
ವಿಶ್ವೇಶ್ವರ ಭಟ್:
ಪತ್ರಕರ್ತ ಚೋ.ರಾಮಸ್ವಾಮಿ ಹೇಳುತ್ತಿದ್ದರು, `ನಮ್ಮ ರಾಜಕಾರಣಿಗಳು ಎಂಥ ನೀಚ ಮಟ್ಟಕ್ಕೆ ಬೇಕಾದರೂ ಹೋಗಲೂ ಹೇಸದವರು. ಅದಕ್ಕೆ ಭಾರತದ ರಾಜಕಾರಣದಲ್ಲಿ ಅಸಂಖ್ಯಉದಾಹರಣೆಗಳು ಸಿಗುತ್ತವೆ. ಗಡಿಯಲ್ಲಿನ ನಮ್ಮ ಬೇಹುಗಾರನ ಸುಳಿವನ್ನು ಶತ್ರು ದೇಶದ ಸೈನಿಕರಿಗೆ ಹೇಳುವುದರಿಂದ ಹಿಡಿದು ರಕ್ಷಣೆ, ಬಾಹ್ಯಾಕಾಶ, ಅಣುಸ್ಥಾವರ, ದೇಶದ ಭದ್ರತೆಗೆ ಸಂಬಂಸಿದ ಅಮೂಲ್ಯ, ಸೂಕ್ಷ್ಮ ಮಾಹಿತಿಯನ್ನು ಸಹಾ ಮಾರಾಟಕ್ಕಿಡಬಲ್ಲರು. ತಮ್ಮ ಸ್ವಾರ್ಥಕ್ಕಾಗಿ ದೇಶವನ್ನೇ ಮಾರಾಟ ಮಾಡುವ ಸಂದರ್ಭ ಬಂದರೆ, ಚೌಕಾಶಿ ಮಾತುಕತೆಗೆ ಕುಳಿತುಕೊಳ್ಳಬಲ್ಲರು'. ಚೋ ಏರಿದ ದನಿಯಲ್ಲಿ ಪಟಾಕಿಸರಕ್ಕೆ ಬೆಂಕಿಯಿಟ್ಟವರಂತೆ ಸಡಸಡ ಮಾತಾಡುವಾಗ ವಿಷಯವನ್ನು ಉತ್ಪ್ರೇಕ್ಷಿಸಬಹುದೇನೋ ಎಂದೆನಿಸುತ್ತದೆ. ಆಗ ಅವರು ಹೇಳುತ್ತಿದ್ದರು -ನಾನು ಹೀಗೆ ಮಾತಾಡಿದರೆ ನಿಮಗೆ ಅನಿಸುತ್ತದೆ ಈ ಚೋ.ರಾಮಸ್ವಾಮಿಗೆ ಬುದ್ಧಿಯಿಲ್ಲ. ಬಾಯಿಗೆ ಬಂದಿದ್ದನ್ನೆಲ್ಲ ಹೇಳುತ್ತಾನೆ. ರಾಜಕಾರಣಿಗಳನ್ನು ಹೀನಾಯಮಾನವಾಗಿ ಬೈಯುತ್ತಾನೆ ಅಂತ ಒಳಗೊಳಗೆ ಅಂದುಕೊಳ್ಳುತ್ತಾರೆ. ನನ್ನ ಮಾತಿನ ಮರ್ಮ ತಕ್ಷಣ ಅವರಿಗೆ ಅರ್ಥವಾಗದಿರಬಹುದು. ಆದರೆ ನನ್ನ ಮಾತು ಅವರಿಗೆ ಅರ್ಥವಾಗಲು ಹೆಚ್ಚು ದಿನ ಬೇಕಾಗುವುದಿಲ್ಲ.
ಯಾಕೋ ಎಂದೋ ಹೇಳಿದ ಚೋ ಮಾತು ಮನಸ್ಸಿನ ಮುಂದೆ ಹಾದು ಹೋಯಿತು.
