ಮೀಯನಿಗೆ ಉಪದೇಶ ಕೊಡದಿರುವ ಸಂಪ್ರದಾಯವನ್ನು ದಾಟುವುದು ಸ್ವಾಮಿಗಳಿಗೆ ಸಾಧ್ಯವಾಗಲಿಲ್ಲವೇ? ಎಂಬ ಪ್ರಶ್ನೆಗಳು ಉಳಿಯುತ್ತವೆ. ಮುಸಲ್ಮಾನರು ನಮ್ಮನ್ನು ಸದೆಬಡಿದು ಮತಾಂತರಿಸುತ್ತಿದ್ದಾಗ ಪೋರ್ಚುಗೀಸರು ಗೋವ, ಮಲಬಾರುಗಳಲ್ಲಿ INQUISITION ಮಾಡುತ್ತಿದ್ದಾಗ, ಬ್ರಿಟಿಷರ ಕಾಲದಲ್ಲಿ ಪಾದ್ರಿಗಳು ಸಮಾಜಸೇವೆಯ ಸೋಗಿನಲ್ಲಿ ಎಲ್ಲೆಲ್ಲೂ ಪರಿವರ್ತನೆ ಮಾಡುತ್ತಿದ್ದಾಗ ಈ ಬೇಟೆಗಾರ ಮತಗಳ ಗ್ರಂಥಗಳನ್ನು ಓದಿ ಅವುಗಳನ್ನು ಧಾರ್ಮಿಕ ಜಿಜ್ಞಾಸೆಗೆ ಒಳಪಡಿಸುವ ಕೆಲಸವನ್ನು ನಮ್ಮ ಧರ್ಮಾಚಾರ್ಯರುಗಳು ಮಾಡಲಿಲ್ಲ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಆಧ್ಯಾತ್ಮಿಕ ಪ್ರೇರಕರೂ ಮಾರ್ಗದರ್ಶಕರೂ ಆಗಿದ್ದ ವಿದ್ಯಾರಣ್ಯರಿಗೆ ದೇಶದ ಸಾಂಸ್ಕೃತಿಕ ಮತ್ತು ರಾಜಕೀಯ ಸಮಸ್ಯೆ ಗೊತ್ತಿತ್ತು. ಆದರೆ ಅವರು ಆ ಬೇಟೆಗಾರ ಮತವನ್ನು ಓದಿ ವಿಶ್ಲೇಷಿಸಿ ಬರೆದಿರುವುದು ನನಗೆ ಗೊತ್ತಿಲ್ಲ. ಈ ಕೆಲಸವನ್ನು ನೇರವಾಗಿ ಕೈಗೆತ್ತಿಕೊಂಡು ಅಧ್ಯಾತ್ಮ ಮತ್ತು ಜಿಜ್ಞಾಸೆಯ ಮಟ್ಟದಲ್ಲಿ ಮಾಡಿದವರು ನನ್ನ ಓದಿನ ವ್ಯಾಪ್ತಿಯ ಮಿತಿಯಲ್ಲಿ ಹೇಳುವುದಾದರೆ ಮಹರ್ಷಿ ದಯಾನಂದ ಸರಸ್ವತಿಯವರು ಮತ್ತು ಸ್ವಾಮಿ ವಿವೇಕಾನಂದರು.
ಪೂರ್ವದ ಮತ್ತು ಬಹುತೇಕ ಇಂದಿನ ಹಿಂದೂ ಧರ್ಮಾಚಾರ್ಯರುಗಳಿಗಿರುವ ಬೇಟೆಗಾರ ಮತಗಳ ಬಗೆಗಿನ ಅವಜ್ಞೆಯು ಅಷ್ಟೇ ಬಹುತೇಕ ವಿದ್ಯಾವಂತ ಲೌಕಿಕರಿಗೂ ಇದೆ. ತಮ್ಮ ಜೀವನವನ್ನೇ ಬಲಿಯಾಗಿಟ್ಟು ಜಿಹಾದಿಗಳು ಉಗ್ರ ಚಟುವಟಿಕೆಗಳಲ್ಲಿ ತೊಡಗಿರುವಂತೆ ಹಳ್ಳಿ ಹಳ್ಳಿಗಳಲ್ಲಿ , ಗುಡ್ಡಗಾಡುಗಳಲ್ಲಿ ತಿರುಗಿ ಜನರನ್ನು ಮತಾಂತರಕ್ಕೆ ಪ್ರಚೋದಿಸುವ ಕಾಯಕದಲ್ಲಿ ತೊಡಗಿರುವ ಮಿಷನರಿಗಳ ಪ್ರೇರಕಶಕ್ತಿಯು ಅವರ ತಲೆಯಲ್ಲಿ ಕೂರಿಸಿರುವ ಈ ಬೋಧೆಯೇ.
ಸೇವೆಯ ಮಾನದಿಂದ ಧರ್ಮವನ್ನು ತೂಗುವುದು ಸಮಾಜದ ಆರ್ಥಿಕ ಬೆಳವಣಿಗೆ ಮತ್ತು ನ್ಯಾಯದ ದೃಷ್ಟಿಯಿಂದ ಸಹಜವೇ. ಪಶ್ಚಿಮ ದೇಶಗಳಲ್ಲಿ ಸುಖೀ ರಾಜ್ಯ ಅಥವಾ WELFARE STATEನ ಕಲ್ಪನೆ ಬೆಳೆದು-ವಿದ್ಯಾಭ್ಯಾಸ, ವೈದ್ಯಕೀಯ ಸೇವೆ, ಉದ್ಯೋಗ ಖಾತರಿ, ನಿರುದ್ಯೋಗ ಭತ್ಯೆ, ವೃದ್ಧ ರಕ್ಷಣೆ ಮೊದಲಾದ ಕಾರ್ಯಗಳು ಸರಕಾರದ ಜವಾಬ್ದಾರಿಗೆ ಒಳಪಟ್ಟು ಸರಕಾರವು ಅವುಗಳನ್ನು ಸಮರ್ಪಕವಾಗಿ ನಿರ್ವಹಿಸತೊಡಗಿದಾಗ ಮತಕ್ಕೂ ಸೇವೆಗೂ ಸಂಬಂಧವಿಲ್ಲ ಎಂಬ ಭಾವನೆ ಬೆಳೆಯಿತು. ಕೆಲವು ದಶಕಗಳ ಹಿಂದೆ ನಮ್ಮವರೇ ಕೆಲವರು “ಕ್ರೈಸ್ತ ಮತವನ್ನು ನೋಡು, ಶಾಲೆ, ಕಾಲೇಜು, ಆಸ್ಪತ್ರೆ, ಅನಾಥಾಶ್ರಮ, ಶುಶ್ರೂಷೆ ಹೀಗೆ ಎಷ್ಟೊಂದು ಸೇವಾ ಕಾರ್ಯ ಮಾಡುತ್ತಾರೆ. ನಮ್ಮ ಧರ್ಮದಲ್ಲಿ ಏನಿದೆ?” ಎನ್ನುತ್ತಿದ್ದರು. ಈಗ ನಮ್ಮ ಎಷ್ಟೋ ಮಠಗಳು ಇಂಥ ಹಲವಾರು ನೂರಾರು ಸಂಸ್ಥೆಗಳನ್ನು ನಡೆಸುತ್ತಿವೆ. ಆದರೆ ಸೈದ್ಧಾಂತಿಕವಾಗಿ ನೋಡಿದರೆ ಇವು ನಿಜವಾಗಿಯೂ ಮಠದ ಕೆಲಸಗಳೆ? ಭ್ರಷ್ಟ ರಾಜಕಾರಣಿಗಳು, ಭ್ರಷ್ಟ ಸರಕಾರವು ತಮ್ಮ ಕರ್ತವ್ಯಗಳಲ್ಲಿ ಸೋತಿರುವಾಗ ಮಠಗಳಾದರೂ ಈ ಕೆಲಸ ಮಾಡುತ್ತಿರುವುದು ವಂದನೀಯ. ಆದರೆ ಅವು ಎಷ್ಟರ ಮಟ್ಟಿಗೆ ಅಧ್ಯಾತ್ಮದ ಬುಗ್ಗೆಗಳಾಗಿವೆ? ಅಧ್ಯಾತ್ಮದ ಪ್ರಸಾರ ಕೇಂದ್ರಗಳಾಗಿವೆ? ಅನ್ನ , ಬಟ್ಟೆ ಆಸ್ಪತ್ರೆ, ಉದ್ಯೋಗ , ವಿದ್ಯಾಭ್ಯಾಸ, ವಿಜ್ಞಾನದ ಅಧ್ಯಯನಾವಕಾಶಗಳೆಲ್ಲ ದಕ್ಕಿಯೂ ಮನುಷ್ಯನ ಜೀವವು ಅನುಭವಿಸುವ ಅರಕೆ, ಅದನ್ನು ತುಂಬುವ ತುಡಿತವನ್ನು ಪೂರೈಸಲು ನಮ್ಮ ಮಠಗಳು ಸಮರ್ಥವಾಗಿವೆಯೇ? ಅಧ್ಯಾತ್ಮವು ನಮ್ಮ ನೈತಿಕ ಪ್ರಜ್ಞೆಯನ್ನು ಉದ್ದೀಪಿಸುವ ಬೆಳಕು ಎಂಬುದು ನಿಜವಾದರೂ ಲೌಕಿಕ ಚಟುವಟಿಕೆಗಳಿಂದ ಅಧ್ಯಾತ್ಮವನ್ನು ಅಳೆಯಬಾರದು.
೧೯೭೫ರಲ್ಲಿ ನಾನು UNESCO ಸಂಸ್ಥೆಯು ಟೋಕಿಯೋ ನಗರದಲ್ಲಿ ಒಂದು ತಿಂಗಳು ಏರ್ಪಡಿಸಿದ್ದ ನೀತಿ ಶಿಕ್ಷಣ ಕುರಿತ ಸಂಕಿರಣಕ್ಕೆ ಭಾರತದ ಪ್ರತಿನಿಧಿಯಾಗಿ ಹೋಗಿದ್ದೆ. ಸಂಕಿರಣಕ್ಕೆ ಪೂರಕವಾಗಿ ಜಪಾನಿನ ಕೆಲವು ಶಾಲೆಗಳನ್ನು ಅಲ್ಲಿ ನೀತಿ ಶಿಕ್ಷಣವನ್ನು ಹೇಗೆ ನೀಡುತ್ತಾರೆಂಬ ದೃಷ್ಟಿಯಿಂದ ಸಂದರ್ಶಿಸುವ ಕಾರ್ಯಕ್ರಮವಿತ್ತು. ಅವುಗಳಲ್ಲಿ ಒಂದು ಕ್ರೈಸ್ತ ಮಿಶನರಿ ಶಾಲೆ. ವಿವರಗಳನ್ನೆಲ್ಲ ತಿಳಿದ ಮೇಲೆ ನಾನು ಅದರ ಪ್ರಿನ್ಸಿಪಾಲರನ್ನು ಕೇಳಿದೆ;
“ಈ ದೇಶದ ಇತರ ಶಾಲೆಗಳಿಗಿಂತ ನಿಮ್ಮ ಶಾಲೆಯು ಈ ವಿಷಯದಲ್ಲಿ ಭಿನ್ನವಾಗಿದೆಯೇ? ವಿಶಿಷ್ಟವಾಗಿದೆಯೇ?”
“ವೆರಿಗುಡ್ ಕ್ವೆಶ್ಚನ್. ನಮ್ಮದು ವಿಶಿಷ್ಟ.” ಜಪಾನೀ, ಆದರೆ ಕ್ರೈಸ್ತ ಮತೀಯನಾದ ಆತ ಉತ್ತರಿಸಿದ.
“ಹೇಗೆ?”
“ನಮ್ಮ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಲ್ಲಿ ಸುಮಾರು ಮೂವತ್ತು ಜನರು ಬೆಳೆದು ವಯಸ್ಕರಾದ ನಂತರ ಕ್ರೈಸ್ತ ಮತಕ್ಕೆ ಬದಲಾಯಿಸಿಕೊಂಡಿದ್ದಾರೆ".
ಧೈರ್ಯವೆಲ್ಲಿದೆ?
ಅವರಿಗೆ ನೀತಿ ಎಂದರೆ ಜಾತಿ ಬದಲಾಯಿಸಿಕೊಳ್ಳುವುದು. ಕ್ರೈಸ್ತನಲ್ಲದವನು ನೀತಿವಂತನಾಗಲಾರ. ಮಹಾತ್ಮ ಗಾಂಧಿಯ ವಿಷಯದಲ್ಲಿ ಒಬ್ಬ ಮುಸ್ಲಿಂ ನಾಯಕನು ಹೇಳಿದ ಮಾತು ಪ್ರಸಿದ್ಧವಾಗಿದೆ. “ಅವನು ಮಹಾತ್ಮನಿರಬಹುದು. ಆದರೆ ಒಬ್ಬ ಲಫಂಗನಾದ ಮುಸ್ಲಿಮನಿಗಿಂತ ಅವನು ಕೀಳೇ. ಏಕೆಂದರೆ ಅವನು ಮುಸ್ಲಿಮನಲ್ಲ.” ಈ ಮನಃಸ್ಥಿತಿಯವರಿಗೆ ನೀತಿಯು ಮತವನ್ನು ಅವಲಂಬಿಸಬೇಕಿಲ್ಲ ಎಂಬ ದೃಷ್ಟಿಯಾಗಲಿ, ಮತ ವಿಸ್ತರಣೆಗೆ ಹಿಂಸೆ, ಕ್ರೌರ್ಯ, ಬಲ, ಹಣ, ಆಮಿಷ ಪ್ರಚಾರಗಳನ್ನು ಬಳಸಬಾರದೆಂಬ ಸೂಕ್ಷ್ಮವಾಗಲಿ ಇರುವುದು ಸಾಧ್ಯವಿಲ್ಲ.
ಎಲ್ಲೆಲ್ಲಿಯೂ, ಎಲ್ಲಾ ಮಾಧ್ಯಮಗಳಲ್ಲಿ, ರಾಜಕೀಯ ಶಕ್ತಿ ಸ್ಥಾನಗಳಲ್ಲಿ, ಅಂತಾರಾಷ್ಟ್ರೀಯ ವಲಯಗಳಲ್ಲಿ ಭಾರಿ ಪ್ರಚಾರವನ್ನು ಗಿಟ್ಟಿಸಿಕೊಂಡು ಈಗ ವ್ಯಾಟಿಕನ್‌ನಿಂದ ಸೇಂಟ್ ಎಂಬ ಬಿರುದನ್ನು ಪಡೆಯುವ ಹಂತದಲ್ಲಿರುವ ಮದರ್ ಥೇರೇಸಾರ ಬಗೆಗೆ ಒಂದು ಪ್ರಶ್ನೆ : ಅನಾಥ ಮಕ್ಕಳನ್ನು ತಮ್ಮ ಆಶ್ರಮಕ್ಕೆ ಸೇರಿಸಿಕೊಂಡು ಪೋಷಿಸಿದ ಆಕೆಯು ಈ ಮಕ್ಕಳನ್ನು ಅವರವರ ಮೂಲ ಧರ್ಮವನ್ನರಿಯಲು, ಅನುಸರಿಸಲು ಬಿಟ್ಟರೆ? ಆಕೆ ತೀರಿದ ಮೇಲೆ ನಾನು ಕಲ್ಕತ್ತೆಯಲ್ಲಿ ಆ ಆಶ್ರಮಕ್ಕೆ (MISSIONERIES OF CHARITY) ಹೋಗಿ ವಿಚಾರಿಸಿದೆ. ಆ ಮಕ್ಕಳನ್ನೆಲ್ಲ ಕ್ರೈಸ್ತರನ್ನು ಮಾಡಿಯೇ ಇದ್ದಾರೆ. ಇದೊಂದು ಮತ ವಿಸ್ತರಣೆಯ ಹುನ್ನಾರವಲ್ಲವೆ? ಇಂಥವರಿಗೆ ವ್ಯಾಟಿಕನ್ ಸಹಾಯದಿಂದ ಹಣ ಮತ್ತು ಪ್ರಚಾರಗಳು ದೊರೆತು, ಪಾಶ್ಚಿಮಾತ್ಯ ಮಾಧ್ಯಮಗಳ ಪ್ರತಿಧ್ವನಿಯಾದ ನಮ್ಮ ಮಾಧ್ಯಮಗಳೂ ಆ ಪ್ರಚಾರವನ್ನೇ ಪ್ರತಿಧ್ವನಿಸಿ ಆಕೆಯನ್ನು ಮುಗಿಲೆತ್ತರಕ್ಕೆ ಏರಿಸಲಿಲ್ಲವೆ? ಸೇಂಟ್ ಎನ್ನಿಸಿಕೊಳ್ಳುವ ವ್ಯಕ್ತಿಯು ತನ್ನ ಜೀವನದಲ್ಲಿ ಕೆಲವಾದರೂ ಪವಾಡಗಳನ್ನು ಮಾಡಿರಬೇಕೆಂಬ ಕ್ರೈಸ್ತ ನಿಯಮವನ್ನು ಪೂರೈಸಲು ಕಲ್ಕತ್ತಾ ಆಶ್ರಮದ ಕೆಲವು ಸನ್ಯಾಸಿನಿಯರು ಆಕೆ ಕೆಲವು ಪವಾಡಗಳನ್ನು ಮಾಡಿದ್ದನ್ನು ತಾವು ಕಣ್ಣಾರೆ ಕಂಡೆವೆಂದು ಹೇಳಿಕೆ ನೀಡಿದಾಗ, ಸಾಯಿಬಾಬಾ ಮಾಡುತ್ತಿದ್ದರೆಂಬ ಪವಾಡಗಳಿಗೆ ಸಾರ್ವಜನಿಕ ಸವಾಲು ಎಸೆದ ನಮ್ಮ ಬುದ್ಧಿಜೀವಿಗಳು ನಿಶ್ಶಬ್ದವಾಗಿರಲಿಲ್ಲವೆ?
ಈಗ ಅರವತ್ತು ವರ್ಷಗಳ ಹಿಂದೆ ನಾನು ನನ್ನ ಹಳ್ಳಿ ಮತ್ತು ಸುತ್ತಣ ಹಳ್ಳಿಗಳಲ್ಲಿ ಕಣ್ಣಾರೆ ನೋಡುತ್ತಿದ್ದ ಸಂಗತಿ: ಒಂದು ಬಸವನ ಮೇಲೆ ಕಟ್ಟಿದ ನಗಾರಿಯ ಸದ್ದು. ಅದನ್ನು ಕೇಳುತ್ತಿದ್ದ ಗ್ರಾಮಸ್ಥರು “ಸಿದ್ಧಗಂಗೆ ಸ್ವಾಮಿಗಳು ಭಿಕ್ಷಕ್ಕೆ ಬಂದವರೆ” ಎಂದು ಮನೆಯಿಂದ ಹೊರಗೆ ಬರುತ್ತಿದ್ದರು. ಈಗ ಶತಾಯುಷಿಯಾಗಿರುವ ಶಿವಕುಮಾರಸ್ವಾಮಿಗಳಿಗೆ ಆಗ ನಲವತ್ತರ ಪ್ರಾಯ. ಎತ್ತಿನ ಗಾಡಿಯಲ್ಲಿ ಕುಳಿತು ಬರುತ್ತಿದ್ದರು. ಹಳ್ಳಿಯವರು ತಾವೇ ಮನೆಮನೆಗಳಿಂದ ರಾಗಿ, ಕಾಳು, ಮೆಣಸಿನಕಾಯಿಗಳನ್ನು ಎತ್ತಿ ಮೂಟೆ ಕಟ್ಟಿ ತಮ್ಮದೇ ಗಾಡಿಗೆ ತುಂಬಿ ತಮ್ಮ ಎತ್ತುಗಳನ್ನು ಕಟ್ಟಿ, ಆಳಿನೊಡನೆ ನಲವತ್ತು ಮೈಲಿ ದೂರದ ಸಿದ್ಧಗಂಗೆಗೆ ಕಳಿಸುತ್ತಿದ್ದರು. ಹಳ್ಳಿ ಹಳ್ಳಿಗಳಿಂದ ಹೀಗೆ ದಿನಸಿ ಹೋಗುತ್ತಿತ್ತು. ಸ್ವಾಮಿಗಳು ದಿನಸಿಯನ್ನು ಕೇಳುತ್ತಿರಲಿಲ್ಲ. ಗ್ರಾಮಸ್ಥರು ತಾವಾಗಿಯೇ ಕೊಡುತ್ತಿದ್ದರು. ಸ್ವಾಮಿಗಳು ಕೇಳುತ್ತಿದ್ದದ್ದು “ನಿಮ್ಮೂರಿನಲ್ಲಿ ಬಡ ಮಕ್ಕಳು ಎಷ್ಟು ಜನವಿದ್ದರೂ ನನ್ನ ಜೊತೆ ಕಳಿಸಿ, ನಾವು ಊಟ ಹಾಕಿ, ಬಟ್ಟೆ ಸ್ಲೇಟು ಪುಸ್ತಕ ಕೊಟ್ಟು ಓದಿಸುತೀವಿ. ವಿದ್ಯಾಭ್ಯಾಸ ಮುಖ್ಯ”. ಆಗ ಸಿದ್ಧ ಗಂಗೆಯಲ್ಲಿ ಇಷ್ಟು ಮಕ್ಕಳಿರಲಿಲ್ಲ. ಕ್ರಮೇಣ ಸಂಖ್ಯೆಯು ವರ್ಧಿಸಿ ಈಗ ಏಳೆಂಟು ಸಾವಿರವಾಗಿದೆ. ಸ್ವಾಮಿಗಳು ಸನ್ಯಾಸಿ ಧರ್ಮವಾದ ಭಿಕ್ಷಾಟನೆಯಿಂದ ದಿನಕ್ಕೆ ಮೂರು ನಾಲ್ಕು ಹಳ್ಳಿಗಳನ್ನು ಸುತ್ತಿ, ದಾಸೋಹದ ಪ್ರಮಾಣವನ್ನು ಬೆಳೆಸಿದರು. ಎಲ್ಲ ಜಾತಿ ಎಲ್ಲ ಪಂಗಡಗಳ ಮಕ್ಕಳನ್ನೂ ಬೆಳೆಸಿದರು. ಮುಸಲ್ಮಾನ ಹುಡುಗರನ್ನೂ ನಾನು ಅಲ್ಲಿ ನೋಡಿದ್ದೇನೆ. ಯಾರಿಗೂ ಲಿಂಗಧಾರಣೆ ಮಾಡಿಲ್ಲ. ಅವರವರ ಜಾತಿ ಆಚರಣೆಗಳು ಅವರವರದ್ದು. ಉತ್ತಮ ನಡತೆ ಕಲಿಸುವುದಷ್ಟೇ ನಮ್ಮ ಕರ್ತವ್ಯ ಎಂಬ ನಿಯಮವಿಟ್ಟುಕೊಂಡು ನಡೆಸುತ್ತಿದ್ದಾರೆ. ಅವರಿಗೆ ಮೊನ್ನೆ ಮೊನ್ನೆ ನೂರು ವರ್ಷವಾದಾಗ ಪತ್ರಿಕೆಗಳು ಗಮನಹರಿಸಿದವು; ಅವೂ ಕನ್ನಡ ಪತ್ರಿಕೆಗಳು. ಅವರಿಗೆ ಮದರ್ ಥೆರೇಸಾರಿಗೆ ದಕ್ಕಿದ ಪ್ರಚಾರ ಸಿಗಲಿಲ್ಲ. ಸಿಗುತ್ತಿಲ್ಲವೆಂದು ನಾವು ಖೇದಪಡಬೇಕಿಲ್ಲ. ಯಾವ ಒಳ್ಳೆಯ ಕೆಲಸ ಮಾಡಿದರೂ ಅದನ್ನು ಈಶ್ವರ ಪ್ರಣಿಧಾನ ಭಾವನೆಯಿಂದ ಸಾಧಿಸುವುದು ಯೋಗಿಯ ಪಂಚನಿಯಮಗಳಲ್ಲಿ ಒಂದು. ನಾನು ಮಾಡಿದೆ ಎಂಬ ಭಾವನೆಗೆ ಒಳಗಾಗುವುದು ಅಹಂಕಾರವನ್ನು ಉಬ್ಬಿಸಿಕೊಂಡಂತೆ. ಅವನು ಯೋಗ ಸಾಧನೆಯ ಮುಂದಿನ ಮೆಟ್ಟಿಲನ್ನು ಹತ್ತಲಾರ. ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮಿಗಳು, ಬಾಬಾ ಆಮ್ಟೆ, ಬಿಳಿಗಿರಿರಂಗನಬೆಟ್ಟದ ಡಾ.ಸುದರ್ಶನ ಮೊದಲಾಗಿ ಆಧುನಿಕ ಭಾರತದ ಹಲವರು ಜನಸೇವೆಯ ನಿಷ್ಕಾಮ ಕರ್ಮದಲ್ಲಿ ತೊಡಗಿದ್ದಾರೆ. ಮದರ್ ಥೆರೇಸಾರಿಗಿಂತ ಹೆಚ್ಚಿನ ಸೇವೆ ಮಾಡಿದ್ದಾರೆ. ಅವರು ಯಾರಿಗೂ ಆಕೆಗೆ ಸಂದ ವೈಭವ ದೊರೆಯಲಿಲ್ಲ. ಏಕೆಂದರೆ ಅವರದು ಏಸುವಿನ ಮಹಿಮೆಯನ್ನು ಪ್ರಚಾರ ಮಾಡುವ ಸೇವೆಯಲ್ಲ.
ಅನುಷ್ಠಾನಗೊಳಿಸುವವರಾರು?
ಹಲವರನ್ನಾದರೂ ಕ್ರೈಸ್ತ ಮತಕ್ಕೆ ತಂದರೆ ಮಾತ್ರ ನೀನು ನಿಜವಾದ ಕ್ರೈಸ್ತ ಎಂಬ ಬೋಧನೆಯನ್ನು ತಲೆಗೆ ತುಂಬಿಕೊಂಡ ಸಾವಿರಾರು ಜನರು ಕೇರಿಕೇರಿಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ, ಕಾಡುಗುಡ್ಡಗಳಲ್ಲಿ ಮತ ಪರಿವರ್ತನೆಯ ಕೆಲಸದಲ್ಲಿ ತೊಡಗಿದ್ದಾರೆ. ಅವರಿಗೆ ಬೇಕಾದ ಕಡೆ ತರಬೇತಿ, ಹಣ, ಮಾರ್ಗದರ್ಶನ, ಎಲ್ಲಾದರೂ ಎಡವಟ್ಟಾದರೆ ಸಾರ್ವಜನಿಕ ಹಾಗೂ ರಾಜಕೀಯ ಅಬ್ಬರವನ್ನು ಒದಗಿಸುವ ಮಹಾದಂಡ ನಾಯಕತ್ವವು ವಿದೇಶೀ ಮೂಲದ ಮಿಶನರಿಗಳದು. ಹಿಂದೂಗಳಿಗಾದರೋ ಕಳೆದು ಗೊತ್ತೇ ಹೊರತು ಗಳಿಸಿ ಗೊತ್ತಿಲ್ಲ. ಮತ ಪರಿವರ್ತನೆಗೆ ಸಂಬಂಧಿಸಿ ಒಂದು ಕಾನೂನೇನೋ ಇದೆ. ಅದನ್ನು ನ್ಯಾಯಾಲಯವು ಕೂಡ ವಿವರಿಸಿದೆ. ಆದರೆ ಈ ವಿವರಣೆಯನ್ನು ಅನುಷ್ಠಾನಗೊಳಿಸುವವರಾರು? ಯಾರಾದರೂ ಹಿಂದೂಗಳು ಪರಿವರ್ತನೆಯಲ್ಲಿ ತೊಡಗಿರುವವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲು ಯತ್ನಿಸಿದರೆ ನಮ್ಮ ಮಾಧ್ಯಮಗಳ ಚಿತ್ರಣಗಳಲ್ಲಿ ಅವರೇ ಧರ್ಮಾಂಧರಾಗುತ್ತಾರೆ. ಪೊಲೀಸರು ಕ್ರಮ ಕೈಗೊಳ್ಳುವುದಿಲ್ಲ. ಯಾವ ಪಾತಕಿಗೂ ಶಿಕ್ಷೆಯಾಗುವುದಿಲ್ಲ. ತಡೆಯ ಹೊರಟವರನ್ನು ನೂರಾರು ಹೆಸರಿನ ಕ್ರೈಸ್ತ ಸಂಘಗಳಲ್ಲದೆ ನಮ್ಮ ರಾಜಕೀಯ ಪಕ್ಷಗಳು, ವಿವಿಧ ಬಣ್ಣಗಳ ಸಾಮಾಜಿಕ ಪಕ್ಷಗಳು, ವಿವಿಧ ಬಣ್ಣಗಳ ಬುದ್ಧಿಜೀವಿಗಳು ಮುಗಿಲು ಮುಟ್ಟುವಂತೆ ಖಂಡಿಸುತ್ತಾರೆ. ಸರ್ಕಾರವಂತೂ ಅವರನ್ನು ಅರೆಸ್ಟ್ ಮಾಡಿಸುತ್ತದೆ. ಅಶಾಂತಿಯ ಉತ್ಪಾದಕರು ಎಂಬ ಆಪಾದನೆ ಹೊರಿಸುತ್ತದೆ.
ಕಾಂಗ್ರೆಸ್ಸಿಗೆ ನೆಹರೂ ಕಾಲದಿಂದಲೂ ಹಿಂದೂಗಳನ್ನು ಬಲಿಕೊಟ್ಟು ಅದನ್ನು ಸಮರ್ಥಿಸುವ ಪರಿಪಾಠವಿದೆ. ಕಾಂಗ್ರೆಸ್ ಮೇಲೆ ಮಹಾತ್ಮಗಾಂಧಿಯ ಹಿಡಿತವು ಸ್ವಾತಂತ್ರ್ಯ ಪ್ರಾಪ್ತಿಯ ಮೊದಲೇ ಸಡಿಲವಾಗಿತ್ತು. ನೆಹರೂರ ರೀತಿ ನೀತಿಗಳು ಎಂದೂ ಗಾಂಧಿ ತತ್ತ್ವಕ್ಕೆ ವಿರೋಧವಾಗಿಯೇ ಇದ್ದವು. ಈಗಂತೂ ಈ ಪಕ್ಷವನ್ನು ವ್ಯಾಟಿಕನ್ ದೇಶದ ಕ್ರೈಸ್ತ ಮಹಿಳೆಯು ನಿಯಂತ್ರಿಸುತ್ತಿದ್ದಾಳೆ. ಪ್ರತಿಯೊಬ್ಬ ಕಾಂಗ್ರೆಸಿಗನೂ ಆಕೆಗೆ ಡೊಗ್ಗು ಸಲಾಮು ಹಾಕದೆ ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅಸಾಧ್ಯವಾಗಿರುವಾಗ, ಪ್ರತಿಯೊಬ್ಬ ಕಾಂಗ್ರೆಸಿಗನಿಗೂ ಅಧಿಕಾರದಲ್ಲುಳಿದು, ಹಣ ಮಾಡುವುದೇ ಗುರಿಯಾಗಿರುವಾಗ ಆಕೆಯನ್ನು, ಆಕೆಯ ಮತ ವಿಸ್ತರಣೆಯನ್ನು ವಿರೋಧಿಸಿ ಒಂದೇ ಒಂದು ಮಾತನಾಡುವ, ವಿರೋಧಿಸುವವರನ್ನು ನಾಮುಂದು ತಾಮುಂದು ಎಂದು ಬೈಯದೆ ಸುಮ್ಮನಿರುವ ಧೈರ್ಯ ಎಲ್ಲಿಂದ ಬರಬೇಕು? ಕಾಂಗ್ರೆಸಿನಲ್ಲಿಲ್ಲದ ದೇವೇಗೌಡರು, ಮುಲಾಯಂ ಸಿಂಗ್, ಲಾಲೂ ಪ್ರಸಾದ್ ಯಾದವ್ ಮೊದಲಾದವರಿಗೆ ಅಲ್ಪಸಂಖ್ಯಾತರ ಓಟಿನ ಮೇಲೆ ಕಣ್ಣು. ಹಿಂದೂ ಪರವೆಂದು ಬಿಂಬಿಸಿಕೊಂಡಿರುವ ಬಿಜೆಪಿ ಮೇಲೆ ದ್ವೇಷ.
