ತಂದೆಯವರು ‘ಉದಯರವಿ’ ಮನೆಬಿಟ್ಟು ಎಲ್ಲಿಯೂ ಹೊರಗೆ ಹೋಗಲು ಇಷ್ಟಪಡುತ್ತಿರಲಿಲ್ಲ. ಅವರದು ಸ್ಥಾವರ ಪ್ರಕೃತಿ. ನಿವೃತ್ತಿ ಜೀವನದಲ್ಲಿ ಕಾಲವನ್ನು ಅಧ್ಯಯನ, ಓದು, ಬರವಣಿಗೆಯಲ್ಲಿ ಮತ್ತು ಮೊಮ್ಮಕ್ಕಳ ಸಂಗ, ಸಹವಾಸದಲ್ಲಿ ಆನಂದದಿಂದ ಕಳೆಯುತ್ತಿದ್ದರು. ಅವರನ್ನು ಹೊರಗಡೆ ನಡೆಯುವ ಸಭೆ ಸಮಾರಂಭ ಮುಂತಾದ ಕಾರ್ಯಕ್ರಮಕ್ಕೆ ಆಹ್ವಾನಿಸುವುದೂ, ಒಪ್ಪಿಸುವುದೂ ಕಷ್ಟದ ಕೆಲಸವೇ ಆಗಿತ್ತು. ಆದರೂ ಅನೇಕ ಜನಗಳು ಯಾವಾಗಲೂ ಅವರನ್ನು ಆಹ್ವಾನಿಸುವ ಆ ಉದ್ದೇಶದಿಂದ ಅವರನ್ನು ನೋಡಲು ಮನೆಗೆ ಬರುತ್ತಿದ್ದರು. “ನಾನು ಕುಟೀಚಕ, ಆದರೂ ಭಗವಂತನು ಮನೆಯ ಬಾಗಿಲಿಗೆ ಎಲ್ಲಾ ರೀತಿಯ ಜನರ ಪರಿಚಯ ಮಾಡಿಸಲು ಕಳುಹಿಸುವನು” ಎಂದು ಅವರು ಹೇಳುತ್ತಿದ್ದರು.
ತಂದೆಯವರ ದಿನಚರಿ ಕಾಲಕಾಲಕ್ಕೆ ಅನುಗುಣವಾಗಿ ಬದಲಾವಣೆ ಹೊಂದುತ್ತಿತ್ತು. ಬೇಗ ಕತ್ತಲು ಆವರಿಸುತ್ತಿದ್ದ ಚಳಿಗಾಲದ ದಿನಗಳಲ್ಲಿ ತಂದೆಯವರು ಸಂಜೆಯ ವಾಯುಸಂಚಾರ ಅರ್ಧಗಂಟೆ ಮುಂಚಿತವಾಗಿಯೇ ಮುಗಿಸುತ್ತಿದ್ದರು. ಅಂದು ಸಂಜೆ ಆಗತಾನೆ ಸಂಚಾರ ಮುಗಿಸಿ ಬಂದು ಎದುರು ವರಾಂಡದ ತಮ್ಮ ದೊಡ್ಡ ಸೋಫಾ ಮೇಲೆ ಕುಳಿತಿದ್ದರು. ಮುಸ್ಸಂಜೆ ಸಮಯ. ಬಿಳಿಬಟ್ಟೆ, ತೊಟ್ಟ ಒಬ್ಬ ಪಾದ್ರಿ ಮನೆಗೆ ಬಂದರು. ವರಾಂಡದ ಬಾಗಿಲು ತೆರೆದಿತ್ತು. ಪಾದ್ರಿ ಮೆಟ್ಟಿಲು ಹತ್ತಿ ವರಾಂಡ ಪ್ರವೇಶಿಸಿದೊಡನೆ ತಂದೆಯವರು ‘ಯಾರು ಏನುಬೇಕು?’ ಎಂದು ವಿಚಾರಿಸಿದರು. ‘ನಿಮ್ಮನ್ನು ನೋಡಲು ಬಂದೆ’ ಎಂದು ಹೇಳಿ ಪಾದ್ರಿ ನಮಸ್ಕರಿಸಿದರು. ತಂದೆಯವರು ಪ್ರತಿ ನಮಸ್ಕಾರದೊಡನೆ ಎದುರಿನ ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೇಳಿದರು. ಪಾದ್ರಿ ಕುರ್ಚಿಯಲ್ಲಿ ಕುಳಿತರು.
