Friday, June 22, 2007

ಬ್ರಾಹ್ಮಣರೇನು ಮಾಡಬೇಕು? ಒಂದು ಜ್ವಲಂತ ಸಮಸ್ಯೆಯ ನಿರ್ವಿಕಾರ ವಿವೇಚನೆ

[ಶ್ರೀ ಪಾ.ವೆಂ. ಆಚಾರ್ಯ ಅವರ “ಬ್ರಾಹ್ಮಣರೇನು ಮಾಡಬೇಕು?” ಪುಸ್ತಕದಿಂದ ಆರಿಸಿದ್ದು]

ಹಲವು ವರ್ಷಗಳಿಂದ ಬ್ರಾಹ್ಮಣ ಆಡಳಿತದಲ್ಲಿರುವ ವಿದ್ಯಾಸಂಸ್ಥೆಯೊಂದರ ಸಮಾರಂಭದಲ್ಲಿ ಮಾತಾಡುತ್ತ ಇತ್ತೀಚೆಗೆ ದಲಿತ ಸಾಹಿತ್ಯ ಪ್ರತಿಪಾದಕ ಸಾಹಿತಿಗಳೊಬ್ಬರು, ದೇಶದಲ್ಲಿ ಎಲ್ಲರೂ ಬ್ರಾಹ್ಮಣರಾಗಬೇಕೆಂದು ಪ್ರತಿಪಾದಿಸಿದರು. ಅದು ಪತ್ರಿಕೆಗಳಲ್ಲಿ ವರದಿಯಾಯಿತು. ಅದನ್ನೇ ನೆವಮಾಡಿ ಬ್ರಾಹ್ಮಣ ವಿರೋಧಿ ಹೇಳಿಕೆಗಳನ್ನು ಒಳಗೊಂಡ ಅನೇಕ ಪತ್ರಗಳು ಪತ್ರಿಕೆಯಲ್ಲಿ ಪ್ರಕಟವಾದವು. ಬರೆದವರಲ್ಲಿ ಹಲವಾರು ಸಾಹಿತಿಗಳಾಗಿದ್ದರು. ವಾಸ್ತವಿಕವಾಗಿ ಕಳೆದ ಒಂದು ದಶಕದಿಂದ ಸಾಹಿತಿಗಳ ಒಂದು ದೊಡ್ಡ ಗುಂಪು ಬ್ರಾಹ್ಮಣ ವಿರೋಧವನ್ನು ತನ್ನ ಚಟುವಟಿಕೆಯ ಮುಖ್ಯಾಂಶವಾಗಿ ಮಾಡಿಕೊಂಡಿದೆ. ಆಗಾಗ್ಗೆ ಒಂದಲ್ಲ ಒಂದು ನೆವದಿಂದ ಬ್ರಾಹ್ಮಣರ ಮೇಲೆ ಏನಾದರೊಂದು ಕೂಗೆಬ್ಬಿಸುವುದು ನಡೆದೇ ಇದೆ. ಬ್ರಾಹ್ಮಣೇತರ ಸಾಹಿತಿಗಳಲ್ಲಿ ಮತ್ತು ಸಾಹಿತಿಗಳಲ್ಲದವರಲ್ಲಿ ಕೆಲವರಾದರೂ ಈ ಬಗೆಯ ಪ್ರಚಾರವನ್ನು ವಿರೋಧಿಸುತ್ತಾ ಬಂದಿದ್ದಾರೆಂಬುದನ್ನು ಇಲ್ಲಿ ಹೇಳಬೇಕು. ಅಂಥವರನ್ನು ಸಾಮಾನ್ಯವಾಗಿ ಬ್ರಾಹ್ಮಣರ ಚೇಲಾಗಳೆಂದೋ, ಪ್ರತಿಗಾಮಿಗಳೆಂದೋ ನಿಂದಿಸಲಾಗುತ್ತದೆ. ಖಾಸಗಿಯಲ್ಲಿ ಎಷ್ಟು ರೋಷ ಪ್ರಕಟಿಸಿದರೂ ಬಹಿರಂಗದಲ್ಲಿ ಈ ಪ್ರಶ್ನೆಯನ್ನು ಕುರಿತು ತಮ್ಮ ಅಭಿಪ್ರಾಯಗಳನ್ನಾಗಲಿ ಬ್ರಾಹ್ಮಣರ ಸಮರ್ಥನೆಯನ್ನಾಗಲೀ ಪ್ರಕಟಮಾಡಿದ ಬ್ರಾಹ್ಮಣರು ವಿರಳ.

೧೯೨೦ರ ಸುತ್ತಮುತ್ತ ಮಹಾರಾಷ್ಟ್ರದಲ್ಲಿಯೂ ಮದ್ರಾಸ್ ಪ್ರಾಂತದಲ್ಲಿಯೂ ತಲೆಯೆತ್ತಿ ಕರ್ನಾಟಕದಲ್ಲಿಯೂ ಹಬ್ಬಿದ ಬ್ರಾಹ್ಮಣೇತರ ಚಳುವಳಿ ಬಹುತರವಾಗಿ ಮಧ್ಯಮ ಜಾತಿಗಳ ಬ್ರಾಹ್ಮಣೇತರ ರಾಜಕೀಯ ನಾಯಕರ ಮತ್ತು ಸುಶಿಕ್ಷಿತರ ಆಂದೋಲನವಾಗಿತ್ತು. ಸಾಹಿತಿಗಳು ಅದರಲ್ಲಿ ಪಾಲುಗೊಂಡಿದ್ದು ಅಪರೂಪ. ಆದರೆ ಈಗ ಸಾಹಿತಿಗಳ ಮತ್ತು ಬೌದ್ಧಿಕರ ಆಂದೋಲನವಾಗುತ್ತಿರುವುದು ವಿಶೇಷ. ಆ ಚಳುವಳಿಗೆ ಸರಕಾರಿ ನೌಕರಿಗಳಲ್ಲಿ ಬ್ರಾಹ್ಮಣರಿಗಿದ್ದ ಪ್ರಾಧಾನ್ಯವನ್ನು ಅಳಿಸಿ ಹಾಕಿ ಸಂಖ್ಯಾಬಲದಲ್ಲಿ ಹೆಚ್ಚಾಗಿದ್ದರೂ ನೌಕರಿಗಳಲ್ಲಿ ಸಾಕಷ್ಟು ಪ್ರಾತಿನಿಧ್ಯವಿಲ್ಲದ ಬ್ರಾಹ್ಮಣೇತರರಿಗೆ ಅಂಥಾ ಪ್ರಾತಿನಿಧ್ಯ ದೊರಕಿಸಿಕೊಳ್ಳುವುದು ಉದ್ದೇಶವಾಗಿತ್ತು. ಇದಕ್ಕಾಗಿ ಅರ್ಹತಾ ನಿಯಮಗಳನ್ನು ಸಡಿಲಿಸಬೇಕೆಂಬುದೇ ಮೊದಲಾದ ಸ್ಪಷ್ಟ ಬೇಡಿಕೆಗಳು ಮಂಡಿಸಲ್ಪಟ್ಟಿದ್ದವು. ರಾಜಕೀಯ ಒತ್ತಡಗಳ ಪರಿಣಾಮವಾಗಿ ಈ ಬೇಡಿಕೆಗಳು ಬಹಳ ಮಟ್ಟಿಗೆ ಸ್ವೀಕರಿಸಲ್ಪಟ್ಟು, ಬ್ರಾಹ್ಮಣೇತರ ವರ್ಗಗಳಲ್ಲಿ ಹೆಚ್ಚು ಮುಂದುವರೆದಿದ ಜಾತಿಗಳು ಮೇಲೆ ಬರುವುದು ಸಾಧ್ಯವಾಯಿತು.