`ವಂದೇ ಮಾತಾರಂ' ಕುರಿತು ಎದ್ದಿರುವ ವಿವಾದವನ್ನೇ ನೋಡಿ. ನಮ್ಮ ಸ್ವಾರ್ಥ ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಹೋಗಬಲ್ಲರೆಂಬುದಕ್ಕೆ ನಿದರ್ಶನ. ವೋಟ್ಬ್ಯಾಂಕ್ ರಾಜಕಾರಣದ ಮುಂದೆ ನಮ್ಮ ದೇಶ, ದೇಶಗೀತೆ, ಧ್ಯೇಯ, ಮೌಲ್ಯ, ದೇಶಹಿತ ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಧ್ಯೇಯದೀವಿಗೆಯಾಗಿ ಅಸಂಖ್ಯ ಭಾರತೀಯರ ಅಪದಮನಿ, ಅಭಿದಮನಿಗಳಲ್ಲಿ ಸೂರ್ತಿ ಕಾರಂಜಿ ಸೃಜಿಸಿದ ಗೀತೆ -`ವಂದೇ ಮಾತರಂ' ಸಹ ರಾಜಕಾರಣಿಗಳ ಕೈಯಲ್ಲಿ ಹೇಗೆ ದಾಳವಾಗುತ್ತದೆ ನೋಡಿ.
`ವಂದೇ ಮಾತರಂ' ವಿವಾದ ಆರಂಭವಾಗುವುದು ಹೀಗೆ.

ಯಾವಾಗ ಮುಲಾಯಂ ಸಿಂಗ್ ಯಾದವ್ರ ಸುತ್ತೋಲೆ ಹೊರಬಿತ್ತೋ, ಉತ್ತರ ಪ್ರದೇಶದ ಮುಸ್ಲಿಂ ಸಮುದಾಯದ ಹಿರಿಯರು, ಧರ್ಮಗುರುಗಳು, ಮೌಲ್ವಿಗಳು ರಾತ್ರೋ ರಾತ್ರಿ ಸಭೆ ಸೇರಿದರು. ವಂದೇ ಮಾತರಂ ವಿರುದ್ಧ ದನಿಎತ್ತಲು ನಿರ್ಧರಿಸಿದರು. ಪ್ರಮುಖ ಇಸ್ಲಾಮಿಕ್ ಸಂಘಟನೆಗಳ ಪೈಕಿ ಒಂದಾದ ಫಿರಂಗಿ ಮಹಲ್ ಅಧ್ಯಕ್ಷ ಮೌಲಾನ ಖಲೀದ್ ರಶೀದ್ ಹೇಳಿದರು -`ಮುಸ್ಲಿಂ ವಿದ್ಯಾರ್ಥಿಗಳು ವಂದೇಮಾತರಂ ಹಾಡುವುದು ಇಸ್ಲಾಂ ವಿರೋ. ನಮ್ಮ ಸಮುದಾಯದವರ್ಯಾರೂ ಇದನ್ನು ಹಾಡಬಾರದು. ವಂದೇಮಾತರಂ ಹಾಡಿದರೆ ಇಸ್ಲಾಮ್ಗೆ ಅವಹೇಳನ ಮಾಡಿದ ಹಾಗೆ. ಸೆಪ್ಟೆಂಬರ್ ೭ರಂದು ಮುಸ್ಲಿಂ ವಿದ್ಯಾರ್ಥಿಗಳು ಇದನ್ನು ಹಾಡಕೂಡದೆಂದು ನಾನು ಕರೆ ಕೊಡುತ್ತೇನೆ.'