ಪಾದ್ರಿಗೆ ಮಧ್ಯವಯಸ್ಸು ಮೀರಿರಲಿಲ್ಲ. ಯಾವುದೋ ಕ್ರೈಸ್ತ ಸಂಸ್ಥೆ ಅವರನ್ನು ಮತಪ್ರಚಾರಕ್ಕೆ ಕಳುಹಿಸಿದೆ. ದೊಡ್ಡಮನೆ ನೋಡಿ ಬಂದಿರಬಹುದು. ಯಾರ ಮನೆಯೆಂದು ಗೊತ್ತಿಲ್ಲ. ಗೊತ್ತಾಗಿದ್ದರೆ ಬಹುಶಃ ಒಳಗೆ ಪ್ರವೇಶಿಸಲು ಧೈರ್ಯವಾಗುತ್ತಿರಲಿಲ್ಲವೇನೋ. ತಂದೆಯವರು ಏನು ವಿಚಾರ? ಏನು ಬೇಕು? ಎಂದು ಕೇಳಿದ ತಕ್ಷಣವೇ ಅವರಿಗೆ ಬಾಯಿಪಾಠ ಮಾಡಿಸಿದ ಏಸುವಿನ ವಿಚಾರ ಹೇಳಲು ಪ್ರಾರಂಭಿಸಿದರು.
ತಂದೆಯವರಿಗೆ ಅರ್ಥವಾಯಿತು ಪಾದ್ರಿ ಬಂದ ಉದ್ದೇಶ. ಇಂತಹ ಎಷ್ಟೋ ಮತ ಪ್ರಚಾರಕರನ್ನು ಅವರು ನೋಡಿದ್ದರು. ಸ್ವಲ್ಪ ಹೊತ್ತು ಸುಮ್ಮನಿದ್ದರು. ಪಾದ್ರಿ ಮಾತು ನಿಲ್ಲಿಸಿದ ಮೇಲೆ ತಂದೆಯವರ ವಾಕ್ ಪ್ರವಾಹ ಪ್ರಾರಂಭವಾಯಿತು.
“ಏತಕ್ಕಾಗಿ ಇನ್ನೂ ಈಗಿನ ಕಾಲದಲ್ಲಿ ಈ ರೀತಿ ಮತಪ್ರಚಾರ ಮಾಡುವಿರಿ? ಈ ಕಾಲದಲ್ಲಿ ಎಲ್ಲರೂ ವಿದ್ಯಾಭ್ಯಾಸ ಪಡೆದು ಅವರವರಿಗೆ ಬೇಕಾದ ದೃಷ್ಟಿ ಅವರವರು ಬೆಳೆಸಿಕೊಳ್ಳುತ್ತಾರೆ. ಏಸು ಕ್ರಿಸ್ತ ಎಲ್ಲರನ್ನೂ ತಮ್ಮ ಮತಕ್ಕೆ ಸೇರಿಸಿ ಎಂದು ಹೇಳಿರುವನಾ? ಅವನು ಎಷ್ಟು ಉದಾತ್ತ ಭಾವನೆಗಳನ್ನು ಹೇಳಿರುವನು. ಅದನ್ನಾದರೂ ಓದಿರುವಿರಾ? ಇದೆನ್ನೆಲ್ಲಾ ನನಗೆ ಹೇಳಲು ಬಂದಿರುವಿರಾ? ನಾನು ಓದಿರುವುದರಲ್ಲಿ ಕಾಲು ಅಂಶವಾದರೂ ನೀವು ಓದಿರುವಿರಾ? ಎಲ್ಲಾ ಪಂಗಡಗಳ, ಜಾತಿ ಧರ್ಮದ ಕಚ್ಚಾಟ ಹೋಗಲಾಡಿಸಲೇ ಶ್ರೀ ರಾಮಕೃಷ್ಣರು ಈ ಯುಗದಲ್ಲಿ ಬಂದಿದ್ದು. ಅವರ ವಿಚಾರವಾಗಿ ನಿಮಗೇನಾದರೂ ತಿಳಿದಿದೆಯೇ? ವಿವೇಕಾನಂದರು ಷಿಕಾಗೋದಲ್ಲಿ ಭಾಷಣ ಮಾಡಿದ್ದು ಗೊತ್ತಿದೆಯೇ? ಅವರನ್ನು