ಹೀಗೆ ಒಂದೆಡೆಗೆ ಸರಕಾರಿ ನೌಕರಿಗಳಲ್ಲಿ ತಮಗಿದ್ದ ಪ್ರಾಧಾನ್ಯವನ್ನು ಕಳೆದುಕೊಳ್ಳುವುದರೊಡನೆ ಸ್ವಾತಂತ್ರ್ಯಾನಂತರ ಭೂಸುಧಾರಣೆಗಳಲ್ಲಿ ದಕ್ಷಿಣ ಭಾರತದಲ್ಲಿ ಬ್ರಾಹ್ಮಣರು ಬಹುತರವಾಗಿ ತಮ್ಮ ಕೃಷಿಭೂಮಿಗಳಿಗೆ ಎರವಾಗಿ ಗ್ರಾಮಗಳಲ್ಲಿ ಇದ್ದು ಬಿದ್ದ ಸ್ಥಾನಮಾನಕ್ಕೂ ಎರವಾದರು. ಅವರು ಎಲ್ಲಾ ಜಾತಿಗಳಿಗಿಂತ ಹೆಚ್ಚು ನಗರೀಕೃತರಾಗಿ ಕೃಷಿಭೂಮಿಯ ವಿಷಯದಲ್ಲಿ ದೂರವಾಸಿ ಭೂಮಾಲೀಕರಾಗಿದ್ದರಿಂದ ಅವರಿಗೆ ಸ್ವಾಭಾವಿಕವಾಗಿಯೆ ಭೂಸುಧಾರಣೆಯಲ್ಲಿ ಹೆಚ್ಚು ಪೆಟ್ಟು ಬಿತ್ತು ಎನ್ನುವಾ. ಸಂಖ್ಯಾಬಲದಲ್ಲಿ ದಕ್ಷಿಣದಲ್ಲಿ ಎಲ್ಲಿಯೂ ಶೇಕಡಾ ೫ನ್ನು ಮೀರದ ಬ್ರಾಹ್ಮಣರಿಗೆ ಪ್ರಜಾತಂತ್ರಾತ್ಮಕ ಆಡಳಿತದಲ್ಲಿ ನಿರ್ಣಾಯಕ ಸ್ಥಾನಗಳಿಂದ ಉಚ್ಚಾಟನೆಯಾಯಿತು. ದಕ್ಷಿಣದ ರಾಜ್ಯಗಳಲ್ಲಿ ಬ್ರಾಹ್ಮಣರಿಗೆ ಯಾವ ಮಂತ್ರಿ ಸಂಪುಟದಲ್ಲಿಯೂ ಸ್ಥಾನವಿಲ್ಲದೇ ದಶಕಗಳೇ ಕಳೆದದ್ದುಂಟು.

ಬ್ರಾಹ್ಮಣರ ಅನೇಕ ‘ಹಲ್ಲುಗಳು’ ಉದುರಿಸಲ್ಪಟ್ಟು ಅವರು ಅಶಕ್ತ ಸ್ಥಿತಿಗಿಳಿಸಲ್ಪಟ್ಟ ಕಾಲದಲ್ಲಿ ಬ್ರಾಹ್ಮಣ ವಿರೋಧದ ಕಡಾಯಿ ಆರತೊಡಗಬೇಕಿತ್ತು. ಆದರೆ ಹಾಗಾಗದೆ ಅದನ್ನು ಮತ್ತೆ ಹೊತ್ತಿಸುವ ಪ್ರಯತ್ನ, ಅದೂ ಸಾಹಿತಿಗಳಿಂದ ಪ್ರಾರಂಭವಾದದ್ದು ಸೋಜಿಗವಾಗಿದೆ.

ಈ ಹೊಸ ಬ್ರಾಹ್ಮಣ ವಿರೋಧ ಸತ್ರದಲ್ಲಿ ಕೆಲವೊಂದು ಸ್ವಾರಸ್ಯಾಂಶಗಳು ಅಡಗಿವೆ. ಜಾತಿಯನ್ನೆತ್ತಿ ಆಡುವುದು ನನಗೂ ಸಂತೋಷದ ಕೃತ್ಯವಲ್ಲ. ಆದರೆ ಬ್ರಾಹ್ಮಣ ಜಾತಿಯನ್ನು ಕುರಿತು ಆಡುವವರು ಜಾತಿಯನ್ನು ಗಮನಿಸಿ ಆಡುತ್ತಿರುವುದರಿಂದ ನಾನೂ ಒಂದು ಕ್ಷಣ ಆ ಮಾರ್ಗವನ್ನು ಅನುಸರಿಸಿದರೆ ಅಪರಾಧವಾಗಲಿಕ್ಕಿಲ್ಲ. ಈ ಬ್ರಾಹ್ಮಣ ವಿರೋಧದ ಅಂದೋಲನದಲ್ಲಿ ಮುಂದಾಳ್ತನ ವಹಿಸಿದವರ ಜಾತಿಗಳನ್ನು ನೋಡಿದರೆ ಅವರಲ್ಲಿ ಹೆಚ್ಚಿನವರು ಬ್ರಾಹ್ಮಣೇತರ ಹಕ್ಕುಗಳನ್ನು ಎತ್ತಿ ಹಿಡಿದು ೧೯೨೦ರಿಂದಲೂ ಹೋರಾಡುತ್ತಾ ಬಂದ, ಅದರಿಂದ ಲಾಭ ಪಡೆದ ಮಧ್ಯಮ ಜಾತಿಗಳ ಬ್ರಾಹ್ಮಣೇತರರು. ಎಲ್ಲಾ ತರಹದ ನೌಕರಿಗಳಲ್ಲಿ ಅವರ ಪಾಲು ಒಂದೇ ಸಮನೆ ಹೆಚ್ಚುತ್ತ ಬಂದಿದೆ. ಭೂಸುಧಾರಣೆಗಳಿಂದಾಗಿ ಕಡಿಮೆ ಪೆಟ್ಟು ತಿಂದ ಜಾತಿಗಳೂ ಇವೇ ಆಗಿವೆ. ಈ ವರ್ಗಗಳೇ ಬ್ರಾಹ್ಮಣರನ್ನು ಅಪ್ಪಳಿಸಿದ ನಂತರದ ಭೂಸುಧಾರಣೆಯ ಹೆದ್ದೆರೆಗಳು ಅನಿವಾರ್ಯವಾಗಿ ತಮ್ಮ ಜಾತಿಯವರ ಜಮೀನುಗಳನ್ನೂ ಕೊಚ್ಚಿಕೊಂಡು ಹೋಗುವುದನ್ನು ತಡೆಯಲು ಬಯಸಿ ಆ ಸುಧಾರಣೆಗಳ ಮುಂದಿನ ಹೆಜ್ಜೆಗಳನ್ನು ಹತ್ತಿಕ್ಕಲು ಯತ್ನಿಸಿದವರೆಂದೂ ಇಲ್ಲಿ ಗಮನಿಸಬೇಕು. ಈ ವರ್ಗದ ಜನರೇ, ಅಂದರೆ ೧೯೨೦ರ ದಶಕದಲ್ಲಿ ಜಾತಿ ಆಧಾರದ ಮೇಲೆ ತಮಗಿಂತ ಹಿಂದುಳಿದವರಿಗೆ ಪ್ರಾಧಾನ್ಯ ಕೊಡುವ ಯತ್ನಗಳನ್ನು ಬಲವಾಗಿ ವಿರೋಧಿಸುವವರಾಗಿದ್ದಾರೆ.

ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ಬಹುಜನ ಸಮಾಜಗಳ ಹೆಸರಲ್ಲಿ ಅಧಿಕಾರ ನಡೆಸಿದ ಈ ವರ್ಗವೇ ಅಧಿಕಾರದ ಫಲಗಳನ್ನು ಹೆಚ್ಚಾಗಿ ಉಪಭೋಗಿಸಿ ಆರ್ಥಿಕ ಸಾಮಾಜಿಕ ಉತ್ಕರ್ಷ ಸಾಧಿಸಿಕೊಂಡಿದ್ದು. ಈಗ ಅವರಿಗಿಂತ ಕೆಳಗಿರುವವರು ಎಚ್ಚೆತ್ತು ತಮಗೆ ಸಿಗಬೇಕಾದ್ದು ಸಿಗಲಿಲ್ಲವೆಂದು ಕೋಪಿಸತೊಡಗಿದ್ದಾರೆ. ಈ ಅವರ ಸಿಟ್ಟನ್ನು ತಮ್ಮಿಂದ ಅರ್ಧ ಶತಮಾನದಿಂದ ‘ಅನಿಷ್ಟಕ್ಕೆ ಶನೀಶ್ವರ’ ಎನಿಸಿರುವ ಬ್ರಾಹ್ಮಣ ಜಾತಿಯ ಮೇಲೆ ತಿರುಗಿಸಿಬಿಡುವ ಹೇತುವಿನಿಂದ ಈ ಹೊಸ ಬ್ರಾಹ್ಮಣ ವಿರೋಧ ಆಂದೋಲನ ಪ್ರೇರಿತವಾಗಿದೆಯೆಂದು ಕಾಣುತ್ತದೆ. ಇಂಥ ಆರೋಪ ಮಾಡುವುದು ಸಂತೋಷಕರವಾದದ್ದಲ್ಲ. ಆದರೆ ಬ್ರಾಹ್ಮಣರ ಮೇಲೆ ನಿಷ್ಕಾರಣ ಪ್ರಹಾರ ಮಾಡುವುದನ್ನೇ ಉದ್ಯೋಗ ಮಾಡಿಕೊಂಡಿರುವ ಮಧ್ಯಮ ಜಾತಿಗಳ ಈ ಸಾಹಿತಿಗಳ ಕೃತಿಗಳನ್ನು ಯಾವ ರೀತಿ ಅರ್ಥೈಸಲು ಸಾಧ್ಯವಿದೆಯೆಂದು ತೋರಿಸಲು ಇದನ್ನು ಕುರಿತಾಗಿ ಹೇಳಬೇಕಾಗಿದೆ.