ಹಿಂದೂ ದ್ವೇಷವು ಭಾರತದ ಕಮ್ಯೂನಿಸ್ಟರ ಬದ್ಧ ತತ್ತ್ವಗಳಲ್ಲೊಂದು. ಬುದ್ಧಿಜೀವಿಗಳ ಬುದ್ಧಿಯು ರೂಪಿತವಾಗಿರುವುದೇ ಮೆಕಾಲೆಯು ಗುರಿ ಇಟ್ಟ ವಿಚಾರಗಳಿಂದ. ದಿನಕ್ಕೆ ಒಂದು ವೇದ ಮಂತ್ರಗಳಿಂದ ಪೂಜೆ ನಡೆಯುವ ದೇವಾಲಯ, ಒಂದು ಕುರಿ ಹೋತಗಳ ಬಲಿಯನ್ನು ಕದ್ದು ಮಾಡುವ ದೇವಾಲಯಗಳಿಗೆ ಹೋಗಿ ಪೂಜೆ ಮಾಡಿಸಿ, ಇಪ್ಪತ್ತೊಂದು, ಐವತ್ತೊಂದು ಅಥವಾ ನೂರಾಒಂದು ಋತ್ವಿಜ ರಿಂದ ಹತ್ತಾರು ಲಕ್ಷ ರೂಪಾಯಿಗಳ ಖರ್ಚಿನಿಂದ ಹೋಮ ಮಾಡಿಸಿ ಅದರ ಭಸ್ಮವನ್ನು ಹಣೆಗೆ ಹಚ್ಚಿ ಸಂಜೆ ಮಸೀದಿಗೆ ಹೋಗಿ ಮುಂದಿನ ಜನ್ಮದಲ್ಲಿ ಮುಸಲ್ಮಾನ ಜನ್ಮವನ್ನು ಕೊಡುವಂತೆ ತಾನು ದೇವರನ್ನು ಸದಾ ಪ್ರಾರ್ಥಿಸು ತ್ತಿರುವುದಾಗಿ ಭಾಷಣ ಮಾಡುವ ರಾಜಕಾರಣಿಗಳೇ ನಮ್ಮಲ್ಲಿ ಹೆಚ್ಚು. ಹಾಗೆ ಮಾಡದಿದ್ದರೆ ಪ್ರಜಾಪ್ರಭುತ್ವದಲ್ಲಿ ಉಳಿಯುವುದೆಂತು? ಎಂಬುದು ಅವರ ಅಂತರಂಗದ ಕಾಳಜಿ. ಇವರು ಮತ ಪರಿವರ್ತನೆಯನ್ನು ವಿರೋಧಿಸುವವರ ವಿರುದ್ಧ ಗಾಂಧಿ ಪ್ರತಿಮೆಯ ಎದುರು ಮಧ್ಯಾಹ್ನ ಊಟದ ಹೊತ್ತಿನವರೆಗೆ ಉಪವಾಸ ಮಾಡುತ್ತಾರೆ. ಮತ ಪರಿವರ್ತನೆಯನ್ನು ಕಾನೂನಿನಲ್ಲಿ ನಿಷೇಧಿಸಬೇಕೆಂಬ ಬೇಡಿಕೆಯನ್ನು ದಲಿತ ಬುದ್ಧಿಜೀವಿಗಳು ವಿರೋಧಿಸುತ್ತಾರೆ. ತಾವೆಲ್ಲ ಒಟ್ಟಿಗೆ ಕ್ರೈಸ್ತ ಅಥವಾ ಮುಸಲ್ಮಾನರಾಗುತ್ತೇವೆಂಬ ಬೆದರಿಕೆಯ ಅಸ್ತ್ರ ಕಳೆದು ಹೋಗುತ್ತದೆಂಬ ಕಾರಣ ಅವರದು. ಆದರೆ ಕ್ರೈಸ್ತರಾದ ದಲಿತರಿಗೂ ಮೀಸಲಾತಿ ಕೊಡಿಸುವ, ಆ ಮೂಲಕ ಕ್ರೈಸ್ತರಾದರೆ ಮೀಸಲಾತಿ ಹೋಗುತ್ತ ದೆಂಬ ಅಡ್ಡಿಯನ್ನು ನಿವಾರಿಸುವ ಚರ್ಚಿನ ಹುನ್ನಾರವನ್ನು ಇದೇ ದಲಿತ ಬುದ್ಧಿ ಜೀವಿಗಳು ವಿರೋಧಿಸುತ್ತಾರೆ. ದಲಿತ ಕ್ರೈಸ್ತರಿಗೂ ಮೀಸಲಾತಿಯನ್ನು ವಿಸ್ತರಿಸಿದರೆ ದಲಿತರಾಗಿಯೇ ಇರುವ ತಮಗೆ ದೊರೆಯುವ ಈ ಸೌಲಭ್ಯವನ್ನು ಹಂಚಿಕೊಳ್ಳಬೇಕಾಗುವ ಅನನುಕೂಲಕ್ಕೆ ಅವರು ಸಿದ್ಧರಿಲ್ಲ. ಮುಸಲ್ಮಾನರಿಗೂ ಮೀಸಲಾತಿಯನ್ನು ವಿಸ್ತರಿಸಿದ ಆಂಧ್ರದ ಸ್ಯಾಮ್ಯುಯೆಲ್ ರಾಜಶೇಖರ್ ರೆಡ್ಡಿಯದು ಮುಂದೆ ಈ ವಿಸ್ತರಣೆಯನ್ನು ಕ್ರೈಸ್ತರಿಗೆ ಕೊಡುವ ಯೋಜಿತ ತಂತ್ರ. ದಲಿತರಿಗೆಲ್ಲ ತಮ್ಮ ಮನೆಯಿಂದ ಹಿಂದೂ ದೇವದೇವತೆಯರ, ಮಾರಮ್ಮನದೂ ಸೇರಿದಂತೆ, ಪಟಗಳನ್ನು ಹೊರ ಹಾಕಿಸಿ ಬುದ್ಧ ದೀಕ್ಷೆ ಕೊಡಿಸುವ ಚಳವಳಿ ಮಾಡುವ ದಲಿತ ಬುದ್ಧಿ ಜೀವಿಗಳು ಸರ್ಕಾರಿ ದಾಖಲೆಯಲ್ಲಿ ಮಾತ್ರ ದಲಿತ ಜಾತಿ ಎಂದೇ ಬರೆಸುತ್ತಾರೆ. ಪರಿವರ್ತನೆಯನ್ನು ನಿಷೇಧಿಸಬೇಕೆಂದು ಮನವಿ ಅರ್ಪಿಸುವ ಮಠಾಧೀಶರಿಗೆ ಈ ಎಲ್ಲ ತಂತ್ರಗಾರರೂ ‘ಮಠಾಧೀಶರು ತಮ್ಮ ಕೆಲಸ ತಾವು ಮಾಡಿಕೊಂಡಿರಲಿ. ಈ ವಿಷಯಕ್ಕೆ ಬರುವುದು ಬೇಡ" ಎಂದು ಎಚ್ಚರಿಕೆ ನೀಡುತ್ತಾರೆ. ಮಠಾಧೀಶರ ಕೆಲಸವೆಂದರೆ ಚುನಾವಣಾ ಪೂರ್ವದಲ್ಲಿ ರಾಜಕಾರಣಿಗಳು ತಾವು ಕರೆತರುವ ಛಾಯಾಚಿತ್ರಕಾರನ ಎದುರು ಅವರಿಗೆ ಫಲಪುಷ್ಪಗಳನ್ನು ಅರ್ಪಿಸಿ ಪಾದಸ್ಪರ್ಶ ಮಾಡುವಾಗ , ಆಶೀರ್ವಾದ ಸೂಚಕ ಬಲಗೈ ಎತ್ತುವುದು ಮಾತ್ರವೆ?
ನೈತಿಕ ಹೊಣೆ ಯಾರದು?
ಇಂಥ ಸ್ಥಿತಿಯಲ್ಲಿ ಕೆಲವು ಹಿಂದೂ ಯುವಕರು, ಮತ ಪರಿವರ್ತನೆಯು ಅವ್ಯಾಹತವಾಗಿ ನಡೆಯುವ ಪ್ರದೇಶದವರು, ತಾವೇ ಅದನ್ನು ತಡೆಯಲು ಮುಂದೆ ಹೋದಾಗ ಈ ತಂತ್ರಗಾರರು ಮತ್ತು ಮಾಧ್ಯಮದವರು ದೊಡ್ಡ ಗದ್ದಲ ಎಬ್ಬಿಸುತ್ತಾರೆ. ಆ ಮೂಲಕ ಅಂತಾರಾಷ್ಟ್ರೀಯ ಆಧಿಪತ್ಯವುಳ್ಳ ಕ್ರೈಸ್ತರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಅನಾಹುತವಾಗುತ್ತಿದೆ ಎಂಬ ಗದ್ದಲ ಎಬ್ಬಿಸುತ್ತಿದ್ದಾರೆ. ಫ್ರಾನ್ಸ್ ದೇಶದಲ್ಲಿ ಯಾವ ಶಾಲಾ ಮಕ್ಕಳೂ ತಮ್ಮ ಮತ ಲಾಂಛನಗಳನ್ನು ಧರಿಸಬಾರದು. ಎಲ್ಲರಲ್ಲೂ ಭೇದವಿಲ್ಲದೆ ತಾವು ಫ್ರೆಂಚರು ಎಂಬ ಭಾವನೆ ಬೆಳೆಯಬೇಕು ಎಂಬ ಉದ್ದೇಶದಿಂದ ಮುಸ್ಲಿಂ ಹುಡುಗಿಯರು ತಲೆಗೆ ಚೌಕ ಕಟ್ಟುವುದನ್ನೂ ಸಿಖ್ ಹುಡುಗರು ಪೇಟಾ ಕಟ್ಟುವುದನ್ನೂ ನಿಷೇಧಿಸಿದ್ದಾರೆ. ಮೊನ್ನೆ ಫ್ರಾನ್ಸಿಗೆ ಅಲ್ಪಾವಧಿ ಭೇಟಿ ನೀಡಿದ ನಮ್ಮ ಪ್ರಧಾನಿ ಮನಮೋಹನ ಸಿಂಗರು ಸಿಖ್ ಹುಡುಗರಿಗೆ ಪೇಟಾ ಕಟ್ಟಿ ಶಾಲೆಗೆ ಹೋಗುವ ಅವಕಾಶ ಕೊಡುವಂತೆ ಅಧ್ಯಕ್ಷ ಸರ್ಕೋಜಿಗೆ ಮನವಿ ಮಾಡಿದರು. ಆದರೆ ಮಿಶನರಿಗಳ ವಿರುದ್ಧ ಒರಿಸ್ಸಾ ಮತ್ತು ಕರ್ನಾಟಕದ ಕೆಲವು ಕಡೆಗಳಲ್ಲಿ ನಡೆಯುತ್ತಿರುವ ಗಲಭೆಯ ಹಿಂದಿರುವ ಕಾರಣವನ್ನು ವಿವರಿಸದೆ ತಾವು ಸ್ವದೇಶಕ್ಕೆ ಹಿಂತಿರುಗಿದ ತಕ್ಷಣ ಕಠಿಣ ಕ್ರಮ ಕೈಗೊಂಡು ಗಲಭೆಯನ್ನು ಹತ್ತಿಕ್ಕುವುದಾಗಿ ಆಶ್ವಾಸನೆ ಇತ್ತು ಬಂದರು. ದಿಲ್ಲಿಗೆ ಬಂದ ತಕ್ಷಣ ಈ ಗಲಭೆಗಳನ್ನು ಬಳಸಿಕೊಂಡು ಈ ಎರಡು ರಾಜ್ಯಗಳಲ್ಲಿ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಎಂದರೆ ತಮ್ಮದೇ ಆದ ಕಾಂಗ್ರೆಸ್ ಆಳ್ವಿಕೆಯನ್ನು ಹೇರುವ ಹುನ್ನಾರ ನಡೆಸಿದ್ದಾರೆ.
ಪ್ರಜಾಪ್ರಭುತ್ವಾತ್ಮಕವಾಗಿ, ಕಾನೂನು ಸಮ್ಮತವಾದ ವಿಧಾನಗಳಿಂದ ಮತಾಂತರದ ಪಿಡುಗನ್ನು ತಡೆಯುವುದು ಸಾಧ್ಯವಿಲ್ಲವೆಂಬ ಸ್ಥಿತಿಯಲ್ಲಿ ಕೆಲವರಾದರೂ ಹತಾಶರು ಹಿಂಸಾ ಮಾರ್ಗಕ್ಕೆ ಇಳಿದು, ಹಿಂಸಾ ಮಾರ್ಗದ ಪರಿಣಾಮದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಭೂಗತ ಮಾರ್ಗವನ್ನು ಆರಂಭಿಸಿದರೆ ಅದಕ್ಕೆ ನೈತಿಕ ಹೊಣೆ ಯಾರದು? ಮುಸ್ಲಿಂ ಭಯೋತ್ಪಾದಕರನ್ನು ನಿವಾರಿಸುವ ಇಚ್ಛೆಯಾಗಲಿ, ಶಕ್ತಿಯಾಗಲಿ ಸರ್ಕಾರ ಮತ್ತು ರಾಜಕೀಯ ಪಕ್ಷಗಳಿಗೆ ಇಲ್ಲದಿರುವಾಗ ತಾವೇ ಯಾಕೆ ದೇಶದ ಸಂಸ್ಕೃತಿಯ ರಕ್ಷಣೆಯ ಮಾರ್ಗಗಳನ್ನು ಹುಡುಕಬಾರದು ಎಂಬ ವಿಚಾರದ ಜನರು ಇಲ್ಲವೆ? ಸೆಪ್ಟೆಂಬರ್ ೧೧ರ ನಂತರ ಅಮೆರಿಕದಲ್ಲಿ ಒಂದೇ ಒಂದು ಭಯೋತ್ಪಾದನೆ ನಡೆದಿಲ್ಲ. ನಮ್ಮಲ್ಲಿ ಪ್ರತಿದಿನ ಒಂದಲ್ಲ ಒಂದು ಊರಿನಲ್ಲಿ ಹತ್ತಿಪ್ಪತ್ತು ಮೂವತ್ತು ಐವತ್ತು ಜನರನ್ನು ಸಾಯಿಸುತ್ತಲೇ ಇದ್ದಾರೆ. ಏನಕೇನಪ್ರಕಾರೇಣ ಅಧಿಕಾರ ಹಿಡಿದುಕೊಂಡಿರುವ ರಾಜಕಾರಣಿಗಳು ಇದನ್ನು ತಡೆಯುವುದು ಕನಸಿನ ಮಾತು. ಸತತ ಭಯೋತ್ಪಾದನೆಯಿಂದ ದೇಶದ ಧೃತಿಯನ್ನು ಉಡುಗಿಸಿ ಆನಂತರ ಎಲ್ಲ ಕಡೆಗಳಲ್ಲೂ ಏಕಕಾಲದಲ್ಲಿ ಬೆಂಕಿ ಹಚ್ಚಿ ಅಧಿಕಾರ ಹಿಡಿಯುವ ತಂತ್ರ ಭಯೋತ್ಪಾದಕರದು. ಲೆನಿನ್ ಮಾಡಿದ್ದೂ ಇದೇ ತಂತ್ರವನ್ನು, ಮಾವೋ ಮಾಡಿದ್ದೂ ಇದೇ ತಂತ್ರವನ್ನು, ನೇಪಾಳದ ಪ್ರಚಂಡನದೂ, ನಮ್ಮ ನಕ್ಸಲೀಯರದೂ ಇದೇ ತಂತ್ರ, ಇದೇ ವಿಧಾನ. ಈ ಹತಾಶೆ ಹಿಂದೂಗಳಲ್ಲಿಲ್ಲವೆ? ಅವರಲ್ಲಿ ಕೆಲವರಾದರೂ ಹತಾಶೆಯ ದಾರಿ ಹಿಡಿದರೆ ಸಮೂಹ ಖಂಡನೆಯಿಂದ ಅದನ್ನು ತಡೆಯಲು ಸಾಧ್ಯವೇ?
ಜಾತಿ ಆಧಾರದ ಮೇಲೆ ಅಧಿಕಾರ ಹಿಡಿಯುವ ರಾಜಕಾರಣಿಗಳು, ಮಾಧ್ಯಮದವರು, ಬುದ್ಧಿಜೀವಿಗಳನ್ನೆಸಿಕೊಳ್ಳುವವರು ಈ ಅತ್ಯಂತ ಜವಾಬ್ದಾರಿಯ ಪ್ರಶ್ನೆಯನ್ನು ಸ್ವಲ್ಪವಾದರೂ ಜವಾಬ್ದಾರಿಯಿಂದ ಚಿಂತಿಸಿ, ತುಸುವಾದರೂ ಪ್ರಾಮಾಣಿಕತೆಯಿಂದ ವರ್ತಿಸಬೇಕು.
ಫ್ರಾಂಕ್ವಾಗೋತಿಯೇ ತಮ್ಮ ಲೇಖನವನ್ನು ಈ ವಾಕ್ಯಗಳಿಂದ ಮುಗಿಸುತ್ತಾರೆ. “ಸೋನಿಯಾಗಾಂಧಿಯ ಚುಕ್ಕಾಣಿಯಲ್ಲಿ ನಾವು ಕ್ರೈಸ್ತ ಇಂಡಿಯಾದೆಡೆಗೆ ಸಾಗುತ್ತಿದ್ದೇವೆಯೆ? ಅದು ಭಾರತಕ್ಕೆ ಮಾತ್ರವಲ್ಲ. ಪ್ರಪಂಚಕ್ಕೇ ಬಹು ದೊಡ್ಡ ನಷ್ಟವಾಗುತ್ತದೆ. ಏಕೆಂದರೆ ಈ ಗ್ರಹದಲ್ಲಿ ಜೀವಂತವಾಗಿರುವ ಅಧ್ಯಾತ್ಮವು ಭಾರತದಲ್ಲಿ ಮಾತ್ರ ಇದೆ.”
-ಮುಕ್ತಾಯ
ಈ ವಿಷಯದಲ್ಲಿ ಆಸಕ್ತಿಯುಳ್ಳವರು ಕೆಳಗಿನ ಗ್ರಂಥಗಳನ್ನು ಪರಾಮರ್ಶಿಸಬಹುದು
1. ARUN SHOURIE : HARVESTING OUR SOULS (ASA)
2. ARUN SHOURIE : MISSIONARIES IN INDIA (ASA)
3. MATILDA JOSLYN GAGE : WOMAN, CHURCH AND STATE (VOICE OF INDIA, NEW DELHI)
4. SITARAM GOEL : CATHOLIC ASHRAMS Sannyasins or Swindlers? (VOICE OF INDIA)
5. SITARAM GOEL : HISTORY OF HINDU-CHRISTIAN ENCOUNTERS (A.D.304 to 1996) (VOICE OF INDIA.NEW DELHI)
6. ಡಾ.ನವರತ್ನ ಎಸ್.ರಾಜಾರಾಂ : ಕ್ರೈಸ್ತ ಮತದ ಉಗಮ ಮತ್ತು ಸದ್ಯಃ ಸ್ಥಿತಿ(ಹೊಸ ಶೋಧಗಳು) ಜಾಗರಣ ಪ್ರಕಾಶನ, ಬೆಂಗಳೂರು.
7. ಡಾ.ನವರತ್ನ ಎಸ್.ರಾಜಾರಾಂ : Dead Sea Scrolls and The Crisis of Christianity (Minerra press London)
8. N.S.Rajaram : Profiles in Deception; Ayodhya and the Dead Sea Scrolls (Voice of India)
9. N.S.Rajaram : Christianity is Collapsing Empire and its Designs in India (Hindu Writers Forum, New Delhi)
ಮಕ್ಕಳ ವಿಭಾಗದಲ್ಲಿ ಹೀಗಾ ಬರಿಯೋದು?
Friday, September 14, 2007
Monday, August 13, 2007
Friday, June 22, 2007
ಬ್ರಾಹ್ಮಣರೇನು ಮಾಡಬೇಕು? ಒಂದು ಜ್ವಲಂತ ಸಮಸ್ಯೆಯ ನಿರ್ವಿಕಾರ ವಿವೇಚನೆ
ಹಲವು ವರ್ಷಗಳಿಂದ ಬ್ರಾಹ್ಮಣ ಆಡಳಿತದಲ್ಲಿರುವ ವಿದ್ಯಾಸಂಸ್ಥೆಯೊಂದರ ಸಮಾರಂಭದಲ್ಲಿ ಮಾತಾಡುತ್ತ ಇತ್ತೀಚೆಗೆ ದಲಿತ ಸಾಹಿತ್ಯ ಪ್ರತಿಪಾದಕ ಸಾಹಿತಿಗಳೊಬ್ಬರು, ದೇಶದಲ್ಲಿ ಎಲ್ಲರೂ ಬ್ರಾಹ್ಮಣರಾಗಬೇಕೆಂದು ಪ್ರತಿಪಾದಿಸಿದರು. ಅದು ಪತ್ರಿಕೆಗಳಲ್ಲಿ ವರದಿಯಾಯಿತು. ಅದನ್ನೇ ನೆವಮಾಡಿ ಬ್ರಾಹ್ಮಣ ವಿರೋಧಿ ಹೇಳಿಕೆಗಳನ್ನು ಒಳಗೊಂಡ ಅನೇಕ ಪತ್ರಗಳು ಪತ್ರಿಕೆಯಲ್ಲಿ ಪ್ರಕಟವಾದವು. ಬರೆದವರಲ್ಲಿ ಹಲವಾರು ಸಾಹಿತಿಗಳಾಗಿದ್ದರು. ವಾಸ್ತವಿಕವಾಗಿ ಕಳೆದ ಒಂದು ದಶಕದಿಂದ ಸಾಹಿತಿಗಳ ಒಂದು ದೊಡ್ಡ ಗುಂಪು ಬ್ರಾಹ್ಮಣ ವಿರೋಧವನ್ನು ತನ್ನ ಚಟುವಟಿಕೆಯ ಮುಖ್ಯಾಂಶವಾಗಿ ಮಾಡಿಕೊಂಡಿದೆ. ಆಗಾಗ್ಗೆ ಒಂದಲ್ಲ ಒಂದು ನೆವದಿಂದ ಬ್ರಾಹ್ಮಣರ ಮೇಲೆ ಏನಾದರೊಂದು ಕೂಗೆಬ್ಬಿಸುವುದು ನಡೆದೇ ಇದೆ. ಬ್ರಾಹ್ಮಣೇತರ ಸಾಹಿತಿಗಳಲ್ಲಿ ಮತ್ತು ಸಾಹಿತಿಗಳಲ್ಲದವರಲ್ಲಿ ಕೆಲವರಾದರೂ ಈ ಬಗೆಯ ಪ್ರಚಾರವನ್ನು ವಿರೋಧಿಸುತ್ತಾ ಬಂದಿದ್ದಾರೆಂಬುದನ್ನು ಇಲ್ಲಿ ಹೇಳಬೇಕು. ಅಂಥವರನ್ನು ಸಾಮಾನ್ಯವಾಗಿ ಬ್ರಾಹ್ಮಣರ ಚೇಲಾಗಳೆಂದೋ, ಪ್ರತಿಗಾಮಿಗಳೆಂದೋ ನಿಂದಿಸಲಾಗುತ್ತದೆ. ಖಾಸಗಿಯಲ್ಲಿ ಎಷ್ಟು ರೋಷ ಪ್ರಕಟಿಸಿದರೂ ಬಹಿರಂಗದಲ್ಲಿ ಈ ಪ್ರಶ್ನೆಯನ್ನು ಕುರಿತು ತಮ್ಮ ಅಭಿಪ್ರಾಯಗಳನ್ನಾಗಲಿ ಬ್ರಾಹ್ಮಣರ ಸಮರ್ಥನೆಯನ್ನಾಗಲೀ ಪ್ರಕಟಮಾಡಿದ ಬ್ರಾಹ್ಮಣರು ವಿರಳ.
೧೯೨೦ರ ಸುತ್ತಮುತ್ತ ಮಹಾರಾಷ್ಟ್ರದಲ್ಲಿಯೂ ಮದ್ರಾಸ್ ಪ್ರಾಂತದಲ್ಲಿಯೂ ತಲೆಯೆತ್ತಿ ಕರ್ನಾಟಕದಲ್ಲಿಯೂ ಹಬ್ಬಿದ ಬ್ರಾಹ್ಮಣೇತರ ಚಳುವಳಿ ಬಹುತರವಾಗಿ ಮಧ್ಯಮ ಜಾತಿಗಳ ಬ್ರಾಹ್ಮಣೇತರ ರಾಜಕೀಯ ನಾಯಕರ ಮತ್ತು ಸುಶಿಕ್ಷಿತರ ಆಂದೋಲನವಾಗಿತ್ತು. ಸಾಹಿತಿಗಳು ಅದರಲ್ಲಿ ಪಾಲುಗೊಂಡಿದ್ದು ಅಪರೂಪ. ಆದರೆ ಈಗ ಸಾಹಿತಿಗಳ ಮತ್ತು ಬೌದ್ಧಿಕರ ಆಂದೋಲನವಾಗುತ್ತಿರುವುದು ವಿಶೇಷ. ಆ ಚಳುವಳಿಗೆ ಸರಕಾರಿ ನೌಕರಿಗಳಲ್ಲಿ ಬ್ರಾಹ್ಮಣರಿಗಿದ್ದ ಪ್ರಾಧಾನ್ಯವನ್ನು ಅಳಿಸಿ ಹಾಕಿ ಸಂಖ್ಯಾಬಲದಲ್ಲಿ ಹೆಚ್ಚಾಗಿದ್ದರೂ ನೌಕರಿಗಳಲ್ಲಿ ಸಾಕಷ್ಟು ಪ್ರಾತಿನಿಧ್ಯವಿಲ್ಲದ ಬ್ರಾಹ್ಮಣೇತರರಿಗೆ ಅಂಥಾ ಪ್ರಾತಿನಿಧ್ಯ ದೊರಕಿಸಿಕೊಳ್ಳುವುದು ಉದ್ದೇಶವಾಗಿತ್ತು. ಇದಕ್ಕಾಗಿ ಅರ್ಹತಾ ನಿಯಮಗಳನ್ನು ಸಡಿಲಿಸಬೇಕೆಂಬುದೇ ಮೊದಲಾದ ಸ್ಪಷ್ಟ ಬೇಡಿಕೆಗಳು ಮಂಡಿಸಲ್ಪಟ್ಟಿದ್ದವು. ರಾಜಕೀಯ ಒತ್ತಡಗಳ ಪರಿಣಾಮವಾಗಿ ಈ ಬೇಡಿಕೆಗಳು ಬಹಳ ಮಟ್ಟಿಗೆ ಸ್ವೀಕರಿಸಲ್ಪಟ್ಟು, ಬ್ರಾಹ್ಮಣೇತರ ವರ್ಗಗಳಲ್ಲಿ ಹೆಚ್ಚು ಮುಂದುವರೆದಿದ ಜಾತಿಗಳು ಮೇಲೆ ಬರುವುದು ಸಾಧ್ಯವಾಯಿತು.
ಹೀಗೆ ಒಂದೆಡೆಗೆ ಸರಕಾರಿ ನೌಕರಿಗಳಲ್ಲಿ ತಮಗಿದ್ದ ಪ್ರಾಧಾನ್ಯವನ್ನು ಕಳೆದುಕೊಳ್ಳುವುದರೊಡನೆ ಸ್ವಾತಂತ್ರ್ಯಾನಂತರ ಭೂಸುಧಾರಣೆಗಳಲ್ಲಿ ದಕ್ಷಿಣ ಭಾರತದಲ್ಲಿ ಬ್ರಾಹ್ಮಣರು ಬಹುತರವಾಗಿ ತಮ್ಮ ಕೃಷಿಭೂಮಿಗಳಿಗೆ ಎರವಾಗಿ ಗ್ರಾಮಗಳಲ್ಲಿ ಇದ್ದು ಬಿದ್ದ ಸ್ಥಾನಮಾನಕ್ಕೂ ಎರವಾದರು. ಅವರು ಎಲ್ಲಾ ಜಾತಿಗಳಿಗಿಂತ ಹೆಚ್ಚು ನಗರೀಕೃತರಾಗಿ ಕೃಷಿಭೂಮಿಯ ವಿಷಯದಲ್ಲಿ ದೂರವಾಸಿ ಭೂಮಾಲೀಕರಾಗಿದ್ದರಿಂದ ಅವರಿಗೆ ಸ್ವಾಭಾವಿಕವಾಗಿಯೆ ಭೂಸುಧಾರಣೆಯಲ್ಲಿ ಹೆಚ್ಚು ಪೆಟ್ಟು ಬಿತ್ತು ಎನ್ನುವಾ. ಸಂಖ್ಯಾಬಲದಲ್ಲಿ ದಕ್ಷಿಣದಲ್ಲಿ ಎಲ್ಲಿಯೂ ಶೇಕಡಾ ೫ನ್ನು ಮೀರದ ಬ್ರಾಹ್ಮಣರಿಗೆ ಪ್ರಜಾತಂತ್ರಾತ್ಮಕ ಆಡಳಿತದಲ್ಲಿ ನಿರ್ಣಾಯಕ ಸ್ಥಾನಗಳಿಂದ ಉಚ್ಚಾಟನೆಯಾಯಿತು. ದಕ್ಷಿಣದ ರಾಜ್ಯಗಳಲ್ಲಿ ಬ್ರಾಹ್ಮಣರಿಗೆ ಯಾವ ಮಂತ್ರಿ ಸಂಪುಟದಲ್ಲಿಯೂ ಸ್ಥಾನವಿಲ್ಲದೇ ದಶಕಗಳೇ ಕಳೆದದ್ದುಂಟು.
ಬ್ರಾಹ್ಮಣರ ಅನೇಕ ‘ಹಲ್ಲುಗಳು’ ಉದುರಿಸಲ್ಪಟ್ಟು ಅವರು ಅಶಕ್ತ ಸ್ಥಿತಿಗಿಳಿಸಲ್ಪಟ್ಟ ಕಾಲದಲ್ಲಿ ಬ್ರಾಹ್ಮಣ ವಿರೋಧದ ಕಡಾಯಿ ಆರತೊಡಗಬೇಕಿತ್ತು. ಆದರೆ ಹಾಗಾಗದೆ ಅದನ್ನು ಮತ್ತೆ ಹೊತ್ತಿಸುವ ಪ್ರಯತ್ನ, ಅದೂ ಸಾಹಿತಿಗಳಿಂದ ಪ್ರಾರಂಭವಾದದ್ದು ಸೋಜಿಗವಾಗಿದೆ.