ಇಡೀ ಪ್ರಪಂಚವೇ ಕೊಂಡಾಡಿರುವುದು ನಿಮಗೂ ಗೊತ್ತಿರಬೇಕು ಅಲ್ಲವೆ ಈಗ ಜನಕ್ಕೆ ಬೇಕಾಗಿರುವುದು ಉತ್ತಮ ಬದುಕು, ಉದಾತ್ತ ತತ್ವಗಳು, ಮನುಜಮತ ಮತ್ತು ವಿಶ್ವಪಥ. ಮತಾಂತರವಲ್ಲ. ಬರೀ ಬಾಯಲ್ಲಿ ಹೇಳುತ್ತಾ ಹೋದರೆ ಏನು ಪ್ರಯೋಜನ? ಸ್ವಲ್ಪವಾದರೂ ಏಸು ಹೇಳಿದ ಕೆಲಸವನ್ನಾದರೂ ಮಾಡಿರುವಿರಾ? ನನಗೆ ಉಪದೇಶ ಕೊಡುವ ಅಗತ್ಯವಿಲ್ಲ. ನೀವು ಶ್ರೀ ರಾಮಕೃಷ್ಣ ವಿವೇಕಾನಂದರ ಸಾಹಿತ್ಯ ಓದಿ ವಿಶಾಲ ಮನಸ್ಸು, ಒಳ್ಳೆಯ ಭಾವನೆಗಳನ್ನು ಬೆಳೆಸಿಕೊಳ್ಳಿ. ಇಲ್ಲೇ ಹತ್ತಿರದಲ್ಲಿ ರಾಮಕೃಷ್ಣ ಆಶ್ರಮ ಇದೆ. ಅಲ್ಲಿಗೆ ಹೋಗಿ, ಪುಸ್ತಕ ವಿಭಾಗದಲ್ಲಿ ಪುಸ್ತಕಗಳು ಮಾರಾಟಕ್ಕೆ ದೊರೆಯುತ್ತದೆ ನಿಮಗೆ ಬೇಕಾದ ಪುಸ್ತಕ ತೆಗೆದುಕೊಂಡು ಓದಿ, ನಿಮ್ಮ ಮನಸ್ಸು, ಹೃದಯ ವಿಶಾಲ ಮಾಡಿಕೊಳ್ಳಿ. ವಿಶ್ವಮಾನವರಾಗಿ. ನನ್ನ ವಿಶ್ವಮಾನವ ಸಂದೇಶವನ್ನು ಕೊಡುವೆನು ಓದಿ ವೈಚಾರಿಕ ಬುದ್ಧಿ ಬೆಳೆಸಿಕೊಳ್ಳಿ. ಹುಟ್ಟುತ್ತಲೇ ಎಲ್ಲರೂ ವಿಶ್ವಮಾನವರು. ಬೆಳೆಯುತ್ತಾ ನಾವೇ ಅವರನ್ನು ಅಲ್ಪಮಾನವರನ್ನಾಗಿ ಮಾಡುತ್ತೇವೆ. ಜಾತಿ, ಮತ, ವರ್ಗ, ಪಂಗಡ ಎಂದು ಹೊಡೆದಾಡುವುದು, ಬಡಿದಾಡುವುದು ಜಾಸ್ತಿಯಾಗುತ್ತಿದೆ. ಈ ಅಲ್ಪಮಾನವನನ್ನು ವಿಶ್ವಮಾನವನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯ” ಎಂದು ಹೇಳಿ ‘ವಿಶ್ವಮಾನವ ಸಂದೇಶ’ದ ಬಗ್ಗೆಯೂ ಆ ಪಾದ್ರಿಗೆ ಮಾತಾಡಲು ಅವಕಾಶವಿಲ್ಲದಂತೆ ಸಾಕಷ್ಟು ವಿವರಿಸಿದರು. ಪಾದ್ರಿಯೂ ಕಂಗಾಲಾಗಿ ಏನೂ ಮಾತಾಡಲು ತೋಚದೆ ಸುಮ್ಮನೆ ಕುಳಿತಿದ್ದರು.