ಈ ದೇಶದಲ್ಲಿ ಕಳೆದ ಮೂರೋ ಐದೋ ಸಾವಿರ ವರ್ಷಗಳಿಂದ (ಭಾರತೀಯ ಇತಿಹಾಸದ ಪ್ರಾಚೀನತೆಯ ಬಗ್ಗೆ ಅವರವರ ಕಲ್ಪನೆಗಳನ್ನು ಅನುಸರಿಸಿ) ಆದ ತಪ್ಪುತಡೆ ಅನಾಹುತಗಳಿಗೆಲ್ಲ ಬ್ರಾಹ್ಮಣರನ್ನು ಜವಾಬ್ದಾರಿ ಹಿಡಿಯುವುದು ಇವರ ಫ್ಯಾಷನ್ ಆಗಿಬಿಟ್ಟಿದೆ. ಜಾತಿ ಪದ್ಧತಿಯನ್ನು ಸೃಷ್ಟಿಸಿದವರು ಬ್ರಾಹ್ಮಣರು; ಅದಕ್ಕೆ ಧಾರ್ಮಿಕ ಸ್ವರೂಪ ಕೊಟ್ಟವರು ಬ್ರಾಹ್ಮಣರು; ಅದರಿಂದ ಪ್ರಯೋಜನ ಪಡೆದು ಸುಖಪಟ್ಟವರು ಬ್ರಾಹ್ಮಣರು; ಶಾಸ್ತ್ರ ಸಾಹಿತ್ಯಾದಿಗಳನ್ನು ಸಂಸ್ಕೃತದಲ್ಲಿ ಬರೆದು ಸಾಮಾನ್ಯರಿಗೆ ತಿಳಿಯದಂತೆ ಮಾಡಿ ವಿದ್ಯೆಯ ಗುತ್ತಿಗೆ ಹಿಡಿದವರು ಬ್ರಾಹ್ಮಣರು; ಬ್ರಾಹ್ಮಣೇತರರಿಗೆ ವಿದ್ಯೆಯನ್ನು ನಿರಾಕರಿಸಿದವರು ಬ್ರಾಹ್ಮಣರು; ಸಮಾಜವನ್ನು ಶೋಷಿಸಿ ಪರೋಪಜೀವನ ನಡೆಸಿದವರು ಈ ಪುರೋಹಿತ ವರ್ಗದವರು; ಇವರಿಂದಾಗಿಯೇ ಇತರ ಜಾತಿಗಳವರಿಗೆ ವಿದ್ಯೆಗಳಲ್ಲಿ ಮುಕ್ತ ಸ್ಪರ್ಧೆ ಸಾಧ್ಯವಾಗುತ್ತಿಲ್ಲ... ಆದ್ದರಿಂದ ಬ್ರಾಹ್ಮಣರನ್ನು ಎಲ್ಲಾ ರಂಗಗಳಲ್ಲಿ ಕೆಲಕಾಲ ತಡೆಹಿಡಿಯಬೇಕೆಂಬುದು ಅವರ ಈಗಿನ ಕೂಗು.

ಈ ಆರೋಪಗಳು ಬೌದ್ಧಿಕರೆನಿಸುವ ಜನರಿಂದ ಬರುತ್ತಿರುವುದರಿಂದ ಇನ್ನಷ್ಟು ಆಶ್ಚರ್ಯಕರವಾಗಿದೆ. ಬ್ರಾಹ್ಮಣರು ಜಾತಿ ಪದ್ಧತಿಯನ್ನು ನಿರ್ಮಿಸಿದರೆಂದು ಇತಿಹಾಸ ಸಮಾಜಶಾಸ್ತ್ರಗಳಲ್ಲಿ ನಿರಕ್ಷರಿಗಳಾದವರು ಮಾತ್ರ ನಂಬಬಹುದು. ಜಾತಿಗಳು ನಿರ್ಮಾಣವಾದದ್ದು ಐತಿಹಾಸಿಕ ಒತ್ತಡಗಳಿಂದ; ಭಾರತದ ವಿಶಿಷ್ಟ ಭೌಗೋಲಿಕ ಪರಿಸರದಿಂದಾಗಿ ಅದು ಗಟ್ಟಿಯಾಯಿತು. ಯೂರೋಪ್ ಅಥವಾ ಪಶ್ಚಿಮ ಏಶಿಯಾದಲ್ಲಿ ಎದ್ದಂಥ ಜನಾಂಗಗಳ ಒತ್ತಡ, ದಂಡಯಾತ್ರೆಗಳು ಇಲ್ಲಿ ಎದ್ದು ನಿಂತ ನೀರಿನ ಕಟ್ಟೆಯೊಡೆದು ಬಿಡಲಿಲ್ಲವಾಗಿ ಅದು ಸ್ಥಿರವಾಯಿತು. ರೋಮನ್ ಇತಿಹಾಸದಲ್ಲಿ ಆಢ್ಯರಿಗೂ ಪ್ಲೆಬ್(ಸಾಮಾನ್ಯ) ರಿಗೂ ಗಂಭೀರ ಕಲಹಗಳಾದಂತೆ ಇಲ್ಲಿ ಮೇಲ್ಜಾತಿಗಳವರಿಗೂ ಶೂದ್ರರಿಗೂ ಹೋರಾಟವಾಗಲಿಲ್ಲ. ಇದಕ್ಕೆಲ್ಲಾ ಬ್ರಾಹ್ಮಣರು ಕಾರಣವೆಂದು ಹೇಳುವುದಾದರೆ ಬ್ರಾಹ್ಮಣರು ಅತಿಮಾನುಷ ಬುದ್ಧಿಬಲದಿಂದ ಸಾವಿರಾರು ವರ್ಷಗಳಿಗಾಗಿ ಯಶಸ್ವಿ ಯೋಜನೆ ಹಾಕಿದರೆಂದು ಒಪ್ಪಬೇಕಾಗುತ್ತದೆ. ಅಂಥ ಅತಿಮಾನುಷ ಬುದ್ಧಿಶಕ್ತಿ ಬ್ರಾಹ್ಮಣರಿಗಿತ್ತೆಂದು ಯಾರೂ ನಂಬುವಂತಿಲ್ಲ. ನಿಜವಾಗಿ ನಡೆದದ್ದೆಂದರೆ ಶತಮಾನಗಳ ಕಾಲ ನಡೆದು ಬಂದ ಸಂಪ್ರದಾಯಕ್ಕೆ ಬ್ರಾಹ್ಮಣ ಶಾಸ್ತ್ರಕಾರರು ಶಾಸ್ತ್ರಮುದ್ರೆ ಒತ್ತಿದರಷ್ಟೇ. ಆಗಿನ ಎಲ್ಲಾ ಅರ್ಥವಂತ ವರ್ಗಗಳಿಗೂ ಅದು ಅನುಕೂಲವಿದ್ದುದರಿಂದ ಈ ಶಾಸ್ತ್ರಮುದ್ರೆ ಒತ್ತಲು ಸಾಧ್ಯವಾಯಿತೆಂದು ತೋರುತ್ತದೆ. ಪೌರೋಹಿತ್ಯದಿಂದ ಜೀವಿಸುವ ವರ್ಗಕ್ಕೆ ಯಜಮಾನ ಜಾತಿಗಳ ಬೆಂಬಲವಿಲ್ಲದಿದ್ದರೆ ಇದು ಆಗುತ್ತಲೂ ಇರಲಿಲ್ಲ.