ಈ ಹೊಸ ಬ್ರಾಹ್ಮಣ ವಿರೋಧ ಸತ್ರದಲ್ಲಿ ಕೆಲವೊಂದು ಸ್ವಾರಸ್ಯಾಂಶಗಳು ಅಡಗಿವೆ. ಜಾತಿಯನ್ನೆತ್ತಿ ಆಡುವುದು ನನಗೂ ಸಂತೋಷದ ಕೃತ್ಯವಲ್ಲ. ಆದರೆ ಬ್ರಾಹ್ಮಣ ಜಾತಿಯನ್ನು ಕುರಿತು ಆಡುವವರು ಜಾತಿಯನ್ನು ಗಮನಿಸಿ ಆಡುತ್ತಿರುವುದರಿಂದ ನಾನೂ ಒಂದು ಕ್ಷಣ ಆ ಮಾರ್ಗವನ್ನು ಅನುಸರಿಸಿದರೆ ಅಪರಾಧವಾಗಲಿಕ್ಕಿಲ್ಲ. ಈ ಬ್ರಾಹ್ಮಣ ವಿರೋಧದ ಅಂದೋಲನದಲ್ಲಿ ಮುಂದಾಳ್ತನ ವಹಿಸಿದವರ ಜಾತಿಗಳನ್ನು ನೋಡಿದರೆ ಅವರಲ್ಲಿ ಹೆಚ್ಚಿನವರು ಬ್ರಾಹ್ಮಣೇತರ ಹಕ್ಕುಗಳನ್ನು ಎತ್ತಿ ಹಿಡಿದು ೧೯೨೦ರಿಂದಲೂ ಹೋರಾಡುತ್ತಾ ಬಂದ, ಅದರಿಂದ ಲಾಭ ಪಡೆದ ಮಧ್ಯಮ ಜಾತಿಗಳ ಬ್ರಾಹ್ಮಣೇತರರು. ಎಲ್ಲಾ ತರಹದ ನೌಕರಿಗಳಲ್ಲಿ ಅವರ ಪಾಲು ಒಂದೇ ಸಮನೆ ಹೆಚ್ಚುತ್ತ ಬಂದಿದೆ. ಭೂಸುಧಾರಣೆಗಳಿಂದಾಗಿ ಕಡಿಮೆ ಪೆಟ್ಟು ತಿಂದ ಜಾತಿಗಳೂ ಇವೇ ಆಗಿವೆ. ಈ ವರ್ಗಗಳೇ ಬ್ರಾಹ್ಮಣರನ್ನು ಅಪ್ಪಳಿಸಿದ ನಂತರದ ಭೂಸುಧಾರಣೆಯ ಹೆದ್ದೆರೆಗಳು ಅನಿವಾರ್ಯವಾಗಿ ತಮ್ಮ ಜಾತಿಯವರ ಜಮೀನುಗಳನ್ನೂ ಕೊಚ್ಚಿಕೊಂಡು ಹೋಗುವುದನ್ನು ತಡೆಯಲು ಬಯಸಿ ಆ ಸುಧಾರಣೆಗಳ ಮುಂದಿನ ಹೆಜ್ಜೆಗಳನ್ನು ಹತ್ತಿಕ್ಕಲು ಯತ್ನಿಸಿದವರೆಂದೂ ಇಲ್ಲಿ ಗಮನಿಸಬೇಕು. ಈ ವರ್ಗದ ಜನರೇ, ಅಂದರೆ ೧೯೨೦ರ ದಶಕದಲ್ಲಿ ಜಾತಿ ಆಧಾರದ ಮೇಲೆ ತಮಗಿಂತ ಹಿಂದುಳಿದವರಿಗೆ ಪ್ರಾಧಾನ್ಯ ಕೊಡುವ ಯತ್ನಗಳನ್ನು ಬಲವಾಗಿ ವಿರೋಧಿಸುವವರಾಗಿದ್ದಾರೆ.
ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ಬಹುಜನ ಸಮಾಜಗಳ ಹೆಸರಲ್ಲಿ ಅಧಿಕಾರ ನಡೆಸಿದ ಈ ವರ್ಗವೇ ಅಧಿಕಾರದ ಫಲಗಳನ್ನು ಹೆಚ್ಚಾಗಿ ಉಪಭೋಗಿಸಿ ಆರ್ಥಿಕ ಸಾಮಾಜಿಕ ಉತ್ಕರ್ಷ ಸಾಧಿಸಿಕೊಂಡಿದ್ದು. ಈಗ ಅವರಿಗಿಂತ ಕೆಳಗಿರುವವರು ಎಚ್ಚೆತ್ತು ತಮಗೆ ಸಿಗಬೇಕಾದ್ದು ಸಿಗಲಿಲ್ಲವೆಂದು ಕೋಪಿಸತೊಡಗಿದ್ದಾರೆ. ಈ ಅವರ ಸಿಟ್ಟನ್ನು ತಮ್ಮಿಂದ ಅರ್ಧ ಶತಮಾನದಿಂದ ‘ಅನಿಷ್ಟಕ್ಕೆ ಶನೀಶ್ವರ’ ಎನಿಸಿರುವ ಬ್ರಾಹ್ಮಣ ಜಾತಿಯ ಮೇಲೆ ತಿರುಗಿಸಿಬಿಡುವ ಹೇತುವಿನಿಂದ ಈ ಹೊಸ ಬ್ರಾಹ್ಮಣ ವಿರೋಧ ಆಂದೋಲನ ಪ್ರೇರಿತವಾಗಿದೆಯೆಂದು ಕಾಣುತ್ತದೆ. ಇಂಥ ಆರೋಪ ಮಾಡುವುದು ಸಂತೋಷಕರವಾದದ್ದಲ್ಲ. ಆದರೆ ಬ್ರಾಹ್ಮಣರ ಮೇಲೆ ನಿಷ್ಕಾರಣ ಪ್ರಹಾರ ಮಾಡುವುದನ್ನೇ ಉದ್ಯೋಗ ಮಾಡಿಕೊಂಡಿರುವ ಮಧ್ಯಮ ಜಾತಿಗಳ ಈ ಸಾಹಿತಿಗಳ ಕೃತಿಗಳನ್ನು ಯಾವ ರೀತಿ ಅರ್ಥೈಸಲು ಸಾಧ್ಯವಿದೆಯೆಂದು ತೋರಿಸಲು ಇದನ್ನು ಕುರಿತಾಗಿ ಹೇಳಬೇಕಾಗಿದೆ.
ಈ ದೇಶದಲ್ಲಿ ಕಳೆದ ಮೂರೋ ಐದೋ ಸಾವಿರ ವರ್ಷಗಳಿಂದ (ಭಾರತೀಯ ಇತಿಹಾಸದ ಪ್ರಾಚೀನತೆಯ ಬಗ್ಗೆ ಅವರವರ ಕಲ್ಪನೆಗಳನ್ನು ಅನುಸರಿಸಿ) ಆದ ತಪ್ಪುತಡೆ ಅನಾಹುತಗಳಿಗೆಲ್ಲ ಬ್ರಾಹ್ಮಣರನ್ನು ಜವಾಬ್ದಾರಿ ಹಿಡಿಯುವುದು ಇವರ ಫ್ಯಾಷನ್ ಆಗಿಬಿಟ್ಟಿದೆ. ಜಾತಿ ಪದ್ಧತಿಯನ್ನು ಸೃಷ್ಟಿಸಿದವರು ಬ್ರಾಹ್ಮಣರು; ಅದಕ್ಕೆ ಧಾರ್ಮಿಕ ಸ್ವರೂಪ ಕೊಟ್ಟವರು ಬ್ರಾಹ್ಮಣರು; ಅದರಿಂದ ಪ್ರಯೋಜನ ಪಡೆದು ಸುಖಪಟ್ಟವರು ಬ್ರಾಹ್ಮಣರು; ಶಾಸ್ತ್ರ ಸಾಹಿತ್ಯಾದಿಗಳನ್ನು ಸಂಸ್ಕೃತದಲ್ಲಿ ಬರೆದು ಸಾಮಾನ್ಯರಿಗೆ ತಿಳಿಯದಂತೆ ಮಾಡಿ ವಿದ್ಯೆಯ ಗುತ್ತಿಗೆ ಹಿಡಿದವರು ಬ್ರಾಹ್ಮಣರು; ಬ್ರಾಹ್ಮಣೇತರರಿಗೆ ವಿದ್ಯೆಯನ್ನು ನಿರಾಕರಿಸಿದವರು ಬ್ರಾಹ್ಮಣರು; ಸಮಾಜವನ್ನು ಶೋಷಿಸಿ ಪರೋಪಜೀವನ ನಡೆಸಿದವರು ಈ ಪುರೋಹಿತ ವರ್ಗದವರು; ಇವರಿಂದಾಗಿಯೇ ಇತರ ಜಾತಿಗಳವರಿಗೆ ವಿದ್ಯೆಗಳಲ್ಲಿ ಮುಕ್ತ ಸ್ಪರ್ಧೆ ಸಾಧ್ಯವಾಗುತ್ತಿಲ್ಲ... ಆದ್ದರಿಂದ ಬ್ರಾಹ್ಮಣರನ್ನು ಎಲ್ಲಾ ರಂಗಗಳಲ್ಲಿ ಕೆಲಕಾಲ ತಡೆಹಿಡಿಯಬೇಕೆಂಬುದು ಅವರ ಈಗಿನ ಕೂಗು.
ಈ ಆರೋಪಗಳು ಬೌದ್ಧಿಕರೆನಿಸುವ ಜನರಿಂದ ಬರುತ್ತಿರುವುದರಿಂದ ಇನ್ನಷ್ಟು ಆಶ್ಚರ್ಯಕರವಾಗಿದೆ. ಬ್ರಾಹ್ಮಣರು ಜಾತಿ ಪದ್ಧತಿಯನ್ನು ನಿರ್ಮಿಸಿದರೆಂದು ಇತಿಹಾಸ ಸಮಾಜಶಾಸ್ತ್ರಗಳಲ್ಲಿ ನಿರಕ್ಷರಿಗಳಾದವರು ಮಾತ್ರ ನಂಬಬಹುದು. ಜಾತಿಗಳು ನಿರ್ಮಾಣವಾದದ್ದು ಐತಿಹಾಸಿಕ ಒತ್ತಡಗಳಿಂದ; ಭಾರತದ ವಿಶಿಷ್ಟ ಭೌಗೋಲಿಕ ಪರಿಸರದಿಂದಾಗಿ ಅದು ಗಟ್ಟಿಯಾಯಿತು. ಯೂರೋಪ್ ಅಥವಾ ಪಶ್ಚಿಮ ಏಶಿಯಾದಲ್ಲಿ ಎದ್ದಂಥ ಜನಾಂಗಗಳ ಒತ್ತಡ, ದಂಡಯಾತ್ರೆಗಳು ಇಲ್ಲಿ ಎದ್ದು ನಿಂತ ನೀರಿನ ಕಟ್ಟೆಯೊಡೆದು ಬಿಡಲಿಲ್ಲವಾಗಿ ಅದು ಸ್ಥಿರವಾಯಿತು. ರೋಮನ್ ಇತಿಹಾಸದಲ್ಲಿ ಆಢ್ಯರಿಗೂ ಪ್ಲೆಬ್(ಸಾಮಾನ್ಯ) ರಿಗೂ ಗಂಭೀರ ಕಲಹಗಳಾದಂತೆ ಇಲ್ಲಿ ಮೇಲ್ಜಾತಿಗಳವರಿಗೂ ಶೂದ್ರರಿಗೂ ಹೋರಾಟವಾಗಲಿಲ್ಲ. ಇದಕ್ಕೆಲ್ಲಾ ಬ್ರಾಹ್ಮಣರು ಕಾರಣವೆಂದು ಹೇಳುವುದಾದರೆ ಬ್ರಾಹ್ಮಣರು ಅತಿಮಾನುಷ ಬುದ್ಧಿಬಲದಿಂದ ಸಾವಿರಾರು ವರ್ಷಗಳಿಗಾಗಿ ಯಶಸ್ವಿ ಯೋಜನೆ ಹಾಕಿದರೆಂದು ಒಪ್ಪಬೇಕಾಗುತ್ತದೆ. ಅಂಥ ಅತಿಮಾನುಷ ಬುದ್ಧಿಶಕ್ತಿ ಬ್ರಾಹ್ಮಣರಿಗಿತ್ತೆಂದು ಯಾರೂ ನಂಬುವಂತಿಲ್ಲ. ನಿಜವಾಗಿ ನಡೆದದ್ದೆಂದರೆ ಶತಮಾನಗಳ ಕಾಲ ನಡೆದು ಬಂದ ಸಂಪ್ರದಾಯಕ್ಕೆ ಬ್ರಾಹ್ಮಣ ಶಾಸ್ತ್ರಕಾರರು ಶಾಸ್ತ್ರಮುದ್ರೆ ಒತ್ತಿದರಷ್ಟೇ. ಆಗಿನ ಎಲ್ಲಾ ಅರ್ಥವಂತ ವರ್ಗಗಳಿಗೂ ಅದು ಅನುಕೂಲವಿದ್ದುದರಿಂದ ಈ ಶಾಸ್ತ್ರಮುದ್ರೆ ಒತ್ತಲು ಸಾಧ್ಯವಾಯಿತೆಂದು ತೋರುತ್ತದೆ. ಪೌರೋಹಿತ್ಯದಿಂದ ಜೀವಿಸುವ ವರ್ಗಕ್ಕೆ ಯಜಮಾನ ಜಾತಿಗಳ ಬೆಂಬಲವಿಲ್ಲದಿದ್ದರೆ ಇದು ಆಗುತ್ತಲೂ ಇರಲಿಲ್ಲ.
ಈ ದೇಶದಲ್ಲಿ ಜಾತಿ ಪದ್ಧತಿಯನ್ನು ಎತ್ತಿ ಹಿಡಿದವರು ಬ್ರಾಹ್ಮಣರು ಮಾತ್ರ ಎಂಬ ರೀತಿಯಲ್ಲಿ ನಮ್ಮ ಇತಿಹಾಸವನ್ನು ಬರೆಯಲಾಗುತ್ತಿದೆ. ಬೌದ್ಧ ಜೈನ ಧರ್ಮಗಳನ್ನು ಕುರಿತು ಬರೆಯುವಾಗ ನಮ್ಮ ಚಿಕ್ಕಮಕ್ಕಳ ಪಾಠಗಳಲ್ಲಿ ಕೂಡ ಆ ಧರ್ಮಗಳ ಸಂಸ್ಥಾಪಕರು ಮಾನವ ಸಮತೆಯಲ್ಲಿ ನಂಬಿಕೆಯಿಟ್ಟಿದ್ದರೆಂದೂ ಜಾತೀಯ ಉಚ್ಚ ನೀಚವನ್ನು ಖಂಡಿಸುತ್ತಿದ್ದರೆಂದೂ ಬರೆಯಲಾಗುತ್ತದೆ. ಇದು ಸತ್ಯಕ್ಕೆ ದೂರವಾದದ್ದು. ನಿಜಕ್ಕೂ ಇವೆರೆಡೂ ಧರ್ಮಗಳು ಯಜ್ಞಸಂಸ್ಥೆಯ ವಿರುದ್ಧ ತಲೆಯೆತ್ತಿದವುಗಳು. ಅವುಗಳ ಮುಂದಾಳುಗಳು ಕ್ಷತ್ರಿಯರಾಗಿದ್ದರೂ ಬೆಂಬಲಿಗರು ವೈಶ್ಯರಾಗಿದ್ದರೆಂಬುದಕ್ಕೆ ತುಂಬಾ ಕುರುಹುಗಳು ಸಿಗುತ್ತವೆ. ವೇದ ಧರ್ಮದಲ್ಲಿ ಬ್ರಾಹ್ಮಣ ಕ್ಷತ್ರಿಯ ವೈಶ್ಯರೆಲ್ಲರೂ ‘ದ್ವಿಜ’ರೆನಿಸಿದರೂ ವೈಶ್ಯರಿಗಾಗಿ ಅವರ ಸಂಪತ್ತಿಗನುಗುಣವಾದ ಸ್ಥಾನ ಮಾನ ಇಲ್ಲದ್ದರಿಂದ ಅಸಂತುಷ್ಟರಾದ ಅವರು ಹೊಸ ಧರ್ಮಗಳಿಗೆ ಶರಣು ಹೋದರೆಂದು ಜಗತ್ತಿನ ಇತರ ಕಡೆಗಳ ಇತಿಹಾಸದಿಂದ ತರ್ಕಿಸಬಹುದು. ಆದರೆ ಜನ್ಮಸಿದ್ಧ ಜಾತಿಗಳನ್ನು ಬೌದ್ಧರೂ ಜೈನರೂ ಒಂದು ಸಾಮಾಜಿಕ ಒಡಂಬಡಿಕೆಯೆಂಬ ರೀತಿಯಲ್ಲಿ ಅಂಗೀಕರಿಸಿದ್ದರೆಂಬುದಕ್ಕೆ ಅವೆರಡರ ಸಾಹಿತ್ಯಗಳಲ್ಲಿಯೂ ಪ್ರಮಾಣಗಳು ಸಿಗುತ್ತವೆ. ಅಂತರವಿಷ್ಟೇ: ಅವರು ಬ್ರಾಹ್ಮಣರಿಗಿಂತ ಕ್ಷತ್ರಿಯ ವೈಶ್ಯರಿಗೆ ಮಹತ್ವ ಕೊಟ್ಟಿದ್ದಾರೆ. ಶೂದ್ರಾತಿಶೂದ್ರರನ್ನು ಅವರು ಕೂಡ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ.
ಈ ವ್ಯವಸ್ಥೆಯಿಂದ ಬ್ರಾಹ್ಮಣರು ಇತರರನ್ನು ಶೋಷಿಸಿ ತಾವು ಲಾಭ ಮಾಡಿಕೊಂಡರೆಂಬುದೂ ಸರಿಯಲ್ಲ. ಶ್ರೀಮಂತಿಕೆ ಎಂದೂ ಬ್ರಾಹ್ಮಣರ ಆದರ್ಶವಾಗಿರಲಿಲ್ಲ. ‘ಬಡ ಬ್ರಾಹ್ಮಣ’ನೇ ಎಲ್ಲಾ ಕಥೆಗಳಲ್ಲಿ ಕಾಣಿಸಿಕೊಳ್ಳುವಾತ. ಶಾಸ್ತ್ರಗಳಲ್ಲಿ ಹೇಳಿದ ರೀತಿಯಲ್ಲಿ ಗಾರ್ಹಸ್ಥ್ಯ ಧರ್ಮ ಪಾಲಿಸುವವರಿಗೆ ಸಂಪತ್ತಿನ ಸಂಚಯ ಸಾಧ್ಯವೂ ಇರಲಿಲ್ಲ. ನಿರಂತರವಾದ ದಾನ ಪ್ರತಿಗ್ರಹಗಳ ಶ್ರೇಣಿಯಿಂದ ಬ್ರಾಹಣರು ತಮ್ಮೊಳಗೆ ಒಂದು ತರಹದ ಅನಾದಿ ಸಮಾಜವಾದವನ್ನು ಜಾರಿಗೆ ತಂದಿದ್ದರು. ಇತ್ತೀಚಿನವರೆಗೆ ಬ್ರಾಹ್ಮಣದಲ್ಲಿ ಅತಿ ಶ್ರೀಮಂತರೂ ಅತಿ ದರಿದ್ರರೂ, ಇತರ ಜಾತಿಗಳಲ್ಲಿರುವಂತೆ, ಇರಲಿಲ್ಲ. ಅವರ ಸರಾಸರಿ ಆದಾಯ ಇತರರಿಗಿಂತ ಸ್ವಲ್ಪ ಮೇಲ್ಮಟ್ಟದಲ್ಲಿ ಇದ್ದರೆ ಅದಕ್ಕೆ ಈ ಸಮಾಜವಾದ ಕಾರಣವಾಗಿತ್ತು.
ಸ್ವಾರಸ್ಯವೆಂದರೆ ಒಂದು ದಶಕದ ಹಿಂದೆ ಎದ್ದ ಬ್ರಾಹ್ಮಣ ವಿರೋಧಿ ಸಾಹಿತ್ಯ ಚಳುವಳಿಯಲ್ಲಿ ಒಬ್ಬ ಸಾಹಿತಿಗಳು “ಬ್ರಾಹ್ಮಣರಿಗೆ ಆಸ್ತಿ ಕಡಿಮೆ ಇತ್ತು ಮತ್ತು ಸುಧಾರಣೆಗಳ ನಂತರ ಇನ್ನೂ ಕಡಿಮೆಯಾಯಿತು” ಎಂಬ ಅಂಶವನ್ನೇ ಅವರ ವಿರುದ್ಧ ಒಂದು ವಾದವಾಗಿ ಉಪಯೋಗಿಸಿದರು. ಹೌದು ಅವರಿಗೆ ಆಸ್ತಿಯಿಲ್ಲ, ಆದ್ದರಿಂದ ತಾವು ಬದುಕಿರುವ ಪ್ರದೇಶದ ಹಿತಾಹಿತ ಸುಖದುಃಖಗಳಲ್ಲಿ ಅವರಿಗೆ ಆಸಕ್ತಿಯಿಲ್ಲ. ಆದ್ದರಿಂದ ಅವರು ಇನ್ನೂ ಅಪಾಯಕಾರಿಗಳು ಎಂದು ವಾದಿಸಿದರು. ಬ್ರಾಹ್ಮಣರು ಶ್ರೀಮಂತರಾದರೂ ಅಪರಾಧ, ಬಡವರಾದರೂ ಅಪರಾಧವೇ. ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು.
ಬ್ರಾಹ್ಮಣರು ಇತರರಿಗೆ ವಿದ್ಯೆಯನ್ನು ನಿರಾಕರಿಸಿ ಅಜ್ಞಾನದಲ್ಲಿಟ್ಟರು ಎಂಬುದು ಅವರ ಮೇಲಿನ ಇನ್ನೊಂದು ಕೋಟಿ. ಇದೂ ಮಿಥ್ಯಾರೋಪ. ವೇದಪಾಠವನ್ನು ಶೂದ್ರರಿಗೂ ಸ್ತ್ರೀಯರಿಗೂ ವೇದೋತ್ತರ ಕಾಲದಲ್ಲಿ ನಿರಾಕರಿಸಿದ್ದು ಸತ್ಯ. ಆದರೆ ಇತರ ಯಾವ ಶಾಸ್ತ್ರವೂ ನಿರಾಕರಿಸಲ್ಪಡಲಿಲ್ಲ. ಸಂಸ್ಕೃತದ ಅಧ್ಯಯನ ಕೂಡ ಇದಕ್ಕೆ ಪ್ರಮಾಣ. ಬೇಕಾದರೆ ಮಹಾಭಾರತದಲ್ಲಿ ಬರುವ ಅತಿ ಪವಿತ್ರ ಅಂಶವಾದ ವಿಷ್ಣುಸಹಸ್ರ ನಾಮದ ಫಲಶೃತಿಯನ್ನು ನೋಡಿದರೆ ಸಾಕು. ಅದರ ಫಲಭಾಗದಲ್ಲಿ ಈ ಸ್ತೋತ್ರವನ್ನು ಓದಲು ಕೇಳಲು (ಶೃಣುಯಾತ್ ಪರಿಕೀರ್ತಯೇತ್) ಬ್ರಾಹ್ಮಣರಿಗೆ ಕ್ಷತ್ರಿಯರಿಗೆ ವೈಶ್ಯರಿಗೆ ಶೂದ್ರರಿಗೆಲ್ಲ ಹಕ್ಕು ಕೊಟ್ಟಿದೆ. ಪುರಾಣಗಳ ರಚನೆಯಾದದ್ದೇ ‘ಸ್ತ್ರೀ ಶೂದ್ರ ದ್ವಿಜ ಬಂಧೂನಾಂ’ (ಹೆಂಗಸರು, ಶೂದ್ರರು ಮತ್ತು ವಿದ್ಯೆ ಓದದ ಬ್ರಾಹ್ಮಣರ) ಸಲುವಾಗಿ. ಇದು ಬರೇ ಹೇಳಿಕೆಯಲ್ಲ, ಸಂಸ್ಕೃತದಲ್ಲಿ ಶೂದ್ರ ಕವಿಗಳೂ ಇದ್ದರು. ಬ್ರಾಹ್ಮಣ ಧರ್ಮದ ಅತ್ಯಂತ ಕಠೋರ ನೆಲೆವೀಡಾಗಿದ್ದ ಕೇರಳದಲ್ಲಿ ಅನೇಕ ಅಬ್ರಾಹ್ಮಣ ಸಂಸ್ಕೃತ ವಿದ್ವಾಂಸರು ಈಗಲೂ ಇದ್ದಾರೆ.
ವಾಸ್ತವಿಕವಾಗಿ ನಡೆದದ್ದೆಂದರೆ, ಬ್ರಾಹ್ಮಣರು ಇತರರಿಗೆ ಸಂಸ್ಕೃತ ವಿದ್ಯೆ ನಿರಾಕರಿಸಲಿಲ್ಲ. ಆಗಿನ ರಾಜಕೀಯ ಸಂಬಂಧಗಳಲ್ಲಿಯೂ ಉತ್ಪಾದನೆ ವಿತರಣೆಗಳ ಪದ್ಧತಿಯಲ್ಲಿಯೂ ಅಕ್ಷರವಿದ್ಯೆಗೆ ಈಗಿನ ಮಹತ್ವ ಇರಲಿಲ್ಲ. ಬಹುಶಃ ಕೃಷಿಯಲ್ಲಿ ನಿರತರಾಗಿದ್ದವರಿಗೆ ಅಕ್ಷರವಿದ್ಯೆಯಲ್ಲಿ ತಲೆಹಾಕಲು ವೇಳೆಯೂ ಇದ್ದಿರಲಿಕ್ಕಿಲ್ಲ.
ವಿದ್ಯೆಯ ನಿರಾಕರಣೆಯ ವಿಷಯದಲ್ಲಿ ತಿಳಿದ ತಿಳಿಯದ ತಪ್ಪು ಭಾವನೆಗಳೂ ತುಂಬಾ ಹಬ್ಬಿವೆ. ಬ್ರಾಹ್ಮಣ ಗಂಡಸರು ವೇದಗಳನ್ನು ತಮ್ಮ ಸ್ವಂತ ಗುತ್ತಿಗೆಯಾಗಿ ಮಾಡಿಕೊಂಡದ್ದರಿಂದ ಯಾರಿಗೂ ಲಾಭ ನಷ್ಟವಾಗಲಿಲ್ಲ. ಬರೇ ವೇದ ಓದಿದವರಿಗೆ ಬ್ರಾಹ್ಮಣರಲ್ಲಿಯೂ ಗೌರವ ಹೆಚ್ಚು ಇರಲಿಲ್ಲ. ತರ್ಕ ವೇದಾಂತಗಳನ್ನು ಓದಿದವರಿಗೆ ಮಾತ್ರ ಗೌರವ ಇತ್ತು. ವೇದ ಮಾತ್ರ ಓದಿ ಪೌರೋಹಿತ್ಯ ವೃತ್ತಿಯಿಂದ ಜೀವಿಸುವವರಲ್ಲಿ ಅನೇಕರು ನಿರಕ್ಷರಿಗಳಾಗಿದ್ದರು. ‘ವೇದಾಭ್ಯಾಸ ಜಡರು’ ಎಂಬುದಾಗಿ ಕವಿಗಳೂ ತಾರ್ಕಿಕರೂ ವೇದಂತಿಗಳೂ ಅವರನ್ನು ತಿರಸ್ಕರಿಸುತ್ತಿದ್ದರು. ಇಂದಿಗೂ ಈ ಜನರೇ ಬ್ರಾಹ್ಮಣರಲ್ಲಿ ಅತಿ ಹಿಂದುಳಿದವರಾಗಿದ್ದಾರೆ. ಆದ್ದರಿಂದ ಬ್ರಾಹ್ಮಣರನ್ನು ನಿಂದಿಸಬೇಕಾದಾಗ ‘ಪುರೋಹಿತ ವರ್ಗ’ ಎಂದು ಬಯ್ಯುವವರು ಅತ್ಯಂತ ಅಜ್ಞಾನವನ್ನು ಪ್ರದರ್ಶಿಸುತ್ತಾರೆ.
ವಿದ್ಯೆ ಇಲ್ಲದಿರುವಿಕೆಯ ನೈಜ ಕಾರಣ ತಿಳಿಯಬೇಕಾದರೆ ಲಿಂಗಾಯಿತರ ಉದಾಹರಣೆಯನ್ನು ಪರಿಶೀಲಿಸಬೇಕು. ೧೨ನೇ ಶತಮಾನದಲ್ಲಿ ವೈದಿಕ ಸಂಸ್ಥೆಯನ್ನು ಪೂರ್ತಿ ಧಿಕ್ಕರಿಸಿ ಜಾತ್ಯಾತೀತ ವ್ಯವಸ್ಥೆಯೊಂದನ್ನು ತರುವ ಕಲ್ಪನೆ ಲಿಂಗಾಯಿತ ನಾಯಕರಾದ ಬಸವಣ್ಣನವರಿಂದಾಯಿತು. ಲಿಂಗಾಯಿತ ಧರ್ಮವನ್ನು ಸೇರಿದವರೆಲ್ಲರಿಗೂ ಸಮಾನಾಧಿಕಾರ ತಾತ್ವಿಕವಾಗಿಯಾದರೂ ದೊರೆಯಿತು. ಅವರಲ್ಲಿ ಕೆಲವರು ಸಂಸ್ಕೃತ ಕನ್ನಡಗಳೆರಡರಲ್ಲಿ ಅಗಾಧ ವಿದ್ವಾಂಸರೂ ಮಹಾಕವಿಗಳೂ ಆದರು. ಆದರೆ ಈ ಶರ್ತಮಾನದ ಪ್ರಾರಂಭದಷ್ಟು ಹೊತ್ತಿಗೆ ಅವರು ವಿದ್ಯೆಯಲ್ಲಿ ಹಿಂದುಳಿದವರೆಂದು ಸವಲತ್ತುಗಳನ್ನು ಬೇಡಲಾರಂಭಿಸಿದರು. ಈ ನಿರ್ವಿದ್ಯೆಗೆ ಬ್ರಾಹ್ಮಣರು ಕಾರಣವಾಗಿರಲಿಲ್ಲ. ಅವರಿಗೆ ಪ್ರತ್ಯೇಕ ಮಠಗಳೂ ಇದ್ದವು. ಅವರಿಗೆ ವಿದ್ಯೆ ಬೇಕಾದರೆ ಬ್ರಾಹ್ಮಣರನ್ನು ಆಶ್ರಯಿಸಬೇಕಾಗಿರಲಿಲ್ಲ. ಆದರೆ ಆರ್ಥಿಕ ಸಂಬಂಧಗಳಲ್ಲಿ ಕೃಷಿಕರ ಸ್ಥಾನ ಮತ್ತು ಅಗತ್ಯಗಳು ವಿದ್ಯೆಯನ್ನು ಅವರಿಗೆ ಅನಿವಾರ್ಯವಾಗಿ ಮಾಡಲಿಲ್ಲವಾದ್ದರಿಂದ ಅವರು ವಿದ್ಯೆಯಲ್ಲಿ ಹೆಚ್ಚು ಆಸಕ್ತರಾಗಲಿಲ್ಲ. ಅಕ್ಷರವಿದ್ಯೆಯ ಅಗತ್ಯದ ಪ್ರಮಾಣವನ್ನಾಧರಿಸಿ ಲಿಂಗಾಯಿತರಲ್ಲಿ ಅಯ್ಯನವರೂ ಬಣಜಿಗರೂ ಹೆಚ್ಚು ಅಕ್ಷರಸ್ಥರಾಗಿದ್ದರು. ಬ್ರಾಹ್ಮಣರಲ್ಲಿಯೂ ಹಳ್ಳಿಗಾಡಿನಲ್ಲಿದ್ದವರು ಪಟ್ಟಣವಾಸಿಗಳಿಗಿಂತ ಕಡಿಮೆ ವಿದ್ಯಾವಂತರಾಗಿದ್ದರು, ಅಗ್ರಹಾರ ಘಟಿಕಾ ಸ್ಥಾನಗಳಲ್ಲಿದ್ದವರು ಹೆಚ್ಚು ವಿದ್ಯಾವಂತರಾಗಿದ್ದರು.
ಹೌದು, ಒಂದು ವಿಷಯದಲ್ಲಿ ಬ್ರಾಹ್ಮಣರು ಭಿನ್ನರಾಗಿದ್ದರು. ಅದೆಂದರೆ ವಿದ್ಯೆಯ ಮೋಹ. ಶತಮಾನಗಳ ಪರಂಪರೆಯಿಂದ ಬ್ರಾಹ್ಮಣರ ಒಂದು ಪ್ರಾಥಮಿಕ ಮಹತ್ವಾಕಾಂಕ್ಷೆ ವಿದ್ಯಾವಂತರಾಗಬೇಕೆಂಬುದಾಗಿ ಇತ್ತು. ಈ ಹೇತು(motivation) ಬ್ರಾಹ್ಮಣರನ್ನು ಪ್ರೇರಿಸುತ್ತಿದ್ದುದರಿಂದ ಅವಕಾಶ ಸಿಕ್ಕಾಗಲೆಲ್ಲ ಬ್ರಾಹ್ಮಣರು ವಿದ್ಯಾರ್ಜನೆಯನ್ನು ಉಳಿದೆಲ್ಲಕ್ಕಿಂತ ಹೆಚ್ಚಾಗಿ ಬೆಂಬತ್ತಿದರು. ಈಗಿನ ಕಾಲದಲ್ಲಿಯೂ ಬ್ರಾಹ್ಮಣರು ವಿದ್ಯೆಯಲ್ಲಿ ಹೆಚ್ಚು ಯಶಸ್ವಿಗಳಾಗುತ್ತಿದ್ದರೆ ಈ ಹೇತುವಿನಿಂದಲೇ ಹೊರತು ಬೇರಾವ ಸೌಕರ್ಯದಿಂದಲ್ಲ. ಅವರ ತಲೆಯಲ್ಲಿ ಹೆಚ್ಚು ಮಿದುಳು ಖಂಡಿತಾ ಇಲ್ಲ. ಆದರೆ ಸುಧೀರ್ಘ ಪರಂಪರೆಯಿಂದ ಮಿದುಳನ್ನು ಉಪಯೋಗಿಸುವ ಶಿಸ್ತು ಅವರಿಗೆ ಲಭಿಸಿತು. ವಿದ್ಯೆಯಲ್ಲಿ ಯಶಸ್ಸು ಮಿದುಳಿನ ಗಾತ್ರದಿಂದ ಸಿದ್ಧವಾಗತಕ್ಕದ್ದಲ್ಲ. ಅದನ್ನು ಪ್ರೇರಿಸುವ ಹೇತು ಮತ್ತು ನಿಯೋಜಿಸುವ ಶಿಸ್ತು ಇವು ಯಶಸ್ಸಿನ ಗುಟ್ಟು.