ತಂದೆಯವರು ತಾವು ಅಚ್ಚು ಹಾಕಿಸಿರುವ ‘ವಿಶ್ವಮಾನವ ಸಂದೇಶ’ದ ಪತ್ರಿಕೆ ಕೊಟ್ಟು “ಓದಿ ನೋಡಿ, ನಮ್ಮ ರಾಮಕೃಷ್ಣರು ನಿಮ್ಮ ಏಸು, ಮೊಹಮೊದ್, ರಾಮ, ಬುದ್ಧ, ಕೃಷ್ಣ ಎಲ್ಲರನ್ನೂ ಜೀರ್ಣಿಸಿಕೊಂಡಿದ್ದಾರೆ. ಎಲ್ಲರ ಒಳ್ಳೆಯ ಭಾವನೆಯನ್ನು ತೆಗೆದುಕೊಂಡಿದ್ದಾರೆ. ಎಲ್ಲ ರೀತಿಯ ಸಾಧನೆಯಿಂದ ಅನುಭವ ಪಡೆದಿರುವರು” ಮುಂತಾಗಿ ಹೇಳಿದರು. ಆದರೆ ಪಾದ್ರಿಗೆ ಅರ್ಥವಾದಂತೆ ಕಾಣಲಿಲ್ಲ. ಪಾದ್ರಿ ಮಾತಿಲ್ಲದೆ ಎದ್ದು ಅಸಮಾಧಾನವಾದಂತೆ ತಂದೆಯವರು ಕೊಟ್ಟ ವಿಶ್ವಮಾನವ ಸಂದೇಶ ತೆಗೆದುಕೊಂಡು ವೇಗವಾಗಿ ಮೆಟ್ಟಲಿಳಿದು ಹೋದರು. ಅಷ್ಟರಲ್ಲಿ ಪೂರ್ತಿ ಕತ್ತಲೆ ಆವರಿಸಿತ್ತು. ಪಾದ್ರಿ ಹೋದ ನಂತರ ತಂದೆಯವರು ನಗುತ್ತಾ “ಇನ್ನೂ ಅಂದಿನ ಕತೆ ಇವರು ಬಿಟ್ಟಿಲ್ಲ. ನಿಮ್ಮ ಕೃಷ್ಣ ಬೆಣ್ಣೆ ಕದ್ದ, ನಮ್ಮ ಏಸು ಏನು ಮಾಡಿದ? ನೀವೆಲ್ಲಾ ಕುರಿಗಳು ನಮ್ಮ ಯೇಸು ಕುರುಬ ಎಂದು ಹೇಳುತ್ತಿದ್ದಾರೆ. ಪಾಪ ಪಾದ್ರಿ ಏನು ಮಾಡುವನು? ಮೇಲಿನವರು ಹೇಳಿಕೊಟ್ಟದ್ದು ಬಾಯಿಪಾಠಮಾಡಿ ಒಪ್ಪಿಸಿ ಹೋಗುವನು ಅಷ್ಟೆ” ಎಂದರು.