ಈ ದೇಶದಲ್ಲಿ ಜಾತಿ ಪದ್ಧತಿಯನ್ನು ಎತ್ತಿ ಹಿಡಿದವರು ಬ್ರಾಹ್ಮಣರು ಮಾತ್ರ ಎಂಬ ರೀತಿಯಲ್ಲಿ ನಮ್ಮ ಇತಿಹಾಸವನ್ನು ಬರೆಯಲಾಗುತ್ತಿದೆ. ಬೌದ್ಧ ಜೈನ ಧರ್ಮಗಳನ್ನು ಕುರಿತು ಬರೆಯುವಾಗ ನಮ್ಮ ಚಿಕ್ಕಮಕ್ಕಳ ಪಾಠಗಳಲ್ಲಿ ಕೂಡ ಆ ಧರ್ಮಗಳ ಸಂಸ್ಥಾಪಕರು ಮಾನವ ಸಮತೆಯಲ್ಲಿ ನಂಬಿಕೆಯಿಟ್ಟಿದ್ದರೆಂದೂ ಜಾತೀಯ ಉಚ್ಚ ನೀಚವನ್ನು ಖಂಡಿಸುತ್ತಿದ್ದರೆಂದೂ ಬರೆಯಲಾಗುತ್ತದೆ. ಇದು ಸತ್ಯಕ್ಕೆ ದೂರವಾದದ್ದು. ನಿಜಕ್ಕೂ ಇವೆರೆಡೂ ಧರ್ಮಗಳು ಯಜ್ಞಸಂಸ್ಥೆಯ ವಿರುದ್ಧ ತಲೆಯೆತ್ತಿದವುಗಳು. ಅವುಗಳ ಮುಂದಾಳುಗಳು ಕ್ಷತ್ರಿಯರಾಗಿದ್ದರೂ ಬೆಂಬಲಿಗರು ವೈಶ್ಯರಾಗಿದ್ದರೆಂಬುದಕ್ಕೆ ತುಂಬಾ ಕುರುಹುಗಳು ಸಿಗುತ್ತವೆ. ವೇದ ಧರ್ಮದಲ್ಲಿ ಬ್ರಾಹ್ಮಣ ಕ್ಷತ್ರಿಯ ವೈಶ್ಯರೆಲ್ಲರೂ ‘ದ್ವಿಜ’ರೆನಿಸಿದರೂ ವೈಶ್ಯರಿಗಾಗಿ ಅವರ ಸಂಪತ್ತಿಗನುಗುಣವಾದ ಸ್ಥಾನ ಮಾನ ಇಲ್ಲದ್ದರಿಂದ ಅಸಂತುಷ್ಟರಾದ ಅವರು ಹೊಸ ಧರ್ಮಗಳಿಗೆ ಶರಣು ಹೋದರೆಂದು ಜಗತ್ತಿನ ಇತರ ಕಡೆಗಳ ಇತಿಹಾಸದಿಂದ ತರ್ಕಿಸಬಹುದು. ಆದರೆ ಜನ್ಮಸಿದ್ಧ ಜಾತಿಗಳನ್ನು ಬೌದ್ಧರೂ ಜೈನರೂ ಒಂದು ಸಾಮಾಜಿಕ ಒಡಂಬಡಿಕೆಯೆಂಬ ರೀತಿಯಲ್ಲಿ ಅಂಗೀಕರಿಸಿದ್ದರೆಂಬುದಕ್ಕೆ ಅವೆರಡರ ಸಾಹಿತ್ಯಗಳಲ್ಲಿಯೂ ಪ್ರಮಾಣಗಳು ಸಿಗುತ್ತವೆ. ಅಂತರವಿಷ್ಟೇ: ಅವರು ಬ್ರಾಹ್ಮಣರಿಗಿಂತ ಕ್ಷತ್ರಿಯ ವೈಶ್ಯರಿಗೆ ಮಹತ್ವ ಕೊಟ್ಟಿದ್ದಾರೆ. ಶೂದ್ರಾತಿಶೂದ್ರರನ್ನು ಅವರು ಕೂಡ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ.

ಈ ವ್ಯವಸ್ಥೆಯಿಂದ ಬ್ರಾಹ್ಮಣರು ಇತರರನ್ನು ಶೋಷಿಸಿ ತಾವು ಲಾಭ ಮಾಡಿಕೊಂಡರೆಂಬುದೂ ಸರಿಯಲ್ಲ. ಶ್ರೀಮಂತಿಕೆ ಎಂದೂ ಬ್ರಾಹ್ಮಣರ ಆದರ್ಶವಾಗಿರಲಿಲ್ಲ. ‘ಬಡ ಬ್ರಾಹ್ಮಣ’ನೇ ಎಲ್ಲಾ ಕಥೆಗಳಲ್ಲಿ ಕಾಣಿಸಿಕೊಳ್ಳುವಾತ. ಶಾಸ್ತ್ರಗಳಲ್ಲಿ ಹೇಳಿದ ರೀತಿಯಲ್ಲಿ ಗಾರ್ಹಸ್ಥ್ಯ ಧರ್ಮ ಪಾಲಿಸುವವರಿಗೆ ಸಂಪತ್ತಿನ ಸಂಚಯ ಸಾಧ್ಯವೂ ಇರಲಿಲ್ಲ. ನಿರಂತರವಾದ ದಾನ ಪ್ರತಿಗ್ರಹಗಳ ಶ್ರೇಣಿಯಿಂದ ಬ್ರಾಹಣರು ತಮ್ಮೊಳಗೆ ಒಂದು ತರಹದ ಅನಾದಿ ಸಮಾಜವಾದವನ್ನು ಜಾರಿಗೆ ತಂದಿದ್ದರು. ಇತ್ತೀಚಿನವರೆಗೆ ಬ್ರಾಹ್ಮಣದಲ್ಲಿ ಅತಿ ಶ್ರೀಮಂತರೂ ಅತಿ ದರಿದ್ರರೂ, ಇತರ ಜಾತಿಗಳಲ್ಲಿರುವಂತೆ, ಇರಲಿಲ್ಲ. ಅವರ ಸರಾಸರಿ ಆದಾಯ ಇತರರಿಗಿಂತ ಸ್ವಲ್ಪ ಮೇಲ್ಮಟ್ಟದಲ್ಲಿ ಇದ್ದರೆ ಅದಕ್ಕೆ ಈ ಸಮಾಜವಾದ ಕಾರಣವಾಗಿತ್ತು.

ಸ್ವಾರಸ್ಯವೆಂದರೆ ಒಂದು ದಶಕದ ಹಿಂದೆ ಎದ್ದ ಬ್ರಾಹ್ಮಣ ವಿರೋಧಿ ಸಾಹಿತ್ಯ ಚಳುವಳಿಯಲ್ಲಿ ಒಬ್ಬ ಸಾಹಿತಿಗಳು “ಬ್ರಾಹ್ಮಣರಿಗೆ ಆಸ್ತಿ ಕಡಿಮೆ ಇತ್ತು ಮತ್ತು ಸುಧಾರಣೆಗಳ ನಂತರ ಇನ್ನೂ ಕಡಿಮೆಯಾಯಿತು” ಎಂಬ ಅಂಶವನ್ನೇ ಅವರ ವಿರುದ್ಧ ಒಂದು ವಾದವಾಗಿ ಉಪಯೋಗಿಸಿದರು. ಹೌದು ಅವರಿಗೆ ಆಸ್ತಿಯಿಲ್ಲ, ಆದ್ದರಿಂದ ತಾವು ಬದುಕಿರುವ ಪ್ರದೇಶದ ಹಿತಾಹಿತ ಸುಖದುಃಖಗಳಲ್ಲಿ ಅವರಿಗೆ ಆಸಕ್ತಿಯಿಲ್ಲ. ಆದ್ದರಿಂದ ಅವರು ಇನ್ನೂ ಅಪಾಯಕಾರಿಗಳು ಎಂದು ವಾದಿಸಿದರು. ಬ್ರಾಹ್ಮಣರು ಶ್ರೀಮಂತರಾದರೂ ಅಪರಾಧ, ಬಡವರಾದರೂ ಅಪರಾಧವೇ. ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು.