ಇದನ್ನು ನಾನು ಬ್ರಾಹ್ಮಣ ಬ್ರಾಹ್ಮಣೇತರ ಇಬ್ಬರ ಗಮನಕ್ಕಾಗಿಯೂ ಹೇಳುತ್ತಿದ್ದೇನೆ. ಬ್ರಾಹ್ಮಣರಲ್ಲಿ ಕೆಲವರು ಇಂದು ಕೂಡ ತಮ್ಮ ಮಿದುಳು ಶೂದ್ರ ಮಿದುಳಿಗಿಂತ ಶ್ರೇಷ್ಠವಾದುದೆಂಬ ಭ್ರಾಮಕ ಕಲ್ಪನೆಯಲ್ಲಿದ್ದಾರೆ. ಅದನ್ನು ಬಾಯಿಬಿಟ್ಟು ಹೇಳುತ್ತಲೂ ಇರುತ್ತಾರೆ. ಇದರಿಂದ ಅವರು ಇತರ ಜಾತಿಗಳ ಜನರ ದ್ವೇಷವನ್ನು ಮಾತ್ರ ಸಂಪಾದಿಸುತ್ತಾರಷ್ಟೇ. ವಸ್ತುತಃ ಬ್ರಾಹ್ಮಣ ದ್ವೇಷದ ಮೂಲದಲ್ಲಿ ದುಯ್ಯಂ ಬ್ರಾಹ್ಮಣರ (ಅವ್ವಲ್ ಮಿದುಳಿನವರು ತಮ್ಮ ಮಿದುಳಿನ ಬಗ್ಗೆ ಹೇಳಿಕೊಳ್ಳುವುದಿಲ್ಲ) ಈ ತರಹದ ದುರಹಂಕಾರದ ಮಾತುಗಳೇ ಹಾರುವರು ವಾಸ್ತವಿಕವಾಗಿ ಶೂದ್ರರಿಗೆ ಮಾಡಿದ ಅಥವಾ ಮಾಡುವ ಅಥವಾ ಮಾಡದಿರುವ ಅನ್ಯಾಯಗಳಿಗಿಂತ ಹೆಚ್ಚಾಗಿ ಕೆಲಸ ಮಾಡುತ್ತವೆಂದು ಬ್ರಾಹ್ಮಣರು ತಿಳಿಯಲಾರದೆ ಹೋಗಿದ್ದಾರೆ. ಆದ್ದರಿಂದ ವಿದ್ಯಾಪ್ರಪಂಚದಲ್ಲಿ ತಮ್ಮ ಮುಂದಾಳ್ತನಕ್ಕೆ ನಿಜವಾದ ಕಾರಣ ಮಾನಸಿಕ ಹೇತು ಮತ್ತು ದೈಹಿಕ ಮಾನಸಿಕ ಶಿಸ್ತು ಎಂಬುದನ್ನು ಮರೆಯುತ್ತಿದ್ದಾರೆ. ಅವರು ಇದನ್ನು ಮರೆತು ಬರೆ ಜಂಬವನ್ನು ನೆಚ್ಚಿಕೊಂಡರೆ ಮುಂದೆ ಅವರು ಈ ರಂಗದಲ್ಲಿ ಪೂರ್ತಿ ಹಿಂದೆ ಬೀಳುವುದು ಖಂಡಿತ.
ಬ್ರಾಹ್ಮಣೇತರರಿಗೆ ಯಾಕೆ ಇದನ್ನು ಹೇಳುತ್ತಿದ್ದೇನೆಂದರೆ, ಅವರಲ್ಲಿ ಅನೇಕರು ಬಾಯಿಯಿಂದ ಅಲ್ಲದಿದ್ದರೂ ಮನಸ್ಸಿನಿಂದ ಬ್ರಾಹ್ಮಣ ಬುದ್ಧಿಯ ಶ್ರೇಷ್ಠತ್ವವನ್ನು ಸುಳ್ಳು ಸುಳ್ಳೇ ನಂಬಿ ಧೃತಿಗೆಟ್ಟು ಕೋಪಗೊಳ್ಳುತ್ತಾರೆ. ಹೆಚ್ಚು ಬಲವಾದ ಪ್ರೇರಣೆ ಮತ್ತು ಮಾನಸಿಕ ಶಿಸ್ತನ್ನು ಅವರು ರೂಪಿಸಿಕೊಂಡರೆ ಬ್ರಾಹ್ಮಣರೊಡನೆ ಹೆಚ್ಚು ನಿಃಶಂಕೆಯಿಂದ ಆತ್ಮವಿಸ್ವಾಸದಿಂದ ಸ್ಪರ್ಧಿಸಬಲ್ಲರು. ಅಷ್ಟಾದರೆ ಬ್ರಾಹ್ಮಣರನ್ನು ನಿಂದಿಸುವ ಅಗತ್ಯ ಅವರಿಗೆ ಉಳಿಯುವುದಿಲ್ಲ. ಇದರಲ್ಲಿ ಬ್ರಾಹ್ಮಣರ ಹಿತವೂ ಅಡಗಿದೆ.
ಬ್ರಾಹ್ಮಣರ ಮೇಲೆ ಮಾಡಲಾಗುವ ಆರೋಪಗಳಲ್ಲಿ ಹುರುಳಿಲ್ಲವೆಂದು ತೋರಿಸಲು ನಾನು ಈ ಲೇಖನದಲ್ಲಿ ಪ್ರಯತ್ನಿಸಿದ್ದೇನೆ. ಸರಕಾರಿ ಸೇವೆಗಳಲ್ಲಿ ಅವರಿಗಿದ್ದ ಸಂಖ್ಯಾಪ್ರಾಧಾನ್ಯ ಕೂಡ ಸಂಸ್ಕೃತಿಕ ಮತ್ತು ಐತಿಹಾಸಿಕ ಆಕಸ್ಮಿಕವೇ. ಬ್ರಿಟಿಷ್ ಪೂರ್ವದ ಆಳಿಕೆಗಳಲ್ಲಿ ಬ್ರಾಹ್ಮಣರು ಈ ನೌಕರಿಗಳಲ್ಲಿ ಹೆಚ್ಚಾಗಿ ಇದ್ದಿಲ್ಲ. ಮುಸ್ಲಿಂ ಮತ್ತು ಬ್ರಿಟಿಷ್ ಆಳಿಕೆಗಳಲ್ಲಿ ಬ್ರಾಹ್ಮಣ ವಿದ್ವಾಂಸರಿಗೆ ಹಿಂದಿದ್ದ ರಾಜಾಶ್ರಯ ತಪ್ಪಿದ್ದರಿಂದ ಅವರು ಪಾಶ್ಚಾತ್ಯ ವಿದ್ಯೆಯತ್ತ ಹೊರಳಿದರು. ಭಾರತದ ಪರಂಪರಾಗತ ಆರ್ಥಿಕ ಸಾಮಾಜಿಕ ವ್ಯವಸ್ಥೆಯಲ್ಲಿ ಹಿಂದೆ ಸರಕಾರಿ ಕೆಲಸವನ್ನೊಳಗೊಂಡು ಹೆಚ್ಚಿನ ರಂಗಗಳಲ್ಲಿ ಅಕ್ಷರ ವಿದ್ಯೆಗೆ ಮಹತ್ವ ಇರಲಿಲ್ಲ. ಭೂಮಿಯನ್ನೊಳಗೊಂಡು ಸಮಾಜದ ಸಂಪತ್ತಿನ ಅಧಿಕ ಭಾಗ ದಕ್ಷಿಣಭಾರತದಲ್ಲಂತೂ ಬ್ರಾಹ್ಮಣೇತರ ಮೇಲ್ಜಾತಿಗಳವರ ಕೈಯಲ್ಲೇ ಇತ್ತು. ಅವರು ಸುಲಭವಾಗಿ ದಕ್ಷಿಣೆ ಕೊಟ್ಟು ಬ್ರಾಹ್ಮಣರಿಂದ ತಮಗೆ ಬೇಕಾದ ಸೇವೆಗಳನ್ನು ಪಡೆಯುತ್ತಿದ್ದರು. ಆಗಿನ ದೃಷ್ಟಿಯಿಂದ ಅವರಿಗೆ ಅದು ಅಗ್ಗವಾಗಿಯೂ ಇತ್ತು. ಆದರೆ ವಿದೇಶೀ ಆಳಿಕೆಯ ಆಗಮನ ಮತ್ತು ಆರ್ಥಿಕ ಸಂಬಂಧಗಳ ಬದಲಾವಣೆಯಿಂದ ಸರಕಾರಿ ನೌಕರಿಗಳ ಅಗಾಧ ಬೆಳವಣಿಗೆ ಮತ್ತು ಅದರೊಂದಿಗೆ ಆ ನೌಕರಿಗಳಿಗೆ ದೊರಕಿದ ಹೊಸ ಪ್ರತಿಷ್ಠೆಯೂ ಅಂಥ ನೌಕರಿಗಳಲ್ಲಿ ವಿದ್ಯಾರ್ಹತೆಗಳಿಗೆ ಸಿಕ್ಕಿದ ಪ್ರಾಧಾನ್ಯವೂ ಹೊಸ ಪರಿಸ್ಥಿತಿಯನ್ನು ನಿರ್ಮಿಸಿದವು. ಇದರ ಪ್ರಯೋಜನ ಪಡೆಯಲು ಬ್ರಾಹ್ಮಣರಿಗೆ ಇತರರಿಗಿಂತ ತುಂಬಾ ಸೌಲಭ್ಯವಿತ್ತು. ಅವರಿಗೆ ಒಂದು ಬಗೆಯ ವಿದ್ಯೆಯಿಂದ ಇನ್ನೊಂದಕ್ಕೆ ಬದಲಾಯಿಸುವ ಸಮಸ್ಯೆ ಮಾತ್ರ ಇತ್ತು. ಹಿಂದೆ ವಿದ್ಯೆಯನ್ನು ಕಡೆಗಣಿಸಿದ ಜಾತಿಗಳಿಗೆ, ಅಕ್ಷರವಿದ್ಯೆಯ ಕೇವಲ ಲಾಭದಿಂದ ದಾಪುಗಾಲಿಕ್ಕುವವರಿಗೆ ಅಕ್ಷರವಿದ್ಯೆಯಲ್ಲಿ ಪಳಗಿದವರೊಡನೆ ಸ್ಪರ್ಧಿಸಿ ಗೆಲ್ಲುವ ಪ್ರಚಂಡ ಸಮಸ್ಯೆ ಇತ್ತು. ಇದರಲ್ಲಿ ಬ್ರಾಹ್ಮಣರ ತಪ್ಪೇನೂ ಇದ್ದಿಲ್ಲ. ಸಿಕ್ಕಿದ ಸಂದರ್ಭವನ್ನು ಅವರು ಪೂರ್ತಿ ಉಪಯೋಗಿಸಿಕೊಂಡರು ಮಾತ್ರ.
ಬ್ರಾಹ್ಮಣರ ಮುಂದೆ ಈಗ ಮುಖ್ಯವಾಗಿ ಎರಡು ಬಗೆಯ ಸಮಸ್ಯೆಗಳಿವೆ. ಒಂದು ತಮ್ಮ ಮೇಲೆ ನಡೆಯುವ ಮಿಥ್ಯಾಪ್ರಚಾರವನ್ನು ಎದುರಿಸುವ ಪ್ರಶ್ನೆ. ಇನೊಂದು, ತಮ್ಮ ಆರ್ಥಿಕ ಬೌದ್ಧಿಕ ಮಟ್ಟವನ್ನು ಕಾದುಕೊಳ್ಳುವುದು ಹೇಗೆ ಎಂಬುದು. ಬ್ರಾಹ್ಮಣರ ಮೇಲಿನ ಮುಖ್ಯ ಆರೋಪಗಳು ಎಷ್ಟು ಟೊಳ್ಳು ಎಂಬುದನ್ನು ಮೇಲೆ ವಿವರಿಸಲಾಗಿದೆ. ತಮ್ಮ ಪೂರ್ವಜರು ಮಹಾಪರಾಧ ಮಾಡಿದ್ದಾರೆ ಎಂಬ ಆಂತರಿಕ ಶಂಕೆಯನ್ನು ಬ್ರಾಹ್ಮಣರು ತೊರೆಯಬೇಕು. ಯಾವುದಾದರೂ ದೇಶದಲ್ಲಿ ಇಂಥದೇ ಪರಿಸ್ಥಿತಿಯಲ್ಲಿ ಯಾವೊಂದು ವರ್ಗ ಸಿಲುಕಿದಾಗ ಏನು ಮಾಡಬಹುದೋ ಅದನ್ನಷ್ಟೇ ಬ್ರಾಹ್ಮಣರು ಮಾಡಿದ್ದಾರೆ. ಜಾತಿಯನ್ನು ನಿವಾರಿಸುವ ಉದ್ದೇಶದಿಂದಲೇ ಹೊರಟವರು ತಾವೇ ಕಾಲಾಂತರದಲ್ಲಿ ಜಾತಿಗಳಾಗಿ ಹೋದದ್ದನ್ನು ಈ ದೇಶದಲ್ಲಿ ನೋಡುತ್ತಿದ್ದೇವೆ. ತೀರ ಇತ್ತೀಚಿನ ಉದಾಹರಣೆ ಬೇಕಾದರೆ ನವಬೌದ್ಧರು. ಹಿಂದೂ ಧರ್ಮದ ಜಾತಿಕಟ್ಟು ಅಳಿಯಲಾರದೆಂದು ಹೇಳಿ ಡಾ. ಅಂಬೇಡಕರರು ಬೌದ್ಧಧರ್ಮ ಸ್ವೀಕರಿಸಿ ತಮ್ಮ ಅನುಯಾಯಿಗಳಿಗೂ ಹಾಗೆ ಮಾಡಲು ಸೂಚಿಸಿದರು. ಆದರೆ ಮಹಾರಾಷ್ಟ್ರದ ‘ಮಹಾರ’ರಿಗೇ ಈ ನವಬೌದ್ಧಮತ ಬಹಳ ಮಟ್ಟಿಗೆ ಸೀಮಿತವಾಗಿದೆ.
ಜಾತಿಗಳು ಅಳಿದು ಅಖಂಡ ಹಿಂದೂ ಸಮಾಜ ಸ್ಥಾಪಿತವಾಗುವುದು ಎಲ್ಲಾ ದೃಷ್ಟಿಯಿಂದ ಆದರ್ಶ ಪರಿಹಾರ ನಿಜ. ಆದರೆ ಇಂದಿನ ಪ್ರಜಾಸತ್ತಾತ್ಮಕ ರಾಜಕೀಯದಲ್ಲಿ ಇದು ಸದ್ಯಕ್ಕಂತೂ ಸಾಧ್ಯವಾಗಿ ಕಾಣುವುದಿಲ್ಲ. ಜಾತ್ಯಾತೀತತೆಯನ್ನು ಉದ್ಘೋಷಿಸುತ್ತಾ ಜಾತಿಗಳನ್ನು ಗಟ್ಟಿ ಮಾಡುವ ಧೋರಣೆಗಳನ್ನು ಜಾರಿಗೆ ತರಲಾಗುತ್ತಿದೆ. ಅಖಂಡ ಹಿಂದೂ ಸಮಾಜದ ಕಲ್ಪನೆಯನ್ನು ಪ್ರತಿಪಾದಿಸುವವರನ್ನು ಮತವಾದಿಗಳು (communalists) ಎಂದು ಕರೆಯಲಾಗುತ್ತಿದೆ. ಏನಿದ್ದರೂ ಹಿಂದೂ ಸಮಾಜವನ್ನು ಜಾತಿಯಿಂದ ಮುಕ್ತಗೊಳಿಸುವ ಯತ್ನಕ್ಕೆ ಬ್ರಾಹ್ಮಣರು ಕೈಹಾಕಿದರೆ ಅವರ ಮೇಲಿನ ಸಂಶಯ ಮತ್ತು ಹೆಚ್ಚಬಹುದಾಗಿದೆ.
ಆದ್ದರಿಂದ ಬ್ರಾಹ್ಮಣರು ಆತ್ಮರಕ್ಷಣೆ ಮಾತ್ರ ಮಾಡಿಕೊಳ್ಳಬಲ್ಲರು. ತಮ್ಮ ಮೇಲಿನ ದ್ವೇಷದ ಕಾರಣಗಳಲ್ಲೊಂದಾದ ದುರಭಿಮಾನದ ಮಾತು ಆಡುವುದನ್ನು ಅವರು ತೊರೆಯಬೇಕು. ಎರಡನೆಯದಾಗಿ ತಮ್ಮೊಳಗಿನ ಉಪಭೇದಗಳನ್ನು ಸಾವಕಾಶವಾಗಿಯಾದರೂ ಬುದ್ಧಿಪೂರ್ವಕ ನಿವಾರಿಸಿಕೊಳ್ಳಬೇಕು. ನೌಕರಿಗಳಲ್ಲಿ ಅವರಿಗಿರುವ ಪ್ರಾಧಾನ್ಯ ಮಂಜಿನ ನೀರು. ಬೇಗನೇ ಅದು ರಾಜಕೀಯ ವಸ್ತಿಸ್ಥಿತಿಗಳಿಂದ ನಷ್ಟವಾದೀತು. ಬ್ರಾಹ್ಮಣರೂ ಉದ್ಯಮ, ವ್ಯಾಪಾರ ಮೊದಲಾದ ಎಲ್ಲ ಮಾನವ ಉಪಕ್ರಮಗಳಲ್ಲಿಯೂ ತಮ್ಮ ಜೀವನೋಪಾಯಗಳನ್ನು ಅರಸಬೇಕು. ಯಾವ ಉದ್ಯೋಗವೂ ತಮ್ಮ ಗೌರವಕ್ಕೆ ಕಡಿಮೆ ಎಂದು ತಿಳಿಯಬಾರದು ಮತ್ತು ಇದೆಲ್ಲದರೊಡನೆ ಅವರು ತಮ್ಮ ಬೌದ್ಧಿಕ ಮಟ್ಟವನ್ನು ಕಾಯ್ದುಕೊಳ್ಳಬೇಕು. ತಮ್ಮ ಪ್ರಾಚೀನ ವಿದ್ಯಾಪ್ರೇಮ ಮಾನಸಿಕ ಕುತೂಹಲವನ್ನು ಹಿಂದಿಗಿಂತಲೂ ಹೆಚ್ಚು ಬೆಳೆಸಿಕೊಳ್ಳಬೇಕು. ಅವರು ಇಂದು ಸಿಲುಕಿಕೊಂದಿರುವ ಪರಿಸ್ಥಿತಿಯಲ್ಲಿ ತಮ್ಮ ಅಸ್ತಿತ್ವವನ್ನು ಸದ್ಯದ ಮಟ್ಟದಲ್ಲಿ ಉಳಿಸಿಕೊಳ್ಳುವುದಕ್ಕಾಗಿಯೇ ಇತರರಿಗಿಂತ ಹೆಚ್ಚು ಪರಿಶ್ರಮ ಮಾಡಬೇಕಾಗುತ್ತದೆ. ಆದ್ದರಿಂದ ಅವರು ಈಗ ಎಲ್ಲೆಲ್ಲಿಯೂ ತಾಂಡವಾಡುತ್ತಿರುವ ಸುಲಭ ವಿದ್ಯೆ, ಪರಿಶ್ರಮಹೀನವಾದ ಡಿಗ್ರಿ, ಐಷಾರಾಮದ ಜೀವನದ ಹುಚ್ಚಿಗೆ ಸಿಲುಕಬಾರದು. ಹೀಗೆ ಮಾಡುವುದರಿಂದ ಮಾತ್ರ ಅವರಲ್ಲಿ ಪ್ರಗತಿ ಶಾಶ್ವತವಾದೀತು. ಯೋರೋಪಿನ ಯಹೂದ್ಯರ ಕೈಯಿಂದ ಬ್ರಾಹ್ಮಣರು ಕಲಿಯಬಹುದಾದ್ದು ಬಹಳ ಇದೆ.
ಪಾ.ವೆಂ. ಆಚಾರ್ಯ
ಜೂನ್ ೧೯೮೦.
Monday, September 25, 2006
ಇತಿಹಾಸದ ಸುಳ್ಳು ಚಿತ್ರಣ ಬೇಡ
"ಇತಿಹಾಸದ ಸುಳ್ಳು ಚಿತ್ರಣದ ಮೇಲೆ ರಾಷ್ಟ್ರೀಯತೆ ಗಟ್ಟಿಗೊಳಿಸುವುದು ಅಸಾಧ್ಯ"
ವಿದ್ಯಾಮಂತ್ರಿ ಶಂಕರಮೂರ್ತಿಯವರು, ಮೊದಲು ಇದ್ದ ಕನ್ನಡದ ಬದಲಿಗೆ ಫಾರಸಿಯನ್ನು ಮೈಸೂರು ರಾಜ್ಯದ ಆಡಳಿತ ಭಾಷೆಯಾಗಿ ಮಾಡಿಕೊಂಡ ಟಿಪ್ಪುಸುಲ್ತಾನನು ಒಬ್ಬ ಕನ್ನಡ ವಿರೋಧಿ ಎಂದು ಹೇಳಿದುದಕ್ಕೆ ನಿರೀಕ್ಷಿತ ವಲಯಗಳಲ್ಲಿ ನಿರೀಕ್ಷಿತ ಗುಂಪುಗಳಿಂದ ವಿರೋಧ ವ್ಯಕ್ತವಾಗುತ್ತಿರುವುದು, ಅವರು ರಾಜೀನಾಮೆ ಕೊಡದಿದ್ದರೆ, ಮುಖ್ಯಮಂತ್ರಿಗಳು ಅವರನ್ನು ವಜಾ ಮಾಡದಿದ್ದರೆ, ಉಗ್ರ ಹೋರಾಟ ಪ್ರಾರಂಭಿಸುವುದಾಗಿ ಎಚ್ಚರಿಕೆ ಕೊಡುತ್ತಿರುವುದು ಕರ್ನಾಟಕ ರಾಜಕೀಯದ ಸದ್ಯದ ರಂಜಕ ಸುದ್ದಿಯಾಗಿದೆ. ಈ ವಿಷಯದಲ್ಲಿ ತಾವು ಸಾರ್ವಜನಿಕ ಚರ್ಚೆಗೆ ಸಿದ್ಧವಾಗಿರುವುದಾಗಿ ಸಚಿವರು ಪುನಃ ಸಮರ್ಥಿಸಿಕೊಂಡಿದ್ದಾರೆ.
ನಿನ್ನೆ(೨೧-೯-೨೦೦೬) ಅದಕ್ಕಾಗಿಯೇ ತಮ್ಮ ಸಂಗಡಿಗರಾದ ಕೆ. ಮರುಳಸಿದ್ದಪ್ಪ, ಕಾಂಗ್ರೆಸ್‌ನ ಮಾಜಿ ಪ್ರಾಥಮಿಕ ವಿದ್ಯಾಮಂತ್ರಿ ಪ್ರೊ.ಬಿ.ಕೆ. ಚಂದ್ರಶೇಖರ್ ಸಂಗಡ ಒಂದು ಮಾಧ್ಯಮಗೋಷ್ಠಿ ಯನ್ನು ಕರೆದ ನಟ, ನಿರ್ದೇಶಕ, ನಾಟಕ ಕಾರ ಗಿರೀಶ್ ಕಾರ್ನಾಡರು ಟಿಪ್ಪುಕುರಿತು ನಾಟಕ ಬರೆದಿರುವ ತಾವು ಶಂಕರಮೂರ್ತಿಯವರೊ ಡನೆ ಬಹಿರಂಗ ಚರ್ಚೆಗೆ ಸಿದ್ಧವಿರುವುದಾಗಿ ಘೋಷಿಸಿದ್ದಾರೆ. ಇದನ್ನು ನಾನು ಮೆಚ್ಚುತ್ತೇನೆ. ಆದರೆ ಅವರು ಮತ್ತು ಅವರ ಸಂಗಡಿಗರು ಶಂಕರಮೂರ್ತಿಗಳ ಮಾತು ಅಪಾಯಕಾರಿ, ರಾಷ್ಟ್ರಘಾತಕ ಎಂಬ ತೀರ್ಪನ್ನೂ ನೀಡಿ ಬಿಟ್ಟಿದ್ದಾರೆ. ಈ ಚರ್ಚೆಯ ರಾಜಕೀಯ ಒಳ ಸುಳಿಗಳನ್ನು ಚರ್ಚಿಸುವುದು ಇಲ್ಲಿ ನನ್ನ ಉದ್ದೇಶವಲ್ಲ. ಕಾರ್ನಾಡರನ್ನು ಒಬ್ಬ ಸಾಹಿತಿ, ಕಲಾವಿದ ಎಂದು ಮಾತ್ರ ಭಾವಿಸಿ, ನಾನು ಕೆಳಗಿನ ನಾಲ್ಕು ಮಾತುಗಳನ್ನು ಹೇಳಲಿಚ್ಛಿಸುತ್ತೇನೆ.
ಅವರ `ತುಘಲಕ್' ನಾಟಕವು ಪ್ರಕಟವಾದ ಹೊಸತರಲ್ಲಿಯೇ ನಾನು ಓದಿದೆ. ಅದರ ರಚನಾ ಕೌಶಲ ಚೆನ್ನಾಗಿದೆ. ಹಾಸ್ಯ ಗಂಭೀರಗಳ ಮಿಶ್ರಣ ಪರಿಣಾಮಕಾರಿಯಾಗಿದೆ. ನಿರ್ದೇಶನಕ್ಕೆ ತುಂಬ ಅವಕಾಶವಿದೆ. ಆಗ ಯೂರೋಪಿನಲ್ಲಿ ಪ್ರಭಾವಶಾಲಿ ಲೇಖಕನಾಗಿದ್ದ ಎಕ್ಸಿಸ್ಟೆಂಶಿಯಲಿಸ್ಟ್ ಕಾಮೂನ `ಕಾಲಿಗುಲ' ನಾಟಕದ ಮಾದರಿಯಲ್ಲಿ ಅದರ ಪ್ರಭಾವದಿಂದ ರಚಿತವಾಗಿದೆ. ನಾನು ತಿಳಿದ ಐತಿಹಾಸಿಕ ಮಹಮ್ಮದ್ ಬಿನ್ ತುಘಲಕ್‌ನ ಪಾತ್ರಕ್ಕಿಂತ ಇಲ್ಲಿ ಅವನನ್ನು ಆದರ್ಶೀಕರಿಸಿದ್ದಾರೆ ಎಂಬುದು ನನ್ನ ಭಾವನೆಯಾಗಿತ್ತು. ಆ ಕುರಿತು ಹೆಚ್ಚು ಸಂಶೋಧನೆ ಮಾಡುವ ಆಸಕ್ತಿಯಾಗಲಿ ವ್ಯವಧಾನವಾಗಲಿ ನನಗೆ ಆಗ ಇರಲಿಲ್ಲ.
ಅನಂತರ, ಸುಮಾರು ನಲವತ್ತು ವರ್ಷಗಳ ಮೇಲೆ, ಅವರ `ಟಿಪೂ ಸುಲ್ತಾನ್ ಕಂಡ ಕನಸು' ಎಂಬ ನಾಟಕವನ್ನು ಓದಿದೆ. ನಾನು ತಿಳಿದ ಟಿಪ್ಪುವಿಗೆ ಅವರು ಸಂಪೂರ್ಣ ವಾಗಿ ಬಿಳಿ ಬಣ್ಣ ಬಳಿದು ಅವನನ್ನೊಬ್ಬ ಧೀರೋದಾತ್ತ ದುರಂತ ನಾಯಕನನ್ನಾಗಿ ಮಾಡಿದ್ದಾರೆ ಎನಿಸಿತು. ಏಕೆಂದರೆ ಹಳೆ ಮೈಸೂರಿನವನಾದ ನನಗೆ ಟಿಪ್ಪುವಿನ ವಿಷಯ ಸಹಜವಾಗಿಯೇ ಹೆಚ್ಚು ವಿವರವಾಗಿ ತಿಳಿದಿತ್ತು.
ಈ ನಡುವೆ ಕಾರ್ನಾಡರ ರಾಜಕೀಯ ಹಿನ್ನೆಲೆಯ ಹೇಳಿಕೆಗಳು, ಚಟುವಟಿಕೆಗಳು, ಧರಣಿ ಮೊದಲಾದವನ್ನು ಗಮನಿಸಿ ಅವರೊಬ್ಬ ಕಟ್ಟಾ ಎಡಪಂಥೀಯರು ಎಂಬುದನ್ನು ಅರ್ಥಮಾಡಿಕೊಂಡಿದ್ದೆ. ಅದು ಅವರ ಸ್ವಂತ ಅನಿಸಿಕೆ ಮತ್ತು ಚಟುವಟಿಕೆಗಳು. ಪ್ರತಿಯೊಬ್ಬನಿಗೂ ಅವನವನ ನಂಬಿಕೆಗಳಿರುತ್ತವೆ ಎಂಬ ದೂರ ಭಾವದಲ್ಲಿದ್ದೆ. `ಟಿಪೂ ಸುಲ್ತಾನ್ ಕಂಡ ಕನಸು' ಓದಿದ ಮೇಲೆ `ತುಘಲಕ್' ಮತ್ತು ಟಿಪ್ಪುವಿನ ಬಗೆಗೆ ತುಸು ವಿವರವಾಗಿ ಅಧ್ಯಯನ ಮಾಡಿ ಈ ನಾಟಕಕಾರರಿಗೆ ಇತಿಹಾಸದ ಸತ್ಯದ ಬಗೆಗಿರುವ ನಿಷ್ಠೆಯು ಎಷ್ಟು ಮಟ್ಟಿನದು ಎಂಬುದನ್ನು ತಿಳಿಯಬೇಕೆನ್ನಿಸಿತು. ಅಧ್ಯಯನದಲ್ಲಿ ತೊಡಗಿದೆ. ಇತಿಹಾಸ ನನಗೆ ಮೊದಲಿನಿಂದ ಆಸಕ್ತಿ ಇರುವ ವಿಷಯ. ಅದರಲ್ಲಿಯೂ ಭಾರತೀಯ ಇತಿಹಾಸವನ್ನು ತಕ್ಕಮಟ್ಟಿಗೆ ಓದಿಯೂ ಇದ್ದೇನೆ.