ದಿಲ್ಲಿಯ ಜಮಾ ಮಸೀದಿ ಶಾಹಿ ಇಮಾಮ್ ಸಯ್ಯದ್ ಅಹಮದ್ ಬುಖಾರಿ ಮಿಂಚಿನಂತೆ ಕಾರ್ಯಪ್ರವೃತ್ತರಾದರು. ತಕ್ಷಣ ತಮ್ಮ ಬೆಂಬಲಿಗರೊಂದಿಗೆ ಮುಸ್ಲಿಂ ಸಮುದಾಯದ ಹಿರಿಯರೊಂದಿಗೆ ಸಭೆ ಸೇರಿ ಅನಂತರ ಕರೆ ಕೊಟ್ಟರು -`ವಂದೇಮಾತರಂನ್ನು ಯಾವ ಕಾರಣಕ್ಕೂ ಹಾಡಕೂಡದು. ಅದು ಇಸ್ಲಾಮಿನ ನಂಬಿಕೆಗಳಿಗೆ ವಿರುದ್ಧವಾಗಿದೆ. ಒಂದು ವೇಳೆ ವಂದೇ ಮಾತರಂನ್ನು ಹಾಡಲೇ ಬೇಕೆಂಬ ಒತ್ತಡ ಹೇರುವುದೆಂದರೆ ನಮ್ಮ ಸಮುದಾಯವನ್ನು ತುಳಿದಂತೆ. ಇಸ್ಲಾಂ ಪ್ರಕಾರ ಒಬ್ಬನು ತನ್ನ ದೇಶವನ್ನು ಪ್ರೀತಿಸುವುದು, ಗೌರವಿಸುವುದು ತಪ್ಪಲ್ಲ. ಅಷ್ಟೇ ಅಲ್ಲ ಸಂದರ್ಭ ಬಂದರೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಬಹುದು. ಆದರೆ ಯಾರನ್ನಾದರೂ ಪೂಜಿಸುವ ಪ್ರಶ್ನೆ ಎದುರಾದರೆ, ಅಲ್ಲಾಹನನ್ನು ಮಾತ್ರ ಪೂಜಿಸಬೇಕು. ಮುಸ್ಲಿಮನಾದವನು ತನ್ನ ತಂದೆ, ತಾಯಿ, ಮಾತೃಭೂಮಿ ಹಾಗೂ ಪ್ರವಾದಿಯನ್ನು ಉನ್ನತ ಸ್ಥಾನದಲ್ಲಿರಿಸಿ ಗೌರವಿಸಿದರೂ, ಇವರೆಲ್ಲರನ್ನೂ ಪೂಜಿಸುವಂತಿಲ್ಲ. ಸ್ವಾತಂತ್ರ್ಯ ನಂತರದಿಂದ ಕೇಂದ್ರದ ಹಾಗೂ ರಾಜ್ಯಗಳ ಎಲ್ಲ ಸರ್ಕಾರಗಳು ಮುಸ್ಲಿಮರನ್ನು ತುಳಿಯುತ್ತಿವೆ. ವಂದೇಮಾತರಂ ಹಾಡಬೇಕೆಂಬ ಸುತ್ತೋಲೆ ಈ ದಿಸೆಯಲ್ಲಿ ಮುಸ್ಲಿಂ ಸಮುದಾಯದ ಮೇಲೆ ಎಸಗಿದ ಮತ್ತೊಂದು ಗದಾಪ್ರಹಾರ. ಸ್ವಯಂಪ್ರೇರಿತರಾಗಿ ಯಾರಾದರೂ ಹಾಡುವುದಾದರೆ ನನ್ನ ಆಕ್ಷೇಪವಿಲ್ಲ. ಆದರೆ ಹಾಡಲೇ ಬೇಕೆಂಬ Pಕ್ಷಿಟ್ಟಳೆ, ಕಟ್ಟುಪಾಡು ವಿಸಿದರೆ, ಅದನ್ನು ಬಲವಾಗಿ ಪ್ರತಿಭಟಿಸಬೇಕಾದೀತಿ. ಇಂಥ ಸುತ್ತೋಲೆ ವಾಪಸ್ ಪಡೆಯುವಂತೆ ಸರಕಾರಕ್ಕೆ ಎಚ್ಚರಿಕೆ ನೀಡಬೇಕಾದೀತು. ದೇಶವನ್ನು ಪೂಜಿಸುವುದು ವಂದೇ ಮಾತರಂ ಉದ್ದೇಶ ಅಲ್ಲ. ಈ ಹಾಡಿನಲ್ಲಿ ದೇಶವನ್ನು ತಾಯಿಗೆ ಹೋಲಿಸಲಾಗಿದೆ ಹಾಗೂ ಜನರನ್ನು ಆಕೆಯ ಮಕ್ಕಳೆಂದು ಚಿತ್ರಿಸಲಾಗಿದೆ. ಈ ವಾದವನ್ನು ನಾವು ಒಪ್ಪುವುದಿಲ್ಲ. ಇದು ನಮ್ಮ ಧರ್ಮಕ್ಕೆ ವಿರೋಧವಾದುದು. '
ಅರ್ಜುನ್ ಸಿಂಗ್ ಸುತ್ತೋಲೆ ಕೇವಲ ೨೪ ಗಂಟೆಗಳಲ್ಲಿ ಮುಸ್ಲಿಂ ಸಮುದಾಯದಲ್ಲಿ ಅದೆಂಥ ಸಂಚಲನವನ್ನುಂಟು ಮಾಡಿತೆಂದರೆ, ದೇಶದೆಲ್ಲೆಡೆಯಿರುವ ಮುಸ್ಲಿಂ ಸಮುದಾಯದ ಮುಖಂಡರು ತಮ್ಮ ತಮ್ಮ ಊರುಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ, ವಂದೇ ಮಾತರಂನ್ನು ಹಾಡಬೇಕೆಂಬ ಪ್ರಸ್ತಾಪವನ್ನು ವಿರೋಸಿದರು.
ಅರ್ಜುನ್ ಸಿಂಗ್ ಮುಸ್ಲಿಂ ಸಮುದಾಯದ ಅಂತರಂಗ ತುಮುಲವೇನೆಂಬುದು ತಟ್ಟನೆ ಅರ್ಥವಾಯಿತು. ತಮ್ಮ ಮೊದಲಿನ ಆದೇಶದಿಂದ ದೇಶಾದ್ಯಂತವಿರುವ ಮುಸ್ಲಿಮರಿಗೆ ಅಸಮಾಧಾನವಾಗಿದೆಯೆಂದು ಮನವರಿಕೆಯಾಯಿತು. ಅದು ರಾಷ್ಟ್ರಗೀತೆಯ ವಿಚಾರವಾಗಿರಬಹುದು ಅಥವಾ ಇನ್ನಿತರ ಯಾವುದೇ ವಿಷಯವಾಗಿರಬಹುದು, ಅಲ್ಪಸಂಖ್ಯಾತರನ್ನು ಎದುರು ಹಾಕಿಕೊಳ್ಳುವುದುಂಟಾ? ಅರ್ಜುನ್ ಸಿಂಗ್ ಮತ್ತೊಂದು ಸುತ್ತೋಲೆ ಕಳಿಸಿದರು. ಅಂದು ಭಾನುವಾರ ಸರಕಾರಿ ಕಚೇರಿಗೆ ರಜೆಯಿದ್ದರೂ ತಮ್ಮ ಸಿಬ್ಬಂದಿಯನ್ನು ಕರೆದು ಆದೇಶ ಹೊರಡಿಸಿದರು. ವಾರಣಸಿಯಲ್ಲಿ ಪತ್ರಿಕಾಗೋಷ್ಠಿಯನ್ನೂ ಕರೆದರು -`ವಂದೇಮಾತರಂನ್ನು ಹಾಡಲೇಬೇಕೆಂಬ ಕಡ್ಡಾಯವಿಲ್ಲ. ಹಾಡಬಹುದು ಅಥವಾ ಬಿಡಬಹುದು' ಎಂದು ಬಿಟ್ಟರು.