ಬ್ರಾಹ್ಮಣರು ಇತರರಿಗೆ ವಿದ್ಯೆಯನ್ನು ನಿರಾಕರಿಸಿ ಅಜ್ಞಾನದಲ್ಲಿಟ್ಟರು ಎಂಬುದು ಅವರ ಮೇಲಿನ ಇನ್ನೊಂದು ಕೋಟಿ. ಇದೂ ಮಿಥ್ಯಾರೋಪ. ವೇದಪಾಠವನ್ನು ಶೂದ್ರರಿಗೂ ಸ್ತ್ರೀಯರಿಗೂ ವೇದೋತ್ತರ ಕಾಲದಲ್ಲಿ ನಿರಾಕರಿಸಿದ್ದು ಸತ್ಯ. ಆದರೆ ಇತರ ಯಾವ ಶಾಸ್ತ್ರವೂ ನಿರಾಕರಿಸಲ್ಪಡಲಿಲ್ಲ. ಸಂಸ್ಕೃತದ ಅಧ್ಯಯನ ಕೂಡ ಇದಕ್ಕೆ ಪ್ರಮಾಣ. ಬೇಕಾದರೆ ಮಹಾಭಾರತದಲ್ಲಿ ಬರುವ ಅತಿ ಪವಿತ್ರ ಅಂಶವಾದ ವಿಷ್ಣುಸಹಸ್ರ ನಾಮದ ಫಲಶೃತಿಯನ್ನು ನೋಡಿದರೆ ಸಾಕು. ಅದರ ಫಲಭಾಗದಲ್ಲಿ ಈ ಸ್ತೋತ್ರವನ್ನು ಓದಲು ಕೇಳಲು (ಶೃಣುಯಾತ್ ಪರಿಕೀರ್ತಯೇತ್) ಬ್ರಾಹ್ಮಣರಿಗೆ ಕ್ಷತ್ರಿಯರಿಗೆ ವೈಶ್ಯರಿಗೆ ಶೂದ್ರರಿಗೆಲ್ಲ ಹಕ್ಕು ಕೊಟ್ಟಿದೆ. ಪುರಾಣಗಳ ರಚನೆಯಾದದ್ದೇ ‘ಸ್ತ್ರೀ ಶೂದ್ರ ದ್ವಿಜ ಬಂಧೂನಾಂ’ (ಹೆಂಗಸರು, ಶೂದ್ರರು ಮತ್ತು ವಿದ್ಯೆ ಓದದ ಬ್ರಾಹ್ಮಣರ) ಸಲುವಾಗಿ. ಇದು ಬರೇ ಹೇಳಿಕೆಯಲ್ಲ, ಸಂಸ್ಕೃತದಲ್ಲಿ ಶೂದ್ರ ಕವಿಗಳೂ ಇದ್ದರು. ಬ್ರಾಹ್ಮಣ ಧರ್ಮದ ಅತ್ಯಂತ ಕಠೋರ ನೆಲೆವೀಡಾಗಿದ್ದ ಕೇರಳದಲ್ಲಿ ಅನೇಕ ಅಬ್ರಾಹ್ಮಣ ಸಂಸ್ಕೃತ ವಿದ್ವಾಂಸರು ಈಗಲೂ ಇದ್ದಾರೆ.

ವಾಸ್ತವಿಕವಾಗಿ ನಡೆದದ್ದೆಂದರೆ, ಬ್ರಾಹ್ಮಣರು ಇತರರಿಗೆ ಸಂಸ್ಕೃತ ವಿದ್ಯೆ ನಿರಾಕರಿಸಲಿಲ್ಲ. ಆಗಿನ ರಾಜಕೀಯ ಸಂಬಂಧಗಳಲ್ಲಿಯೂ ಉತ್ಪಾದನೆ ವಿತರಣೆಗಳ ಪದ್ಧತಿಯಲ್ಲಿಯೂ ಅಕ್ಷರವಿದ್ಯೆಗೆ ಈಗಿನ ಮಹತ್ವ ಇರಲಿಲ್ಲ. ಬಹುಶಃ ಕೃಷಿಯಲ್ಲಿ ನಿರತರಾಗಿದ್ದವರಿಗೆ ಅಕ್ಷರವಿದ್ಯೆಯಲ್ಲಿ ತಲೆಹಾಕಲು ವೇಳೆಯೂ ಇದ್ದಿರಲಿಕ್ಕಿಲ್ಲ.

ವಿದ್ಯೆಯ ನಿರಾಕರಣೆಯ ವಿಷಯದಲ್ಲಿ ತಿಳಿದ ತಿಳಿಯದ ತಪ್ಪು ಭಾವನೆಗಳೂ ತುಂಬಾ ಹಬ್ಬಿವೆ. ಬ್ರಾಹ್ಮಣ ಗಂಡಸರು ವೇದಗಳನ್ನು ತಮ್ಮ ಸ್ವಂತ ಗುತ್ತಿಗೆಯಾಗಿ ಮಾಡಿಕೊಂಡದ್ದರಿಂದ ಯಾರಿಗೂ ಲಾಭ ನಷ್ಟವಾಗಲಿಲ್ಲ. ಬರೇ ವೇದ ಓದಿದವರಿಗೆ ಬ್ರಾಹ್ಮಣರಲ್ಲಿಯೂ ಗೌರವ ಹೆಚ್ಚು ಇರಲಿಲ್ಲ. ತರ್ಕ ವೇದಾಂತಗಳನ್ನು ಓದಿದವರಿಗೆ ಮಾತ್ರ ಗೌರವ ಇತ್ತು. ವೇದ ಮಾತ್ರ ಓದಿ ಪೌರೋಹಿತ್ಯ ವೃತ್ತಿಯಿಂದ ಜೀವಿಸುವವರಲ್ಲಿ ಅನೇಕರು ನಿರಕ್ಷರಿಗಳಾಗಿದ್ದರು. ‘ವೇದಾಭ್ಯಾಸ ಜಡರು’ ಎಂಬುದಾಗಿ ಕವಿಗಳೂ ತಾರ್ಕಿಕರೂ ವೇದಂತಿಗಳೂ ಅವರನ್ನು ತಿರಸ್ಕರಿಸುತ್ತಿದ್ದರು. ಇಂದಿಗೂ ಈ ಜನರೇ ಬ್ರಾಹ್ಮಣರಲ್ಲಿ ಅತಿ ಹಿಂದುಳಿದವರಾಗಿದ್ದಾರೆ. ಆದ್ದರಿಂದ ಬ್ರಾಹ್ಮಣರನ್ನು ನಿಂದಿಸಬೇಕಾದಾಗ ‘ಪುರೋಹಿತ ವರ್ಗ’ ಎಂದು ಬಯ್ಯುವವರು ಅತ್ಯಂತ ಅಜ್ಞಾನವನ್ನು ಪ್ರದರ್ಶಿಸುತ್ತಾರೆ.

ವಿದ್ಯೆ ಇಲ್ಲದಿರುವಿಕೆಯ ನೈಜ ಕಾರಣ ತಿಳಿಯಬೇಕಾದರೆ ಲಿಂಗಾಯಿತರ ಉದಾಹರಣೆಯನ್ನು ಪರಿಶೀಲಿಸಬೇಕು. ೧೨ನೇ ಶತಮಾನದಲ್ಲಿ ವೈದಿಕ ಸಂಸ್ಥೆಯನ್ನು ಪೂರ್ತಿ ಧಿಕ್ಕರಿಸಿ ಜಾತ್ಯಾತೀತ ವ್ಯವಸ್ಥೆಯೊಂದನ್ನು ತರುವ ಕಲ್ಪನೆ ಲಿಂಗಾಯಿತ ನಾಯಕರಾದ ಬಸವಣ್ಣನವರಿಂದಾಯಿತು. ಲಿಂಗಾಯಿತ ಧರ್ಮವನ್ನು ಸೇರಿದವರೆಲ್ಲರಿಗೂ ಸಮಾನಾಧಿಕಾರ ತಾತ್ವಿಕವಾಗಿಯಾದರೂ ದೊರೆಯಿತು. ಅವರಲ್ಲಿ ಕೆಲವರು ಸಂಸ್ಕೃತ ಕನ್ನಡಗಳೆರಡರಲ್ಲಿ ಅಗಾಧ ವಿದ್ವಾಂಸರೂ ಮಹಾಕವಿಗಳೂ ಆದರು. ಆದರೆ ಈ ಶರ್ತಮಾನದ ಪ್ರಾರಂಭದಷ್ಟು ಹೊತ್ತಿಗೆ ಅವರು ವಿದ್ಯೆಯಲ್ಲಿ ಹಿಂದುಳಿದವರೆಂದು ಸವಲತ್ತುಗಳನ್ನು ಬೇಡಲಾರಂಭಿಸಿದರು. ಈ ನಿರ್ವಿದ್ಯೆಗೆ ಬ್ರಾಹ್ಮಣರು ಕಾರಣವಾಗಿರಲಿಲ್ಲ. ಅವರಿಗೆ ಪ್ರತ್ಯೇಕ ಮಠಗಳೂ ಇದ್ದವು. ಅವರಿಗೆ ವಿದ್ಯೆ ಬೇಕಾದರೆ ಬ್ರಾಹ್ಮಣರನ್ನು ಆಶ್ರಯಿಸಬೇಕಾಗಿರಲಿಲ್ಲ. ಆದರೆ ಆರ್ಥಿಕ ಸಂಬಂಧಗಳಲ್ಲಿ ಕೃಷಿಕರ ಸ್ಥಾನ ಮತ್ತು ಅಗತ್ಯಗಳು ವಿದ್ಯೆಯನ್ನು ಅವರಿಗೆ ಅನಿವಾರ್ಯವಾಗಿ ಮಾಡಲಿಲ್ಲವಾದ್ದರಿಂದ ಅವರು ವಿದ್ಯೆಯಲ್ಲಿ ಹೆಚ್ಚು ಆಸಕ್ತರಾಗಲಿಲ್ಲ. ಅಕ್ಷರವಿದ್ಯೆಯ ಅಗತ್ಯದ ಪ್ರಮಾಣವನ್ನಾಧರಿಸಿ ಲಿಂಗಾಯಿತರಲ್ಲಿ ಅಯ್ಯನವರೂ ಬಣಜಿಗರೂ ಹೆಚ್ಚು ಅಕ್ಷರಸ್ಥರಾಗಿದ್ದರು. ಬ್ರಾಹ್ಮಣರಲ್ಲಿಯೂ ಹಳ್ಳಿಗಾಡಿನಲ್ಲಿದ್ದವರು ಪಟ್ಟಣವಾಸಿಗಳಿಗಿಂತ ಕಡಿಮೆ ವಿದ್ಯಾವಂತರಾಗಿದ್ದರು, ಅಗ್ರಹಾರ ಘಟಿಕಾ ಸ್ಥಾನಗಳಲ್ಲಿದ್ದವರು ಹೆಚ್ಚು ವಿದ್ಯಾವಂತರಾಗಿದ್ದರು.