ಈ ನಾಟಕದ ಕಥಾವಸ್ತು ಐತಿಹಾಸಿಕವಾಗಿದ್ದರೂ ಇದರ ಉದ್ದೇಶ ಇತಿಹಾಸದ ಚಿತ್ರಣವಲ್ಲ ಎಂದು ಬೆನ್ನುಡಿಯಲ್ಲಿ ಹೇಳಿದ್ದರೂ `ತುಘಲಕ್' ನಾಟಕ ವನ್ನು ಆಡಿದ ಕಡೆಯಲ್ಲೆಲ್ಲ ನೋಡಿದವರ ಮನಸ್ಸಿನಲ್ಲೆಲ್ಲ ಆಡಿದವರ ಮನಸ್ಸಿನಲ್ಲಿ ಕೂಡ ಅವನೇ ನಿಜವಾದ ಸುಲ್ತಾನ ಎಂಬ ಭಾವನೆ ಹುಟ್ಟಿತ್ತು. `ನನ್ನ ಅಧಿಕಾರಿಗಳಿಂದ ಒಬ್ಬ ಬ್ರಾಹ್ಮಣನಿಗೆ ಅನ್ಯಾಯ ವಾಯಿತು. ಆ ಅನ್ಯಾಯವನ್ನು ಅಳಿಸಿ ನಾನು ನ್ಯಾಯದ ಮಾರ್ಗವನ್ನು ಅನುಸರಿಸಲಿಕ್ಕೆ ಸಿದ್ಧನಿದ್ದೇನೆ ಎಂಬುದನ್ನು ನೀವು ಕಂಡಿರಿ. ಧರ್ಮ ದ್ವೇಷದಿಂದ ಒಡೆದು ಚೂರಾಗಿದ್ದ ನಮ್ಮ ರಾಜ್ಯದ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ ಗಳಿಗೆ. ನನಗೆ ರಾಜ್ಯದಲ್ಲಿ ಸಮತೆ ಬೇಕು, ಪ್ರಗತಿ ಬೇಕು, ತರ್ಕಶುದ್ಧ ನ್ಯಾಯ ಬೇಕು. ಶಾಂತಿ ಇದ್ದರೆ ಸಾಕಾಗಲಿಲ್ಲ. ಜೀವಕಳೆ ಬೇಕು'. `ಎಲ್ಲಕ್ಕೂ ಮಹತ್ತ್ವದ ಮಾತೆಂದರೆ ದೌಲತಾಬಾದ್ ಮುಖ್ಯತಃ ಹಿಂದೂ ಜನರ ನಗರವಾಗಿದೆ. ನನ್ನ ರಾಜಧಾನಿಯನ್ನು ಅಲ್ಲಿಗೊಯ್ದು ನನಗೆ ಹಿಂದೂ ಮುಸಲ್ಮಾನರಲ್ಲಿ ಹೆಚ್ಚಿನ ಮೈತ್ರಿ ಬೆಳೆಸಬೇಕಾಗಿದೆ' ಎಂಬ ಸುಲ್ತಾನನ ಮಾತು. `ಬ್ರಾಹ್ಮಣನೊಡನೆ ಮುಸಲ್ಮಾನ ಗೆಳೆಯನನ್ನು ಕಂಡರೆ ಸುಲ್ತಾನರು ಹಿರಿ ಹಿರಿ ಹಿಗ್ಗುತ್ತಾರೆ' ಎಂಬ ಮಾತು ಗಳು ಸುಲ್ತಾನನು ಅಕ್ಬರನಿಗಿಂತ ಇನ್ನೂರ ಮೂವತ್ತು ವರ್ಷ ಮೊದಲು ಅಕ್ಬರನಿಗಿಂತ ಹೆಚ್ಚು ಪರಧರ್ಮ ಸಹಿಷ್ಣುವೂ ಸರ್ವ ಸಮಾನ ಭಾವದವನೂ ಎಂಬ ಭಾವನೆಯನ್ನು ಕೊಡುತ್ತದೆ. ಆದರೆ ಇದೇ ಸುಲ್ತಾನನಲ್ಲವೆ ಐತಿಹಾಸಿಕವಾಗಿ ದೇವಗಿರಿ ಎಂಬ ಹಿಂದೂ ಹೆಸರನ್ನು ದೌಲತ್ತಾಬಾದ್ ಎಂಬ ಮುಸ್ಲಿಂ ಹೆಸರಿಗೆ ಬದಲಾಯಿಸಿದವನು? ಕ್ರಿಸ್ತಶಕ ೧೩೨೭ರಲ್ಲಿ ಅವನ ವಿರುದ್ಧ ದಂಗೆ ಎದ್ದಿದ್ದ ದಕ್ಷಿಣದ ತುಂಗಭದ್ರಾ ತೀರದ ಕಂಪ್ಲಿಯ ರಾಜನ ಹನ್ನೊಂದು ಗಂಡು ಮಕ್ಕಳನ್ನು ಒಟ್ಟಿಗೆ ಸೆರೆ ಹಿಡಿದು ಇಸ್ಲಾಮಿಗೆ ಮತಾಂತರಿಸಿದ ಎಂದು ಇಬನ್ ಬತ್ತೂತನು ದಾಖಲಿಸಿದ್ದಾನೆ. (Ibn Battuta, The Rehla of Ibn Battuta, English translation by Dr.Mahdi Hussain 1953, P 95. ಈಶ್ವರೀ ಪ್ರಸಾದರ Qaraunah Turks in India. Vol I, Allahabad 1936 P 65-66. Mahdi Hussain: TugalaQ Dynasty, calutta 1963 P 207-208. Quoted in Muslim Slave System in Medieval India by K.S.Lal. Aditya Prakashan. New Delhi, 1994, P 56)
ಆದರೆ (Ibn Battuta, The Rchla of Ibn Battuta, eng.translation by Dr.Mahdi Hussain 1953, ಪುಟ 95. ಈಶ್ವರೀ ಪ್ರಸಾದರ Qaraunah Turks in India. Vol I, Allahabad 1936 P 65-66. Mahdi Hussain: Tugalaq Dynasty, calcutta 1963 P207-208. Quoted in muslim slave system in medieval India by K.S.lal. Aditya Prakashan. New Delhi, 1994, P 56) ಇದೇ ಮಹಮ್ಮದ್ ಬಿನ್ ತುಘಲಕನು ಹಿಂದೂ ದೇವಾಲಯವನ್ನು ನಾಶಮಾಡಿ ಅವೇಜಾಗಳಲ್ಲಿ ಮಸೀದಿಗಳನ್ನು ಕಟ್ಟಿಸದೆ ಬಿಟ್ಟವನಲ್ಲ. ಆಂಧ್ರಪ್ರದೇಶದ ನಿಜಾಮಾಬಾದ್ ಜಿಲ್ಲೆಯ ಬೋಧನ್‌ನಲ್ಲಿ ದೇವಲ್ ಮಸೀದಿ ಎಂಬ ಒಂದು ಮಸೀದಿ ಇದೆ. ಹೆಸರೇ ಹೇಳುವಂತೆ ಅದೊಂದು ದೇವಾಲಯವನ್ನು ಒಡೆದು ಕಟ್ಟಿದ ಮಸೀದಿ. ಮಹಮ್ಮದ್ ಬಿನ್ ತುಘಲಕ್‌ನ ಆಡಳಿತದಲ್ಲಿ ಕಟ್ಟಿಸಿದ್ದೆಂದು ಹೇಳುವ ಎರಡು ಶಾಸನಗಳು ಇನ್ನೂ ಇವೆ. ಜಿ. ಯಜ್‌ದಾನಿಯವರು Epigraphia Indomosliemica 1919-1920 ಪುಟ ೧೬ರಲ್ಲಿ ಹೇಳುತ್ತಾರೆ: `ಹೆಸರೇ ಹೇಳುವಂತೆ ದೇವಲ್ ಮಸೀದಿಯು ಮೂಲ ಜೈನ ಮಂದಿರವಾಗಿದ್ದು ಮಹಮ್ಮದ್ ತುಘಲಕನು ಡೆಕ್ಕನ್ನನ್ನು ಗೆದ್ದಾಗ ಈ ಮಂದಿರವನ್ನು ಮಸೀದಿಯಾಗಿ ಮಾರ್ಪಡಿಸಿದ. ಈ ಕಟ್ಟಡವು ನಕ್ಷತ್ರಾಕೃತಿಯಲ್ಲಿತ್ತು. ಆದರೆ ಮುಸ್ಲಿಮರು (ತುಘಲಕನು) ಗರ್ಭಗೃಹವನ್ನು ತೆಗೆದು ಉಪದೇಶ ವೇದಿಕೆ ನಿರ್ಮಿಸುವುದನ್ನು ಬಿಟ್ಟು ಹೆಚ್ಚು ಬದಲಾವಣೆ ಮಾಡಿಲ್ಲ. ಮೂಲದ ಕಂಬಗಳು ಹಾಗೆಯೇ ಇವೆ. ಕಂಬಗಳ ಮೇಲೆ ಕೆತ್ತಿರುವ ತೀರ್ಥಂಕರರ ವಿಗ್ರಹಗಳು ಇವತ್ತಿಗೂ ಇವೆ.' (ಸೀತಾರಾಮ ಗೋಯೆಲ್: Hindu Temples: What happend to them? Vol II ಪುಟ ೬೭ ನೋಡಿ)
ಅಬೂನಾಸಿರ್ ಐಸಿಯು ಹೇಳುವ ಪ್ರಕಾರ ಸುಲ್ತಾನ್ ಮಹಮ್ಮದ್ ಬಿನ್ ತುಘಲಕನು ಇಸ್ಲಾಮಿಕನ ಬಾವುಟಗಳನ್ನು ಹಿಂದೆ ಎಂದೂ ತಲುಪದ ಎಡೆಗಳಿಗೆ ಒಯ್ದು ಹಾರಿಸಿದ; ಹಿಂದೆ ಎಂದೂ ಕೇಳದ ಕಡೆಗಳಲ್ಲಿ ಕುರಾನಿನ ಶ್ಲೋಕಗಳನ್ನು ಕೇಳಿಸಿದ. ಅಗ್ನಿಪೂಜಕ ಮಂತ್ರಗಳನ್ನು ನಿಲ್ಲಿಸಿ ಅಜಾನನ್ನು ಮೊಳಗಿಸಿದ. (S.A.A. ರಿಜ್ವಿ: ತುಘಲಕ್ ಕಾಲೀನ ಭಾರತ. ಅಲಿಗಡ್, 1956, 1ನೇ ಸಂಪುಟ, ಪುಟ ೩೨೫) ಇವನನ್ನು ಪರಮತ ಸಹಿಷ್ಣುವೆಂದು ಚಿತ್ರಿಸಲು ಈ ನಾಟಕಕಾರರಿಗೆ ಮಾರ್ಕ್ಸಿಸ್ಟ್ ಪ್ರಚಾರವನ್ನು ಬಿಟ್ಟು ಬೇರೆ ಯಾವ ಆಧಾರವಿತ್ತು ?
ಸುಲ್ತಾನ್ ಮಹಮ್ಮದ್ ತುಘಲಕ್‌ನ ಗುಲಾಮ ಬೇಟೆಯು ದೂರ ದೇಶಗಳಲ್ಲೆಲ್ಲಾ ಕುಖ್ಯಾತವಾಗಿತ್ತು. ಅವನ ಈ ಹುರುಪಿನ ಬಗೆಗೆ ಶಿಹಾಬುದ್ದೀನ್ ಅಹಮದ್ ಅಬ್ಬಾಸ್ ಬರೆದಿದ್ದಾನೆ: `ಕಾಫಿರರ ಮೇಲೆ ಯುದ್ಧ ಮಾಡುವ ಸುಲ್ತಾನನ ಉತ್ಸಾಹ ಎಂದಿಗೂ ಕಡಿಮೆಯಾಗಿಲ್ಲ. ಅವರು ಬೇಟೆಯಾಡಿದ ಕೈದಿಗಳ ಸಂಖ್ಯೆ ಎಷ್ಟಿರುತ್ತೆಂದರೆ ಪ್ರತಿ ದಿನವೂ ಸಾವಿರಾರು ಗುಲಾಮರನ್ನು ತೀರ ಹೀನ ಬೆಲೆಗೆ ಮಾರುತ್ತಿದ್ದರು. (ಮಸಾಲಿಕ್-ಉಲ್-ಅಬಸರ್ ಫಿ ಮುಮಾ ಲಿಕ್-ಉಲ್-ಅಂಸರ್. Translated in E.D. III, P 580. ಹಿಂದೀ ಅನುವಾದ ರಿಜ್ವಿಯ ತುಘಲಕ್ ಕಾಲೀನ ಭಾರತ). ಯುದ್ಧದಲ್ಲಿ ಮಾತ್ರವಲ್ಲ ವಿದೇಶ ಮತ್ತು ಹಿಂದೂಸ್ತಾನಿ ಗುಲಾಮರನ್ನು ಕೊಂಡು ಸಂಗ್ರಹಿಸುವ ಶೋಕಿ ಅವನಿಗೆ ಬಹಳ ಇತ್ತು. ಪ್ರತಿ ಯುದ್ಧ ಅಥವಾ ದಂಗೆಯನ್ನು ಅಡಗಿಸುವಾಗಲೂ ಸುಲ್ತಾನನು ಹಿಡಿಸಿ ತರುತ್ತಿದ್ದ ಕಾಫಿರ್(ಮುಸ್ಲಿಮೇತರ) ಹೆಂಗಸು ಕೈದಿಗಳ ಸಂಖ್ಯೆ ಎಷ್ಟಿರುತ್ತಿತ್ತೆಂದರೆ ಇಬನ್ ಬತ್ತೂತ ಬರೆದಿದ್ದಾನೆ: `ಒಂದು ಸಲ ದಿಲ್ಲಿಯಲ್ಲಿ ಬಹಳ ಜನ ಹೆಂಗಸು ಕೈದಿಗಳನ್ನು ಜಮಾಯಿಸಿದರು. ಅವರಲ್ಲಿ ಹತ್ತು ಜನರನ್ನು ವಜೀರರು ನನಗೆ ಕಳಿಸಿದರು. ಅವರಲ್ಲಿ ಒಬ್ಬಳನ್ನು ನಾನು ಅವರನ್ನು ತಂದವನಿಗೇ ಕೊಟ್ಟೆ. ಆದರೆ ಅವನಿಗೆ ತೃಪ್ತಿಯಾಗಲಿಲ್ಲ. ನನ್ನ ಜತೆಗಾರನು ಮೂವರು ಚಿಕ್ಕ ಹುಡುಗಿಯರನ್ನು ತೆಗೆದುಕೊಂಡ. ಉಳಿದವರು ಏನಾದರೋ ನಾನು ಕಾಣೆ. (ಇಬನ್ ಬತ್ತೂತ, ಮೇಲ್ಕಾಣಿಸಿದ ಗ್ರಂಥ ಪುಟ ೧೨೩). ಸುಲ್ತಾನ್ ಮಹಮ್ಮದನ ಬಗೆಗೆ ಶಿಹಾಬುದ್ದೀನ್ ಅಲ್ ಉಮರಿ ಹೇಳು ತ್ತಾನೆ: ರಾಜಕುಮಾರನಾಗಿದ್ದಾಗ ಅವನು ಬೇಟೆಗೆ ಹೋದಾಗ ೧೨೦೦ ಹಕೀಮರು, ಅಶ್ವಾರೋಹಿಗಳಾಗಿ ಗಿಡಗಳನ್ನು ಹಾರಿ ಬಿಡುವ ಹತ್ತು ಸಾವಿರ ಪರಿಣತರು. ಮುನ್ನೂರು ಜನ ತಮ್ಮಟೆ ಬಾರಿಸುವವರು, ಬೇಟೆಯ ಸಾಮಾನುಗಳನ್ನು ಮಾರುವ ಮೂರು ಸಾವಿರ ವ್ಯಾಪಾರಿಗಳು, ಜತೆಯಲ್ಲಿ ಊಟ ಮಾಡುವ ಐನೂರು ಜನರು, ಗುಲಾಮ ಸಂಗೀತಗಾರರಲ್ಲದೆ ಸಂಬಳ ಪಡೆಯುವ ಒಂದು ಸಾವಿರ ಸಂಗೀತಗಾರರು, ಒಂದು ಸಾವಿರ ಕವಿಗಳು ಹೋಗುತ್ತಿದ್ದರು. (ಶಿಹಾಬುದ್ದೀನ್ ಅಲ್ ಉಮರಿ: ಮೇಲ್ಕಾಣಿಸಿದ ಗ್ರಂಥ. ಪುಟ ೫೭೮-೮೦).
ಈ ಸುಲ್ತಾನನನ್ನು ಯಾವ ಬಗೆಯ ಆದರ್ಶದ ಬೆನ್ನು ಹತ್ತಿದ ರಾಜನೆನ್ನಬೇಕು ?
`ಟಿಪೂ ಸುಲ್ತಾನ್ ಕಂಡ ಕನಸು' ನಾಟಕದಲ್ಲೂ ಗಿರೀಶ್ ಕಾರ್ನಾಡರ ಮನಸ್ಸು ಇದೇ ರೀತಿ ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡಿದೆ.
ಭಾರತದ ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಹಳೆ ಮೈಸೂರಿನ ಸಂತೆ ಜಾತ್ರೆಗಳಲ್ಲಿ ಮಾರುಕಟ್ಟೆಯ ಮೂಲೆಗಳಲ್ಲಿ ಇತಿಹಾಸದ ಅಧ್ಯಯನವಿಲ್ಲದ, ಅರೆ ಓದು ಬರಹ ಬಲ್ಲ ಲಾವಣಿಕಾರರು ಟಿಪ್ಪುವನ್ನು ವೈಭವೀಕರಿಸಿ ಬರೆದ ಲಾವಣಿಗಳನ್ನು ದಮಡಿ ಬಾರಿಸಿಕೊಂಡು ಹಾಡುತ್ತಿದ್ದರು. ಮುಸಲ್ಮಾನರು ಅದರಲ್ಲೂ ಮುಸಲ್ಮಾನ ವ್ಯಾಪಾರಿಗಳು ಈ ಲಾವಣಿ ಕಾರರಿಗೆ ಹಣ ಕೊಟ್ಟು ಪ್ರೋತ್ಸಾಹಿಸುತ್ತಿದ್ದರು. ಹಾಗೆಯೇ ಟಿಪ್ಪುವನ್ನು ವೈಭವೀಕರಿಸಿದ ನಾಟಕಗಳು. ಬ್ರಿಟಿಷರ ವಿರುದ್ಧ ಚಳವಳಿ ಮಾಡುತ್ತಿದ್ದಾಗ ಅವರ ವಿರುದ್ಧ ಹೋರಾಡಿದನೆಂಬ ಏಕೈಕ ಕಾರಣದಿಂದ ಆತನನ್ನು ಭಾರತ ದೇಶದ ಭಕ್ತನೆಂದು ಚಿತ್ರಿಸಿ ನಾಟಕ ಬರೆದರು. ಪ್ರೇಕ್ಷಕರು ಆ ಚಿತ್ರವನ್ನೆಲ್ಲಾ ನಿಜವಾದ ಇತಿಹಾಸವೆಂದು ನಂಬಿದರು. ಸ್ವಾತಂತ್ರ್ಯಾನಂತರವಂತೂ ಮಾರ್ಕ್ಸಿಸ್ಟರು, ಓಟು ಬ್ಯಾಂಕಿನವರು, ನಿಷ್ಠ ಮುಸ್ಲಿಮ ಕಲಾವಿದರು, ನಾಟಕಕಾರರು, ಚಲನಚಿತ್ರ ತಯಾರಕರು ಟಿಪ್ಪುವನ್ನು ರಾಷ್ಟ್ರೀಯ ನಾಯಕನೆಂದು ಬಿಂಬಿಸಿದರು. ನಿಜವಾದ ಇತಿಹಾಸ ಸತ್ತೇ ಹೋಯಿತು. ತನ್ನ ಇಬ್ಬರು ಮಕ್ಕಳನ್ನು ಬ್ರಿಟಿಷರಿಗೆ ಒತ್ತೆ ಇಟ್ಟ ಪ್ರಸಂಗವನ್ನು ಎತ್ತಿಕೊಂಡು ಬ್ರಿಟಿಷರು ಎಂಥ ಕಟುಕರೆಂದು ಚಿತ್ರಿಸಿದರು. ಮೇಲೆ ಹೇಳಿದ ಟಿಪ್ಪುವನ್ನು ರಾಷ್ಟ್ರೀಯ ನಾಯಕನೆಂದು ಚಿತ್ರಿಸುವ ಸಂಪ್ರದಾಯಕ್ಕೆ ಬದ್ಧರಾದ ಗಿರೀಶ್ ಕಾರ್ನಾಡರೂ ಈ ಪ್ರಸಂಗವನ್ನು ಎತ್ತಿಕೊಂಡು ಟಿಪ್ಪುವಿನ ಬಾಯಿಯಲ್ಲಿ `ನಮ್ಮ ನಾಡಿನಲ್ಲೊಂದು ಹೊಸ ಭಾಷೆ ಬಂದಿದೆ. ಹೊಸ ಸಂಸ್ಕೃತಿ ಬಂದಿದೆ. ಅಂಗ್ರೇ ಜಿ ! ಏಳು-ಎಂಟು ವರ್ಷದ ಕಂದಮ್ಮಗಳನ್ನು ಯುದ್ಧ ಕೈದಿಯಾಗಿ ಬಳಸಬಲ್ಲ ಸಂಸ್ಕೃತಿ' ಎಂಬ ಸಮಾಜ ಶಾಸ್ತ್ರದ ದಾರ್ಶನಿಕ ಮಾತನ್ನು ಹಾಕುತ್ತಾರೆ.
ಆದರೆ ಯುದ್ಧ ಬಂಧಿಗಳನ್ನು ತೆಗೆದುಕೊಳ್ಳುವುದು ಭಾರತವನ್ನಾಳಿದ ಮುಸ್ಲಿಂ ದೊರೆಗಳ ಸಂಪ್ರದಾಯವೇ ಆಗಿತ್ತು. ಅದನ್ನು ಬ್ರಿಟಿಷರು ಇಲ್ಲಿ ಅನುಸರಿಸಿದರು ಎಂಬ ಸತ್ಯ ಕಾರ್ನಾಡರಿಗೆ ತಿಳಿದಿಲ್ಲ ಅಥವಾ ತಿಳಿದಿದ್ದರೂ ಮರೆ ಮಾಚಿದ್ದಾರೆ. ಔರಂಗಜೇಬನ ಸೇನಾಪತಿ ಮೀರ್ ಜುಮ್ಲಾನು ಅಸ್ಸಾಮಿನ ರಾಜನನ್ನು ಸೋಲಿಸಿದಾಗ ಅವನಲ್ಲಿದ್ದ ಚಿನ್ನ, ಬೆಳ್ಳಿ, ನಗದನ್ನೆಲ್ಲ ದೋಚಿ, ಬಲವಂತವಾಗಿ ಕೇಳಿದ ಇನ್ನಷ್ಟು ನಗದನ್ನು ಒಪ್ಪಿಸುವವರೆಗೆ ರಾಜನ ಮಗಳು ಮತ್ತು ಗಂಡು ಮಕ್ಕಳು; ಬುರ್ಹ ಗೋಹೆನ್, ಬಾರ್ ಗೊಹೇನ್, ಘಡ ದೊನಿಯಾಪುಖಾನ್ ಮತ್ತು ಬಡ್ ಪತ್ರಾಪುಖಾನ್ ಎಂಬ ನಾಲ್ವರು ಸಾಮಂತರ ಗಂಡು ಮಕ್ಕಳನ್ನು ಯುದ್ಧ ಬಂಧಿಗಳಾಗಿರುವಂತೆ ಬಲಾತ್ಕರಿಸಿ ಕೊಂಡೊಯ್ದನೆಂದು ಔರಂಗಜೇಬನ ಅಧಿಕೃತ ಇತಿಹಾಸದಲ್ಲೇ ಬರೆದಿದೆ. (ಮಾಸಿರ್ -ಇ-ಅಲಂಗೀರ್, ಪುಸ್ತಕ ಬರೆದವನು ಸಾಕಿ ಮುಸ್ತಾದ್ ಖಾನ್, ಐದನೆಯ ವರ್ಷ, ೫ನೇ ಜಮಾದ್, ಅಲ್ ಹಿಜಿರಾ ೧೦೭೨, ೫. ಜನವರಿ ೧೬೬೩) ಮೊಘಲರ ಕಾಲದಲ್ಲಿ ರಾಜಪೂತ ರಾಜರುಗಳು ತಮ್ಮ ಒಬ್ಬನಾದರೂ ಮಗನನ್ನು ಬಾದಶಹನ ಆಸ್ಥಾನದಲ್ಲಿ ಇಡಬೇಕಾಗಿತ್ತು. ಅವರು ವಸ್ತುತಃ ಯುದ್ಧಬಂಧಿಗಳೇ. ಅಕ್ಬರ್‌ನಿಂದ ಆರಂಭವಾಗಿ ಮುಂದುವರಿದ ಪದ್ಧತಿ ಸೋತ ರಾಜಪೂತ ರಾಜನು ತನ್ನ ಮಗಳನ್ನು ಬಾದಶಹರಿಗೆ ಕೊಟ್ಟು ಮದುವೆ ಮಾಡಬೇಕಾದದ್ದು ಕೂಡ ವಸ್ತುತಃ ಯುದ್ಧ ಬಂಧಿಯಾಗಿಯೇ. ಮಹಾರಾಣಾ ಪ್ರತಾಪನು ಅವನ ಮಗನನ್ನು ತನ್ನ ಆಸ್ಥಾನಕ್ಕೆ ಕಳಿಸಬೇಕೆಂದು ಅಕ್ಬರನು ಕೇಳಿದ್ದ. ಆದರೆ ಪ್ರತಾಪನು ಒಪ್ಪಲಿಲ್ಲ. ಮುಂದೆ ಶಹಜಹಾನನೆಂದು ನಾಮಕರಣ ಮಾಡಿಕೊಂಡ ಖುರ್ರಮ್ ತನ್ನ ತಂದೆ ಜಹಾಂಗೀರನ ವಿರುದ್ಧ ದಂಗೆ ಎದ್ದು ಸೋತಾಗ ಜಹಾಂಗೀರನು ಖುರ್ರಮನ ಇಬ್ಬರು ಮಕ್ಕಳು ಎಂದರೆ ತನ್ನ ಮೊಮ್ಮಕ್ಕಳು, ದಾರಾ ಮತ್ತು ಔರಂಗಜೇಬರುಗಳನ್ನು ಯುದ್ಧ ಬಂಧಿಗಳನ್ನಾಗಿ ತೆಗೆದುಕೊಂಡಿದ್ದ. ಬ್ರಿಟಿಷನಾದ ಕಾರ್ನ್‌ವಾಲೀಸನು ಟಿಪ್ಪುವಿನ ಇಬ್ಬರು ಮಕ್ಕಳನ್ನು ನೋಡಿಕೊಂಡಷ್ಟು ಮುಚ್ಚಟೆಯಿಂದ, ಮುಸ್ಲಿಮ ದೊರೆಗಳು ತಮ್ಮ ಯುದ್ಧ ಬಂಧಿಗಳನ್ನು ಎಂದೂ ನೋಡಿಕೊಳ್ಳುತ್ತಿರಲಿಲ್ಲ. ಯುದ್ಧಬಂಧಿಗಳು ಅನ್ಯ ಧರ್ಮೀಯರಾದರೆ ಅವರನ್ನು ಧರ್ಮಾಂತರಿಸದೆ ಬಿಡುತ್ತಿರಲಿಲ್ಲ.
ಟಿಪ್ಪುವು ಮಕ್ಕಳನ್ನು ಯುದ್ಧ ಬಂಧಿಗಳಾಗಿ ಇಟ್ಟ ಕರಾರು ಯಾವುದು? ಯುದ್ಧದಲ್ಲಿ ಸೋತ ನಂತರ ಇಂತಿಷ್ಟು ಹಣವನ್ನು ಬ್ರಿಟಿಷರಿಗೆ ಕೊಡುವುದಾಗಿ ಅವನು ಒಪ್ಪಿಕೊಂಡ. ಸದ್ಯದಲ್ಲಿ ಕೈಲಿ ಹಣವಿರಲಿಲ್ಲ. ಹೊಂದಿಸಿಕೊಡುವ ತನಕ ಒತ್ತೆ ಇಡಲು ಬೇರೇನೂ ಇರಲಿಲ್ಲ. ಅವನ ಬರಿ ಮಾತನ್ನು, ಆಣೆ ಪ್ರಮಾಣಗಳನ್ನು ಬ್ರಿಟಿಷರು ನಂಬಿ ಹೋಗಬಹುದಿತ್ತೆ? ಮಕ್ಕಳನ್ನು ಒಯ್ಯುವುದು ಬ್ರಿಟಿಷರ ಉದ್ದೇಶವಾ ಗಿರಲಿಲ್ಲ. ಒತ್ತೆ ಇಡಲು ಟಿಪ್ಪುವಿನ ಹತ್ತಿರ ಬೇರೆ ಏನೂ ಇರಲಿಲ್ಲ. ಒತ್ತೆ ಇರಿಸಿಕೊಂಡ ಮಕ್ಕಳ ಯೋಗಕ್ಷೇಮವನ್ನು ಬ್ರಿಟಿಷರು ಚೆನ್ನಾಗಿಯೇ ನೋಡಿಕೊಂಡರು.
ಟಿಪ್ಪುವನ್ನು ಕನ್ನಡದ ಕುವರನೆಂದು ಕೆಲವು ರಾಜ ಕಾರಣಿಗಳು ಭಾಷಣ ಮಾಡುವುದು ಹೊಸತಲ್ಲ. ಆದರೆ ಒಡೆಯರ ಕಾಲದಲ್ಲಿ ಆಡಳಿತ ಭಾಷೆಯಾಗಿದ್ದ ಕನ್ನಡವನ್ನು ಟಿಪ್ಪು ಬದಲಿಸಿ ಫಾರಸಿ ಭಾಷೆಯನ್ನು ತಂದ. ಹಳೆ ಮೈಸೂರಿನ ಕಂದಾಯ ಇಲಾಖೆಗೆ ಸೇರಿದ ಶ್ಯಾನುಭೋಗರ ಮನೆತನದ ನನಗೆ ಆಗಿನ ಕಂದಾಯದ ಲೆಕ್ಕಗಳ ಪರಿಚಯವಿದೆ. ಖಾತೆ, ಖಿರ್ದಿ, ಪಹಣಿ, ಖಾನೀಸು ಮಾರಿ, ಗುದಸ್ತಾ, ತಖ್ತೆ, ತರಿ, ಖುಷ್ಕಿ, ಬಾಗಾಯ್ತು, ಬಂಜರು, ಜಮಾಬಂದಿ, ಅಹವಾಲು, ಖಾವಂದ್, ಅಮ ಲ್ದಾರ್, ಶಿರಸ್ತೇದಾರ್ ಹೀಗೆ ಆಡಳಿತದ ಪ್ರತಿಯೊಂದು ಶಬ್ದವೂ ಫಾರಸಿಯಾದದ್ದು ಟಿಪ್ಪುವಿನ ಕಾಲದಲ್ಲಿ ಸೇರಿದ್ದು.
ಊರುಗಳ ಮೂಲ ಹೆಸರುಗಳನ್ನೆಲ್ಲ ಟಿಪ್ಪುವು ಬದಲಿಸಿದ್ದ. ಬ್ರಹ್ಮಪುರಿಯನ್ನು ಸುಲ್ತಾನ್ ಪೇಟ್ ಎಂದು ಬದಲಿಸಿದ. ಕೇರಳದ ಕಾಳೀಕೋಟೆ-ಈಗಿನ ಕಲ್ಲೀಕೋಟೆಯನ್ನು ಫರೂಕಾಬಾದ್; ಚಿತ್ರದುರ್ಗ ವನ್ನು ಫಾರ್ರುಕ್ ಯಬ್ ಹಿಸ್ಸಾರ್; ಕೊಡಗನ್ನು ಜಫರಾಬಾದ್; ದೇವನಹಳ್ಳಿಯನ್ನು ಯೂಸುಫಾಬಾದ್; ದಿಂಡಿಗಲ್ ಅನ್ನು ಖಲೀಲಾಬಾದ್; ಗುತ್ತಿ ಯನ್ನು ಫೈಜ್ ಹಿಸ್ಸಾರ್; ಕೃಷ್ಣಗಿರಿಯನ್ನು ಫಲ್ಕ್ ಇಲ್ ಅಜಮ್; ಮೈಸೂರನ್ನು ನಜರಾಬಾದ್(ಈಗ ನಜರ್‌ಬಾದ್ ಎನ್ನುವುದು ಮೈಸೂರಿನ ಒಂದು ಮೊಹಲ್ಲಾ ಆಗಿದೆ); ಪೆನುಗೊಂಡವನ್ನು ಫಕ್ರಾಬಾದ್; ಸಂಕ್ರಿದುರ್ಗವನ್ನು ಮುಜ್ಜಫರಾಬಾದ್; ಸಿರಾವನ್ನು ರುಸ್ತುಮಾಬಾದ್; ಸಕಲೇಶಪುರವನ್ನು ಮಂಜ್ರಾಬಾದ್ ಎಂದು ಬದಲಿಸಿದ. ಇವೆಲ್ಲ ಟಿಪ್ಪುವಿನ ರಾಷ್ಟ್ರೀಯತೆಯನ್ನು, ಕನ್ನಡ ನಿಷ್ಠೆಯನ್ನು ಅನ್ಯಧರ್ಮ ಸಹಿಷ್ಣುತೆಯನ್ನು ತೋರಿಸುತ್ತದೆಯೆ?