ಮಾರನೆಯ ದಿನ ಬೆಳಗ್ಗೆ ತಂದೆಯವರ ದಿನಚರಿಯಂತೆ ಐದೂವರೆ ಗಂಟೆಗೆ ಎದ್ದು ವಾಯು ಸಂಚಾರಕ್ಕೆ ಹೊರಟರು. (ಚಳಿಗಾಲದ ದಿನವಾದ್ದರಿಂದ ಇನ್ನೂ ಕತ್ತಲೆ ಇತ್ತು) ಹೊರಹೋಗಿ ಗೇಟು ತೆರೆಯಲು ನೋಡಿದಾಗ ಮನೆಯೊಳಗೆ ಗೇಟಿನ ಹತ್ತಿರ ಇರುವ ಗಿಡದ ಮೇಲೆ, ಸಂದಿಯಲ್ಲಿ ಒಂದು ದೊಡ್ಡ ಕಾಗದ ಬಿದ್ದಿರುವುದು ಕಾಣಿಸಿತು. ಕಾಗದ ತೆಗೆದುಕೊಂಡು ಮಡಚಿ ಜೇಬಿಗೆ ಇಟ್ಟುಕೊಂಡರು. ಕೆಲವು ಸಂದರ್ಭದಲ್ಲಿ ಯಾರಾದರು ಆಹ್ವಾನ ಪತ್ರಿಕೆ, ಇತ್ಯಾದಿಗಳನ್ನು ಮನೆ ಒಳಗೆ ಬಂದು ಕೊಡಲಾಗದೆ ಗೇಟಿನ ಒಳಗೆ ಎಸೆದು ಹೋಗುತ್ತಿದ್ದರು. ಏಕೆಂದರೆ ನಮ್ಮ ನಾಯಿ ಬಿಟ್ಟಿದ್ದರೆ ಅದು ಕಾಂಪೌಂಡ್ ಒಳಗೆ ಓಡಾಡುವುದು, ಬೊಗಳುವುದು ನೋಡಿ, ಒಳಗೆ ಬಂದರೆ ಅಪಾಯವೆಂದು ಕೆಲವರು ಗೇಟಿನ ಹತ್ತಿರವೇ ಎಸೆದು ಹೋಗುತ್ತಿದ್ದರು. ತಂದೆಯವರು ಅಂತಹುದೇ ಒಂದು ಕಾಗದ ಇರಬಹುದು ಎಂದು ಸಂಚಾರ ಮುಗಿಸಿ ನಂತರ ನೋಡೋಣ ಎಂದು ಜೇಬಿಗೆ ಹಾಕಿಕೊಂಡು ಹೊರಟರು. ಓದಲು ಕನ್ನಡಕವೂ ಇರಲಿಲ್ಲ. ಬೆಳಗಿನ ಸಂಚಾರ ಮುಗಿಸಿ ಏಳು ಗಂಟೆಗೆ ಮನೆಗೆ ಹಿಂದಿರುಗಿದರು. ಮನೆಗೆ ಬಂದ ನಂತರ ಚಪ್ಪಲಿಬಿಟ್ಟು ಹಾಲಿನಲ್ಲಿ ಕುಳಿತು ನಮ್ಮೆಲ್ಲರ ಎದುರಿಗೆ “ಬೆಳಗ್ಗೆ ಏನೋ ಕಾಗದವೊಂದು ಗೇಟಿನ ಹತ್ತಿರ ಬಿದ್ದಿತ್ತು” ಎಂದು ಜೇಬಿನಿಂದ ತೆಗೆಯುತ್ತಾ, “ನನ್ನ ಕನ್ನಡಕ ತಂದು ಕೊಡಕ್ಕಾ ಓದಿ ನೋಡುವೆ” ಎಂದರು. ಅಲ್ಲೇ ನಿಂತಿದ್ದ ನಾನು ಕನ್ನಡಕ ತಂದುಕೊಟ್ಟೆನು. ಕನ್ನಡಕ ಹಾಕಿ ನೋಡುತ್ತಾರೆ ಹಿಂದಿನ ದಿನ ಆ ಪಾದ್ರಿಗೆ ಕೊಟ್ಟಿದ್ದ ‘ವಿಶ್ವಮಾನವ ಸಂದೇಶ’ ಪತ್ರಿಕೆ ! ಇದೆಲ್ಲ ನೋಡುತ್ತಾ ನಿಂತಿದ್ದ ಮೊಮ್ಮಕ್ಕಳು “ಇದೇನು ಅಜ್ಜಯ್ಯ ನಿಮ್ಮ ವಿಶ್ವಮಾನವ ಸಂದೇಶ ಇದು. ಈ ಮೇಜಿನ ಮೇಲೆ ಇಟ್ಟಿರುವುದನ್ನು ಅಲ್ಲಿ ಯಾರು ಬಿಸಾಕಿದ್ದು? ಯಾರು ನಿಮ್ಮನ್ನು ಕೇಳದೆ ಇದನ್ನು ಮುಟ್ಟಿದ್ದು?” ಎಂದರು.