ಹೌದು, ಒಂದು ವಿಷಯದಲ್ಲಿ ಬ್ರಾಹ್ಮಣರು ಭಿನ್ನರಾಗಿದ್ದರು. ಅದೆಂದರೆ ವಿದ್ಯೆಯ ಮೋಹ. ಶತಮಾನಗಳ ಪರಂಪರೆಯಿಂದ ಬ್ರಾಹ್ಮಣರ ಒಂದು ಪ್ರಾಥಮಿಕ ಮಹತ್ವಾಕಾಂಕ್ಷೆ ವಿದ್ಯಾವಂತರಾಗಬೇಕೆಂಬುದಾಗಿ ಇತ್ತು. ಈ ಹೇತು(motivation) ಬ್ರಾಹ್ಮಣರನ್ನು ಪ್ರೇರಿಸುತ್ತಿದ್ದುದರಿಂದ ಅವಕಾಶ ಸಿಕ್ಕಾಗಲೆಲ್ಲ ಬ್ರಾಹ್ಮಣರು ವಿದ್ಯಾರ್ಜನೆಯನ್ನು ಉಳಿದೆಲ್ಲಕ್ಕಿಂತ ಹೆಚ್ಚಾಗಿ ಬೆಂಬತ್ತಿದರು. ಈಗಿನ ಕಾಲದಲ್ಲಿಯೂ ಬ್ರಾಹ್ಮಣರು ವಿದ್ಯೆಯಲ್ಲಿ ಹೆಚ್ಚು ಯಶಸ್ವಿಗಳಾಗುತ್ತಿದ್ದರೆ ಈ ಹೇತುವಿನಿಂದಲೇ ಹೊರತು ಬೇರಾವ ಸೌಕರ್ಯದಿಂದಲ್ಲ. ಅವರ ತಲೆಯಲ್ಲಿ ಹೆಚ್ಚು ಮಿದುಳು ಖಂಡಿತಾ ಇಲ್ಲ. ಆದರೆ ಸುಧೀರ್ಘ ಪರಂಪರೆಯಿಂದ ಮಿದುಳನ್ನು ಉಪಯೋಗಿಸುವ ಶಿಸ್ತು ಅವರಿಗೆ ಲಭಿಸಿತು. ವಿದ್ಯೆಯಲ್ಲಿ ಯಶಸ್ಸು ಮಿದುಳಿನ ಗಾತ್ರದಿಂದ ಸಿದ್ಧವಾಗತಕ್ಕದ್ದಲ್ಲ. ಅದನ್ನು ಪ್ರೇರಿಸುವ ಹೇತು ಮತ್ತು ನಿಯೋಜಿಸುವ ಶಿಸ್ತು ಇವು ಯಶಸ್ಸಿನ ಗುಟ್ಟು.

ಇದನ್ನು ನಾನು ಬ್ರಾಹ್ಮಣ ಬ್ರಾಹ್ಮಣೇತರ ಇಬ್ಬರ ಗಮನಕ್ಕಾಗಿಯೂ ಹೇಳುತ್ತಿದ್ದೇನೆ. ಬ್ರಾಹ್ಮಣರಲ್ಲಿ ಕೆಲವರು ಇಂದು ಕೂಡ ತಮ್ಮ ಮಿದುಳು ಶೂದ್ರ ಮಿದುಳಿಗಿಂತ ಶ್ರೇಷ್ಠವಾದುದೆಂಬ ಭ್ರಾಮಕ ಕಲ್ಪನೆಯಲ್ಲಿದ್ದಾರೆ. ಅದನ್ನು ಬಾಯಿಬಿಟ್ಟು ಹೇಳುತ್ತಲೂ ಇರುತ್ತಾರೆ. ಇದರಿಂದ ಅವರು ಇತರ ಜಾತಿಗಳ ಜನರ ದ್ವೇಷವನ್ನು ಮಾತ್ರ ಸಂಪಾದಿಸುತ್ತಾರಷ್ಟೇ. ವಸ್ತುತಃ ಬ್ರಾಹ್ಮಣ ದ್ವೇಷದ ಮೂಲದಲ್ಲಿ ದುಯ್ಯಂ ಬ್ರಾಹ್ಮಣರ (ಅವ್ವಲ್ ಮಿದುಳಿನವರು ತಮ್ಮ ಮಿದುಳಿನ ಬಗ್ಗೆ ಹೇಳಿಕೊಳ್ಳುವುದಿಲ್ಲ) ಈ ತರಹದ ದುರಹಂಕಾರದ ಮಾತುಗಳೇ ಹಾರುವರು ವಾಸ್ತವಿಕವಾಗಿ ಶೂದ್ರರಿಗೆ ಮಾಡಿದ ಅಥವಾ ಮಾಡುವ ಅಥವಾ ಮಾಡದಿರುವ ಅನ್ಯಾಯಗಳಿಗಿಂತ ಹೆಚ್ಚಾಗಿ ಕೆಲಸ ಮಾಡುತ್ತವೆಂದು ಬ್ರಾಹ್ಮಣರು ತಿಳಿಯಲಾರದೆ ಹೋಗಿದ್ದಾರೆ. ಆದ್ದರಿಂದ ವಿದ್ಯಾಪ್ರಪಂಚದಲ್ಲಿ ತಮ್ಮ ಮುಂದಾಳ್ತನಕ್ಕೆ ನಿಜವಾದ ಕಾರಣ ಮಾನಸಿಕ ಹೇತು ಮತ್ತು ದೈಹಿಕ ಮಾನಸಿಕ ಶಿಸ್ತು ಎಂಬುದನ್ನು ಮರೆಯುತ್ತಿದ್ದಾರೆ. ಅವರು ಇದನ್ನು ಮರೆತು ಬರೆ ಜಂಬವನ್ನು ನೆಚ್ಚಿಕೊಂಡರೆ ಮುಂದೆ ಅವರು ಈ ರಂಗದಲ್ಲಿ ಪೂರ್ತಿ ಹಿಂದೆ ಬೀಳುವುದು ಖಂಡಿತ.