ಆಗಲೇ ಮುಸ್ಲಿಂ ಸಮುದಾಯ ನಿಟ್ಟುಸಿರುಬಿಟ್ಟಿದ್ದು. ಅರ್ಜುನ್ಸಿಂಗ್ ಹೇಳಿದ್ದಕ್ಕೆ ಕಾಂಗ್ರೆಸ್ ಠಸ್ಸೆ ಒತ್ತಿತ್ತು. ಆ ಪಕ್ಷದ ವಕ್ತಾ ಅಭಿಷೇಕ್ ಮನು ಸಿಂಘ್ವಿ ಹೇಳಿದರು -`ನಮ್ಮ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರೇರಣೆ ಮೂಡಿಸಿದ, ದೇಶಕ್ಕಾಗಿ ಬಲಿದಾನಗೈದ ಅಸಂಖ್ಯ ಜನರಿಗೆ ಸೂರ್ತಿಯಾದ ವಂದೇಮಾತರಂ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಈ ರಾಷ್ಟ್ರಕ್ಕೆ ಅಪಾರ ಗೌರವವಿದೆ. ಆದರೂ ಯಾವುದೋ ಒಂದು ಸಮುದಾಯ ಅಥವಾ ಗುಂಪು ವಂದೇ ಮಾತರಂ ಹಾಡುವುದರ ಬಗ್ಗೆ ಬೇರೆ ರೀತಿ ಯೋಚಿಸಿದರೆ ಅವರು ಹಾಡಬಹುದು, ಇಲ್ಲವೇ ಬಿಡಬಹುದು. ಅದು ಅವರಿಗೆ ಬಿಟ್ಟ ವಿಚಾರ. ಈ ವಿಷಯದಲ್ಲಿ ಕೇಂದ್ರ ಮಂತ್ರಿ ಅರ್ಜುನ್ ಸಿಂಗ್ ನಿರ್ಧಾರವನ್ನು ಕಾಂಗ್ರೆಸ್ ಸಮ್ಮತಿಸುತ್ತದೆ. ವಂದೇ ಮಾತರಂನ್ನು ಹಾಡಲೇಬೇಕೆಂಬ ನಿಯಮ ಕಡ್ಡಾಯವೇನಿಲ್ಲ. ಅದು ಐಚ್ಛಿಕ. '
ಯಾವ ವಾರಾಣಸಿ ಅಖಿಲ ಭಾರತ ಕಾಂಗ್ರೆಸ್ ಅವೇಶನದಲ್ಲಿ ೧೯೦೫ರಲ್ಲಿ ವಂದೇ ಮಾತರಂನ್ನು ಹಾಡಲಾಗಿದ್ದೋ ಹಾಗೂ ರಾಷ್ಟ್ರೀಯ ಹಾಡು ಎಂದು ಮಾನ್ಯ ಮಾಡಿ ಸ್ವೀಕರಿಸಲಾಗಿತ್ತೋ, ಅದೇ ವಾರಾಣಸಿಯಲ್ಲಿ ಅರ್ಜುನ್ ಸಿಂಗ್ `ವಂದೇ ಮಾತರಂನ್ನು ಹಾಡಿದರೆ ಹಾಡಿ ಬಿಟ್ಟರೆ ಬಿಡಿ' ಎಂದು ಅಪ್ಪಣೆ ಕೊಡಿಸಿದ್ದರು.
೧೮೭೬ರಲ್ಲಿ ಬಂಕಿಮ್ಚಂದ್ರ ಚಟರ್ಜಿ ವಂದೇ ಮಾತರಂ ಬರೆದಾಗ ಅದು ಸ್ವಾತಂತ್ರ್ಯದ ರಣಕಹಳೆಯಂತೆ ಎಲ್ಲ ದೇಶಭಕ್ತರ ಬಾಯಲ್ಲಿ ಮೊಳಗತೊಡಗಿತು. `ವಂದೇ ಮಾತರಂ' ಘೋಷಣೆಯಿಲ್ಲದೇ ಯಾವ ಕಾರ್ಯಕ್ರಮವೂ ಆರಂಭವಾಗುತ್ತಿರಲಿಲ್ಲ. ಕೊನೆಗೊಳ್ಳುತ್ತಿರಲಿಲ್ಲ. ವಂದೇ ಮಾತರಂ ಅಂದರೆ ಪ್ರಖರ ದೇಶಪ್ರೇಮ, ದೇಶಭಕ್ತಿಯ ಸಂಕೇತ. ಈ ಘೋಷಣೆಗೆ ಇಡೀ ದೇಶವಾಸಿಗಳನ್ನು ಬಡಿದೆಬ್ಬಿಸುವ ಃಶಕ್ತಿಯಿತ್ತು. ಒಂದು ಹಂತದಲ್ಲಿ ವಂದೇಮಾತರಂ ಘೋಷಣೆಯನ್ನು ಬ್ರಿಟಿಷರು ನಿಷೇಸಿದ್ದರು. ಇದನ್ನು