ವಿಶ್ವಮಾನವ ಸಂದೇಶ ತಂದೆಯವರು ಕೊಟ್ಟಾಗ ಪಾದ್ರಿ ತೆಗೆದುಕೊಂಡು ಹೋಗಿ, ನಂತರ ಗೇಟಿನಿಂದ ಹೊರಹೋಗುವಾಗ, ಗೇಟಿನ ಒಳಗೆ ಎಸೆದು ಹೋಗಿರುವುದು. ರಾತ್ರಿ ತಂದೆಯವರ ಗಮನಕ್ಕೂ ಅದು ಬಂದಿತ್ತು. ಹೊರಹೋಗಿದ್ದ ಪಾದ್ರಿ ಕೈ ಏನನ್ನೋ ಮನೆಯೊಳಗೆ ಎಸೆದಂತೆ ಕಾಣಿಸಿತಂತೆ. ಕತ್ತಲೆಯಾದ್ದರಿಂದ ತಂದೆಯವರಿಗೆ ಸ್ಪಷ್ಟವಾಗಿ ಪಾದ್ರಿ ಏನು ಮಾಡಿದರು ಎಂದು ಗೊತ್ತಾಗಲಿಲ್ಲ. ತಂದೆಯವರಿಗೆ ಏನೋ ಹಾಗೆ ಕಂಡಿರಬಹುದು ಎಂದು ಸುಮ್ಮನಾದರಂತೆ. ಬೆಳಗ್ಗೆ ಗೊತ್ತಾಯಿತು ಅವರು ಎಸೆದಿರುವುದು ಏನು ಎಂದು. ಅದನ್ನು ನೋಡಿ “ಅಯ್ಯೋ ಪಾಪ, ಪಾದ್ರಿ ತಾನು ಅಲ್ಪಮಾನವ ಅನ್ನುವುದನ್ನು ಪೂರ್ತಿ ಸಾಬೀತುಪಡಿಸಿದ. ಅದರಲ್ಲಿ ಏನಿದೆ ಎಂದು ನೋಡುವಷ್ಟು ದೊಡ್ಡತನವಿಲ್ಲ ದವರು. ಕ್ರೈಸ್ತಮತ ಪ್ರಚಾರಕ್ಕೆ ಕೈಹಾಕಿದ್ದಾರೆ. ಪಾಪ ಆತನ ಅಲ್ಪಮತಿಗೆ ಭಾರತೀಯ ದರ್ಶನಗಳ ಅರಿವೂ ಇಲ್ಲ. ಆ ಮರಿ ಕ್ರೈಸ್ತನ ಮತಭ್ರಾಂತಿಗೆ ಇದೆಲ್ಲಾ ಎಲ್ಲಿ ಹಿಡಿಸುತ್ತದೆ? ಹೊಟ್ಟೆ ಪಾಡಿಗೆ ಪಾದ್ರಿಯಾಗಿರುವರೇನೋ, ಏನು ಕೆಲಸ ಮಾಡುವರೋ ಆ ಯೇಸುವಿಗೇ ಗೊತ್ತು !” ಎಂದು ನಕ್ಕರು. ಅವರ ನಗುವಿನೊಡನೆ ಮೊಮ್ಮಕ್ಕಳೂ ಸೇರಿದರು. “ಅವರಿಗೆ ಬೇಡದಿದ್ದರೆ ಇನ್ಯಾರಿಗಾದರೂ ಕೊಡಬಹುದಿತ್ತು. ಸದ್ಯ ಹರಿದು ಎಸೆಯಲಿಲ್ಲವಲ್ಲಾ, ಮನೆಯೊಳಗೆ ಹಾಕಿ ಹೋದರು” ಎಂದು ವಿಶ್ವಮಾನವ ಸಂದೇಶದ ಕಾಗದ ತೆಗೆದುಕೊಂಡು