`ಟಿಪೂ ಸುಲ್ತಾನ್ ಕಂಡ ಕನಸು' ಎಂಬ ತಮ್ಮ ನಾಟಕದ ಹೆಸರನ್ನು ಗಿರೀಶ್ ಕಾರ್ನಾಡರು `ಟಿಪ್ಪು ಸುಲ್ತಾನನ ಕನಸುಗಳು' ಎಂಬ ಟಿಪ್ಪುವು ಸ್ವತಃ ಅಕ್ಷರಗಳಲ್ಲಿ ಫಾರ್ಸಿ ಭಾಷೆಯಲ್ಲಿ ಬರೆದಿಡುತ್ತಿದ್ದ ಕಿರು ಹೊತ್ತಗೆ, ಅದರ ಇಂಗ್ಲಿಷ್ ಸಂಪಾದಕ ಮೇಜರ್ ಬೀಟ್‌ಸನ್ ಕೊಟ್ಟ ಹೆಸರಿನಿಂದ ತೆಗೆದುಕೊಂಡಿದ್ದಾರೆ. ಈ ಇಂಗ್ಲಿಷ್ ಅನುವಾದವನ್ನು ನಾನು ಓದಿದ್ದೇನೆ. ತಾನು ಬರೆಯುವಾಗ, ಬರೆದದ್ದನ್ನು ಓದುವಾಗ ಯಾರೂ ನೋಡಬಾರದೆಂದು ಟಿಪ್ಪುವು ಕಳವಳ ಪಡುತ್ತಿದ್ದ. ಶ್ರೀರಂಗಪಟ್ಟಣದ ಅರಮನೆಯ ಕಕ್ಕಸಿನಲ್ಲಿ ಪತ್ತೆ ಹಚ್ಚಿದ್ದಾಗಿ ಟಿಪ್ಪುವಿನ ಅತ್ಯಂತ ನಂಬಿಕೆಯ ಸೇವಕ ಹಬೀ ಬುಲ್ಲಾಹನು ಅದನ್ನು ಗುರುತಿಸಿ ಟಿಪ್ಪುವೇ ಬರೆದದ್ದೆಂದು ಹೇಳಿದ. ಅದರ ಮೂಲ ಮತ್ತು ಇಂಗ್ಲಿಷ್ ಅನುವಾದಗಳು ಲಂಡನ್ನಿನ ಇಂಡಿಯಾ ಆಫೀಸಿನಲ್ಲಿವೆ. ಅದನ್ನು ಓದಿದರೆ ಟಿಪ್ಪುವು ಎಂಥ ಧರ್ಮಾಂಧನೆಂಬುದು ಇನ್ನಷ್ಟು ಖಚಿತವಾಗುತ್ತದೆ. ಅದರಲ್ಲೆಲ್ಲ ಹಿಂದೂಗಳನ್ನು ಕಾಫಿರರೆಂದೇ ಕರೆಯುತ್ತಾನೆ. ಇಂಗ್ಲಿಷರನ್ನು ಕ್ರೈಸ್ತ ರೆಂದು ನಿರ್ದೇಶಿಸುತ್ತಾನೆ. ಉದ್ದನೆಯ ಗಡ್ಡ ಬಿಟ್ಟ ಮೌಲ್ವಿಗಳು ಆತನ ಕನಸಿನಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಾರೆ. ತಾನು ಮೆಕ್ಕಾ ಯಾತ್ರೆ ಹೋಗಿದ್ದಂತೆ ಕನಸು ಕಾಣುತ್ತಾನೆ. ಸ ಪ್ರವಾದಿ ಮೊಹಮ್ಮದರು(೫) `ಟಿಪ್ಪುವನ್ನು ಬಿಟ್ಟು ನಾನು ಸ್ವರ್ಗದೊಳಕ್ಕೆ ಹೆಜ್ಜೆ ಇಡುವುದಿಲ್ಲವೆಂದು ಹೇಳಿದರು' ಎಂದು ಒಬ್ಬ ಉದ್ದನೆಯ ಗಡ್ಡದ ಅರಬನು ಹೇಳುತ್ತಾನೆ. ಮುಸ್ಲಿಮರಲ್ಲದ ಸಮಸ್ತರನ್ನೂ ಮುಸ್ಲಿಮರಾಗಿ ಮುಸ್ಲಿಮೇತರ ರಾಜ್ಯವನ್ನು ಸಂಪೂರ್ಣ ಮುಸ್ಲಿಂ ರಾಜ್ಯವಾಗಿ ಪರಿವರ್ತಿಸುವ ಕನಸು ಕಾಣುತ್ತಾನೆ.
ಈ ಇಡೀ ಕಿರುಹೊತ್ತಗೆಯಲ್ಲಿ ಭಾರತವನ್ನು ಆಧುನೀಕರಿಸುವ ಕಿಂಚಿತ್ ಆಲೋಚನೆಯೂ ಇಲ್ಲ. ತನಗೆ ದೊಡ್ಡ ಮುಳುವಾಗಿದ್ದ ಇಂಗ್ಲಿಷರನ್ನು (ಅವರನ್ನು ಉದ್ದಕ್ಕೂ ಕ್ರೈಸ್ತರೆಂದು ಜಾತಿವಾಚಕದಿಂದ ನಿರ್ದೇಶಿಸುತ್ತಾನೆ) ಓಡಿಸುವ ಬಯಕೆ ಇದೆ.
ಮಲಬಾರ್ ಮತ್ತು ಕೊಡಗುಗಳಲ್ಲಿ ಹಿಂದೂಗಳನ್ನು ಬಲವಂತವಾಗಿ ಮತಾಂತರಿಸಿದ ಟಿಪ್ಪು ಮೈಸೂರು ಪ್ರಾಂತ್ಯದಲ್ಲಿ ಆ ದುಸ್ಸಾಹಸಕ್ಕೆ ಹೋಗಲಿಲ್ಲ. ೧೭೯೧ ರಲ್ಲಿ ಮೂರನೇ ಮೈಸೂರು ಯುದ್ಧ ವಾಗಿ ಸೋತು ಬ್ರಿಟಿಷರಿಗೆ ದೊಡ್ಡ ಮೊತ್ತದ ಸಂಪತ್ತನ್ನು ರಾಜ್ಯದ ಮುಖ್ಯ ಭಾಗಗಳನ್ನೂ ಒಪ್ಪಿಸಿ ಮಕ್ಕಳನ್ನು ಯುದ್ಧ ಬಂಧಿಯಾಗಿ ಕೊಟ್ಟ ಮೇಲೆ ಶೃಂಗೇರಿ ಮಠಕ್ಕೆ ಕಾಣಿಕೆ ಸಲ್ಲಿಸುವ ಮೂಲಕ ಹಿಂದೂಗಳ ಅಸಮಾಧಾನವನ್ನು ಕಡಿಮೆ ಮಾಡಲು ಪ್ರಯತ್ನಿಸಿದುದನ್ನು ಇವತ್ತಿನ ಜಾತ್ಯತೀತವಾದಿಗಳು ದೊಡ್ಡದು ಮಾಡಿ ಅವನನ್ನೊಬ್ಬ ಧರ್ಮ ಸಹಿಷ್ಣುನೆಂದು ಬಿಂಬಿಸುತ್ತಿದ್ದಾರೆ. ಆಫ್‌ಘಾನ್ ದೊರೆ ಜಿಮಾಳ್‌ಶಾಹನಿಗೆ ಮತ್ತು ತುರ್ಕಿಯ ಖಲೀಫನಿಗೆ ಭಾರತದ ಮೇಲೆ ದಂಡೆತ್ತಿ ಬಂದು ಇಸ್ಲಾಂ ರಾಜ್ಯವನ್ನು ಸಂಪೂರ್ಣವಾಗಿ ಸ್ಥಾಪಿಸುವಂತೆ ಟಿಪ್ಪು ಕಾಗದ ಬರೆದಿದ್ದ. ೧೭೯೬ರಲ್ಲಿ ಮೈಸೂರಿನ ರಾಜರ ಅರಮನೆಯನ್ನು ಲೂಟಿ ಮಾಡಿದಾಗ ಅರಮನೆಯ ಗ್ರಂಥಾಲಯದಲ್ಲಿದ್ದ ಅಮೂಲ್ಯ ಗ್ರಂಥಗಳು ತಾಳೆಯೋಲೆಯ ಹಸ್ತಪ್ರತಿಗಳು ಮತ್ತು ಕಡತಗಳನ್ನು ಕುದುರೆಗಳಿಗೆ ಹುರುಳಿ ಬೇಯಿಸಲು ಇಂಧನವಾಗಿ ಉಪಯೋಗಿಸುವಂತೆ ಅಪ್ಪಣೆ ಮಾಡಿದ.
ಮಲಬಾರಿನ ಮುಸ್ಲಿಮರು ಮಲೆಯಾಳಂ ಭಾಷೆಯನ್ನು, ತಮಿಳುನಾಡಿನ ಮುಸ್ಲಿಮರು ಮನೆಯಲ್ಲಿ ತಮಿಳನ್ನು ಇಂದಿಗೂ ಮಾತನಾಡುತ್ತಾರೆ. ಓದಿ ಬರೆಯುತ್ತಾರೆ. ಆದರೆ ಮೈಸೂರಿನ ಮುಸ್ಲಿಮರು ಇಂದಿಗೂ ಉರ್ದು ಮಾತನಾಡುವುದು. ಕನ್ನಡದಲ್ಲಿ ಓದಿ ಬರೆಯದೆ ಇರುವುದು. ಕನ್ನಡ ರಾಜ್ಯ ಭಾಷಾ ಮುಖ್ಯವಾಹಿನಿಯಲ್ಲಿ ಸೇರದೆ ಇರುವುದು ಟಿಪ್ಪು ಆರಂಭಿಸಿದ ಫಾರ್ಸಿ ಮತ್ತು ಉರ್ದು ವಿದ್ಯಾಭ್ಯಾಸ ಪದ್ಧತಿಯಿಂದ.
ನನ್ನ ಮೂಲಭೂತ ಪ್ರಶ್ನೆ ಎಂದರೆ ಐತಿಹಾಸಿಕ ವಸ್ತು ಮತ್ತು ವ್ಯಕ್ತಿಗಳನ್ನು ಪಾತ್ರಗಳಾಗಿ ಚಿತ್ರಿಸುವಾಗ ಸಾಹಿತಿಯು ವಹಿಸಬಹುದಾದ ಸ್ವಾತಂತ್ರ್ಯ ಯಾವ ರೀತಿಯದು? ಕಾಲ್ಪನಿಕ ಪಾತ್ರಗಳನ್ನು ತನಗಿಷ್ಟ ಬಂದಂತೆ ರಚಿಸುವ ಸ್ವಾತಂತ್ರ್ಯ ಸಾಹಿತಿಗೆ ಯಾವತ್ತೂ ಇದೆ. ಏಕೆಂದರೆ ಅದು ಆತನ ಸ್ವಂತ ಸೃಷ್ಟಿ. ಆದರೆ ಐತಿಹಾಸಿಕ ಪಾತ್ರವನ್ನು ಚಿತ್ರಿಸುವಾಗ ಐಸಿಹಾಸಿಕ ಸತ್ಯಕ್ಕೆ ಅವನು ನಿಷ್ಠನಾಗಿರಬೇಕು. ಸರ್ವ ಸಮ್ಮತ ವಾದ ಐತಿಹಾಸಿಕ ಸತ್ಯತೆಯೆಂಬುದೇ ಇಲ್ಲ. ಇತಿಹಾಸಕಾರನು ವ್ಯಾಖ್ಯಾನಿಸಿದಂತೆಯೇ ಅದರ ಸತ್ಯ ಎಂದು ಹೇಳುವವರೂ ಇದ್ದಾರೆ. ಸಾಹಿತಿಯು ಯಾವುದಾದರೊಂದು ಸಿದ್ಧಾಂತಕ್ಕೆ ಬದ್ಧನಾಗಿದ್ದರೆ ಆ ಸಿದ್ಧಾಂತವು ಅಥವಾ ಆ ಸಿದ್ಧಾಂತದ ಗುಂಪು ಹೇಳಿ ನಿರ್ದೇಶಿಸದಂತೆಯೇ ಇತಿಹಾಸದ ಪ್ರತಿಯೊಂದು ಘಟನೆ ಮತ್ತು ಪಾತ್ರಗಳನ್ನು ಅರ್ಥೈಸುವುದು ಅವನಿಗೆ ಅನಿವಾರ್ಯವಾಗುತ್ತದೆ. ಕಮ್ಯುನಿಸ್ಟ್, ಜೆ.ಎನ್.ಯು.ಗುಂಪು. ವಾಮ ಪಂಥೀಯ ಎಂಬ ಒಳ ಜಾತಿ, ಉಪ ಜಾತಿಗಳು ಏನೇ ಇದ್ದರೂ ಗಿರೀಶ್ ಕಾರ್ನಾಡರು ಮಾರ್ಕ್ಸಿಸ್ಟ್ ಪಂಥಕ್ಕೆ ಸೇರಿದವರು. ಇಸ್ಲಾಂನಲ್ಲಿ ಸಮಾಜವಾದವಿದೆ. ಹಿಂದೂಗಳಲ್ಲಿ ಇಲ್ಲ ಎಂದು ನಂಬಿದ ಗುಂಪು ಇದು. ಶೀತ ಯುದ್ಧವಾಗುತ್ತಿದ್ದಾಗ ಬಂಡವಾಳಶಾಹಿ ಅಮೆರಿಕ ವಿರುದ್ಧವಾಗಿ ಅರಬರ ಸ್ನೇಹವನ್ನು ಗಳಿಸುವ ಹುನ್ನಾರದಿಂದ ಸ್ಟಾಲಿನ್ ಇಸ್ಲಾಮಿನ ಸಾಮಾಜಿಕ ನ್ಯಾಯವನ್ನು ಮತ್ತೊಮ್ಮೆ ಒತ್ತಿ ಹೇಳಿದ. ಭಾರತದ ಇತಿಹಾಸದ ಮುಸ್ಲಿಂ ವ್ಯಕ್ತಿಗಳನ್ನು ವಿಮರ್ಶಾತ್ಮಕವಾಗಿ ನೋಡಲು ಅವರಿಗೆ ಸಾಧ್ಯವಿಲ್ಲದಂತಾಯಿತು. ಜೊತೆಗೆ ಹಿಂದೂವಾದದ ಬಿಜೆಪಿಯನ್ನು ಹೊಡೆಯಲು ಮುಸ್ಲಿಮರನ್ನು ಎತ್ತಿ ಕಟ್ಟಿ ಬೆಂಬಲಿಸುವ ಒಳ ಸನ್ನಾಹ. ಆದುದರಿಂದ ಕಾರ್ನಾಡರಂಥ ಬುದ್ಧಿಜೀವಿಗಳು ರಾಜಕೀಯವಾಗಿ ಯಾವಾಗಲೂ ಬಿಜೆಪಿಯ ವಿರುದ್ಧ ಗದ್ದಲ ಮಾಡಲು ಸಿದ್ಧವಾಗಿ ನಿಂತಿರುತ್ತಾರೆ. ದತ್ತ ಜಯಂತಿಯ ವಿಷಯವಾಗಲಿ, ಶಾಲೆಯಲ್ಲಿ ಸರಸ್ವತಿ ಪ್ರಾರ್ಥನೆಯ ವಿಷಯದಲ್ಲಿಯಾಗಲಿ ಸಮಯ ಕಾಯುತ್ತಿರುತ್ತಾರೆ. ಇಷ್ಟೊಂದು ಸೈದ್ಧಾಂತಿಕ ಬದ್ಧತೆ ಇರುವ ಲೇಖಕರು ತಮ್ಮ ಸೃಜನಶಕ್ತಿಯನ್ನು ತಮ್ಮ ಸಿದ್ಧಾಂತದ ಅಡಿಯಾಳಾಗಿ ದುಡಿಸಿಕೊಳ್ಳುತ್ತಾರೆ. ಅವರಿಗೆ ಕಲೆ ಎನ್ನುವುದು ತಮ್ಮ ರಾಜಕೀಯ ನಂಬಿಕೆಗಳ ಒಂದು ಸಾಧನ ಮಾತ್ರವಾಗಿ ಬಿಡುತ್ತದೆ. ಸಾಹಿತಿಯು ರಾಜಕೀಯದಿಂದ ತಟಸ್ಥವಾಗಿರಬೇಕು. ಅಕಸ್ಮಾತ್ ರಾಜಕೀಯಕ್ಕೆ ಇಳಿದರೂ ತನ್ನ ಬರವಣಿಗೆಯಲ್ಲಿ ಅದರಿಂದ ತಟಸ್ಥನಾಗಬೇಕು (ಅದು ಕಷ್ಟ ಸಾಧ್ಯ) ಎಂದು ನಾನು ನಂಬಿದ್ದೇನೆ. ರಾಜಕಾರಣದ ಆಯಾಮವಿಲ್ಲದ ಕಲೆ, ನೀತಿ ಅರ್ಥ. ಇತಿಹಾಸ ಆಧ್ಯಾತ್ಮ ಯಾವುದೂ ಇಲ್ಲವೆಂದು ವಾಮಪಂಥೀಯರು ಹೇಳುತ್ತಾರೆ.
ನನ್ನ ಈ ಲೇಖನದ ಉದ್ದೇಶ ಶಂಕರಮೂರ್ತಿ ಯವರನ್ನು ಬೆಂಬಲಿಸುವುದಲ್ಲ. ಮುಸ್ಲಿಂ ಐತಿಹಾಸಿಕ ವ್ಯಕ್ತಿಗಳನ್ನು ಹೀಗಳೆಯುವುದೂ ಅಲ್ಲ. ಭಾರತ ದೇಶದಲ್ಲಿರುವ ಮುಸ್ಲಿಮರೆಲ್ಲರೂ ನಮ್ಮ ಭ್ರಾತೃಗಳು. ಈ ಭ್ರಾತೃತ್ವದ ಬುನಾದಿಯ ಮೇಲೆಯೇ ನಮ್ಮ ರಾಷ್ಟ್ರೀಯತೆ ಗಟ್ಟಿಗೊಳ್ಳಬೇಕು. ಹಾಗೆಂದು ಇತಿ ಹಾಸದ ಸುಳ್ಳು ಚಿತ್ರಣದ ಮೇಲೆ ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸಲು ಸಾಧ್ಯವಿಲ್ಲ. ಹಿಂದೂಗಳ ತಪ್ಪು ನೆಪ್ಪುಗಳನ್ನು ನಾವು ನಿರ್ಭಯವಾಗಿ ಚರ್ಚಿಸಿ ಸರಿ ಪಡಿಸಲು ಆರಂಭಿಸಿ ಒಂದು ಶತಮಾನವಾಯಿತು. ಇಂಥ ಮುಕ್ತ ಚರ್ಚೆ ವಿಮರ್ಶೆಗಳಿಂದ ಹಿಂದೂ ಸಮಾಜವು ಗಟ್ಟಿಯಾಗುತ್ತಿದೆ. ಮುಸ್ಲಿಂ ಆಡಳಿತದಲ್ಲಿ ನಡೆದ ವಾಸ್ತವಾಂಶಗಳನ್ನು ಮುಕ್ತವಾಗಿ ಬರೆಯುವು ದರಿಂದ ಅವರಿಗೆ ಅಪಮಾನಮಾಡಿದಂತೆ ಆಗುವುದಿಲ್ಲ. ನಾವೆಲ್ಲ ಇತಿಹಾಸದಿಂದ ಪಾಠ ಕಲಿಯಬೇಕು. ಇತಿಹಾಸದ ವಾಸ್ತವತೆಯನ್ನು ಹೇಳಿದರೆ ಎಲ್ಲಿ ಯಾರು ಮುನಿಸಿಕೊಳ್ಳುತ್ತಾರೋ ಎಂಬ ಅಂಜಿಕೆಯಿಂದ ಸತ್ಯವನ್ನು ಮುಚ್ಚಿ ಸುಳ್ಳು ಇತಿಹಾಸವನ್ನು ಸೃಷ್ಟಿಸಿದರೆ ಅಂಥ ಸುಳ್ಳು ಬುನಾದಿಯ ಮೇಲೆ ಗಟ್ಟಿ ಕಟ್ಟಡವನ್ನು ಕಟ್ಟಲು ಸಾಧ್ಯವಿಲ್ಲ. ಹಿಂದಿನವರ ತಪ್ಪುಗಳಿಗೆ ಇಂದಿನವರನ್ನು ದೂಷಿಸುವುದು ಅಪಕತ್ವತೆಯ ಕುರುಹು. ಹಿಂದಿನವರೊಡನೆ ತಮ್ಮನ್ನು ತಾವು ಸಮೀಕರಿಸಿಕೊಂಡು ವಾರಸುದಾರರಂತೆ ಕಲ್ಪಿಸಿಕೊಂಡು ಉಬ್ಬುವುದು ಅಥವಾ ಕುಗ್ಗುವುದು ಅಷ್ಟೇ ಅಪಕತ್ವತೆಯ ಲಕ್ಷಣ.
ಎಸ್.ಎಲ್. ಭೈರಪ್ಪ. [ಸೆಪ್ಟೆಂಬರ್ ೨೪, ೨೦೦೬, ವಿಜಯ ಕರ್ನಾಟಕ]
Thursday, August 24, 2006
ವಂದೇ ಮಾತರಂಗೆ ಕಡೆವಂದೇ ಹೇಳಹೊರಟವರ ಕುರಿತು
ವಿಶ್ವೇಶ್ವರ ಭಟ್:
ಪತ್ರಕರ್ತ ಚೋ.ರಾಮಸ್ವಾಮಿ ಹೇಳುತ್ತಿದ್ದರು, `ನಮ್ಮ ರಾಜಕಾರಣಿಗಳು ಎಂಥ ನೀಚ ಮಟ್ಟಕ್ಕೆ ಬೇಕಾದರೂ ಹೋಗಲೂ ಹೇಸದವರು. ಅದಕ್ಕೆ ಭಾರತದ ರಾಜಕಾರಣದಲ್ಲಿ ಅಸಂಖ್ಯಉದಾಹರಣೆಗಳು ಸಿಗುತ್ತವೆ. ಗಡಿಯಲ್ಲಿನ ನಮ್ಮ ಬೇಹುಗಾರನ ಸುಳಿವನ್ನು ಶತ್ರು ದೇಶದ ಸೈನಿಕರಿಗೆ ಹೇಳುವುದರಿಂದ ಹಿಡಿದು ರಕ್ಷಣೆ, ಬಾಹ್ಯಾಕಾಶ, ಅಣುಸ್ಥಾವರ, ದೇಶದ ಭದ್ರತೆಗೆ ಸಂಬಂಸಿದ ಅಮೂಲ್ಯ, ಸೂಕ್ಷ್ಮ ಮಾಹಿತಿಯನ್ನು ಸಹಾ ಮಾರಾಟಕ್ಕಿಡಬಲ್ಲರು. ತಮ್ಮ ಸ್ವಾರ್ಥಕ್ಕಾಗಿ ದೇಶವನ್ನೇ ಮಾರಾಟ ಮಾಡುವ ಸಂದರ್ಭ ಬಂದರೆ, ಚೌಕಾಶಿ ಮಾತುಕತೆಗೆ ಕುಳಿತುಕೊಳ್ಳಬಲ್ಲರು'. ಚೋ ಏರಿದ ದನಿಯಲ್ಲಿ ಪಟಾಕಿಸರಕ್ಕೆ ಬೆಂಕಿಯಿಟ್ಟವರಂತೆ ಸಡಸಡ ಮಾತಾಡುವಾಗ ವಿಷಯವನ್ನು ಉತ್ಪ್ರೇಕ್ಷಿಸಬಹುದೇನೋ ಎಂದೆನಿಸುತ್ತದೆ. ಆಗ ಅವರು ಹೇಳುತ್ತಿದ್ದರು -ನಾನು ಹೀಗೆ ಮಾತಾಡಿದರೆ ನಿಮಗೆ ಅನಿಸುತ್ತದೆ ಈ ಚೋ.ರಾಮಸ್ವಾಮಿಗೆ ಬುದ್ಧಿಯಿಲ್ಲ. ಬಾಯಿಗೆ ಬಂದಿದ್ದನ್ನೆಲ್ಲ ಹೇಳುತ್ತಾನೆ. ರಾಜಕಾರಣಿಗಳನ್ನು ಹೀನಾಯಮಾನವಾಗಿ ಬೈಯುತ್ತಾನೆ ಅಂತ ಒಳಗೊಳಗೆ ಅಂದುಕೊಳ್ಳುತ್ತಾರೆ. ನನ್ನ ಮಾತಿನ ಮರ್ಮ ತಕ್ಷಣ ಅವರಿಗೆ ಅರ್ಥವಾಗದಿರಬಹುದು. ಆದರೆ ನನ್ನ ಮಾತು ಅವರಿಗೆ ಅರ್ಥವಾಗಲು ಹೆಚ್ಚು ದಿನ ಬೇಕಾಗುವುದಿಲ್ಲ.
ಯಾಕೋ ಎಂದೋ ಹೇಳಿದ ಚೋ ಮಾತು ಮನಸ್ಸಿನ ಮುಂದೆ ಹಾದು ಹೋಯಿತು.
`ವಂದೇ ಮಾತಾರಂ' ಕುರಿತು ಎದ್ದಿರುವ ವಿವಾದವನ್ನೇ ನೋಡಿ. ನಮ್ಮ ಸ್ವಾರ್ಥ ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಹೋಗಬಲ್ಲರೆಂಬುದಕ್ಕೆ ನಿದರ್ಶನ. ವೋಟ್‌ಬ್ಯಾಂಕ್ ರಾಜಕಾರಣದ ಮುಂದೆ ನಮ್ಮ ದೇಶ, ದೇಶಗೀತೆ, ಧ್ಯೇಯ, ಮೌಲ್ಯ, ದೇಶಹಿತ ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಧ್ಯೇಯದೀವಿಗೆಯಾಗಿ ಅಸಂಖ್ಯ ಭಾರತೀಯರ ಅಪದಮನಿ, ಅಭಿದಮನಿಗಳಲ್ಲಿ ಸೂರ್ತಿ ಕಾರಂಜಿ ಸೃಜಿಸಿದ ಗೀತೆ -`ವಂದೇ ಮಾತರಂ' ಸಹ ರಾಜಕಾರಣಿಗಳ ಕೈಯಲ್ಲಿ ಹೇಗೆ ದಾಳವಾಗುತ್ತದೆ ನೋಡಿ.
`ವಂದೇ ಮಾತರಂ' ವಿವಾದ ಆರಂಭವಾಗುವುದು ಹೀಗೆ.
ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಅರ್ಜುನ್ ಸಿಂಗ್ ದೇಶದ ಎಲ್ಲ ಮುಖ್ಯಮಂತ್ರಿಗಳಿಗೆ ಒಂದು ಪತ್ರ ಬರೆಯುತ್ತಾರೆ. ವಿಷಯ ಏನಂದ್ರೆ -`ಸೆಪ್ಟೆಂಬರ್ ೭ರಂದು ವಂದೇ ಮಾತರಂ ಶತಮಾನೋತ್ಸವ ನಿಮಿತ್ತ, ಅಂದು ಬೆಳಗ್ಗೆ ೧೧ಕ್ಕೆ ದೇಶಾದ್ಯಂತ ಎಲ್ಲ ಶಾಲೆಗಳಲ್ಲಿ ಈ ರಾಷ್ಟ್ರಗೀತೆ(ವಂದೇ ಮಾತರಂ)ಯ ಮೊದಲ ಎರಡು ಪಲ್ಲವಿಗಳನ್ನು ಕಡ್ಡಾಯವಾಗಿ ಹಾಡಬೇಕು. ' ಈ ಪತ್ರ ಬರುತ್ತಿದ್ದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ರಾಜ್ಯದ ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ಸುತ್ತೋಲೆ ಕಳುಹಿಸಿದರು. `ವಂದೇ ಮಾತರಂ'ನ್ನು ಹಾಡುವಂತೆ ಅದರಲ್ಲಿ ಸೂಚಿಸಲಾಗಿತ್ತು. ಮುಲಾಯಂ ಸಿಂಗ್‌ರು ಅಜುನ್‌ಸಿಂಗ್ ಅವರ ಪತ್ರವನ್ನು ಅನುಮೋದಿಸಿದ್ದರು.
ಯಾವಾಗ ಮುಲಾಯಂ ಸಿಂಗ್ ಯಾದವ್‌ರ ಸುತ್ತೋಲೆ ಹೊರಬಿತ್ತೋ, ಉತ್ತರ ಪ್ರದೇಶದ ಮುಸ್ಲಿಂ ಸಮುದಾಯದ ಹಿರಿಯರು, ಧರ್ಮಗುರುಗಳು, ಮೌಲ್ವಿಗಳು ರಾತ್ರೋ ರಾತ್ರಿ ಸಭೆ ಸೇರಿದರು. ವಂದೇ ಮಾತರಂ ವಿರುದ್ಧ ದನಿಎತ್ತಲು ನಿರ್ಧರಿಸಿದರು. ಪ್ರಮುಖ ಇಸ್ಲಾಮಿಕ್ ಸಂಘಟನೆಗಳ ಪೈಕಿ ಒಂದಾದ ಫಿರಂಗಿ ಮಹಲ್ ಅಧ್ಯಕ್ಷ ಮೌಲಾನ ಖಲೀದ್ ರಶೀದ್ ಹೇಳಿದರು -`ಮುಸ್ಲಿಂ ವಿದ್ಯಾರ್ಥಿಗಳು ವಂದೇಮಾತರಂ ಹಾಡುವುದು ಇಸ್ಲಾಂ ವಿರೋ. ನಮ್ಮ ಸಮುದಾಯದವರ್‍ಯಾರೂ ಇದನ್ನು ಹಾಡಬಾರದು. ವಂದೇಮಾತರಂ ಹಾಡಿದರೆ ಇಸ್ಲಾಮ್‌ಗೆ ಅವಹೇಳನ ಮಾಡಿದ ಹಾಗೆ. ಸೆಪ್ಟೆಂಬರ್ ೭ರಂದು ಮುಸ್ಲಿಂ ವಿದ್ಯಾರ್ಥಿಗಳು ಇದನ್ನು ಹಾಡಕೂಡದೆಂದು ನಾನು ಕರೆ ಕೊಡುತ್ತೇನೆ.'