ಬ್ರಾಹ್ಮಣೇತರರಿಗೆ ಯಾಕೆ ಇದನ್ನು ಹೇಳುತ್ತಿದ್ದೇನೆಂದರೆ, ಅವರಲ್ಲಿ ಅನೇಕರು ಬಾಯಿಯಿಂದ ಅಲ್ಲದಿದ್ದರೂ ಮನಸ್ಸಿನಿಂದ ಬ್ರಾಹ್ಮಣ ಬುದ್ಧಿಯ ಶ್ರೇಷ್ಠತ್ವವನ್ನು ಸುಳ್ಳು ಸುಳ್ಳೇ ನಂಬಿ ಧೃತಿಗೆಟ್ಟು ಕೋಪಗೊಳ್ಳುತ್ತಾರೆ. ಹೆಚ್ಚು ಬಲವಾದ ಪ್ರೇರಣೆ ಮತ್ತು ಮಾನಸಿಕ ಶಿಸ್ತನ್ನು ಅವರು ರೂಪಿಸಿಕೊಂಡರೆ ಬ್ರಾಹ್ಮಣರೊಡನೆ ಹೆಚ್ಚು ನಿಃಶಂಕೆಯಿಂದ ಆತ್ಮವಿಸ್ವಾಸದಿಂದ ಸ್ಪರ್ಧಿಸಬಲ್ಲರು. ಅಷ್ಟಾದರೆ ಬ್ರಾಹ್ಮಣರನ್ನು ನಿಂದಿಸುವ ಅಗತ್ಯ ಅವರಿಗೆ ಉಳಿಯುವುದಿಲ್ಲ. ಇದರಲ್ಲಿ ಬ್ರಾಹ್ಮಣರ ಹಿತವೂ ಅಡಗಿದೆ.

ಬ್ರಾಹ್ಮಣರ ಮೇಲೆ ಮಾಡಲಾಗುವ ಆರೋಪಗಳಲ್ಲಿ ಹುರುಳಿಲ್ಲವೆಂದು ತೋರಿಸಲು ನಾನು ಈ ಲೇಖನದಲ್ಲಿ ಪ್ರಯತ್ನಿಸಿದ್ದೇನೆ. ಸರಕಾರಿ ಸೇವೆಗಳಲ್ಲಿ ಅವರಿಗಿದ್ದ ಸಂಖ್ಯಾಪ್ರಾಧಾನ್ಯ ಕೂಡ ಸಂಸ್ಕೃತಿಕ ಮತ್ತು ಐತಿಹಾಸಿಕ ಆಕಸ್ಮಿಕವೇ. ಬ್ರಿಟಿಷ್ ಪೂರ್ವದ ಆಳಿಕೆಗಳಲ್ಲಿ ಬ್ರಾಹ್ಮಣರು ಈ ನೌಕರಿಗಳಲ್ಲಿ ಹೆಚ್ಚಾಗಿ ಇದ್ದಿಲ್ಲ. ಮುಸ್ಲಿಂ ಮತ್ತು ಬ್ರಿಟಿಷ್ ಆಳಿಕೆಗಳಲ್ಲಿ ಬ್ರಾಹ್ಮಣ ವಿದ್ವಾಂಸರಿಗೆ ಹಿಂದಿದ್ದ ರಾಜಾಶ್ರಯ ತಪ್ಪಿದ್ದರಿಂದ ಅವರು ಪಾಶ್ಚಾತ್ಯ ವಿದ್ಯೆಯತ್ತ ಹೊರಳಿದರು. ಭಾರತದ ಪರಂಪರಾಗತ ಆರ್ಥಿಕ ಸಾಮಾಜಿಕ ವ್ಯವಸ್ಥೆಯಲ್ಲಿ ಹಿಂದೆ ಸರಕಾರಿ ಕೆಲಸವನ್ನೊಳಗೊಂಡು ಹೆಚ್ಚಿನ ರಂಗಗಳಲ್ಲಿ ಅಕ್ಷರ ವಿದ್ಯೆಗೆ ಮಹತ್ವ ಇರಲಿಲ್ಲ. ಭೂಮಿಯನ್ನೊಳಗೊಂಡು ಸಮಾಜದ ಸಂಪತ್ತಿನ ಅಧಿಕ ಭಾಗ ದಕ್ಷಿಣಭಾರತದಲ್ಲಂತೂ ಬ್ರಾಹ್ಮಣೇತರ ಮೇಲ್ಜಾತಿಗಳವರ ಕೈಯಲ್ಲೇ ಇತ್ತು. ಅವರು ಸುಲಭವಾಗಿ ದಕ್ಷಿಣೆ ಕೊಟ್ಟು ಬ್ರಾಹ್ಮಣರಿಂದ ತಮಗೆ ಬೇಕಾದ ಸೇವೆಗಳನ್ನು ಪಡೆಯುತ್ತಿದ್ದರು. ಆಗಿನ ದೃಷ್ಟಿಯಿಂದ ಅವರಿಗೆ ಅದು ಅಗ್ಗವಾಗಿಯೂ ಇತ್ತು. ಆದರೆ ವಿದೇಶೀ ಆಳಿಕೆಯ ಆಗಮನ ಮತ್ತು ಆರ್ಥಿಕ ಸಂಬಂಧಗಳ ಬದಲಾವಣೆಯಿಂದ ಸರಕಾರಿ ನೌಕರಿಗಳ ಅಗಾಧ ಬೆಳವಣಿಗೆ ಮತ್ತು ಅದರೊಂದಿಗೆ ಆ ನೌಕರಿಗಳಿಗೆ ದೊರಕಿದ ಹೊಸ ಪ್ರತಿಷ್ಠೆಯೂ ಅಂಥ ನೌಕರಿಗಳಲ್ಲಿ ವಿದ್ಯಾರ್ಹತೆಗಳಿಗೆ ಸಿಕ್ಕಿದ ಪ್ರಾಧಾನ್ಯವೂ ಹೊಸ ಪರಿಸ್ಥಿತಿಯನ್ನು ನಿರ್ಮಿಸಿದವು. ಇದರ ಪ್ರಯೋಜನ ಪಡೆಯಲು ಬ್ರಾಹ್ಮಣರಿಗೆ ಇತರರಿಗಿಂತ ತುಂಬಾ ಸೌಲಭ್ಯವಿತ್ತು. ಅವರಿಗೆ ಒಂದು ಬಗೆಯ ವಿದ್ಯೆಯಿಂದ ಇನ್ನೊಂದಕ್ಕೆ ಬದಲಾಯಿಸುವ ಸಮಸ್ಯೆ ಮಾತ್ರ ಇತ್ತು. ಹಿಂದೆ ವಿದ್ಯೆಯನ್ನು ಕಡೆಗಣಿಸಿದ ಜಾತಿಗಳಿಗೆ, ಅಕ್ಷರವಿದ್ಯೆಯ ಕೇವಲ ಲಾಭದಿಂದ ದಾಪುಗಾಲಿಕ್ಕುವವರಿಗೆ ಅಕ್ಷರವಿದ್ಯೆಯಲ್ಲಿ ಪಳಗಿದವರೊಡನೆ ಸ್ಪರ್ಧಿಸಿ ಗೆಲ್ಲುವ ಪ್ರಚಂಡ ಸಮಸ್ಯೆ ಇತ್ತು. ಇದರಲ್ಲಿ ಬ್ರಾಹ್ಮಣರ ತಪ್ಪೇನೂ ಇದ್ದಿಲ್ಲ. ಸಿಕ್ಕಿದ ಸಂದರ್ಭವನ್ನು ಅವರು ಪೂರ್ತಿ ಉಪಯೋಗಿಸಿಕೊಂಡರು ಮಾತ್ರ.