ಮುದುರಿದ ಕಾಗದ ಬಿಚ್ಚಿ ಚೆನ್ನಾಗಿ ಮಡಿಕೆಯೆಲ್ಲಾ ಹೋಗುವಂತೆ ಉಜ್ಜಿ, ಸರಿಪಡಿಸಿ ಅಚ್ಚುಕಟ್ಟು ಮಾಡಿ ಅವರ ಮೇಜಿನ ಮೇಲೆ ಉಳಿದ ವಿಶ್ವಮಾನವ ಸಂದೇಶ ಪತ್ರಿಕೆಗಳ ಜತೆಗೆ ಜೋಡಿಸಿ ಇಟ್ಟರು. “ಸರಿ ಈಗ ನನಗೆ ತುಂಬಾ ಹಸಿವಾಗುತ್ತಿದೆ. ಎಲ್ಲರೂ ಬನ್ನಿ, ಎಲ್ಲರೂ ಬನ್ನಿ ಕಾಫಿ ಕುಡಿಯೋಣ” ಎಂದು ಎದ್ದು ಊಟದ ಮನೆ ಕಡೆ ಹೊರಟರು. ಮೊಮ್ಮಕ್ಕಳು ನಗುತ್ತಾ, “ಅಜ್ಜಯ್ಯ ಬಿಸಾಡುವ ಜನಗಳಿಗೆ ಇನ್ನು ಮುಂದೆ ವಿಶ್ವಮಾನವ ಸಂದೇಶ ಕೊಡಬೇಡಿ” ಎಂದು ಹೇಳುತ್ತಾ ಅಜ್ಜಯ್ಯನೊಡನೆ ತಿಂಡಿ ತಿನ್ನಲು ಅವರನ್ನು ಹಿಂಬಾಲಿಸಿದರು.
-ತಾರಿಣಿ ಚಿದಾನಂದ (ಕುವೆಂಪು ಮಗಳು), ಮೈಸೂರು
(ವಿಜಯ ಕರ್ನಾಟಕ, ನವಂಬರ್ ೧೧, ೨೦೦೮)
Subscribe to:
Post Comments (Atom)
4 comments:
ಇಲ್ಲಿದೆ ಸತ್ಯ: http://suddimaatu.blogspot.com/2008/11/blog-post_12.html
ಪಾದ್ರಿಗಳು ಕುವೆಂಪೂನೂ ಬಿಡಲಿಲ್ಲ! ಓದಲು ತಮಾಶಿಯಾಗಿದೆ :)
vijaya karnataka davaru kaddu bareda ee lekhanada bagge 18.11.2008 ra vi.ka. dalli spashtane ide nODi.
ವಿ.ಕ.ದವ್ರು ಲೇಖನ ಪರ್ಮಿಶನ್ ಇಲ್ದೆ ಹಾಕಿದ್ರೊ ಬಿಟ್ರೊ ಅದು ಬೇರೆ ವಿಶಯ. ಇಲ್ಲಿ ಮುಖ್ಯವಾದ್ದು ಪಾದ್ರಿ ಕುವೆಂಪೂನೂ ಮತಾಂತರ ಮಾಡಕ್ಕೆ ಪ್ರಯತ್ನಪಟ್ಟಿದ್ದು.
Post a Comment