ದಿಲ್ಲಿಯ ಜಮಾ ಮಸೀದಿ ಶಾಹಿ ಇಮಾಮ್ ಸಯ್ಯದ್ ಅಹಮದ್ ಬುಖಾರಿ ಮಿಂಚಿನಂತೆ ಕಾರ್ಯಪ್ರವೃತ್ತರಾದರು. ತಕ್ಷಣ ತಮ್ಮ ಬೆಂಬಲಿಗರೊಂದಿಗೆ ಮುಸ್ಲಿಂ ಸಮುದಾಯದ ಹಿರಿಯರೊಂದಿಗೆ ಸಭೆ ಸೇರಿ ಅನಂತರ ಕರೆ ಕೊಟ್ಟರು -`ವಂದೇಮಾತರಂನ್ನು ಯಾವ ಕಾರಣಕ್ಕೂ ಹಾಡಕೂಡದು. ಅದು ಇಸ್ಲಾಮಿನ ನಂಬಿಕೆಗಳಿಗೆ ವಿರುದ್ಧವಾಗಿದೆ. ಒಂದು ವೇಳೆ ವಂದೇ ಮಾತರಂನ್ನು ಹಾಡಲೇ ಬೇಕೆಂಬ ಒತ್ತಡ ಹೇರುವುದೆಂದರೆ ನಮ್ಮ ಸಮುದಾಯವನ್ನು ತುಳಿದಂತೆ. ಇಸ್ಲಾಂ ಪ್ರಕಾರ ಒಬ್ಬನು ತನ್ನ ದೇಶವನ್ನು ಪ್ರೀತಿಸುವುದು, ಗೌರವಿಸುವುದು ತಪ್ಪಲ್ಲ. ಅಷ್ಟೇ ಅಲ್ಲ ಸಂದರ್ಭ ಬಂದರೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಬಹುದು. ಆದರೆ ಯಾರನ್ನಾದರೂ ಪೂಜಿಸುವ ಪ್ರಶ್ನೆ ಎದುರಾದರೆ, ಅಲ್ಲಾಹನನ್ನು ಮಾತ್ರ ಪೂಜಿಸಬೇಕು. ಮುಸ್ಲಿಮನಾದವನು ತನ್ನ ತಂದೆ, ತಾಯಿ, ಮಾತೃಭೂಮಿ ಹಾಗೂ ಪ್ರವಾದಿಯನ್ನು ಉನ್ನತ ಸ್ಥಾನದಲ್ಲಿರಿಸಿ ಗೌರವಿಸಿದರೂ, ಇವರೆಲ್ಲರನ್ನೂ ಪೂಜಿಸುವಂತಿಲ್ಲ. ಸ್ವಾತಂತ್ರ್ಯ ನಂತರದಿಂದ ಕೇಂದ್ರದ ಹಾಗೂ ರಾಜ್ಯಗಳ ಎಲ್ಲ ಸರ್ಕಾರಗಳು ಮುಸ್ಲಿಮರನ್ನು ತುಳಿಯುತ್ತಿವೆ. ವಂದೇಮಾತರಂ ಹಾಡಬೇಕೆಂಬ ಸುತ್ತೋಲೆ ಈ ದಿಸೆಯಲ್ಲಿ ಮುಸ್ಲಿಂ ಸಮುದಾಯದ ಮೇಲೆ ಎಸಗಿದ ಮತ್ತೊಂದು ಗದಾಪ್ರಹಾರ. ಸ್ವಯಂಪ್ರೇರಿತರಾಗಿ ಯಾರಾದರೂ ಹಾಡುವುದಾದರೆ ನನ್ನ ಆಕ್ಷೇಪವಿಲ್ಲ. ಆದರೆ ಹಾಡಲೇ ಬೇಕೆಂಬ Pಕ್ಷಿಟ್ಟಳೆ, ಕಟ್ಟುಪಾಡು ವಿಸಿದರೆ, ಅದನ್ನು ಬಲವಾಗಿ ಪ್ರತಿಭಟಿಸಬೇಕಾದೀತಿ. ಇಂಥ ಸುತ್ತೋಲೆ ವಾಪಸ್ ಪಡೆಯುವಂತೆ ಸರಕಾರಕ್ಕೆ ಎಚ್ಚರಿಕೆ ನೀಡಬೇಕಾದೀತು. ದೇಶವನ್ನು ಪೂಜಿಸುವುದು ವಂದೇ ಮಾತರಂ ಉದ್ದೇಶ ಅಲ್ಲ. ಈ ಹಾಡಿನಲ್ಲಿ ದೇಶವನ್ನು ತಾಯಿಗೆ ಹೋಲಿಸಲಾಗಿದೆ ಹಾಗೂ ಜನರನ್ನು ಆಕೆಯ ಮಕ್ಕಳೆಂದು ಚಿತ್ರಿಸಲಾಗಿದೆ. ಈ ವಾದವನ್ನು ನಾವು ಒಪ್ಪುವುದಿಲ್ಲ. ಇದು ನಮ್ಮ ಧರ್ಮಕ್ಕೆ ವಿರೋಧವಾದುದು. '
ಅರ್ಜುನ್ ಸಿಂಗ್ ಸುತ್ತೋಲೆ ಕೇವಲ ೨೪ ಗಂಟೆಗಳಲ್ಲಿ ಮುಸ್ಲಿಂ ಸಮುದಾಯದಲ್ಲಿ ಅದೆಂಥ ಸಂಚಲನವನ್ನುಂಟು ಮಾಡಿತೆಂದರೆ, ದೇಶದೆಲ್ಲೆಡೆಯಿರುವ ಮುಸ್ಲಿಂ ಸಮುದಾಯದ ಮುಖಂಡರು ತಮ್ಮ ತಮ್ಮ ಊರುಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ, ವಂದೇ ಮಾತರಂನ್ನು ಹಾಡಬೇಕೆಂಬ ಪ್ರಸ್ತಾಪವನ್ನು ವಿರೋಸಿದರು.
ಅರ್ಜುನ್ ಸಿಂಗ್ ಮುಸ್ಲಿಂ ಸಮುದಾಯದ ಅಂತರಂಗ ತುಮುಲವೇನೆಂಬುದು ತಟ್ಟನೆ ಅರ್ಥವಾಯಿತು. ತಮ್ಮ ಮೊದಲಿನ ಆದೇಶದಿಂದ ದೇಶಾದ್ಯಂತವಿರುವ ಮುಸ್ಲಿಮರಿಗೆ ಅಸಮಾಧಾನವಾಗಿದೆಯೆಂದು ಮನವರಿಕೆಯಾಯಿತು. ಅದು ರಾಷ್ಟ್ರಗೀತೆಯ ವಿಚಾರವಾಗಿರಬಹುದು ಅಥವಾ ಇನ್ನಿತರ ಯಾವುದೇ ವಿಷಯವಾಗಿರಬಹುದು, ಅಲ್ಪಸಂಖ್ಯಾತರನ್ನು ಎದುರು ಹಾಕಿಕೊಳ್ಳುವುದುಂಟಾ? ಅರ್ಜುನ್ ಸಿಂಗ್ ಮತ್ತೊಂದು ಸುತ್ತೋಲೆ ಕಳಿಸಿದರು. ಅಂದು ಭಾನುವಾರ ಸರಕಾರಿ ಕಚೇರಿಗೆ ರಜೆಯಿದ್ದರೂ ತಮ್ಮ ಸಿಬ್ಬಂದಿಯನ್ನು ಕರೆದು ಆದೇಶ ಹೊರಡಿಸಿದರು. ವಾರಣಸಿಯಲ್ಲಿ ಪತ್ರಿಕಾಗೋಷ್ಠಿಯನ್ನೂ ಕರೆದರು -`ವಂದೇಮಾತರಂನ್ನು ಹಾಡಲೇಬೇಕೆಂಬ ಕಡ್ಡಾಯವಿಲ್ಲ. ಹಾಡಬಹುದು ಅಥವಾ ಬಿಡಬಹುದು' ಎಂದು ಬಿಟ್ಟರು.
ಆಗಲೇ ಮುಸ್ಲಿಂ ಸಮುದಾಯ ನಿಟ್ಟುಸಿರುಬಿಟ್ಟಿದ್ದು. ಅರ್ಜುನ್‌ಸಿಂಗ್ ಹೇಳಿದ್ದಕ್ಕೆ ಕಾಂಗ್ರೆಸ್ ಠಸ್ಸೆ ಒತ್ತಿತ್ತು. ಆ ಪಕ್ಷದ ವಕ್ತಾ ಅಭಿಷೇಕ್ ಮನು ಸಿಂಘ್ವಿ ಹೇಳಿದರು -`ನಮ್ಮ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರೇರಣೆ ಮೂಡಿಸಿದ, ದೇಶಕ್ಕಾಗಿ ಬಲಿದಾನಗೈದ ಅಸಂಖ್ಯ ಜನರಿಗೆ ಸೂರ್ತಿಯಾದ ವಂದೇಮಾತರಂ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಈ ರಾಷ್ಟ್ರಕ್ಕೆ ಅಪಾರ ಗೌರವವಿದೆ. ಆದರೂ ಯಾವುದೋ ಒಂದು ಸಮುದಾಯ ಅಥವಾ ಗುಂಪು ವಂದೇ ಮಾತರಂ ಹಾಡುವುದರ ಬಗ್ಗೆ ಬೇರೆ ರೀತಿ ಯೋಚಿಸಿದರೆ ಅವರು ಹಾಡಬಹುದು, ಇಲ್ಲವೇ ಬಿಡಬಹುದು. ಅದು ಅವರಿಗೆ ಬಿಟ್ಟ ವಿಚಾರ. ಈ ವಿಷಯದಲ್ಲಿ ಕೇಂದ್ರ ಮಂತ್ರಿ ಅರ್ಜುನ್ ಸಿಂಗ್ ನಿರ್ಧಾರವನ್ನು ಕಾಂಗ್ರೆಸ್ ಸಮ್ಮತಿಸುತ್ತದೆ. ವಂದೇ ಮಾತರಂನ್ನು ಹಾಡಲೇಬೇಕೆಂಬ ನಿಯಮ ಕಡ್ಡಾಯವೇನಿಲ್ಲ. ಅದು ಐಚ್ಛಿಕ. '
ಯಾವ ವಾರಾಣಸಿ ಅಖಿಲ ಭಾರತ ಕಾಂಗ್ರೆಸ್ ಅವೇಶನದಲ್ಲಿ ೧೯೦೫ರಲ್ಲಿ ವಂದೇ ಮಾತರಂನ್ನು ಹಾಡಲಾಗಿದ್ದೋ ಹಾಗೂ ರಾಷ್ಟ್ರೀಯ ಹಾಡು ಎಂದು ಮಾನ್ಯ ಮಾಡಿ ಸ್ವೀಕರಿಸಲಾಗಿತ್ತೋ, ಅದೇ ವಾರಾಣಸಿಯಲ್ಲಿ ಅರ್ಜುನ್ ಸಿಂಗ್ `ವಂದೇ ಮಾತರಂನ್ನು ಹಾಡಿದರೆ ಹಾಡಿ ಬಿಟ್ಟರೆ ಬಿಡಿ' ಎಂದು ಅಪ್ಪಣೆ ಕೊಡಿಸಿದ್ದರು.
೧೮೭೬ರಲ್ಲಿ ಬಂಕಿಮ್‌ಚಂದ್ರ ಚಟರ್ಜಿ ವಂದೇ ಮಾತರಂ ಬರೆದಾಗ ಅದು ಸ್ವಾತಂತ್ರ್ಯದ ರಣಕಹಳೆಯಂತೆ ಎಲ್ಲ ದೇಶಭಕ್ತರ ಬಾಯಲ್ಲಿ ಮೊಳಗತೊಡಗಿತು. `ವಂದೇ ಮಾತರಂ' ಘೋಷಣೆಯಿಲ್ಲದೇ ಯಾವ ಕಾರ್ಯಕ್ರಮವೂ ಆರಂಭವಾಗುತ್ತಿರಲಿಲ್ಲ. ಕೊನೆಗೊಳ್ಳುತ್ತಿರಲಿಲ್ಲ. ವಂದೇ ಮಾತರಂ ಅಂದರೆ ಪ್ರಖರ ದೇಶಪ್ರೇಮ, ದೇಶಭಕ್ತಿಯ ಸಂಕೇತ. ಈ ಘೋಷಣೆಗೆ ಇಡೀ ದೇಶವಾಸಿಗಳನ್ನು ಬಡಿದೆಬ್ಬಿಸುವ ಃಶಕ್ತಿಯಿತ್ತು. ಒಂದು ಹಂತದಲ್ಲಿ ವಂದೇಮಾತರಂ ಘೋಷಣೆಯನ್ನು ಬ್ರಿಟಿಷರು ನಿಷೇಸಿದ್ದರು. ಇದನ್ನು ಪ್ರತಿಭಟಿಸಿ ಘೋಷಣೆ ಕೂಗಿದರೆಂಬ ಕಾರಣಕ್ಕೆ ಸಹಸ್ರಾರು ಜನರನ್ನು ಅವರು ಜೈಲಿಗೆ ಹಾಕಿದ್ದರು. ವಂದೇ ಮಾತರಂ ಅಂದ್ರೆ ಭಾರತವನ್ನು ಪ್ರೀತಿಸುವವರೆಲ್ಲರ ರಾಷ್ಟ್ರೀಯ ಮಂತ್ರ. ೧೮೯೬ರಲ್ಲಿ ಕೋಲ್ಕತಾ ಕಾಂಗ್ರೆಸ್ ಅವೇಶನದಲ್ಲಿ ಸ್ವತಃ ರವೀಂದ್ರ ನಾಥ ಟಾಗೋರ್‌ರು ವಂದೇ ಮಾತರಂ ಹಾಡಿದ್ದರು. ಲಾಲಾ ಲಜಪತರಾಯ್ ಲಾಹೋರ್‌ನಿಂದ ವಂದೇ ಮಾತರಂ ಹೆಸರಿನ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಬ್ರಿಟಿಷ್ ಗುಂಡಿಗೆ ಬಲಿಯಾದ, ನೇಣಿಗೆ ಶರಣಾದ ಅದೆಷ್ಟೋ ದೇಶಪ್ರೇಮಿಗಳ ಕೊನೆಯ ಉದ್ಗಾರ -ವಂದೇ ಮಾತರಂ!
ಅನೇಕ ವರ್ಷಗಳ ಕಾಲ ವಂದೇ ಮಾತರಂ ನಮ್ಮ ರಾಷ್ಟ್ರಗೀತೆಯೂ ಆಗಿತ್ತು. ಅನಂತರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಗ `ಜನಗಣಮನ' ರಾಷ್ಟ್ರಗೀತೆಯಾಯಿತು. ಇದರ ಹಿಂದಿನ ರಾಜಕೀಯ, ಉದ್ದೇಶ ಅದೇನೇ ಇರಲಿ, ಜನಗಣಮನಕ್ಕಿಂತ ವಂದೇಮಾತರಂನಲ್ಲೇ ರಾಷ್ಟ್ರಭಕ್ತಿಯ ಅದಮ್ಯ ಸುರಣವಿದೆಯೆಂಬ ಅಭಿಪ್ರಾಯವಿದೆ. ಅಂತಿಮವಾಗಿ ವಂದೇಮಾತರಂ ಬದಲಿಗೆ `ಜನಗಣಮನ'ವನ್ನೇ ರಾಷ್ಟ್ರಗೀತೆಯಾಗಿ ಆಯ್ಕೆ ಮಾಡಲಾಯಿತು. ೧೯೫೦ರ ಜನವರಿ ೨೪ರಂದು ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಕಾನ್‌ಸ್ಟಿಟುಯೆಂಟ್ ಅಸೆಂಬ್ಲಿ ಉದ್ದೇಶಿಸಿ ಮಾತನಾಡುತ್ತಾ ಹೇಳಿದ್ದು ಉಲ್ಲೇಖಾರ್ಹ -`ಜನಗಣಮನ ಪದಗಳುಳ್ಳ ಹಾಡನ್ನು ಭಾರತದ ರಾಷ್ಟ್ರಗೀತೆ(anthem)ಯಾಗಿ ವಂದೇ ಮಾತರಂನ್ನು ರಾಷ್ಟ್ರೀಯ ಹಾಡಾಗಿ(national song) ಸ್ವೀಕರಿಸಲಾಗಿದೆ. ಆದರೂ ವಂದೇ ಮಾತರಂ ಹಾಡಿಗೆ ಜನಗಣಮನದಷ್ಟೇ ಸಮನಾದ ಗೌರವ ಮತ್ತು ಸ್ಥಾನಮಾನವಿದೆ' ರಾಷ್ಟ್ರಪತಿಯವರ ಈ ಘೋಷಣೆಯನ್ನು ಇಡೀ ಅಸೆಂಬ್ಲಿ ಮೇಜುಕುಟ್ಟಿ ಸ್ವಾಗತಿಸಿತ್ತು. ಆನಂತರ ನಮ್ಮ ಸಂವಿಧಾನದಲ್ಲೂ ಸಹ ವಂದೇ ಮಾತರಂನ್ನು ಸಂಸತ್ತಿನಲ್ಲೂ ಹಾಡುವ ಸಂಪ್ರದಾಯವಿದೆ.
ಹೀಗಿರುವಾಗ ಒಂದು ಕೋಮಿನ ಕೆಲ ನಾಯಕರು ಆಕ್ಷೇಪಿಸಿದರೆಂಬ ಕಾರಣಕ್ಕೆ, ವೋಟ್‌ಬ್ಯಾಂಕ್ ರಾಜಕಾರಣಕ್ಕೆ ವಂದೇ ಮಾತರಂ ಬಗ್ಗೆ ಸರಕಾರ ಹಾಗೂ ಕಾಂಗ್ರೆಸ್ ಪಕ್ಷ ತೆಗೆದುಕೊಂಡ ನಿರ್ಧಾರ ದುಗ್ಭ್ರಮೆ ಮೂಡಿಸುವಂಥದ್ದು. ಜಗತ್ತಿನ ಬೇರಾವ ದೇಶದಲ್ಲೂ ಘಟಿಸದ, ಊಹಿಸಲೂ ಆಗದಂಥ ಘಟನೆಗೆ ನಾವೆಲ್ಲ ಸಾಕ್ಷಿಯಾಗಬೇಕಿರುವುದು ದುರ್ದೈವ. ಇದು ರಾಷ್ಟ್ರಕ್ಕೆಸಗಲಾದ ಅವಮಾನವಲ್ಲದೇ ಮತ್ತೇನು? ಈ ದೇಶದಲ್ಲಿ ನೆಲೆಸುವ ಪ್ರತಿಯೊಬ್ಬರೂ ರಾಷ್ಟ್ರ, ರಾಷ್ಟ್ರೀಯತೆಯನ್ನು ಪ್ರತಿನಿಸುವ ಸಂಕೇತಗಳಿಗೆ ತಲೆಬಾಗಲೇಬೇಕು. ಇಂದು ರಾಷ್ಟ್ರೀಯ ಹಾಡಿಗೆ ಆಕ್ಷೇಪಿಸುವವರು ನಾಳೆ ರಾಷ್ಟ್ರಧ್ವಜದ ಬಗ್ಗೆ ತಕರಾರು ತೆಗೆಯಬಹುದು. ಅವರನ್ನು ಓಲೈಸಲು ಸರಕಾರ ಮಣಿಯುವುದಿಲ್ಲವೆನ್ನುವ ಗ್ಯಾರಂಟಿಯೇನು? ರಾಷ್ಟ್ರಗೀತೆಗೂ ಇದೇ ಒತ್ತಡ ಬಂದರೆ? ಆಗಲೂ ನಮ್ಮ ಮಾನಗೆಟ್ಟ ಸರಕಾರಗಳು ಮಣಿಯಲಾರವೆಂಬ ಗ್ಯಾರಂಟಿಯೇನು?
ಈ ದೇಶದ ಘೋಷವಾಕ್ಯಕ್ಕೇ ಅದರ ಶತಮಾನೋತ್ಸವ ಆಚರಿಸುವ ಈ ಸಂದರ್ಭದಲ್ಲಿ ಈ ಗತಿ ಬಂದರೂ ಯಾರೂ ಕ್ಕಾರದ ಘೋಷಣೆ ಹಾಕುತ್ತಿಲ್ಲ. ಏನೆನ್ನೋಣ?
Thursday, August 10, 2006
ತಿರುಪತಿಯಲ್ಲಿ ಮತಾಂತರ
ನಂ. ೫೫, ಯಾದವ ಸ್ಮೃತಿ, ಶೇಷಾದ್ರಿಪುರ, ೧ನೇ ಮುಖ್ಯ ರಸ್ತೆ, ಬೆಂಗಳೂರು - ೫೬೦೦೨೦
(ಪ್ರಕಟಣೆಯ ಕೃಪೆಗಾಗಿ)
ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಪರಮ ಪವಿತ್ರ ಕ್ಷೇತ್ರ ಭೂವೈಕುಂಠವೆನಿಸಿರುವ ತಿರುಮಲ ತಿರುಪತಿ ಪರಿಸರದಲ್ಲಿ ಅನೇಕ ರೀತಿಯ ಕ್ರಿಸ್ತೀಕರಣ ಚಟುವಟಿಕೆಗಳು ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ.
ಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು, ಪೇಜಾವರ ಮಠ, ಉಡುಪಿ ಇವರ ಆದೇಶದಂತೆ ಸತ್ಯ ಶೋಧನಾ ಸಮಿತಿಯೊಂದು ಎರಡು ದಿನಗಳ ಕಾಲ ತನಿಖೆ ನಡೆಸಿದೆ. ಆಂಧ್ರ ಪ್ರದೇಶದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಶ್ರೀ ಬಿಕ್ಷಾಪತಿಯವರ ನೇತೃತ್ವದ ಈ ಸಮಿತಿ ತನ್ನ ವರದಿಯಲ್ಲಿ ತಿರುಮಲ ತಿರುಪತಿ ಶ್ರೀ ಕ್ಷೇತ್ರದಲ್ಲಿ ತೀವ್ರವಾಗಿ ನಡೆಯುತ್ತಿರುವ ಕ್ರಿಸ್ತೀಕರಣದ ಚಟುವಟಿಕೆಗಳನ್ನು ಬಹಿರಂಗಗೊಳಿಸಿದೆ.
ಸತ್ಯ ಶೋಧನಾ ಸಮಿತಿಯು ಬಹಿರಂಗಗೊಳಿಸಿರುವ ವರದಿಯ ಸಂಕ್ಷಿಪ್ತ ರೂಪ
ಸಮಿತಿಯು ದಿನಾಂಕ ೨೧, ೨೨ ಜೂನ್ ೨೦೦೬ರಂದು ತಿರುಪತಿ-ತಿರುಮಲಕ್ಕೆ ಭೇಟಿ ನೀಡಿದಾಗ ೫೦ಕ್ಕೂ ಹೆಚ್ಚು ಸಾರ್ವಜನಿಕರು ಸಮಿತಿಯ ಸದಸ್ಯರನ್ನು ಭೇಟಿ ಮಾಡಿ ತಮ್ಮ ಗಮನಕ್ಕೆ ಬಂದ ಚಟುವಟಿಕೆಗಳನ್ನು ವಿವರಿಸಿದ್ದಾರೆ.
ಅಲ್ಲದೆ ಸಮಿತಿಯು TTDಯ ನಿರ್ವಾಹಕ ಮುಖ್ಯಸ್ಥ ಶ್ರೀ APVN ಶರ್ಮಾ, IAS ರವರನ್ನು ದಿನಾಂಕ ೨೨-೬-೦೬ರಂದು ಭೇಟಿ ಮಾಡಿತು. ಅದೇ ಸಂದರ್ಭದಲ್ಲಿ ಶ್ರೀ ಧರ್ಮಾ ರೆಡ್ಡಿ, ವಿಶೇಷಾಧಿಕಾರಿಗಳು, ಶ್ರೀ ಅರವಿಂದ ಕುಮಾರ್, IPS, ಮುಖ್ಯ ಸುರಕ್ಷಾ ಅಧಿಕಾರಿ, ಶ್ರೀ ರಾಮಚಂದ್ರ ರೆಡ್ಡಿ, ಕಾನೂನು ಅಧಿಕಾರಿ ಇವರೂ ಉಪಸ್ಥಿತರಿದ್ದರು. ಈ ಎಲ್ಲರೂ ನೀಡಿದ ಮಾಹಿತಿಯ ವಿಶ್ಲೇಷಣೆಯಿಂದ ಹೊರಬಂದ ಸತ್ಯಾಂಶಗಳು:
೧. ಕ್ರೈಸ್ತಮತ ಪ್ರಚಾರ ಮತ್ತು ಮತಾಂತರ ಪ್ರಯತ್ನದ ಚಟುವಟಿಕೆಗಳು
ಕ್ರಿಶ್ಚಿಯನ್ ಸಮುದಾಯದ ವ್ಯಕ್ತಿಗಳು ಹಾಗೂ ಮಿಶನರಿಗಳು ತಿರುಪತಿ-ತಿರುಮಲದಲ್ಲಿ ತಮ್ಮ ಮತಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಕಾಲೇಜುಗಳಲ್ಲಿ ಪರೀಕ್ಷೆ ನಡೆಯುವಾಗ ವಿದ್ಯಾರ್ಥಿಗಳಿಗೆ, ತಿರುಮಲದಿಂದ ತಿರುಪತಿಗೆ ಬಸ್‌ನಲ್ಲಿ ಬರುವಾಗ ಯಾತ್ರಾರ್ಥಿಗಳಿಗೆ, ಧರ್ಮದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತ ಭಕ್ತಾದಿಗಳಿಗೆ ಬೈಬಲ್ ಹಂಚುವ ಪ್ರಕರಣಗಳ ಬಗ್ಗೆ ದೂರುಗಳು ದಾಖಲಾಗಿವೆ.
೨. TTDಯ ಶಿಕ್ಷಣ ಸಂಸ್ಥೆಗಳಲ್ಲಿ ಕ್ರೈಸ್ತಮತ ಪ್ರಚಾರ
* ಶ್ರೀ ವೇಂಕಟೇಶ್ವರ ವಿಶ್ವವಿದ್ಯಾಲಯದ (SV University) ಕಾಲೇಜಿನ ಪ್ರಾಂಶುಪಾಲರಾದ ಶ್ರೀ ದೇವಸಂಗೀತಂ ವಿದ್ಯಾರ್ಥಿಗಳಿಗೆ ಕ್ರೈಸ್ತಮತ ಪ್ರಚಾರ ಮಾಡುವುದಲ್ಲದೆ ಚರ್ಚ್‌ಗೆ ಹೋಗಲು ಬಲವಂತ ಮಾಡಿ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದಾರೆ.
* ಶ್ರೀ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯದ ಉಪಕುಲಪತಿ ಶ್ರೀಮತಿ ವೀಣಾ ನೋಬಲ್ ದಾಸ್ ವಿಶ್ವವಿದ್ಯಾಲಯದ ಕಾಲೇಜುಗಳಿಂದ ವೇಂಕಟೇಶ್ವರ ಮತ್ತು ಪದ್ಮಾವತಿಯರ ಭಾವಚಿತ್ರಗಳನ್ನು ತೆಗೆದು ಹಾಕಿದ್ದಾರೆ. ಅಷ್ಟೇ ಅಲ್ಲದೆ ಯೇಸುಕ್ರಿಸ್ತನ ಭಾವಚಿತ್ರ ಮತ್ತು ಶಿಲುಬೆಗಳನ್ನು ಸ್ಥಾಪಿಸಿದ್ದಾರೆ. ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಣೆಗೆ ತಿಲಕ ಇಡುವುದನ್ನು ನಿಷೇಧಿಸಿದ್ದಾರೆ.
೩. TTDಯಲ್ಲಿ ಉದ್ಯೋಗ
* TTDಯ ಕೆಲವು ಹುದ್ದೆಗಳಿಗೆ ಕ್ರೈಸ್ತರು ಮತ್ತು ಮುಸಲ್ಮಾನರನ್ನು ಕಾನೂನು ಮೀರಿ ನೇಮಿಸಿಕೊಳ್ಳಲಾಗಿದೆ. ಹೀಗಾಗಿ ತಿರುಮಲದಲ್ಲಿ ನೆಲೆಸಿರುವ ೪೦ ಕ್ರೈಸ್ತ ಕುಟುಂಬಗಳು ಪ್ರಾರ್ಥನಾಕೂಟ, ಸಭೆಗಳನ್ನು ನಡೆಸುತ್ತಿದ್ದಾರೆ. ತೋಟಗಾರಿಕೆ ಮೇಲ್ವಿಚಾರಕರಾಗಿರುವ ಕ್ರೈಸ್ತಮತಸ್ಥರಾದ ಗೋಪೀನಾಥ್ ``ಆ ಕಪ್ಪು ಶಿಲೆಗೆ ಹೂವಿನ ಹಾರ ಏಕೆ ಹಾಕುತ್ತೀರಿ?'' ಎಂದು ಶ್ರೀ ವೇಂಕಟೇಶ್ವರನ ಮೂರ್ತಿಯನ್ನು ಭಕ್ತಾದಿಗಳ ಎದುರೇ ನಿಂದಿಸುತ್ತಾರೆ.
ಗುತ್ತಿಗೆ ಕೆಲಸಗಾರರನ್ನು (Contract employees) ತೆಗೆದುಕೊಳ್ಳುವಾಗಲೂ ಹಿಂದುಗಳಲ್ಲದವರನ್ನು ಕಾನೂನಿನ ವಿರುದ್ಧವಾಗಿ ತೆಗೆದುಕೊಳ್ಳಲಾಗುತ್ತಿದೆ. ಸುಮಾರು ೪೦ ಮುಸ್ಲಿಂ ಕುಟುಂಬಗಳು ಅಂಗಡಿ ಮುಂಗಟ್ಟು ತೆರೆದು ತಿರುಮಲದಲ್ಲಿ ನೆಲೆಸಿವೆ.
೪. ತಿರುಮಲದಲ್ಲಿ ನಡೆಯುತ್ತಿರುವ ಇತರ ಕಾನೂನುಬಾಹಿರ ಚಟುವಟಿಕೆಗಳು
* TTD ಅಧಿಕಾರಿಯ ಬೇಜವಾಬ್ದಾರಿ ಹಾಗೂ ಅಶ್ರದ್ಧೆಯ ಫಲವಾಗಿ ತಿರುಮಲ-ತಿರುಪತಿಯಲ್ಲಿ ಮದ್ಯಮಾರಾಟ, ಮಾಂಸಮಾರಾಟ, ಜೂಜು, ಗೋಹತ್ಯೆಯಂತಹ ಘೋರಕೃತ್ಯಗಳು ನಡೆಯುತ್ತಿವೆ.
* ನಾಗಲಾಪುರದ TTD ಕಲ್ಯಾಣಮಂಟಪವನ್ನೇ ಕ್ರೈಸ್ತ ಪಾದ್ರಿಗಳು ತಮ್ಮ ಪ್ರಾರ್ಥನಾಸಭೆಗಳಿಗೆ ಉಪಯೋಗಿಸುತ್ತಿದ್ದಾರೆ.
* ಹೊಸದಾಗಿ ರಚನೆಯಾಗಿರುವ TTDಯ ಮಂಡಳಿಗೆ ಮತಾಂತರಿತ ವ್ಯಕ್ತಿ ಶ್ರೀ ರೋಸಯ್ಯ, IAS ರವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
ತಿರುಮಲದಲ್ಲಿ ಭಕ್ತಾದಿಗಳ ಇಚ್ಛೆಗೆ ವಿರುದ್ಧವಾಗಿ mallಗಳು, food courtಗಳು ಮುಂತಾದ ಮನರಂಜನಾ ಚಟುವಟಿಕೆಗಳನ್ನು ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಪ್ರಾರಂಭಿಸಲು ಮುಂದಾಗಿದೆ.
೫. ಪವಿತ್ರ ಸಪ್ತಗಿರಿ
`ತಿರುಮಲದ ಎಲ್ಲ ಏಳು ಬೆಟ್ಟಗಳೂ ಶ್ರೀ ವೇಂಕಟೇಶ್ವರನ ಅಧೀನ, ಅವನ್ನು ಯಾರೂ ಬದಲಿಸಲು ಸಾಧ್ಯವಿಲ್ಲ' ಎಂದು ಆಂಧ್ರಪ್ರದೇಶದ ಉಚ್ಚನ್ಯಾಯಾಲಯದ ವಿಭಾಗೀಯ ಪೀಠವು ತನ್ನ ತೀರ್ಪೊಂದರಲ್ಲಿ ಆದೇಶ ಹೊರಡಿಸಿದೆ. ಈ ತೀರ್ಪನ್ನು ಮತ್ತು
ಕೋಟ್ಯಂತರ ಭಕ್ತಾದಿಗಳ ಭಾವನೆಗಳನ್ನು ತಿರಸ್ಕರಿಸಿ ತಿರುಮಲದ ಎರಡೇ ಬೆಟ್ಟಗಳನ್ನೊಳಗೊಂಡ ಸುಮಾರು ೨೭ ಚದರ ಕಿ. ಮೀ. ಕ್ಷೇತ್ರವನ್ನು ಮಾತ್ರ ತಿರುಮಲದ ಅಧೀನಕ್ಕೆ ಬಿಟ್ಟು ಉಳಿದ ಕ್ಷೇತ್ರವನ್ನು ಅದರ ವ್ಯಾಪ್ತಿಯಿಂದ ಹೊರತೆಗೆದು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವ ಯೋಚನೆ ನಡೆದಿದೆ.
೬. TTDಯ ಸಂಪನ್ಮೂಲ
`ಹಿಂದು ಧರ್ಮ ಪರಿರಕ್ಷಣಾ ಸಮಿತಿ'ಯ `ಹಿಂದು' ಪದ ಕೈಬಿಟ್ಟು ಅದನ್ನು `ಧರ್ಮ ಪ್ರಚಾರ ಪರಿಷತ್' ಎಂದು ಮರುನಾಮಕರಣ ಮಾಡಲಾಗಿದೆ. ತಿರುಮಲದಲ್ಲಿ ಭಕ್ತಾದಿಗಳ ಕೊಡುಗೆಯಿಂದ ಸಂಗ್ರಹವಾಗುವ ಧನರಾಶಿಯು ಹಿಂದುಧರ್ಮದ ಪ್ರಚಾರಕ್ಕಾಗಿ, ತತ್ಸಂಬಂಧಿತ ಉಪನ್ಯಾಸಗಳು, ಹರಿಕಥೆ, ಪ್ರವಚನ, ಗಾಯನಸಭೆ ಇತ್ಯಾದಿಗಳಿಗೆ, ಹಿಂದು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ವಿನಿಯೋಗವಾಗಬೇಕಿತ್ತು. ಆದರೆ, ಇಂತಹ ಕಾರ್ಯಗಳನ್ನು ಗಣನೀಯ ಪ್ರಮಾಣದಲ್ಲಿ ಮಾಡುತ್ತಲೇ ಇಲ್ಲ. ಬದಲಾಗಿ ಇತರ ಚಟುವಟಿಕೆಗಳಿಗೆ ಹಣವನ್ನು ವಿನಿಯೋಗಿಸಲಾಗುತ್ತಿದೆ. ಬಹುದೊಡ್ಡ ಜಾಗವನ್ನು ಮಸೀದಿ ಕಟ್ಟಲು ದಾನ ಮಾಡಲಾಗಿದೆ.