ಬ್ರಾಹ್ಮಣರ ಮುಂದೆ ಈಗ ಮುಖ್ಯವಾಗಿ ಎರಡು ಬಗೆಯ ಸಮಸ್ಯೆಗಳಿವೆ. ಒಂದು ತಮ್ಮ ಮೇಲೆ ನಡೆಯುವ ಮಿಥ್ಯಾಪ್ರಚಾರವನ್ನು ಎದುರಿಸುವ ಪ್ರಶ್ನೆ. ಇನೊಂದು, ತಮ್ಮ ಆರ್ಥಿಕ ಬೌದ್ಧಿಕ ಮಟ್ಟವನ್ನು ಕಾದುಕೊಳ್ಳುವುದು ಹೇಗೆ ಎಂಬುದು. ಬ್ರಾಹ್ಮಣರ ಮೇಲಿನ ಮುಖ್ಯ ಆರೋಪಗಳು ಎಷ್ಟು ಟೊಳ್ಳು ಎಂಬುದನ್ನು ಮೇಲೆ ವಿವರಿಸಲಾಗಿದೆ. ತಮ್ಮ ಪೂರ್ವಜರು ಮಹಾಪರಾಧ ಮಾಡಿದ್ದಾರೆ ಎಂಬ ಆಂತರಿಕ ಶಂಕೆಯನ್ನು ಬ್ರಾಹ್ಮಣರು ತೊರೆಯಬೇಕು. ಯಾವುದಾದರೂ ದೇಶದಲ್ಲಿ ಇಂಥದೇ ಪರಿಸ್ಥಿತಿಯಲ್ಲಿ ಯಾವೊಂದು ವರ್ಗ ಸಿಲುಕಿದಾಗ ಏನು ಮಾಡಬಹುದೋ ಅದನ್ನಷ್ಟೇ ಬ್ರಾಹ್ಮಣರು ಮಾಡಿದ್ದಾರೆ. ಜಾತಿಯನ್ನು ನಿವಾರಿಸುವ ಉದ್ದೇಶದಿಂದಲೇ ಹೊರಟವರು ತಾವೇ ಕಾಲಾಂತರದಲ್ಲಿ ಜಾತಿಗಳಾಗಿ ಹೋದದ್ದನ್ನು ಈ ದೇಶದಲ್ಲಿ ನೋಡುತ್ತಿದ್ದೇವೆ. ತೀರ ಇತ್ತೀಚಿನ ಉದಾಹರಣೆ ಬೇಕಾದರೆ ನವಬೌದ್ಧರು. ಹಿಂದೂ ಧರ್ಮದ ಜಾತಿಕಟ್ಟು ಅಳಿಯಲಾರದೆಂದು ಹೇಳಿ ಡಾ. ಅಂಬೇಡಕರರು ಬೌದ್ಧಧರ್ಮ ಸ್ವೀಕರಿಸಿ ತಮ್ಮ ಅನುಯಾಯಿಗಳಿಗೂ ಹಾಗೆ ಮಾಡಲು ಸೂಚಿಸಿದರು. ಆದರೆ ಮಹಾರಾಷ್ಟ್ರದ ‘ಮಹಾರ’ರಿಗೇ ಈ ನವಬೌದ್ಧಮತ ಬಹಳ ಮಟ್ಟಿಗೆ ಸೀಮಿತವಾಗಿದೆ.

ಜಾತಿಗಳು ಅಳಿದು ಅಖಂಡ ಹಿಂದೂ ಸಮಾಜ ಸ್ಥಾಪಿತವಾಗುವುದು ಎಲ್ಲಾ ದೃಷ್ಟಿಯಿಂದ ಆದರ್ಶ ಪರಿಹಾರ ನಿಜ. ಆದರೆ ಇಂದಿನ ಪ್ರಜಾಸತ್ತಾತ್ಮಕ ರಾಜಕೀಯದಲ್ಲಿ ಇದು ಸದ್ಯಕ್ಕಂತೂ ಸಾಧ್ಯವಾಗಿ ಕಾಣುವುದಿಲ್ಲ. ಜಾತ್ಯಾತೀತತೆಯನ್ನು ಉದ್ಘೋಷಿಸುತ್ತಾ ಜಾತಿಗಳನ್ನು ಗಟ್ಟಿ ಮಾಡುವ ಧೋರಣೆಗಳನ್ನು ಜಾರಿಗೆ ತರಲಾಗುತ್ತಿದೆ. ಅಖಂಡ ಹಿಂದೂ ಸಮಾಜದ ಕಲ್ಪನೆಯನ್ನು ಪ್ರತಿಪಾದಿಸುವವರನ್ನು ಮತವಾದಿಗಳು (communalists) ಎಂದು ಕರೆಯಲಾಗುತ್ತಿದೆ. ಏನಿದ್ದರೂ ಹಿಂದೂ ಸಮಾಜವನ್ನು ಜಾತಿಯಿಂದ ಮುಕ್ತಗೊಳಿಸುವ ಯತ್ನಕ್ಕೆ ಬ್ರಾಹ್ಮಣರು ಕೈಹಾಕಿದರೆ ಅವರ ಮೇಲಿನ ಸಂಶಯ ಮತ್ತು ಹೆಚ್ಚಬಹುದಾಗಿದೆ.

ಆದ್ದರಿಂದ ಬ್ರಾಹ್ಮಣರು ಆತ್ಮರಕ್ಷಣೆ ಮಾತ್ರ ಮಾಡಿಕೊಳ್ಳಬಲ್ಲರು. ತಮ್ಮ ಮೇಲಿನ ದ್ವೇಷದ ಕಾರಣಗಳಲ್ಲೊಂದಾದ ದುರಭಿಮಾನದ ಮಾತು ಆಡುವುದನ್ನು ಅವರು ತೊರೆಯಬೇಕು. ಎರಡನೆಯದಾಗಿ ತಮ್ಮೊಳಗಿನ ಉಪಭೇದಗಳನ್ನು ಸಾವಕಾಶವಾಗಿಯಾದರೂ ಬುದ್ಧಿಪೂರ್ವಕ ನಿವಾರಿಸಿಕೊಳ್ಳಬೇಕು. ನೌಕರಿಗಳಲ್ಲಿ ಅವರಿಗಿರುವ ಪ್ರಾಧಾನ್ಯ ಮಂಜಿನ ನೀರು. ಬೇಗನೇ ಅದು ರಾಜಕೀಯ ವಸ್ತಿಸ್ಥಿತಿಗಳಿಂದ ನಷ್ಟವಾದೀತು. ಬ್ರಾಹ್ಮಣರೂ ಉದ್ಯಮ, ವ್ಯಾಪಾರ ಮೊದಲಾದ ಎಲ್ಲ ಮಾನವ ಉಪಕ್ರಮಗಳಲ್ಲಿಯೂ ತಮ್ಮ ಜೀವನೋಪಾಯಗಳನ್ನು ಅರಸಬೇಕು. ಯಾವ ಉದ್ಯೋಗವೂ ತಮ್ಮ ಗೌರವಕ್ಕೆ ಕಡಿಮೆ ಎಂದು ತಿಳಿಯಬಾರದು ಮತ್ತು ಇದೆಲ್ಲದರೊಡನೆ ಅವರು ತಮ್ಮ ಬೌದ್ಧಿಕ ಮಟ್ಟವನ್ನು ಕಾಯ್ದುಕೊಳ್ಳಬೇಕು. ತಮ್ಮ ಪ್ರಾಚೀನ ವಿದ್ಯಾಪ್ರೇಮ ಮಾನಸಿಕ ಕುತೂಹಲವನ್ನು ಹಿಂದಿಗಿಂತಲೂ ಹೆಚ್ಚು ಬೆಳೆಸಿಕೊಳ್ಳಬೇಕು. ಅವರು ಇಂದು ಸಿಲುಕಿಕೊಂದಿರುವ ಪರಿಸ್ಥಿತಿಯಲ್ಲಿ ತಮ್ಮ ಅಸ್ತಿತ್ವವನ್ನು ಸದ್ಯದ ಮಟ್ಟದಲ್ಲಿ ಉಳಿಸಿಕೊಳ್ಳುವುದಕ್ಕಾಗಿಯೇ ಇತರರಿಗಿಂತ ಹೆಚ್ಚು ಪರಿಶ್ರಮ ಮಾಡಬೇಕಾಗುತ್ತದೆ. ಆದ್ದರಿಂದ ಅವರು ಈಗ ಎಲ್ಲೆಲ್ಲಿಯೂ ತಾಂಡವಾಡುತ್ತಿರುವ ಸುಲಭ ವಿದ್ಯೆ, ಪರಿಶ್ರಮಹೀನವಾದ ಡಿಗ್ರಿ, ಐಷಾರಾಮದ ಜೀವನದ ಹುಚ್ಚಿಗೆ ಸಿಲುಕಬಾರದು. ಹೀಗೆ ಮಾಡುವುದರಿಂದ ಮಾತ್ರ ಅವರಲ್ಲಿ ಪ್ರಗತಿ ಶಾಶ್ವತವಾದೀತು. ಯೋರೋಪಿನ ಯಹೂದ್ಯರ ಕೈಯಿಂದ ಬ್ರಾಹ್ಮಣರು ಕಲಿಯಬಹುದಾದ್ದು ಬಹಳ ಇದೆ.

ಪಾ.ವೆಂ. ಆಚಾರ್ಯ
ಜೂನ್ ೧೯೮೦.

2 comments:

Anonymous said...

very meaningful blog maan! I should say that case was well argued. I could hardly find any loop holes!
--------------------
http://quillpad.in/kannada/
The one true Indian site to Offer Kannada language solutions with middle english options.
Fast, Reliable and comfortable! Intuitive! :-)

Unknown said...

very good article. I never knew that Pa.vem would be so practical and truthful. Thanks for this article.