ಪ್ರತಿಭಟಿಸಿ ಘೋಷಣೆ ಕೂಗಿದರೆಂಬ ಕಾರಣಕ್ಕೆ ಸಹಸ್ರಾರು ಜನರನ್ನು ಅವರು ಜೈಲಿಗೆ ಹಾಕಿದ್ದರು. ವಂದೇ ಮಾತರಂ ಅಂದ್ರೆ ಭಾರತವನ್ನು ಪ್ರೀತಿಸುವವರೆಲ್ಲರ ರಾಷ್ಟ್ರೀಯ ಮಂತ್ರ. ೧೮೯೬ರಲ್ಲಿ ಕೋಲ್ಕತಾ ಕಾಂಗ್ರೆಸ್ ಅವೇಶನದಲ್ಲಿ ಸ್ವತಃ ರವೀಂದ್ರ ನಾಥ ಟಾಗೋರ್ರು ವಂದೇ ಮಾತರಂ ಹಾಡಿದ್ದರು. ಲಾಲಾ ಲಜಪತರಾಯ್ ಲಾಹೋರ್ನಿಂದ ವಂದೇ ಮಾತರಂ ಹೆಸರಿನ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಬ್ರಿಟಿಷ್ ಗುಂಡಿಗೆ ಬಲಿಯಾದ, ನೇಣಿಗೆ ಶರಣಾದ ಅದೆಷ್ಟೋ ದೇಶಪ್ರೇಮಿಗಳ ಕೊನೆಯ ಉದ್ಗಾರ -ವಂದೇ ಮಾತರಂ!
ಅನೇಕ ವರ್ಷಗಳ ಕಾಲ ವಂದೇ ಮಾತರಂ ನಮ್ಮ ರಾಷ್ಟ್ರಗೀತೆಯೂ ಆಗಿತ್ತು. ಅನಂತರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಗ `ಜನಗಣಮನ' ರಾಷ್ಟ್ರಗೀತೆಯಾಯಿತು. ಇದರ ಹಿಂದಿನ ರಾಜಕೀಯ, ಉದ್ದೇಶ ಅದೇನೇ ಇರಲಿ, ಜನಗಣಮನಕ್ಕಿಂತ ವಂದೇಮಾತರಂನಲ್ಲೇ ರಾಷ್ಟ್ರಭಕ್ತಿಯ ಅದಮ್ಯ ಸುರಣವಿದೆಯೆಂಬ ಅಭಿಪ್ರಾಯವಿದೆ. ಅಂತಿಮವಾಗಿ ವಂದೇಮಾತರಂ ಬದಲಿಗೆ `ಜನಗಣಮನ'ವನ್ನೇ ರಾಷ್ಟ್ರಗೀತೆಯಾಗಿ ಆಯ್ಕೆ ಮಾಡಲಾಯಿತು. ೧೯೫೦ರ ಜನವರಿ ೨೪ರಂದು ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಕಾನ್ಸ್ಟಿಟುಯೆಂಟ್ ಅಸೆಂಬ್ಲಿ ಉದ್ದೇಶಿಸಿ ಮಾತನಾಡುತ್ತಾ ಹೇಳಿದ್ದು ಉಲ್ಲೇಖಾರ್ಹ -`ಜನಗಣಮನ ಪದಗಳುಳ್ಳ ಹಾಡನ್ನು ಭಾರತದ ರಾಷ್ಟ್ರಗೀತೆ(anthem)ಯಾಗಿ ವಂದೇ ಮಾತರಂನ್ನು ರಾಷ್ಟ್ರೀಯ ಹಾಡಾಗಿ(national song) ಸ್ವೀಕರಿಸಲಾಗಿದೆ. ಆದರೂ ವಂದೇ ಮಾತರಂ ಹಾಡಿಗೆ ಜನಗಣಮನದಷ್ಟೇ ಸಮನಾದ ಗೌರವ ಮತ್ತು ಸ್ಥಾನಮಾನವಿದೆ' ರಾಷ್ಟ್ರಪತಿಯವರ ಈ ಘೋಷಣೆಯನ್ನು ಇಡೀ ಅಸೆಂಬ್ಲಿ ಮೇಜುಕುಟ್ಟಿ ಸ್ವಾಗತಿಸಿತ್ತು. ಆನಂತರ ನಮ್ಮ ಸಂವಿಧಾನದಲ್ಲೂ ಸಹ ವಂದೇ ಮಾತರಂನ್ನು ಸಂಸತ್ತಿನಲ್ಲೂ ಹಾಡುವ ಸಂಪ್ರದಾಯವಿದೆ.