ಸಮಿತಿಯ ಸದಸ್ಯರು:
ಶ್ರೀ ಜಸ್ಟಿಸ್ ಜಿ. ಬಿಕ್ಷಾಪತಿ, ನಿವೃತ್ತ ನ್ಯಾಯಾಧೀಶರು, ಆಂಧ್ರಪ್ರದೇಶ ಉಚ್ಚ ನ್ಯಾಯಾಲಯ
ಶ್ರೀ ಟಿ. ಎಸ್. ರಾವ್, IPS, ನಿವೃತ್ತ ಪೋಲೀಸ್ ಮಹಾ ನಿರ್ದೇಶಕರು, ಆಂಧ್ರಪ್ರದೇಶ ಸರಕಾರ
ಶ್ರೀಮತಿ ಡಾ ಪಿ. ಗೀರ್ವಾಣಿ, ನಿವೃತ್ತ ಉಪಕುಲಪತಿ, ಶ್ರೀ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯ, ತಿರುಪತಿ
ಶ್ರೀ ಡಾ ಆರ್. ಶ್ರೀಹರಿ, ನಿವೃತ್ತ ಉಪಕುಲಪತಿ, ದ್ರವಿಡ ವಿಶ್ವವಿದ್ಯಾಲಯ, ಕುಪ್ಪಂ
Thursday, August 03, 2006
ಇಂಡಿಯಾ, ನಿನ್ನನ್ನು ಆಳಲು ಒಬ್ಬ ಶುದ್ಧ ಇಂಡಿಯನ್ ಇಲ್ಲವಾ ?
ರವಿ ಬೆಳಗೆರೆ
ಇನ್ನು ಮೇಲೆ ಜಗತ್ತಿನ ಯಾವುದೇ ದೇಶದ ಯಾವುದೇ ಪತ್ರಿಕೆ ಸುದ್ದಿ ಬರೆದರೂ, `ಇಟಲಿ ಮೂಲದ ಭಾರತದ ಪ್ರಧಾನಿ ಸೋನಿಯಾಗಾಂ ಏನೆಂದರೆಂದರೆ... ' ಅಂತಲೇ ಬರೆಯುತ್ತದೆ.
ಇತಿಹಾಸ ರಿಪೀಟಾಗಿದೆ. ಭಾರತ ಇನ್ನೊಂದು ಸಲ ವಿದೇಶದವರ ಆಳ್ವಿಕೆಗೆ ಒಳಪಟ್ಟಿದೆ. ನೂರು ಕೋಟಿ ಜನರಿರುವ ದೇಶಕ್ಕೆ ಒಬ್ಬೇ ಒಬ್ಬ ಭಾರತೀಯ ಪ್ರಧಾನಿಯನ್ನು ಹುಡುಕಲಾಗಲಿಲ್ಲ. ಇದಲ್ಲವೇ ದುರಂತ? ಇದು ನಾಚಿಕೆಗೇಡು. ವಂದೇ ಮಾತ ರೋಮ್!' ಅಂತ ಬಿಜೆಪಿಯವರು ಒಬ್ಬರಾದ ಮೇಲೊಬ್ಬರಂತೆ ಮೊಬೈಲುಗಳಿಗೆ ಮೆಸೇಜು ಕಳಿಸಿ ನಿಡುಸುಯ್ಯುತ್ತಿದ್ದಾರೆ. ಮತ್ತೆ ನೆಹರೂ ಕುಟುಂಬದ ಕೂಸು ಕೆಂಪುಕೋಟೆಯ ಬುರುಜಿನ ಮೇಲೆ ನಿಂತು ಆಗಸ್ಟ್ ಪಂದ್ರಾದ ಪತಾಕೆ ಹಾರಿಸುವ ಕಾಲ ಬಂದಿದೆ.
ಇಲ್ಲಿ ಎಸ್ಸೆಂ ಕೃಷ್ಣ, ಪಕ್ಕದಲ್ಲಿ ನಾಯುಡು ಕೆತ್ತಾ ಪತ್ತಾ ಒದೆ ತಿಂದಿದ್ದಾರೆ. ಕೃಷ್ಣ ಒಬ್ಬರೇ ಅಲ್ಲ: ಅವರೊಂದಿಗೆ ಅನೈತಿಕ ಸಂಧಾನಗಳನ್ನು ಮಾಡಿಕೊಂಡ ಮಾದೇಗೌಡ, ರೈತ ಸಂಘದ ಪುಟ್ಟಣ್ಣನಯ್ಯನಂಥವರು ಕೂಡಾ ತಪರಾಕಿ ತಿಂದಿದ್ದಾರೆ. ಮೋಟಮ್ಮ, ಸಗೀರ್, ವಿಶ್ವನಾಥ್, ಮಲಕರೆಡ್ಡಿ ಮುಂತಾದ ಸಜ್ಜನ ಮಂತ್ರಿಗಳನ್ನು ಸೋಲಿಸಿದ ಕೈಯಲ್ಲೇ ಜಯಚಂದ್ರ, ದಿವಾಕರ ಬಾಬು, ಬೆಂಕಿ ಮಹದೇವ, ಚಂದ್ರೇಗೌಡ, ಉಸ್ತಾದ್, ರಮನಾಥ ರೈ, ಚಿಂಚನಸೂರ, ಶ್ರಿಕಂಠಯ್ಯ, ಕಮರುಲ್ಲ ಇಸ್ಲಾಂರಂತಹದ ನೀಚ ಮಂತ್ರಿಗಳನ್ನೂ ಮತದಾರ ಕೆನ್ನೆಗೆ ಬಾರಿಸಿ ಮನೆಗೆ ಕಳಿಸಿದ್ದಾನೆ. ಈ ಸೋಲು, ಅವಮಾನ, ಹೀನಾಯ ಸ್ಥಿತಿಯ ಅಷ್ಟೂ ಜವಾಬ್ದಾರಿ ಕೃಷ್ಣರದು ಮತ್ತು ಅವರ ಮೂರ್ಖತನದ್ದು.
ಎಸ್ಸೆಂ ಕೃಷ್ಣ ಕೆಲವು ಎಚ್ಚರಿಕೆಗಳನ್ನು ಸಾರಾಸಗಟಾಗಿ ignore ಮಾಡಿದರು. ಆರಂಭದಿಂದಲೂ ಅವರು ಜನರ ಕಣ್ಣಿಗೆ ಮಿತ್ರನಾಗಿ ಕಾಣಲಿಲ್ಲ. ಅವರ ಮಿತ್ರರ್‍ಯಾರೂ ಜನಸಾಮಾನ್ಯರ ದೃಷ್ಟಿಯಲ್ಲಿ ಗೌರವವಂತರಾಗಿರಲಿಲ್ಲ. ಪಂಚತಾರಾ ಹೊಟೇಲುಗಳಲ್ಲಿ ಸಣ್ಣ ಪ್ರಾಯದ ಹುಡುಗಿಯರ ಜೀವ ಹಿಸುಕುತ್ತ ಕೂತಿರುತ್ತಿದ್ದ ನಾರಾಯಣ-ಕೃಷ್ಣರ ಅರ್ಧಕಾಲದ ಆಡಳಿತ ನುಂಗಿದರು. ಇನ್ನರ್ಧ ನುಂಗಿದವನು yellow pages ನ ರಾಘವೇಂದ್ರ ಶಾಸ್ತ್ರಿ . ಅವನೇನು ರಾಜಕಾರಣಿಯೇ? ಅಕಾರಿಯೇ? ಆಡಳಿತ ಬಲ್ಲವನೇ? ಬುದ್ಧಿಜೀವಿಯೇ? ಇದ್ಯಾವುದೂ ಅಲ್ಲ. ಅಂಥವನನ್ನು ಸದಾ ಬೆನ್ನಿಗೆ ಶನಿಯನ್ನು ಕಟ್ಟಿಕೊಂಡಂತೆ ಕಟ್ಟಿಕೊಂಡು ತಿರುಗಿದ ಕೃಷ್ಣರಿಗೆ ತಾವು ಆಳುವ ಜನರ ಮನಸ್ಸೇನು ಎಂಬುದೂ ಕಡೆಗೂ ಗೊತ್ತಾಗಲಿಲ್ಲ. ಆತ ಒಬ್ಬೇ ಒಬ್ಬ ರೈತನನ್ನು ಹತ್ತಿರಕ್ಕೆಳೆದು ತಬ್ಬಿಕೊಳ್ಳಲಿಲ್ಲ. ಕೈ ಕುಲುಕಲಿಲ್ಲ, ಒಬ್ಬ ಊರಾಚಿನ ಅಸ್ಪ್ರಶ್ಯನ ಮನೆಯಲ್ಲಿ ನೀರುಕೇಳಿ ಕುಡಿಯಲಿಲ್ಲ.
ಎಸ್ಸೆ ಂ ಕೃಷ್ಣ ಮತ್ತು ನಾಯುಡು ಬೀಗತನ ಮಾಡಿದ್ದೇ ಐ.ಟಿ.-ಬಿ.ಟಿ.ಯವರೊಂದಿಗೆ. ಈ ನೆಲದ ರೈತ ಸಗಾಟಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ. ಅವರೆಡೆಗೆ ತಿರುಗಿ ಕೂಡಾ ನೋಡದ ಕೃಷ್ಣ ಜಿಲ್ಲಾಕಾರಿಗಳೊಂದಿಗೆ ವಿಡಿಯೋ ಕಾನರೆನ್ಸಿಂಗ್ ಮಾಡಿಕೊಂಡು ಕೂತರು. ಅವರ ಮೇಲೆ ರೈತರಿಗಿದ್ದ ವಿಶ್ವಾಸ ಎಕ್ಕುಟ್ಟಿ ಹೋಯಿತು. ಇಂಗ್ಲೀಷ್ ಪತ್ರಿಕೆಗಳವರು, ಟೀವಿ ಛಾನಲ್ಲುಗಳವರು ಕೈತುಂಬ ಸೈಟು ಪಡೆದು ಕೃಷ್ಣರನ್ನು ಬೆಸ್ಟು ಚೀಫ್ ಮಿನಿಸ್ಟರು ಅಂತ ಹೊಗಳಿ ಮರ್ಯಾದೆ ಕಳೆದು ಕೊಂಡರೇ ಹೊರತು ಅದನ್ನು ಮತದಾರ ನಯಾ ಪೈಸೆಯಸ್ಟು ವಿಶ್ವಾಸದಿಂದ ನೋಡಲಿಲ್ಲ, ಓದಲಿಲ್ಲ. ಪ್ರತೀ ವಾರ ಒಂದಲ್ಲ ಒಂದು ರೀತಿಯಲ್ಲಿ ಕೃಷ್ಣರನ್ನು ಎಚ್ಟರಿಸಿ, ಅವರ ಸುತ್ತಲಿನ ಭ್ರಷ್ಟರ ಬಗ್ಗೆ ವಿವರ ನೀಡಿ ಇಂಥವರನ್ನು ದೂರವಿಡಿ ಅಂತ ಬರೆಯಿತು `ಪತ್ರಿಕೆ'. ಆದರೆ ಎಸ್ಸೆಂ ಕೃಷ್ಣ ಪರಿಮಳ ನಾಗಪ್ಪನವರ ಮನೆಬಾಗಿಲಲ್ಲಿ ನಿಂತು ಅದನ್ಯಾಕೆ ಓದ್ತೀರಿ? ಪುಂಡ ಪೋಕುರಿಗಳ ಪತ್ರಿಕೆಯನ್ನ? ಅಂದರು. ಅದೇ ಪರಿಮಳ ನಾಗಪ್ಪ ಇವತ್ತು ಕೃಷ್ಣರ ಪುಂಡು ಪೋಕರಿ ಶಿಷ್ಯರ ಮುಖಕ್ಕೆ ಎಕ್ಕಡದಲ್ಲಿ ಹೊಡೆದಂತೆ ಗೆದ್ದಿದ್ದಾರೆ. ಶುದ್ಧ ಅರ್ಬನ್ ಮತದಾರರನ್ನು ಓಲೈಸಿಕೊಂಡೇ ನಾಲ್ಕೂವರೆ ವರ್ಷ ಕಳೆದ ಕೃಷ್ಣ ಚಾಮರಾಜಪೇಟೆಯಲ್ಲಿ ಪಡೆದ ಓಟುಗಳಾದರೂ ಎಷ್ಟು? ಒಬ್ಬ ಬೆಸ್ಟು ಚೀಫ್ ಮಿನಿಸ್ಟರು ಪಡೆಯಬೇಕಾದ ಲೀಡಾ ಅದು?
ಇನ್ನು ರಾಜ್ಯದ ರಾಜಕಾರಣದಲ್ಲಿ ಕೃಷ್ಣರಿಗೆ ಕವಡೆ ಕಾಸಿನ ಕಿಮ್ಮತ್ತೂ ಉಳಿದಿಲ್ಲ. ಅವರು ಸೈಟು ಕೊಟ್ಟು ಬೆನ್ನು ಕೆರೆಸಿಕೊಂಡ ಪತ್ರಕರ್ತರೇ ಕೃಷ್ಣರ ಮನೆ ಕಂಪೌಡಿನ ಬಳಿ ಸುಳಿಯುತ್ತಿಲ್ಲ.
ಆದರೆ ರಾಜ್ಯದ ರಾಜಕೀಯ ಭವಿಷ್ಯ ಅತಂತ್ರಕ್ಕೆ ಬಿದ್ದಂತಾಗಿದೆ. ದೇವೇಗೌಡ ಕಾಂಗ್ರೆಸ್ ಸೇರಿ ಸರಕಾರ ರಚಿಸುತ್ತಾರೆ. ಅಂದರೆ ಬರಲಿರುವ ದಿನಗಳಲ್ಲಿ ರಾಜ್ಯಾದ್ಯಂತ ಕದನ ಕುತೂಹಲ ರಾಗದ ಮ್ಯಾಳವೇ! ದೇವೇಗೌಡರನ್ನು ಖುದ್ದು ಅವರ ಮಕ್ಕಳು ಸಹಿಸಿಕೊಳ್ಳುವುದು ಕಷ್ಟ. ಈಗಾಗಲೇ ಸಿದ್ರಾಮಯ್ಯ ಮುಖ್ಯಮಂತ್ರಿಯಾಗ ಕೂಡದು ಎಂಬ ರಾಗ ಆರಂಭವಾಗಿದೆ. ಮುಂದೆ ಏನನ್ನು ಕಾಣಲಿಕ್ಕಿದೆಯೋ? ಒಂದೇ ಸಂತೋಷವೆಂದರೆ ಮೂರು ಪಕ್ಷಗಳ ಪೈಕಿ ಯಾವ ಪಕ್ಷ ಒಪೋಸಿಷನ್‌ನಲ್ಲಿ ಕುಳಿತರೂ, ರಾಜ್ಯದಲ್ಲಿ ಒಂದು ಪ್ರಬಲ ಮತ್ತು vibrant ಆದ ವಿರೋಧ ಪಕ್ಷವಾಗಿ ವರ್ತಿಸಬೇಕಾಗುತ್ತದೆ. ಕೆಲವರ ಗೆಲುವುಗಳು ನಿಜಕ್ಕೂ ಈ ಸಲದ ಅಸೆಂಬ್ಲಿ ಹಾಲಿಗೆ ಚುರುಕು, ರಂಗು ಮತ್ತು ಕಳೆ ತಂದಿತ್ತಿವೆ. ಶಿರಾದ ಸತ್ಯನಾರಾಯಣ, ರಮೇಶ್ ಕುಮಾರ್, ಕೆ.ಆರ್.ಪೇಟೆ ಕೃಷ್ಣ , ವಾಟಾಳ್ ನಾಗರಾಜ್, ಎವಿ ರಾಮಸ್ವಾಮಿ, ಮಹಿಮಾ ಪಟೇಲ್, ಕುಮಾರ್ ಬಂಗಾರಪ್ಪ ಮುಂತಾದವರ ಗೆಲುವು ನಿಜಕ್ಕೂ ಸ್ವಾಗತಾರ್ಹ. ಆ ಮಟ್ಟಿಗೆ `ಪತ್ರಿಕೆ' ಯಾರ್‍ಯಾರು ಗೆಲ್ಲ ಬೇಕು ಅಂತ ಬಯಸಿತ್ತೋ, ಯಾರ್‍ಯಾರು ಗೆಲ್ಲುತ್ತಾರೆ ಅಂತ ಅಂದುಕೊಂಡಿತ್ತೋ, ಆ ಪಟ್ಟಿಯಲ್ಲಿ ೯೦% ನಷ್ಟು ನಿರೀಕ್ಷೆಗಳು ನಿಜವಾಗಿವೆ. ಕಳೆದ ಎಂಟು ವರ್ಷಗಳಿಂದ ಶತಾಯಗತಾಯ ವಿರೋಸಿಕೊಂಡು ಬಂದಿದ್ದ ಮಾಲಿಕಯ್ಯ ಗುತ್ತೇದಾರ ಮತ್ತು ಸುಭಾಷ್ ಗುತ್ತೇದಾರ ಎಂಬ ಹಂತಕರಿಬ್ಬರೂ ಸೋತು ಸರ್ವನಾಶವಾಗಿದ್ದಾರೆ. ಶಿವರಾಮೇಗೌಡನ ಸೋಲಿದೆಯಲ್ಲ ? ಅದನ್ನೇನು ನಾನು `ಪತ್ರಿಕೆ'ಯ ದಿಗ್ವಿಜಯ ಅಂತ ಭಾವಿಸಿಲ್ಲ. ಒಂದು ಹುಳು ಸೋಲಬೇಕಿತ್ತು ; ಸೋತಿದೆ. ಅದೇ ರೀತಿಯ ಮರ್ಡರಸ್ ರಾಜಕಾರಣಿ ಬಚ್ಚೇಗೌಡ, ಕೆ.ಆರ್.ಪೇಟೆಯ ಚಂದ್ರ ಶೇಖರ, ಕೆರೆಗೋಡು ಶಿವಕುಮಾರ, ಗಾಂ ನಗರದ ಬಾಂಬ್ ನಾಗ, ಸಾಗರದ ಕಾಗೋಡು ತಿಮ್ಮಪ್ಪ ಮುಂತಾದವರು ಸೋತಿದ್ದಾರೆ.
ಹಂಗ್ ಅಸೆಂಬ್ಲಿ ಆಗುತ್ತಿರುವುದು ಬೇಸರದ ಸಂಗತಿಯೇ ಆದರೂ, ಕರ್ನಾಟಕದ ಮಟ್ಟಿಗೆ ಪ್ರಜಾಪ್ರಭುತ್ವವಾದಿ ಮೌಲ್ಯಗಳನ್ನು ಇನ್ನೂ ಒಂದಿಷ್ಟು ಉಳಿಸಿಕೊಂಡು ಬಂದಿರುವ ಜಾತ್ಯತೀತ ಜನತಾದಳ ಈ ಬಾರಿ ಪ್ರಖರಗೊಂಡಿರುವುದು ಸಮಾಧಾನದ ಸಂಗತಿ. ಹಡಗಲಿಯಿಂದ ಪ್ರಕಾಶ್, ಕನಕಪುರದಿಂದ ಸಿಂಧ್ಯಾ, ನಂಜನಗೂಡಿನಿಂದ ಜಯಕುಮಾರ್ ಮುಂತಾದವರು ಗೆದ್ದು ಬಂದಿರುವುದು ಆರೋಗ್ಯವಂತ ಲಕ್ಷಣವೇ. ಒಂದು ಕಡೆಯಿಂದ ಲೆಕ್ಕ ಹಾಕಿ ನೋಡಿದರೆ, ನನಗೆ ವೈಯುಕ್ತಿಕವಾಗಿ ಪರಿಚಯವಿರುವ ಸುಮಾರು ಇಪ್ಪತ್ತು ಶಾಸಕರು ಸಾಲಿಟ್ಟು ಗೆದ್ದು ಬಂದಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಅವರ ಪೈಕಿ ಎಷ್ಟು ಜನ ಶತ್ರುಗಳಾಗುತ್ತಾರೋ? ಆ ಮಾತು ಬೇರೆ. ಆದರೆ ಹೊಸ ಸರಕಾರ , ಹೊಸ ಕಾಂಬಿನೇಷನ್ನು, ಹೊಸ ಮುಖಗಳು ಎಲ್ಲ ಸೇರಿ ಒಂದು ಹೊಸ ವಾತಾವರಣ ಮತ್ತು ಒಂದು ಹೊಸ hope ಸೃಷ್ಟಿಸಿದರೆ ಅದಕ್ಕಿಂತ ಸಂತೋಷ ಇನ್ನೊಂದಿರಲಾರದು. ಬಸವನಗುಡಿಯಿಂದ ಗೆದ್ದು ಬಂದಿರುವ ಚಂದ್ರಶೇಖರ್‌ರಂತಹ ಮಿತ್ರರೂ ಕಾಂಗ್ರೆಸ್‌ನಲ್ಲೇ ಇದ್ದರೂ, ನನ್ನಂಥವರಲ್ಲಿ ಒಂದು ಆಸೆ ಮೂಡಿಸುತ್ತಾರೆ. ಅಷ್ಟರಮಟ್ಟಿಗೆ ಆ ಚುನಾವಣೆಗಳು ತೃಪ್ತಿಕರವೇ.
ಆದರೆ ಪ್ರಧಾನಿಯಾಗಿ ಸೋನಿಯಾ ಗತಿ ಮತ್ತು ಭಾರತದ ಗತಿ ಏನಾಗಲಿದೆಯೋ ಎಂಬ ಕಳವಳಕ್ಕೆ ನಿಮ್ಮಂತೆಯೇ ನಾನೂ ಬಿದ್ದಿದ್ದೇನೆ. ಆಕೆ ವಿದೇಶಿಯಳು ಎಂಬುದು ಸುಲಭಕ್ಕೆ ಮರೆಯುವಂಥ ಮಾತಲ್ಲ. ನಮ್ಮ ಇಂದಿರಮ್ಮನ ಸೊಸೆಯಲ್ವಾ? ಇಷ್ಟು ವರ್ಷ ಇದ್ದ ಮೇಲೆ ನಮ್ಮ ಮನೆಯ ಹೆಣ್ಣು ಮಗಳೇ ಬಿಡು ಅಂತಾ ಅಂದುಕೊಳ್ಳುತ್ತೇವಾದರೂ, ಈ ದೇಶದ ಪ್ರಧಾನಿಯಾಗಿ ಆಕೆ ಇನ್ನೊಂದು ದೇಶದೊಂದಿಗೆ ವ್ಯವಹರಿಸುವಾಗ ಇಡೀ ದೇಶ ಒಂದು ಆತಂಕಕ್ಕೆ, ಅನುಮಾನಕ್ಕೆ ಬೀಳುವುದು ಸಹಜ. ಈ ಹಿಂದೆ ಹೊರಗಿನಿಂದ ಆಪತ್ತುಗಳು ಬಂದಾಗ ನಮ್ಮ ನೆಹರೂ, ನಮ್ಮ ಶಾಸ್ತ್ರೀಜಿ, ನಮ್ಮ ರಾಜೀವ್, ನಮ್ಮ ವಾಜಪೇಯಿ- ಇವರೆಲ್ಲ `ನೋಡ್ಕೋತಾರೆ ಬಿಡು'ಎಂಬಂಥ ಅನಿಸಿಕೆಯೊಂದು ಮನಸ್ಸಿನಲ್ಲಿರುತ್ತಿತ್ತು. ಆದರೆ ಸ್ವತಃ ಸೋನಿಯಾ ವಿದೇಶಿ ಮೂಲದವರಾಗಿರುವಾಗ ಆಕೆಯ ನಿಲುವು ಅದೆಷ್ಟರ ಮಟ್ಟಿಗೆ ಭಾರತದ ಆಸಕ್ತಿಗಳನ್ನು protect ಮಾಡುತ್ತದೋ ಎಂಬ ಆತಂಕ ಎಂಥವರನ್ನೂ ಕಾಡಿಯೇ ಕಾಡುತ್ತದೆ. ತನ್ನ ಅತ್ತೆ ಕೊಲೆಯಾಗಿ, ಆಕೆಯ ಶವದೆದುರೇ ರಾಜೀವ್ ಗಾಂ ಭಾರತದ ಪ್ರಧಾನಿಯಾಗಲು ಅಣಿಯಾದಾಗ ಇದೇ ಸೋನಿಯಾ ದೊಡ್ಡ ದನಿಯಲ್ಲಿ ಹಟ ತೆಗೆದಿದ್ದರು. ಈ ರಾಜಕೀಯ, ಈ ದೇಶ ನಮಗೆ ಹೇಳಿ ಮಾಡಿಸಿದ್ದುದಲ್ಲ ಅಂದಿದ್ದರು. ಈಗ ಅದೇ ಸೋನಿಯಾ ಪ್ರಧಾನಿಯಾಗುತ್ತಿದ್ದಾರೆ. ಅವರನ್ನು ಮುಲಾಯಂ, ಶರದ್‌ಪವಾರ್, ಲಾಲೂ, ದೇವೇಗೌಡ, ಜ್ಯೋತಿ ಬಸು, ಸುರ್ಜಿತ್- ಹೀಗೇ ಘಟಾನುಘಟಿಗಳು ಒಪ್ಪಿಕೊಂಡಾಗಿದೆ. ವಿದೇಶಿ ಮೂಲದ issue ಈಗ ದೊಡ್ಡ ಸಂಗತಿಯಾಗಿ ಉಳಿದಿಲ್ಲ. ಸುಪ್ರಿಂ ಕೋರ್ಟ್ ಕೂಡಾ ಆಕೆಯನ್ನು ಶುದ್ಧ ಭಾರತೀಯಳೆಂದು ಘೋಷಿಸಿಯಾಗಿದೆ. ಆ ಮಾತು ಅಲ್ಲಿಗೆ ಬಿಡೋಣ.
ಆದರೆ ಇವತ್ತಿನ ಭಾರತದ ರಾಜಕೀಯ ಸ್ಥಿತಿ ನೋಡಿ? ಇಡೀ ದೇಶ ನಾನಾ ನಮೂನೆಯ ಪಾಳೆಯಗಾರರ ಕೈಗೆ ಸಿಕ್ಕುಹೋಗಿದೆ. ಆ ರಾಜ್ಯಕ್ಕೆ ಅವನೇ ನಾಯಕ! ಅಂಥವರನ್ನೆಲ್ಲ ಒಟ್ಟುಗೂಡಿಸಿ ಒಂದು ಸರ್ಕಾರ ಅಂತ ರಚಿಸಿ ಹೇಗೋ ರಾಜ್ಯಭಾರ ತೂಗಿಸಿಕೊಂಡು ಹೋಗಬಹುದು ಮತ್ತು ಹೋಗಲೇ ಬೇಕು ಎಂಬುದನ್ನು ತೋರಿಸಿಕೊಟ್ಟದ್ದು ವಾಜಪೇಯಿ. ಆ ತಾಕತ್ತು ಆತನಿಗಿತ್ತು. ಆದರೆ ಸೋನಿಯಾಗೆ ಅಂಥ vision, ಅಂಥ ನಾಯಕತ್ವ, ಅಂಥಾ ಮುತ್ಸದ್ದಿತನ ಇದೆಯಾ ಎಂಬುದೇ ಪ್ರಶ್ನೆ. ರಾಜಕಾರಣದ ಪಾಠಗಳನ್ನು ಸೋನಿಯಾ ತನ್ನ ಅತ್ತೆಯಂತೆ ರಾತ್ರೋರಾತ್ರಿ ಕಲಿತ ಬುದ್ಧಿವಂತೆಯಲ್ಲ. ಆಕೆ ಚದುರಂಗದಲ್ಲಿ ಪಳಗಲಿಕ್ಕೆ ವರ್ಷಗಳೇ ಬೇಕಾದವು. ಇವತ್ತಿಗೂ ಆಕೆಯ ಮುಖದಲ್ಲಿ ಒಬ್ಬ ಆಡಳಿತಗಾರ್ತಿ ಕಾಣುವುದಿಲ್ಲ. ಈ ತೆರನಾದ ಪ್ರಾದೇಶಿಕ, ಪಾಳೇಗಾರಿ ಪಕ್ಷಗಳು, ಅನನುಭವಿ ನಾಯಕಿ, ಆಕೆಯ ಸುತ್ತಲಿನ ಭಟ್ಟಂಗಿ ಕೂಟಗಳು ಇವೆಲ್ಲ form ಆದಾಗಲೇ ದೇಶ ಆಪತ್ತಿಗೆ ಬೀಳುವ ಅಪಾಯವಿರುತ್ತದೆ.
ಅಲ್ಲದೆ, ಇಂದಿರಾಗಾಂ ಆಳಿದ ಕಾಲಕ್ಕೂ ಸೋನಿಯಾ ಆಳಲಿರುವ ಕಾಲಕ್ಕೂ ಹೋಲಿಸಿಕೊಂಡರೆ ದೇಶದ ಸಮಸ್ಯೆಗಳು ಅಗಾಧ ಮತ್ತು ಆತಂಕಕಾರಿ ಸ್ಥಿತಿ ತಲುಪಿವೆ. ಜಾಗತೀಕರಣ ನಮ್ಮ ವ್ಯಾಪಾರಿಗಳನ್ನ, ಉದ್ದಿಮೆದಾರರನ್ನ ತಿಂದು ಹಾಕಿ ಬಿಟ್ಟಿದೆ. ಕುಡಿಯುವ ನೀರಿನ ಸಮಸ್ಯೆ ಹಳ್ಳಿಹಳ್ಳಿಯನ್ನೂ ಕಂಗೆಡಿಸಿದೆ. ವಾಜಪೇಯಿ ಕಾಲದ ವಿತ್ತ ನೀತಿ ಷೇರು ಮಾರುಕಟ್ಟೆಯನ್ನು ನಾಶ ಮಾಡಿ ಹಾಕಿದೆ. ಇವರು ಪ್ರತಿಯೊಂದನ್ನು disinvestment ಮಾಡಿ, ಸರ್ಕಾರಿ ಉದ್ದಿಮೆಗಳನ್ನು ಮಾರಿ ಕಾರ್ಮಿಕ ವಲಯದಲ್ಲಿ ದುರ್ಭರವಾದ ಹತಾಶ ಸ್ಥಿತಿ ಉಂಟುಮಾಡಿದ್ದಾರೆ. ಕೋಟ್ಯಂತರ ಜನಕ್ಕೆ ಉದ್ಯೋಗ ಬೇಕು, ನೀರು ಬೇಕು, ರಸ್ತೆಗಳು ಬೇಕು, ಮುಂದೆ ಬದುಕು ಹಸನಾದಿತೆಂಬ hope ಬೇಕು. ಸೋನಿಯಾ ಕೈಯಲ್ಲಿ ಅದನ್ನೆಲ್ಲ ಕೊಡಮಾಡಲು ಸಾಧ್ಯವಾದೀತೇ?
ಸಾಧ್ಯವಾಗಲೀ ಅಂತಲೇ ಇಟ್ಟುಕೊಳ್ಳೋಣ. ಆದರೂ ನೂರು ಕೋಟಿ ಜನ ಸಂಖ್ಯೆಯಿರುವ ಈ ರಾಷ್ಟ್ರಕ್ಕೆ, ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ಸಿಗೆ ಒಬ್ಬ ಭಾರತೀಯ ಪ್ರಜೆಯನ್ನು ಪ್ರಧಾನಿಯನ್ನಾಗಿ ಆಯ್ಕೆಮಾಡಿಕೊಳ್ಳಲು ಸಾಧ್ಯವಾಗಲಿಲ್ಲವಲ್ಲ? ಅದು ನಿಜಕ್ಕೂ ನೋವೇ.