ಹೀಗಿರುವಾಗ ಒಂದು ಕೋಮಿನ ಕೆಲ ನಾಯಕರು ಆಕ್ಷೇಪಿಸಿದರೆಂಬ ಕಾರಣಕ್ಕೆ, ವೋಟ್ಬ್ಯಾಂಕ್ ರಾಜಕಾರಣಕ್ಕೆ ವಂದೇ ಮಾತರಂ ಬಗ್ಗೆ ಸರಕಾರ ಹಾಗೂ ಕಾಂಗ್ರೆಸ್ ಪಕ್ಷ ತೆಗೆದುಕೊಂಡ ನಿರ್ಧಾರ ದುಗ್ಭ್ರಮೆ ಮೂಡಿಸುವಂಥದ್ದು. ಜಗತ್ತಿನ ಬೇರಾವ ದೇಶದಲ್ಲೂ ಘಟಿಸದ, ಊಹಿಸಲೂ ಆಗದಂಥ ಘಟನೆಗೆ ನಾವೆಲ್ಲ ಸಾಕ್ಷಿಯಾಗಬೇಕಿರುವುದು ದುರ್ದೈವ. ಇದು ರಾಷ್ಟ್ರಕ್ಕೆಸಗಲಾದ ಅವಮಾನವಲ್ಲದೇ ಮತ್ತೇನು? ಈ ದೇಶದಲ್ಲಿ ನೆಲೆಸುವ ಪ್ರತಿಯೊಬ್ಬರೂ ರಾಷ್ಟ್ರ, ರಾಷ್ಟ್ರೀಯತೆಯನ್ನು ಪ್ರತಿನಿಸುವ ಸಂಕೇತಗಳಿಗೆ ತಲೆಬಾಗಲೇಬೇಕು. ಇಂದು ರಾಷ್ಟ್ರೀಯ ಹಾಡಿಗೆ ಆಕ್ಷೇಪಿಸುವವರು ನಾಳೆ ರಾಷ್ಟ್ರಧ್ವಜದ ಬಗ್ಗೆ ತಕರಾರು ತೆಗೆಯಬಹುದು. ಅವರನ್ನು ಓಲೈಸಲು ಸರಕಾರ ಮಣಿಯುವುದಿಲ್ಲವೆನ್ನುವ ಗ್ಯಾರಂಟಿಯೇನು? ರಾಷ್ಟ್ರಗೀತೆಗೂ ಇದೇ ಒತ್ತಡ ಬಂದರೆ? ಆಗಲೂ ನಮ್ಮ ಮಾನಗೆಟ್ಟ ಸರಕಾರಗಳು ಮಣಿಯಲಾರವೆಂಬ ಗ್ಯಾರಂಟಿಯೇನು?
ಈ ದೇಶದ ಘೋಷವಾಕ್ಯಕ್ಕೇ ಅದರ ಶತಮಾನೋತ್ಸವ ಆಚರಿಸುವ ಈ ಸಂದರ್ಭದಲ್ಲಿ ಈ ಗತಿ ಬಂದರೂ ಯಾರೂ ಕ್ಕಾರದ ಘೋಷಣೆ ಹಾಕುತ್ತಿಲ್ಲ. ಏನೆನ್ನೋಣ?